Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* *"ಸಮಾರೋಪ"*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

*"ಸಮಾರೋಪ"*

ಆತ್ಮೀಯ ಮಿತ್ರರೇ,

ಸಂಸ್ಕೃತ ಸಪ್ತಾಹದ ಅಂಗವಾಗಿ ಅಗಸ್ಟ್ ೧ ರಂದು ಆರಂಭಿಸಿದ್ದ ’ಸಂಸ್ಕೃತಪ್ರಪಂಚದ ರಸಪ್ರಸಂಗಗಳು’ ಎಂಬ ಲೇಖನಸರಣಿ ಕೊನೆಯಹಂತವನ್ನು ತಲುಪಿದೆ. ಇನ್ನೂ ಅನೇಕ ಪ್ರಸಂಗಗಳು ಬಾಕಿ ಉಳಿದಿವೆಯಾದರೂ ’ಇನ್ನೂ ಸ್ವಲ್ಪ ಬೇಕು ಅನ್ನಿಸುತ್ತಿರುವಾಗಲೇ ಊಟವನ್ನು ನಿಲ್ಲಿಸಬೇಕು’ ಎಂಬ ಮಾತನ್ನನುಸರಿಸಿ ತಮಗೆಲ್ಲ ಮೊದಲೇ ತಿಳಿಸಿದಂತೆ ಅಗಸ್ಟ್ ತಿಂಗಳಿನೊಂದಿಗೆ ಲೇಖನಸರಣಿಯೂ ಅಂತ್ಯಗೊಳ್ಳುತ್ತಿದೆ.

ಈ ಲೇಖನ ಸರಣಿಯ ಆರಂಭದಿಂದ ನೀವು ತೋರಿದ ಆತ್ಮೀಯತೆ, ಪ್ರೀತಿ, ಸ್ನೇಹಗಳು ಅವರ್ಣನೀಯ. ಕೆಲವರು ಪ್ರತಿದಿನ ತಪ್ಪದೇ ಪ್ರತಿಕ್ರಿಯಿಸಿದ್ದೀರಿ, ಇನ್ನು ಕೆಲವರು ಸಮಯ ಸಿಕ್ಕಾಗಲೆಲ್ಲ ಪ್ರತಿಸ್ಪಂದಿಸಿದ್ದೀರಿ. ಹಲವರು ದೂರವಾಣಿ ಕರೆಯನ್ನು ಮಾಡಿ ನನ್ನನ್ನು ಹುರಿದುಂಬಿಸಿದ್ದೀರಿ. ಸ್ವಭಾವತಃ ಮೌನಿಗಳಾದ ಕೆಲವರು ಬಳಗದಲ್ಲಿ ಸಂದೇಶಗಳ ಪ್ರವಾಹವನ್ನು ಹೆಚ್ಚಿಸುವ ಮನಸ್ಸಿಲ್ಲದೆ ಮೌನವಾಗಿ ಆಸ್ವಾದಿಸಿದ್ದೀರಿ. ಅನೇಕರು ತಮ್ಮ ಮಿತ್ರಮಂಡಳಿಯಲ್ಲೆಲ್ಲ ಇವನ್ನು ಹಂಚಿಕೊಂಡು ಸಂಭ್ರಮಿಸಿದ್ದೀರಿ. ತನ್ಮೂಲಕ ನನಗೆ ಹೊಸ ಸಾಹಿತ್ಯಾಭಿಮಾನೀ ಮಿತ್ರರನ್ನು ಒದಗಿಸಿಕೊಟ್ಟಿದ್ದೀರಿ. ಎಲ್ಲ ಬಳಗಗಳಲ್ಲಿರುವ ನನಗಿಂತ ವಯಸ್ಸಿನಲ್ಲಿ ಹಾಗೂ ಜ್ಞಾನದಲ್ಲಿ ಹಿರಿಯರಾಗಿರುವ ಅನೇಕರು ಘಟನೆಗಳ ಸತ್ಯಾಸತ್ಯತೆಯ ಬಗ್ಗೆ ಅಮೂಲ್ಯ ವಿಚಾರಗಳನ್ನೂ, ಇತರ ಸಾಧ್ಯತೆಗಳನ್ನೂ ಮಂಡಿಸಿ ನನ್ನ ಜ್ಞಾನದ ಹರವು ವಿಸ್ತಾರಗೊಳ್ಳಲು ಕಾರಣರಾಗಿದ್ದೀರಿ. ಸಣ್ಣ ಪುಟ್ಟ ದೋಷಗಳು ಕಂಡುಬಂದರೂ ಅವನ್ನು ವಿಮರ್ಶೆಗೊಳಪಡಿಸದೆ ನನ್ನ ಉತ್ಸಾಹಭಂಗ ಆಗದಂತೆ ನೋಡಿಕೊಂಡಿದ್ದೀರಿ. ಇಷ್ಟೆಲ್ಲ ಮಾಡಿದ ನಿಮಗೆ ನಾನು ಕೃತಜ್ಞತಾಭಾವದಿಂದ ಕೈಜೋಡಿಸಿ ನಮಿಸುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡಲಾರೆ.

ಈ ಸರಣಿಯ ತಯಾರಿಗಾಗಿ ಕೆಲವು ಪುಸ್ತಕಗಳನ್ನೂ, ಅಂತರ್ಜಾಲಪುಟಗಳನ್ನೂ ಪರಿಶೀಲಿಸಿದ್ದೇನೆ. ಅವುಗಳಲ್ಲಿ ಈ ಕೆಳಗಿನವು ಮುಖ್ಯವಾಗಿವೆ.

೧. ಕವಿತೆಗೊಂದು ಕಥೆ – ಶತಾವಧಾನಿ ಆರ್. ಗಣೇಶ
೨. ಬ್ರಹ್ಮಪುರಿಯ ಭಿಕ್ಷುಕ – ಶತಾವಧಾನಿ ಆರ್. ಗಣೇಶ
೩. ಸೌಮಿತ್ರಸೀಮಾ(ಮರಾಠಿ) – ಶ್ರೀ ಲಕ್ಷ್ಮಣ ಪಿತ್ರೆ
೪. ಪಂಡಿತರಾಜ ಜಗನ್ನಾಥ – ಪದ್ಮನಾಭ ಸೋಮಯಾಜಿ
೫. ಗೀತಾಪ್ರವೇಶಃ – ಸಂಸ್ಕೃತಭಾರತೀ
೬. ಭಾಸ್ವತೀ – ಸಂಸ್ಕೃತ ಪಠ್ಯಪುಸ್ತಕ, ಗೋವಾ ಶಿಕ್ಷಣ ಮಂಡಲ
೭. ಮಣಿಕಾ – ಸಂಸ್ಕೃತ ಪಠ್ಯಪುಸ್ತಕ, ಸಿ.ಬಿ.ಎಸ್.ಸಿ.
೮. ತಿಳಿರುತೋರಣ (ಅಂಕಣಬರಹ) – ಶ್ರೀವತ್ಸ ಜೋಶಿ
೯. ವಿಕಿಪೀಡಿಯಾ (ಅಂತರ್ಜಾಲಪುಟ)
೧೦. ಫೇಸ್ ಬುಕ್ ನಲ್ಲಿ ದೊರೆತ ಸರೋಜಿನಿ ಮಹಿಷಿ ಅವರ ಲೇಖನ.

ಈ ಪುಸ್ತಕಗಳ/ಲೇಖನಗಳ ಲೇಖಕರಿಗೂ ಪ್ರಕಾಶಕರಿಗೂ ನಾನು ಆಭಾರಿ. ಈ ಎಲ್ಲ ಪುಸ್ತಕ/ಲೇಖನಗಳಿಂದ ಕೆಲವು ಘಟನೆಗಳನ್ನೂ ಶ್ಲೋಕಗಳನ್ನೂ ಎತ್ತಿಕೊಂಡಿದ್ದೇನೆಯೇ ಹೊರತು ಯಾವುದೇ ವಾಕ್ಯವನ್ನೂ ಶೈಲಿಯನ್ನೂ ನಕಲಿಸಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಏನಾದರೂ ಸಾಮ್ಯತೆ ಕಂಡುಬಂದರೆ ಅದು ಕಾಕತಾಳೀಯ. ತಮ್ಮ ಅಧ್ಯಾಪನಕಾಲದಲ್ಲಿ ಇಂತಹ ರಮಣೀಯ ಪ್ರಸಂಗಗಳನ್ನು ಉಲ್ಲೇಖಿಸುತ್ತ ನನ್ನ ಸಂಸ್ಕೃತಾಧ್ಯಯನ ರಸಮಯವಾಗಲು ಕಾರಣೀಕರ್ತರಾದ ನನ್ನ ಪ್ರಾಧ್ಯಾಪಕವೃಂದಕ್ಕೆ ನಾನು ಚಿರಋಣಿ.

ನಿಮ್ಮೆಲ್ಲರ ಆತ್ಮೀಯತೆಯ ಪ್ರವಾಹದೊಂದಿಗೆ ಒಂದು ಜನಪ್ರಿಯ ಸರಣಿಯನ್ನು ಸಮಾರೋಪಗೊಳಿಸುತ್ತಿರುವ ಈ ಸಂದರ್ಭದಲ್ಲೂ ಸರಣಿಯ ಉದ್ದೇಶದೆಡೆಗೆ ಮತ್ತೊಮ್ಮೆ ತಮ್ಮೆಲ್ಲರ ಗಮನವನ್ನು ಸೆಳೆಯಬಯಸುತ್ತೇನೆ. ಈ ಸರಣಿಯ ಯಶಸ್ಸಿಗೆ ಸಂಸ್ಕೃತಭಾಷೆಯ ಸೌಂದರ್ಯ ವೈಶಿಷ್ಟ್ಯಗಳೇ ಕಾರಣವೇ ಹೊರತು ನನ್ನ ಬರವಣಿಗೆಯಲ್ಲ. ಇಂತಹ ಅಸಂಖ್ಯ ರತ್ನಗಳನ್ನು ಸಂಸ್ಕೃತವನ್ನು ಕಲಿತ ಎಲ್ಲರೂ ಪಡೆಯಬಲ್ಲರು. ಹಾಗಾಗಿ ನನ್ನದೊಂದು ವಿನಮ್ರ ಪ್ರಾರ್ಥನೆ – ಜೀವನದಲ್ಲಿ ಸ್ವಲ್ಪಮಟ್ಟಿಗಾದರೂ ಸಂಸ್ಕೃತವನ್ನು ಕಲಿಯಿರಿ. ಅದು ಆನಂದದ ಕಾಮಧೇನು. ಅದು ನಿಮ್ಮನ್ನು ರಸಾಸ್ವಾದದೊಂದಿಗೆ ತತ್ತ್ವಚಿಂತನೆಯೆಡೆಗೆ ಒಯ್ಯಬಲ್ಲದು. ನಿಮ್ಮನ್ನು ಸಂಸ್ಕೃತ ಕಲಿಯಲು ಈ ಸರಣಿ ಪ್ರೇರೇಪಿಸಿದರೆ ಮಾತ್ರ ಯಶಸ್ವಿಯಾಯಿತು ಎಂದು ನಾನು ಭಾವಿಸುತ್ತೇನೆ.

ಕೊನೆಯಲ್ಲಿ ಇದು ನಾನು ಬರೆದಿದ್ದಲ್ಲ, ನೀವೆಲ್ಲ ನನ್ನಿಂದ ಬರೆಸಿದ್ದು ಎಂಬ ವಿಧೇಯ ಭಾವದೊಂದಿಗೆ ಸರಣಿಯನ್ನು ಮುಗಿಸುತ್ತಿದ್ದೇನೆ. ಇನ್ನೊಂದು ಸರಣಿಯ ನಿರೀಕ್ಷೆಯಲ್ಲಿರಿ. ನಿಮ್ಮ ಪ್ರೀತಿಯ ಸಹಕಾರ ಮುಂದೆಯೂ ಇರಲಿ.


ಧನ್ಯತಾ ಭಾವದೊಂದಿಗೆ

ತಮ್ಮವ

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೩೧ *ಡಿವಿಜಿ ರಸಪ್ರಸಂಗ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೩೧

*ಡಿವಿಜಿ ರಸಪ್ರಸಂಗ*

ಕನ್ನಡದ ಋಷಿತುಲ್ಯ ಸಾಹಿತಿ ಡಿ.ವಿ.ಗುಂಡಪ್ಪನವರ ಒಂದು ರಸಪ್ರಸಂಗದೊಂದಿಗೆ ಈ ಸರಣಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಕನ್ನಡದಲ್ಲಿ ಅನೇಕ ಮೇರುಕೃತಿಗಳನ್ನು ಬರೆದ ಡಿವಿಜಿಯವರು ಸಂಸ್ಕೃತ, ಇಂಗ್ಲೀಷ್, ತೆಲುಗು ಭಾಷೆಗಳಲ್ಲಿ ಪ್ರಗಲ್ಭ ಪಂಡಿತರಾಗಿದ್ದರು.

ಒಮ್ಮೆ ಶ್ರೀ ಎಸ್. ವಿ. ಪರಮೇಶ್ವರ ಭಟ್ಟರು ಸಹ್ಯಾದ್ರಿ ಮಹಾವಿದ್ಯಾಲಯಕ್ಕೆ ಡಿವಿಜಿಯವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ನಂತರ ಭೂರಿ ಭೋಜನದ ವ್ಯವಸ್ಥೆಯೂ ಆಗಿತ್ತು. ತಮ್ಮ ಪಕ್ಕದಲ್ಲೇ ಊಟಕ್ಕೆ ಕುಳಿತ ಭಟ್ಟರನ್ನು ನೋಡುತ್ತ ಎಲೆಯಲ್ಲಿರುವ ಊಟವನ್ನು ಡಿವಿಜಿಯವರು ವರ್ಣಿಸಿದ ಪರಿ ಹೀಗಿದೆ.

ಅನ್ನಸಿಂಹಾಸನಾಸೀನೋ
ಘೃತಮಂತ್ರಿಸಮನ್ವಿತಃ |
ಸೋಪಸ್ಕರಪರೀವಾರಃ
ಸೂಪಭೂಪೋ ವಿರಾಜತೇ ||

ಅನ್ನವೆಂಬ ಸಿಂಹಾಸನದ ಮೇಲೆ ಕುಳಿತಿರುವ ತುಪ್ಪವೆಂಬ ಮಂತ್ರಿಯೊಡಗೂಡಿರುವ ಉಳಿದ ಸಂಭಾರಗಳ ಪರಿವಾರದೊಂದಿಗೆ ಸೂಪರಾಜನು ರಾರಾಜಿಸುತ್ತಿದ್ದಾನೆ.

ಊಟವಾಯಿತು. ಊಟವೆಂದರೆ ಹಬ್ಬವೆಂದು ಗಣಿಸುತ್ತಿದ್ದ ಡಿವಿಜಿಯವರು ಎಲೆಯಲ್ಲಿ ಏನನ್ನೂ ಬಿಡದೆ ಚೊಕ್ಕವಾಗಿ ಎಲ್ಲವನ್ನೂ ತಿಂದಿದ್ದರು. ಭಟ್ಟರು ಊಟಕ್ಕೆ ನ್ಯಾಯವನ್ನು ಒದಗಿಸಲಿಲ್ಲ. ಆಗ ಮತ್ತೆ ಅವರನ್ನು ಕೆಣಕುತ್ತ ಪದ್ಯವೊಂದನ್ನು ರಚಿಸಿದರು.

ಅಗಸ್ತಿತುಲ್ಯಾ ಘೃತವಾರ್ಧಿಶೋಷಣೇ
ದಂಭೋಲಿತುಲ್ಯಾ ವಟಕಾದ್ರಿಭೇದನೇ |
ಶಾಕಾವಲೀಕಾನನದಾವಕೀಲಾ
ಭಟ್ಟಾ ವಯಂ ಕುತ್ರ ಭಟಾಃ ಪುರಸ್ತಾತ್ ||

ತುಪ್ಪದ ಸಮುದ್ರವನ್ನು ಒಣಗಿಸುವ ಅಗಸ್ತ್ಯರು ನಾವು. ವಡೆಯ ಪರ್ವತಕ್ಕೆ ವಜ್ರಾಘಾತರು. ತರಕಾರಿಗಳ ಕಾಡಿಗೆ ಕಾಳ್ಗಿಚ್ಚು. ನಾವು ಭಟ್ಟರು. ನಮ್ಮ ಮುಂದೆ ಯಾವ ಭಟರು ನಿಲ್ಲುವರು?

ಡಿವಿಜಿಯವರು ಒಮ್ಮೆ ಸಂಸ್ಕೃತಾಧ್ಯಯನಕ್ಕಾಗಿ ಗರಣಿ ಕೃಷ್ಣಾಚಾರ್ಯರನ್ನು ಆಶ್ರಯಿಸಿದ್ದರಂತೆ. ಆದರೆ ಸಂಸ್ಕೃತ ಅವರ ತಲೆಗೆ ಹತ್ತಲಿಲ್ಲ ಎಂಬುದನ್ನು ವಿದ್ವಾನ್ ರಂಗನಾಥಶರ್ಮರಲ್ಲಿ ಹೇಳುತ್ತ ಕನ್ನಡಮಿಶ್ರಿತವಾದ ಸಂಸ್ಕೃತಪದ್ಯವೊಂದನ್ನು ರಚಿಸಿದರು.

ನ ವೇದಾಂತೇ ಗಾಢಾ ನ ಪರಿಚಿತಂ ಶಬ್ದಶಾಸ್ತ್ರಂ
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿವಹೇ |
ವಯಂ ಶ್ರೀಮದ್ಬ್ಯಾಳೀಹುಳಿಪಳದ್ಯಕೋಸಂಬ್ರಿತೊವ್ವೀ
ಹಯಗ್ರೀವಾಂಬೋಡೀಕರಿಗಡಬುದಧ್ಯನ್ನರಸಿಕಾಃ ||

ವೇದಾಂತದಲ್ಲಿ ಆಳಜ್ಞಾನವಿಲ್ಲ. ವ್ಯಾಕರಣದ ಪರಿಚಯವೇ ಇಲ್ಲ. ತರ್ಕದಲ್ಲಾಗಲೀ ವೇದದಲ್ಲಾಗಲೀ, ಕಾವ್ಯಗಳಲ್ಲಾಗಲೀ ಗತಿಯಿಲ್ಲ. ನಾವು ಬೇಳೆಯ ಹುಳಿ, ಪಳದ್ಯ, ಕೋಸಂಬ್ರಿ, ತೊವ್ವೆ, ಹಯಗ್ರೀವ, ಅಂಬೋಡೆ, ಕರಿಗಡಬು ಮತ್ತು ಮೊಸರನ್ನ ರಸಿಕರು.

ಇನ್ನೊಮ್ಮೆ ವಿದ್ವಾನ್ ರಂಗನಾಥ ಶರ್ಮರು ಹಲ್ಲುನೋವಿನಿಂದ ಬಳಲುತ್ತಿದ್ದಾಗ ಡಿವಿಜಿಯವರು ಅವರಲ್ಲಿಗೆ ಹೋಗಿದ್ದರು. ವೈದ್ಯರ ದರ್ಶನಕ್ಕೆ ಹೊರಟಿದ್ದ ಶರ್ಮರಿಗೆ ಶುಭ ಹಾರೈಸುತ್ತ ’ಏಕದಂತಸ್ಯ ವೋ ಕುರ್ಯಾದದ್ಯ ವೈ ದಂತಮಂಗಲಮ್’ ಏಕದಂತನು ನಿಮಗೆ ದಂತಮಂಗಲವನ್ನುಂಟುಮಾಡಲಿ ಎಂದರು. ರಂಗನಾಥ ಶರ್ಮರು ನೋವಿನಲ್ಲೂ ನಕ್ಕು ತೆರಳಿದರು.

ಮರುದಿನ ಡಿವಿಜಿಯವರನ್ನು ಭೆಟ್ಟಿಯಾಗಿ ಅವರ ಶ್ಲೋಕಾರ್ಧಕ್ಕೆ ತನ್ನ ಶ್ಲೋಕದ ಅರ್ಧವನ್ನು ಸೇರಿಸಿ ಪೂರ್ತಿಗೊಳಿಸಿದರು. ’ಅಸೂಯಯೈವ ಪೂರ್ವೇದ್ಯುರ್ದಂತದ್ವಯಮಪಾಹರತ್’ ಅಸೂಯೆಯಿಂದಲೋ ಏನೋ ಅವನು ನನ್ನ ಎರಡು ಹಲ್ಲುಗಳನ್ನು ಅಪಹರಿಸಿದನು.

’ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್’ ಎನ್ನುವ ಸುಭಾಷಿತಕ್ಕೆ ಬೇರೆ ಉದಾಹರಣೆ ಬೇಕೆ?

(ಆಧಾರ: ಆರ್.ಗಣೇಶ ಅವರ ’ಬ್ರಹ್ಮಪುರಿಯ ಭಿಕ್ಷುಕ’)

📝 *ಮಹಾಬಲ ಭಟ್, ಗೋವಾ*
#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೩೦ *ವಿಕಟನಿತಂಬೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೩೦

*ವಿಕಟನಿತಂಬೆ*

ಕಾಶ್ಮೀರದ ಪಂಡಿತಪರಂಪರೆಯಲ್ಲಿ ವಿಕಟನಿತಂಬಾ ಎಂಬ ಕವಯಿತ್ರಿಯೊಬ್ಬಳು ಆಗಿಹೋದಳು. ತರ್ಕ-ವ್ಯಾಕರಣ-ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವಳಿಗೆ ಗಂಡನಾಗಿ ಸಿಕ್ಕವ ಮಾತ್ರ ನಿರಕ್ಷರಕುಕ್ಷಿಯಾಗಿದ್ದ. ಅವಳ ಪರಿಸ್ಥಿತಿಯನ್ನು ನೋಡಿ ಅವಳ ಸಖಿಯೊಬ್ಬಳು ವರ್ಣಿಸಿದ ಕ್ರೂರ ವಿಡಂಬನೆ ಹೀಗಿದೆ:

ಕಾಲೇ ಮಾಷಂ ಸಸ್ಯೇ ಮಾಸಂ
ವದತಿ ಸಕಾಶಂ ಯಶ್ಚ ಶಕಾಸಂ |
ಉಷ್ಟ್ರೇ ಲುಂಪತಿ ಶಂ ವಾ ರಂ ವಾ
ತಸ್ಮೈ ದತ್ತಾ ವಿಕಟನಿತಂಬಾ ||

ಕಾಲಕ್ಕೆ ಸಂಬಂಧಿಸಿದ ಪದವನ್ನು ಹೇಳುವಾಗ ಮಾಷ ಎನ್ನುವುದು (ಮಾಸ ಎಂದು ಹೇಳಲು), ಸಸ್ಯಕ್ಕೆ ಸಂಬಂಧಪಟ್ಟಾಗ ಮಾಸ ಎನ್ನುವುದು (ಮಾಷ=ಉದ್ದು ಎನ್ನಬೇಕಿತ್ತು), ಸಕಾಶ(ಸಮೀಪ) ಎನ್ನಲು ಶಕಾಸ ಎನ್ನುವುದು, ಉಷ್ಟ್ರ ಎಂದು ಹೇಳುವಾಗ ಒಂದೋ ಉಟ್ರ ಎನ್ನುವುದು ಇಲ್ಲವೇ ಉಷ್ಟ ಎಂದು ಹೇಳುವುದು ಇಂತಹ ಪುರುಷನಿಗೆ ವಿಕಟನಿತಂಬೆಯನ್ನು ಕೊಟ್ಟರು.

ಹಿಂದೆ ಹೆಣ್ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದರು ಎಂದು ಹೇಳಿದವರಾರು?

*ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೯ *ಲೋಕನಾಥಾವುಭಾವಪಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೯

*ಲೋಕನಾಥಾವುಭಾವಪಿ*

ಅಂದು ಭೋಜರಾಜನ ಆಸ್ಥಾನಕ್ಕೆ ನಿರ್ಧನ ಭಿಕ್ಷುಕನೊಬ್ಬ ಆಗಮಿಸಿದ. ಯಾರು ಬಂದರೂ ಅವರಿಗೆ ಕವಿತಾರಚನಾ ಸಾಮರ್ಥ್ಯವಿದೆಯೇ ಎಂದು ಪರೀಕ್ಷಿಸುವುದು ಭೋಜನಿಗೆ ಅಭ್ಯಾಸವಾಗಿ ಹೋಗಿತ್ತು. ಅದರಂತೆ ಆ ಭಿಕ್ಷುಕನನ್ನೂ ಕವಿತೆ ರಚಿಸಲು ಒತ್ತಾಯಿಸಿದ. ಭಿಕ್ಷುಕನಾದರೂ ಸಂಸ್ಕೃತ ಬಲ್ಲವನಾಗಿದ್ದ ಅವನು ಹೀಗೆಂದು ಕವನಿಸಿದ.

ಅಹಂ ಚ ತ್ವಂ ಚ ರಾಜೇಂದ್ರ!
ಲೋಕನಾಥಾವುಭಾವಪಿ |
ಬಹುವ್ರೀಹಿರಹಂ ರಾಜನ್!
ಷಷ್ಠೀತತ್ಪುರುಷೋ ಭವಾನ್ ||

“ಹೇ ರಾಜೇಂದ್ರ! ನಾನು ಹಾಗೂ ನೀನು ಇಬ್ಬರೂ ಲೋಕನಾಥರು” ರಾಜನಿಗೆ ಆಶ್ಚರ್ಯವಾಯಿತು. ’ರಾಜನಾದ ನನ್ನನ್ನು ಭಿಕ್ಷುಕನಾದ ತನಗೆ ಸಮಾನವಾಗಿ ನೋಡುತ್ತಿದ್ದಾನಲ್ಲ’ ಎಂದು ಕೋಪವೂ ಬಂತು. ಅಷ್ಟರಲ್ಲಿ ಭಿಕ್ಷುಕ ಪದ್ಯದ ದ್ವಿತೀಯಾರ್ಧವನ್ನು ಉಸುರಿದ. ’ನಾನು ಬಹುವ್ರೀಹಿ, ನೀನು ಷಷ್ಠೀ ತತ್ಪುರುಷ’. ರಾಜನಿಗೆ ಭಿಕ್ಷುಕನ ಮಾತಿನ ಮರ್ಮ ಅರಿವಾಯಿತು.

ಲೋಕನಾಥಃ ಎಂಬ ಪದವನ್ನು ಲೋಕಸ್ಯ ಅಥವಾ ಲೋಕಾನಾಂ ನಾಥಃ ಎಂದು ಷಷ್ಠೀ ತತ್ಪುರುಷ ಸಮಾಸದ ನಿಯಮವನ್ನನುಸರಿಸಿ ವಿಗ್ರಹಿಸಿದರೆ ಲೋಕದ (ಅಥವಾ ಜನರ) ಒಡೆಯನಾದ ರಾಜನಿಗೆ ಅನ್ವಯವಾಗುತ್ತದೆ. ಲೋಕಾಃ ಏವ ನಾಥಾಃ ಯಸ್ಯ ಸಃ ಎಂದು ಬಹುವ್ರೀಹಿ ಸಮಾಸದಂತೆ ವಿಗ್ರಹಿಸಿದರೆ ಯಾರಿಗೆ ಜನರೇ ಒಡೆಯರೋ ಅವನು ಎಂಬರ್ಥ ಮೂಡಿ ಜನರಿಂದ ಪೋಷಿತನಾದ ಭಿಕ್ಷುಕನಿಗೆ ಅನ್ವಯವಾಗುತ್ತದೆ.

ಭಿಕ್ಷುಕನ ವ್ಯಾಕರಣ ಚಮತ್ಕಾರವನ್ನು ಮೆಚ್ಚಿದ ಅರಸ ಅವನಿಗೆ ಯಥೇಷ್ಟ ಧನಕನಕಾದಿಗಳನ್ನು ನೀಡಿದ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೮ *ಬೋಪದೇವ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೮

*ಬೋಪದೇವ*
ಆಂಧ್ರಪ್ರದೇಶದ ಒಂದು ಗುರುಕುಲ. ಅಲ್ಲೊಬ್ಬ ದಡ್ಡಶಿಖಾಮಣಿ ವಿದ್ಯಾರ್ಥಿ. ಅವನ ಹೆಸರು ಬೋಪದೇವ. ಹತ್ತಾರು ಸಲ ಹೇಳಿಕೊಟ್ಟರೂ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ಗುರುಗಳಿಂದ ಸದಾ ಬೈಗುಳ, ಸಹಪಾಠಿಗಳಿಂದ ಅವಮಾನ ಇವುಗಳನ್ನು ಸಹಿಸಲಾರದೆ ಒಂದಿನ ರಾತ್ರಿ ಗುರುಕುಲವನ್ನು ಬಿಟ್ಟು ಪಲಾಯನ ಗೈದ. ರಾತ್ರಿಯೆಲ್ಲ ನಡೆದು ನಡೆದು ಬೆಳಗು ಹರಿಯುವಷ್ಟರಲ್ಲಿ ಹಳ್ಳಿಯೊಂದನ್ನು ತಲುಪಿದ. ಬಾಯಾರಿಕೆಯಿಂದ ಬಳಲುತ್ತ ಬಾವಿಯೊಂದನ್ನು ಕಂಡು ಸಮೀಪಿಸಿದ. ಬೆಳಗಿನ ಸಮಯದಲ್ಲಿ ನೀರು ತೆಗೆದುಕೊಂಡು ಹೋಗಲು ಊರಿನ ಮಹಿಳೆಯರು ಅಲ್ಲಿಗೆ ಬಂದಿದ್ದರು. ತನಗೆ ನೀರು ಕೊಡೆಂದು ಅವರಲ್ಲೊಬ್ಬಳನ್ನು ವಿನಂತಿಸಿಕೊಂಡ. ಆ ಮಹಿಳೆ ಅವನ ಬೊಗಸೆಗೆ ನೀರು ಸುರಿಯುತ್ತ ಮುಖವನ್ನು ಗಮನಿಸಿದಳು. ನಿದ್ದೆಯಿಲ್ಲದೆ ನಡೆದ ಶ್ರಮವು ಮನದ ದುಗುಡವನ್ನು ಸೇರಿಕೊಂಡು ಮುಖವು ಬಾಡಿ ಬಸವಳಿದಿತ್ತು. ಆಪ್ಯಾಯತೆಯಿಂದ ಕಾರಣವನ್ನು ಕೇಳಿದ ಮಹಿಳೆಗೆ ಬೋಪದೇವ ತನ್ನ ಕಥೆಯನ್ನರುಹಿದ.

ಅವನ ವ್ಯಥೆಯನ್ನು ಕೇಳಿದ ಆ ಚತುರಮತಿ ಮಹಿಳೆ ಅವನನ್ನು ಬಾವಿಗೆ ಇನ್ನಷ್ಟು ಸಮೀಪ ಕರೆದೊಯ್ದಳು. ಅಲ್ಲೊಂದು ಅಗಲವಾದ ಕಲ್ಲಿತ್ತು. ಮಹಿಳೆಯರು ನೀರು ಸೇದಿದ ಮಣ್ಣಿನ ಮಡಕೆಗಳನ್ನು ಅದರ ಮೇಲಿಟ್ಟು ನಂತರ ತಮ್ಮ ಸೊಂಟಕ್ಕೇರಿಸುತ್ತಿದ್ದಳು. ಮತ್ತೆ ಮತ್ತೆ ಕೊಡಗಳನ್ನಿಡುವುದರಿಂದ ಆ ಕಲ್ಲಿಗೆ ಸವಕಳಿ ಬಂದಿತ್ತು. ಅದನ್ನು ತೋರಿಸುತ್ತ ಆ ಮಹಿಳೆಯೆಂದಳು – ’ವತ್ಸ! ಮೃದುವಾದ ಮಣ್ಣಿನ ಕೊಡಗಳನ್ನು ಮತ್ತೆ ಮತ್ತೆ ಇಡುವುದರಿಂದ ಗಟ್ಟಿಯಾದ ಕಲ್ಲೇ ಸವೆಯುತ್ತದೆಂದಾದರೆ ಪುನಃ ಪುನಃ ಅಭ್ಯಾಸ ಮಾಡಿದರೆ ಬುದ್ಧಿ ತೀಕ್ಷ್ಣವಾಗದೆ?’

ಅವಳ ಮಾತು ಬೋಪದೇವನ ಅಂತರಂಗಕ್ಕೆ ನಾಟಿತು. ಆ ನಾರಿಗೆ ನಮಿಸಿ ಅವನು ಮತ್ತೆ ಗುರುಕುಲದ ಹಾದಿ ತುಳಿದ. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಕಠಿಣ ಪರಿಶ್ರಮದಿಂದ ಪಾಂಡಿತ್ಯವನ್ನು ಸಂಪಾದಿಸಿದ. ಮಂದಮತಿಗಳ ಅನುಕೂಲಕ್ಕಾಗಿಯೇ ಸರಳ ಭಾಷೆಯಲ್ಲಿ ’ಮುಗ್ಧಬೋಧ’ ಎಂಬ ವ್ಯಾಕರಣಗ್ರಂಥವನ್ನು ರಚಿಸಿದ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

   

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೭ *ಭೋಜರಾಜನ ಪಟ್ಟಾಭಿಷೇಕ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೭

*ಭೋಜರಾಜನ ಪಟ್ಟಾಭಿಷೇಕ*

ಭೋಜರಾಜ ಪಟ್ಟಕ್ಕೆ ಬಂದುದೇ ಒಂದು ರೋಚಕ ಕಥೆ. ತಂದೆ ತಾಯಿಯರ ಜೀವನದ ಕೊನೆಯ ಘಟ್ಟದಲ್ಲಿ ಹುಟ್ಟಿದ ಒಬ್ಬನೇ ಮಗ ಅವನು. ಅವನಿಗೆ ೫ ವರ್ಷಗಳಾದಾಗ ತಂದೆ ಅವನನ್ನು ತನ್ನ ತಮ್ಮ ಮುಂಜನ ಆಶ್ರಯದಲ್ಲಿ ಬಿಟ್ಟು ವಾನಪ್ರಸ್ಥಕ್ಕೆ ಹೋದ. ಒಂದಿನ ಆಸ್ಥಾನಕ್ಕೆ ಆಗಮಿಸಿದ ಜ್ಯೋತಿಷಿಯೊಬ್ಬ ’ಭೋಜನು ೫೫ ವರ್ಷ, ೭ತಿಂಗಳು, ೩ ದಿನಗಳ ಕಾಲ ಗೌಡ ದೇಶ ಸಹಿತ ದಕ್ಷಿಣಾಪಥವನ್ನು ಆಳುತ್ತಾನೆ’ ಎಂದು ಭವಿಷ್ಯ ನುಡಿದ. ರಾಜ್ಯವನ್ನು ಕಬಳಿಸಬೇಕೆಂದು ಹೊಂಚು ಹಾಕುತ್ತಿದ್ದ ಮುಂಜ ಭೋಜನನ್ನು ಕೊಲ್ಲುವ ಯೋಜನೆ ರೂಪಿಸಿದ. ರಾಜನಿಂದ ಆಜ್ಞಪ್ತನಾದ ವತ್ಸರಾಜನೆಂಬ ಮಾಂಡಲಿಕ ಭೋಜನನ್ನು ಕೊಲ್ಲಲೆಂದು ಕಾಡಿಗೆ ಕರೆದುಕೊಂಡು ಹೋಗಿ ಅವನಿಗೆ ವಿಷಯವನ್ನು ತಿಳಿಸಿದ. ಭೋಜರಾಜ ತನ್ನ ಕೊನೆಯ ಸಂದೇಶವೆಂಬಂತೆ ಒಂದು ಎಲೆಯ ಮೇಲೆ ರಕ್ತದಿಂದ ಶ್ಲೋಕವೊಂದನ್ನು ಬರೆದು ವತ್ಸರಾಜನ ಕೈಗಿಟ್ಟ. ವತ್ಸರಾಜನಿಗೆ ಆ ಪದ್ಯವನ್ನು ಓದಿ ಭೋಜನ ಮೇಲೆ ಕನಿಕರ ಮೂಡಿತು. ಅವನನ್ನು ಕೊಲ್ಲದೆ ರಹಸ್ಯವಾಗಿ ಬಚ್ಚಿಟ್ಟು ಕೊಂದುದಾಗಿ ರಾಜನಿಗೆ ಸುಳ್ಳು ಹೇಳಿದ.

ಪತ್ರವನ್ನು ತೆರೆದ ರಾಜ ಅದರಲ್ಲಿರುವ ಪದ್ಯವನ್ನು ಓದಿ ಚಕಿತನಾದ.
ಮಾಂಧಾತಾ ಚ ಮಹೀಪತಿಃ ಕೃತಯುಗಾಲಂಕಾರಭೂತೋ ಗತಃ
ಸೇತುರ್ಯೇನ ಮಹೋದಧೌ ವಿರಚಿತಃ ಕ್ವಾಸೌ ದಶಾಸ್ಯಾಂತಕಃ |
ಅನ್ಯೇ ಚಾಪಿ ಯುಧಿಷ್ಠಿರಪ್ರಭೃತಯಃ ಯಾತಾ ದಿವಂ ಭೂಪತೇ!
ನೈಕೇನಾಪಿ ಸಮಂ ಗತಾ ವಸುಮತೀ ಮುಂಜ ತ್ವಯಾ ಯಾಸ್ಯತಿ ||

ಕೃತಯುಗದ ಅಲಂಕಾರದಂತಿದ್ದ ಮಾಂಧಾತನೆಂಬ ರಾಜ (ಸತ್ತು)ಹೋದ. (ತ್ರೇತಾಯುಗದಲ್ಲಿ)ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿ ಹತ್ತು ತಲೆಯ ರಾವಣನನ್ನು ಕೊಂದವನು ಎಲ್ಲಿದ್ದಾನೆ? (ದ್ವಾಪರಯುಗದ) ಯುಧಿಷ್ಠಿರಾದಿ ರಾಜರೂ ಸ್ವರ್ಗಕ್ಕೆ ಹೋದರು. ಈ ಭೂಮಿ(ರಾಜ್ಯ) ಅವರಾರೊಂದಿಗೂ ಹೋಗಿಲ್ಲ. ನಿನ್ನೊಂದಿಗೆ ನಿಶ್ಚಯವಾಗಿಯೂ ಬರಲಿದೆ.

ಕವಿತೆಯಲ್ಲಿದ್ದ ’ಈ ನಶ್ವರವಾದ ರಾಜ್ಯಕ್ಕಾಗಿ ನನ್ನನ್ನು ಕೊಲ್ಲಿಸುತ್ತಿರುವೆಯಲ್ಲ’ ಎಂಬ ತೀಕ್ಷ್ಣವಾದ ವ್ಯಂಗ್ಯ ಮುಂಜನ ಮನಸ್ಸಿನ ಮೇಲೆ  ಬಲವಾದ ಪ್ರಹಾರವನ್ನೇ ಮಾಡಿತು. ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅಗ್ನಿಪ್ರವೇಶವನ್ನು ಮಾಡಲು ನಿಶ್ಚಯಿಸಿದ. ಆಗ ವತ್ಸರಾಜ ಇಕ್ಕಟ್ಟಿಗೆ ಸಿಲುಕಿದ. ಭೋಜ ಬದುಕಿರುವಾಗಲೇ ರಾಜ ವೃಥಾ ಪ್ರಾಣ ಕಳೆದುಕೊಳ್ಳುವನಲ್ಲ ಎಂದು ಚಿಂತಿಸಿದ. ಮಂತ್ರಿ ಬುದ್ಧಿಸಾಗನೊಂದಿಗೆ ಸೇರಿ ಉಪಾಯವೊಂದನ್ನು ಮಾಡಿದ. ಅವರ ಯೋಜನೆಯಂತೆ ರಾಜಸಭೆಗೆ ಆಗಮಿಸಿದ ಮಂತ್ರವಾದಿಯೊಬ್ಬ ಭೋಜನನ್ನು ತಾನು ಬದುಕಿಸಬಲ್ಲೆ ಎಂದಾಗ ರಾಜ ಹಾಗೆ ಮಾಡಲು ಅವನನ್ನು ವಿನಂತಿಸಿಕೊಂಡ. ಶ್ಮಶಾನದಲ್ಲಿ ಹೋಮದ ನಾಟಕವಾಡಿ ಬಚ್ಚಿಟ್ಟಿದ್ದ ಭೋಜನನ್ನು ರಾಜನ ಮುಂದೆ ತಂದು ನಿಲ್ಲಿಸಿದರು. ರಾಜ ಅವನಿಗೆ ರಾಜ್ಯವನ್ನು ಒಪ್ಪಿಸಿ ಕಾಡಿನೆಡೆಗೆ ಸಾಗಿದ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೬ *ಕಾದಂಬರಿಯ ಕಥೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೬

*ಕಾದಂಬರಿಯ ಕಥೆ*

ಸಂಸ್ಕೃತದ ಗದ್ಯಕವಿ ಚಕ್ರವರ್ತಿಯೆಂದು ಪ್ರಖ್ಯಾತನಾಗಿದ್ದ ಬಾಣನ ಹರ್ಷಚರಿತೆ ಮತ್ತು ಕಾದಂಬರಿ ಈ ಎರಡು ಕೃತಿಗಳು ಅಜರಾಮರವಾಗಿವೆ. ಕಾದಂಬರಿಯಂತೂ ಮುಂದೆ ದೊಡ್ಡ ಕಥೆಗೆ ಕಾದಂಬರಿ ಎಂದೇ ಹೆಸರಾಗುವಷ್ಟು ಜನಪ್ರಿಯವಾಗಿದೆ. ಕೆಲವೆಡೆ ಸುಂದರ ಸುಲಲಿತ ಪದಪುಂಜಗಳನ್ನು ಹೊಂದಿ, ಇನ್ನು ಕೆಲವೆಡೆ ಗೊಂಡಾರಣ್ಯದಂತಹ ಓಜಸ್ವೀ ವಾಕ್ಯಗಳಿಂದ ಕಂಗೊಳಿಸುವ ಕಾದಂಬರಿಗೆ ಸರಿಸಾಟಿಯಿಲ್ಲ.

ಕಾದಂಬರಿಯನ್ನು ಅರ್ಧ ಬರೆದು ಮುಗಿಸಿದಾಗಲೇ ಬಾಣನ ಆರೋಗ್ಯ ಹದಗೆಟ್ಟಿತು. ತಾನಿದನ್ನು ಪೂರ್ತಿಗೊಳಿಸಲಾರೆ ಎಂದು ಅಮನವರಿಕೆಯಾದಾಗ ತನ್ನಿಬ್ಬರು ಮಕ್ಕಳನ್ನು ಕರೆದ. ಅವರಲ್ಲಿ ಒಬ್ಬರಿಗೆ ಗ್ರಂಥವನ್ನು ಪುರ್ತಿಗೊಳಿಸುವ ಹೊಣೆಯನ್ನು ಹೊರಿಸುವುದು ಅವನ ಉದ್ದೇಶವಾಗಿತ್ತು. ಆ ಮಹೋನ್ನತ ಕೃತಿಯನ್ನು ಪೂರ್ಣಗೊಳಿಸಲು ಮಹಾಪ್ರತಿಭೆಯ ಆವಶ್ಯಕತೆಯಿತ್ತು. ಅವರನ್ನು ಪರೀಕ್ಷಿಸಲೋಸುಗ ಮನೆಯ ಮುಂದಿರುವ ಸರ್ಪವೊಂದು ಸುತ್ತಿಕೊಂಡಿರುವ ಒಣಗಿದ ಮರವನ್ನು ತೋರಿಸಿ ಅದನ್ನು ವರ್ಣಿಸಲು ಸೂಚಿಸಿದ. ಮೊದಲನೆಯ ಮಗ *’ಶುಷ್ಕೋ ವೃಕ್ಷಸ್ತಿಷ್ಠತ್ಯಗ್ರೇ ತದುಪರಿ ಕಶ್ಚಿತ್ ಸರ್ಪೋಽಪ್ಯಸ್ತಿ’* ಎಂದು ವರ್ಣಿಸಿದ. ಒಣಗಿದ ಮರವೊಂದು ಮುಂದೆ ನಿಂತಿದೆ. ಅದರ ಮೇಲೊಂದು ಸರ್ಪವೂ ಇದೆ ಎಂದು ವಾರ್ತೆಯನ್ನು ಒಪ್ಪಿಸಿದಂತಿತ್ತು ಅವನ ರಚನೆ. ಎರಡನೆಯ ಮಗ ಭೂಷಣಭಟ್ಟ ಅದನ್ನೇ ಬೇರೆ ರೀತಿಯಲ್ಲಿ ಹೇಳಿದ-

ನೀರಸತರುರಿಹ ವಿಲಸತಿ ಪುರತಃ
ತದುಪರಿ ಮಣಿಮಯಕುಟಿಲಭುಜಂಗಃ

ಇವನ ವಾಕ್ಯದ ಅರ್ಥವೂ ಅದೇ ಆಗಿದ್ದರೂ ಶಬ್ದ ಚಮತ್ಕಾರ ಆಕರ್ಷಕವಾಗಿತ್ತು. ನೀರಸ, ಮಣಿಮಯ, ಕುಟಿಲ ಮುಂತಾದ ಪದಪ್ರಯೋಗ ವಾಕ್ಯಕ್ಕೆ ರಮಣೀಯತೆಯನ್ನು ತಂದಿತ್ತು. ಬಾಣಭಟ್ಟ ಅವನಿಗೇ ಗ್ರಂಥಸಮಾಪ್ತಿಯ ಹೊಣೆಯನ್ನೊಪ್ಪಿಸಿ ನಿರಾಳವಾಗಿ ಕಣ್ಮುಚ್ಚಿದ. ಭೂಷಣಭಟ್ಟ ತಂದೆಯಷ್ಟು ಪ್ರತಿಭಾಸಂಪನ್ನನಾಗಿರದಿದ್ದರೂ ಅವನ ಶೈಲಿಯನ್ನು ಅನುಸರಿಸುವಲ್ಲಿ ಸಾಕಷ್ಟು ಸಫಲನಾಗಿದ್ದಾನೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೫ *ಕ್ರಿಯಾಸಿದ್ಧಿ: ಸತ್ತ್ವೇ ಭವತಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೫

*ಕ್ರಿಯಾಸಿದ್ಧಿ: ಸತ್ತ್ವೇ ಭವತಿ*

ಭೋಜರಾಜ ಕೇವಲ ಕವಿಪಕ್ಷಪಾತಿಯಾಗಿರದೆ ಪ್ರತಿಭಾಪಕ್ಷಪಾತಿಯೂ ಆಗಿದ್ದ. ಪ್ರತಿಭಾವಂತ ಕವಿಗಳು ಎಂದಿಗೂ ಅವನಿಂದ ನಿರಾಶರಾಗಿ ಹೋಗುತ್ತಿರಲಿಲ್ಲ. ಆದರೆ ಸ್ವತ: ಪಂಡಿತನೂ ಕವಿಯೂ ಆಗಿದ್ದ ಭೋಜ ಅವರನ್ನು ಒರೆಗೆ ಹಚ್ಚದೇ ಬಿಡುತ್ತಿರಲಿಲ್ಲ. ಒಂದಿನ ಒಬ್ಬ ಬ್ರಾಹ್ಮಣ ತನ್ನ ಪರಿವಾರದೊಂದಿಗೆ ಬಂದು ತನ್ನ ಪಾಂಡಿತ್ಯ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಬಿನ್ನವಿಸಿಕೊಂಡ. ಆಗಿನ ಕಾಲದಲ್ಲಿ ’ಸಮಸ್ಯಾಪೂರ್ತಿ’ಯು ಆಶುಕವಿತ್ವದ ನಿಕಷವಾಗಿತ್ತು. ಈ ಬ್ರಾಹ್ಮಣನ ಮುಂದೆಯೂ ಅಂತಹ ಒಂದು ಸಮಸ್ಯೆಯನ್ನು ಮುಂದಿಟ್ಟ. ಆ ಸಾಲು ’ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ ಎಂಬುದಾಗಿತ್ತು.

ಆ ಬ್ರಾಹ್ಮಣ ಮಹಾಪಂಡಿತನೇ ಆಗಿದ್ದ. ಕೂಡಲೇ ಒಂದು ಪದ್ಯವನ್ನು ರಚಿಸಿ ಪಠಿಸಿದ.

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀತ್ ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಗೆಲ್ಲಬೇಕಾದದ್ದು ಲಂಕೆ, ದಾಟಬೇಕಾದದ್ದು ಸಮುದ್ರ, ವೈರಿಯಾದರೋ ಸಾಮಾನ್ಯನಲ್ಲ ಪುಲಸ್ತ್ಯವಂಶಜ. ಯುದ್ಧಭೂಮಿಯಲ್ಲಿ ಇವನಿಗೆ ಸಹಾಯಕರಾಗಿರುವವರು ಕಪಿಗಳು. ಆದರೂ ರಾಮ ಒಬ್ಬನೇ ರಾಕ್ಷಸಕುಲವನ್ನು ಸಂಪೂರ್ಣ ನಾಶಮಾಡಿದನು. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಆ ಬ್ರಾಹ್ಮಣನ ಪ್ರತಿಭೆಗೆ ಭೋಜರಾಜ ತಲೆದೂಗುತ್ತಿರುವಾಗಲೇ ಅವನ ಬ್ರಾಹ್ಮಣಪತ್ನಿಯ ಬಾಯಿಂದ ಪದ್ಯವೊಂದು ಹೊರಬಿತ್ತು.

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನೋ
ವನೇ ವಾಸಃ ಕಂದಾದಿಕಮಶನಮೇವಂವಿಧಗುಣಃ |
ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಜನ್ಮಸ್ಥಾನ ಕೊಡ. ಪ್ರಾಣಿಗಳೊಂದಿಗೆ ಒಡನಾಟ, ಹಾಕಿಕೊಳ್ಳಲು ಎಲೆಯ ವಸ್ತ್ರ, ಕಾಡಿನಲ್ಲಿ ವಾಸ, ಕಂದಮೂಲಗಳೇ ಆಹಾರ. ಇಂತಹ ಅಗಸ್ತ್ಯ ಸಮುದ್ರವನ್ನೇ ಆಪೋಶನ ತೆಗೆದುಕೊಂಡ. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಸಾಮಾನ್ಯ ಗೃಹಿಣಿಯ ಬಾಯಿಂದ ಇಂತಹ ವಿದ್ವತ್ಪೂರ್ಣ ಪದ್ಯವನ್ನು ಕೇಳಿ ಆಶ್ಚರ್ಯಪಡುತ್ತಿರುವಷ್ಟರಲ್ಲಿ ಆ ಬ್ರಾಹ್ಮಣನ ಮಗನ ಮುಖದಿಂದ ಒಂದು ಪದ್ಯ ಬಾಣದಂತೆ ಭೋಜನತ್ತ ನುಗ್ಗಿತು.

ರಥಸ್ಯೈಕಂ ಚಕ್ರಂ ಭುಜಗಯಮಿತಾಃ ಸಪ್ತತುರಗಾಃ
ನಿರಾಲಂಬೋ ಮಾರ್ಗಃ ಚರಣವಿಕಲಃ ಸಾರಥಿರಪಿ |
ರವಿರ್ಯಾತ್ಯೇವಾಂತಂ ಪ್ರತಿದಿನಮಪಾರಸ್ಯ ನಭಸ:
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ರಥಕ್ಕೆ ಒಂದೇ ಚಕ್ರ, ಏಳು ಕುದುರೆಗಳು (ಚಾಂಚಲ್ಯಕ್ಕೆ ಹೆಸರಾದವು). ಅವನ್ನು ನಿಯಂತ್ರಿಸುವ ಹಗ್ಗಗಳು (ವಕ್ರಗಾಮಿಗಳಾದ) ಹಾವುಗಳು. ಚಲಿಸುವ ಮಾರ್ಗ ನಿರಾಧಾರ, ಕುಂಟನಾದ ಸಾರಥಿ ಹೀಗಿದ್ದರೂ ಅಪಾರವಾದ ಆಕಾಶಮಾರ್ಗವನ್ನು ಸೂರ್ಯ ಪ್ರತಿದಿನ ಕ್ರಮಿಸುತ್ತಾನೆ. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಇಲ್ಲಿಗೇ ಮುಗಿಯಿತೇನೋ ಅಂದುಕೊಂಡರೆ ಇಲ್ಲ. ಪಂಡಿತನ ಮಗಳು ಆರಂಭಿಸಿದಳು.

ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಚಂಚಲದೃ-
ಶಾಂ ಕೊಣೋ ಬಾಣಃ ಸುಹೃದಪಿ ಜಡಾತ್ಮಾ ಹಿಮಕರಃ |
ತಥಾಪ್ಯೇಕೋಽನಂಗಃ ಭುವನಮಪಿ ವ್ಯಾಕುಲಯತೇ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಹೂವಿನ ಬಿಲ್ಲು, ದುಂಬಿಗಳ ಸಾಲೇ ಅದಕ್ಕೆ ಬಿಗಿದ ಹಗ್ಗ, ಚಂಚಲ ಕಡೆಗಣ್ಣ ನೋಟವೇ ಬಾಣ. ಗೆಳೆಯನಾದರೋ ಜಡಾತ್ಮನಾದ ಚಂದ್ರ. ತಾನು ಸ್ವತ: ದೇಹವನ್ನು ಕಳೆದುಕೊಂಡ ಅನಂಗ. ಇಷ್ಟಿದ್ದರೂ ಇಡೀ ಲೋಕವನ್ನೇ ಪ್ರೇಮವ್ಯಾಕುಲತೆಗೆ ತಳ್ಳುತ್ತಾನೆ.

ಸಂಪೂರ್ಣ ಕುಟುಂಬದ ಪ್ರತಿಭಾವಿಲಾಸವನ್ನು ನೋಡಿ ಭೋಜನ ಹೃದಯತುಂಬಿ ಬಂತು. ಅವರಿಗೆ ಧನ, ಕನಕ ರತ್ನಗಳ ಮಳೆ ಹರಿಸಿದ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

   

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೪ *ದೇಹಿ ಪದಪಲ್ಲವಮುದಾರಮ್*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೪

*ದೇಹಿ ಪದಪಲ್ಲವಮುದಾರಮ್*

ಹನ್ನೆರಡನೆಯ ಶತಮಾನದಲ್ಲಿ ವಂಗದೇಶದ ಲಕ್ಷ್ಮಣಸೇನನ ಆಸ್ಥಾನಕವಿಯಾಗಿದ್ದ ಜಯದೇವ ತನ್ನ ’ಗೀತಗೋವಿಂದಮ್’ ಕಾವ್ಯದ ಮೂಲಕ ಆಚಂದ್ರಾರ್ಕಕೀರ್ತಿಯನ್ನು ಗಳಿಸಿದ್ದಾನೆ. ಆತ ತನ್ನ ಕಾವ್ಯರಚನೆಯಲ್ಲಿ ತೊಡಗಿದ್ದಾಗ ನಡೆದ ಒಂದು ಘಟನೆ.

ರಾಧಾಕೃಷ್ಣರ ಪ್ರೇಮವೇ ಜಯದೇವನ ಗೀತಗೋವಿಂದದ ಮುಖ್ಯವಸ್ತು. ಕೃಷ್ಣರಾಧೆಯರ ಪ್ರೇಮದ ಕುರಿತಾದ ಮುಂದಿನ ಎಲ್ಲ ಸಾಹಿತ್ಯಕ್ಕೆ ಈ ಕಾವ್ಯವೇ ಪ್ರೇರಣೆಯಾಗಿ ನಿಂತಿದೆ. ಈ ಕಾವ್ಯದಲ್ಲಿ ಕೃಷ್ಣನಿಗೆ ರಾಧೆಯ ಮೇಲಿರುವ ಪ್ರೇಮದ ಪರಾಕಾಷ್ಠತೆಯನ್ನು ವರ್ಣಿಸುತ್ತ ಹೀಗೆ ಬರೆಯುತ್ತಾನೆ-

ಸ್ಮರಗರಲಖಂಡನಂ
ಮಮ ಶಿರಸಿ ಮಂಡನಂ
ದೇಹಿ ಪದಪಲ್ಲವಮುದಾರಮ್ |
ಜ್ವಲತಿ ಮಯಿ ದಾರುಣೋ
ಮದನಕಲನಾನಲೋ
ಹರತು ತದುಪಾಹಿತವಿಕಾರಮ್ ||

ಮನ್ಮಥನೆಂಬ ವಿಷವನ್ನು ತೊಲಗಿಸುವ ಮೃದುವಾದ ನಿನ್ನ ಪಾದಗಳನ್ನು ನನ್ನ ತಲೆಯ ಮೇಲಿರಿಸು. ನನ್ನೊಳಗೆ ಕಾಮಾಗ್ನಿ ಸುಡುತ್ತಿದೆ. ಅದರ ಪರಿಣಾಮವನ್ನು ಶಾಂತಗೊಳಿಸು.

ಬರೆದ ಮೇಲೆ ಅವನಿಗೆ ಅನಿಸಿತು –’ದೇವನಾಗಿರುವ ಕೃಷ್ಣ ರಾಧೆಯಲ್ಲಿ ಅವಳ ಪಾದವನ್ನು ತನ್ನ ತಲೆಯ ಮೇಲೆ ಇರಿಸು ಎನ್ನುವಂತೆ ಬರೆಯುವುದು ಅವನ ದೇವತ್ವಕ್ಕೆ ಬಗೆವ ಅಪಚಾರ ಅಲ್ಲವೆ?’  ಹೀಗೆಂದು ಯೋಚಿಸಿ ತಾನು ಬರೆದ ಹಾಳೆಯನ್ನು ಹರಿದು ಹಾಕಿದ. ಆಗಲೇ ಬ್ರಾಹ್ಮೀ ಮುಹೂರ್ತ ಸಮೀಪಿಸಿದ್ದರಿಂದ ಬರೆಯುವುದನ್ನು ನಿಲ್ಲಿಸಿ ಸ್ನಾನಕ್ಕೆಂದು ನದಿಗೆ ತೆರಳಿದ.

ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಪತಿಯನ್ನು ನೋಡಿ ಜಯದೇವನ ಪತ್ನಿಗೆ ಆಶ್ಚರ್ಯವಾಯಿತು. ’ಸ್ನಾನಕ್ಕೆ ಹೋಗಿಲ್ಲವೆ?’ ಎಂದು ಪ್ರಶ್ನಿಸಿದಳು. ’ಅಕಸ್ಮಾತ್ ಕಾವ್ಯದ ಸಾಲೊಂದು ಸ್ಫುರಿಸಿತು. ಬರೆದು ಹೋಗೋಣವೆಂದು ಬಂದೆ' ಎಂದು ಭೂರ್ಜಪತ್ರವನ್ನೂ ಲೇಖನಿಯನ್ನೂ ತೆಗೆದುಕೊಂಡು ಬರೆಯತೊಡಗಿದ. ಬರೆದು ಮುಗಿಸಿ ಮತ್ತೆ ಸ್ನಾನಕ್ಕೆ ತೆರಳಿದ. ಸ್ನಾನ ಮುಗಿಸಿ ಬಂದ ಜಯದೇವ ನಿತ್ಯಾಹ್ನಿಕಗಳನ್ನು ಮುಗಿಸಿ ಬರೆಯಲು ಕೂತಾಗ ನೋಡುತ್ತಾನೆ – ಹಿಂದಿನ ದಿನ ಹರಿದು ಹಾಕಿದ್ದ ಕವಿತೆ ಪೀಠದ ಮೇಲಿತ್ತು. ಆಶ್ಚರ್ಯಗೊಂಡು ಪತ್ನಿಯನ್ನು ಪ್ರಶ್ನಿಸಿದಾಗ ಅವಳು ’ನೀವೇ ಕೆಲ ಸಮಯದ ಹಿಂದೆ ಬಂದು ಏನೋ ಬರೆದು ಹೋದಿರಲ್ಲ’ ಎಂದಳು. ಜಯದೇವ ತನ್ನ ಕಿವಿಯನ್ನೇ ತಾನು ನಂಬದಾದ. ’ತಾನು ಬಂದೇ ಇಲ್ಲ, ಆದದ್ದಾದರೂ ಏನು?’ ಎಂದು ಯೋಚಿಸಿದ. ಶ್ರೀಕೃಷ್ಣನೇ ತನ್ನ ರೂಪದಲ್ಲಿ ಬಂದು ಹೀಗೆ ಬರೆದು ಹೋಗಿದ್ದಾನೆ ಎಂದು ಅರಿಯಲು ಬಹಳ ಸಮಯ ಹಿಡಿಯಲಿಲ್ಲ. ತಾನು ಬರೆಯಲು ಹಿಂಜರಿದ ಸಾಲನ್ನು ಭಗವಂತನೇ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಆನಂದತುಂದಿಲನಾದ. ಇಂದಿಗೂ ಆ ಸಾಲು ರಾಧಾಕೃಷ್ಣರ ಅಗಾಧ ಪ್ರೇಮದ ಕುರುಹಾಗಿ ಅಮರವಾಗಿದೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೩ *ಸಂಚಿತಾರ್ಥಂ ವಿನಶ್ಯತಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೩

*ಸಂಚಿತಾರ್ಥಂ ವಿನಶ್ಯತಿ*

ಭೋಜರಾಜನ ಕವಿಜನಪ್ರೀತಿ ಹಾಗೂ ಉದಾರತೆ ಮಂತ್ರಿಯಾದ ಬುದ್ಧಿಸಾಗರನ ನಿದ್ದೆ ಕೆಡಿಸಿತ್ತು. ಹಣದ ಅಪವ್ಯಯವಾಗುತ್ತಿರುವುದನ್ನು ಹೇಗಾದರೂ ಮಾಡಿ ಅವನಿಗೆ ಮನವರಿಕೆ ಮಾಡಿ ಕೊಡಬೇಕೆಂದು ಪ್ರಯತ್ನಿಸುತ್ತಿದ್ದ. ಒಂದಿನ ರಾಜ ಸ್ನಾನಕ್ಕೆ ಹೋಗುವ ಹಾದಿಯಲ್ಲಿ ಒಂದು ಸಾಲನ್ನು ಬರೆದಿಟ್ಟ. ’ಆಪದರ್ಥಂ ಧನಂ ರಕ್ಷೇತ್’ (ಆಪತ್ಕಾಲಕ್ಕಾಗಿ ಹಣವನ್ನು ಉಳಿಸಬೇಕು). ರಾಜ ಅದನ್ನು ಓದಿದ. ಅದರ ಕೆಳಗೆ ತನ್ನ ಪ್ರತಿಕ್ರಿಯೆಯನ್ನು ಬರೆದ. ’ಶ್ರೀಮತಾಮಾಪದ: ಕುತ:?’ (ಶ್ರೀಮಂತರಿಗೆ ಆಪತ್ತೆಲ್ಲಿ?). ಅದನ್ನು ಓದಿದ ಮಂತ್ರಿಗೆ ಕಸಿವಿಸಿಯಾಯಿತು. ಆದರೂ ಪ್ರಯತ್ನ ಬಿಡಲಿಲ್ಲ. ತನ್ನ ಉತ್ತರವನ್ನು ಸೇರಿಸಿದ. ’ಸಾ ಚೇದಪಗತಾ ಲಕ್ಷ್ಮೀಃ’ (ಆ ಲಕ್ಷ್ಮಿ ಹೊರಟು ಹೋದರೆ?) ಮರುದಿನ ಅದಕ್ಕೂ ರಾಜನ ಉತ್ತರ ಸಿದ್ಧವಿತ್ತು. ’ಸಂಚಿತಾರ್ಥಂ ವಿನಶ್ಯತಿ’ (ಕೂಡಿಟ್ಟ ಹಣ ನಾಶವನ್ನು ಹೊಂದುತ್ತದೆ). ರಾಜ-ಮಂತ್ರಿಯರ ಸಂಭಾಷಣೆಯೇ ಒಂದು ಶ್ಲೋಕವಾಯಿತು.

ಆಪದರ್ಥಂ ಧನಂ ರಕ್ಷೇತ್
ಶ್ರೀಮತಾಮಾಪದಃ ಕುತಃ |
ಸಾ ಚೇದಪಗತಾ ಲಕ್ಷ್ಮೀ:
ಸಂಚಿತಾರ್ಥಂ ವಿನಶ್ಯತಿ ||

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 22, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೨ *ದ್ವಿತೀಯಾ ಸ್ಯಾಮಹಂ ಕಥಮ್*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೨

*ದ್ವಿತೀಯಾ ಸ್ಯಾಮಹಂ ಕಥಮ್*

ಹದಿನೆಂಟನೆಯ ಶತಮಾನದಲ್ಲಿ ಕೇರಳದಲ್ಲಿ ಮನೋರಮಾ ಎಂಬ ವಿದುಷಿಯೊಬ್ಬಳಿದ್ದಳು. ಅವಳ ಮೊದಲ ಪತಿ ದಿವಂಗತನಾದ ಬಳಿಕ ವರಾನ್ವೇಷಣೆಗೆ ತೊಡಗಿದಳು. ಆಗೆಲ್ಲ ವಧುಪರೀಕ್ಷೆ ನಡೆಯುತ್ತಿರಲಿಲ್ಲ. ವರಪರೀಕ್ಷೆ ನಡೆಯುತ್ತಿತ್ತು. ಹಾಗೆ ಅವಳನ್ನು ವರಿಸಬಂದ ಪುರುಷನಿಗೆ ಅವಳು ವ್ಯಾಕರಣದ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಒಮ್ಮೆ ಒಬ್ಬನಿಗೆ ವಿಹಸ್ಯ, ವಿಹಾಯ ಮತ್ತು ಅಹಮ್ ಎಂಬ ಪದಗಳ ರೂಪಪರಿಚಯ ಮಾಡುವಂತೆ ಹೇಳಿದಳು. ಅವನಾದರೋ ರಾಮಶಬ್ದಪಂಡಿತ. ಅಂದರೆ ಕೇವಲ ರಾಮಶಬ್ದದ ವಿಭಕ್ತಿರೂಪಗಳನ್ನು ಮಾತ್ರ ಬಲ್ಲವನಾಗಿದ್ದ. ಅವನು ಕ್ರಮವಾಗಿ ಷಷ್ಠೀ, ಚತುರ್ಥೀ ಹಾಗೂ ದ್ವಿತೀಯಾ ವಿಭಕ್ತಿ ಎಂದ. ಯಾರೋ ಹುಡುಗ ಹೇಗಿದ್ದಾನೆ ಎಂದು ಕೇಳಿದಾಗ ಹೀಗೆಂದಳು.

ಯಸ್ಯ ಷಷ್ಠೀ ಚತುರ್ಥೀ ಚ
ವಿಹಸ್ಯ ಚ ವಿಹಾಯ ಚ |
ಅಹಂ ಚ ದ್ವಿತೀಯಾ ಸ್ಯಾತ್
ದ್ವಿತೀಯಾ ಸ್ಯಾಮಹಂ ಕಥಮ್? ||

ಯಾರಿಗೆ ವಿಹಸ್ಯ ಎಂಬುದು ಷಷ್ಠೀ ವಿಭಕ್ತಿರೂಪವೋ, ವಿಹಾಯ ಅನ್ನುವುದು ಚತುರ್ಥೀ ವಿಭಕ್ತಿರೂಪವೋ ಹಾಗೂ ಅಹಂ ಎನ್ನುವುದು ದ್ವಿತೀಯಾ ವಿಭಕ್ತಿಯೋ ಅಂಥವನಿಗೆ ನಾನು ದ್ವಿತೀಯಾ ಅಂದರೆ ಪತ್ನಿಯಾಗುವುದು ಹೇಗೆ?

ವಿಹಸ್ಯ ಅನ್ನುವುದು ವಿ ಉಪಸರ್ಗಪೂರ್ವಕ ಹಸ್ ಧಾತುವಿಗೆ ಲ್ಯಪ್ ಪ್ರತ್ಯಯವನ್ನು ಸೇರಿಸಿದಾಗ ಉಂಟಾಗುವ ಒಂದು ಅವ್ಯಯ. ಆದರೆ ಅದರ ಉಚ್ಚಾರಣೆ ರಾಮಶಬ್ದದ ಷಷ್ಠೀ ವಿಭಕ್ತಿರೂಪವಾದ ’ರಾಮಸ್ಯ’ ದಂತೆ ಇದೆ. ವಿಹಾಯ ಅನ್ನುವುದು ವಿ ಉಪಸರ್ಗಪೂರ್ವಕ ಹಾ ಧಾತುವಿಗೆ ಲ್ಯಪ್ ಪ್ರತ್ಯಯವನ್ನು ಜೋಡಿಸಿದಾಗ ಸಿಗುವ ಅವ್ಯಯ. ಇದು ರಾಮ ಶಬ್ದದ ಚತುರ್ಥೀವಿಭಕ್ತಿರೂಪವಾದ ’ರಾಮಾಯ’ ಎನ್ನುವಂತೆ ಇದೆ. ಅಹಂ ಎಂಬುದು ಅಸ್ಮದ್ ಶಬ್ದದ ಪ್ರಥಮಾವಿಭಕ್ತಿರೂಪ. ಅದು ರಾಮ ಶಬ್ದದ ದ್ವಿತೀಯಾ ವಿಭಕ್ತಿ ರೂಪವಾದ ’ರಾಮಮ್’ ದಂತೆ ಇದೆ. ರಾಮಶಬ್ದಪಂಡಿತ ಮತ್ತೇನು ಉತ್ತರ ಹೇಳಿಯಾನು?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Monday, August 21, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೧ *ಚವೈತುಹಿ ಚವೈತುಹಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೧

*ಚವೈತುಹಿ ಚವೈತುಹಿ*

ಭೋಜರಾಜನ ಅಕ್ಷರಲಕ್ಷ ಯೋಜನೆಯ ಕೀರ್ತಿ ಕರ್ಣಾಕರ್ಣಿಯಾಗಿ ರಾಜ್ಯಾದ್ಯಂತ ಹರಡಿತ್ತು. ಪ್ರತಿಭೆಯಿಲ್ಲದ ಅರ್ಧ ಪಂಡಿತರೂ ಸಾವಿರ ಹೊನ್ನು ಸಿಕ್ಕರೂ ಸಾಕು ಎಂದು ಸಾಲುಗಟ್ಟಿದರು. ಅವರಲ್ಲೊಬ್ಬ ಸೂರ್ಯ ಮೂಡುವುದಕ್ಕಿಂತ ಮೊದಲೇ ಹೇಗೋ ಅರಮನೆಯ ಪ್ರವೇಶ ಗಿಟ್ಟಿಸಿಕೊಂಡು ರಾಜನ ಅಂತ:ಪುರವನ್ನೂ ಪ್ರವೇಶಿಸಿದ. ರಾಜನಿಗೆ ಸುಪ್ರಭಾತವನ್ನು ಹಾಡುವುದು ಅವನ ಉದ್ದೇಶವಾಗಿತ್ತು.

‘ಉತ್ತಿಷ್ಠೋತ್ತಿಷ್ಠ ಗೋವಿಂದ’ ಎಂಬ ಸುಪ್ರಭಾತ ಶ್ಲೋಕದ ಪಾದ ನೆನಪಾಯಿತು ಅವನಿಗೆ ಗೋವಿಂದನ ಸ್ಥಾನದಲ್ಲಿ ರಾಜೇಂದ್ರನನ್ನು ನಿಲ್ಲಿಸಿ ’ಉತ್ತಿಷ್ಠೋತ್ತಿಷ್ಠ ರಾಜೇಂದ್ರ’ ಎಂದು ಮೊದಲ ಪಾದವನ್ನು ಮುಗಿಸಿದ. ಎದ್ದ ಮೇಲೆ ಮುಖ ಪ್ರಕ್ಷಾಲನೆ ಮಾಡಬೇಕಲ್ಲ, ಅದಕ್ಕೆ ಹೇಳಿದ ’ಮುಖಂ ಪ್ರಕ್ಷಾಲಯಸ್ವ’ ಇಲ್ಲಿ ಒಂದಕ್ಷರ ಕಡಿಮೆ ಬಿತ್ತು. ಹಾಗೇ ಬಿಟ್ಟು ಮೂರನೇ ಪಾದಕ್ಕೆ ಜಿಗಿದ. ‘ಪ್ರಭಾತೇ ಕೂಜತೇ ಕುಕ್ಕುಟ:’ (ಬೆಳಿಗ್ಗೆ ಕೋಳಿ ಕೂಗುತ್ತದೆ) ಎನ್ನಲು ಹೋದ. ಇಲ್ಲಿ ಒಂದಕ್ಷರ ಹೆಚ್ಚಾಯಿತು. ಹಿಂದಿನ ಚರಣದಲ್ಲಿ ಒಂದಕ್ಷರ ಕಡಿಮೆ ಬಿದ್ದಿದ್ದು ನೆನಪಾಯಿತು. ಮೂರನೆಯ ಪಾದದಲ್ಲಿ ಹೆಚ್ಚಾದ ’ಟ:’ ವನ್ನು ಅಲ್ಲಿ ಸೇರಿಸಿದ. ಇಷ್ಟೆಲ್ಲ ಕಸರತ್ತು ಮಾಡುವಷ್ಟರಲ್ಲಿ ಹೈರಾಣಾಗಿದ್ದ. ನಾಲ್ಕನೆಯ ಪಾದವನ್ನು ರಚಿಸುವಷ್ಟು ವ್ಯವಧಾನವಿರಲಿಲ್ಲ. ಅಕ್ಷರಗಳ ಕೊರತೆಯಾದಾಗ ಅರ್ಥವಿಲ್ಲದ ಪಾದಪೂರಣಗಳಾದ ಚ,ವೈ,ತು,ಹಿ ಇವುಗಳನ್ನು ಬಳಸಬಹುದು ಎಂದು ತಿಳಿದಿದ್ದ. ಆ ಪದಗಳನ್ನೇ ಬಳಸಿ ಕೊನೆಯ ಚರಣವನ್ನು ಬರೆದ.

ಉತ್ತಿಷ್ಠೋತ್ತಿಷ್ಠ ರಾಜೇಂದ್ರ!
ಮುಖಂ ಪ್ರಕ್ಷಾಲಯಸ್ವ ಟ: |
ಪ್ರಭಾತೇ ಕೂಜತೇ ಕುಕ್ಕು
ಚವೈತುಹಿ ಚವೈತುಹಿ ||

ಬೆಳಿಗ್ಗೆಯೇ ವಕ್ಕರಿಸಿದ ಇಂತಹ ಕವಿಗೆ ರಾಜ ಏನು ಮಾಡಿಯಾನು? ಕನಿಕರಿಸಿ ಏನೋ ಒಂದಿಷ್ಟು ಕೊಟ್ಟು ಕಳಿಸಿದ.

(ಈ ಲೇಖನಕ್ಕೆ ವಿಶ್ವವಾಣಿಯಲ್ಲಿ ೧೧.೧೨.೨೦೧೬ ರಂದು ವಿಶ್ವವಾಣಿಯಲ್ಲಿ ಪ್ರಕಟವಾದ ಶ್ರೀವತ್ಸ ಜೋಶಿಯವರ ತಳಿರು ತೋರಣ ಅಂಕಣದ ಸಹಾಯವನ್ನು ತೆಗೆದುಕೊಂಡಿದ್ದೇನೆ. ಅವರಿಗೆ ಕೃತಜ್ಞ.)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೦ *ಬಾದರಾಯಣ ಸಂಬಂಧ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೦

*ಬಾದರಾಯಣ ಸಂಬಂಧ*

ನಿಮಗೆಲ್ಲ ’ಬಾದರಾಯಣ ಸಂಬಂಧ’ ಎಂಬ ನುಡಿಗಟ್ಟು ಗೊತ್ತಿರಬಹುದು. ಅದು ಹೇಗೆ ರೂಢಿಗೆ ಬಂತು ಎಂಬ ಅರಿವಿದೆಯೆ? ಕೆಲವರು ಈ ನುಡಿಗಟ್ಟನ್ನು ಬಾದರಾಯಣರೆಂದು ಖ್ಯಾತರಾದ ವ್ಯಾಸಮಹರ್ಷಿಗಳಿಗೆ ಅನ್ವಯಿಸುವುದುಂಟು. ಆದರೆ ಆ ನುಡಿಗಟ್ಟಿನ ಹುಟ್ಟಿನ ರೋಚಕ ಕಥೆ ಇಲ್ಲಿದೆ ಓದಿ.

ಚಕ್ಕಡಿ ಗಾಡಿಯಲ್ಲಿ ಪ್ರಯಾಣಿಸುವ ಕಾಲವದು. ಒಬ್ಬ ಯಾತ್ರಿಕ ಒಂದು ಹಳ್ಳಿಯಲ್ಲಿ ಪ್ರಯಾಣಿಸುತ್ತಿರುವಾಗ ಗಾಡಿ ಕೆಟ್ಟು ಹೋಯಿತು. ಸಂಜೆಯ ಸಮಯ. ಮಳೆ ಬರುವ ಲಕ್ಷಣವೂ ಕಾಣಿಸುತ್ತಿತ್ತು. ಚಾಲಕ ಗಾಡಿಯನ್ನು ಸರಿಮಾಡಲು ಯತ್ನಿಸುತ್ತಿದ್ದ. ಹಸಿವೆಯಿಂದಲೂ ಬಳಲುತ್ತಿದ್ದ ಆ ಯಾತ್ರಿಕ ಅಲ್ಲಿಯೇ ಇದ್ದ ಮನೆಯನ್ನು ಹೊಕ್ಕ. ಅತ್ಯಂತ ಆತ್ಮೀಯ ಪರಿಚಿತರಂತೆ ಯಜಮಾನನೊಂದಿಗೆ ವ್ಯವಹರಿಸತೊಡಗಿದ. ಸದ್ಗೃಹಸ್ಥನಾದ ಯಜಮಾನನಾದರೋ ತಾವು ಯಾರೆಂದು ಕೇಳುವುದು ಸಭ್ಯತನವಲ್ಲವೆಂದು ತಿಳಿದು ಪತ್ನಿಯ ಕಡೆಯ ಸಂಬಂಧಿಯಿರಬೇಕೆಂದು ಬಗೆದು ಉಪಚರಿಸಿದ. ಪತ್ನಿಯಾದರೋ ಗಂಡನ ಸಂಬಂಧಿಯಿರಬೇಕೆಂದು ಉಪಚರಿಸಿದಳು. ಊಟವಾಯಿತು. ವೀಳ್ಯವನ್ನು ಸವಿಯುವಾಗ ಯಜಮಾನ ಕುತೂಹಲ ತಾಳಲಾರದೆ ಕೇಳಿಯೇ ಬಿಟ್ಟ. ’ನಮಗೂ ನಿಮಗೂ ಯಾವ ರೀತಿಯ ಸಂಬಂಧ?’. ಆ ಯಾತ್ರಿಕ ನಗುತ್ತ ಯಜಮಾನನ ಮನೆಯ ಅಂಗಳದ ತುದಿಯಲ್ಲಿದ್ದ ಬದರೀ(ಬೋರೆ) ಮರವನ್ನು ತೋರಿಸಿ ಹೇಳಿದ –

ಅಸ್ಮಾಕಂ ಬದರೀಚಕ್ರಂ
ಯುಷ್ಮಾಕಂ ಬದರೀತರುಃ |
ಬಾದರಾಯಣಸಂಬಂಧಾತ್
ಯೂಯಂ ಯೂಯಂ ವಯಂ ವಯಮ್ ||

ನಮ್ಮ ಗಾಡಿಯ ಚಕ್ರ ಬೋರೆ ಮರದಿಂದ ಮಾಡಿದ್ದು. ನಿಮ್ಮ ಮನೆಯ ಅಂಗಳದಲ್ಲಿ ಒಂದು ಬೋರೆ ಮರವಿದೆ. ಹಾಗಾಗಿ ಬಾದರಾಯಣ ಸಂಬಂಧದಿಂದ ನಾವು ನೀವು, ನೀವು ನಾವು.

ಅಷ್ಟರಲ್ಲಿ ಗಾಡಿ ರಿಪೇರಿಯಾಗಿತ್ತು. ಯಾತ್ರಿಕ ಹೊರಟೇ ಬಿಟ್ಟ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Sunday, August 20, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೯ *ಕಾಳಿದಾಸನ ಚೆಕ್ ಮೇಟ್!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೯

*ಕಾಳಿದಾಸನ ಚೆಕ್ ಮೇಟ್!*

ಭೋಜರಾಜನ ಅಕ್ಷರಲಕ್ಷ ಯೋಜನೆ ಮಂತ್ರಿಯ ನಿದ್ದೆ ಕೆಡಿಸಿತ್ತು. ಇದರಿಂದ ಖಜಾನೆ ಬರಿದಾಗುವ ಭಯವಿತ್ತು. ಹಾಗಾಗಿ ಅವನು ಒಂದು ಉಪಾಯವನ್ನು ಮಾಡಿದ. ಆಸ್ಥಾನದಲ್ಲಿ ಅನೇಕ ಏಕಪಾಠಿ, ದ್ವಿಪಾಠಿ, ತ್ರಿಪಾಠಿ ಪಂಡಿತರಿದ್ದರು. ಕವಿ ತನ್ನ ಕಾವ್ಯವನ್ನು ಓದಿದ ಕೂಡಲೇ ಏಕಪಾಠಿ ಅದನ್ನು ಪುನರುಚ್ಚರಿಸಿ ’ಇದು ನನಗೆ ಮೊದಲೇ ತಿಳಿದಿತ್ತು’ ಎಂದು ಹೇಳಿ ತೋರಿಸುತ್ತಿದ್ದ. ಅದನ್ನು ಕೇಳಿದ ದ್ವಿಪಾಠಿ ನನಗೂ ಗೊತ್ತಿದೆ ಎಂದು ಪುನರುಚ್ಚರಿಸುತ್ತಿದ್ದ. ನಂತರ ತ್ರಿಪಾಠಿಯೂ ಹೀಗೇ ಮಾಡುತ್ತಿದ್ದ. ಅದರಿಂದಾಗಿ ಕವಿಗೆ ಸಿಗುವ ಬಹುಮಾನ ತಪ್ಪಿ ಹೋಗುತ್ತಿತ್ತು.

ಕಾಳಿದಾಸನಿಗೆ ಇದು ರುಚಿಸಲಿಲ್ಲ. ಅವನು ಕವಿಯೊಬ್ಬನನ್ನು ಕರೆದು ಒಂದು ಪದ್ಯವನ್ನು ಬರೆದು ಕೊಟ್ಟ. ಆ ಕವಿ ಅದನ್ನು ಸಭೆಯಲ್ಲಿ ಪಠಿಸಿದ.

ಸ್ವಸ್ತಿ ಶ್ರೀ ಭೋಜರಾಜ! ತ್ವಮಖಿಲಭುವನೇ ಧಾರ್ಮಿಕ; ಸತ್ಯವಕ್ತಾ
ಪಿತ್ರಾ ತೇ ಸಂಗ್ರಹೀತಾ ನವನವತಿಮಿತಾ ರತ್ನಕೋಟ್ಯೋ ಮದೀಯ: |
ತಾಂಸ್ತ್ವಂ ದೇಹೀತಿ ರಾಜನ್! ಸಕಲಬುಧಜನೈರ್ಜ್ಞಾಯತೇ ಸತ್ಯಮೇತತ್
ನೋ ವಾ ಜಾನಂತಿ ಯತ್ತನ್ಮಮ ಕೃತಿಮಪಿ ನೋ ದೇಹಿ ಲಕ್ಷಂ ತತೋ ಮೇ ||

’ಹೇ ಭೋಜರಾಜನೇ! ನಿನಗೆ ಮಂಗಲವಾಗಲಿ. ನೀನು ಈ ಜಗತ್ತಿನಲ್ಲಿ ಶ್ರೇಷ್ಠನಾದ ಧಾರ್ಮಿಕ ಹಾಗೂ ಸತ್ಯವಾದಿ. ನಿನ್ನ ತಂದೆಯವರು ನನ್ನಿಂದ ೯೯ ಕೋಟಿ ರತ್ನಗಳನ್ನು ತೆಗೆದುಕೊಂಡಿದ್ದರು. ಅದನ್ನು ನನಗೆ ಮರಳಿ ಕೊಡು. ಇದು ನಿನ್ನ ಆಸ್ಥಾನದಲ್ಲಿರುವ ವಿದ್ವಾಂಸರಿಗೂ ಗೊತ್ತು. ಅವರಿಗೆ ಗೊತ್ತಿಲ್ಲ ಅಂತಾದರೆ ನನಗೆ ಈ ಪದ್ಯಕ್ಕೆ ಲಕ್ಷ ಹೊನ್ನನ್ನು ಕೊಡು.’

ಏಕಪಾಠಿ ಈ ಪದ್ಯ ಗೊತ್ತಿತ್ತು ಎಂದು ಹೇಳುವಂತಿರಲಿಲ್ಲ. ಹೇಳಿದರೆ ೯೯ ಕೋಟಿ ರತ್ನಗಳನ್ನು ಕೊಡಬೇಕಾದೀತು! ಏಕಪಾಠಿ ಪಠಿಸದ ಹೊರತು ದ್ವಿಪಾಠಿ ಹೇಳುವಂತಿರಲಿಲ್ಲ. ತ್ರಿಪಾಠಿಯ ಗತಿಯೂ ಅಷ್ಟೇ. ಕೋಟಿ ರತ್ನಗಳನ್ನು ಕೊಡುವುದಕ್ಕಿಂತ ೮೪ ಲಕ್ಷಹೊನ್ನು ಕೊಟ್ಟು ಸಾಗಹಾಕುವುದು ಒಳಿತೆಂದು ಭೋಜರಾಜ ಯೋಚಿಸಿದ.

ಹೇಗಿದೆ ಕಾಳಿದಾಸನ ಚೆಕ್ ಮೇಟ್?!

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

Friday, August 18, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೮ *ರಾಮವೈರಿಭಗಿನೀವ ರಾಜಸೇ!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೮

*ರಾಮವೈರಿಭಗಿನೀವ ರಾಜಸೇ!*

ಕೋಲಾಚಲ ಮಲ್ಲಿನಾಥನ ಕಥೆಯನ್ನು ಹಿಂದೆ ಓದಿದ್ದೀರಿ. ಸದಾ ಮಹಾಕಾವ್ಯಗಳ ಅನುಸಂಧಾನ ಮಾಡುತ್ತ ಕಾವ್ಯಕನ್ನಿಕೆಯರ ವರ್ಣನೆಯಲ್ಲಿಯೇ ಮುಳುಗಿ ಹೋಗುತ್ತಿದ್ದ ಮಲ್ಲಿನಾಥನ ಮೇಲೆ ಅವನ ಪತ್ನಿಗೆ ತುಸು ಕೋಪ. ಒಮ್ಮೆ ಕೇಳಿಯೇ ಬಿಡುತ್ತಾಳೆ ‘ನನ್ನನ್ನು ನೀವು ಯಾವಾಗಲೂ ವರ್ಣಿಸುವುದೇ ಇಲ್ಲವಲ್ಲ’ ಎಂದು ಕೇಳಿಯೇ ಬಿಟ್ಟಳು. ಮಲ್ಲಿನಾಥ ನಗುತ್ತ ಅವಳಿಗಾಗಿ ಒಂದು ವಿಶೇಷ ಪದ್ಯವನ್ನು ರಚಿಸಿ ಪಠಿಸಿದ.

ತಿಂತ್ರಿಣೀದಲಸಮಾನಲೋಚನೇ!
ದೇವದುಂದುಭಿ ಸಮಾನಮಧ್ಯಮೇ!
ಅರ್ಕಶುಷ್ಕಫಲವಧ್ವನಸ್ತನಿ!
ರಾಮವೈರಿಭಗಿನೀವ ರಾಜಸೇ ||

ಹುಣಸೆ ಎಲೆಯಂತಹ ಕಣ್ಣುಳ್ಳವಳೇ, ದೇವಾಲಯದ ನಗಾರಿಯಂತಹ ಸೊಂಟವುಳ್ಳವಳೇ, ಒಣಗಿದ ಎಕ್ಕೆಯ ಕಾಯಿಯಂತಹ ಎದೆಯನ್ನುಳ್ಳವಳೇ, ರಾಮನ ವೈರಿ(ರಾವಣನ)ಯ ಸೋದರಿಯಂತೆ ತೋರುತ್ತಿರುವೆ.

ಆ ದಿನ ಪಂಡಿತನಿಗೆ ಮನೆಯಲ್ಲಿ ಊಟ ಸಿಕ್ಕಿತೋ, ಇಲ್ಲ ಅಡಿಗೆ ಮನೆಯಲ್ಲಿ ಪಾತ್ರೆಗಳು ಮಾತನಾಡಿದವೋ ದೇವರೇ ಬಲ್ಲ !

ಆದರೆ, ಕೆಲ ದಿನಗಳಲ್ಲೇ ಗಂಡನ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಆ ಗೃಹಿಣಿಗೆ ಒದಗಿತು. ಮಹಾಕಾವ್ಯಗಳಿಗೆ ವ್ಯಾಖ್ಯಾನವನ್ನು ಬರೆಯುತ್ತ ಯಾವಾಗಲೂ ’ಇತ್ಯರ್ಥಃ’, ’ಇತಿ ಭಾವಃ’ ಎಂಬ ಶಬ್ದಗಳನ್ನು ಉಪಯೋಗಿಸುತ್ತ ರೂಢಿ ಬಲದಿಂದ ಕೆಲವೊಮ್ಮೆ ವ್ಯವಹಾರದಲ್ಲೂ ಅವನ್ನೇ ಹೇಳುತ್ತಿದ್ದ ಪಂಡಿತ ಒಂದಿನ ‘ಇಂದು ಏನು ಅಡಿಗೆ?’ ಎಂದು ಹೆಂಡತಿಯನ್ನು ಕೇಳಿಬಿಟ್ಟ. ಇಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದ ಆ ಪತ್ನಿ ಕೊಟ್ಟ ಉತ್ತರವನ್ನು ನೋಡಿ-

ಇತ್ಯರ್ಥಕ್ವಥಿತಂ ಚೈವೇ-
ತಿಭಾವತೇಮನಮ್ ತಥಾ |
ಸಜ್ಜೀಕೃತೇಽದ್ಯ ಭುಕ್ತ್ಯರ್ಥಂ
ತುಷ್ಯತಾಂ ಭವದಾಶಯಃ ||

ಇತ್ಯರ್ಥ ಎಂಬ ಸಾರನ್ನೂ, ಇತಿ ಭಾವಃ ಎಂಬ ಮಜ್ಜಿಗೆ ಹುಳಿಯನ್ನೂ ಮಾಡಿದ್ದೇನೆ. ತಿಂದು ತೃಪ್ತರಾಗಿ.

ಈ ದಂಪತಿಗಳ ಕಾವ್ಯಾನುಲಾಪ ಸರಸ ಅನುಕರಣಯೋಗ್ಯವಲ್ಲವೆ?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೭ *ಠಾಠಂ ಠಠಂ ಠಂ ಠಠಠಂ ಠ ಠಂ ಠ:*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೭

*ಠಾಠಂ ಠಠಂ ಠಂ ಠಠಠಂ ಠ ಠಂ ಠ:*

ಭೋಜರಾಜನೊಮ್ಮೆ ತನ್ನ ಅರಮನೆಯ ಅಟ್ಟದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಅಲ್ಲಿಗೆ ಸಮೀಪದಲ್ಲೇ ಇರುವ ಕೆರೆಗೆ ಒಬ್ಬಳು ಯುವತಿ ಕೊಡ ಹಿಡಿದು ಬಂದಳು. ತಳಕುತ್ತ ಬಳಕುತ್ತ ಸರೋವರದ ಮೆಟ್ಟಿಲನ್ನು ಇಳಿಯುತ್ತಿರುವಾಗ ಅವಳ ಕೈಯಿಂದ ಕೊಡ ಜಾರಿ ಹೋಯಿತು. ಒಂದೊಂದೇ ಮೆಟ್ಟಿಲನ್ನು ತಾಕಿ ಸರೋವರಕ್ಕೆ ಬೀಳುವಾಗ ಅದು ”ಠಾಠಂ ಠಠಂ ಠಂ ಠಠಠಂ ಠ ಠಂ ಠ:’ ಎಂದು ಲಯಬದ್ಧವಾಗಿ ಶಬ್ದ ಮಾಡಿತು. ಅದನ್ನು ಕೇಳಿದ ಭೋಜರಾಜ ಆ ಸಾಲನ್ನಿಟ್ಟುಕೊಂಡು ಕವಿತೆಯನ್ನು ರಚಿಸುವಂತೆ ತನ್ನ ಆಸ್ಥಾನದ ಕವಿಗಳಿಗೆ ಸವಾಲು ಹಾಕಿದ. ಯಾರಿಗೂ ಸಂದರ್ಭ ಅರ್ಥವಾಗಲಿಲ್ಲ. ಕಾಳಿದಾಸ ಎರಡು ದಿನಗಳ ಅವಧಿಯನ್ನು ಬೇಡಿದ.

ಆ ಎರಡು ದಿನಗಳಲ್ಲಿ ಭೋಜರಾಜನ ದಿನಚರಿಯನ್ನು ಕಾಳಿದಾಸ ಸೂಕ್ಷ್ಮವಾಗಿ ಅವಲೋಕಿಸಿದ. ಸಾಯಂಕಾಲ ಭೋಜರಾಜ ಸರೋವರದ ಕಡೆ ಆಸಕ್ತಿಯಿಂದ ನೋಡುವುದನ್ನೂ ಅಲ್ಲಿಗೆ ನೀರನ್ನು ತೆಗೆದುಕೊಂಡು ಹೋಗಲು ಯುವತಿಯರು ಬರುವುದನ್ನೂ ಗಮನಿಸಿದ. ಅದರ ಆಧಾರದ ಮೇಲೆ ಮರುದಿನ ಪದ್ಯವೊಂದನ್ನು ರಚಿಸಿ ಪಠಿಸಿದ.

ರಾಮಾಭಿಷೇಕೇ ಜಲಮಾಹರನ್ತ್ಯಾ:
ಹಸ್ತಾಚ್ಯುತೋ ಹೇಮಘಟೋ ಯುವತ್ಯಾ:|
ಸೋಪಾನಮಾರ್ಗೇ ಸ ಕರೋತಿ ಶಬ್ದಂ
ಠಾಠಂ ಠಠಂ ಠಂ ಠಠಠಂ ಠ ಠಂ ಠ: ||

(ಮೊದಲ ಸಾಲಿನ ’ರಾಜ್ಯಾಭಿಷೇಕೇ ಮದವಿಹ್ವಲಾಯಾ:’ ಎಂಬ ಪಾಠಾಂತರವೂ ಇದೆ.)

ರಾಮಾಭಿಷೇಕದಲಿ ನೀರ ಸೇದಲು ಬಂದ
ರಮಣಿಯ ಕೈಯಿಂದ ಜಾರಿತ್ತು ಚಿನ್ನದ ಕೊಡ |
ಮೆಟ್ಟಿಲಿನ ಹಾದಿಯಲಿ ನುಡಿಯುತ್ತ ಸಾಗಿತ್ತು
ಠಾಠಂ ಠಠಂ ಠಂ ಠಠಠಂ ಠ ಠಂ ಠ: ||

(ಅನುವಾದ ಲೇಖಕನದ್ದು)

ರಾಮನ ರಾಜ್ಯಾಭಿಷೇಕ ಸಂದರ್ಭದಲ್ಲಿ ನೀರನ್ನು ತೆಗೆದುಕೊಂಡು ಹೋಗಲು ಬಂದ ಯುವತಿಯ ಕೈಯಿಂದ ಜಾರಿದ ಚಿನ್ನದ ಕೊಡ ಮೆಟ್ಟಿಲಿನ ಹಾದಿಯಲ್ಲಿ ಹೀಗೆ ಶಬ್ದ ಮಾಡುತ್ತಿತ್ತು.

ಭೋಜರಾಜ ಸಂತುಷ್ಟನಾಗಿ ಕಾಳಿದಾಸನನ್ನು ಸತ್ಕರಿಸಿದ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೬ *ಸರ್ವಶುಕ್ಲಾ ಸರಸ್ವತೀ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೬

*ಸರ್ವಶುಕ್ಲಾ ಸರಸ್ವತೀ*

ಕರ್ಣಾಟಕದ ಚಾಲುಕ್ಯವಂಶದ ಇಮ್ಮಡಿ ಪುಲಿಕೇಶಿಯ ಸೊಸೆಯಾಗಿದ್ದ ವಿಜಯಾಂಬಿಕೆ ಅಥವಾ ವಿಜ್ಜಿಕೆ ಸಂಸ್ಕೃತ ಕವಯಿತ್ರಿಯರಲ್ಲಿ ಅಗ್ರಗಣ್ಯಳಾಗಿದ್ದಳು. ಅವಳ ’ಕೌಮುದೀಮಹೋತ್ಸವ’ ಎಂಬ ನಾಟಕ ಭಾಗಶಃ ಸಿಕ್ಕಿದೆ. ವಿಜ್ಜಿಕೆಗೆ ತನ್ನ ಪಾಂಡಿತ್ಯದ ಬಗ್ಗೆ ತುಂಬು ಅಭಿಮಾನವಿತ್ತು. ಅವಳಲ್ಲಿ ಯಾರೋ ಒಮ್ಮೆ ನಿಮ್ಮ ಮೆಚ್ಚಿನ ಕವಿಗಳಾರು ಎಂದು ಪ್ರಶ್ನೆ ಮಾಡಿದಾಗ ಹೇಳಿದ್ದಳು-

ಏಕೋಽಭೂನ್ನಲಿನಾತ್ತತಶ್ಚ ಪುಲಿನಾದ್ವಲ್ಮೀಕತಶ್ಚಾಪರಃ
ತೇ ಸರ್ವೇ ಭವಂತಿ ಕವಯಸ್ತೇಭ್ಯೋ ನಮಸ್ಕುರ್ಮಹೇ |
ಅರ್ವಾಂಚೋ ಯದಿ ಗದ್ಯಪದ್ಯರಚನೈಶ್ಚೇಷ್ಟಾಂ ಚ ಮತ್ಕುರ್ವತೇ
ತೇಷಾಂ ಮೂರ್ಧ್ನಿ ದಧಾಮಿ ವಾಮಚರಣಂ ಕರ್ಣಾಟರಾಜಪ್ರಿಯಾ ||

ಕಮಲದಿಂದ ಹುಟ್ಟಿದ ಬ್ರಹ್ಮ, ಮರಳಿನಿಂದ ಹುಟ್ಟಿದ ವ್ಯಾಸ, ಹುತ್ತದಿಂದ ಹುಟ್ಟಿದ ವಾಲ್ಮೀಕಿ ಇವರು ಮಾತ್ರ ಕವಿಗಳು. ಅವರನ್ನು ಬಿಟ್ಟು ಹೊಸಬರಾರಾದರೂ ತಾವು ಕವಿಗಳೆಂದು ಚೇಷ್ಟೆ ಮಾಡಿದರೆ ಅವರ ತಲೆಯ ಮೇಲೆ ನನ್ನ ಎಡಗಾಲನ್ನಿರಿಸುತ್ತೇನೆ.

ಇದು ಧಾರ್ಷ್ಟ್ಯವೋ ಸ್ವಾಭಿಮಾನದ ಪರಾಕಾಷ್ಠತೆಯೋ ಗೊತ್ತಿಲ್ಲ.

ದಂಡಿಯೆಂಬ ಗದ್ಯಕವಿಚಕ್ರವರ್ತಿ ತನ್ನ ಕಾವ್ಯಾದರ್ಶ ಎಂಬ ಲಕ್ಷಣಗ್ರಂಥದ ಮಂಗಲಾಚರಣೆಯನ್ನು ಹೀಗೆ ಮಾಡಿದ್ದ.

ಚತುರ್ಮುಖಮುಖಾಂಭೋಜ
ವನಹಂಸವಧೂರ್ಮಮ |
ಮಾನಸೇ ರಮತಾಂ ನಿತ್ಯಂ
ಸರ್ವಶುಕ್ಲಾಸರಸ್ವತಿ ||

ಚತುರ್ಮುಖ ಬ್ರಹ್ಮನ ಮುಖಕಮಲಗಳ ಕೊಳದಲ್ಲಿ ವಿಹರಿಸುವ ಹಂಸಿಯಾಗಿರುವ, ಸಂಪೂರ್ನವಾಗಿ ಶುಭ್ರವರ್ಣವುಳ್ಳ ಸರಸ್ವತಿಯು ನನ್ನ (ಮಾನಸ ಸರಸ್ಸಿನಂತಿರುವ) ಮನಸ್ಸಿನಲ್ಲಿ ರಮಿಸಲಿ.

ಈ ಪದ್ಯವನ್ನು ಓದಿದ ವಿಜಯ ಭಟ್ಟಾರಿಕೆ ಹೀಗೆಂದು ಬರೆದಳು.

ನೀಲೋತ್ಪಲದಲಶ್ಯಾಮಾಂ
ವಿಜ್ಜಿಕಾಂ ಮಾಮಜಾನತಾ |
ವೃಥೈವ ದಂಡಿನಾ ಪ್ರೋಕ್ತಂ
ಸರ್ವಶುಕ್ಲಾ ಸರಸ್ವತೀ ||

’ಕೆನ್ನೈದಿಲೆಯ ಬಣ್ಣವನ್ನು ಹೊಂದಿದ ನನ್ನನ್ನು ತಿಳಿಯದೆ ದಂಡಿಯು ವ್ಯರ್ಥವಾಗಿ ಸರಸ್ವತಿಯು ಶುಭ್ರವರ್ಣದವಳು ಎಂದು ಹೇಳಿದ್ದಾನೆ’. ಅವಳ ಮಾತಿನಲ್ಲಿರುವ ಮೊನಚು ನಿಮಗರ್ಥವಾಗಿರಬೇಕು. ತನ್ನನ್ನು ಸಾಕ್ಷಾತ್ ಸರಸ್ವತಿ ಎಂದು ಹೇಳಿಕೊಳ್ಳುವ ಅವಳ ಸ್ವಾಭಿಮಾನಕ್ಕೆ ಎಣೆಯುಂಟೆ?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೫ *ಬಾಧತಿ – ಬಾಧತೇ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೫

*ಬಾಧತಿ – ಬಾಧತೇ*

ಒಬ್ಬ ಮಹಾಪಂಡಿತ ದೂರ ದೇಶದಿಂದ ಧಾರಾನಗರಕ್ಕೆ ಆಗಮಿಸಿದ್ದ. ನಗರದ ಹೊರವಲಯಕ್ಕೆ ಆಗಮಿಸಿದ ಅವನು ’ತನ್ನನ್ನು ನಿನ್ನ ಆಸ್ಥಾನದ ವಿದ್ವಾಂಸರೇ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಅರಮನೆಗೆ ಒಯ್ಯಬೇಕು’ ಎಂದು ರಾಜನಿಗೆ ಸಂದೇಶ ಕಳಿಸಿದ. ಪಂಡಿತನ ಕೀರ್ತಿಯನ್ನು ಕೇಳಿದ್ದ ಮಹಾರಾಜ ಆಗಲೆಂದು ಒಪ್ಪಿ ಕಾಳಿದಾಸಾದಿ ಕವಿಗಳನ್ನು ಪಲ್ಲಕ್ಕಿಯೊಂದಿಗೆ ಕಳಿಸಿದ. ಅದು ಛಳಿಗಾಲದ ಸಮಯ. ಕವಿಗಳಿಗೆ ಪಲ್ಲಕ್ಕಿಯನ್ನು ಹೊತ್ತು ಅಭ್ಯಾಸವೂ ಇಲ್ಲ. ನಡುಗುತ್ತಿದ್ದ ಕವಿಗಳು ಹೊತ್ತಿದ್ದ ಪಲ್ಲಕ್ಕಿ ಕುಲುಕಾಡುತ್ತಿತ್ತು. ಒಳಗೆ ಸುಖವಾಗಿ ಕುಳಿತಿದ್ದ ಪಂಡಿತನಿಗೆ ಅದು ಕಿರಿಕಿರಿಯಾಗುತ್ತಿತ್ತು. ಅವನು ಗರ್ವದಿಂದ ಕೇಳಿದ – ’ಶೀತಂ ಬಾಧತಿ ಕಿಮ್?’ ತಕ್ಷಣ ಪಲ್ಲಕ್ಕಿಯನ್ನು ಹೊತ್ತಿದ್ದ ಕಾಳಿದಾಸ ಉತ್ತರಿಸಿದ – ’ನ ತಥಾ ಬಾಧತೇ ಶೀತಂ ಯಥಾ ಬಾಧತಿ ಬಾಧತೇ’

ಧಾತುಗಳಲ್ಲಿ ಆತ್ಮನೇಪದಿ, ಪರಸ್ಮೈಪದಿ, ಉಭಯಪದಿ ಎಂದು ಮೂರು ವಿಧಗಳಿವೆ. ’ಬಾಧ್’ ಧಾತು ಆತ್ಮನೇಪದಿಯಾದ್ದರಿಂದ ಬಾಧತಿ ಎಂಬುದು ತಪ್ಪು ರೂಪ. ಬಾಧತೇ ಎಂಬುದು ಸರಿಯಾದ ರೂಪ. ಪಂಡಿತನ ಪ್ರಶ್ನೆ ವ್ಯಾಕರಣರೀತ್ಯಾ ಅಶುದ್ಧವಾಗಿತ್ತು. ಕಾಳಿದಾಸ ಮಾರ್ಮಿಕವಾಗಿ ’ನಿಮ್ಮ ಬಾಧತಿ ಪದ ಬಾಧಿಸುವಷ್ಟು ಛಳಿ ಬಾಧಿಸುತ್ತಿಲ್ಲ’ ಎಂದು ಪಂಡಿತನಿಗೆ ಛಡಿಯೇಟು ನೀಡಿದ್ದ.

ಪಂಡಿತನ ಗರ್ವ ಜರ್ರನೆ ಇಳಿಯಿತು. ಅವನು ಪಲ್ಲಕ್ಕಿಯಿಂದ ಇಳಿದ. ಕಾಳಿದಾಸನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ. ಎಲ್ಲರೂ ನಡೆದು ಅರಮನೆ ಸೇರಿದರು.

ಕಾಂಚಿ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸ್ಕೃತದ ಮಹತ್ತ್ವವನ್ನು ವರ್ಣಿಸುತ್ತ ವಿದೇಶಾಂಗ ವ್ಯವಹಾರ ಮಂತ್ರಿ ಶ್ರೀಮತೀ ಸುಷ್ಮಾ ಸ್ವರಾಜ್ ಈ ಘಟನೆಯನ್ನು ಬೇರೆ ರೀತಿಯಲ್ಲಿ ನಿರೂಪಿಸಿದ್ದಾರೆ. ಬೇಟೆಗೆಂದು ಕಾಡಿಗೆ ಹೋಗಿದ್ದ ರಾಜ ಅಲ್ಲಿ ಕಟ್ಟಿಗೆಯ ಹೊರೆಯನ್ನು ಹೊತ್ತು ಕಷ್ಟದಿಂದ ಸಾಗುತ್ತಿದ್ದ ವೃದ್ಧನೊಬ್ಬನನ್ನು ನೋಡಿ ‘ಭಾರಃ ಬಾಧತಿ ಕಿಮ್?’ ಎಂದು ಪ್ರಶ್ನಿಸುತ್ತಾನೆ. ಆಗ ಆ ವೃದ್ಧ ಪ್ರಜೆ ‘ಭಾರೋ ನ ಬಾಧತೇ ರಾಜನ್! ತವ ಬಾಧತಿ ಬಾಧತೇ’ ಎಂದು ಹೇಳುತ್ತಾನೆ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Wednesday, August 16, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೪ *ಬೃಹತ್ಕಥೆಯ ಕಥೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೪

*ಬೃಹತ್ಕಥೆಯ ಕಥೆ*

ದಕ್ಷಿಣಾಪಥದ ಸಾತವಾಹನ ರಾಜನೊಮ್ಮೆ ತನ್ನ ರಾಣಿಯರೊಡನೆ ಜಲಕ್ರೀಡೆಗೆ ಹೊರಟ. ಒಬ್ಬರಿಗೊಬ್ಬರು ನೀರನ್ನೆರಚಿಕೊಳ್ಳುತ್ತಿರುವಾಗ ಪಟ್ಟದ ರಾಣಿಯು ’ಮೋದಕೈಸ್ತಾಡಯ, ಮೋದಕೈಸ್ತಾಡಯ’ ಎಂದಳು. ರಾಣಿ ಹೇಳಿದ ಮೇಲೆ ತಡವೆ? ರಾಜ ಅರಮನೆಯಿಂದ ಮೋದಕಗಳನ್ನು ತರಿಸಿ ರಾಣಿಯ ಮೇಲೆ ಎಸೆಯತೊಡಗಿದ. ರಾಜನ ಅಜ್ಞಾನವನ್ನು ನೋಡಿ ರಾಣಿಯರೆಲ್ಲ ನಗಹತ್ತಿದರು. ರಾಜನಿಗೆ ಆಶ್ಚರ್ಯವಾಯಿತು. ಆಗ ಹಿರಿಯರಾಣಿ ವಿವರಿಸಿದಳು ’ಮೋದಕೈಸ್ತಾಡಯ ಎಂಬುದನ್ನು ಮಾ+ಉದಕೈಃ+ತಾಡಯ ಎಂದು ವಿಗ್ರಹಿಸಿದಾಗ ನೀರಿನಿಂದ ಹೊಡೆಯಬೇಡ ಎಂದರ್ಥವಾಗುತ್ತದೆ’ ಎಂದಳು. ರಾಜನು ರಾಣಿಯರ ಮುಂದೆ ಆದ ಅವಮಾನದಿಂದ ಕುಗ್ಗಿ ಹೋದ. ಅವನ ಆಸ್ಥಾನದಲ್ಲಿ ಗುಣಾಢ್ಯ ಎಂಬ ಸಂಸ್ಕೃತ ಪಂಡಿತನಿದ್ದ. ತನಗೆ ಸಂಸ್ಕೃತ ಕಲಿಸುವಂತೆ ರಾಜ ಅವನನ್ನು ವಿನಂತಿಸಿಕೊಂಡ. ಅವನಾದರೋ ರಾಜನನ್ನು ಸಂಸ್ಕೃತಜ್ಞನನ್ನಾಗಿ ಮಾಡಲು ಆರು ವರ್ಷಗಳು ಬೇಕೆಂದ. ಅಲ್ಲಿಯೇ ಇದ್ದ ಕಾತಂತ್ರ ಎಂಬ ವ್ಯಾಕರಣವನ್ನು ಬರೆದ ಶರ್ವವರ್ಮಾ ಎಂಬ ವಿದ್ವಾಂಸ ತಾನು ೬ ತಿಂಗಳಲ್ಲಿ ಕಲಿಸಬಲ್ಲೆ ಎಂದ. ಗುಣಾಢ್ಯನು ಅದು ಸಾಧ್ಯವೇ ಇಲ್ಲ ಎಂದು ವಾದಿಸಿ ಪ್ರತಿಜ್ಞೆ ಗೈದ. ’ಶರ್ವವರ್ಮಾ ಆರು ತಿಂಗಳಲ್ಲಿ ರಾಜನನ್ನು ಸಂಸ್ಕೃತಪಂಡಿತನನ್ನಾಗಿ ಮಾಡಿದರೆ ನಾನು ಸಂಸ್ಕೃತ, ಪ್ರಾಕೃತ ಮುಂತಾದ ಪ್ರಸಿದ್ಧ ಭಾಷೆಗಳಲ್ಲಿ ಬರೆಯುವುದನ್ನೇ ನಿಲ್ಲಿಸುತ್ತೇನೆ’.

ಸ್ಪರ್ಧೆ ಆರಂಭವಾಯಿತು. ರಾಣಿಯರ ಮುಂದೆ ಆದ ಅವಮಾನವು ರಾಜನಲ್ಲಿ ಕಲಿಯುವ ತುಡಿತವನ್ನು ತೀವ್ರಗೊಳಿಸಿತ್ತು. ಶರ್ವವರ್ಮನ ಚಾಕಚಕ್ಯತೆಯೂ ಅದಕ್ಕೆ ಸೇರಿ ಆರೇ ತಿಂಗಳಲ್ಲಿ ರಾಜ ಸಂಸ್ಕೃತಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಿದ. ಗುಣಾಢ್ಯ ಸ್ಪರ್ಧೆಯಲ್ಲಿ ಸೋತು ವಿಂಧ್ಯಾಟವಿಯನ್ನು ಸೇರಿ ಅಲ್ಲಿಯೇ ಪೈಶಾಚ ಭಾಷೆಯಲ್ಲಿ ಏಳು ಲಕ್ಷ ಶ್ಲೋಕಗಳ ’ಬೃಹತ್ಕಥಾ’  ಎಂಬ ಗ್ರಂಥವನ್ನು ಬರೆದು ಶಿಷ್ಯರ ಮೂಲಕ ರಾಜನಿಗೆ ಕಳಿಸಿಕೊಟ್ಟ. ರಾಜ ಅದನ್ನು ಆದರಿಸಲಿಲ್ಲ. ಅದರಿಂದ ಖಿನ್ನನಾದ ಗುಣಾಢ್ಯ ಅರಣ್ಯವಾಸಿಗಳಿಗೆ ತನ್ನ ಕಾವ್ಯವನ್ನು ಕೇಳಿಸಿ ಅಗ್ನಿಯಲ್ಲಿ ಹಾಕಲು ಆರಂಭಿಸಿದ. ಯಾರದೋ ಮೂಲಕ ಆ ಗ್ರಂಥದ ಮಹತ್ತ್ವವನ್ನು ಅರಿತ ಭೂಪತಿಯು ಅಲ್ಲಿಗೆ ತಲುಪುವಷ್ಟರಲ್ಲಿ ಕೇವಲ ಏಳನೆಯ ಒಂದಂಶ ಅಂದರೆ ಒಂದು ಲಕ್ಷ ಶ್ಲೋಕಗಳ ಭಾಗ ಮಾತ್ರ ಉಳಿದುಕೊಂಡಿತ್ತು.

ನಂತರ ಕ್ಷೇಮೇಂದ್ರನೆಂಬ ಕವಿ ’ಬೃಹತ್ಕಥಾಮಂಜರೀ’ ಎಂಬ ಹೆಸರಿನಲ್ಲಿ ಈ ಗ್ರಂಥವನ್ನು ಸಂಸ್ಕೃತದಲ್ಲಿ ಅನುವಾದಿಸಿದ. ಸೋಮದೇವ ಬರೆದ ಕಥಾಸರಿತ್ಸಾಗರದಲ್ಲಿ ಈ ಕಥೆ ವರ್ಣಿಸಲ್ಪಟ್ಟಿದೆ.

(ಮಾಹಿತಿ ಕೃಪೆ: ವಿಕಿಪೀಡಿಯಾ)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

Sunday, August 13, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೩ *ಭೋಜನಂ ದೇಹಿ ರಾಜೇಂದ್ರ!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೩

*ಭೋಜನಂ ದೇಹಿ ರಾಜೇಂದ್ರ!*

ಕವಿಗಳೆಂದರೆ ತನ್ನ ಪ್ರಾಣವೆಂದು ತಿಳಿದಿದ್ದ ಭೋಜರಾಜ ಒಮ್ಮೆ ’ಅಕ್ಷರಲಕ್ಷ’ ಎಂಬ ಯೋಜನೆಯನ್ನು ಜಾರಿಗೆ ತಂದ. ಯಾರಾದರೂ ಸುಂದರ ಕವನವನ್ನು ರಚಿಸಿ ತಂದರೆ ಒಂದು ಅಕ್ಷರಕ್ಕೆ ಒಂದು ಲಕ್ಷ ಹೊನ್ನನ್ನು ನೀಡುವ ಯೋಜನೆ ಅದು. ಅದನ್ನು ತಿಳಿದ ಒಬ್ಬ ಪ್ರತಿಭಾವಿಹೀನ ಕವಿ ಹೇಗಾದರೂ ರಾಜನ ಕೃಪಾದೃಷ್ಟಿಗೆ ಪಾತ್ರನಾಗಬೇಕೆಂದು ಕಷ್ಟಪಟ್ಟು ಶ್ಲೋಕದ ಎರಡು ಚರಣಗಳನ್ನು ರಚಿಸಿದ. ’ಭೋಜನಂ ದೇಹಿ ರಾಜೇಂದ್ರ! ಘೃತಸೂಪಸಮನ್ವಿತಮ್’ – ಮಹಾರಾಜ! ತುಪ್ಪ ಹಾಗೂ ಸಾರುಗಳಿಂದ ಕೂಡಿದ ಊಟವನ್ನು ನೀಡು’. ಮುಂದೇನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕಾಳಿದಾಸನ ಮನೆಗೆ ಓಡಿದ. ಕಾಳಿದಾಸ ತಕ್ಷಣ ಅವನಿಗೆ ಶ್ಲೋಕದ ದ್ವಿತೀಯಾರ್ಧವನ್ನು ರಚಿಸಿಕೊಟ್ಟ.

ಮರುದಿನ ರಾಜ ಸಭೆಯನ್ನು ಪ್ರವೇಶಿಸಿದ ಆ ಪಂಡಿತ ಶ್ಲೋಕವನ್ನು ಪಠಿಸಿದ.

ಭೋಜನಂ ದೇಹಿ ರಾಜೇಂದ್ರ!
ಘೃತಸೂಪಸಮನ್ವಿತಮ್ |
ಮಾಹಿಷಂ ಚ ಶರಚ್ಚಂದ್ರ-
ಚಂದ್ರಿಕಾಧವಲಂ ದಧಿ ||

(ಮಹಾರಾಜ! ತುಪ್ಪ, ಸಾರು ಹಾಗೂ ಶರತ್ಕಾಲದ ಬೆಳದಿಂಗಳಂತೆ ಬಿಳಿಯಾಗಿರುವ ಎಮ್ಮೆಯ ಮೊಸರು ಇವುಗಳಿಂದ ಕೂಡಿದ ಊಟವನ್ನು ನೀಡು.)

ರಾಜನು ಇದನ್ನು ಕೇಳಿ ಸಂತುಷ್ಟನಾಗಿ ಆ ಕವಿಗೆ ೧೬ ಲಕ್ಷ ಹೊನ್ನು ಕೊಡುವಂತೆ ಕೋಶಾಧಿಕಾರಿಯನ್ನು ಆಜ್ಞಾಪಿಸಿದ. ಕವಿಗೆ ಆಶ್ಚರ್ಯವಾಯಿತು. ಪದ್ಯ ಅನುಷ್ಟುಪ್ ಛಂದಸ್ಸಿನಲ್ಲಿದೆ. ೩೨ ಅಕ್ಷರಗಳಿವೆ, ಹಾಗಾಗಿ ೩೨ ಲಕ್ಷ ಬರಬೇಡವೇ ಎಂದ. ಅದಕ್ಕೆ ರಾಜ ’ಮೊದಲಾರ್ಧ ಮಾತ್ರ ನಿನ್ನದು ತಾನೆ? ಮೊಸರನ್ನು ಕೊಡೆಂದು ಕೇಳಿದವನು ಕಾಳಿದಾಸನಲ್ಲವೆ?’ ಎಂದು ನಕ್ಕ. ಸ್ವತ: ಕವಿಯಾದ ಭೋಜನಿಗೆ ಮೊದಲ ಹಾಗೂ ಎರಡನೆಯ ಸಾಲುಗಳ ಮಧ್ಯೆ ಇರುವ ಅಗಾಧ ವ್ಯತ್ಯಾಸ ತಿಳಿಯದಿದ್ದೀತೆ?
📝 *ಮಹಾಬಲ ಭಟ್, ಗೋವಾ*
#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Saturday, August 12, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೨ *ಗಂಗಾ ಮಮಾಂಗಾನ್ಯಮಲೀಕರೋತು.........

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೨

*ಗಂಗಾ ಮಮಾಂಗಾನ್ಯಮಲೀಕರೋತು..........*

ಜಗನ್ನಾಥನ ರಾಜನಿಷ್ಠೆ ಸಂಪೂರ್ಣ ನಲುಗಿ ಹೋಗಿತ್ತು. ಧರ್ಮಾಂಧನಾದ ಔರಂಗಜೇಬ ತನ್ನ ಸೋದರರನ್ನು ಕೊಂದು ಷಹಜಹಾನನನ್ನು ಸೆರೆಯಲ್ಲಿಟ್ಟು ರಾಜ್ಯವನ್ನು ವಶಪಡಿಸಿಕೊಂಡಾಗ ಅನಿವಾರ್ಯವಾಗಿ ದಿಲ್ಲಿಯನ್ನು ಬಿಡಬೇಕಾಯಿತು. ಯವನಿಯನ್ನು ಮದುವೆಯಾದ ಅವನನ್ನು ಸಮಾಜ ಸ್ವೀಕರಿಸಲಿಲ್ಲ. ಕೊನೆಯ ಕಾಲದಲ್ಲಿ ಕಾಶಿಯಲ್ಲಿ ಆಶ್ರಯಪಡೆಯಬೇಕಾಯಿತು. ಒಂದಿನ ಅವನ ಪ್ರೀತಿಯ ಲವಂಗಿಯೂ ಗಂಗೆಗೆ ತನ್ನನ್ನು ಸಮರ್ಪಿಸಿಕೊಂಡು ಬಿಟ್ಟಳು. ಜೀವನದ ಏಕೈಕ ಆಲಂಬನವಾದ ಅವಳೂ ತೊರೆದ ಮೇಲೆ ಜಗನ್ನಾಥನ ಮನಸ್ಸು ಜರ್ಜರಿತವಾಯಿತು.

ಹಿಂದಿನ ದಿನ ವಾರಾಣಸಿಯಲ್ಲಿ ವರುಣನ ಆರ್ಭಟ ನಡೆದಿತ್ತು. ಹೊಟ್ಟೆಪಾಡಿಗಾಗಿ ಅನ್ಯರ ಸೇವೆ ಮಾಡಿದ ಪಶ್ಚಾತ್ತಾಪ ಭಾವನೆ ಜಗನ್ನಾಥ ಪಂಡಿತನ ಮನಸ್ಸನ್ನಪ್ಪಳಿಸುತ್ತಿದ್ದಂತೆ ಗುಡುಗುಮಿಂಚುಗಳು ಭೂಮಿಯನ್ನಪ್ಪಳಿಸುತ್ತಿದ್ದವು. ಅವನ ಹೃದಯದಲ್ಲೆದ್ದ ವೈರಾಗ್ಯ ತರಂಗಗಳಂತೆ ಗಂಗಾನದಿಯಲ್ಲಿ ಅಬ್ಬರದ ಅಲೆಗಳೆದ್ದಿದ್ದವು. ಬೆಳಗು ಹರಿಯುವ ಮೊದಲೇ ಜಗನ್ನಾಥ ಸ್ನಾನಘಟ್ಟವನ್ನು ತಲುಪಿ ಅಂದು ಲವಂಗಿ ಕುಳಿತಿದ್ದ ಮೆಟ್ಟಿಲಿನ ಮೇಲೆಯೇ ವ್ಯಗ್ರನಾಗಿ ಕುಳಿತುಕೊಂಡ. ಪರಮಪಾವನಿಯಾದ ಗಂಗಾಮಾತೆ ಅವನ ಹೃದಯವನ್ನು ತಟ್ಟಲು ಆರಂಭಿಸಿದ್ದಳು. ಆ ಪವಿತ್ರ ಮಾತೆಯ ಸ್ತುತಿಯು ’ಗಂಗಾಲಹರಿ’ಯಾಗಿ ಹರಿಯಿತು. ಒಂದೊಂದೇ ಪದ್ಯವನ್ನು ಎತ್ತರದ ದನಿಯಲ್ಲಿ ಹಾಡುತ್ತಿರುವಂತೆ ಗಂಗೆ ಒಂದೊಂದೇ ಮೆಟ್ಟಿಲನ್ನು ಏರುತ್ತ ಬಂದಳು. ಭಾಗೀರಥಿಯ ನೀರು ದೇಹವನ್ನು ಸ್ಪರ್ಶಿಸುತ್ತಿದ್ದಂತೆ ಮೈಯಲ್ಲಿ ಪುಳಕವುಂಟಾಯಿತು. ತಾರಸ್ವರದಲ್ಲಿ 52 ನೆಯ ಪದ್ಯ ಮೊಳಗಿತು.

ವಿಭೂಷಿತಾನಂಗರಿಪೂತ್ತಮಾಂಗಾ
ಸದ್ಯಃಕೃತಾನೇಕಜನಾರ್ತಿಭಂಗಾ |
ಮನೋಹರೋತ್ತುಂಗಜಲತ್ತರಂಗಾ
ಗಂಗಾ ಮಮಾಂಗಾನ್ಯಮಲೀಕರೋತು ||

ಕಾಮಾರಿಯ ತಲೆಯನ್ನು ಅಲಂಕರಿಸಿರುವ, ಅನೇಕ ಜನರ ದೈನ್ಯತೆಯನ್ನು ಮುರಿದ, ಮನೋಹರವಾದ ದೊಡ್ಡ ದೊಡ್ಡ ಅಲೆಗಳನ್ನು ಹೊಂದಿರುವ ಗಂಗೆಯು ನನ್ನ ಅಂಗಗಳನ್ನು ಶುದ್ಧಿಗೊಳಿಸಲಿ.

ಜಗನ್ನಾಥ ಈ ಪದ್ಯವನ್ನು ಹೇಳಿಮುಗಿಸುತ್ತಿದ್ದಂತೆ ರಭಸವಾಗಿ ಬಂದ ತೆರೆಯೊಂದು ಅವನನ್ನು ಕೊಚ್ಚಿಕೊಂಡು ಹೋಗೇ ಬಿಟ್ಟಿತು. ಅತ್ತ ಬಾನಿನಲ್ಲಿ ಸೂರ್ಯೋದಯವಾಗುತ್ತಿದ್ದಂತೆ ಇತ್ತ ಭುವಿಯಲ್ಲಿ ಪಂಡಿತಮಾರ್ತಂಡ ಗಂಗೆಯಲ್ಲಿ ಅಸ್ತಂಗತನಾಗಿದ್ದ. ಅವನ ರಸಗಂಗಾಧರ ಎಂಬ ಲಕ್ಷಣಗ್ರಂಥ, ಭಾಮಿನಿ ವಿಲಾಸ ಮತ್ತು ಗಂಗಾಲಹರಿಯೇ ಮೊದಲಾದ ಐದು ಲಹರಿ ಕಾವ್ಯಗಳು ಮಾತ್ರವಲ್ಲದೆ ಅನೇಕ ವ್ಯಾಕರಣ ಶಾಸ್ತ್ರ ಗ್ರಂಥಗಳು ಅವನ ಪಾಂಡಿತ್ಯದ ಪ್ರತಿನಿಧಿಗಳಾಗಿ ಉಳಿದುಕೊಂಡಿವೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Friday, August 11, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೧ *ಸಹಸ್ರಶೀರ್ಷಾ ಪುರುಷ:*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೧

*ಸಹಸ್ರಶೀರ್ಷಾ ಪುರುಷ:*

ಇದು ಮತ್ತೊಬ್ಬ ಪಂಡಿತಪುತ್ರನ ಕಥೆ. ಧನಾಶೆಯಿಂದ ಭೋಜರಾಜನ ಆಸ್ಥಾನವನ್ನು ಪ್ರವೇಶಿದ ಅವನಿಗೆ ಏನು ಹೇಳಬೇಕೆಂದೇ ತೋರಲಿಲ್ಲ. ತಕ್ಷಣ ನೆನಪಿಗೆ ಬಂದ ಪುರುಷಸೂಕ್ತದ ಮೊದಲ ಸಾಲನ್ನು ಗಟ್ಟಿಯಾಗಿ ಹೇಳಿದ – ’ಸಹಸ್ರಶೀರ್ಷಾ ಪುರುಷ: ಸಹಸ್ರಾಕ್ಷ: ಸಹಸ್ರಪಾತ್’. ಮುಂದೇನು ಹೇಳುತ್ತಾನೆಂದು ಸಭಿಕರೆಲ್ಲ ಕಾಯುತ್ತ ಕುಳಿತರು. ಆದರೆ ಬ್ರಾಹ್ಮಣನ ಮುಖದಿಂದ ಮಾತೇ ಹೊರಡಲಿಲ್ಲ. ತಕ್ಷಣ ಕಾಳಿದಾಸ ಅವನ ಸಹಾಯಕ್ಕೆ ಧಾವಿಸಿದ. ’ಮಹಾರಾಜ! ಮೊದಲ ಬಾರಿಗೆ ಈ ಭವ್ಯ ಸಭೆಯನ್ನು ಪ್ರವೇಶಿಸಿದ ಇವನಿಗೆ ಗಾಬರಿಯಾಗಿ ಮಾತು ಹೊರಡುತ್ತಿಲ್ಲ. ಈ ಪದ್ಯದ ದ್ವಿತೀಯಾರ್ಧವನ್ನು ಅವನು ಮೊದಲೇ ನನಗೆ ಹೇಳಿದ್ದಾನೆ. ಪೂರ್ಣ ಶ್ಲೋಕ ಹೀಗಿದೆ-

ಸಹಸ್ರಶೀರ್ಷಾ ಪುರುಷ:
ಸಹಸ್ರಾಕ್ಷ: ಸಹಸ್ರಪಾತ್ |
ಚಲಿತಶ್ಚಕಿತಶ್ಛನ್ನ:
ತವ ಸೈನ್ಯೇ ಪ್ರಧಾವತಿ ||

(ನಿನ್ನ ಸೈನ್ಯ ಧಾವಿಸಿದಾಗ ಸ್ಥಿರತೆಗೆ ಹೆಸರಾದ ಸಹಸ್ರಶೀರ್ಷಾ ಪುರುಷ: ಎಂದರೆ ಸಾವಿರ ಹೆಡೆಗಳುಳ್ಳ ಶೇಷನೂ ಚಲಿತಃ ಅಂದರೆ ಕದಲಿದ. ಸಹಸ್ರಾಕ್ಷ ಎಂದರೆ ದೇವೇಂದ್ರ ಚಕಿತನಾದ. ಎದ್ದ ಧೂಳಿನಿಂದಾಗಿ ಸಹಸ್ರಪಾಣಿಯಾದ ಸೂರ್ಯನು ಛನ್ನಃ ಅಂದರೆ ಮುಚ್ಚಿಹೋಗಿದ್ದಾನೆ.)

ಭೋಜರಾಜ ಕಾಳಿದಾಸನೆಡೆಗೆ ಮೆಚ್ಚುಗೆಯ ಕಟಾಕ್ಷಬೀರಿ ಆ ಬ್ರಾಹ್ಮಣನ ಬಡತನ ನೀಗಿಸಿದ.

📝 *ಮಹಾಬಲ ಭಟ್, ಗೋವಾ*

#  ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೦ *ಯಾಂ ಚಿಂತಯಾಮಿ ಸತತಂ...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೦

*ಯಾಂ ಚಿಂತಯಾಮಿ ಸತತಂ...*

ಶತಕತ್ರಯಗಳಿಂದಾಗಿ ಕವಿ ಭರ್ತೃಹರಿಯ ಹೆಸರು ಸಂಸ್ಕೃತಲೋಕದಲ್ಲಿ ಅಜರಾಮರವಾಗಿದೆ. ವ್ಯಾಕರಣಶಾಸ್ತ್ರಜ್ಞನಾಗಿಯೂ ಅವನು ಪ್ರಸಿದ್ಧನಾಗಿದ್ದಾನೆ. ರಾಜನಾಗಿದ್ದ ಅವನು ಸಂನ್ಯಾಸಿಯಾದ ಕಥೆ ಬಹಳ ರೋಚಕವಾಗಿದೆ.

ಒಂದಿನ ಭರ್ತೃಹರಿಯ ಆಸ್ಥಾನಕ್ಕೆ ಬಂದ ಯೋಗಿಯೊಬ್ಬ ವಿಶೇಷ ಶಕ್ತಿಯನ್ನು ಹೊಂದಿದ್ದ ಹಣ್ಣೊಂದನ್ನು ರಾಜನಿಗೆ ನೀಡಿದ. ತನ್ನ ಮಡದಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಜ ಅದನ್ನು ಅವಳಿಗೆ ಕೊಟ್ಟ. ರಾಣಿಗೆ ಒಬ್ಬ ಪ್ರಿಯಕರನಿದ್ದ. ಅವಳು ಹಣ್ಣನ್ನು ಅವನಿಗೆ ವರ್ಗಾಯಿಸಿದಳು. ಆ ಪ್ರಿಯಕರನಿಗಾದರೋ ರಾಣಿಗಿಂತ ಹೆಚ್ಚು ಹತ್ತಿರವಾದ ಪ್ರಿಯತಮೆಯೊಬ್ಬಳಿದ್ದಳು. ಹಣ್ಣು ಅವಳ ಕೈ ಸೇರಿತು. ಆ ತರುಣಿಗೆ ರಾಜನಲ್ಲಿ ಪ್ರೇಮವಿತ್ತು. ಅವಳು ತಂದು ಹಣ್ಣನ್ನು ರಾಜನಿಗೊಪ್ಪಿಸಿದಳು. ಹೀಗೆ ಒಂದು ಸುತ್ತು ಹೊಡೆದು ಬಂದ ಹಣ್ಣನ್ನು ನೋಡಿ ರಾಜನಿಗೆ ಸಂಬಂಧಗಳ ನಶ್ವರತೆಯ ಅರಿವಾಯಿತು. ಬೇಸರಗೊಂದು ಹೀಗೆಂದು ಕವನಿಸಿದ.

ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ |
ಅಸ್ಮತ್ಕೃತೇ ಪರಿಶುಷ್ಯತಿ ಕಾಚಿದನ್ಯಾ
ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ ||

ನಾನು ಸದಾ ಯಾರನ್ನು ನೆನೆಯುತ್ತಿರುತ್ತೇನೆಯೋ ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಅವಳು ಇನ್ನೊಬ್ಬನನ್ನು ಪ್ರೀತಿಸುತ್ತಾಳೆ, ಅವನು ಮತ್ತೊಬ್ಬಳಲ್ಲಿ ಆಸಕ್ತನಾಗಿದ್ದಾನೆ. ಅವಳು ನನಗಾಗಿ ಹಂಬಲಿಸುತ್ತಾಳೆ. ಅವಳಿಗೂ, ಅವನಿಗೂ, ಮನ್ಮಥನಿಗೂ, ಇವಳಿಗೂ ನನಗೂ ಧಿಕ್ಕಾರವಿರಲಿ.

ಈ ಘಟನೆ ಅವನು ಸಂನ್ಯಾಸ ಸ್ವೀಕರಿಸುವುದಕ್ಕೂ ವೈರಾಗ್ಯ ಶತಕವೆಂಬ ಕೃತಿಯನ್ನು ರಚಿಸುವುದಕ್ಕೂ ಕಾರಣವಾಯಿತು.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಈ ಸರಣಿಯ ಎಲ್ಲ ಲೇಖನಗಳೂ www.sujnanam.blogspot.com ನಲ್ಲೂ ಲಭ್ಯ.

Wednesday, August 9, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೯ *ರಾಭಣೋ ನ ತು ರಾವಣ:*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೯

*ರಾಭಣೋ ನ ತು ರಾವಣ:*

ಬಹುಮಾನದ ಆಶೆಯಿಂದ ಭೋಜರಾಜನ ಆಸ್ಥಾನಕ್ಕೆ ಬರುವ ಅರ್ಧಪಂಡಿತರಿಗೇನೂ ಕಡಿಮೆಯಿರಲಿಲ್ಲ. ಹಾಗೇ ಒಂದಿನ ಚೂರು ಪಾರು ಓದಿಕೊಂಡ ಬ್ರಾಹ್ಮಣನೊಬ್ಬ ಸಭೆಗೆ ಬಂದ. ಬಂದವನೇ ರಾಮಾಯಣದ ಶ್ಲೋಕವೊಂದನ್ನು ಉಚ್ಚರಿಸಿದ. ಆದರೆ ರಾವಣ ಎಂಬ ಶಬ್ದವನ್ನು ’ರಾಭಣ’ ಎಂದು ಉಚ್ಚರಿಸಿದ. ಅಪಶಬ್ದವನ್ನು ಕೇಳಿ ಭೋಜರಾಜ ಅವನತ್ತ ಗಂಭೀರವದನನಾಗಿ ನೋಡುತ್ತ ’ಯಾಕೆ ಹೀಗೆ?’ ಎಂದು ಪ್ರಶ್ನಿಸಿದ. ಆ ಬ್ರಾಹ್ಮಣ ತನ್ನ ಉಚ್ಚಾರಣೆಯನ್ನು ಸಮರ್ಥಿಸಿಕೊಳ್ಳಲಾಗದೆ ತಡವರಿಸಿದ. ಅವನ ಸ್ಥಿತಿ ನೋಡಿ ಕಾಳಿದಾಸ ಕನಿಕರದಿಂದ ಅವನ ಸಹಾಯಕ್ಕೆ ಧಾವಿಸಿದ.

ಕುಂಭಕರ್ಣೇ ಭಕಾರೋಽಸ್ತಿ
ಭಕಾರೋಸ್ತಿ ವಿಭೀಷಣೇ |
ತಯೋರ್ಜ್ಯೇಷ್ಠೇ ಕುಲಶ್ರೇಷ್ಠೇ
ಭಕಾರ: ಕಿಂ ನ ವಿದ್ಯತೇ? ||

’ಕುಂಭಕರ್ಣ ಎಂಬ ಹೆಸರಿನಲ್ಲಿ ಭಕಾರವಿದೆ. ’ವಿಭೀಷಣ’ ನಲ್ಲೂ ಭಕಾರವಿದೆ. ಅವರಿಗಿಂತ ಹಿರಿಯನಾದ ಅವರ ಕುಲದಲ್ಲೇ ಶ್ರೇಷ್ಠನಾದ ರಾವಣನ ಹೆಸರಿನಲ್ಲೇಕೆ ಭಕಾರವಿಲ್ಲ? ಇದು ಸರಿಯಲ್ಲ ಹಾಗಾಗಿ ’ರಾಭಣೋ ನ ತು ರಾವಣ:’ ರಾಭಣ ಎನ್ನುವುದೇ ಸರಿ ರಾವಣ ಅಲ್ಲ.

ಕಾಳಿದಾಸನ ಸಮಯಸ್ಫೂರ್ತಿಗೆ ತಲೆದೂಗಿದ ಭೋಜರಾಜ ಆ ಬ್ರಾಹ್ಮಣನಿಗೆ ಯಥೇಷ್ಟ ಧನಕನಕಾದಿಗಳನ್ನು ಕೊಟ್ಟು ಕಳುಹಿದ.

ತಪ್ಪನ್ನು ಸಮರ್ಥಿಸಿಕೊಳ್ಳಲೂ ಪ್ರತಿಭೆ ಬೇಕು ಅಲ್ಲವೆ?

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 8, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೮ *ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೮

*ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಾಹಿತ್ಯಪ್ರಪಂಚದಲ್ಲಿ ’ಪಂಡಿತರಾಜ’ ಎಂಬ ಖ್ಯಾತಿಗೆ ಪಾತ್ರನಾದ ಘನ ವಿದ್ವಾಂಸ ಜಗನ್ನಾಥ ಪಂಡಿತ. ಮೊಘಲ್ ದೊರೆ ಷಾಹಜಾನನ ಆಸ್ಥಾನಪಂಡಿತನಾಗಿ ತನ್ನ ಹರಿತ ಪಾಂಡಿತ್ಯದಿಂದ ವಿರೋಧಿಗಳಿಗೆ ಸಿಂಹಸ್ವಪ್ನನಾಗಿದ್ದ. ಮೊಘಲರ ದರಬಾರಿನಲ್ಲೇ ಇಸ್ಲಾಂ ಮತವನ್ನು ಖಂಡಿಸಬಲ್ಲ ಜಗಜಟ್ಟಿಯಾಗಿದ್ದ. ಷಾಹಜಹಾನ್ ಹಾಗೂ ಅವನ ಪುತ್ರ ದಾರಾಷುಕೋ ಅವನನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು. ಪರಿಸರದ ಪ್ರಭಾವದಿಂದ ’ಲವಂಗಿ’ ಎಂಬ ಮುಸ್ಲಿಂ ತರುಣಿಯಲ್ಲಿ ಅನುರಕ್ತನಾಗಿ ಮದುವೆಯಾದ. ಪಂಡಿತರಾಜ ಜಗನ್ನಾಥನನ್ನು ಜನರು ಲವಂಗೀಜಗನ್ನಾಥ ಎಂದು ಕರೆಯುವಷ್ಟು ಅವಳಲ್ಲಿ ಅನುರಕ್ತನಾಗಿದ್ದ. ಅವಳೇ ಅವನ ಕಾವ್ಯಕನ್ನಿಕೆಯಾದಳು.

ಯವನೀ ನವನೀತಕೋಮಲಾಂಗೀ
ಶಯನೀಯೇ ಯದಿ ಲಭ್ಯತೇ ಕದಾಚಿತ್ |
ಅವನೀತಲಮೇವ ಸಾಧು ಮನ್ಯೇ
ನಾವನೀ ಮಾಘವನೀ ವಿನೋದಹೇತುಃ ||

ಬೆಣ್ಣೆಯಂತಹ ಕೋಮಲ ದೇಹವುಳ್ಳ ಯವನತರುಣಿ ಹಾಸಿಗೆಯಲ್ಲಿ ಸಿಗುವುದಾದರೆ ಸ್ವರ್ಗಕ್ಕಿಂತ ಭೂಮಿಯೇ ಮೇಲು ಎಂದು ಕವನಿಸಿದ ಮಹಾತ್ಮ ಅವನು!

ಷಹಜಹಾನನ ಆಶ್ರಯ ಅವನಿಗೆ ಅಪಾರ ಸಂಪತ್ತನ್ನು ಒದಗಿಸಿತ್ತು. ಜಗನ್ನಾಥ ಆಶ್ರಯಕ್ಕಾಗಿ ಅಲೆದಾಡುತ್ತಿದ್ದಾಗ ತಿರಸ್ಕರಿಸಿದ ಹಿಂದೂ ರಾಜರು ಅವನು ಕೀರ್ತಿಯನ್ನು ಗಳಿಸಿದ ಮೇಲೆ ತಮ್ಮ ಆಸ್ಥಾನಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದರು. ಅಂಥವರಲ್ಲಿ ನೇಪಾಳ ಮಹಾರಾಜ ವೀರವಿಕ್ರಮನೂ ಒಬ್ಬ. ತನ್ನ ಆಸ್ಥಾನಪಂಡಿತನನ್ನೇ ಜಗನ್ನಾಥನನ್ನು ಸೆಳೆಯಲು ಪತ್ರದೊಂದಿಗೆ ಕಳಿಸಿದ್ದ. ಯವನರ ಮುಂದೆ ಕೈಚಾಚುವುದನ್ನು ಬಿಟ್ಟು ಹಿಂದೂ ರಾಜನ ಆಸ್ಥಾನವನ್ನು ಅಲಂಕರಿಸಿ ಸ್ವಾಭಿಮಾನಿಯಾಗು ಮುಂತಾಗಿ ದೀರ್ಘವಾದ ಪತ್ರವನ್ನೇ ಬರೆದಿದ್ದ. ಅದನ್ನು ಓದಿದ ಜಗನ್ನಾಥ ಒಂದೇ ಕವನದ ಮೂಲಕ ತನ್ನ ಮನದಿಂಗಿತವನ್ನು ಅರುಹಿದ.

ದಿಲ್ಲೀಶ್ವರೋ ವಾ ಜಗದೀಶ್ವರೋ ವಾ
ಮನೋರಥಂ ಮೇ ಪೂರಯಿತುಂ ಸಮರ್ಥಃ |
ಅನ್ಯೇನ ರಾಜ್ಞಾ ಪರಿದೀಯಮಾನಂ
ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||

ನನ್ನ ಆವಶ್ಯಕತೆಯನ್ನು ಪೂರೈಸಲು ದಿಲ್ಲೀಶ್ವರ ಮತ್ತು  ಜಗದೀಶ್ವರ ಇಬ್ಬರೇ ಸಮರ್ಥರು. ಅನ್ಯ ರಾಜರಿಂದ ಕೊಡಲ್ಪಡುವ ಹಣವು ನನ್ನ ತರಕಾರಿಗೋ ಉಪ್ಪಿಗೋ ಸಾಕಾಗಬಹುದು.

ಇದು ಜಗನ್ನಾಥನ ಸ್ವಾಭಿಮಾನವೋ, ನಿಷ್ಠೆಯೋ, ಭೋಗಲಾಲಸೆಯೋ ಆ ಜಗನ್ನಾಥನೇ ಬಲ್ಲ.

(ಮಾಹಿತಿ ಕೃಪೆ: ಶ್ರೀ ಪದ್ಮನಾಭ ಸೋಮಯಾಜಿಯವರ ‘ಪಂಡಿತರಾಜ ಜಗನ್ನಾಥ’ ಕೃತಿ)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

Monday, August 7, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೭ *ಕವಯಾಮಿ ವಯಾಮಿ ಯಾಮಿ*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೭

*ಕವಯಾಮಿ ವಯಾಮಿ ಯಾಮಿ*

ಭೋಜರಾಜನ ಭವ್ಯ ಆಸ್ಥಾನ. ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ ಮಹಾರಾಜ. ನವರತ್ನಗಳೂ ಯಥೋಚಿತ ಆಸನಗಳನ್ನು ಭೂಷಿಸಿದ್ದಾರೆ. ಆಶ್ರಯವನ್ನು ಬಯಸಿ ಬಂದ ಪಂಡಿತರನ್ನು ಎಂದೂ ಹಿಂದೆ ಕಳಿಸಿದವನಲ್ಲ ಧಾರಾ ನರೇಶ. ಅಂದೂ ಒಬ್ಬ ಘನವಿದ್ವಾಂಸ ಆಸ್ಥಾನವನ್ನು ಪ್ರವೇಶಿಸಿ ತನ್ನ ವಿದ್ವತ್ತನ್ನು ಪ್ರದರ್ಶಿಸಿದ. ಸುಪ್ರೀತನಾದ ಭೋಜರಾಜ ಆ ಪಂಡಿತನಿಗೆ ವಾಸ ವ್ಯವಸ್ಥೆಯನ್ನು ಮಾಡುವಂತೆ ಮಂತ್ರಿಗಳಿಗೆ ಆಜ್ಞಾಪಿಸಿದ. ಮಂತ್ರಿಗಳು ನಗರದಲ್ಲೆಲ್ಲ ಸುತ್ತಾಡಿ ಎಲ್ಲಿಯೂ ಮನೆ ಇಲ್ಲವೆಂದು ಅರುಹಿದರು. ಅದನ್ನರಿತ ರಾಜ ನಗರದಲ್ಲಿರುವ ನಿರಕ್ಷರನನ್ನು ಅವನ ಮನೆಯಿಂದ ಹೊರ ಹಾಕಿ ಆ ಮನೆಯಲ್ಲಿ ಪಂಡಿತನ ವಾಸವ್ಯವಸ್ಥೆಯನ್ನು ಮಾಡಲು ಆದೇಶಿಸಿದ. ಮಂತ್ರಿಗಳು ಮತ್ತೆ ನಗರವನ್ನು ಸುತ್ತಿ ಬಂದರು. ಈಗಲೂ ಆಗಿದ್ದು ನಿರಾಶೆಯೇ. ಆ ಮಹಾಪಂಡಿತನನ್ನು ಹಿಂದಕ್ಕೆ ಕಳಿಸಲು ಭೋಜರಾಜನಿಗೆ ಮನಸ್ಸಿರಲಿಲ್ಲ. ಈಗ ಹೊಸ ಆದೇಶವನ್ನು ಹೊರಡಿಸಿದ. ಯಾರು ಪದ್ಯ ರಚನೆಯನ್ನು ಮಾಡಲು ಅಸಮರ್ಥರೋ ಅವನನ್ನು ಮನೆಯಿಂದ ಹೊರ ಹಾಕಿ ಅಲ್ಲಿ ಪಂಡಿತನ ವಾಸಕ್ಕೆ ಅನುವುಮಾಡಿ ಎಂದು ಮಂತ್ರಿಗಳನ್ನು ಕಳಿಸಿದ. ಮಂತ್ರಿಗಳು ಮತ್ತೆ ಹುಡುಕಿದರು. ಸುಲಭಕ್ಕೆ ಸಿಗಲಿಲ್ಲ. ಕೊನೆಯಲ್ಲಿ ನೇಕಾರನೊಬ್ಬನ ಮನೆಯನ್ನು ಹೊಕ್ಕರು. ಪದ್ಯರಚನೆ ಮಾಡಬಲ್ಲೆಯಾ? ಎಂದು ಅವನನ್ನು ಕೇಳಿದರು. ಅವನು ’ನಾನೊಬ್ಬ ನೇಕಾರ ಸ್ವಾಮಿ. ವಸ್ತ್ರವನ್ನು ನೇಯ್ದು ಮಾರಾಟಮಾಡಿ ಬದುಕು ಸಾಗಿಸುತ್ತಿದ್ದೇನೆ. ಕವನವನ್ನು ರಚಿಸುವ ಶಕ್ತಿ ನನಗೆಲ್ಲಿ ಬರಬೇಕು?’ ಎಂದ. ’ಹಾಗಾದರೆ ಹೊರಡು ಮನೆ ಬಿಟ್ಟು’ ಅಂದರು ಮಂತ್ರಿಗಳು. ನೇಕಾರ ದಿಗ್ಭ್ರಾಂತನಾದ. ’ಬೇಡ ಸ್ವಾಮಿ! ಬಡವ ನಾನು. ಹೇಗಾದರೂ ಬದುಕಿಕೊಳ್ಳುತ್ತೇನೆ. ದಯೆ ತೋರಿ’ ಎಂದು ಅಂಗಲಾಚಿದ. ಮಂತ್ರಿಗಳು ರಾಜಾಜ್ಞೆಗೆ ಕಟ್ಟು ಬಿದ್ದಿದ್ದರು. ’ಅದೇನಿದ್ದರೂ ರಾಜನಿಗೇ ಹೇಳು’ ಎಂದು ಆಸ್ಥಾನಕ್ಕೆ ಎಳೆತಂದರು. ’ಏನಪ್ಪ! ನೇಕಾರ! ಕವಿತೆಯನ್ನು ರಚಿಸುತ್ತೀಯಾ?’ ಎಂದು ಕೇಳಿದ ರಾಜ. ತನ್ನ ಮನೆಯನ್ನು ಉಳಿಸಿಕೊಳ್ಳಲು ಕವಿತೆಯನ್ನು ರಚಿಸುವುದು ಅನಿವಾರ್ಯವಾಗಿತ್ತು.

ಕಾವ್ಯಂ ಕರೋಮಿ ನ ಹಿ ಚಾರುತರಂ ಕರೋಮಿ
ಯತ್ನಾತ್ ಕರೋಮಿ ಯದಿ ಚಾರುತರಂ ಕರೋಮಿ |
ಭೂಪಾಲಮೌಲಿಮಣಿಮಂಡಿತಪಾದಪೀಠ
ಹೇ ಸಾಹಸಾಂಕ! ಕವಯಾಮಿ ವಯಾಮಿ ಯಾಮಿ ||

ಕವಿತೆಯನ್ನು ರಚಿಸಬಲ್ಲೆ, ಆದರೆ ಸುಂದರವಾಗದು. ಸ್ವಲ್ಪ ಹೆಚ್ಚು ಪ್ರಯತ್ನಿಸಿದರೆ ಸುಂದರವಾಗಬಲ್ಲದು. ಅರಸರ ತಲೆಯ ಮುಕುಟಮಣಿಗಳಿಂದ ಅಲಂಕೃತವಾದ ಪಾದಪೀಠವನ್ನು ಹೊಂದಿರುವ ಹೇ ಸಾಹಸಿಯೇ, ನಾನು ಕವನಿಸುತ್ತೇನೆ, ನೇಯುತ್ತೇನೆ, ಹೋಗುತ್ತೇನೆ.

’ಕವಯಾಮಿ ವಯಾಮಿ ಯಾಮಿ’ ಎಂಬಲ್ಲಿನ ಶಬ್ದ ಚಮತ್ಕಾರವನ್ನು ಗಮನಿಸಿ. ಅನುವಾದದಲ್ಲಿ ಆ ಚಮತ್ಕಾರ ಬರಲು ಸಾಧ್ಯವಿಲ್ಲ. ಸಾಮಾನ್ಯ ನೇಕಾರನೊಬ್ಬನ ಬಾಯಿಯಿಂದ ಇಂತಹ ಚಮತ್ಕಾರಪೂರ್ಣ ಕವಿತೆಯನ್ನು ಕೇಳಿ ಭೋಜರಾಜನಿಗೆ ಅತ್ಯಾನಂದವಾಯಿತು. ಅವನನ್ನು ಸಮ್ಮಾನಿಸಿದ. ಪಂಡಿತನಿಗೆ ಹೊಸ ಮನೆಯನ್ನು ನಿರ್ಮಿಸಿಕೊಡಲು ಆಜ್ಞಾಪಿಸಿದ.

ಹೀಗಿತ್ತು ನಮ್ಮ ಹನ್ನೊಂದನೆಯ ಶತಮಾನದ ಭಾರತ. ಸಾಮಾನ್ಯ ಪ್ರಜೆಗಳೂ ಸಂಸ್ಕೃತದಲ್ಲಿ ಮಾತನಾಡುವುದಷ್ಟೇ ಅಲ್ಲ, ಕಾವ್ಯರಚನೆಯಲ್ಲೂ ಸಮರ್ಥರಾಗಿದ್ದರು.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ
*# ಅದ್ಯ ಸಂಸ್ಕೃತದಿನಮ್*

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸಂಗ – ೬ ಶ್ವಶುರಗೃಹನಿವಾಸಃ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ
ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು
ಪ್ರಸಂಗ – ೬

ಶ್ವಶುರಗೃಹನಿವಾಸಃ......
ಭಾರವಿ ಸಂಸ್ಕೃತದ ಮಹಾಕಾವ್ಯಕರ್ತೃಗಳಲ್ಲಿ ಒಬ್ಬ. ಅವನ ಮೊದಲ ಹೆಸರು ದಾಮೋದರ ಎಂದಾಗಿತ್ತು. ಅವನು ಕಲಿಕೆಯಲ್ಲಿ ಹಿಂದುಳಿದವನಲ್ಲ. ಆದರೂ ಅವನ ತಂದೆ ಯಾವಾಗಲೂ ಅವನನ್ನು ಹೆಡ್ಡನೆಂದು ಬಯ್ಯುತ್ತಿದ್ದ. ದಿನವೂ ಮೂದಲಿಕೆಯನ್ನು ಕೇಳಿ ದಾಮೋದರ ಬೇಸತ್ತು ಹೋಗಿದ್ದ. ಒಂದಿನ ಅವನ ಸಹನೆಯ ಕಟ್ಟೆಯೊಡೆದು ತಂದೆಯನ್ನು ಕೊಲ್ಲಬೇಕೆಂದು ನಿರ್ಧರಿಸಿದ. ಒಂದು ದೊಡ್ಡದಾದ ಶಿಲೆಯನ್ನು ತೆಗೆದುಕೊಂಡು ಅಟ್ಟದ ಮೇಲೆ ಅಡಗಿ ಕುಳಿತ. ತಂದೆ ಮಲಗಿದಾಗ ಅದನ್ನು ಅವನ ತಲೆಯ ಮೇಲೆ ಎಸೆದು ಕೊಲ್ಲಬೇಕೆಂಬುದು ಅವನ ಹವಣಿಕೆಯಾಗಿತ್ತು. ಆದರೆ ಮಲಗುವಾಗ ತಂದೆ ದಾಮೋದರನ ತಾಯಿಯಲ್ಲಿ ಮಗನನ್ನು ಬಾಯ್ತುಂಬಾ ಹೊಗಳಿದ. ’ಪರೋಕ್ಷೇ ತನಯಾಃ ಸ್ತುತ್ಯಾ’ ಎಂಬ ಸೂತ್ರವನ್ನು ತಂದೆ ಅನುಸರಿಸುತ್ತಿದ್ದಾನೆ ಎಂದು ದಾಮೋದರ ಅರಿತ. ತಕ್ಷಣ ಕೆಳಗಿಳಿದು ಬಂದು ತಂದೆಯಲ್ಲಿ ಕ್ಷಮೆ ಕೇಳಿದ. ಇಂತಹ ಕ್ರೂರ ಆಲೋಚನೆಗೆ ಯಾವ ಶಿಕ್ಷೆ ಎಂದು ತಂದೆಯನ್ನೇ ಕೇಳಿದ. ಆಗ ತಂದೆಯು ’ ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸವಾಗಿರು’ ಎಂದು ಹೇಳಿದ. ದಾಮೋದರನಿಗೆ ಆಶ್ಚರ್ಯವಾಯಿತು. ಮಾವನ ಮನೆಯಲ್ಲಿ ಸಿಗುವ ರಾಜೋಪಚಾರವನ್ನು ನೆನೆದು ಇದು ಶಿಕ್ಷೆಯಲ್ಲ ವರ ಎಂದು ಸಂತಸದಿಂದ ಮಾವನ ಮನೆಗೆ ತೆರಳಿದ. ಒಂದಿನ ಕಳೆಯಿತು, ಎರಡು ದಿನ ಕಳೆಯಿತು..... ಒಂದು ವಾರ ಕಳೆಯುವಷ್ಟರಲ್ಲಿ ಶಿಕ್ಷೆಯ ಅನುಭವವಾಗುತ್ತ ಬಂತು. ಅಕ ಮಣೆ, ತಕ ಮಣೆ ತಾ ಮಣೆ (ಇದು ಗ್ರಾಮ್ಯ ಭಾಷೆ. ಶಿಷ್ಟ ಭಾಷೆಯಲ್ಲಿ ಹಾಕು ಮಣೆ-ನೂಕುಮಣೆ-ತಳ್ಳುಮಣೆ) ಪ್ರಯೋಗವಾಯಿತು. ಆಗ ಅವನ ಕವಿಹೃದಯ ಶ್ಲೋಕರೂಪದಲ್ಲಿ ಗೋಳಿಟ್ಟಿತು.

ಶ್ವಶುರಗೃಹನಿವಾಸಃ ಸ್ವರ್ಗತುಲ್ಯೋ ನರಾಣಾಂ
ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ |
ಮಧುದಧಿಘೃತಧಾರಾಕ್ಷೀರಸಾರಪ್ರವಾಹಃ
ತದುಪರಿ ದಿನಮೇಕಂ ಪಾದರಕ್ಷಾಪ್ರಹಾರಃ ||

ಮಾವನಮನೆಯ ವಾಸ ಸ್ವರ್ಗವಾಸದಂತೆ. ಮೂರೋ, ಐದೋ, ಏಳು ದಿನವೋ ಉಳಿದರೆ ಹರಿಯುವುದು ಜೇನು, ಮೊಸರು, ತುಪ್ಪ, ಹಾಲುಗಳ ಪ್ರವಾಹ. ಅದರಮೇಲೆ ಒಂದು ದಿನ ಉಳಿದರೂ ಸಿಗುವುದು ಪಾದರಕ್ಷೆಯ ಪ್ರಹಾರ!


ಗಂಡಸರು ಯೋಚಿಸಬೇಕಾದ್ದು!   

Saturday, August 5, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೫ *ಜಲಮಧ್ಯೇ ಡುಬುಕ್ ಡುಬುಕ್*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೫


*ಜಲಮಧ್ಯೇ ಡುಬುಕ್ ಡುಬುಕ್*


ಭೋಜರಾಜ ಪಂಡಿತರನ್ನು ಗೌರವಾದರಗಳಿಂದ ಕಾಣುತ್ತಾನೆ ಎಂಬುದನ್ನು ತಿಳಿದ ನಾಲ್ವರು ಪಂಡಿತಂಮನ್ಯರು (ತಮ್ಮನ್ನು ತಾವೇ ಪಂಡಿತರೆಂದು ತಿಳಿದುಕೊಂಡವರು) ಧಾರಾನಗರಿಗೆ ಹೊರಟರು. ರಾಜನನ್ನು ಸುಪ್ರೀತಗೊಳಿಸಲು ಪದ್ಯವೊಂದನ್ನು ಬರೆಯಬೇಕಾಗಿತ್ತು. ದಾರಿಯುದ್ದಕ್ಕೂ ಯೋಚಿಸಿದರೂ ಯಾವುದೇ ಕವಿತಾಕಾಮಿನಿ ಅವರಿಗೆ ಒಲಿಯಲಿಲ್ಲ. ಪ್ರಯಾಣದಿಂದ ದಣಿದ ಅವರು ವಿಶ್ರಾಂತಿಗಾಗಿ ಸರೋವರವೊಂದರ ತೀರದಲ್ಲಿ ಮರದ ನೆರಳನ್ನಾಶ್ರಯಿಸಿದರು. ಅದು ಜಂಬೂಫಲದ ಮರವಾಗಿತ್ತು. ಮರದಲ್ಲಿ ಕಳಿತ ಹಣ್ಣುಗಳನ್ನು ನೋಡಿದ ಅವರಲ್ಲೊಬ್ಬ ಶ್ಲೋಕದ ಒಂದು ಪಾದವನ್ನು ರಚಿಸಿದ –’ಜಂಬೂಫಲಾನಿ ಪಕ್ವಾನಿ’. ಅವು ಸರೋವರದ ನೀರಿನಲ್ಲಿ ಬೀಳುತ್ತಿರುವುದನ್ನು ನೋಡಿದ ಇನ್ನೊಬ್ಬ ಎಂದ ಪತಂತಿ ವಿಮಲೇ ಜಲೇ’ ಮತ್ತೊಬ್ಬ ಸರೋವರದಲ್ಲಿ ಇಣುಕಿ ಹಾಕಿದ. ಅದರಲ್ಲಿರುವ ಮೀನುಗಳು ಹಣ್ಣುಗಳನ್ನು ತಿನ್ನದೇ ದೂರ ಓಡಿ ಹೋಗುತ್ತಿದ್ದುದನ್ನು ನೋಡಿ ’ತಾನಿ ಮತ್ಸ್ಯಾ ನ ಖಾದಂತಿ’ ಎಂದ. ನಾಲ್ಕನೆಯವನು ಕೊನೆಯ ಚರಣವನ್ನು ಕಟ್ಟಲು ಕಷ್ಟಪಟ್ಟ. ಹಣ್ಣುಗಳು ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಕಂಡು ಹೇಳಿದ – ’ಜಲಮಧ್ಯೇ ಡುಬುಕ್ ಡುಬುಕ್’. ನಾಲ್ವರಿಗೂ ಸಮಾಧಾನವಾಯಿತು. ಎಲ್ಲರೂ ಸೇರಿ ರಚಿಸಿದ ನಾಲ್ಕು ಸಾಲುಗಳನ್ನು ರಾಜನ ಮುಂದೆ ವಾಚಿಸಿದರು.

ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಲಮಧ್ಯೇ ಡುಬುಕ್ ಡುಬುಕ್ ||


ಸ್ವತ: ಕವಿಯಾಗಿದ್ದ ಭೋಜರಾಜ ಪ್ರತಿಭಾಶೂನ್ಯವಾದ ಈ ಕವಿತೆಯನ್ನು ಕೇಳಿ ನಾಲ್ವರಿಗೂ ಛೀಮಾರಿ ಹಾಕಿ ಕಳಿಸಿದ. ಹಣದಾಸೆಯಿಂದ ಬಂದಿದ್ದ ಅವರು ಕಂದಿದ ಮುಖವನ್ನು ಹೊತ್ತು ಹೊರಬಿದ್ದರು. ದಾರಿಯಲ್ಲಿ ಭೇಟಿಯಾದ ಕಾಳಿದಾಸ ಏನಾಯ್ತೆಂದು ಕೇಳಿದ. ಅವರು ಕಾಳಿದಾಸನಿಗೆ ಎಲ್ಲವನ್ನೂ ಹೇಳಿದರು. ಅವನು ಅವರ ಪದ್ಯವನ್ನು ನೋಡಿ ನಸುನಕ್ಕು ಕೊನೆಯ ಚರಣವೊಂದನ್ನು ಬದಲಿಸಿದ.


ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಾಲಗೋಲಕಶಂಕಯಾ ||


ಪಕ್ವವಾದ ಜಂಬೂ ಫಲಗಳು ನೀರಿನಲ್ಲಿ ಬೀಳುತ್ತಿವೆ. ಆದರೆ ಅವು ತಮ್ಮನ್ನು ಹಿಡಿಯಲು ಹಾಕಿರುವ ಬಲೆಯ ಚೆಂಡುಗಳೋ (ಬಲೆ ಮುಳುಗದಿರಲೆಂದು ಕಟ್ಟಿರುವ) ಎಂಬ ಸಂಶಯದಿಂದ ಮೀನುಗಳು ಅವನ್ನು ತಿನ್ನುತ್ತಿಲ್ಲ.


ಆ ಕೊನೆಯ ಪಾದ ಕವಿತೆಯ ಭಾಗ್ಯವನ್ನೇ ಬದಲಿಸಿಬಿಟ್ಟಿತು. ಅಪೂರ್ವವಾದ ಸೌಂದರ್ಯ ಆ ಕವಿತೆಗೊದಗಿತು. ಪಂಡಿತರು ಮತ್ತೆ ಒಳಹೋಗಿ ರಾಜನ ಮುಂದೆ ಬದಲಾವಣೆಯೊಂದಿಗೆ ವಾಚಿಸಿದರು. ಭೋಜನಿಗೆ ಇದು ಕಾಳಿದಾಸನ ಕೈವಾಡ ಎಂದು ಅರಿವಾದರೂ ಮುಗುಳ್ನಕ್ಕು ಆ ಪಂಡಿತಪುತ್ರರನ್ನು ಸತ್ಕರಿಸಿ ಕಳಿಸಿಕೊಟ್ಟ.

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕತಿ ತಿಳಿಯಿರಿ.

Friday, August 4, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಜೀವವನ್ನುಳಿಸಿದ ಕವಿತೆ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೪


*ಜೀವವನ್ನುಳಿಸಿದ ಕವಿತೆ......*


ಭರತಭೂಮಿಯ ಶಿಖರವಾದ ಕಾಶ್ಮೀರ ಸರಸ್ವತಿಯ ತವರೂರಾಗಿತ್ತು. ಹಾಗಾಗಿಯೇ ಆಚಾರ್ಯ ಶಂಕರರು ಸರಸ್ವತಿಯನ್ನು ಕಾಶ್ಮೀರಪುರವಾಸಿನಿ ಎಂದು ಸ್ತುತಿಸಿದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದ ಬಿಲ್ಹಣನೆಂಬ ಕವಿ ಗುಜರಾತ ಪ್ರಾಂತದ ರಾಜನ ಕುವರಿಗೆ ಸಂಸ್ಕೃತ ಕಲಿಸುತ್ತಿದ್ದ. ಕ್ರಮೇಣ ಅವನು ರಾಜಕುಮಾರಿಯ ಪ್ರೇಮಪಾಶಕ್ಕೆ ಸಿಲುಕಿದ. ಇದನ್ನು ತಿಳಿದ ರಾಜ ತನ್ನ ಪ್ರತಿಷ್ಠೆಗೆ ಕುಂದೆಂದು ಭಾವಿಸಿ ಬಿಲ್ಹಣನಿಗೆ ಮರಣದಂಡನೆಯನ್ನು ವಿಧಿಸಿದ. ವಧಸ್ಥಾನಕ್ಕೆ ಒಯ್ಯುವಾಗ ಬಿಲ್ಹಣನು ಸುಂದರವಾದ ವಿರಹಪದ್ಯಗಳನ್ನು ರಚಿಸಿ ಹಾಡತೊಡಗಿದ. ಈ ಪದ್ಯಗಳ ಸಂಗ್ರಹ ಮುಂದೆ ’ಚೋರ ಪಂಚಾಶಿಕಾ’ ಎಂದು ಪ್ರಸಿದ್ಧವಾಗಿದೆ. ಆಗಲೇ ಒಂದು ಪದ್ಯದ ಮೂಲಕ ರಾಜನಿಗೊಂದು ಸಂದೇಶವನ್ನು ಕಳಿಸಿದ.


ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಽಪಿ ನಷ್ಟಃ |
ಭುಕ್ಕುಂಡೋಽಹಂ ಭೂಪತಿಸ್ತ್ವಂ ಚ ರಾಜನ್
ಭಂಭಾವಲ್ಯಾಮಂತಕಃ ಸನ್ನಿವಿಷ್ಟಃ ||


ಭಟ್ಟಿ(ಕವಿ), ಭಾರವಿ(ಕವಿ), ಭಿಕ್ಷು(ಬುದ್ಧ), ಭೀಮಸೇನ ಇವರೆಲ್ಲ ಯಮನ ವಶರಾಗಿದ್ದಾರೆ. ಈಗ ಭುಕ್ಕುಂಡ(ಬಿಲ್ಹಣನ ಇನ್ನೊಂದು ಹೆಸರು)ನಾದ ನನ್ನವರೆಗೆ ಯಮ ತಲುಪಿದ್ದಾನೆ. ಭಕಾರದ ವರ್ಣಮಾಲೆಯನ್ನು ಪ್ರವೇಶಿಸಿದ ಯಮ ಭ, ಭಾ, ಭಿ, ಭೀ ಗಳನ್ನು ಮುಗಿಸಿ ’ಭು’ವನ್ನು ತಲುಪಿದ್ದಾನೆ. ನೀನು ಭೂಪತಿ. ಮುಂದಿನ ಸರದಿ ನಿನ್ನದು. ನನ್ನ ಮರಣ ತಡವಾದಷ್ಟು ನಿನ್ನ ಮರಣ ಮುಂದೂಡಲ್ಪಡುತ್ತದೆ. ಎಂಬುದು ಈ ಪದ್ಯದ ತಾತ್ಪರ್ಯ. ಅದನ್ನು ಅರಿತ ರಾಜ ಕವಿಯ ಚಾತುರ್ಯವನ್ನು ಮೆಚ್ಚಿ ಅವನಿಗೇ ತನ್ನ ಮಗಳನ್ನು ಧಾರೆಯೆರೆದು ಕೊಟ್ಟ.


📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Thursday, August 3, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಕ ಖ ಗ ಘ

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - 3

*ಕ ಖ ಗ ಘ*

ಒಮ್ಮೆ ಭೋಜರಾಜನ ಆಸ್ಥಾನಕ್ಕೊಬ್ಬ ಪಂಡಿತ ಆಗಮಿಸಿದ. ರಾಜನಿಂದ ಯಥೋಚಿತ ಸತ್ಕಾರ ಪಡೆದು ಪಂಡಿತರ ಮುಂದೆ ಸಮಸ್ಯಾಪೂರ್ತಿಯ ವಾಕ್ಯವನ್ನುಸುರಿದ. ’ಕಖಗಘ’ ಎಂಬುದನ್ನು ಕೊನೆಯ ಪಾದದ ಅಂತಿಮ ಭಾಗವನ್ನಾಗಿರಿಸಿಕೊಂಡು ಕವಿತೆಯೊಂದನ್ನು ರಚಿಸಬೇಕೆಂಬುದೇ ಅವನ ಪಂಥಾಹ್ವಾನವಾಗಿತ್ತು. ನವಮಣಿಗಳು ತಿಣುಕಾಡಿದರೂ ಮಾಡಲಾಗದೆ ತಲೆಯನ್ನು ಕೆಳಗೆ ಹಾಕಿದರು. ನವ ನವೋನ್ಮೇಷಶಾಲಿ ಪ್ರತಿಭೆಯ ಕಾಳಿದಾಸನೂ ಅಪ್ರತಿಭನಾದ. ಒಂದು ದಿನದ ಸಮಾಯಾವಕಾಶ ಕೇಳಿ ಹೊರಬಿದ್ದ.

ತಲೆಯನ್ನು ಕಖಗಘ ಹುಳು ಕೊರೆಯುತ್ತಿತ್ತು. ದಾರಿಯಲ್ಲಿ ಸಾಗುತ್ತಿರುವಾಗ ಮುಗ್ಧ ಬಾಲಿಕೆಯೊಬ್ಬಳನ್ನು ನೋಡಿ ಆಕರ್ಷಿತನಾದ. ಅವಳೊಂದಿಗೆ ಸಂಭಾಷಣೆಗಿಳಿದ. ಅವರ ಸಂಭಾಷಣೆ ಹೀಗಿತ್ತು....

ಕಾಳಿದಾಸ – ಕಾ ತ್ವಂ ಬಾಲೇ? (ಎಲೈ ಬಾಲೆಯೇ ನೀನಾರು?)

ಬಾಲೆ – ಕಾಂಚನಮಾಲಾ

ಕಾಳಿದಾಸ – ಕಸ್ಯಾಃ ಪುತ್ರೀ? (ಯಾವಳ ಮಗಳು?)

ಬಾಲೆ – ಕನಕಲತಾಯಾಃ | (ಕನಕಲತೆಯ ಮಗಳು.)

ಕಾಳಿದಾಸ – ಹಸ್ತೇ ಕಿಂ ತೇ? (ನಿನ್ನ ಕೈಯಲ್ಲೇನಿದೆ?)

ಬಾಲೆ – ತಾಲೀಪತ್ರಮ್ | (ತಾಳೆಯ ಗರಿಗಳು.)

ಕಾಳಿದಾಸ – ಕಾ ವಾ ರೇಖಾ? (ಏನು ಬರೆದಿದೆ ಅದರಲ್ಲಿ?)

ಬಾಲೆ – ಕ ಖ ಗ ಘ


ತಾನು ಯೋಚಿಸುತ್ತಿರುವುದೇ ಅವಳ ಬಾಯಿಂದ ಬಂದಾಗ ಸಾವಿರ ದೀಪಗಳು ಹೊತ್ತಿದಂತಾಯ್ತು ಕಾಳಿದಾಸನ ಮಿದುಳಲ್ಲಿ. ಅವನ ಕವನ ಸಿದ್ಧವಾಗಿ ಹೋಯ್ತು.

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ |
ಹಸ್ತೇ ಕಿಂ ತೇ? ತಾಲೀಪತ್ರಂ
ಕಾ ವಾ ರೇಖಾ? ಕಖಗಘ ||


ಸರಳ ಸುಂದರ ಪದ್ಯಕ್ಕೆ ಬೇರೆ ಉದಾಹರಣೆ ಬೇಕೆ ?!

📝 *ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Wednesday, August 2, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು-ವಿದ್ಯಾಹೀನಾ ನ ಶೋಭಂತೇ…...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು

ಪ್ರಸಂಗ - ೨

ವಿದ್ಯಾಹೀನಾ ನ ಶೋಭಂತೇ…...


ಆಂಧ್ರಪ್ರದೇಶದ ಒಂದು ಅಗ್ರಹಾರ. ಅಲ್ಲಿ ದೇವಶರ್ಮಾ ಎಂಬ ಪಂಡಿತನಿದ್ದ. ಅವನಿಗೊಬ್ಬ ಮಗ ಜನಿಸಿದ. ಅವನ ಹೆಸರು ಮಲ್ಲೀನಾಥ. ಆಲಸಿಯಾಗಿದ್ದ ಮಗನನ್ನು ವಿದ್ಯಾಸಂಪನ್ನನನ್ನಾಗಿ ಮಾಡುವ ತಂದೆಯ ಪ್ರಯತ್ನ ಫಲಿಸದೆ ಮಗ ನಿರಕ್ಷರಿಯಾಗಿಯೇ ಉಳಿದ. ಮದುವೆಯ ವಯಸ್ಸು ಬಂದಾಗ ಮಲ್ಲೀನಾಥನಿಗೆ ಮದುವೆಯೂ ಆಯಿತು. ಅವನ ಪತ್ನಿ ಹಾಗೂ ಅವಳ ಅಣ್ಣತಮ್ಮಂದಿರೆಲ್ಲ ವಿದ್ಯಾವಂತರಾಗಿದ್ದರು. ಅವರೆಲ್ಲ ಇವನನ್ನು ಮೂದಲಿಸುತ್ತಿದ್ದರು. ಒಮ್ಮೆ ಮಲ್ಲೀನಾಥ ಮಾವನ ಮನೆಗೆ ಹೋದಾಗ ಅವನ ಬಾವ ಮೈದುನರು ಅವನ ಅಜ್ಞಾನವನ್ನು ನೋಡಿ ಗೇಲಿ ಮಾಡಿದರು. ಅದರಿಂದ ಮಲ್ಲೀನಾಥನಿಗಿಂತ ಅವನ ಮಡದಿಗೆ ಹೆಚ್ಚು ಅವಮಾನವಾಯಿತು. ಅವನನ್ನು ಕರೆದುಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಮಲ್ಲೀನಾಥ ಪಲಾಶ(ಮುತ್ತುಗ) ವೃಕ್ಷವೊಂದರಲ್ಲಿ ಅರಳಿದ ಸುಂದರವಾದ ಹೂವಗಳನ್ನು ಪತ್ನಿಗೆ ತೋರಿಸಿದ. ಆಗ ಪತ್ನಿಯು ಚಾಣಕ್ಯನ ಸೂಕ್ತಿಯೊಂದನ್ನು ಅವನಿಗೆ ಹೇಳಿದಳು.

ರೂಪಯೌವನಸಂಪನ್ನಾ
ವಿಶಾಲಕುಲಸಂಭವಾಃ |
ವಿದ್ಯಾಹೀನಾ ನ ಶೋಭಂತೇ
ನಿರ್ಗಂಧಾ ಇವ ಕಿಂಶುಕಾಃ||

ಶ್ರೇಷ್ಠವಾದ ಕುಲದಲ್ಲಿ ಹುಟ್ಟಿ ರೂಪ, ಯೌವ್ವನಗಳಿಂದ ಕೂಡಿದ್ದರೂ ವಿದ್ಯೆಯಿಲ್ಲದವರು ಸುಗಂಧವಿಲ್ಲದ ಸುಂದರ ಪಾಲಾಶಕುಸುಮದಂತೆ ಜೀವನವನ್ನು ವ್ಯರ್ಥವಾಗಿ ಕಳೆಯುವರು.

ವಿದುಷಿ ಪತ್ನಿಯ ಮಾತು ಅವಮಾನದಿಂದ ಜರ್ಜರಿತನಾಗಿದ್ದ ಮಲ್ಲೀನಾಥನ ಹೃದಯಕ್ಕೆ ನಾಟಿತು. ಮನೆಗೆ ಹೋಗದೆ ನೇರವಾಗಿ ಗುರುಕುಲವನ್ನು ತಲುಪಿದ. ಗುರುಗಳು ಕನಿಕರದಿಂದ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರದ್ಧೆಯಿಂದ ಅಧ್ಯಯನ ಮಾಡಿದ ಮಲ್ಲೀನಾಥ ಜ್ಞಾನಸಂಪನ್ನನಾದ.


ಅನೇಕ ವರ್ಷಗಳ ಅಧ್ಯಯನದ ನಂತರ ಒಂದಿನ ಗುರುಮಾತೆ ನೀಡಿದ ಭೋಜನವನ್ನು ಸ್ವೀಕರಿಸುವಾಗ ಮಲ್ಲೀನಾಥ ಕೇಳಿದ ’ಅಮ್ಮಾ! ಇಂದೇಕೋ ಊಟ ಕಹಿಯಾಗಿದೆಯಲ್ಲ. ಏನಾದರೂ ಕಹಿ ಪದಾರ್ಥ ಬಿದ್ದಿರಬಹುದೆ?’ ಆಗ ಗುರುಗಳು ಹೇಳಿದರು – ’ಮಲ್ಲೀನಾಥ! ಇಂದಿಗೆ ನಿನ್ನ ವಿದ್ಯಾಭ್ಯಾಸ ಮುಗಿಯಿತು. ಪ್ರತಿದಿನವೂ ನಿನ್ನ ಊಟದಲ್ಲಿ ಬೇವಿನ ಎಣ್ಣೆಯನ್ನು ಬೆರೆಸಲು ನಾನೇ ಸೂಚಿಸಿದ್ದೆ. ಆದರೆ ಅಧ್ಯಯನದಲ್ಲಿ ಮುಳುಗಿಹೋಗಿದ್ದ ನಿನಗೆ ಇನ್ನ್ಯಾವ ಪರಿವೆಯೂ ಇರಲಿಲ್ಲ. ಇಂದು ನಿನಗೆ ಕಹಿ ತಿಳಿಯಿತು. ಇದು ನಿನ್ನ ವಿದ್ಯಾಭ್ಯಾಸ ಪೂರ್ತಿಯಾದ ಲಕ್ಷಣ’ ಎಂದರು. ಗುರುವಿಗೆ ಯಥಾಶಕ್ತಿ ಗುರುದಕ್ಷಿಣೆಯನ್ನು ಅರ್ಪಿಸಿ ಮಲ್ಲೀನಾಥ ಮನೆಗೆ ಬಂದ. ತಾನು ಗಳಿಸಿದ ವಿದ್ವತ್ತಿನಿಂದ ಭರತಖಂಡದ ಅನೇಕ ಪಂಡಿತರನ್ನು ವಾದದಲ್ಲಿ ಸೋಲಿಸಿ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಸಂಪಾದಿಸಿದ. ಮಲ್ಲಿನಾಥ ಸೂರಿ ಎಂದು ಖ್ಯಾತನಾಗಿ ಸಂಸ್ಕೃತದ ಪಂಚ ಮಹಾಕಾವ್ಯಗಳಿಗೆ ಪಾಂಡಿತ್ಯಪೂರ್ಣ ಟೀಕೆಯನ್ನು ಬರೆದುದಲ್ಲದೆ ಅನೇಕ ಸ್ವತಂತ್ರ ಕೃತಿಗಳನ್ನೂ ರಚಿಸಿ ಅಜರಾಮರ ಕೀರ್ತಿಯನ್ನು ಗಳಿಸಿದ. ಇಂದಿಗೂ ಮಹಾಕಾವ್ಯಗಳ ಅಧ್ಯಯನಕ್ಕೆ ಮಲ್ಲಿನಾಥನ ಟೀಕೆ ಅತ್ಯುತ್ತಮ ಮಾಧ್ಯಮವಾಗಿದೆ.

📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 1, 2017

ಅದ್ಯ ಧಾರಾ ನಿರಾಧಾರಾ.......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - ೧

*ಅದ್ಯ ಧಾರಾ ನಿರಾಧಾರಾ.......*

ಕಾಳಿದಾಸನನ್ನು ತಿಳಿಯದಿರುವವರಾರು? ಕವಿಕುಲಗುರುವೆಂಬ ಕೀರ್ತಿ ಹೊತ್ತ ಅಪ್ರತಿಮ ಶೃಂಗಾರ ಕವಿ. ಪ್ರತ್ಯುತ್ಪನ್ನ ಮತಿಯೂ ಆಗಿದ್ದ ಅವನು ಕ್ಷಣಾರ್ಧದಲ್ಲಿ ಕವಿತೆಯನ್ನು ರಚಿಸಬಲ್ಲವನಾಗಿದ್ದ. ಅವನು ಭೋಜರಾನ ಆಸ್ಥಾನದ ನವಮಣಿಗಳಲ್ಲಿ ಒಬ್ಬನಾಗಿದ್ದ ಎಂದು ಭೋಜ ಪ್ರಬಂಧದಲ್ಲಿ ಹೇಳಲಾಗಿದೆ.

ಸ್ವತ: ಕವಿಯೂ, ಪಂಡಿತರಿಗೆ ಆಶ್ರಯದಾತನೂ ಆಗಿದ್ದ ಭೋಜರಾಜ ಕಾಳಿದಾಸನ ಪರಮಮಿತ್ರನೂ ಆಗಿದ್ದ. ಅಂತಹ ಭೋಜರಾಜನಿಗೆ ಒಮ್ಮೆ ಒಂದು ವಿಚಿತ್ರ ಕೋರಿಕೆಯುಂಟಾಯಿತು. ತಾನು ಸತ್ತಾಗ ಕಾಳಿದಾಸ ಯಾವ ರೀತಿಯಲ್ಲಿ ಚರಮಗೀತೆಯನ್ನು ಬರೆಯಬಹುದು ಎಂಬ ಜಿಜ್ಞಾಸೆ ಕಾಡಹತ್ತಿತು. ಅದನ್ನು ಕಾಳಿದಾಸನಲ್ಲಿ ತೋಡಿಕೊಂಡ. ದಿಗ್ಭ್ರಾಂತನಾದ ಕಾಳಿದಾಸ ಅದಕ್ಕೆ ಒಪ್ಪಲಿಲ್ಲ. ವಾಗ್ದೇವಿಯ ವರಪುತ್ರನಾದ ತನ್ನ ಶಬ್ದಗಳ ಶಕ್ತಿಯ ಅರಿವು ಅವನಿಗಿತ್ತು. ಎಷ್ಟು ಹೇಳಿದರೂ ಒಪ್ಪದ ಅವನ ಮೇಲೆ ಸಿಟ್ಟುಗೊಂಡ ಭೋಜ ತನ್ನ ಆಸ್ಥಾನವನ್ನು ಬಿಟ್ಟು ತೊಲಗುವಂತೆ ಆಜ್ಞಾಪಿಸಿದ.

ಕಾಳಿದಾಸನಿಲ್ಲದ ಭೋಜರಾಜನ ಆಸ್ಥಾನ ಚಂದ್ರನಿಲ್ಲದ ರಾತ್ರಿಯಂತಾಗಿತ್ತು. ಬೇಸರಗೊಂಡ ಅರಸ ಕವಿಯನ್ನರಸಿ ಮಾರುವೇಷದಲ್ಲಿ ಹೊರಟೇ ಬಿಟ್ಟ. ಬಲುದಿನಗಳ ಅನ್ವೇಷಣೆಯ ನಂತರ ಕಾಳಿದಾಸನನ್ನು ಸಂಧಿಸಿ ಭೋಜರಾಜ ದಿವಂಗತನಾದ ಎಂದು ಸುಳ್ಳನ್ನು ಹೇಳಿದ. ಕವಿಚಕ್ರವರ್ತಿಯು ಕಂಬನಿ ತುಂಬಿ ಅಗಲಿದ ಮಿತ್ರನಿಗಾಗಿ ಚರಮಗೀತೆಯನ್ನು ಹಾಡಿದ.

ಅದ್ಯ ಧಾರಾ ನಿರಾಧಾರಾ
ನಿರಾಲಂಬಾ ಸರಸ್ವತೀ |
ಪಂಡಿತಾ: ಖಂಡಿತಾ: ಸರ್ವೇ
ಭೋಜರಾಜೇ ದಿವಂಗತೇ ||

(ಭೋಜರಾಜ ಸ್ವರ್ಗಸ್ಥನಾದ್ದರಿಂದ ಇಂದು ಧಾರಾನಗರಿಯು ಆಧಾರವನ್ನು ಕಳೆದುಕೊಂಡಿತು. ಸರಸ್ವತಿಯು ಆಶ್ರಯವನ್ನು ಕಳೆದುಕೊಂಡಳು. ಪಂಡಿತರು ಗೌರವವನ್ನು ಕಳೆದುಕೊಂಡರು.)

ಋಷಿತುಲ್ಯನಾದ ಕವಿಯ ಮಾತುಗಳು ಸುಳ್ಳಾಗಲು ಸಾಧ್ಯವೇ. ಮಾರುವೇಷದಲ್ಲಿದ್ದ ಭೋಜರಾಜ ನಿಶ್ಚೇಷ್ಟಿತನಾಗಿ ಬಿದ್ದ. ಕಾಳಿದಾಸನಿಗೆ ಪರಿಸ್ಥಿತಿಯ ಅರಿವಾಯಿತು; ದುಃಖ ಇಮ್ಮಡಿಸಿತು. ತಕ್ಷಣ ಶ್ಲೋಕವನ್ನು ಮಾರ್ಪಡಿಸಿ ಪಠಿಸಿದ.

ಅದ್ಯ ಧಾರಾ ಸದಾಧಾರಾ
ಸದಾಲಂಬಾ ಸರಸ್ವತೀ |
ಪಂಡಿತಾ ಮಂಡಿತಾ ಸರ್ವೇ
ಭೋಜರಾಜೇ ಭುವಂ ಗತೇ ||

(ಭೋಜರಾಜ ಈ ಭೂಮಿಯಲ್ಲಿರಲು ಧಾರಾ ನಗರವಿಂದು ಉತ್ತಮ ಆಧಾರವನ್ನು ಹೊಂದಿತು. ಸರಸ್ವತಿಗೆ ಒಳ್ಳೆಯ ಆಶ್ರಯ ಸಿಕ್ಕಿತು. ಪಂಡಿತರೆಲ್ಲರೂ ಸಮ್ಮಾನಿತರಾದರು.)

ಭೋಜರಾಜ ನಿದ್ದೆಯಿಂದೆಂಬಂತೆ ಎದ್ದು ಕುಳಿತ. ಕವಿಕುಲಗುರುವಿನ ವಾಕ್ ಶಕ್ತಿಯನ್ನರಿತು ಆದರಿಸಿದ.

ಕಾಳಿದಾಸನಿಗೆ ಕಾಳಿದಾಸನೇ ಸಾಟಿ.!

📝 ಮಹಾಬಲ ಭಟ್, ಗೋವಾ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸ್ತಾವನೆ

ಆತ್ಮೀಯ ಸ್ನೇಹಿತರೇ,
’ಸನಾತನ ಭಾರತದ ಸ್ತ್ರೀರತ್ನಗಳು’ ಎಂಬ ಲೇಖನ ಸರಣಿಗೆ ನೀವು ಕೊಟ್ಟ ಆತ್ಮೀಯ ಸ್ಪಂದನೆಯಿಂದ ಪ್ರೇರಿತನಾಗಿ ಎರಡನೆಯ ಲೇಖನ ಸರಣಿಯನ್ನು ಆರಂಭಿಸುತ್ತಿದ್ದೇನೆ.
ಸಂಸ್ಕೃತ ಸಾಹಿತ್ಯ ಎಂಬುದು ಹಲವು ಕುತೂಹಲಗಳ ಅನೇಕ ಚಮತ್ಕಾರಗಳ ಆಗರ. ಮೊಗೆದಷ್ಟೂ ಹೊರಚಿಮ್ಮುವ ಈ ರಸಸಾಗರದ ಕೆಲವು ಮುತ್ತುಗಳನ್ನು ನಿಮ್ಮ ಮುಂದಿಡುವ ನನ್ನ ಸವಿನಯ ಪ್ರಯತ್ನವಿದು. ಸಂಸ್ಕೃತ ಕವಿಗಳನೇಕರ ಜೀವನದಲ್ಲಿ ಆಗಿ ಹೋದ ಒಂದೊಂದು ಘಟನೆಗಳೂ ಒಂದೊಂದು ರಸಪ್ರಸಂಗಗಳು. ಅಂತಹ ಪ್ರಸಂಗಗಳನ್ನು ಕಲೆ ಹಾಕಿ ಇಲ್ಲಿ ಹೊರಹೊಮ್ಮಿದ ಚಮತ್ಕಾರಪೂರ್ಣ ಕವಿತೆಗಳನ್ನು ನಿಮ್ಮ ಮುಂದಿಡುವ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇನೆ. ಈ ಪ್ರಸಂಗಗಳೆಲ್ಲ ಬೇರೆ ಬೇರೆ ಹೊತ್ತಿಗೆಗಳಲ್ಲಿ ಓದಿದ್ದು ಹಾಗೂ ವಿದ್ವನ್ಮಣಿಗಳ ಭಾಷಣಗಳಲ್ಲಿ ಕೇಳಿದ್ದು. ಹಾಗಾಗಿ ಈ ಲೇಖನಗಳ ಮೂಲವಸ್ತು ನನ್ನದಲ್ಲ. ಮಧುಕರವೃತ್ತಿಯಿಂದ ಸಂಗ್ರಹಿಸಿದ ಮಕರಂದವನ್ನು ನನ್ನ ಭಾಷೆಯಲ್ಲಿ ಜೇನಾಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅದು ಸಹೃದಯರಾದ ನಿಮಗೆಷ್ಟು ರುಚಿಸುವುದೋ ನಾಕಾಣೆ. ಏನೇ ಇರಲಿ, ನಿಮ್ಮವನೀತ. ಓದಿ, ತಪ್ಪಿದ್ದರೆ ತಿದ್ದಿ, ಮೆಚ್ಚಿದರೆ ಬೆನ್ನುತಟ್ಟಿ.
ಈ ಲೇಖನಗಳಲ್ಲಿರುವ ಘಟನೆಗಳಿಗೆ ಐತಿಹಾಸಿಕ ಮಹತ್ತ್ವವಿಲ್ಲ. ಅನೇಕ ಪ್ರಸಂಗಗಳು ಕಲ್ಪಿತ ಪ್ರಸಂಗಗಳು. ಬಲ್ಲಾಳ ಸೇನನೆಂಬ ಕವಿ ರಚಿಸಿದ್ದ ಭೋಜ ಪ್ರಬಂಧ ಎಂಬ ಕಾವ್ಯದಲ್ಲಿ ಕಾಳಿದಾಸ ಭೋಜರಾಜನ ಆಸ್ಥಾನದಲ್ಲಿದ್ದ ಎಂದು ವರ್ಣಿಸಲಾಗಿದೆ. ಅದು ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟಿದೆ. ಅದರಂತೆ ಈ ಸರಣಿಯಲ್ಲಿ ವರ್ಣಿಸಲಾದ ಪ್ರಸಂಗಗಳೂ ಐತಿಹ್ಯಗಳೇ ಹೊರತು ಇತಿಹಾಸವಲ್ಲ. ರಸಾಸ್ವಾದನೆಯೇ ಈ ಲೇಖನಗಳ ಪರಮೋದ್ದೇಶವೇ ವಿನಾ ಸತ್ಯಾನ್ವೇಷಣೆಯಲ್ಲ.
ಶ್ರಾವಣ ಪೂರ್ಣಿಮೆಯನ್ನು ’ಸಂಸ್ಕೃತದಿನ’ ಎಂದು ಕೇಂದ್ರ ಸರಕಾರ ಘೋಷಿಸಿದೆ. ಆ ದಿನ, ಹಿಂದಿನ ಮೂರು ದಿನ ಹಾಗೂ ಮುಂದಿನ ಮೂರು ದಿನ ಹೀಗೆ ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹ ನಡೆಯುತ್ತದೆ. ಸಂಸ್ಕೃತ ಭಾಷೆಯ ಪ್ರಸಾರದ ಪ್ರಯತ್ನ ಈ ಸಪ್ತಾಹದಲ್ಲಿ ತನ್ನ ವೇಗವನ್ನು ವರ್ಧಿಸಿಕೊಳ್ಳುತ್ತದೆ. ಈ ವರ್ಷ ಅಗಸ್ಟ್ ೪ ರಿಂದ ೧೦ರವರೆಗೆ ಸಂಸ್ಕೃತ ಸಪ್ತಾಹವಿದೆ. ೭ ನೇ ತಾರೀಖಿಗೆ ಸಂಸ್ಕೃತದಿನ. ಈ ಸಂದರ್ಭದಲ್ಲಿ ಸಂಸ್ಕೃತದ ಅನ್ನ ತಿನ್ನುತ್ತಿರುವ ನನ್ನ ಒಂದು ಅಳಿಲು ಸೇವೆ ಈ ಲೇಖನ ಸರಣಿ. ಅಗಸ್ಟ್ ತಿಂಗಳು ಪೂರ್ತಿ ಈ ಸರಣಿಯು ಪ್ರಸಾರವಾಗಲಿದೆ.
ತಮ್ಮ ಸಹಕಾರ, ಪ್ರೋತ್ಸಾಹ ಇರಲಿ
ನಿಮ್ಮವ
ಮಹಾಬಲ ಭಟ್, ಗೋವಾ

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...