Saturday, March 31, 2018

ಅತಿ ಆಸೆ ಗತಿಗೇಡು

ಧರ್ಮಭಾರತೀ ಮಾಸಪತ್ರಿಕೆಯ ಎಪ್ರಿಲ್ ಸಂಚಿಕೆಯ *ಸೂಕ್ತಿ-ಸಂವಾದಿ* ಅಂಕಣದ ಬರಹ

*ಅತಿ ಆಸೆ ಗತಿಗೇಡು*

ಮಾನವನೆಂದ ಮೇಲೆ ಆಸೆ ಇರದಿರುತ್ತದೆಯೆ? ಅದರೆ ಅದು ಅತಿಯಾದರೆ ಪ್ರಾಣಕ್ಕೇ ಸಂಚಕಾರ ಎಂಬುದನ್ನು ತಿಳಿಸುತ್ತದೆ ಈ ಗಾದೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆಸೆ ಹುಟ್ಟುವ ಬಗೆ ಹಾಗೂ ಅದರ ಪರಿಣಾಮಗಳನ್ನು ಸುಂದರವಾಗಿ ವಿಶ್ಲೇಷಿಸಿದ್ದಾನೆ.

*ಧ್ಯಾಯತೋ ವಿಷಯಾನ್ ಪುಂಸಃ*
*ಸಂಗಸ್ತೇಷೂಪಜಾಯತೇ |*
*ಸಂಗಾತ್ಸಂಜಾಯತೇ ಕಾಮಃ* *ಕಾಮಾತ್ಕ್ರೋಧೋಭಿಜಾಯತೇ||*

ವಸ್ತುವಿನ ಬಗ್ಗೆ ಯೋಚಿಸುತ್ತಿರುವಂತೆ ಬೆಳೆಯುವ ಭಾವನಾತ್ಮಕ ಸಂಬಂಧವೇ ಆ ವಸ್ತುವನ್ನು ಪಡೆದುಕೊಳ್ಳುವ ಆಸೆಯನ್ನು ಹುಟ್ಟಿಸುತ್ತದೆ. ಆ ಆಸೆ ಈಡೇರದಿದ್ದರೆ ಅದರಿಂದ ಸಿಟ್ಟು, ಮತಿಭ್ರಷ್ಟತೆ, ಬುದ್ಧಿನಾಶ, ಮುಂದೆ ಸರ್ವನಾಶ ಉಂಟಾಗುತ್ತದೆ.

ಸಂಸ್ಕೃತ ಸುಭಾಷಿತವೊಂದು ಆಸೆಯೆಂಬುದು ವಿಚಿತ್ರವಾದ ಸರಪಣಿಯೆಂದು ಬಣ್ಣಿಸುತ್ತದೆ.

*ಆಶಾ ನಾಮ ಮನುಷ್ಯಾಣಾಂ*
*ಕಾಚಿದಾಶ್ಚರ್ಯಶೃಂಖಲಾ |*
*ಯಯಾ ಬದ್ಧಾಃ ಪ್ರಧಾವಂತಿ*
*ಮುಕ್ತಾಸ್ತಿಷ್ಠಂತಿ ಪಂಗುವತ್ ||*

ಇದು ವಿಚಿತ್ರ ಯಾಕೆಂದರೆ ಇದರಿಂದ ಬಂಧಿಸಲ್ಪಟ್ಟವರು ಜೀವನದಲ್ಲಿ ಓಡುತ್ತಲೇ ಇರುತ್ತಾರೆ. ಮುಕ್ತರಾದವರು ಸ್ಥಿರವಾಗಿ ನಿಲ್ಲುತ್ತಾರೆ.

ಚಿನ್ನದ ಮೊಟ್ಟೆಯನ್ನು ಕೊಡುವ ಕೋಳಿಯನ್ನು ಅತಿ ಆಸೆಯಿಂದ ಕಳೆದುಕೊಂಡ ಮೂರ್ಖನ ಕಥೆ ನಮಗೆ ತಿಳಿದಿದೆ. ದಿನಕ್ಕೊಂದು ಚಿನ್ನದ ನಾಣ್ಯವನ್ನು ಕೊಡುತ್ತಿದ್ದ ನಾಗರಾಜನನ್ನು ಅತಿಯಾದ ಆಸೆಯಿಂದ ಕೊಂದು ತಾನೇ ಮರಣಹೊಂದಿದ ಬ್ರಾಹ್ಮಣಕುವರನ ಕಥೆ ಪಂಚತಂತ್ರದಲ್ಲಿದೆ. ಅತ್ಯಾಶೆಯಿಂದ ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ಬಯಸಿ ಕಷ್ಟವನ್ನನುಭವಿಸಿದ ಮೈದಾಸನ ನಿದರ್ಶನ ನಮ್ಮ ಮುಂದಿದೆ. ಚಿನ್ನದ ಜಿಂಕೆಯ ಆಸೆಯಿಂದ ಯಾತನೆಪಟ್ಟ ಸೀತೆಯ ದೃಷ್ಟಾಂತವನ್ನು ನೋಡಿದ್ದೇವೆ. ಇಷ್ಟೆಲ್ಲ ಓದಿ, ಕೇಳಿ ತಿಳಿದೂ ಆಸೆಯನ್ನು ಮೆಟ್ಟಿ ನಿಲ್ಲಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ಆಸೆಯ ಮುಖಗಳು ಹಲವು. ರುಚಿಯಾದ ಪದಾರ್ಥಗಳನ್ನು ತಿನ್ನುವ ಆಸೆ ಹಲವರಿಗೆ, ಸುಂದರವಾದದ್ದನ್ನು ಅನುಭವಿಸುವ ಕಾಮ ಮತ್ತೆ ಕೆಲವರಿಗೆ. ಇನ್ನು ಕೆಲವರು ಕೀರ್ತಿಯ ಬೆನ್ನು ಬಿದ್ದವರು. ಅದನ್ನೇ ಡಿ.ವಿ.ಜಿ. ಸುಂದರವಾಗಿ ಕಗ್ಗಿಸಿದ್ದಾರೆ.

*ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |*
*ಚಿನ್ನದಾತುರಕಿಂತ ಹೆಣ್ಣುಗಂಡೊಲವು ||*
*ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಣತಮ |*
*ತಿನ್ನುವುದಾತ್ಮವನೆ – ಮಂಕುತಿಮ್ಮ ||*

ಇನ್ನೊಂದೆಡೆ *’ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ’* ಎನ್ನುತ್ತಾರೆ ಡಿವಿಜಿ. ನರನ ವಿವೇಚನೆಯನ್ನು ಭ್ರಷ್ಟಗೊಳಿಸಿ ಆತ್ಮನನ್ನು ವನವಾಸಕ್ಕೆ ಕಳಿಸುವ ಶಕ್ತಿ ಆಶೆಗಿದೆ. ಹಾಗಾಗಿ *’ಆಶೆಗಳ ಕೆಣಕದಿರು’* ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಅಲ್ಲಮ ಪ್ರಭುಗಳು *ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ.....* ಎಂದು ವಚನಿಸಿದ್ದಾರೆ.

ಆಸೆಗೆ ಕೊನೆಯೆಂಬುದಿಲ್ಲ. ಅದಕ್ಕೆ ವಯಸ್ಸು, ಲಿಂಗ, ಜಾತಿ, ಬಡವ, ಬಲ್ಲಿದ ಎಂಬ ಬೇಧವಿಲ್ಲ. ಶ್ರೀಶಂಕರಭಗವತ್ಪಾದರು ಮೋಹಮುದ್ಗರದಲ್ಲಿ ಹೇಳಿದ್ದು ಮಾರ್ಮಿಕವಾಗಿದೆ.

*ಅಂಗಂ ಗಲಿತಂ ಪಲಿತಂ ಮುಂಡಂ*
*ದಶನವಿಹೀನಂ ಜಾತಂ ತುಂಡಮ್ |*
*ವೃದ್ಧೋ ಯಾತಿ ಗೃಹೀತ್ವಾ ದಂಡಂ*
*ತದಪಿ ನ ಮುಂಚತಿ ಆಶಾಪಿಂಡಮ್ ||*

ಜೀರ್ಣದೇಹ, ಬಿಳಿಯಾದ ಕೂದಲು, ಬೊಚ್ಚು ಬಾಯಿ, ಕೈಯಲ್ಲಿ ಕೋಲು ಇಷ್ಟು ಅವಸ್ಥೆಯ ವೃದ್ಧನನ್ನೂ ಆಶೆ ಬಿಡದು.

ಬೆಟ್ಟದಷ್ಟು ಸಂಪತ್ತಿದ್ದರೂ ಅಸಂತುಷ್ಟನಾಗಿದ್ದ ರಾಜನೊಬ್ಬ ಮರದ ಕೆಳಗೆ ಪ್ರಸನ್ನವದನನಾಗಿ ಕುಳಿತಿರುವ ಸಂನ್ಯಾಸಿಯನ್ನು ಕೇಳಿದಂತೆ. ’ಇಷ್ಟಿದ್ದರೂ ನಾನು ಸುಖಿಯಲ್ಲ, ಏನೂ ಇಲ್ಲದ ನಿನ್ನ ಸಂತೋಷದ ಗುಟ್ಟೇನು?’ ಎಂದು. ಆಗ ಆ ಯೋಗಿ ಹೇಳಿದ ಮಾತು ಹೃದಯವನ್ನು ತಟ್ಟುವಂಥದ್ದು.

*ಸ ತು ಭವತಿ ದರಿದ್ರೋ ಯಸ್ಯ ತೃಷ್ಣಾ ವಿಶಾಲಾ|*
*ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ ||*

ಯಾರ ಆಸೆ ದೊಡ್ಡದೊ ಅವರು ಬಡವರು. ಮನಸ್ಸು ತೃಪ್ತವಾದರೆ ಬಡತನವೆಲ್ಲಿ? ಸಿರಿವಂತಿಕೆಯ ಅಳತೆಗೋಲು ಆಶೆಯೇ ಹೊರತು ಸಂಪತ್ತಲ್ಲ. ಆಸೆಯನ್ನು ಗೆದ್ದವನೇ ನಿಜವಾದ ಸಿರಿವಂತ.

*ಮಹಾಬಲ ಭಟ್, ಗೋವಾ*

Tuesday, March 13, 2018

ಸಂಚಿಕೆ ೧೩ *ವೇದವತಿ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ ೧೩

*ವೇದವತಿ*

ಕುಶಧ್ವಜ ಹಾಗೂ ಮಾಲಾವತಿಯರ ಮಗಳು ವೇದವತಿ. ಅವಳು ಹುಟ್ಟಿದಾಕ್ಷಣ ಸೂತಿಕಾಗೃಹದಿಂದ ವೇದಮಂತ್ರಗಳು ಕೇಳಿ ಬಂದುದರಿಂದ ಅವಳಿಗೆ ವೇದವತಿಯೆಂದು ನಾಮಕರಣ ಮಾಡಲಾಯಿತು. ಸಂಸಾರಸಾಗರದಲ್ಲಿ ಈಜಲು ಇಷ್ಟವಿಲ್ಲದೆ ಸಣ್ಣ ವಯಸ್ಸಿನಲ್ಲಿಯೇ ತಪ್ಪಸ್ಸಿಗೆ ಹೊರಟು ನಿಂತಳು.

ಅರಣ್ಯದಲ್ಲಿ ಒಬ್ಬಂಟಿಯಾಗಿ ತಪಸ್ಸನ್ನು ಆಚರಿಸುತ್ತಿದ್ದ ಅವಳನ್ನು ಕಂಡ ರಾವಣ ತನ್ನ ಪುಷ್ಪಕವಿಮಾನದಿಂದ ಇಳಿದು ಅವಳ ಆಶ್ರಮಕ್ಕೆ ಬಂದ. ಅನಿರೀಕ್ಷಿತವಾಗಿ ಆಗಮಿಸಿದ ಅತಿಥಿಯನ್ನು ಯಥೋಚಿತವಾಗಿ ಸ್ವಾಗತಿಸಿದಳು ವೇದವತಿ. ಆದರೆ ಕಾಮುಕ ರಾವಣ ಅವಳ ಮೇಲೆ ಕೈ ಹಾಕಿದ. ಕೋಪೋದ್ರಿಕ್ತಳಾದ ವೇದವತಿಯು ತನ್ನ ತಪಃಪ್ರಭಾವದಿಂದ ಅವನನ್ನು ಸ್ತಂಭೀಭೂತನನ್ನಾಗಿ ಮಾಡಿದಳು. ಕೈ ಕಾಲು ನಾಲಿಗೆಗೆಗಳನ್ನು ಆಡಿಸಲು ಸಾಧ್ಯವಾಗದೆ ರಾವಣ ನಿಶ್ಚೇಷ್ಟಿತನಾದ. ಮನಸ್ಸಿನಲ್ಲೇ ಅವಳಿಗೆ ಶರಣಾದ. ’ಪರಸ್ತ್ರೀಯನ್ನು ಬಲಾತ್ಕಾರದಿಂದ ಕೂಡಿದರೆ ನೀನು ಸಾಯುವೆ. ಹೆಣ್ಣಿನ ದೆಸೆಯಿಂದಲೇ ನಿನಗೆ ಮರಣ ಬರಲಿ’ ಎಂದು ಶಪಿಸಿದಳು.(ಮುಂದೆ ರಾವಣ ಸೀತೆಯನ್ನು ಬಲಾತ್ಕರಿಸದೆ ಮನವೊಲಿಸಲು ಪ್ರಯತ್ನಿಸುವುದಕ್ಕೆ ಈ ಶಾಪವೇ ಕಾರಣ). ದುರುಳನ ಸ್ಪರ್ಶವಾದ ದೇಹವನ್ನು ಇಟ್ಟುಕೊಳ್ಳಲು ಮನಸ್ಸಾಗದೆ ಯೋಗಾಗ್ನಿಯಿಂದ ದಹಿಸಿಕೊಂಡಳು. ಲಕ್ಷ್ಮಿಯ ಅವತಾರವಾಗಿದ್ದ ವೇದವತಿಯೇ ಮುಂದೆ ಸೀತೆಯಾಗಿ ಬಂದು ರಾವಣನ ನಾಶಕ್ಕೆ ಕಾರಣಳಾದಳು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

ಸಂಚಿಕೆ 12 *ಪಾರಸವಿ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 12

*ಪಾರಸವಿ*

ವಿದುರನ ಪಾಲಿಗೆ ಅಪಾರಸವಿಯಾದ ಪಾರಸವಿ ಕೃಷ್ಣನ ಮುಗ್ಧ ಭಕ್ತೆಯರಲ್ಲಿ ಒಬ್ಬಳು. ದಾಸಿಯ ಮಗನಾಗಿ ಹುಟ್ಟಿದರೂ ಮಹಾಜ್ಞಾನಿಯಾಗಿ ಬೆಳೆದ ವಿದುರನಿಗೆ ತಕ್ಕ ಪತ್ನಿಯಾಗಿದ್ದಳು. ಕೃಷ್ಣ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದಾಗ ವಿದುರನ ಮನೆಗೇ ಊಟಕ್ಕೆ ಹೋಗಿದ್ದ. ಹಸ್ತಿನಾವತಿಯ ಮಂತ್ರಿಯಾಗಿದ್ದರೂ ವಿದುರನ ಮನೆಯಲ್ಲಿ ಕಡು ಬಡತನ. ಕೃಷ್ಣನಿಗೆ ಆತಿಥ್ಯ ನೀಡುವ ಆಸೆಯಿದ್ದರೂ ಭೀಷ್ಮಾದಿಗಳನ್ನು ಬಿಟ್ಟು ತಮ್ಮ ಮನೆಗೆ ಕೃಷ್ಣ ಬರುವನೆಂಬ ನಿರೀಕ್ಷೆ ಇರಲಿಲ್ಲ. ಅನಿರೀಕ್ಷಿತವಾಗಿ ಬಂದ ಅವನನ್ನು ಸ್ವಾಗತಿಸುವುದರಲ್ಲಿ ದಂಪತಿಗಳಿಬ್ಬರೂ ಮೈಮರೆತರು. ಹಸಿವೆಯೆಂದ ಕೃಷ್ಣನಿಗೆ ಪಾರಸವಿ ಮನೆಯಲ್ಲಿದ್ದ ಒಂದು ಗುಟುಕು ಹಾಲನ್ನು ತಂದು ಕೊಟ್ಟಳು. ಹಾಲನ್ನು ಕದ್ದು ಕುಡಿದ ಕೈಯಿಂದ ಹೊಳೆಯನ್ನೂ ಹರಿಸಬಲ್ಲೆ ಎಂದು ತೋರಿಸಲೋ ಎಂಬಂತೆ ಕೃಷ್ಣ ಹಾಲಿನ ಹೊಳೆಯನ್ನೇ ಹರಿಸಿದ. ಪಾರಸವಿ ಪರವಶತೆಯಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದು ಹಣ್ಣನ್ನು ಕೊಡುವ ಬದಲು ಸಿಪ್ಪೆಯನ್ನು ಕೊಟ್ಟಳು. ಕೃಷ್ಣನಾದರೋ ಯಶೋದೆಯ ಕೈತುತ್ತಿನ ನಂತರ ಈಗ ಮತ್ತೊಮ್ಮೆ ಸವಿಯಾದ ಊಟ ಮಾಡುತ್ತಿದ್ದೇನೆ ಎನ್ನುತ್ತ ಅದನ್ನೇ ಸವಿದ. ವಿದುರ ಬಂದು ಪತ್ನಿಯನ್ನು ಎಚ್ಚರಿಸಿದ. ’ನೀನು ಬರುವವರೆಗೆ ಬಾಳೆಯ ಹಣ್ಣನ್ನೇ ತಿಂತಿದ್ದೆ. ಈಗ ಸಿಪ್ಪೆಯನ್ನು ತಿನ್ನುವಂತಾಯ್ತು’ ಎಂದು ವಿದುರನೆಡೆಗೆ ನಕ್ಕು ಪಾರಸವಿಯ ಮುಗ್ಧಭಕ್ತಿಗೆ ಮೆಚ್ಚಿದ ಕೃಷ್ಣ ಅವಳನ್ನು ಅನುಗ್ರಹಿಸಿದ. ಪಾರಸವಿಯ ಪಾತ್ರ ಮಹಾಭಾರತದಲ್ಲಿ ಸಣ್ಣದೇ ಆದರೂ ಗುರುತಿಸಬೇಕಾದ್ದು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

ಸಂಚಿಕೆ 11 *ಕರ್ಕಟೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 11

*ಕರ್ಕಟೀ*

ಸನಾತನ ಭಾರತದ ಬ್ರಹ್ಮವಾದಿನಿಯರಲ್ಲಿ ಒಬ್ಬಳು ರಾಕ್ಷಸಿಯೂ ಇದ್ದಳು. ಘೋರಾಕಾರದ ಅವಳ ಹೆಸರು ಕರ್ಕಟಿ. ಅವಳಿಗೆ ಯಾವಾಗಲೂ ಮುಗಿಯದ ಹಸಿವು. ಹಾಗಾಗಿ ಅವಳಿಗೆ ತನ್ನ ಸ್ಥೂಲದೇಹದ ಮೇಲೆ ಜುಗುಪ್ಸೆ ಬಂತು. ಬ್ರಹ್ಮನ ಕುರಿತು ತಪ್ಪಸ್ಸನ್ನು ಮಾಡಿದಳು. ಬ್ರಹ್ಮ ಅವಳಿಗೆ ಸೂಕ್ಷ್ಮ ಶರೀರವನ್ನು ಕೊಟ್ಟ. ಅವಳು ರೋಗಾಣುವಾದಳು. ಕುಮಾರ್ಗದಲ್ಲಿ ಸಾಗುತ್ತಿರುವ ಮಾನವರ ದೇಹವನ್ನು ಪ್ರವೇಶಿಸಿ ರಕ್ತವನ್ನು ಹೀರಿ ಕೊಲ್ಲುತ್ತಿದ್ದಳು. ಸಜ್ಜನರಿಗೆ ಯಾವುದೇ ಪೀಡೆಯನ್ನು ಕೊಡುತ್ತಿರಲಿಲ್ಲ. ಅಷ್ಟಾದರೂ ಅವಳಿಗೆ ಸಮಾಧಾನವಾಗಲಿಲ್ಲ. ಮತ್ತೆ ಸ್ಥೂಲದೇಹವೇ ಬೇಕೆಂದೆನಿಸಿತು. ಮತ್ತೆ ಹಲವು ವರ್ಷಗಳ ಕಾಲ ತಪಸ್ಸನ್ನು ಆಚರಿಸಿದಳು. ತಪಸ್ಸು ಅವಳ ಮನಸ್ಸನ್ನು ಪರಿವರ್ತಿಸಿತು. ದೈಹಿಕ ಹಸಿವೆಯ ಜೊತೆಗೆ ಆಧ್ಯಾತ್ಮದ ಹಸಿವು ಹೆಚ್ಚುತ್ತಿತ್ತು. ಮನಸ್ಸಿನಲ್ಲಿ ಜೀವನದ ಬಗ್ಗೆ, ಪ್ರಪಂಚದ ಬಗ್ಗೆ ವಿವಿಧ ಪ್ರಶ್ನೆಗಳು ಉದ್ಭವಿಸಿದವು.

ಒಂದಿನ ಆಹಾರವನ್ನು ಅರಸುವ ಕಾಲಕ್ಕೆ ಕಾಡಿನಲ್ಲಿ ಇಬ್ಬರು ಮಾನವರು ಗೋಚರಿಸಿದರು. ಅವರನ್ನು ತಿನ್ನುವ ಬಯಕೆಯಾಯಿತು ಅವಳಿಗೆ. ರಾಕ್ಷಸಿಯ ಘೋರ ರೂಪವನ್ನು ಕಂಡೂ ಆ ವ್ಯಕ್ತಿಗಳು ಹೆದರಲಿಲ್ಲ. ಅದು ರಾಕ್ಷಸಿಗೆ ಸೋಜಿಗವನ್ನುಂಟುಮಾಡಿತು. ತನ್ನ ಪ್ರಶ್ನೆಗೆ ಉತ್ತರಿಸಿದರೆ ಬಿಟ್ಟು ಬಿಡುವುದಾಗಿ ಹೇಳಿದಳು.

ಆ ವ್ಯಕ್ತಿಗಳು ಆ ದೇಶದ ರಾಜ ಹಾಗೂ ಮಂತ್ರಿಯಾಗಿದ್ದರು. ರಾಕ್ಷಸಿಯ ಆಧ್ಯಾತ್ಮ ಜ್ಞಾನದ ಹಸಿವನ್ನು ಅವರು ತಣಿಸಿದರು. ಅವರಿಂದ ಪರಮಾತ್ಮನ ಸ್ವರೂಪದ ಬಗ್ಗೆ ತಿಳಿದುಕೊಂಡ ಕರ್ಕಟಿಗೆ ಸಂತಸವಾಯಿತು. ಅವಳು ಅವರಿಗೆ ನಮಸ್ಕರಿಸುತ್ತ “ನೀವು ನನ್ನ ಗುರುಗಳು ನನ್ನಿಂದ ಏನು ಸಹಾಯ ಆಗಬೇಕು” ಎಂದು ಕೇಳಿದಳು. ರಾಜ ತನ್ನ ರಾಜ್ಯದಲ್ಲಿ ಹರಡಿರುವ ಸಾಂಕ್ರಾಮಿಕ ರೋಗದ ಬಗ್ಗೆ ಹೇಳಿದ. ಅದಕ್ಕೆ ಔಷಧಿ ಗಿಡಮೂಲಿಕೆಯ ಅನ್ವೇಷಣೆಗೇ ತಾವು ಕಾಡಿಗೆ ಬಂದುದಾಗಿ ತಿಳಿಸಿದ. ಕರ್ಕಟಿಯಿಂದಲೇ ಆರಂಭವಾಗಿದ್ದ ಆ ರೋಗಕ್ಕೆ ಅವಳೇ ಔಷಧಿಯನ್ನು ಹುಡುಕಿಕೊಟ್ಟಳು. ರೋಗಹರವಾದ ಮಂತ್ರವನ್ನೂ ಉಪದೇಶಿಸಿದಳು. ಅವಳಿಂದ ಉಪದಿಷ್ಟವಾದ ಮಂತ್ರ ಅಥರ್ವವೇದದ ಭಾಗವಾಗಿದೆ. ಕರ್ಕಟಿಯು ಮಂತ್ರದ್ರಷ್ಟಾರಳಾಗಿದ್ದಾಳೆ.

ಮಂತ್ರೋಪದೇಶವನ್ನು ಪಡೆದ ರಾಜ ಅವಳಿಗೆ ನಮಸ್ಕರಿಸಿ ತನ್ನ ರಾಜ್ಯಕ್ಕೆ ಬಂದು ಗೌರವವನ್ನು ಸ್ವೀಕರಿಸುವಂತೆ ಬಿನ್ನವಿಸಿಕೊಂಡ. ಅವನ ಕೋರಿಕೆಯನ್ನು ಮನ್ನಿಸಿ ಅವನ ರಾಜಧಾನಿಗೆ ಬಂದಳು. ಮರಣದಂಡನೆಗೆ ಒಳಗಾಗಿದ್ದ ಅಪರಾಧಿಗಳು ಅವಳ ಆಹಾರವಾದರು. ತೃಪ್ತಳಾದ ರಾಕ್ಷಸಿ ಕಾಡಿಗೆ ಹೋಗಿ ತಪಸ್ಸಿನಲ್ಲಿ ನಿರತಳಾದಳು. ಹಸಿವೆಯಾದಾಗ ರಾಜಧಾನಿಗೆ ಬಂದು ತನಗಾಗಿ ರಾಜ ಕಾಯ್ದಿರಿಸಿದ್ದ ಅಪರಾಧಿಗಳನ್ನು ತಿಂದು ಮತ್ತೆ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದಳು. ಇದು ಅನೇಕ ವರ್ಷಗಳ ಕಾಲ ಮುಂದುವರಿಯಿತು.

ನರಮಾಂಸ ಭಕ್ಷಿಸುವ ರಾಕ್ಷಸಿಯನ್ನೂ ಮಂತ್ರದ್ರಷ್ಟಾರೆಯೆಂದು ಗೌರವಿಸುವ ಸಂಸ್ಕೃತಿ ನಮ್ಮದು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

Saturday, March 10, 2018

ಸಂಚಿಕೆ 10 *ಚಂಡಪತ್ನೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 10

*ಚಂಡಪತ್ನೀ*

ಚಂಡನೆಂಬ ಭಿಲ್ಲ ಯುವಕ ಪಾಂಚಾಲ ರಾಜ ಸಿಂಹಕೇತುವಿನ ಆಪ್ತನಾಗಿದ್ದ. ಬೇಟೆಯಾಡಲು ಹೋಗುವಾಗಲೆಲ್ಲ ಜೊತೆಯಲ್ಲೇ ಹೋಗುವುದರಿಂದ ರಾಜನೊಂದಿಗೆ ಸಲುಗೆ ಬೆಳೆದಿತ್ತು. ಹಾಗೇ ಒಂದಿನ ಕಾಡಿಗೆ ಹೋದಾಗ ಅಲ್ಲೊಂದು ಶಿವಮಂದಿರ ಗೋಚರವಾಯಿತು. ಅದನ್ನು ನೋಡಿ ಚಂಡನ ಮನಸ್ಸಿನಲ್ಲಿ ವಿಚಿತ್ರ ಭಾವನೆಗಳು ಹುಟ್ಟಿದವು. ಅನಾಥವಾಗಿ ಪೂಜೆಯಿಲ್ಲದೆ ಬಿದ್ದಿದ್ದ ಶಿವಲಿಂಗವನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುವ ಮನಸ್ಸಾಯಿತು. ರಾಜನನ್ನು ಕೇಳಿದ. ಮಹಾರಾಜ ಸಮ್ಮತಿಯಿತ್ತುದಷ್ಟೇ ಅಲ್ಲ ಅವನಿಗೆ ಪೂಜಾವಿಧಿಯನ್ನೂ ಬೋಧಿಸಿದ.

ಚಂಡನ ಮಡದಿ ಭಿಲ್ಲನಿ ಕೂಡ ಅಷ್ಟೇ ಶ್ರದ್ಧಾವಂತೆ. ಪತಿಪತ್ನಿಯರಿಬ್ಬರೂ ಭಕ್ತಿಭಾವದಿಂದ ಶಿವನನ್ನು ಪೂಜಿಸುತ್ತ ಆನಂದಿಸುತ್ತಿದ್ದರು. ಶಿವಲಿಂಗದ ಮುಂದೆ ಪರವಶರಾಗಿ ಹಾಡುತ್ತಿದ್ದರು, ಕುಣಿಯುತ್ತಿದ್ದರು. ಭಿಲ್ಲ ಪ್ರತಿದಿನ ತಪ್ಪದೆ ಸ್ಮಶಾನಕ್ಕೆ ಹೋಗಿ ಚಿತಾಭಸ್ಮವನ್ನು ತಂದು ಅರ್ಪಿಸುತ್ತಿದ್ದ. ಅದು ಅವನ ಶಿವಪೂಜೆಯ ಅವಿಭಾಜ್ಯ ಅಂಗವಾಗಿತ್ತು.

ಹೀಗಿರುವಾಗ ಒಂದಿನ ಎಷ್ಟು ಪ್ರಯತ್ನಿಸಿದರೂ ಚಿತಾಭಸ್ಮ ಸಿಗಲೇ ಇಲ್ಲ. ಚಂಡ ಚಿಂತಾಕ್ರಾಂತನಾದ. ತನ್ನ ವ್ರತಕ್ಕೆ ಭಂಗ ಬಂತಲ್ಲ ಎಂದು ಪ್ರಲಾಪಿಸಿದ. ಅವನ ಪ್ರಲಾಪವನ್ನೂ ವ್ರತಭಂಗವನ್ನೂ ಸಹಿಸಲಾಗದ ಭಿಲ್ಲನೀ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಳು.

ತನ್ನ ಪತಿಯ ಪೂಜೆಗೆ ಚಿತಾಭಸ್ಮವನ್ನು ಒದಗಿಸುವ ಸಲುವಾಗಿ ಚಂಡಪತ್ನಿ ತನ್ನನ್ನೇ ದಹಿಸಿಕೊಂಡಳು. ಭಾವೋದ್ವೇಗಕ್ಕೆ ಒಳಗಾಗಿದ್ದ ಚಂಡ ಅವಳ ದೇಹದ ಭಸ್ಮವನ್ನೇ ಶಿವನಿಗೆ ಅರ್ಪಿಸಿ ಪೂಜಿಸಿದ. ಭಸ್ಮಧರನ ಆರಾಧನೆಯಲ್ಲಿ ಮೈಮರೆತ. ಎಂದಿನಂತೆ ಕುಣಿಯಹತ್ತಿದ. ವಾಡಿಕೆಯಂತೆ ತನ್ನ ಪತ್ನಿಯನ್ನು ಕರೆದ. ಪರವಶತೆಯಿಂದ ಹೊರಬಂದ ಅವನಿಗೆ ತನ್ನೊಂದಿಗೆ ನರ್ತಿಸುತ್ತಿರುವ ಮಡದಿಯನ್ನು ನೋಡಿ ಆಶ್ಚರ್ಯವಾಯಿತು. ಶಿವನ ಮಹಿಮೆಯನ್ನರಿತು ಗಂಡಹೆಂಡಿರು ಪುಳಕಿತರಾದರು.

ಚಂಡಪತ್ನಿ ತನ್ನ ದಿಟ್ಟ ನಿರ್ಧಾರ ಹಾಗೂ ತ್ಯಾಗದಿಂದ ಪತಿಗೂ ಶಿವನ ಅನುಗ್ರಹವನ್ನು ಕೊಡಿಸಿದಳು. 

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

Friday, March 9, 2018

ಸಂಚಿಕೆ ೯ *ಸುಮನಾ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ ೯

*ಸುಮನಾ*

ನರ್ಮದೆಯ ತೀರದಲ್ಲಿ ಅಮರಕಂಟಕವೆಂಬ ತೀರ್ಥಕ್ಷೇತ್ರ. ಅಲ್ಲೊಬ್ಬ ಸೋಮಶರ್ಮನೆಂಬ ಸದ್ಗುಣಿ ಬ್ರಾಹ್ಮಣ. ಚ್ಯವನಮಹರ್ಷಿಯ ಪುತ್ರಿ ಸುಮನಾ ಅವನ ಧರ್ಮಪತ್ನಿ. ವಿದುಷಿಯೂ ಧರ್ಮಜ್ಞೆಯೂ ಆಗಿದ್ದ ಅವಳು ಒಂದಿನ ಪತಿಯ ಬಾಡಿದ ಮುಖವನ್ನು ಕಂಡು ಕಾರಣವನ್ನು ಕೇಳಿದಳು. ತನ್ನ ದಾರಿದ್ರ್ಯ ಹಾಗೂ ಪುತ್ರಹೀನತೆಯೇ ತನ್ನ ಚಿಂತೆಗೆ ಕಾರಣವೆಂದು ಸೋಮಶರ್ಮ ತಿಳಿಸಿದ. ಅದನ್ನು ಕೇಳಿ ಸುಮನಾ ಅವನಿಗೆ ತತ್ತ್ವೋಪದೇಶ ಮಾಡಿದಳು. ’ಹಣದ ಚಿಂತೆ ಜೀವನವನ್ನೇ ಸುಡುತ್ತದೆ. ಮಕ್ಕಳನ್ನು ಪಡೆಯುವುದೂ ಪೂರ್ವಕರ್ಮದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಿಗೆ ಮಕ್ಕಳು ಕೆಲ ಕಾಲ ನ್ಯಾಸರೂಪವಾಗಿ ಸಿಕ್ಕಿರುತ್ತಾರೆ. ಅವರು ಸಂಪೂರ್ಣ ಜೀವನ ತಂದೆತಾಯಿಯರೊಂದಿಗಿರದೆ ದುಃಖವನ್ನು ನೀಡುತ್ತಾರೆ. ಇನ್ನು ಕೆಲವರಿಗೆ ಹೋದ ಜನ್ಮದ ಸಾಲಗಾರರು ಮಕ್ಕಳಾಗಿ ಹುಟ್ಟಿರುತ್ತಾರೆ. ಅಂತಹ ಮಕ್ಕಳು ಜನ್ಮದಾತರ ಸಂಪತ್ತನ್ನು ಉಪಭೋಗಿಸುತ್ತ ಕಾಲ ಕಳೆಯುತ್ತಾರೆ. ಮತ್ತೆ ಕೆಲವರಿಗೆ ಶತ್ರುಗಳು ಮಕ್ಕಳಾಗಿ ಹುಟ್ಟಿ ಜೀವನವನ್ನು ನರಕವನ್ನಾಗಿಸುತ್ತಾರೆ. ಕೆಲವು ಗೃಹಸ್ಥರಿಗೆ ಕಳೆದ ಜನ್ಮದಲ್ಲಿ ಉಪಕೃತರಾದವರು ಮಕ್ಕಳಾಗಿ ಹುಟ್ಟಿ ಅವರ ಋಣ ಸಂದಾಯ ಮಾಡುತ್ತಾರೆ. ಕೆಲವರು ಮಾತ್ರ ’ಉದಾಸೀನ’ ಮಕ್ಕಳನ್ನು ಪಡೆಯುತ್ತಾರೆ. ಆ ಮಕ್ಕಳು ಏನನ್ನೂ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ. ಸಂತುಷ್ಟರೂ ಆಗಿರುವುದಿಲ್ಲ, ಕೋಪಿಷ್ಠರೂ ಆಗಿರುವುದಿಲ್ಲ. ಪುತ್ರಹೀನತೆಗೆ ಕಾರಣವನ್ನು ತಿಳಿದುಕೊಳ್ಳಲು ನೀವು ಮಹರ್ಷಿ ವಸಿಷ್ಠರನ್ನು ಕಂಡು ಬನ್ನಿ’ ಎಂದು ಕಾಂತಾಸಮ್ಮಿತವಾಗಿ ಉಪದೇಶಿಸಿದಳು.

ಸೋಮಶರ್ಮ ವಸಿಷ್ಠರನ್ನು ಕಂಡು ತನ್ನ ಪೂರ್ವಜನ್ಮಕೃತ ಪಾಪಲೇಶದ ಬಗ್ಗೆ ತಿಳಿದುಕೊಂಡ. ಅವರ ಮಾರ್ಗದರ್ಶನದಂತೆ ಶ್ರೀಮನ್ನಾರಾಯಣನ ಉಪಾಸನೆ ಮಾಡಿ ಸಿರಿತನವನ್ನು ಪಡೆದುಕೊಂಡ, ಅವನ ಪತ್ನಿ ಸುಮನಾ ಅವನ ಉಪಾಸನೆಗೆ ಸಂಪೂರ್ಣ ಸಹಕಾರವನ್ನಿತ್ತಳು. ಕಾಲಕ್ರಮದಲ್ಲಿ ಸುವ್ರತ ಎಂಬ ಮಗನಿಗೆ ಜನ್ಮ ನೀಡಿದಳು. ಸುವ್ರತನು ಮುಂದೆ ವಿದ್ವಾಂಸನಾಗಿ ಮೆರೆದ. ಹೀಗೆ ಸಕಾಲದಲ್ಲಿ ಗಂಡನಿಗೆ ಮಾರ್ಗದರ್ಶನ ಮಾಡಿ 'ಕರಣೇಷು ಮಂತ್ರೀ' ಎಂಬ ಪತ್ನಿಯ ಲಕ್ಷಣವನ್ನು ಸಾರ್ಥಕಪಡಿಸಿದ ಸುಮನಾ ಗೃಹಿಣಿಯರಿಗೆ ಆದರ್ಶಳಾಗಿದ್ದಾಳೆ.

ಮಹಾಬಲ ಭಟ್, ಗೋವಾ
ಸಂಪರ್ಕ: 9860060373

ಸಂಚಿಕೆ ೮ - ಧರಾ

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೮
ಧರಾ
ದ್ರೋಣ ಹಾಗೂ ಧರಾ ಗಂಧಮಾದನಪರ್ವತದಲ್ಲಿ ಸಂತಾನಕ್ಕಾಗಿ ತಪಶ್ಚರ್ಯ ಮಾಡುತ್ತಿದ್ದ ದಂಪತಿಗಳು. ದ್ರೋಣನು ಪ್ರತಿದಿನ ಭಿಕ್ಷಾಟನೆಯಿಂದ ಗಳಿಸಿದ ಆಹಾರದಿಂದ ಅವರ ಉದರಪೋಷಣೆಯಾಗುತ್ತಿತ್ತು.
ಒಂದಿನ ದ್ರೋಣ ಭಿಕ್ಷಾಟನೆಗೆ ಹೋದ ಸಂದರ್ಭದಲ್ಲಿ ಸ್ಫುರದ್ರೂಪಿ ಯುವಕನೊಬ್ಬ ವೃದ್ಧರಾದ ತಂದೆತಾಯಿಯರೊಂದಿಗೆ ಇವರ ಆಶ್ರಮಕ್ಕೆ ಆಗಮಿಸಿ ಹಸಿವಿನ ಉಪಶಮನ ಮಾಡೆಂದು ಕೋರಿಕೊಂಡ. ಆ ಯುವಕನ ತೇಜಸ್ಸನ್ನು ನೋಡಿ ಸಂತುಷ್ಟಳಾದ ಧರಾ ಅವರನ್ನು ಯಥೋಚಿತವಾಗಿ ಸತ್ಕರಿಸಿ ಪತಿಯು ಆಹಾರವನ್ನು ತರುವವರೆಗೆ ಕಾಯಬೇಕೆಂದು ಬಿನ್ನವಿಸಿಕೊಂಡಳು. ಆ ಯುವಕ ಅಸಹನೆಯಿಂದ ಕುದಿಯಹತ್ತಿದ. ತನ್ನ ತಂದೆ ತಾಯಿಯರು ಹಸಿವಿನಿಂದ ಸಾಯುತ್ತಿದ್ದಾರೆಂದೂ ಅವರಿಗೆ ಆಶ್ರಮದಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಸ್ಥಳವಿಲ್ಲವೆಂದೂ ಜರೆಯತೊಡಗಿದ. ಧರಾ ದುಃಖದಿಂದ ಪರಿಪರಿಯಾಗಿ ಅವನನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಳು. ಸಮಯ ಕಳೆದರೂ ದ್ರೋಣ ಬರದೇ ಇದ್ದಾಗ ಆ ಯುವಕ ಕುಪಿತನಾಗಿ ಹೊರಡಲನುವಾದ. ಅವನ ತಂದೆ ತಾಯಿಯರು ಎದ್ದು ನಿಂತ ಕೂಡಲೇ ಮೂರ್ಛಿತರಾಗಿ ಬಿದ್ದರು. ಧರಾ ನೀರನ್ನು ಸಿಂಪಡಿಸಿ ಅವರನ್ನು ಎಚ್ಚರಗೊಳಿಸಿದಳು.
ಪತಿಯನ್ನು ಕಾಯುತ್ತ ಕುಳಿತರೆ ವೃದ್ಧರ ಪ್ರಾಣಪಕ್ಷಿ ಹಾರಿಹೋಗಬಹುದೆಂದು ಯೋಚಿಸಿ ಧರಾ ಸಮೀಪದಲ್ಲಿಯೇ ಇರುವ ವರ್ತಕನಲ್ಲಿಗೆ ಹೋದಳು. ವರ್ತಕನ ಅಂಗಡಿಯು ಪುರುಷರಿಂದ ತುಂಬಿ ತುಳುಕುತ್ತಿತ್ತು. ಮೊದಲಬಾರಿಗೆ ಮನೆಯಿಂದ ಹೊರಬಂದ ಧರಾಳಿಗೆ ಅಲ್ಲಿಯ ವಾತಾವರಣ ಮುಜುಗರವನ್ನುಂಟುಮಾಡುತ್ತಿತ್ತು. ಕುತ್ಸಿತಬುದ್ಧಿಯ ಪುರುಷರ ವಕ್ರದೃಷ್ಟಿ ಅವಳ ಮೇಲೆ ಬಿತ್ತು. ಅಷ್ಟರಲ್ಲಿ ವರ್ತಕನೂ ಅವಳನ್ನು ನೋಡಿ  ಸೌಂದರ್ಯಕ್ಕೆ ಮಾರುಹೋದ. ಅವಳ ಅಸಹಾಯಕತೆಯನ್ನು ಉಪಯೋಗಿಸಿಕೊಳ್ಳುವ ದುರಾಲೋಚನೆಯಿಂದ ’ನಾನು ಆಹಾರವಸ್ತುಗಳನ್ನು ಕೊಟ್ಟರೆ ಪ್ರತಿಯಾಗಿ ನೀನೇನನ್ನು ಕೊಡುವೆ?’ ಎಂದು ಕೇಳಿದ. ಅದಕ್ಕೆ ಧರಾ ನನ್ನಲೇನೂ ಇಲ್ಲ. ಪತಿಯು ಆಗಮಿಸಿದಾಕ್ಷಣ ಕೊಡಿಸುವೆ’ ಎಂದಳು. ನಿನ್ನಲ್ಲಿರುವುದನ್ನು ಕೊಡುವುದಾಗಿ ಭಾಷೆಯನ್ನಿತ್ತರೆ ಕೊಡುವೆನೆಂದ. ’ನನ್ನಲ್ಲೇನಾದರೂ ಇದ್ದರೆ ನಾರಾಯಣನಾಣೆಯಾಗಿಯೂ ಕೊಡುತ್ತೇನೆ’ ಎಂದು ಮಾತನ್ನು ಕೊಟ್ಟಳು. ಪಾತ್ರೆಯ ತುಂಬ ಹಿಟ್ಟು, ತುಪ್ಪ ಹಾಗೂ ಇತರ ವಸ್ತುಗಳನ್ನು ತುಂಬಿ ಅವಳಿಗೆ ಕೊಟ್ಟು ಅವಳೆದೆಯೆಡೆಗೆ ಕಾಮದೃಷ್ಟಿಯನ್ನು ಹರಿಸುತ್ತ ’ನಿನ್ನ ಎದೆಯಲ್ಲಿರುವ ಎರಡು ಅಮೃತಕಲಶಗಳನ್ನು ನೀಡು’ ಎಂದ. ಧರಾಗೆ ಅರ್ಥವಾಯಿತು. ದೇವರ ಆಣೆ ಮಾಡಿ ಕೊಟ್ಟ ಮಾತನ್ನು ತಪ್ಪುವಂತಿಲ್ಲ. ತನ್ನ ಪಾತಿವ್ರತ್ಯಕ್ಕೆ ಭಂಗ ಬರದಂತೆ ಕೊಟ್ಟ ಮಾತನ್ನು ನಡೆಸಿಕೊಡುವ ಉಪಾಯವನ್ನು ಚಿಂತಿಸಿದಳು. ಒಂದು ಉಪಾಯ ಹೊಳೆದು ಅಲ್ಲಿಯೇ ಇದ್ದ ಹರಿತವಾದ ಚಾಕುವಿನಿಂದ ತನ್ನೆರಡೂ ಸ್ತನಗಳನ್ನು ಕತ್ತರಿಸಿ ವರ್ತಕನಿಗೆ ಕೊಟ್ಟಳು. ಏನಾಯಿತೆಂದು ವರ್ತಕ ದಿಗ್ಭ್ರಾಂತನಾಗಿ ನಿಂತಿರುವಾಗಲೇ ಅವನಿತ್ತ ವಸ್ತುವನ್ನು ತೆಗೆದುಕೊಂಡು ಆಶ್ರಮಕ್ಕೆ ಧಾವಿಸಿದಳು. ಅತಿಥಿಗಳಿಗೆ ಆಹಾರವನ್ನು ಒಪ್ಪಿಸಿ ರಕ್ತಸ್ರಾವದಿಂದ ಕುಸಿದು ಬಿದ್ದಳು.
ಆಶ್ರಮವನ್ನು ಆವರಿಸಿದ ಅಭೂತಪೂರ್ವ ಪ್ರಕಾಶ ಅವಳನ್ನು ಎಚ್ಚರಿಸಿತು. ಯುವಕನ ಸ್ಥಾನದಲ್ಲಿ ಅವಳ ಆರಾಧ್ಯಮೂರ್ತಿ ಶ್ರೀಹರಿಯೂ ವೃದ್ಧದಂಪತಿಗಳ ಸ್ಥಾನದಲ್ಲಿ ಪಾರ್ವತೀಪರಮೇಶ್ವರರೂ ಗೋಚರಿಸಿದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ದ್ರೋಣನೂ ಅನುಗ್ರಹೀತನಾದ. ಧರ್ಮಪಾಲನೆಗಾಗಿ ತನ್ನ ಸ್ತನಗಳನ್ನು ಅರ್ಪಿಸಿದ ಧರಾಳಿಗೆ ಶ್ರೀಹರಿ ವರವನಿತ್ತ - ’ಮುಂದಿನ ಜನ್ಮದಲ್ಲಿ ನಿನ್ನ ಸ್ತನ್ಯಪಾನಮಾಡುತ್ತೇನೆ’. ಈ ಮಹಿಮಾನ್ವಿತ ನಾರಿಯೇ ಮುಂದಿನ ಜನ್ಮದಲ್ಲಿ ಯಶೋದೆಯಾಗಿ ಕೃಷ್ಣನಿಗೆ ಮೊಲೆಹಾಲುಣಿಸುವ ಭಾಗ್ಯವನ್ನು ಪಡೆದಳು.  
ಮಹಾಬಲ ಭಟ್, ಗೋವಾ

Wednesday, March 7, 2018

ಸಂಚಿಕೆ 7 *ಶ್ರುತಾವತೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 7

*ಶ್ರುತಾವತೀ*

ಮಹರ್ಷಿ ಭರದ್ವಾಜನ ಮಗಳು ಶ್ರುತಾವತಿ ಪರಮಸುಂದರಿಯೂ ವಿದ್ಯಾಸಂಪನ್ನೆಯೂ ಆಗಿದ್ದಳು. ಅವಳ ತಪೋನಿಷ್ಠೆಯೂ ಅಗಾಧವಾಗಿತ್ತು. ಇಂದ್ರನನ್ನೇ ಪತಿಯನ್ನಾಗಿ ಪಡೆಯಬೇಕು ಎಂಬುದು ಅವಳ ಮಹದಿಚ್ಛೆಯಾಗಿತ್ತು. ಅದಕ್ಕಾಗಿ ಉಗ್ರ ತಪಸ್ಸನ್ನು ಆರಂಭಿಸಿದಳು. ಅವಳನ್ನು ಪರೀಕ್ಷಿಸುವುದಕ್ಕಾಗಿ ಇಂದ್ರನು ಮಹರ್ಷಿ ವಸಿಷ್ಠರ ರೂಪದಲ್ಲಿ ಅವಳ ಆಶ್ರಮಕ್ಕಾಗಮಿಸಿದ. ತಪೋಧನರಾದ ವಸಿಷ್ಠರನ್ನು ಕಂಡು ಅವರನ್ನು ಸ್ವಾಗತಿಸಿ ಉಪಚರಿಸಿದಳು. ಅವರು ಅವಳಿಗೆ ಐದು ಬದರೀ ಕಾಯಿಗಳನ್ನು ನೀಡಿ ಅದರಿಂದ ಅಡುಗೆ ಮಾಡಬೇಕೆಂದೂ, ಅವರು ಸರೋವರಕ್ಕೆ ಹೋಗಿ ಆಹ್ನಿಕವನ್ನು ಪೂರೈಸಿ ಬರುವುದಾಗಿಯೂ ತಿಳಿಸಿದರು.

ಶ್ರುತಾವತಿಯಲ್ಲಿರುವ ಕಟ್ಟಿಗೆಯ ಸಂಗ್ರಹಗಳೆಲ್ಲ ಮುಗಿದರೂ ಕಾಯಿಗಳು ಬೇಯಲಿಲ್ಲ. ವಸಿಷ್ಠರು ಆಗಮಿಸುವ ಸಮಯವಾಗುತ್ತಲಿತ್ತು. ಏನು ಮಾಡುವುದೆಂದು ತಿಳಿಯದೆ ತನ್ನ ಕಾಲುಗಳನ್ನೇ ಒಲೆಯಲ್ಲಿ ಸೇರಿಸಿದಳು. ಕಾಲುಗಳು ಸುಡುತ್ತಿದ್ದರೂ ಧ್ಯೇಯಸಾಧನೆಯೇ ಅವಳ ಗುರಿಯಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ವಸಿಷ್ಥರ ರೂಪದ ಇಂದ್ರ ಅವಳನ್ನು ಎಬ್ಬಿಸಿ ಅನುಗ್ರಹಿಸಿದ.

ಹಿಮಾಲಯದಲ್ಲಿನ ಶ್ರುತಾವತಿಯ ಆಶ್ರಮ ಪರಿಸರ ಬದರಾಪಚನತೀರ್ಥ ಎಂದು ಪ್ರಸಿದ್ಧವಾಗಿದೆ ಎಂದು ಮಹಾಭಾರತದಲ್ಲಿ ಉಲ್ಲೇಖವಾಗಿದೆ. 

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

Tuesday, March 6, 2018

ಸಂಚಿಕೆ 6 *ಉಶಿಜಾ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 6

*ಉಶಿಜಾ*

ಮಮತಾ ಎಂಬ ಸಾಧ್ವಿ ನಾರಿಯು ಗರ್ಭವತಿಯಾಗಿದ್ದಾಗ ಅವಳ ಮೈದುನ ಬೃಹಸ್ಪತಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಗರ್ಭದಲ್ಲಿರುವ ಪಿಂಡ ಅದಕ್ಕೆ ಅಡ್ಡಿಯಾಗಿದ್ದರಿಂದ ಹುಟ್ಟುವ ಮಗು ಕುರುಡಾಗಲೆಂದು ಶಪಿಸಿದ್ದ. ಅದರಂತೆ ದೀರ್ಘತಮ ಮಹರ್ಷಿ ಹುಟ್ಟು ಕುರುಡನಾಗಿ ಜನ್ಮ ತಳೆದ. ಅವನ ಕೈ ಹಿಡಿದ ಮಡದಿ ಪ್ರದ್ವೇಷಿಣಿಯೂ ಹೆಸರಿಗೆ ತಕ್ಕಂತೆ ಅವನನ್ನು ದ್ವೇಷಿಸುತ್ತಿದ್ದಳು. ಒಂದಿನ ಗೌತಮಾದಿ ಮಕ್ಕಳ ಸಹಾಯದಿಂದ ಅಂಧ ಗಂಡನನ್ನು ಗಂಗಾನದಿಯಲ್ಲಿ ಎಸೆದು ಬಿಟ್ಟಳು.

ಗಂಗಾನದಿಯಲ್ಲಿ ತೇಲುತ್ತಿದ್ದ ಋಷಿಯನ್ನು ನೋಡಿದ ಅಂಗರಾಜ್ಯಾಧಿಪತಿ ಬಲಿಯು ಅವನನ್ನು ತನ್ನರಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ. ಮುನಿಯ ಸೇವೆಗೆ ಸ್ವತಃ ರಾಣಿಯೇ ನಿಂತಳು. ಅನೇಕ ದಿನಗಳವರೆಗೆ ಸೇವೆ ಮಾಡಿ ಬೇಸತ್ತ ಅವಳು ತನ್ನ ದಾಸಿ ಉಶಿಜಾಳನ್ನು ಕಳಿಸಿದಳು.

ಬುದ್ಧಿಮತಿಯೂ ಗುಣವತಿಯೂ ಉಶಿಜಾ ಶ್ರದ್ಧೆಯಿಂದ ಮುನಿಯ ಸೇವೆಯನ್ನು ಮಾಡಿದಳು. ಅವಳ ಸೇವಾತತ್ಪರತೆ ಹಾಗೂ ಆಧ್ಯಾತ್ಮಜ್ಞಾನದಾಹಕ್ಕೆ ಮೆಚ್ಚಿದ ಋಷಿಯು ಅವಳನ್ನು ಪತ್ನಿಯಾಗಿ ಸ್ವೀಕರಿಸಿದ. ದೀರ್ಘತಮನ ತತ್ತ್ವೋಪದೇಶದಿಂದ ಉಶಿಜಾ ಬ್ರಹ್ಮವಾದಿನಿಯಾದಳು. ಕಕ್ಷೀವಾನ್ ಹಾಗೂ ದೀರ್ಘಶ್ರವ ಎಂಬ ಪ್ರಸಿದ್ಧ ಋಷಿಗಳು ಉಶಿಜಾಳ ಮಕ್ಕಳು. ಕಕ್ಷೀವಾನ್ ಮಹರ್ಷಿಯ ಮಗಳೇ ಪ್ರಸಿದ್ಧ ಬ್ರಹ್ಮವಾದಿನಿಯಾದ ಘೋಷಾ. ಋಗ್ವೇದದ ಪ್ರಥಮ ಮಂಡಲದ  ೧೧೬ ರಿಂದ ೧೨೧ ವರೆಗಿನ ಸೂಕ್ತಗಳ ಋಷಿ ಕಕ್ಷೀವಾನ್. ಋಷಿಯ ನಾಮ ತೆಗೆದುಕೊಳ್ಳುವಾಗ ’ಕಕ್ಷೀವಾನ್ ದೈರ್ಘತಮಃ ಔಶಿಜಃ’ ಎಂದು ಉಶಿಜಾಳಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.

ಮಹಾಬಲ ಭಟ್, ಗೋವಾ
ಸಂಪರ್ಕ: ೯೮೬೦೦೬೦೩೭೩

Monday, March 5, 2018

ಸಂಚಿಕೆ 5 - ಘುಷ್ಮಾ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ 5
ಘುಷ್ಮಾ
ದೇವಗಿರಿ ಪ್ರಾಂತದಲ್ಲೊಬ್ಬ ಬ್ರಾಹ್ಮಣ. ಸುಧರ್ಮನೆಂದು ಅವನ ಹೆಸರು. ಸುದೇಹಾ ಅವನ ಧರ್ಮಪತ್ನಿ. ಅನ್ಯೋನ್ಯರಾಗಿದ್ದ ದಂಪತಿಗಳು ಅನೇಕ ವರ್ಷಗಳವರೆಗೂ ಸಂತಾನವಾಗದೆ ಪರಿತಪಿಸುತ್ತಿದ್ದರು. ಒಂದಿನ ಸುದೇಹಾ ತನ್ನ ತಂಗಿ ಘುಷ್ಮಾಳನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಅವಳ ಒತ್ತಾಯಕ್ಕೆ ಮಣಿದು ಸುಧರ್ಮ ಘುಷ್ಮಾಳನ್ನು ಮದುವೆಯಾದ.

ಘುಷ್ಮಾ ಶಿವನ ಪರಮಭಕ್ತೆಯಾಗಿದ್ದಳು. ದಿನವೂ ಮಣ್ಣಿನ ಶಿವಲಿಂಗವನ್ನು ಮಾಡಿ ಪೂಜಿಸಿ ಸರೋವರದಲ್ಲಿ ವಿಸರ್ಜಿಸುತ್ತಿದ್ದಳು. ಅಕ್ಕತಂಗಿಯರು ಸವತಿಯರಾಗಲಿಲ್ಲ. ಬಲು ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದರು. ಕಾಲಕ್ರಮದಲ್ಲಿ ಘುಷ್ಮಾ ಮಗನೊಬ್ಬನನ್ನು ಹೆತ್ತಳು. ಮಗನ ಆಗಮನಾನಂತರ ಸುದೇಹಳ ಮನೋಭೂಮಿಕೆಯಲ್ಲಿ ಬದಲಾವಣೆಯಾಯಿತು. ವಂಶೋದ್ಧಾರಕನನ್ನು ಹೆತ್ತ ಘುಷ್ಮಾಳಿಗೆ ಗಂಡನ ಪ್ರೀತಿ ಹೆಚ್ಚು ಸಿಗುವುದೆಂಬ ಮಾತ್ಸರ್ಯಭಾವ ಬಲಿಯಿತು. ಮಗನಿಗೆ ಮದುವೆಯೂ ಆಯಿತು. ಸೊಸೆ ಬಂದ ಮೇಲಂತೂ ತನ್ನ ಮಹತ್ತ್ವ ಕಡಿಮೆಯಾಗುವುದೆಂದು ಯೋಚಿಸುತ್ತ ಮಾತ್ಸರ್ಯ ದ್ವೇಷಕ್ಕೆ ತಿರುಗಿತು. ಒಂದಿನ ಮಲಗಿರುವ ಮಗನನ್ನು ಕೊಂದು ಸರೋವರಕ್ಕೆ ಎಸೆದಳು. ತನ್ನ ಗಂಡನನ್ನು ಎಬ್ಬಿಸಲು ಬಂದ ಅವಳ ಸೊಸೆ ಹಾಸಿಗೆಯ ಮೇಲೆ ಗಂಡನನ್ನು ಕಾಣದೆ ರಕ್ತಕಲೆಗಳಿರುವುದನ್ನು ನೋಡಿ ಅಳುತ್ತ ಘುಷ್ಮಾಳಿಗೆ ವಿಷಯವನ್ನು ತಿಳಿಸಿದಳು. ಶಿವಪೂಜೆಯಲ್ಲಿ ನಿರತಳಾಗಿದ್ದ ಅವಳು ವಿಚಲಿತಳಾಗಲಿಲ್ಲ. ಭಕ್ತಿಯಿಂದ ಪೂಜೆಯನ್ನು ಮುಗಿಸಿ ಲಿಂಗ ವಿಸರ್ಜನೆ ಮಾಡುತ್ತಿರುವಾಗ ಮಗ ಸರೋವರದಿಂದ ಎದ್ದು ಬಂದು ನಮಸ್ಕರಿಸಿದ. ಮಲತಾಯಿಯ ಮೇಲೆ ಸಿಟ್ಟುಗೊಂಡ ಅವನನ್ನು ಘುಷ್ಮಾ ಸಮಾಧಾನಪಡಿಸಿದಳು. ಅಷ್ಟರಲ್ಲಿ ಪ್ರತ್ಯಕ್ಷನಾದ ಶಿವನಲ್ಲಿಯೂ ಸುದೇಹಳಿಗೆ ಸದ್ಬುದ್ಧಿಯನ್ನು ಕೊಡುವಂತೆ ಪ್ರಾರ್ಥಿಸಿ, ಅದೇ ಪ್ರದೇಶದಲ್ಲಿ ಜ್ಯೋತಿರ್ಲಿಂಗರೂಪದಲ್ಲಿ ನೆಲೆನಿಲ್ಲಬೇಕೆಂದು ಕೇಳಿಕೊಂಡಳು. ಘುಷ್ಮಾಳ ಕ್ಷಮಾಗುಣವನ್ನು ಮೆಚ್ಚಿದ ಶಿವ ಘುಷ್ಮೇಶ್ವರನೆಂಬ ಹೆಸರಿಂದ ಅಲ್ಲಿ ನೆಲೆನಿಂತ.
ಮಹಾಬಲ ಭಟ್, ಗೋವಾ

ಸಂಚಿಕೆ 4 - ಆತ್ರೇಯಿ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ 4
ಆತ್ರೇಯಿ
ಸಪ್ತರ್ಷಿಗಳಲ್ಲಿ ಒಬ್ಬನಾದ ಅತ್ರಿ ಮಹರ್ಷಿ ಹಾಗೂ ಅನಸೂಯಾರ ಮಗಳು ಆತ್ರೇಯಿ. ತಾಯಿಯಂತೆ ಸಕಲವಿದ್ಯಾಪಾರಂಗತೆಯೂ ಕಲ್ಯಾಣಗುಣಸಂಪನ್ನೆಯೂ ಆಗಿದ್ದಳು. ಅಗ್ನಿಯ ಮಗ ಅಂಗಿರ ಮಹರ್ಷಿಯನ್ನು ವರಿಸಿದ ಅವಳು ಅನುಕೂಲ ಸತಿಯಾಗಿ ಅವನ ಧರ್ಮಕಾರ್ಯಗಳಲ್ಲಿ ಸಹಚರಿಸುತ್ತಿದ್ದಳು. ಆದರೆ ಅಂಗಿರನು ಅಗ್ನಿಯ ಮಗನಾದುದರಿಂದ ಸದಾ ಅವಳ ಮೇಲೆ ಉರಿಯುತ್ತಿದ್ದ. ಕಠೋರವಚನಗಳಿಂದ ನಿಂದಿಸುತ್ತಿದ್ದ. ಆಂಗೀರಸನೇ ಮೊದಲಾದ ಮಕ್ಕಳು ಅವನಿಗೆ ತಿಳಿ ಹೇಳಿದರೂ ಬದಲಾಗಲಿಲ್ಲ. ಅಪಮಾನದಿಂದ ಬೇಸತ್ತ ಆತ್ರೇಯಿ ಅಗ್ನಿದೇವನ ಮೊರೆ ಹೋದಳು. ಅಗ್ನಿಗೆ ಪರಿಸ್ಥಿತಿಯ ಅರಿವಾಯಿತು. ಅವನು ತನ್ನ ಸೊಸೆಗೆಂದ ’ಮಗಳೆ, ನನ್ನ ಮಗನಾದುದರಿಂದಲೇ ಅವನಿಗೆ ಈ ಸ್ವಭಾವ ಬಂದಿದೆ. ಆದರೆ ನನ್ನಷ್ಟೇ ಪವಿತ್ರಳಾಗಿರುವ ನಿನಗೆ ಅದನ್ನು ಬದಲಾಯಿಸುವ ಶಕ್ತಿಯಿದೆ. ನಾನು ನನ್ನ ಮಗನನ್ನು ಅಗ್ನಿಯಲ್ಲಿ ಕುಳಿತು ತಪಸ್ಸನ್ನಾಚರಿಸಲು ಪ್ರೇರೇಪಿಸುತ್ತೇನೆ. ಆಗ ನೀನು ನದೀರೂಪದಲ್ಲಿ ಅವನನ್ನು ಆವರಿಸು. ಆಗ ಅವನ ಉಗ್ರ ಸ್ವಭಾವ ಶಾಂತವಾಗುತ್ತದೆ.’
ಗಂಡ ಅಗ್ನಿಪ್ರವೇಶ ಮಾಡುವುದು ಆತ್ರೇಯಿಗೆ ಹೆದರಿಕೆಯನ್ನು ಹುಟ್ಟಿಸಿತು. ಅಗ್ನಿಯೇ ಅವಳ ಭಯವನ್ನು ನಿವಾರಿಸಿದ. ’ಪಂಚ ಮಹಾಭೂತಗಳು ಅವನನ್ನು ಏನೂ ಮಾಡಲಾರವು. ಹೆದರದಿರು. ನೀನು ಅವನನ್ನು ಆವರಿಸಿಕೊಳ್ಳುವುದರಲ್ಲಿಯೂ ದೋಷವಿಲ್ಲ. ’ಆತ್ಮಾ ವೈ ಪುತ್ರನಾಮಾಸಿ’ ಎಂಬ ಶ್ರುತಿವಚನದಂತೆ ಅವನ ಮಕ್ಕಳಿಗೆ ನೀನು ತಾಯಿಯಾಗಿರುವುದರಿಂದ ಅವನಿಗೂ ಮಾತೃಸಮಾನಳೇ ಆಗಿದ್ದೀಯೆ. ಪುತ್ರವತಿಯಾದ ಮಡದಿ ತಾಯಿಗೆ ಸಮಾನಳು. ಶಂಕೆಯಿಲ್ಲದೆ ನದೀರೂಪದಿಂದ ಅವನನ್ನು ಆವರಿಸು’ ಎಂದು ಧೈರ್ಯ ತುಂಬಿದನು.
ಅನತಿ ಕಾಲದಲ್ಲಿಯೇ ಅಂಗಿರಮಹರ್ಷಿ ಅಗ್ನಿಯಲ್ಲಿ ಕುಳಿತು ತಪಸ್ಸನ್ನಾರಂಭಿಸಿದ. ಆತ್ರೇಯಿ ನದಿಯಾಗಿ ಅವನನ್ನು ಆವರಿಸಿದಳು. ಅಂಗಿರನ ಸ್ವಭಾವ ಬದಲಾಯಿತು. ಶಾಂತಸ್ವಭಾವದಿಂದ ಪತ್ನಿಯೊಡನೆ ಸಂಸಾರಯಾತ್ರೆಯನ್ನು ಮುಂದುವರಿಸಿದ.
ಗಂಡನ ಪರುಷ ಸ್ವಭಾವವನ್ನು ಬದಲಿಸಿದ ಈ ನದಿ ’ಪರುಷ್ಣಿ’ ಎಂದು ಹೆಸರಾಯಿತು. ಈಗ ಅದನ್ನು ರಾವೀ ನದಿಯೆಂದು ಕರೆಯಲಾಗುತ್ತದೆ.

ಮಹಾಬಲ ಭಟ್, ಗೋವಾ

ಸಂಚಿಕೆ ೩ - ಧರ್ಮವ್ರತಾ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೩
ಧರ್ಮವ್ರತಾ
ಧರ್ಮ ಹಾಗೂ ವಿಶ್ವರೂಪೆಯರ ಮಗಳಾದ ಧರ್ಮವ್ರತಾ ಕೌಮಾರ್ಯದಲ್ಲಿಯೇ ತಪಸ್ಸಿನಲ್ಲಿ ನಿರತಳಾಗಿದ್ದಳು. ಬ್ರಹ್ಮಮಾನಸಪುತ್ರನಾದ ಮರೀಚಿಯು ಅವಳ ತಪಸ್ಸನ್ನು ನೋಡಿ ಮೆಚ್ಚಿ ಪತ್ನಿಯೆಂದು ಅಂಗೀಕರಿಸಿದನು. ಧರ್ಮಿಷ್ಠೆಯಾದ ಅವಳು ಪತಿಯಲ್ಲಿ ದೇವರನ್ನು ಕಾಣುತ್ತ ಆಧ್ಯಾತ್ಮ ಸಾಧನೆಯಲ್ಲಿ ನಿರತಳಾಗಿದ್ದಳು.
ಒಂದಿನ ಪತಿಯ ಸೇವೆಯಲ್ಲಿ ನಿರತಳಾಗಿದ್ದ ಸಮಯದಲ್ಲಿ ಮಾವನಾದ ಬ್ರಹ್ಮದೇವ ಅಲ್ಲಿಗೆ ಆಗಮಿಸಿದ. ಗೃಹಿಣಿಯಾಗಿ ಅವನನ್ನು ಸ್ವಾಗತಿಸುವುದು ಕರ್ತವ್ಯವೆಂದು ಯೋಚಿಸಿದ ಧರ್ಮವ್ರತಾ ಪತಿಸೇವೆಯನ್ನು ಬಿಟ್ಟು ಮಾವನನ್ನು ಉಪಚರಿಸಿದಳು. ಇದು ಮರೀಚಿಗೆ ರುಚಿಸಲಿಲ್ಲ. ಅವಳ ಮೇಲೆ ಸಿಟ್ಟುಗೊಂಡು ಕಲ್ಲಾಗೆಂದು ಶಾಪ ಕೊಟ್ಟ. ಆಗ ಅವಳು ’ಬ್ರಹ್ಮದೇವ ನಿಮ್ಮ ತಂದೆ ಹಾಗೂ ಗುರು. ಅವರು ಮನೆಗೆ ಬಂದಾಗ ಅವರನ್ನು ಉಪಚರಿಸಬೇಕಾದ್ದು ನಿಮ್ಮ ಕರ್ತವ್ಯವಾಗಿತ್ತು. ನಿಮ್ಮ ಸಹಧರ್ಮಚಾರಿಣಿಯಾಗಿ ನಾನು ಅದನ್ನು ಮಾಡಿದ್ದೇನೆ. ಆದರೆ ನೀವು ವಿನಾಕಾರಣ ನನ್ನನ್ನು ಶಪಿಸಿದ್ದೀರಿ. ನಿಮ್ಮನ್ನು ನಾನು ಗುರುವೆಂದು ಸ್ವೀಕರಿಸಿದ್ದೇನೆ. ಹಾಗಾಗಿ ಪ್ರತಿಶಾಪ ನೀಡುವ ಶಕ್ತಿಯಿದ್ದರೂ ಕೊಡಲಾರೆ.’  ಎಂದಳು. ತನ್ನ ಸತೀತ್ವಶಕ್ತಿಯಿಂದ ಶಾಪವನ್ನು ತಡೆಹಿಡಿದು ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡಿದಳು. ಸಂಪ್ರೀತನಾದ ನಾರಾಯಣ ಪ್ರತ್ಯಕ್ಷನಾದಾಗ ತನ್ನನ್ನು ಶಾಪದಿಂದ ಪಾರು ಮಾಡೆಂದು ಬೇಡಿಕೊಂಡಳು. ತಪಸ್ವಿ ಮರೀಚಿಯ ಶಾಪ ಸುಳ್ಳಾಗದೆಂದು ತಿಳಿಸಿದ ವಿಷ್ಣು ಶಿಲೆಯ ರೂಪದಲ್ಲಿ ಇರುವ ಅವಳಲ್ಲಿ ಸಕಲದೇವತೆಗಳೂ ನೆಲೆಸುವರೆಂದು ಅನುಗ್ರಹಿಸಿದನು.
ಇಂದು ಗಯಾಕ್ಷೇತ್ರದಲ್ಲಿ ಪೂಜೆಗೊಳ್ಳುತ್ತಿರುವ ಕಲ್ಲು ಇದೇ ಎಂದು ಅಗ್ನಿಪುರಾಣ ನಮಗೆ ತಿಳಿಸಿಕೊಡುತ್ತದೆ.
ಮಹಾಬಲ ಭಟ್, ಗೋವಾ

ಸಂಚಿಕೆ ೨ - ಸಾವಿತ್ರೀ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೨
ಸಾವಿತ್ರೀ
ರಾಜರ್ಷಿ ಅಶ್ವಪತಿಯ ಮಗಳು ವೇದವೇದಾಂಗಗಳಲ್ಲಿ ಪಾರಂಗತಳಾಗಿದ್ದ ಸಾವಿತ್ರಿ ನಾರದರಿಂದ ದ್ಯುಮತ್ಸೇನನ ಮಗ ಸತ್ಯವಾನನ ಗುಣವಿಶೇಷಗಳನ್ನು ತಿಳಿದು ಅವನನ್ನೇ ಪತಿಯನ್ನಾಗಿ ಸ್ವೀಕರಿಸಲು ಸಂಕಲ್ಪ ಮಾಡಿದಳು. ಅವನ ಆಯುಷ್ಯವಿರುವುದು ಇನ್ನೊಂದೇ ವರ್ಷ ಎಂದು ನಾರದರು ಹೇಳುವಷ್ಟರಲ್ಲಿ ಅವಳು ನಿರ್ಧಾರ ಮಾಡಿಯಾಗಿತ್ತು. ತಂದೆ ತಾಯಿಯರು ಎಷ್ಟು ಹೇಳಿದರೂ ಮಾನಸಿಕ ವ್ಯಭಿಚಾರವನ್ನು ಮಾಡಲು ಅವಳ ಮನಸ್ಸು ಒಪ್ಪಲಿಲ್ಲ. ಪತಿಗೆ ಅನುಕೂಲೆಯಾಗಿ, ಅತ್ತೆ ಮಾಂವಂದಿರ ಮೆಚ್ಚಿನ ಸೊಸೆಯಾಗಿ ಮನೆ ತುಂಬಿದ ಅವಳು ಕಷ್ಟವನ್ನು ದಿಟ್ಟವಾಗಿ ಎದುರಿಸುವ ಸಂಕಲ್ಪವನ್ನು ಮಾಡಿದ್ದಳು. ವರುಷ ತುಂಬುವ ಆ ದಿನದಂದು ಅಗ್ನಿಹೋತ್ರಕ್ಕಾಗಿ ಕಟ್ಟಿಗೆ ತರಲು ಕಾಡಿಗೆ ತೆರಳಿದ ಸತ್ಯವಾನನ ಜೊತೆಗೆ ತಾನೂ ಹೊರಟಳು.
ವಿಧಿ ನಿಯಮದಂತೆ ಯಮ ಸತ್ಯವಾನನ ಆತ್ಮವನ್ನು ಕೊಂಡೊಯ್ಯಲು ಭೂಲೋಕಕ್ಕೆ ಬಂದ. ನಿಶ್ಚೇಷ್ಟಿತವಾಗಿ ಪ್ರಾಣೋತ್ಕೃಮಣಕ್ಕೆ ಸಿದ್ಧವಾಗಿರುವ ದೇಹವನ್ನು ತನ್ನ ತೊಡೆಯ ಮೇಲಿರಿಸಿಕೊಂಡು ವಿಲಪಿಸುತ್ತಿರುವ ಸಾವಿತ್ರಿಯ ಎಂದು ನಿಂತ.
ಅಂತಹ ವಿಪತ್ತಿನ ಸನ್ನಿವೆಷದಲ್ಲೂ ಸಾವಿತ್ರಿ ಧೃತಿಗೆಡಲಿಲ್ಲ. ಯಮನ ಮೇಲೆ ಪ್ರಶ್ನೆಗಳ ಬಾಣಗಳನ್ನು ಪ್ರಯೋಗಿಸಿದಳು. ಗಹನವಾದ ಆಧ್ಯಾತ್ಮ ತತ್ತ್ವಗಳನ್ನು ಯಮ ಅವಳಿಗೆ ತಿಳಿಸಿಕೊಟ್ಟ. ಪತಿಯ ಪ್ರಾಣಕ್ಕೆ ಪ್ರತಿಯಾಗಿ ಯಮ ದಯಪಾಲಿಸಿದ ಮೂರು ವರಗಳನ್ನು ಚಾಣಾಕ್ಷಮತಿ ಸಾವಿತ್ರಿ ಚತುರತೆಯಿಂದ ಉಪಯೋಗಿಸಿಕೊಂಡಳು. ಒಂದನೆಯ ವರದಿಂದ ಅತ್ತೆಮಾವಂದಿರಿಗೆ ದೃಷ್ಟಿಯನ್ನೂ, ಎರಡನೆಯ ವರದಿಂದ ಕಳೆದುಕೊಂಡ ರಾಜ್ಯವನ್ನೂ ಮೂರನೆಯ ವರದಿಂದ ನೂರು ಮಕ್ಕಳಾಗುವ ಅನುಗ್ರಹವನ್ನೂ ಪಡೆದಳು. ಮೂರನೆಯ ವರವನ್ನು ದಯಪಾಲಿಸಿದ ಯಮನಿಗೆ ತಾನು ಸೋತದ್ದು ಅರಿವಿಗೆ ಬಂತು. ತನ್ನ ವರ ಸತ್ಯವಾಗಬೇಕಾದರೆ ಮಹಾ ಪತಿವ್ರತೆಯಾಗಿದ್ದ ಅವಳ ಪತಿ ಜೀವಿಸುವುದು ಅನಿವಾರ್ಯ ಎಂಬುದನ್ನು ತಿಳಿದ ಯಮ ಸತ್ಯವಾನನ ಪ್ರಾಣವನ್ನು ಹಿಂದಿರುಗಿಸಿದ.
ದಿಟ್ಟತನ ಹಾಗೂ ಧ್ಯೇಯನಿಷ್ಠೆಗೆ ನಿದರ್ಶನಳಾಗಿ ಇಂದಿಗೂ ಸಾವಿತ್ರಿ ಜನಮಾನಸದಲ್ಲಿ ಅಮರಳಾಗಿದ್ದಾಳೆ.
(ಇದು ಮಹಾಭಾರತದ ವನಪರ್ವದಲ್ಲಿ ಯುಧಿಷ್ಥಿರನಿಗೆ ಮಾರ್ಕಂಡೇಯ ಮುನಿ ಹೇಳುವ ಉಪಕಥೆ)
ಮಹಾಬಲ ಭಟ್, ಗೋವಾ

Thursday, March 1, 2018

ಸನಾತನ ಭಾರತದ ಸ್ತ್ರೀರತ್ನಗಳು-ದ್ವಿತೀಯ ಅವತರಣಿಕೆ

ಪ್ರಸ್ತಾವನೆ

ಆತ್ಮೀಯ ಮಿತ್ರರೇ,

ಕಳೆದ ವರ್ಷ ಮಾರ್ಚ್ ತಿಂಗಳಿಡೀ ಸನಾತನ ಭಾರತದ ಸ್ತ್ರೀರತ್ನಗಳನ್ನು ಕುರಿತು ನಾನು ಹಂಚಿಕೊಂಡ ಮಾಹಿತಿಯನ್ನು ತಾವೆಲ್ಲ ಓದಿ, ಓದಿಸಿ ನನ್ನನ್ನು ಪ್ರೋತ್ಸಾಹಿಸಿದ್ದೀರಿ. ಈ ವರ್ಷವೂ ಅಂತಹ ಕೆಲವು ರತ್ನಗಳನ್ನು ಹಂಚಿಕೊಳ್ಳುವ ಇಚ್ಛೆ ನನ್ನದು. ವಿವಿಧ ಮೂಲಗಳಿಂದ ಇನ್ನಷ್ಟು ನಾರೀಮಣಿಗಳ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸುತ್ತಿದ್ದೇನೆ. ಇವರೆಲ್ಲ ನಿಜವಾಗಿಯೂ ಇದ್ದರೆ ಅಥವಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ ಎಂಬುದರ ಬಗ್ಗೆ ನಿಖರವಾಗಿ ಹೇಳುವಷ್ಟು ಆಳವಾದ ಸಂಶೋಧನೆಯನ್ನಂತೂ ನಾನು ಮಾಡಿಲ್ಲ. ಅವರು ಕಾಲ್ಪನಿಕರೇ ಆದರೂ ಸಿನಿಮಾ ಅಥವಾ ಧಾರಾವಾಹಿಯ ಪಾತ್ರಗಳನ್ನೋ, ಕಥೆ ಕಾದಂಬರಿಗಳಲ್ಲಿ ಬರುವ ವ್ಯಕ್ತಿಗಳನ್ನೋ ನಮ್ಮ ಜೀವನದೊಂದಿಗೆ ಸಮನ್ವಯಿಸಿ ನೋಡುವಂತೆ ಈ ಮಹಿಳೆಯರ ಚರಿತ್ರೆಯಿಂದಲೂ ಪ್ರೇರಣೆಯನ್ನು ಪಡೆದರೆ ತಪ್ಪೇನಲ್ಲ. ಇದು ಇಂದು ನಿನ್ನೆಯೋ ಕಲ್ಪಿಸಿ ಬರೆದದ್ದೇನೂ ಅಲ್ಲ. ಶತಮಾನಗಳ ಹಿಂದೆ ರಚಿತವಾದ ಗ್ರಂಥಗಳಲ್ಲಿ ಉಲ್ಲಿಖಿತವಾದದ್ದು. ಅಂದಿನ ಕಾಲದಲ್ಲಿಯೂ ಮಹಿಳೆಯರ ಸ್ಥಾನಮಾನದ ಬಗ್ಗೆ ಇಂತಹ ಕಲ್ಪನೆಗಳಿದ್ದವು ಎಂಬುದೇ ಸಾಕಷ್ಟು ಹೆಮ್ಮೆ ಪಡುವ ಸಂಗತಿಯಾಗುತ್ತದೆ. ಏನೇ ಇರಲಿ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸದೆ, ಧ್ಯೇಯವನ್ನು ಮಾತ್ರ ಸ್ವೀಕರಿಸಬೇಕೆಂದು ನನ್ನ ಸವಿನಯ ಬಿನ್ನಹ.

ಇಂದು ಸಾಮಾಜಿಕ ಜಾಲತಾಣಗಳು ಕೂಡ ಜ್ಞಾನದ ಆಗರಗಳಾಗಿವೆ. ನಿಮ್ಮ ಸಾಹಿತ್ಯಿಕ ಹಾಗೂ ಹರಟೆಯ ಬಳಗಗಳಲ್ಲಿ ಇದನ್ನು ಹಂಚಿಕೊಂಡು ಜ್ಞಾನಪ್ರಸಾರದಲ್ಲಿ ಕೈಜೋಡಿಸಿ.

ಇತಿ ತಮ್ಮವ

ಮಹಾಬಲ ಭಟ್, ಗೋವಾ

(ಈ ಲೇಖನಸರಣಿಯ ಮೊದಲ ಹಾಗೂ ಈ ಅವತರಣಿಕೆಗಳ ಲೇಖನಗಳು www.sujnanam.blogspot.com ನಲ್ಲಿ ಲಭ್ಯ.)

ಸಂಚಿಕೆ ೧

ಚೂಡಾಲಾ

ಸೌರಾಷ್ಟ್ರದ ರಾಜಕನ್ಯೆ ಚೂಡಾಲಾ ವೇದಶಾಸ್ತ್ರಗಳಲ್ಲಿ ಪಾರಂಗತಳೂ ಯೋಗಸಿದ್ಧಿಯನ್ನು ಪಡೆದವಳೂ ಆಗಿದ್ದಳು. ಮಾಲವ ನರೇಶ ಶಿಖಿಧ್ವಜನನ್ನು ವರಿಸಿ, ಸಂಸಾರ ಸುಖವನ್ನು ಅನುಭವಿಸುತ್ತಲೇ ಪತಿಯನ್ನು ಆಧ್ಯಾತ್ಮಮಾರ್ಗದಲ್ಲಿ ಕರೆದೊಯ್ದಳು. ಶಿಖಿಧ್ವಜನಿಗೆ ದೇಹದಂಡನೆಯ ಮೂಲಕ ಸಾಧನೆ ಮಾಡುವ ತಪಶ್ಚರ್ಯಾದಿಗಳಲ್ಲಿ ಶ್ರದ್ಧೆಯಿತ್ತು. ಒಂದಿನ ರಾತ್ರಿ ಅರಮನೆಯನ್ನು ಬಿಟ್ಟ ಅರಸ ವನದಲ್ಲಿ ತಪಸ್ಸನ್ನಾರಂಭಿಸಿದ. ಅವನನ್ನು ಹುಡುಕಿಕೊಂಡು ಬಂದ ಚೂಡಾಲಾ ಅಲುಗಾಡಿಸಿದರೂ ಸಮಾಧಿ ಸ್ಥಿತಿಯಿಂದ ಏಳಲಿಲ್ಲ. ಚೂಡಾಲಾ ಅರಮನೆಗೆ ಹಿಂದಿರುಗಿ ಬಂದು ರಾಜ್ಯಸೂತ್ರವನ್ನು ಕೈಗೆತ್ತಿಕೊಂಡಳು. ಕೆಲ ದಿನಗಳ ನಂತರ ಮಂತ್ರಿಗಳಿಗೆ ರಾಜ್ಯದ ಜವಾಬ್ದಾರಿಯನ್ನು ವಹಿಸಿ ತನ್ನ ಯೌಗಿಕ ಶಕ್ತಿಯಿಂದ ಕುಂಭನೆಂಬ ಪುರುಷನಾಗಿ ಪರಿವರ್ತನೆಯನ್ನು ಹೊಂದಿ ಪತಿಯೆಡೆಗೆ ಬಂದಳು. ಬೆಳಗಿನ ಹೊತ್ತು ಅವನನ್ನು ಸಂಧಿಸಿ ಅವನೊಂದಿಗೆ ಇರಲು ಅನುಮತಿಯನ್ನು ಪಡೆದಳು.  ಸಂಜೆಯಾಗುತ್ತಲೇ ಹಗಲಿನಲ್ಲಿ ಗಂಡಾಗಿಯೂ ರಾತ್ರಿಯಲ್ಲಿ ಹೆಣ್ಣಾಗಿಯೂ ಇತುವಂತೆ ದುರ್ವಾಸರ ಶಾಪ ತನಗೆ ತಟ್ಟಿದೆಯೆಂದು ತಿಳಿಸಿ ರಾತ್ರಿಯೂ ಅಲ್ಲಿರಲು ಅವಕಾಶವನ್ನು ಬೇಡಿದಳು. ಈಗಾಗಲೇ ಗಂಡು-ಹೆಣ್ಣು ಎಂಬ ಭೇದಭಾವವನ್ನು ಮೆಟ್ಟಿ ನಿಂತಿದ್ದ ಶಿಖಿಧ್ವಜ ನಿರಾಕರಿಸಲಿಲ್ಲ. ರಾತ್ರಿಯಲ್ಲಿ ಮದನಿಕೆ ಎಂಬ ಸುಂದರ ಸ್ತ್ರೀಯಾಗಿ ಪರಿವರ್ತನೆಯನ್ನು ಹೊಂದಿ ಶಿಖಿಧ್ವಜನನ್ನು ಕಾಮೋದ್ರೇಕಕ್ಕೆ ಒಳಪಡಿಸಲೂ ಯತ್ನಿಸಿದಳು. ಆದರೆ ಶಿಖಿಧ್ವಜ ಯಾವುದೇ ಪ್ರಚೋದನೆಗೊಳಗಾಗಲಿಲ್ಲ. ಅವಳು ಮಾಡುವ ಯಾವ ಕ್ರಿಯೆಯನ್ನೂ ವಿರೋಧಿಸಲೂ ಇಲ್ಲ. ನಿರ್ಲಿಪ್ತ ಭಾವದಿಂದ ಪತ್ನಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ.

ಕುಂಭನ ವೇಷದಲ್ಲಿದ್ದ ತನ್ನ ಹೆಂಡತಿಯ ಮಾರ್ಗದರ್ಶನದಂತೆ ತಾನಂಟಿಕೊಂಡಿರುವ ಒಂದೊಂದೇ ವಸ್ತುವನ್ನು ಶಿಖಿಧ್ವಜ ತ್ಯಜಿಸಿದ, ಆಶ್ರಮ, ದಂಡ, ಕಮಂಡಲ, ಆಸನ, ಜಪಮಾಲೆ ಎಲ್ಲವನ್ನೂ ಬಿಟ್ಟಾಯಿತು. ಕೊನೆಗೆ ದೇಹವನ್ನೂ ತ್ಯಜಿಸುವ ಹಂತಕ್ಕೆ ಬಂದ. ಆಗ ಚೂಡಾಲಾ ಅವನಿಗೆ ದೇಹಧಾರಣೆ ಮಾಡಿಯೂ ಜೀವನ್ಮುಕ್ತನಾಗಿ ಉಳಿಯುವ ಬಗೆಯನ್ನು ತೋರಿಸಿಕೊಟ್ಟಳು. ಅವನು ಆ ಸ್ಥಿತಿಯನ್ನು ತಲುಪಿದ ಮೇಲೆ ಮತ್ತೆ ಅವನನ್ನು ರಾಜ್ಯಕ್ಕೆ ಕರೆತಂದು ಕರ್ತವ್ಯದಲ್ಲಿ ತೊಡಗಿಸಿದಳು. ಪದ್ಮಪತ್ರದ ಮೇಲಿನ ನೀರ ಹನಿಗಳಂತೆ ನಿರ್ಲಿಪ್ತರಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ನಡೆಸಿ ಪರಂಧಾಮವನ್ನು ಸೇರಿದರು. (ಯೋಗವಾಸಿಷ್ಠದಲ್ಲಿರುವ ಕಥೆ. ವಾಲ್ಮೀಕಿರಾಮಾಯಣದ ಒಂದು ಭಾಗವೆಂದು ಪ್ರತೀತಿ)

ಮಹಾಬಲ ಭಟ್, ಗೋವಾ
ಸಂಪರ್ಕ: ೯೮೬೦೦೬೦೩೭೩

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...