Wednesday, July 13, 2016

’ಬ್ರಹ್ಮಪುರಿಯ ಭಿಕ್ಷುಕ’ ನ ಜೀವನಯಾತ್ರೆ


‘ಡಿವಿಜಿ ಕನ್ನಡ ಸಾಹಿತ್ಯವನದ ಅಶ್ವತ್ಥವೃಕ್ಷ. ಬರೆದಂತೆ ಬಾಳಿದ ವಿರಳರೀತಿಯ ಮಹಾನುಭಾವರಲ್ಲಿ ಇವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆಗಳಂತಹ ಹತ್ತಾರು ಗಂಭೀರ ಪ್ರಕಾರಗಳಲ್ಲಿ ದುಡಿದ ಡಿವಿಜಿಯವರ ಬದುಕೇ ಒಂದು ಮಹಾಕಾವ್ಯ. ಇಂಥ ಜೀವನರಸಿಕರ ಬಾಳಿನಲ್ಲಿ ನಡೆದ ನೂರಾರು ರಸಮಯ ಪ್ರಸಂಗಗಳ ರೋಚಕ ಹಾಗೂ ಉದ್ಬೋಧಕ ನಿರೂಪಣೆ ಇಲ್ಲಿದೆ. ಡಿವಿಜಿಯವರ ವಿದ್ವತ್ತೆ, ವಿನಯ, ನಿಸ್ಪೃಹತೆ, ನಿರ್ಮಮತೆ, ಸೌಜನ್ಯ, ಸ್ನೇಹ ಮುಂತಾದ ಅನೇಕ ಮುಖಗಳು ಅವರಿಗೇ ವಿಶಿಷ್ಟವಾದ ಹಾಸ್ಯ-ವಿನೋದಗಳ, ಕಾವ್ಯ-ಕಲೆಗಳ ರಸಪಾಕವಾಗಿ ಇಲ್ಲಿ ಪ್ರತಿಫಲಿಸಿದೆ.

ಇದು ತಮ್ಮದೇ ಬ್ರಹ್ಮಪುರಿಯ ಭಿಕ್ಷುಕ ಎಂಬ ಪುಸ್ತಕದ ಬಗ್ಗೆ ಶತವಾಧಾನಿ ಆರ್. ಗಣೇಶರು ಬರೆದ ಹಿನ್ನುಡಿ. ಡಿವಿಜಿಯವರ ಬಗ್ಗೆ ಬರೆದ ಪುಸ್ತಕಗಳಲ್ಲಿ ಇದೊಂದು ವಿಶಿಷ್ಟವಾದ ಹೊತ್ತಗೆ. ಲೇಖಕರೇ ಹೇಳುವಂತೆ ಹಾ.ಮಾ. ನಾಯಕರ ವೆಂಕಣ್ಣಯ್ಯ ಪ್ರಸಂಗಗಳು ಎಂಬ ಗ್ರಂಥದಿಂದ ಪ್ರೇರಣೆ ಪಡೆದು ಬರೆದ ಪುಸ್ತಕವಿದು. ಡಿವಿಜಿಯವರು ತಮ್ಮ ಸಮಕಾಲೀನರಾದ ಸರ್ ಎಂ. ವಿಶ್ವೇಶ್ವರಯ್ಯ, ಬಿ.ಎಂ.ಶ್ರೀ., ವಿ.ಸೀ., ಮಿರ್ಜಾ ಇಸ್ಮಾಯಿಲ್ ಮುಂತಾದವರೊಂದಿಗೂ ತಮ್ಮ ಶಿಷ್ಯರಾದ ಎಸ್.ಆರ್.ರಾಮಸ್ವಾಮಿ, ವಿದ್ವಾನ್ ರಂಗನಾಥ ಶರ್ಮಾ, ಟಿ.ಎನ್.ಪದ್ಮನಾಭನ್ ಮೊದಲಾದ ಶಿಷ್ಯರೊಡನೆಯೂ ಕಳೆದ ರಸನಿಮಿಷಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಡಿವಿಜಿಯವರ ಪಟ್ಟಶಿಷ್ಯರಾಗಿ ಅವರ ಕೊನೆಗಾಲದಲ್ಲಿ ಆಧಾರಸ್ತಂಭವಾಗಿ ನಿಂತಿದ್ದ ಶ್ರೀ ಎಸ್. ಆರ್. ರಾಮಸ್ವಾಮಿಯವರಿಗೆ ಲೇಖಕರು ತಮ್ಮ ಛಂದೋಬದ್ಧ ಕನ್ನಡ ಹಾಗೂ ಸಂಸ್ಕೃತಪದ್ಯಗಳ ಮೂಲಕ ಈ ಗ್ರಂಥವನ್ನು ಅರ್ಪಿಸಿದ್ದಾರೆ.

ತೈತ್ತರೀಯ ಉಪನಿಷತ್ತಿನ ಆಧಾರದಲ್ಲಿ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಎಂಬ ಐದು ವಿಭಾಗಗಳಲ್ಲಿ ನೂರಾರು ಪ್ರಸಂಗಗಳನ್ನು ಈ ಪುಸ್ತಕ ಒಳಗೊಂಡಿದೆ. ಡಿವಿಜಿಯವರು ಅನ್ನಕ್ಕಾಗಿ ಆಶ್ರಯಿಸಿದ್ದ ಪತ್ರಿಕಾ ಸಂಪಾದಕತ್ವದ ಸಮಯದಲ್ಲಿ ನಡೆದಿದ್ದ ಗಂಭೀರ ಪ್ರಸಂಗಗಳು ಅನ್ನಮಯ ಕೋಶದಲ್ಲಿವೆ. ಡಿವಿಜಿಯವರು ಪಾಲಿಸಿದ ಪತ್ರಿಕಾಧರ್ಮ, ಆದರ್ಶ, ಹಾಗೂ ಪತ್ರಿಕಾರಂಗದಲ್ಲಿ ಅವರ ಏಳು ಬೀಳುಗಳು ಇಲ್ಲಿ ಚಿತ್ರಿತವಾಗಿವೆ. ಡಿವಿಜಿಯವರ ಪ್ರಾಣಗಳಾದ ಸಂಗೀತ, ಸಾಹಿತ್ಯ, ಆಧ್ಯಾತ್ಮ, ಭಾಷಾಭಿಮಾನ, ಸಂಸ್ಕೃತ ಮುಂತಾದವುಗಳಿಗೆ ಸಂಬಂಧಿಸಿದ ಘಟನೆಗಳು ಪ್ರಾಣಮಯಕೋಶದಲ್ಲಿ ದಾಖಲಾಗಿವೆ. ಡಿವಿಜಿಯವರ ಮನೋವೈಶಾಲ್ಯತೆ, ಮನೋದಾರ್ಢ್ಯತೆ, ಸ್ನೇಹಭಾವಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಮನೋಮಯಕೋಶ ಒಳಗೊಂಡಿದೆ. ಡಿವಿಜಿಯವರ ವಿನೋದಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವದ ಘಟನೆಗಳು ವಿಜ್ಞಾನಮಯಕೋಶದಲ್ಲಿರುವ ಪ್ರಸಂಗಗಳು. ಅವರ ಖಾದ್ಯಪ್ರಿಯತೆ, ಆನಂದ ಲಹರಿ, ಉದಾತ್ತವಿಚಾರಗಳು ಆನಂದಮಯಕೋಶದಲ್ಲಿ ಪ್ರತಿಬಿಂಬಿತವಾಗಿವೆ.

’ಡಿವಿಜಿಸಂಜ್ಞಿತ: ಕೋಽಪಿ ಬ್ರಹ್ಮಪತ್ತನಭಿಕ್ಷುಕ:’ ಎಂಬ ಡಿವಿಜಿಯವರ  ವಚನವನ್ನೇ ಆಧಾರವಾಗಿಟ್ಟುಕೊಂಡು ಲೇಖಕರು ಈ ಪುಸ್ತಕಕ್ಕೆ ’ಬ್ರಹ್ಮಪುರಿಯ ಭಿಕ್ಷುಕ’ ಎಂದು ನಾಮಕರಣ ಮಾಡಿದ್ದಾರೆ. ಡಿವಿಜಿಯವರ ಒಡನಾಡಿಗಳೂ, ಅನಂತರದ ಪೀಳಿಗೆಯ ಲೇಖಕರೂ ಬರೆದ ಅನೇಕ ಲೇಖನಗಳನ್ನು ಓದಿ, ಅವರೊಂದಿಗಿನ ಮಾತುಕತೆಯಲ್ಲಿ ವಿಷಯವನ್ನು ಸಂಗ್ರಹಿಸಿ ತಮ್ಮದೇ ಆದ ಶೈಲಿಯಲ್ಲಿ ಈ ಘಟನೆಗಳನ್ನು ನಿರೂಪಿಸಿದ್ದಾರೆ. ಡಿವಿಜಿಯವರು ರಚಿಸಿದ ಅನೇಕ ತೆಲುಗು ಕಂದಪದ್ಯಗಳನ್ನೂ, ಸಂಸ್ಕೃತಶ್ಲೋಕಗಳನ್ನೂ ಉದಾಹರಿಸಿರುವ ಲೇಖಕರು ಅವುಗಳಿಗೆಲ್ಲ ತಮ್ಮದೇ ಪದ್ಯರೂಪ ಅನುವಾದವನ್ನು ಕೊಟ್ಟಿದ್ದಾರೆ. ಸ್ವತ: ಪ್ರತಿಭಾಸಂಪನ್ನ ಆಶುಕವಿಯಾಗಿರುವ ಶತಾವಧಾನಿಗಳು ಈ ಪದ್ಯಗಳಲ್ಲಿರುವ ಲಘು ಮಾತ್ರಾದೋಷಗಳನ್ನೂ, ಯತಿಮೈತ್ರಿಯ ಅಭಾವವನ್ನೂ ಸೂಕ್ಷ್ಮವಾಗಿ ಗಮನಿಸಿ ಉಲ್ಲೇಖಿಸಿದ್ದಾರೆ. ಡಿವಿಜಿಯವರ ಒಂದು ಸಂಸ್ಕೃತಶ್ಲೋಕ ಹಾಗೂ ಗಣೇಶರ ಅನುವಾದವನ್ನು ನೋಡಿ.

ಅನ್ನಸಿಂಹಾಸನಾಸೀನೋ ಘೃತಮಂತ್ರಿ ಸಮನ್ವಿತ: |
ಸೋಪಸ್ಕರಪರೀವಾರ: ಸೂಪಭೂಪೋ ವಿರಾಜತೇ ||
ಅನ್ನಸಿಂಹಾಸನದ ಮೇಲೆ ಕುಳಿತು
ತುಪ್ಪವೆಂಬ ಮಂತ್ರಿಯೊಡನಿರಲ್ಕೆ |
ವಿವಿಧಸಾಂಭಾರಗಳ ಪರಿಜನರೊಡಂ
ತೊವ್ವೆಯೆಂಬುವ ನೃಪಂ ಮೆರೆವನಲ್ತೆ ||

ಡಿವಿಜಿಯವರ ಬಡತನದಲ್ಲಿಯೂ ಬಿಡದ ನಿಸ್ಪೃಹತೆ, ಕಷ್ಟಕಾಲದಲ್ಲಿಯೂ ತ್ಯಜಿಸದ ಧ್ಯೇಯನಿಷ್ಠತೆ, ಸಂದಿಗ್ಧ ಪರಿಸ್ಥಿತಿಗಳಲ್ಲೂ ಬಿಟ್ಟಿರದ ಸ್ನೇಹಪರತೆ, ಯಾರಿಗೂ ಬಗ್ಗದ ಆತ್ಮಗೌರವ ಇಂತಹ ಅಸಾಧಾರಣಗುಣಗಳೊಂದಿಗೆ ಸಾಮಾನ್ಯಮಾನವಸಹಜವಾದ ಭೋಜನಪ್ರಿಯತೆ, ವಿನೋದಪ್ರಜ್ಞೆ, ಪೋಲಿಗುಣಗಳೂ ಈ ರಸಪ್ರಸಂಗಗಳಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಪ್ರೌಢಶೈಲಿಯಲ್ಲಿಯೇ ಲೇಖನಗಳನ್ನು ಬರೆಯುವ ಅವಧಾನಿಗಳು ಇಲ್ಲಿ ತಮ್ಮ ಭಾಷೆಯನ್ನು ಸರಳಗೊಳಿಸಲು ಯತ್ನಿಸಿದ್ದಾರೆ. ಆದರೂ ಅವರ ಶೈಲಿಯ ಸಹಜತೆ ಎಂಬಂತೆ ಅಪರೂಪದ ಪದಗಳು ಅಲ್ಲಲ್ಲಿ ನುಸುಳಿವೆ. ಪ್ರತಿಯೊಂದು ಘಟನೆಯೂ ಒಂದೂವರೆ ಪುಟಕ್ಕಿಂತ ಕಡಿಮೆಗಾತ್ರವನ್ನು ಹೊಂದಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಮೊದಲಿಗೆ ಗಂಭೀರಪ್ರಸಂಗಗಳನ್ನು ಹೊಂದಿದ್ದರೂ  ಉತ್ತರೋತ್ತರ ಕೋಶಗಳನ್ನು ಪ್ರವೇಶಿಸಿದ ಹಾಗೇ ನಗೆಗಡಲು ಉಕ್ಕುತ್ತಲೇ ಹೋಗುತ್ತದೆ. ಓದುತ್ತ ಹೋದಂತೆ ಸಮಯ ಸರಿದುದುದೇ ತಿಳಿಯುವುದಿಲ್ಲ. ಡಿವಿಜಿ ಅಭಿಮಾನಿಗಳೆಲ್ಲ ಅತ್ಯವಶ್ಯವಾಗಿ ಓದಬೇಕಾದ ಪುಸ್ತಕವಿದು. ೧೬೦ ಪುಟಗಳ ಸುಂದರ ವಿನ್ಯಾಸ, ತಪ್ಪಿಲ್ಲದ ಮುದ್ರಣದ ಈ ಪುಸ್ತಕವನ್ನು ಡಿವಿಜಿಯವರ ಅನೇಕ ಪುಸ್ತಕಗಳನ್ನು ಪ್ರಕಾಶಿಸಿರುವ ಸಾಹಿತ್ಯ ಪ್ರಕಾಶನ ನಮ್ಮ ಕೈಗಿತ್ತಿದೆ.



No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...