ಮಹಿಳಾ ದಿನಾಚರಣೆಗೆ ವಿಶಿಷ್ಟ
ಲೇಖನ ಸರಣಿ
ಸನಾತನ ಭಾರತದ
ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೨
ಸಾವಿತ್ರೀ
ರಾಜರ್ಷಿ ಅಶ್ವಪತಿಯ ಮಗಳು ವೇದವೇದಾಂಗಗಳಲ್ಲಿ ಪಾರಂಗತಳಾಗಿದ್ದ ಸಾವಿತ್ರಿ ನಾರದರಿಂದ
ದ್ಯುಮತ್ಸೇನನ ಮಗ ಸತ್ಯವಾನನ ಗುಣವಿಶೇಷಗಳನ್ನು ತಿಳಿದು ಅವನನ್ನೇ ಪತಿಯನ್ನಾಗಿ ಸ್ವೀಕರಿಸಲು
ಸಂಕಲ್ಪ ಮಾಡಿದಳು. ಅವನ ಆಯುಷ್ಯವಿರುವುದು ಇನ್ನೊಂದೇ ವರ್ಷ ಎಂದು ನಾರದರು ಹೇಳುವಷ್ಟರಲ್ಲಿ ಅವಳು
ನಿರ್ಧಾರ ಮಾಡಿಯಾಗಿತ್ತು. ತಂದೆ ತಾಯಿಯರು ಎಷ್ಟು ಹೇಳಿದರೂ ಮಾನಸಿಕ ವ್ಯಭಿಚಾರವನ್ನು ಮಾಡಲು ಅವಳ
ಮನಸ್ಸು ಒಪ್ಪಲಿಲ್ಲ. ಪತಿಗೆ ಅನುಕೂಲೆಯಾಗಿ, ಅತ್ತೆ ಮಾಂವಂದಿರ ಮೆಚ್ಚಿನ ಸೊಸೆಯಾಗಿ ಮನೆ ತುಂಬಿದ
ಅವಳು ಕಷ್ಟವನ್ನು ದಿಟ್ಟವಾಗಿ ಎದುರಿಸುವ ಸಂಕಲ್ಪವನ್ನು ಮಾಡಿದ್ದಳು. ವರುಷ ತುಂಬುವ ಆ ದಿನದಂದು
ಅಗ್ನಿಹೋತ್ರಕ್ಕಾಗಿ ಕಟ್ಟಿಗೆ ತರಲು ಕಾಡಿಗೆ ತೆರಳಿದ ಸತ್ಯವಾನನ ಜೊತೆಗೆ ತಾನೂ ಹೊರಟಳು.
ವಿಧಿ ನಿಯಮದಂತೆ ಯಮ ಸತ್ಯವಾನನ ಆತ್ಮವನ್ನು ಕೊಂಡೊಯ್ಯಲು ಭೂಲೋಕಕ್ಕೆ ಬಂದ.
ನಿಶ್ಚೇಷ್ಟಿತವಾಗಿ ಪ್ರಾಣೋತ್ಕೃಮಣಕ್ಕೆ ಸಿದ್ಧವಾಗಿರುವ ದೇಹವನ್ನು ತನ್ನ ತೊಡೆಯ ಮೇಲಿರಿಸಿಕೊಂಡು
ವಿಲಪಿಸುತ್ತಿರುವ ಸಾವಿತ್ರಿಯ ಎಂದು ನಿಂತ.
ಅಂತಹ ವಿಪತ್ತಿನ ಸನ್ನಿವೆಷದಲ್ಲೂ ಸಾವಿತ್ರಿ ಧೃತಿಗೆಡಲಿಲ್ಲ. ಯಮನ ಮೇಲೆ ಪ್ರಶ್ನೆಗಳ
ಬಾಣಗಳನ್ನು ಪ್ರಯೋಗಿಸಿದಳು. ಗಹನವಾದ ಆಧ್ಯಾತ್ಮ ತತ್ತ್ವಗಳನ್ನು ಯಮ ಅವಳಿಗೆ ತಿಳಿಸಿಕೊಟ್ಟ.
ಪತಿಯ ಪ್ರಾಣಕ್ಕೆ ಪ್ರತಿಯಾಗಿ ಯಮ ದಯಪಾಲಿಸಿದ ಮೂರು ವರಗಳನ್ನು ಚಾಣಾಕ್ಷಮತಿ ಸಾವಿತ್ರಿ
ಚತುರತೆಯಿಂದ ಉಪಯೋಗಿಸಿಕೊಂಡಳು. ಒಂದನೆಯ ವರದಿಂದ ಅತ್ತೆಮಾವಂದಿರಿಗೆ ದೃಷ್ಟಿಯನ್ನೂ, ಎರಡನೆಯ
ವರದಿಂದ ಕಳೆದುಕೊಂಡ ರಾಜ್ಯವನ್ನೂ ಮೂರನೆಯ ವರದಿಂದ ನೂರು ಮಕ್ಕಳಾಗುವ ಅನುಗ್ರಹವನ್ನೂ ಪಡೆದಳು.
ಮೂರನೆಯ ವರವನ್ನು ದಯಪಾಲಿಸಿದ ಯಮನಿಗೆ ತಾನು ಸೋತದ್ದು ಅರಿವಿಗೆ ಬಂತು. ತನ್ನ ವರ
ಸತ್ಯವಾಗಬೇಕಾದರೆ ಮಹಾ ಪತಿವ್ರತೆಯಾಗಿದ್ದ ಅವಳ ಪತಿ ಜೀವಿಸುವುದು ಅನಿವಾರ್ಯ ಎಂಬುದನ್ನು ತಿಳಿದ
ಯಮ ಸತ್ಯವಾನನ ಪ್ರಾಣವನ್ನು ಹಿಂದಿರುಗಿಸಿದ.
ದಿಟ್ಟತನ ಹಾಗೂ ಧ್ಯೇಯನಿಷ್ಠೆಗೆ ನಿದರ್ಶನಳಾಗಿ ಇಂದಿಗೂ ಸಾವಿತ್ರಿ ಜನಮಾನಸದಲ್ಲಿ ಅಮರಳಾಗಿದ್ದಾಳೆ.
(ಇದು ಮಹಾಭಾರತದ ವನಪರ್ವದಲ್ಲಿ ಯುಧಿಷ್ಥಿರನಿಗೆ ಮಾರ್ಕಂಡೇಯ ಮುನಿ ಹೇಳುವ ಉಪಕಥೆ)
ಮಹಾಬಲ ಭಟ್, ಗೋವಾ
No comments:
Post a Comment