Monday, December 3, 2018

ಮಾರ್ಜಾರಕಿಶೋರನ್ಯಾಯ:


ಒಬ್ಬ ತಂದೆ ಹಾಗೂ ಅವನ ಚಿಕ್ಕ ಮಗಳು ಇಕ್ಕಟ್ಟಾದ ಸಂಕವನ್ನು ದಾಟುತ್ತಿದ್ದರು. ಆಗ ತಂದೆ ತನ್ನ ಕೈಯನ್ನು ಹಿಡಿದುಕೊಳ್ಳುವಂತೆ ಸೂಚಿಸಿದ. ಆಗ ಮಗಳೆಂದಳು – “ಅಪ್ಪಾ! ನೀನೇ ನನ್ನ ಕೈಹಿಡಿದುಕೋ. ನಾನು ನಿನ್ನ ಕೈ ಹಿಡಿದುಕೊಂಡು ಜಾರಿದರೆ ಹೆದರಿ ಬಿಟ್ಟು ಬಿಟ್ಟೇನು. ಆದರೆ ನೀನು ನನ್ನ ಕೈ ಹಿಡಿದುಕೊಂಡರೆ ಎಂತಹ ಆಪತ್ತು ಬಂದರೂ ಬಿಡಲಾರೆ ಎಂಬ ವಿಶ್ವಾಸವಿದೆ.”

ನಮ್ಮ ಹಾಗೂ ಭಗವಂತನ ನಡುವೆಯ ಸಂಬಂಧವೂ ಹೀಗೇ. ಎಷ್ಟೋ ಸಂದರ್ಭಗಳಲ್ಲಿ ನಾವು ಶ್ರದ್ಧೆಯನ್ನು ಕಳೆದುಕೊಳ್ಳುತ್ತೇವೆ. ಆದರೆ ಭಗವಂತ ಒಮ್ಮೆ ನಮ್ಮ ಕೈ ಹಿಡಿದುಕೊಂಡರೆ ಎಂತಹ ಸಂದರ್ಭದಲ್ಲೂ ಅದನ್ನು ಬಿಡಲಾರ. ಭಗವದ್ಗೀತೆಯಲ್ಲಿ ಪರಮಾತ್ಮ ಅದನ್ನು ಸ್ಪಷ್ಟಪಡಿಸಿದ್ದಾನೆ.

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಅನನ್ಯಗತಿಕರಾಗಿ ಯಾರು ನನ್ನನ್ನು ಭಜಿಸುತ್ತಾರೋ ಅವರ ಯೋಗ(ಅಪ್ರಾಪ್ತಸ್ಯ ಪ್ರಾಪ್ತಿಃ) ಹಾಗೂ ಕ್ಷೇಮ(ಪ್ರಾಪ್ತಸ್ಯ ರಕ್ಷಣಂ) ಎರಡನ್ನೂ ನಾನು ವಹಿಸಿಕೊಳ್ಳುತ್ತೇನೆ ಎಂಬುದು ಭಗವಂತನ ಅಂಬೋಣ.

ಮಾರ್ಜಾರ ಜಾತಿಗೆ ಸೇರಿದ ಬೆಕ್ಕು, ಹುಲಿ ಹಾಗೂ ಸಿಂಹಗಳು ತಮ್ಮ ಮರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಬಾಯಿಯಲ್ಲಿ ಕಚ್ಚಿಕೊಂಡು ಸಾಗಿಸುತ್ತವೆ. ಮರಿಗಳು ಹಿಡಿತ ತಪ್ಪಿ ಬೀಳುವುದೂ ಇಲ್ಲ, ಹರಿತ ಹಲ್ಲುಗಳಿಂದ ಅವುಗಳಿಗೆ ಅಪಾಯವೂ ಆಗುವುದಿಲ್ಲ. ಅದರಂತೆ ನಮ್ಮನ್ನು ಭಗವಂತ ನೋವಾಗದಂತೆ ಚ್ಯುತಿಯಿಲ್ಲದಂತೆ ದಾಟಿಸುತ್ತಾನೆ ಎಂಬುದು ಈ ನ್ಯಾಯದ ತಾತ್ಪರ್ಯ.

ತುಷ್ಯತುದುರ್ಜನನ್ಯಾಯ


ಈ ಪ್ರಪಂಚದಲ್ಲಿ ಸಜ್ಜನರೊಂದಿಗೂ ದುರ್ಜನರೊಂದಿಗೂ ವ್ಯವಹರಿಸಬೇಕಾದ ಅನಿವಾರ್ಯತೆ ಒದಗುತ್ತದೆ. ಸಜ್ಜನರ ಸಂಗ ಹೆಜ್ಜೇನು ಸವಿದಂತಿದ್ದರೆ, ದುರ್ಜನರ ಸಂಗ ಹೆಜ್ಜೇನು ಕಡಿದಂತೆ ಎಂದು ಸರ್ವಜ್ಞ ಹೇಳಿದ್ದು ಅತಿಶಯೋಕ್ತಿಯೇನೂ ಅಲ್ಲ. ದುಷ್ಟರ ಸಂಸರ್ಗದಿಂದ ಸಜ್ಜನರು ಹೆಜ್ಜೆ ಹೆಜ್ಜೆಗೂ ಅವಮಾನವನ್ನನುಭವಿಸಬೇಕಾಗುತ್ತದೆ.

ಮತಿವಿಕಲ ನಾಯಿಯಂತೆ ದುರ್ಜನರ ವ್ಯವಹಾರ. ನಾಯಿಗೆ ಹೆದರಿ ಓಡಿದರೆ ಅಟ್ಟಿಸಿಕೊಂಡು ಬಂದು ವಿಕೃತಾನಂದವನ್ನು ಪಡೆಯುತ್ತದೆ. ಎದುರಿಸಿದೆವೋ, ಅದರ ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪಾರಾಗುವ ಒಂದೇ ಉಪಾಯ ಆಹಾರವನ್ನೆಸೆಯುವುದು. ಅದು ನಾವು ಎಸೆದ ಆಹಾರವನ್ನು ತಿಂದು ಸಂತೋಷದಿಂದ ಬಾಲ ಅಲ್ಲಾಡಿಸುತ್ತದೆ.

ಸಜ್ಜನರು ಸದಾತುಷ್ಟರು. ಅವರು ಸರ್ವದಾ ವಂದ್ಯರೇ ಆದರೂ ವಂದನೆಯ ಅಪೇಕ್ಷೆ ಅವರಿಗಿಲ್ಲ. ದುರ್ಜನರು ಹಾಗಲ್ಲ. ಮುಗಿದ ಕೈ ಓರೆಯಾದರೂ ಕೆರಳುವರು. ಹಾಗಾಗಿಯೇ ಸುಭಾಷಿತಕಾರನೊಬ್ಬ ಉದ್ಗರಿಸಿದ್ದು – ’ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಂ’.

ದುಷ್ಟರನ್ನು ಖುಷಿಯಾಗಿಟ್ಟರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಅವರು ಖುಷಿಯಾಗಿರುವಷ್ಟು ಕಾಲ ನಮ್ಮ ತಂಟೆಗೆ ಬರಲಾರರು.

ಅಫಝಲ್ ಖಾನ್ ಶಿವಾಜಿಮಹಾರಾಜನನ್ನು ಮಣಿಸಲು ಅಪಾರಸೇನೆಯೊಂದಿಗೆ ಪ್ರತಾಪದುರ್ಗವನ್ನು ಸಮೀಪಿಸಿದ್ದ. ಅವನ ಸೇನೆಯನ್ನು ಎದುರಿಸುವುದು ಸುಲಭಸಾಧ್ಯವಾಗಿರಲಿಲ್ಲ. ಚತುರಮತಿ ಶಿವಾಜಿ ತಾನು ಭಯಗೊಂಡಿರುವೆನೆಂದೂ, ಶರಣಾಗಲು ಬರುವೆನೆಂದೂ ನಿರೋಪವನ್ನು ಕಳಿಸಿದ. ದುಷ್ಟ ಸಂತುಷ್ಟನಾದ. ಅವನ ಸೈನಿಕರೂ ಮೈಮರೆತರು. ಕುರಿ ಬಲಿತಷ್ಟೂ ಕಟುಕನಿಗೆ ಲಾಭ. ಅಫಝಲ್ ಖಾನ್ ಶಿವಾಜಿಯ ನಖಗಳಿಗೆ ಬಲಿಯಾಗಿ ಹೋದ.
ದುಷ್ಟರೊಂದಿಗಿನ ವ್ಯವಹಾರದಲ್ಲಿ ತುಷ್ಯತುದುರ್ಜನನ್ಯಾಯ ಸದಾ ದಾರಿದೀಪ.

ನಷ್ಟಾಶ್ವದಗ್ಧರಥನ್ಯಾಯ


ವಿಶ್ವವೇ ಹಾಗೆ. ಪರಿಪರಿಯ ನಂಟುಗಳಿನೊಂದು ಗಂಟು. ಆ ನಂಟಿನಿಂದಲೇ ಜೀವ ಜಗತ್ತು ನಡೆಯುತ್ತಿರುವುದು. ವಿಕಲತೆಯನ್ನು ಸಕಲತೆಯನ್ನಾಗಿ ಪರಿವರ್ತಿಸುವ ಶಕ್ತಿಯೂ ಇದಕ್ಕಿದೆ. ಭಾರತೀಯ ಸಂಸ್ಕೃತಿಯಲ್ಲಿ ಈ ನಂಟು ಪರಲೋಕಕ್ಕೂ ವ್ಯಾಪಿಸಿದೆ. ಗೀತಾಚಾರ್ಯನೇ ವರ್ಣಿಸುವಂತೆ ’ನಾವು ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುತ್ತೇವೆ, ದೇವತೆಗಳು ಮಳೆಗರೆದು ಸಸ್ಯ ಸಮೃದ್ಧಿಯನ್ನುಂಟುಮಾಡುತ್ತಾರೆ. ಹೀಗೆ ’ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ’ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಿಂದ ಪರಮ ಶ್ರೇಯಸ್ಸು.

ಪತಂಜಲಿ ಮಹರ್ಷಿಯ ಮಹಾಭಾಷ್ಯದಲ್ಲಿ ಕಾಣುವ ಒಂದು ಕಥೆ. ಪರಸ್ಪರ ಸಂಬಂಧವಿಲ್ಲದ ಇಬ್ಬರು ರಥಾರೋಹಿಗಳು ಪ್ರಯಾಣಹೊರಟಿದ್ದರು. ಇಬ್ಬರೂ ಗ್ರಾಮವೊಂದನ್ನು ತಲುಪಿದಾಗ ಅಲ್ಲಿ ಅಗ್ನಿ ಅನಾಹುತವಾಯಿತು. ಒಬ್ಬನ ರಥ ಸುಟ್ಟು ಕರಕಲಾದರೆ ಇನ್ನೊಬ್ಬನ ಕುದುರೆಗಳು ಬೆಂದು ಹೋದವು. ಈಗ ಒಬ್ಬನಲ್ಲಿ ರಥವಿದೆ ಕುದುರೆಗಳಿಲ್ಲ, ಹಾಗಾಗಿ ರಥ ಚಲಿಸದು. ಇನ್ನೊಬ್ಬನಲ್ಲಿ ಕುದುರೆಗಳಿವೆ ಆದರೆ ರಥವಿಲ್ಲ; ದೂರದ ಪ್ರಯಾಣ ಅಸಾಧ್ಯ. ಇಬ್ಬರ ಪ್ರಯಾಣವೂ ಒಂದೇ ಪ್ರದೇಶಕ್ಕೆ. ಅಗ್ನಿಯಿಂದ ಪಾರಾದ ರಥಕ್ಕೆ ಬದುಕುಳಿದ ಕುದುರೆಗಳನ್ನು ಕಟ್ಟಿದರು. ಇಬ್ಬರೂ ಒಟ್ಟಿಗೇ ಪ್ರಯಾಣಿಸಿ ಗಮ್ಯವನ್ನು ಸೇರಿದರು.

ಒಣ ಪ್ರತಿಷ್ಥೆಯೇ ಹೊಂದಾಣಿಕೆಗೆ ಬಾಧಕ. ಅದನ್ನು ಬಿಟ್ಟು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಗುರಿಯನ್ನು ತಲುಪಬಹುದು. ಒಬ್ಬನಲ್ಲಿ ಹಣವಿರಬಹುದು, ಚಾತುರ್ಯವಿರಲಿಕ್ಕಿಲ್ಲ. ಇನ್ನೊಬ್ಬನಲ್ಲಿ ಚಾತುರ್ಯವಿರಬಹುದು ಹಣವಿಲ್ಲದಿರಬಹುದು. ಅಂತಹ ಸಂದರ್ಭದಲ್ಲಿ ಅವರಿಬ್ಬರೂ ಒಟ್ಟಿಗೆ ಸೇರಿದರೆ ಉದ್ಯಮವನ್ನು ಯಶಸ್ವಿಯಾಗಿ ಸಾಧಿಸಬಹುದು.

ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ.

ನಾರಿಕೇಲಫಲಾಂಬುನ್ಯಾಯ:



ಶಿವಾಜಿ ಮಹಾರಾಜ ಕೋಟೆಯೊಂದನ್ನು ಕಟ್ಟಿಸುತ್ತಿದ್ದ. ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನೋಡಿ ’ಇವರೆಲ್ಲ ನನ್ನಿಂದಲೇ ಜೀವನಕ್ಕೆ ಬೇಕಾದ ಆದಾಯವನ್ನು ಪಡೆಯುತ್ತಿದ್ದಾರೆ. ನಾನು ಕೆಲಸ ಕೊಡದಿದ್ದರೆ ಇವರ ಕುಟುಂಬ ಉಪವಾಸ ಬಿದ್ದು ಸಾಯಬೇಕಾಗುತ್ತದೆ’ ಎಂದು ಮನದಲ್ಲೇ ಗರ್ವ ಪಟ್ಟುಕೊಂಡ. ಗುರುಗಳಾದ ರಾಮದಾಸರಿಗೆ ಇದು ತಿಳಿದು ಹೋಯಿತು. ತಕ್ಷಣ ಅಲ್ಲಿ ಪ್ರತ್ಯಕ್ಷರಾದರು. ಕೋಟೆಯನ್ನು ಕಟ್ಟಲು ಸಂಗ್ರಹಿಸಿದ್ದ ಕಲ್ಲೊಂದನ್ನು ಶಿವಾಜಿಯ ಮುಂದೆಯೇ ಒಡೆಯಲು ಕಲ್ಲು ಕುಟುಗನಿಗೆ ಆಜ್ಞಾಪಿಸಿದರು. ಹಾಗೆ ಮಾಡಿದಾಕ್ಷಣ ಕಲ್ಲಿನ ಒಳಗಿಂದ ನೀರು ಒಸರಿತು, ಕಪ್ಪೆಯೊಂದು ಹೊರಗೆ ಜಿಗಿಯಿತು. ’ಈ ಕಪ್ಪೆಯೂ ನಿನ್ನಿಂದಲೇ ಜೀವಿಸಿತ್ತೇ?’ ಎಂದು ರಾಮದಾಸರು ಶಿವಾಜಿಯನ್ನು ಪ್ರಶ್ನಿಸಿದರು. ಶಿವಾಜಿ ನಾಚಿಕೆಯಿಂದ ಅಧೋಮುಖನಾದ.

ಈ ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಆಸ್ತಿಕರು ಅದನ್ನು ದೈವಲೀಲೆ ಎಂದು ಕರೆದರೆ ನಾಸ್ತಿಕರು ಪ್ರಕೃತಿ ವಿಸ್ಮಯ ಎನ್ನುತ್ತಾರೆ.

ಪೂರ್ಣಫಲವೆಂದು ಖ್ಯಾತವಾದ ತೆಂಗಿನ ಕಾಯನ್ನು ನೋಡಿ. ಶೂಲದಿಂದ ಮಾತ್ರ ಸುಲಿಯಬಹುದಾದ ಸಿಪ್ಪೆ, ಬಲವಾದ ಹೊಡೆತದಿಂದ ಮಾತ್ರ ಒಡೆಯಬಹುದಾದ ಗಟ್ಟಿಯಾದ ಚಿಪ್ಪು, ನಂತರ ತಿನ್ನಬಹುದಾದ ಭಾಗ. ಇವೆಲ್ಲವುದರ ಮಧ್ಯೆ ಸಿಹಿಯಾದ ನೀರು. ಅದನ್ನು ಇಟ್ಟವರಾರು ಎಂಬ ಪ್ರಶ್ನೆಗೆ ಉತ್ತರ ಇಂದಿಗೂ ದೊರಕಿಲ್ಲ.

ಅಂತಹ ಪ್ರಶ್ನೆಗೆ ಈ ನ್ಯಾಯವೇ ಉತ್ತರ.

ಬಾದರಾಯಣಸಂಬಂಧ ನ್ಯಾಯ:


ಬಾದರಾಯಣ ವ್ಯಾಸರಿಗೆ ಸಂಬಂಧವಿಲ್ಲದ ನ್ಯಾಯವಿದು. ಈ ನ್ಯಾಯದ ಕುರಿತ ಒಂದು ಲೋಕಕಥೆ ಹೀಗಿದೆ.

ಚಕ್ಕಡಿ ಗಾಡಿಯಲ್ಲಿ ಪ್ರಯಾಣಿಸುವ ಕಾಲವದು. ಒಬ್ಬ ಯಾತ್ರಿಕ ಒಂದು ಹಳ್ಳಿಯಲ್ಲಿ ಪ್ರಯಾಣಿಸುತ್ತಿರುವಾಗ ಗಾಡಿ ಕೆಟ್ಟು ಹೋಯಿತು. ಹಸಿವೆಯಿಂದಲೂ ಬಳಲುತ್ತಿದ್ದ ಆ ಯಾತ್ರಿಕ ಅಲ್ಲಿಯೇ ಇದ್ದ ಮನೆಯನ್ನು ಹೊಕ್ಕ. ಅತ್ಯಂತ ಆತ್ಮೀಯ ಪರಿಚಿತರಂತೆ ಯಜಮಾನನೊಂದಿಗೆ ವ್ಯವಹರಿಸತೊಡಗಿದ. ಸದ್ಗೃಹಸ್ಥನಾದ ಯಜಮಾನನಾದರೋ ತಾವು ಯಾರೆಂದು ಕೇಳುವುದು ಸಭ್ಯತನವಲ್ಲವೆಂದು ತಿಳಿದು ಪತ್ನಿಯ ಕಡೆಯ ಸಂಬಂಧಿಯಿರಬೇಕೆಂದು ಬಗೆದು ಉಪಚರಿಸಿದ. ಪತ್ನಿಯಾದರೋ ಗಂಡನ ಸಂಬಂಧಿಯಿರಬೇಕೆಂದು ಉಪಚರಿಸಿದಳು. 

ಊಟವಾಯಿತು. ವೀಳ್ಯವನ್ನು ಸವಿಯುವಾಗ ಯಜಮಾನ ಕುತೂಹಲ ತಾಳಲಾರದೆ ಕೇಳಿಯೇ ಬಿಟ್ಟ. ನಮಗೂ ನಿಮಗೂ ಯಾವ ರೀತಿಯ ಸಂಬಂಧ?’. ಆ ಯಾತ್ರಿಕ ನಗುತ್ತ ಯಜಮಾನನ ಮನೆಯ ಅಂಗಳದ ತುದಿಯಲ್ಲಿದ್ದ ಬದರೀ(ಬೋರೆ) ಮರವನ್ನು ತೋರಿಸಿ ಹೇಳಿದ

ಅಸ್ಮಾಕಂ ಬದರೀಚಕ್ರಂ ಯುಷ್ಮಾಕಂ ಬದರೀತರುಃ |
ಬಾದರಾಯಣಸಂಬಂಧಾತ್ ಯೂಯಂ ಯೂಯಂ ವಯಂ ವಯಮ್ ||

ನಮ್ಮ ಗಾಡಿಯ ಚಕ್ರ ಬೋರೆ ಮರದಿಂದ ಮಾಡಿದ್ದು. ನಿಮ್ಮ ಮನೆಯ ಅಂಗಳದಲ್ಲಿ ಒಂದು ಬೋರೆ ಮರವಿದೆ. ಹಾಗಾಗಿ ಬಾದರಾಯಣ ಸಂಬಂಧದಿಂದ ನಾವು ನಾವು, ನೀವು ನೀವು.

ಅಷ್ಟರಲ್ಲಿ ಗಾಡಿ ರಿಪೇರಿಯಾಗಿತ್ತು. ಯಾತ್ರಿಕ ಹೊರಟೇ ಬಿಟ್ಟ.

ಇಂದಿಗೂ ಕಾರ್ಯಸಾಧನೆಗಾಗಿ ಏನೇನೋ ಸಂಬಂಧಗಳನ್ನು ಕಲ್ಪಿಸುವಾಗ ಈ ನ್ಯಾಯದ ಬಳಕೆಯಾಗುತ್ತದೆ.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...