Wednesday, July 13, 2016

’ಬ್ರಹ್ಮಪುರಿಯ ಭಿಕ್ಷುಕ’ ನ ಜೀವನಯಾತ್ರೆ


‘ಡಿವಿಜಿ ಕನ್ನಡ ಸಾಹಿತ್ಯವನದ ಅಶ್ವತ್ಥವೃಕ್ಷ. ಬರೆದಂತೆ ಬಾಳಿದ ವಿರಳರೀತಿಯ ಮಹಾನುಭಾವರಲ್ಲಿ ಇವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆಗಳಂತಹ ಹತ್ತಾರು ಗಂಭೀರ ಪ್ರಕಾರಗಳಲ್ಲಿ ದುಡಿದ ಡಿವಿಜಿಯವರ ಬದುಕೇ ಒಂದು ಮಹಾಕಾವ್ಯ. ಇಂಥ ಜೀವನರಸಿಕರ ಬಾಳಿನಲ್ಲಿ ನಡೆದ ನೂರಾರು ರಸಮಯ ಪ್ರಸಂಗಗಳ ರೋಚಕ ಹಾಗೂ ಉದ್ಬೋಧಕ ನಿರೂಪಣೆ ಇಲ್ಲಿದೆ. ಡಿವಿಜಿಯವರ ವಿದ್ವತ್ತೆ, ವಿನಯ, ನಿಸ್ಪೃಹತೆ, ನಿರ್ಮಮತೆ, ಸೌಜನ್ಯ, ಸ್ನೇಹ ಮುಂತಾದ ಅನೇಕ ಮುಖಗಳು ಅವರಿಗೇ ವಿಶಿಷ್ಟವಾದ ಹಾಸ್ಯ-ವಿನೋದಗಳ, ಕಾವ್ಯ-ಕಲೆಗಳ ರಸಪಾಕವಾಗಿ ಇಲ್ಲಿ ಪ್ರತಿಫಲಿಸಿದೆ.

ಇದು ತಮ್ಮದೇ ಬ್ರಹ್ಮಪುರಿಯ ಭಿಕ್ಷುಕ ಎಂಬ ಪುಸ್ತಕದ ಬಗ್ಗೆ ಶತವಾಧಾನಿ ಆರ್. ಗಣೇಶರು ಬರೆದ ಹಿನ್ನುಡಿ. ಡಿವಿಜಿಯವರ ಬಗ್ಗೆ ಬರೆದ ಪುಸ್ತಕಗಳಲ್ಲಿ ಇದೊಂದು ವಿಶಿಷ್ಟವಾದ ಹೊತ್ತಗೆ. ಲೇಖಕರೇ ಹೇಳುವಂತೆ ಹಾ.ಮಾ. ನಾಯಕರ ವೆಂಕಣ್ಣಯ್ಯ ಪ್ರಸಂಗಗಳು ಎಂಬ ಗ್ರಂಥದಿಂದ ಪ್ರೇರಣೆ ಪಡೆದು ಬರೆದ ಪುಸ್ತಕವಿದು. ಡಿವಿಜಿಯವರು ತಮ್ಮ ಸಮಕಾಲೀನರಾದ ಸರ್ ಎಂ. ವಿಶ್ವೇಶ್ವರಯ್ಯ, ಬಿ.ಎಂ.ಶ್ರೀ., ವಿ.ಸೀ., ಮಿರ್ಜಾ ಇಸ್ಮಾಯಿಲ್ ಮುಂತಾದವರೊಂದಿಗೂ ತಮ್ಮ ಶಿಷ್ಯರಾದ ಎಸ್.ಆರ್.ರಾಮಸ್ವಾಮಿ, ವಿದ್ವಾನ್ ರಂಗನಾಥ ಶರ್ಮಾ, ಟಿ.ಎನ್.ಪದ್ಮನಾಭನ್ ಮೊದಲಾದ ಶಿಷ್ಯರೊಡನೆಯೂ ಕಳೆದ ರಸನಿಮಿಷಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಡಿವಿಜಿಯವರ ಪಟ್ಟಶಿಷ್ಯರಾಗಿ ಅವರ ಕೊನೆಗಾಲದಲ್ಲಿ ಆಧಾರಸ್ತಂಭವಾಗಿ ನಿಂತಿದ್ದ ಶ್ರೀ ಎಸ್. ಆರ್. ರಾಮಸ್ವಾಮಿಯವರಿಗೆ ಲೇಖಕರು ತಮ್ಮ ಛಂದೋಬದ್ಧ ಕನ್ನಡ ಹಾಗೂ ಸಂಸ್ಕೃತಪದ್ಯಗಳ ಮೂಲಕ ಈ ಗ್ರಂಥವನ್ನು ಅರ್ಪಿಸಿದ್ದಾರೆ.

ತೈತ್ತರೀಯ ಉಪನಿಷತ್ತಿನ ಆಧಾರದಲ್ಲಿ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಎಂಬ ಐದು ವಿಭಾಗಗಳಲ್ಲಿ ನೂರಾರು ಪ್ರಸಂಗಗಳನ್ನು ಈ ಪುಸ್ತಕ ಒಳಗೊಂಡಿದೆ. ಡಿವಿಜಿಯವರು ಅನ್ನಕ್ಕಾಗಿ ಆಶ್ರಯಿಸಿದ್ದ ಪತ್ರಿಕಾ ಸಂಪಾದಕತ್ವದ ಸಮಯದಲ್ಲಿ ನಡೆದಿದ್ದ ಗಂಭೀರ ಪ್ರಸಂಗಗಳು ಅನ್ನಮಯ ಕೋಶದಲ್ಲಿವೆ. ಡಿವಿಜಿಯವರು ಪಾಲಿಸಿದ ಪತ್ರಿಕಾಧರ್ಮ, ಆದರ್ಶ, ಹಾಗೂ ಪತ್ರಿಕಾರಂಗದಲ್ಲಿ ಅವರ ಏಳು ಬೀಳುಗಳು ಇಲ್ಲಿ ಚಿತ್ರಿತವಾಗಿವೆ. ಡಿವಿಜಿಯವರ ಪ್ರಾಣಗಳಾದ ಸಂಗೀತ, ಸಾಹಿತ್ಯ, ಆಧ್ಯಾತ್ಮ, ಭಾಷಾಭಿಮಾನ, ಸಂಸ್ಕೃತ ಮುಂತಾದವುಗಳಿಗೆ ಸಂಬಂಧಿಸಿದ ಘಟನೆಗಳು ಪ್ರಾಣಮಯಕೋಶದಲ್ಲಿ ದಾಖಲಾಗಿವೆ. ಡಿವಿಜಿಯವರ ಮನೋವೈಶಾಲ್ಯತೆ, ಮನೋದಾರ್ಢ್ಯತೆ, ಸ್ನೇಹಭಾವಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಮನೋಮಯಕೋಶ ಒಳಗೊಂಡಿದೆ. ಡಿವಿಜಿಯವರ ವಿನೋದಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವದ ಘಟನೆಗಳು ವಿಜ್ಞಾನಮಯಕೋಶದಲ್ಲಿರುವ ಪ್ರಸಂಗಗಳು. ಅವರ ಖಾದ್ಯಪ್ರಿಯತೆ, ಆನಂದ ಲಹರಿ, ಉದಾತ್ತವಿಚಾರಗಳು ಆನಂದಮಯಕೋಶದಲ್ಲಿ ಪ್ರತಿಬಿಂಬಿತವಾಗಿವೆ.

’ಡಿವಿಜಿಸಂಜ್ಞಿತ: ಕೋಽಪಿ ಬ್ರಹ್ಮಪತ್ತನಭಿಕ್ಷುಕ:’ ಎಂಬ ಡಿವಿಜಿಯವರ  ವಚನವನ್ನೇ ಆಧಾರವಾಗಿಟ್ಟುಕೊಂಡು ಲೇಖಕರು ಈ ಪುಸ್ತಕಕ್ಕೆ ’ಬ್ರಹ್ಮಪುರಿಯ ಭಿಕ್ಷುಕ’ ಎಂದು ನಾಮಕರಣ ಮಾಡಿದ್ದಾರೆ. ಡಿವಿಜಿಯವರ ಒಡನಾಡಿಗಳೂ, ಅನಂತರದ ಪೀಳಿಗೆಯ ಲೇಖಕರೂ ಬರೆದ ಅನೇಕ ಲೇಖನಗಳನ್ನು ಓದಿ, ಅವರೊಂದಿಗಿನ ಮಾತುಕತೆಯಲ್ಲಿ ವಿಷಯವನ್ನು ಸಂಗ್ರಹಿಸಿ ತಮ್ಮದೇ ಆದ ಶೈಲಿಯಲ್ಲಿ ಈ ಘಟನೆಗಳನ್ನು ನಿರೂಪಿಸಿದ್ದಾರೆ. ಡಿವಿಜಿಯವರು ರಚಿಸಿದ ಅನೇಕ ತೆಲುಗು ಕಂದಪದ್ಯಗಳನ್ನೂ, ಸಂಸ್ಕೃತಶ್ಲೋಕಗಳನ್ನೂ ಉದಾಹರಿಸಿರುವ ಲೇಖಕರು ಅವುಗಳಿಗೆಲ್ಲ ತಮ್ಮದೇ ಪದ್ಯರೂಪ ಅನುವಾದವನ್ನು ಕೊಟ್ಟಿದ್ದಾರೆ. ಸ್ವತ: ಪ್ರತಿಭಾಸಂಪನ್ನ ಆಶುಕವಿಯಾಗಿರುವ ಶತಾವಧಾನಿಗಳು ಈ ಪದ್ಯಗಳಲ್ಲಿರುವ ಲಘು ಮಾತ್ರಾದೋಷಗಳನ್ನೂ, ಯತಿಮೈತ್ರಿಯ ಅಭಾವವನ್ನೂ ಸೂಕ್ಷ್ಮವಾಗಿ ಗಮನಿಸಿ ಉಲ್ಲೇಖಿಸಿದ್ದಾರೆ. ಡಿವಿಜಿಯವರ ಒಂದು ಸಂಸ್ಕೃತಶ್ಲೋಕ ಹಾಗೂ ಗಣೇಶರ ಅನುವಾದವನ್ನು ನೋಡಿ.

ಅನ್ನಸಿಂಹಾಸನಾಸೀನೋ ಘೃತಮಂತ್ರಿ ಸಮನ್ವಿತ: |
ಸೋಪಸ್ಕರಪರೀವಾರ: ಸೂಪಭೂಪೋ ವಿರಾಜತೇ ||
ಅನ್ನಸಿಂಹಾಸನದ ಮೇಲೆ ಕುಳಿತು
ತುಪ್ಪವೆಂಬ ಮಂತ್ರಿಯೊಡನಿರಲ್ಕೆ |
ವಿವಿಧಸಾಂಭಾರಗಳ ಪರಿಜನರೊಡಂ
ತೊವ್ವೆಯೆಂಬುವ ನೃಪಂ ಮೆರೆವನಲ್ತೆ ||

ಡಿವಿಜಿಯವರ ಬಡತನದಲ್ಲಿಯೂ ಬಿಡದ ನಿಸ್ಪೃಹತೆ, ಕಷ್ಟಕಾಲದಲ್ಲಿಯೂ ತ್ಯಜಿಸದ ಧ್ಯೇಯನಿಷ್ಠತೆ, ಸಂದಿಗ್ಧ ಪರಿಸ್ಥಿತಿಗಳಲ್ಲೂ ಬಿಟ್ಟಿರದ ಸ್ನೇಹಪರತೆ, ಯಾರಿಗೂ ಬಗ್ಗದ ಆತ್ಮಗೌರವ ಇಂತಹ ಅಸಾಧಾರಣಗುಣಗಳೊಂದಿಗೆ ಸಾಮಾನ್ಯಮಾನವಸಹಜವಾದ ಭೋಜನಪ್ರಿಯತೆ, ವಿನೋದಪ್ರಜ್ಞೆ, ಪೋಲಿಗುಣಗಳೂ ಈ ರಸಪ್ರಸಂಗಗಳಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಪ್ರೌಢಶೈಲಿಯಲ್ಲಿಯೇ ಲೇಖನಗಳನ್ನು ಬರೆಯುವ ಅವಧಾನಿಗಳು ಇಲ್ಲಿ ತಮ್ಮ ಭಾಷೆಯನ್ನು ಸರಳಗೊಳಿಸಲು ಯತ್ನಿಸಿದ್ದಾರೆ. ಆದರೂ ಅವರ ಶೈಲಿಯ ಸಹಜತೆ ಎಂಬಂತೆ ಅಪರೂಪದ ಪದಗಳು ಅಲ್ಲಲ್ಲಿ ನುಸುಳಿವೆ. ಪ್ರತಿಯೊಂದು ಘಟನೆಯೂ ಒಂದೂವರೆ ಪುಟಕ್ಕಿಂತ ಕಡಿಮೆಗಾತ್ರವನ್ನು ಹೊಂದಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಮೊದಲಿಗೆ ಗಂಭೀರಪ್ರಸಂಗಗಳನ್ನು ಹೊಂದಿದ್ದರೂ  ಉತ್ತರೋತ್ತರ ಕೋಶಗಳನ್ನು ಪ್ರವೇಶಿಸಿದ ಹಾಗೇ ನಗೆಗಡಲು ಉಕ್ಕುತ್ತಲೇ ಹೋಗುತ್ತದೆ. ಓದುತ್ತ ಹೋದಂತೆ ಸಮಯ ಸರಿದುದುದೇ ತಿಳಿಯುವುದಿಲ್ಲ. ಡಿವಿಜಿ ಅಭಿಮಾನಿಗಳೆಲ್ಲ ಅತ್ಯವಶ್ಯವಾಗಿ ಓದಬೇಕಾದ ಪುಸ್ತಕವಿದು. ೧೬೦ ಪುಟಗಳ ಸುಂದರ ವಿನ್ಯಾಸ, ತಪ್ಪಿಲ್ಲದ ಮುದ್ರಣದ ಈ ಪುಸ್ತಕವನ್ನು ಡಿವಿಜಿಯವರ ಅನೇಕ ಪುಸ್ತಕಗಳನ್ನು ಪ್ರಕಾಶಿಸಿರುವ ಸಾಹಿತ್ಯ ಪ್ರಕಾಶನ ನಮ್ಮ ಕೈಗಿತ್ತಿದೆ.



Thursday, July 7, 2016

ನವಚಿಂತನೆಯ ನವಜೀವಗಳು




ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು- ಮಂಕುತಿಮ್ಮ ||

ಭಾರತೀಯ ಸಂಸ್ಕೃತಿ ಅನೇಕ ದೇಶೀಯ ಹಾಗೂ ವಿದೇಶೀಯ ಚಿಂತಕರನ್ನೂ ಬರಹಗಾರರನ್ನೂ ಚಿಂತನೆಗೂ ಬರಹಕ್ಕೂ ಪ್ರೇರೇಪಿಸಿದೆ. ನಮ್ಮ ವೈದಿಕ ವಾಙ್ಮಯದಿಂದ ಹಿಡಿದು ಜಾನಪದ ಕಲೆಗಳವರೆಗೆ ವಿವಿಧ ಬೆರಗುಗಳು ಜಿಜ್ಞಾಸುಗಳನ್ನು ವಿಚಾರಲಹರಿಗೆ ಒಳಪಡಿಸಿವೆ. ಮೊಗೆದಷ್ಟೂ ಹೆಚ್ಚೆಚ್ಚು ಚಿಮ್ಮುವ ವಿಚಾರಗಳಿಂದಾಗಿ ಸತ್ಯಾಸತ್ಯತೆಯ ಒರೆಗೂ, ಒಳಿತು ಕೆಡುಕುಗಳ ಚಿಂತನೆಗೂ ಇವು ಸಿಲುಕಿವೆ.

ಭಾರತೀಯ ಸಂಸ್ಕೃತಿ-ಆಚರಣೆ-ಜನಜೀವನದ ಚಿತ್ರಣವನ್ನು ಮಾಡಿದ ವಿದೇಶೀಯರ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾದ ವಿಲಿಯಂ ಡಾಲ್ರಿಂಪಲ್ ಮೂಲತ: ಸ್ಕಾಟ್ಲೆಂಡಿನವರು. ಸದ್ಯ ದೆಹಲಿಯ ಹೊರವಲಯದಲ್ಲಿ ನೆಲೆಸಿರುವ ಇವರು ಭಾರತಾದ್ಯಂತ ಸಂಚರಿಸಿದಾಗ ಅವರ ಅಂತ:ಕರಣವನ್ನು ತಟ್ಟಿದ ಒಂಬತ್ತು ವ್ಯಕ್ತಿಗಳ ಬರಹರೂಪ ಚಿತ್ರಣವೇ ನವ ಜೀವಗಳು ಎಂಬ ಹೊತ್ತಗೆ. ಅದನ್ನು ಕನ್ನಡಕ್ಕೆ ನವಿರಾಗಿ ಅನುವಾದಿಸಿದವರು ಸದ್ಯ ಕೊಯಂಬತ್ತೂರಿನ ಮಾತಾ ಅಮೃತಾನಂದಮಯಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಸಂಸ್ಕೃತ ವಿದ್ವಾಂಸ ನವೀನ ಭಟ್ ಗಂಗೋತ್ರಿ.

ಪ್ರಾಚೀನ ಸಂಪ್ರದಾಯಗಳ ಮೇಲೆ ನೆಲೆನಿಂತು ಕಾಲಾಂತರದಲ್ಲಿ ವೈಚಾರಿಕತೆಗೆ ಸಿಕ್ಕಿಯೋ ಇಲ್ಲ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿಯೋ ರೂಪಾಂತರ ಹೊಂದಿದ ಭಾರತೀಯ ಶ್ರದ್ಧೆ, ನಂಬಿಕೆ, ಆಚರಣೆಗಳೇ ಈ ಗ್ರಂಥದ ವಿಷಯ  ವಸ್ತು. ಇಂತಹ ಸಂಪ್ರದಾಯಗಳಿಗೆ ಅಂಟಿಕೊಂಡು ಹಿಂಸೆ-ಶಾಂತಿಗಳ ಮಧ್ಯೆ ತೊಳಲಾಡುವ ಜೀವಗಳ ಚಿತ್ರಣ ಗ್ರಂಥದ ಜೀವಾಳ.

ಮೊದಲ ಜೀವ ಒಬ್ಬಳು ಜೈನ ಸಂನ್ಯಾಸಿನಿಯದ್ದು. ಕರ್ನಾಟಕದ ಮಣ್ಣಿನವಾಸನೆಯನ್ನು ಹೊಂದಿದ ಈ ಕಥೆ ಸಹಜವಾಗಿಯೇ ಕನ್ನಡದ ಓದುಗರಿಗೆ ಆತ್ಮೀಯವೆನಿಸುತ್ತದೆ. ಈ ಪಾತ್ರದ ಮೂಲಕ ಜೈನಸಂಪ್ರದಾಯವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಲೇಖಕರು. ಕೇಶಲುಂಚನ, ಸಲ್ಲೇಖನ ವ್ರತಗಳ ಬಗ್ಗೆ ಓದುವಾಗ ಸಹಜವಾಗಿಯೇ ಮೈ ಜುಮ್ಮೆನ್ನುತ್ತದೆ. ಎಲ್ಲ ಸಂಬಂಧಗಳನ್ನೂ ತೊರೆದಿರುವ ವಿರಾಗಿಣಿ ಸಂನ್ಯಾಸಿನಿಯೂ ತನ್ನ ಪ್ರಾಣಸ್ನೇಹಿತೆಯ ಸಾವಿನಿಂದ ವಿಚಲಿತವಾದುದು ವೈರಾಗ್ಯ ಹಾಗೂ ಮಾನವೀಯ ಭಾವನೆಗಳ ಮಧ್ಯೆಯ ಹೊಯ್ದಾಟವನ್ನು ಯಶಸ್ವಿಯಾಗಿ ಬಿಂಬಿಸುತ್ತದೆ. ಕೊನೆಯಲ್ಲಿ ಆ ಸಂನ್ಯಾಸಿನಿಯು ಚಿಕ್ಕವಯಸ್ಸಿನಲ್ಲಿಯೇ ಸಲ್ಲೇಖನವ್ರತ ಕೈಗೊಳ್ಳಲು ಮನಮಾಡಿದ್ದು ಒಂದು ರೀತಿಯ ಕಸಿವಿಸಿಯಿಂದಲೇ ಕಥೆಯನ್ನು ಓದಿ ಮುಗಿಸುವಂತೆ ಮಾಡುತ್ತದೆ.

ಎರಡನೆಯ ಕಥೆ ನಮ್ಮ ನೆರೆಯ ರಾಜ್ಯ ಕೇರಳದ್ದು. ಅಲ್ಲಿ ನೆಲೆಯೂರಿರುವ ತೆಯ್ಯಮ್ ಎಂಬ ಸಾಂಪ್ರದಾಯಿಕ ಕಲೆಯ ಕುರಿತಾದದ್ದು. ಕಣ್ಣೂರಿನ ಹರಿದಾಸ ಎಂಬ ದಲಿತ ಕುಲೋತ್ಪನ್ನ ತೆಯ್ಯಮ್ ತಿಂಗಳಿನಲ್ಲಿ ತನ್ನ ಮೇಲೆ ದೇವತೆಯ ಆವಾಹನೆಯಾದಾಗ ಬ್ರಾಹ್ಮಣರಿಂದಲೂ ಪೂಜಿತನಾಗುವುದನ್ನು ವಿಡಂಬನಾತ್ಮಕವಾಗಿ ಲೇಖಕರು ಚಿತ್ರಿಸಿದ್ದಾರೆ.

ಮೂರನೆಯ ಕಥೆ ಯೆಲ್ಲಮ್ಮನ ಹೆಣ್ಣುಮಕ್ಕಳಾದ ಜೋಗತಿಯರದ್ದು. ರಾಣಿಬಾಯಿ ಎಂಬ ದೇವದಾಸಿಯ ಸಂಪತ್ತು ಹಾಗೂ ಆಯುಷ್ಯದ ಮಧ್ಯದ ಹೋರಾಟ ಈ ಕಥೆಯ ಸಾರ. ದೇವದಾಸಿ ಪದ್ಧತಿಯ ಸ್ಥೂಲ ಚಿತ್ರಣವನ್ನೂ ಲೇಖಕರು ನೀಡಿದ್ದಾರೆ.

ನಾಲ್ಕನೆಯದ್ದು ರಾಜಸ್ಥಾನದ ಮರುಭೂಮಿಯ ಮೋಹನ ಎಂಬ ಜಾನಪದಕಾವ್ಯಗಾಯಕನ ಕಥೆ. ಕೆಲವೊಂದು ಅಂಶಗಳಲ್ಲಿ ರಾಮಾಯಣವನ್ನು ಹೋಲುವ ಪಭುಜೀಯ ಕಾವ್ಯದ ಅಸಾಧಾರಣ ಗಾಯಕನ ಜೀವನಕಥನವಿದು. ಫಾಡ್ ಎನ್ನುವ ಜಾನಪದೀಯ ಗಾಯಕಿಯ ಹಾಗೂ ಅದರ ಗಾಯಕನ ಏರಿಳಿತಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಮಧ್ಯೆ ಈ ಸಂಪ್ರದಾಯದ ಬಗ್ಗೆ ಸಾಕಷ್ಟು ಮಾಹಿತಿ ಹರಿದುಬರುವುದರಿಂದ ಇಲ್ಲಿ ಓದು ಸ್ವಲ್ಪ ನಿಧಾನವಾಗುತ್ತದೆ.

ಕೆಂಬಣ್ಣದ ಯಕ್ಷಿ ಎಂಬ ಐದನೆಯ ಬರಹ ಸಿಂಧ್ ಪ್ರದೇಶಕ್ಕೆ ಸಂಬಂಧಿಸಿದ್ದು. ಲಾಲ್ ಪೇರಿ ಎಂಬ ಪಾತ್ರದ ಮೂಲಕ ಸೂಫಿ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುತ್ತಾರೆ ಲೇಖಕರು. ಭಾರತದಲ್ಲಿ ಸೂಫಿಸಂ ಬೆಳೆದುಬಂದ ಬಗೆ ಹಾಗೂ ವಹಾಬಿಸಂ ನಿಂದ ಸೂಫಿಸಂಗೆ ಆಗುತ್ತಿರುವ ಅಪಾಯಗಳ ಬಗೆಗೂ ಲೇಖಕರು ಬರೆದಿದ್ದಾರೆ.

ಟಿಬೆಟ್ಟಿನ ಪಸಂಗ್ ಎನ್ನುವ ಬೌದ್ಧ ಸಂನ್ಯಾಸಿಯ ಕಥೆ ಆರನೆಯ ಲೇಖನ. ಚೀನಿಯರ ದಬ್ಬಾಳಿಕೆಗೆ ಒಳಗಾಗಿ ಸಂನ್ಯಾಸ ಹಾಗೂ ಹೋರಾಟಗಳ ಮಧ್ಯೆ ತೊಳಲಾಡಿ ಏನೇನೋ ಆದ ತಶಿ ಪಸಂಗ್ ನ ಜೀವನ ಆಸಕ್ತಿಯನ್ನು ಹುಟ್ಟಿಸುತ್ತದೆ.

ಮೂರ್ತಿಗಳ ತಯಾರಕ ಶ್ರೀಕಂಠ ಏಳನೆಯ ಕಥೆಯ ನಾಯಕ. ಚೋಳರ ಶೈಲಿಯ ಕಂಚಿನ ದೇವರ ಮೂರ್ತಿಗಳನ್ನು ತಯಾರಿಸುವ ಶ್ರೀಕಂಠ ಸ್ಥಪತಿಯ ಜೀವನಗಾಥೆ ಆ ಕಲೆಯು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಅವಸಾನದ ಅಂಚಿನಲ್ಲಿರುವುದನ್ನು ದಾಖಲಿಸಿ ಕೊನೆಗೊಳ್ಳುತ್ತದೆ.

ಎಂಟನೆಯ ಕಥೆ ಮನೀಷಾ ಎಂಬ ವಾಮಾಚಾರಿಣಿಯ ಮೂಲಕ ಬಂಗಾಳದ ಶ್ಮಶಾನವೊಂದರ ತಾರಾಪೀಠವೆಂಬ ಶಕ್ತಿ ಕೇಂದ್ರದ ಜೀವನವನ್ನು ತೆರೆದಿಡುತ್ತದೆ. ಅತಿಭಯಂಕರವಾದ ವಾಮಾಚಾರಿಗಳ ಹೃದಯದಲ್ಲಿರುವ ಮಾನವೀಯ ಭಾವನೆಗಳನ್ನು ಉದ್ಘಾಟಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಎಂಟನೆಯ ಕಥೆಯ ಮುಂದುವರಿದ ಭಾಗದಂತಿರುವ ಒಂಭತ್ತನೆಯ ಕಥೆ ಕನಯ್ಯ, ಪಬನ್ ಮತ್ತು ದೇಬ್ ದಾಸ್ ಎನ್ನುವ ಬಾವ್ಲ್ ಹಾಡುಗಾರರ ಸುತ್ತ ಸುತ್ತುತ್ತದೆ. ಸಾಂಪ್ರದಾಯಿಕ ಆರಾಧನಾ ಪದ್ಧತಿಗೆ ಸೆಡ್ಡು ಹೊಡೆದು ಸಂಗೀತದ ಮೂಲಕ ಪ್ರೇಮಸ್ವರೂಪಿ ಆಧ್ಯಾತ್ಮವನ್ನು ಉಪಾಸಿಸಿ ಮೋಕ್ಷಸಾಧನೆ ಮಾಡುವ ತುಡಿತವನ್ನು ಚಿತ್ರಿಸಿದೆ.

ಭಾರತದ ವಿಭಿನ್ನ ಆಚರಣೆಗಳನ್ನೂ ಸಂಪ್ರದಾಯಗಳನ್ನೂ ತಮ್ಮ ಕಣ್ಣುಗಳಿಂದ ನೋಡಿದ್ದಾರೆ ಡಾಲ್ರಿಂಪಲ್. ವಿದೇಶೀಯರ ಅನೇಕ ಚಿಂತನೆಗಳು ನಮ್ಮಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟುಮಾಡಿ ಅನಿಷ್ಟ ಸಂಪ್ರದಾಯಗಳನ್ನು ಕೊನೆಗಾಣಿಸುವಲ್ಲಿ ಸಹಾಯ ಮಾಡಿದೆ ಎಂಬುದು ನಿಜ. ಲೇಖಕರು ದಾಖಲಿಸಿದ ಮುಖವೊಂದು ನಮ್ಮ ದೇಶದಲ್ಲಿ ಕಾಣಸಿಗುವುದೂ ಸತ್ಯ. ಆದರೆ ವಿದೇಶೀಯರು ಭಾರತದ ಬಗ್ಗೆ ಬರೆಯುವಾಗ ಹಳದಿ ಕನ್ನಡಕವನ್ನು ಧರಿಸಿರುತ್ತಾರೆ ಎನ್ನುವುದು ಈ ಲೇಖಕರ ವಿಷಯದಲ್ಲೂ ಸುಳ್ಳಲ್ಲವೇನೋ ಅನ್ನಿಸುತ್ತದೆ. ಜೈನ ಸಂನ್ಯಾಸಿನಿಯ ಸಲ್ಲೇಖನ ನಿರ್ಧಾರದಲ್ಲಿಯೂ, ಮೋಹನನ ದುರಂತ ಸಾವಿನಲ್ಲೂ, ದೇವದಾಸಿ ಪದ್ಧತಿಯ ವಿವರಣೆಯಲ್ಲಿಯೂ ಅತಿರಂಜಿತ ವರ್ಣನೆ ಇರುವಂತೆ ಕಾಣಿಸುತ್ತದೆ. ಭಾರತೀಯ ಸಂಪ್ರದಾಯಕ್ಕಿಂತ ಪಾಶ್ಚಾತ್ಯ ಸಂಪ್ರದಾಯವೇನೂ ಕೀಳಲ್ಲ ಎಂಬುದನ್ನು ತೋರಿಸಿಕೊಳ್ಳುವ ತುಡಿತವೂ ತುಲನಾತ್ಮಕ ವಿಶ್ಲೇಷಣೆಯಲ್ಲಿ ವ್ಯಕ್ತವಾಗಿದೆ. ಭಾರತೀಯ ದರ್ಶನದ ಆರಂಭವಾದುದೇ ಕಾಮದಿಂದ ಪಾಶ್ಚಾತ್ಯ ದರ್ಶನದ ಆರಂಭವಾದುದು ಬೆಳಕಿನಿಂದ ಎಂದು ಹೇಳುವುದರ ಮೂಲಕ ತಮ್ಮ ಸಂಪ್ರದಾಯವನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎನಿಸುತ್ತದೆ.


ಲೇಖಕರ ಅನುಭವಕಥನವೆಂಬಂತೆ ನಿರೂಪಿತವಾಗಿರುವ ಈ ಗ್ರಂಥದಲ್ಲಿ ಹೇಳಿದ್ದೆಲ್ಲವನ್ನೂ ಸತ್ಯವೆಂದೇ ಪರಿಗಣಿಸಬೇಕಾಗಿಲ್ಲ ಅಸತ್ಯವೆಂದು ತೆಗೆದುಹಾಕುವ ಆವಶ್ಯಕತೆಯೂ ಇಲ್ಲ. ನೀರಕ್ಷೀರವಿಭಾಗ ವಿವೇಕದಿಂದ ಓದಿದರೆ ಉತ್ತಮವಾದ ಕೃತಿ. ಇನ್ನು ಅನುವಾದಕ ನವೀನ ಭಟ್ಟರು ಇದು ಇಂಗ್ಲೀಷಿನ ಅನುವಾದ ಎಂಬುದು ಅರಿವಾಗದಷ್ಟು ಸೊಗಸಾಗಿ ಭಾಷಾಂತರಿಸಿದ್ದಾರೆ. ತಮ್ಮ ಸಂಸ್ಕೃತ ಪಾಂಡಿತ್ಯವನ್ನೂ, ಆಲಂಕಾರಿಕ ಶಬ್ದಗಳನ್ನೂ ಅನವಶ್ಯಕವಾಗಿ ತುರುಕದೆ ಸರಳವಾದ ಅಷ್ಟೇ ಗಟ್ಟಿಯಾದ ಕನ್ನಡದಲ್ಲಿ ಅನುವಾದಿಸಿದ್ದಾರೆ. ಅಲ್ಲಲ್ಲಿ ಬರುವ ಪದ್ಯಗಳನ್ನೂ ಮುಕ್ತಛಂದಸ್ಸಿನಲ್ಲಿ ಸುಂದರವಾಗಿ ಭಾಷಾಂತರಿಸಿದ್ದಾರೆ. ಒಟ್ಟಿನಲ್ಲಿ ಓದಿಸಿಕೊಂಡು ಹೋಗುವ ಒಂದು ಚಂದದ ಪುಸ್ತಕವನ್ನು ವಸುಧೇಂದ್ರರ ’ಛಂದ ಪುಸ್ತಕ’  ನೀಡಿದೆ.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...