Tuesday, February 5, 2019

ಅಗತಿಕಗತಿನ್ಯಾಯ:


ದುಃಶಾಸನನು ಸೀರೆಯನ್ನು ಸೆಳೆಯುತ್ತಿರುವಾಗ ದ್ರೌಪದಿ ಮಾನವನ್ನು ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡಿದಳು. ಆದರೂ ಸಾಧ್ಯವಾಗಲಿಲ್ಲ. ಮಾನ ಕಾಪಾಡಬೇಕಾಗಿದ್ದ ಐವರು ಶೂರ ಗಂಡಂದಿರು ಜೂಜಿನಲ್ಲಿ ತಮ್ಮತನವನ್ನೇ ಸೋತು ಅಸಹಾಯಕರಾಗಿ ಕುಳಿತಿದ್ದರು. ತನ್ನೆಲ್ಲ ಪ್ರಯತ್ನವೂ ವಿಫಲವಾದಾಗ, ’ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’ ಎರಡೂ ಕೈಯನ್ನೆತ್ತಿದಳು. ಆಗ ಭಗವಂತ ಧಾವಿಸಿ ಬಂದು ಅಕ್ಷಯಾಂಬರವನ್ನಿತ್ತ.

ನಮಗೆ ಕಷ್ಟ ಬಂದಾಗ ಎಲ್ಲ ರೀತಿಯ ಮಾನವ ಪ್ರಯತ್ನವನ್ನು ಮಾಡಿ ಅಗತಿಕರಾದಾಗ ಭಗವಂತನನ್ನು ನೆನೆಯುತ್ತೇವೆ. ಸತಾಂ ಗತಿಯಾದ ಭಗವಂತ ಅಗತಿಕಗತಿಯಾಗುತ್ತಾನೆ.

ಇನ್ನೊಂದು ಮುಖದಲ್ಲಿಯೂ ಈ ನ್ಯಾಯವನ್ನು ವಿವೇಚಿಸಬಹುದು. ಜೀವನ ಸಹಚರರನ್ನು ಹುಡುಕುವ ಎಷ್ಟೋ ಜನರು ಮೊದಲೆಲ್ಲ ತಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕವರನ್ನು ಹುಡುಕುತ್ತ ಸಿಗದೆ ಇರುವಾಗ ಗತಿಯಿಲ್ಲದೆ ಯಾರನ್ನೋ ಒಬ್ಬರನ್ನು ವರಿಸುತ್ತಾರೆ. ಜಗತ್ತಿನಲ್ಲಿ ಎಷ್ಟೋ ವಸ್ತುಗಳು ಹಾಗೆಯೇ. ನಾವು ಬಯಸುವ ಮಟ್ಟದ್ದು ಸಿಗಲಿಕ್ಕಿಲ್ಲ. ಹುಡುಕಿ ಹುಡುಕಿ ಸಾಕಾಗಿ ಏನೋ ಒಂದು ಸಿಕ್ಕರೆ ಸಾಕು ಎಂದು ಹೊಂದಿಕೊಳ್ಳುತ್ತೇವೆ.

ನೀರಲ್ಲಿ ಮುಳುಗುತ್ತಿರುವವನೊಬ್ಬ ಜೀವ ಉಳಿಸಿಕೊಳ್ಳಲು ಕ್ಷುಲ್ಲಕವಾದ ಹುಲ್ಲು ಕಡ್ಡಿಯನ್ನೂ ಆಶ್ರಯಿಸುತ್ತಾನೆ. ಬೇರೇನೂ ಇಲ್ಲದಿರುವಾಗ ಕ್ಷುಲ್ಲಕವೂ ಮಹತ್ತ್ವವನ್ನು ಪಡೆಯುತ್ತದೆ. ಆಪದ್ಧರ್ಮವೂ ಅದನ್ನೇ ಹೇಳುವುದು. ಬಾಯಾರಿ ಜೀವ ಹೋಗುವ ಹೊತ್ತಿಗೆ ಕಶ್ಮಲವಾದ ನೀರೂ ಗಂಗಾಜಲವೇ ಆದೀತು.

ಅಕ್ಷಿಪಾತ್ರನ್ಯಾಯ


ಒಂದು ಸಣ್ಣ ಧೂಳಿನ ಕಣ ನಮಗೆ ಏನು ಮಾಡಬಲ್ಲದು? ಮೈಗೆ ಹತ್ತಿದರೆ ಕೊಡವಿಕೊಳ್ಳಬಹುದು. ಸೂಕ್ಷ್ಮವಾದ ಮೂಗಿನೊಳಗೆ ಹೊಕ್ಕರೆ ಸೀನು ತೆಗೆದು ಹೊರಹಾಕಬಹುದು. ಆದರೆ ಅದೇ ಕಣ ಅತಿ ಸೂಕ್ಷ್ಮವಾದ ಕಣ್ಣನ್ನು ಹೊಕ್ಕರೆ ಜಗತ್ತೇ ಕಾಣದಂತಾಗುವುದು. ಹೊರಹಾಕಲು ಹರಸಾಹಸ ಮಾಡಬೇಕಾದೀತು. ಕಣ್ಣೀರಧಾರೆಯನ್ನೇ ಹರಿಸಬೇಕಾದೀತು. ಅಸಹನೀಯ ನೋವನ್ನನುಭವಿಸಬೇಕಾದೀತು.

ನೋವು ಸಣ್ಣದೋ ದೊಡ್ದದೋ ಎನ್ನುವುದು ಅದನ್ನು ಅನುಭವಿಸುವವರನ್ನು ಅವಲಂಬಿಸಿರುತ್ತದೆ. ಕಠಿಣ ಹೃದಯಿಯು ದೊಡ್ಡ ನೋವನ್ನೂ ತಡೆದುಕೊಳ್ಳಬಲ್ಲ. ಮೃದುಹೃದಯವುಳ್ಳವನಿಗೆ ಸಣ್ಣ ಸಣ್ಣ ವಿಚಾರಗಳೂ ಅಸಹನೀಯ ನೋವನ್ನುಂಟುಮಾಡಬಹುದು.

ಶಿಕ್ಷೆಯ ವಿಷಯದಲ್ಲೂ ಹಾಗೆಯೇ. ಪಾತ್ರತ್ವವನ್ನು ಅರಿತು ನೀಡಬೇಕಾಗುತ್ತದೆ. ದೊಡ್ಡವರಿಗೆ ವಿಧಿಸುವ ಶಿಕ್ಷೆಯನ್ನೇ ಚಿಕ್ಕ ಮಕ್ಕಳಿಗೂ ವಿಧಿಸಲಾಗದು. ಹಾಗಾಗಿ ಬಾಲಾಪರಾಧಿಗಳಿಗೆ ಪ್ರತ್ಯೇಕ ಶಿಕ್ಷೆಯ ವ್ಯವಸ್ಥೆಯೇ ಇದೆ. ಸೂಕ್ಷ್ಮಮನಸ್ಥಿತಿಯವರಿಗೆ ಸಣ್ಣ ಶಿಕ್ಷೆಯೂ ದೊಡ್ದ ನೋವನ್ನುಂಟುಮಾಡಬಹುದು. ಕೋಣನಿಗೆ ಲತ್ತೆಯ ಪೆಟ್ಟು ಬೇಕಾಗುತ್ತದೆ. ಆದರೆ ಜಾಣನಿಗೆ ಮಾತಿನ ಪೆಟ್ಟೇ ನೋವನ್ನು ಕೊಡಬಲ್ಲದು.


ನಮ್ಮ ಮಾತು ಕೃತಿಗಳು ನಮ್ಮ ದೃಷ್ಟಿಯಲ್ಲಿ ಮೃದುವಾಗಿಯೇ ಇರಬಹುದು. ಆದರೆ ಅವೇ ಕೆಲವೊಮ್ಮೆ ಇನ್ನೊಬ್ಬರಿಗೆ ನೋವನ್ನುಂಟುಮಾಡಬಹುದು. ಇಲ್ಲಿ ನಮ್ಮ ಕಟುತ್ವಕ್ಕಿಂತ ಅವರ ಮೃದುತ್ವ ಕಾರಣವಾಗಿರುತ್ತದೆ. ಹಾಗಾಗಿ ಮಾತನಾಡುವಾಗ, ಕೃತಿಯನ್ನು ಎಸಗುವಾಗ ಫಲಾನುಭವಿಗಳನ್ನು ಲಕ್ಷ್ಯದಲ್ಲಿರಿಸಿಕೊಳ್ಳುವುದು ಅತ್ಯವಶ್ಯಕ ಎಂಬುದು ಈ ನ್ಯಾಯದ ತಿರುಳು.

ಮಂಡೂಕತೋಲನನ್ಯಾಯ:



ಚಂಚಲತೆಗೆ ಹೆಸರಾದ ಪ್ರಾಣಿ ಕಪ್ಪೆ. ಒಂದೆಡೆ ನಿಲ್ಲುವುದೇ ಕಡಿಮೆ. ಅಪಾಯದ ಸ್ವಲ್ಪ ಸೂಚನೆ ಸಿಕ್ಕರೂ ಹಾರಿಬಿಡುತ್ತದೆ. ಅಂತಹ ಒಂದಿಷ್ಟು ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದರೆ ಹೇಗೆ?

ಒಂದು ಕಪ್ಪೆಯನ್ನು ತೆಗೆದು ತಟ್ಟೆಯಲ್ಲಿಟ್ಟರೆ ಇನ್ನೊಂದು ಹೊರ ಹಾರುತ್ತದೆ. ಅದನ್ನು ಒಳಹಾಕುವಷ್ಟರಲ್ಲಿ ಇನ್ನೆರಡು ಜಿಗಿಯುತ್ತವೆ. ಒಟ್ಟಿನಲ್ಲಿ ಎಲ್ಲ ಕಪ್ಪೆಗಳನ್ನು ಒಮ್ಮೆಲೇ ಪಾತ್ರೆಯಲ್ಲಿಟ್ಟು ತೂಕವನ್ನು ನೋಡುವುದು ಕಷ್ಟಸಾಧ್ಯವೇ.
ಮಕ್ಕಳಲ್ಲಿಯೂ ಅದಮ್ಯ ಉತ್ಸಾಹ ತುಂಬಿಕೊಂಡಿರುವುದರಿಂದ ಒಂದೆಡೆ ಕೂಡಿಸುವುದು ಕಷ್ಟ. ಆಗಲೂ ಈ ನ್ಯಾಯದ ಬಳಕೆಯಾಗುತ್ತದೆ.

ನಮ್ಮ ಮನಸ್ಸೂ ಹಾಗೇ. ಒಂದು ಉತ್ತಮಗುಣವನ್ನು ಅರ್ಜಿಸುವಷ್ಟರಲ್ಲಿ ಇನ್ನೊಂದು ಹೊರಹಾರಿರುತ್ತದೆ. ಎಲ್ಲ ಕಲ್ಯಾಣಗುಣಗಳನ್ನು ಒಮ್ಮೆಲೇ ಕಲೆಹಾಕುವುದು ಸುಲಭದ ಮಾತಲ್ಲ. ಅದೇ ರೀತಿ ದುರ್ಗುಣಗಳೂ ಹೊರ ಹಾಕಿದಷ್ಟೂ ಮತ್ತೆ ಮತ್ತೆ ಬಂದು ಕೂರುತ್ತವೆ.

ಸಂಘಟನೆಯೂ ಹಾಗೆ. ಒಂದಿಬ್ಬರು ಒಳಸೇರಿದರೆ ಇನ್ಯಾರೋ ಹೊರಹೋಗುತ್ತಾರೆ. ವಿವಿಧ ಸ್ವಭಾವದ ಜನರನ್ನೆಲ್ಲ ಒಗ್ಗೂಡಿಸುವುದು ಸುಲಭದ ಮಾತಲ್ಲ. ಕಪ್ಪೆಯನ್ನು ತೂಗುವ ದುರ್ಲಭ ಯೋಜಕನೊಬ್ಬ ಎಲ್ಲ ಸಂಘಟನೆಗಳಿಗೂ ಬೇಕು.

ಈ ನ್ಯಾಯವನ್ನು ಇನ್ನೊಂದು ರೀತಿಯಲ್ಲಿಯೂ ವ್ಯಾಖ್ಯಾನಿಸಬಹುದು. ಕಲಬೆರಕೆ ಮಾಡುವ ವಂಚಕ ವರ್ತಕನೊಬ್ಬ ಒಮ್ಮೆ ಬೆರೆಸಲು ಯಾವ ವಸ್ತುವೂ ಕಾಣದೆ ಕಪ್ಪೆಗಳನ್ನು ಹಾಕಿದನಂತೆ. ಕಪ್ಪೆಗಳು ತಮ್ಮ ಸ್ವಭಾವಕ್ಕನುಗುಣವಾಗಿ ಹೊರ ಹಾರಿ ಆ ವರ್ತಕನ ವಂಚನೆಯನ್ನು ಬಯಲಿಗೆಳದವಂತೆ. ವಂಚನೆ ಎಂದಾದರೂ ಬಯಲಾಗದೆ ಇರದು.

ಸರಳ ಸಂಸ್ಕೃತ ಪಾಠಮಾಲೆ ಪಾಠ - ೧

*ಸರಳ ಸಂಸ್ಕೃತ ಪಾಠಮಾಲೆ*

ಪಾಠ - ೧

🙋🏻‍♂ *ಮಮ ನಾಮ ಮಹಾಬಲಃ*
ನನ್ನ ಹೆಸರು ಮಹಾಬಲ

🙋🏻‍♀ *ಮಮ ನಾಮ ಶರ್ವಾಣೀ*
ನನ್ನ ಹೆಸರು ಶರ್ವಾಣೀ

💁🏻‍♂ *ಭವತಃ ನಾಮ ಕಿಮ್?* 🧑🏻
ನಿನ್ನ ಹೆಸರೇನು? (ಗಂಡಸರನ್ನು ಪ್ರಶ್ನಿಸುವಾಗ)

💁🏻‍♂ *ಭವತ್ಯಾಃ ನಾಮ ಕಿಮ್?* 👩🏻
ನಿನ್ನ ಹೆಸರೇನು? (ಮಹಿಳೆಯರನ್ನು ಪ್ರಶ್ನಿಸುವಾಗ)

*ವಿಶೇಷ* :
ಭವತಃ ಮತ್ತು ಭವತ್ಯಾಃ ಎಂಬ ಪದಗಳು ಏಕವಚನದಲ್ಲಿದ್ದರೂ ಆದರಾರ್ಥಕವಾಗಿವೆ. ಹಾಗಾಗಿ ಹಿರಿಯರಿಗೂ ಮಾನ್ಯರಿಗೂ ಉಪಯೋಗಿಸಬಹುದು. ಚಿಕ್ಕವರಿಗೆ ಈ ಪದಗಳ ಸ್ಥಾನದಲ್ಲಿ *ತವ* ಎಂಬ ಪದವನ್ನು ಬಳಸಬಹುದು. ಅದಕ್ಕೆ ಲಿಂಗಭೇದವಿಲ್ಲ.

✍🏻 *ಮಹಾಬಲ ಭಟ್, ಗೋವಾ*

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...