Friday, February 28, 2020

ಭಾವಸ್ಪಂದನ

ಆತ್ಮೀಯರೇ,
ಯಾವುದೇ ಭಾಷೆಯ ಸಾಹಿತ್ಯದಲ್ಲಿ ಭಾವಗೀತೆಗಳ ಪಾತ್ರ ಮಹತ್ತ್ವದ್ದು. ಹೃದಯದ ಭಾವವನ್ನು ಅಕ್ಷರರೂಪದಲ್ಲಿ ವ್ಯಕ್ತಪಡಿಸುವ ಕವಿ ಓದುಗರ ಹೃದಯದಲ್ಲೂ ಅನಿರ್ವಚನೀಯ ಭಾವವೊಂದನ್ನು ಹುಟ್ಟು ಹಾಕುತ್ತಾನೆ. ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೂ ಭಾವಗೀತೆಗಳ ಸಂಖ್ಯೆ ವಿಪುಲವಾಗಿದೆ. ಅನೇಕ ಪ್ರಸಿದ್ಧ ಸಂಗೀತಗಾರರ ಮೂಲಕ ಇವು ಜನಮನದಲ್ಲಿ ಭಾವದ ಮುದ್ರೆಯನ್ನೊತ್ತಿವೆ. ಅಂತಹ ಭಾವಗೀತೆಗಳ ಹಾಗೂ ಭಾವಕವಿಗಳ ಪರಿಚಯವನ್ನು ಮಾಡಿಕೊಡುವ ಒಂದು ಸಣ್ಣ ಪ್ರಯತ್ನ ಈ ಭಾವಸ್ಪಂದನ.

ವಸಂತ ಋತು ಕಾಲಿಟ್ಟು ಕೆಲವು ದಿನಗಳು ಕಳೆದು ಹೋದವು. ಹೊಂಗೆ ಮರದ ಹೂವಿನಲ್ಲಿ, ಮಾವಿನ ತಳಿರಿನಲ್ಲಿ, ಅರಳಿ ನಿಂತ ಸುಮಗಳಲ್ಲಿ ವಸಂತನ ವೈಭವ ಕಾಣುತ್ತಾ ಇದೆ. ವಸಂತನ ಸೊಬಗು ಯಾವ ಕವಿಯ ಹೃದಯವನ್ನು ತಟ್ಟದಿದ್ದೀತು? ಪ್ರಕೃತಿಯ ಸೊಬಗು ಹೃದಯವನ್ನು ಹೊಕ್ಕು ಹೊರಬರುವಾಗ ಕವಿತೆಯ ರೂಪವನ್ನು ತಾಳಿರುತ್ತದೆ. ಅಂತಹ ಒಂದು ಕವಿತೆ ನಮ್ಮ ಭಾವಸ್ಪಂದನ ಧ್ವನಿ ಸರಣಿಯ ಮೊದಲ ಗೀತೆ. ಇದು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಬರೆದ ’ಬಾರೋ ವಸಂತ’ ಎಂಬ ಋತುರಾಜನ ಸ್ವಾಗತಗೀತೆ.

ಲಕ್ಷ್ಮೀನಾರಾಯಣ ಭಟ್ಟರು ಶಿವರಾಮ ಭಟ್ ಹಾಗೂ ಮೂಕಾಂಬಿಕಾ ದಂಪತಿಗಳ ಮಗನಾಗಿ ೧೯೩೬ ರ ಅಕ್ಟೋಬರ್ ೨೯ರಂದು ಶಿವಮೊಗ್ಗೆಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ  ಡಾ. ಲಕ್ಷ್ಮೀನಾರಾಯಣ ಭಟ್ಟರು ತೀನಂಶ್ರೀಯವರ ಶಿಷ್ಯರು. ತಮ್ಮ ಗುರುಗಳಂತೆ ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದ ಭಟ್ಟರು ಅನೇಕ ಕೃತಿಗಳನ್ನು ಇಂಗ್ಲೀಷ್ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡನಾಡಿನ ಸಹೃದಯ ಭಾವಗೀತಕಾರರಾದ ಇವರ ದೀಪಿಕಾ, ಬಾರೋ ವಸಂತ, ನಂದ ಕಿಶೋರಿ ಮುಂತಾದ ಕವನಸಂಕಲನಗಳು ಹಾಗೂ ಧ್ವನಿಸುರಳಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಶಿಶು ಸಾಹಿತ್ಯ, ವಿಮರ್ಶೆ, ಅನುವಾದ ಸಾಹಿತ್ಯಗಳ ನಿರ್ಮಾಣದಲ್ಲಿ ಸಕ್ರಿಯರಾದ ಭಟ್ಟರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರಶಸ್ತಿ ಮುಂತಾದ ಅನೇಕ ಪುರಸ್ಕಾರಗಳು ಅರಸಿ ಬಂದಿವೆ.
ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ || ಬಾರೋ ||

ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖದೃಶ್ಯವ ಸಲಿಸಿ || ಬಾರೋ ||

ಮೊಗಚುತ ನೆನ್ನೆಯ ದು:ಖಗಳ
ತೆರೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ || ಬಾರೋ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||

”ಬಾರೋ ವಸಂತ’ ಕವಿತೆಯಲ್ಲಿ ಲಕ್ಷ್ಮಿನಾರಾಯಣ ಭಟ್ಟರು ವಸಂತನ ಆಗಮನದಿಂದ ಪ್ರಕೃತಿಯಲ್ಲಿ ಹಾಗೂ ಹೃದಯದಲ್ಲಿ ಆಗುವ ಬದಲಾವಣೆಗಳನ್ನು ಸೂಚ್ಯವಾಗಿ ನಮೂದಿಸಿದ್ದಾರೆ. ಶಿಶಿರದಲ್ಲಿ ತನ್ನ ಸಂಪತ್ತನ್ನು ಕಳೆದುಕೊಂಡ ಮರಗಿಡಗಳು ವಸಂತದಲ್ಲಿ ಮತ್ತೆ ನವ ಪಲ್ಲವಗಳಿಂದ ಮನೋಹರ ಸುಮಗಳಿಂದ ಮಧುರವಾದ ಹಣ್ಣುಗಳಿಂದ ಸಂಪದ್ಭರಿತವಾಗುತ್ತವೆ. ಅವನ್ನೆಲ್ಲ ನೋಡಿದ ನಮ್ಮ ಎದೆಯ ಭಾವನೆಯಲ್ಲೂ ಏನೋ ಹೊಸತನ ಏನೋ ಹರುಷ ಒಡಮೂಡುತ್ತದೆ. ಹಾಗಾಗಿ ವಸಂತ ಹೊಸ ಭಾವನೆಗಳನ್ನು ಹೊಸ ಕಾಮನೆಗಳನ್ನು ಮೂಡಿಸಿ ಹರುಷದ ಹರಿಕಾರನಾಗುತ್ತಾನೆ.

ಕುಣಿದು ಕುಪ್ಪಳಿಸಬೇಕೆಂಬ ನಮ್ಮ ಬಯಕೆಗೆ ಜಗತ್ತು ಅನೇಕ ಸಂಕೋಲೆಗಳನ್ನು ತೊಡಿಸಿರುತ್ತದೆ. ವಸಂತ ಆ ಸಂಕೋಲೆಗಳನ್ನೆಲ್ಲ ಕಳಚುವುದಲ್ಲದೆ ನಮ್ಮ ಕುಣಿತಕ್ಕೆ ತಾಳವನ್ನೂ ಹಾಕಲಿ ಎಂಬ ಆಶಾಭಾವನೆ ಕವಿಯದ್ದು. ವಸಂತ ತನ್ನೊಂದಿಗೆ ಕರೆತರುವ ಮಂದಮಾರುತ ವರ್ಷವಿಡೀ ದುಡಿದು ದಣಿದ ದೇಹಕ್ಕೆ ತಂಪನ್ನು ನೀಡಿ ಆ ಸುಖಸ್ಪರ್ಶದಲ್ಲಿ ಮನಸ್ಸಿನಲ್ಲಿ ನಾಳಿನ ಸುಖದೃಶ್ಯ ಮೂಡುವಂತೆ ಮಾಡುವನೆಂಬ ಹಂಬಲ ಅವನದ್ದು.

ಚಕ್ರವತ್ ಪರಿವರ್ತಂತೇ ಸುಖಾನಿ ಚ ದು:ಖಾನಿ ಚ ಎಂಬ ನುಡಿಯಂತೆ ಮಾನವ ಜೀವನ ಎನ್ನುವುದು ಸುಖ ದು:ಖಗಳ ಸಮ್ಮಿಶ್ರಣ. ನಾಳೆ ಸುಖ ಬರುವುದೆಂಬ ಆಶಾಭಾವನೆಯೇ ಇಂದು ದು:ಖದಲ್ಲಿರುವವನಿಗೆ ಆಲಂಬನೆ. ಪ್ರಕೃತಿಯು ತನ್ನ ಕಷ್ಟವನ್ನು ಕಳೆದುಕೊಂಡು ನಳನಳಿಸುತ್ತಿರುವಂತೆ ತನ್ನ ದು:ಖಗಳೂ ಕಳೆದು ಸುಖದ ಅಧ್ಯಾಯ ಆರಂಭವಾಗಲಿ. ಆ ಅಧ್ಯಾಯದಲ್ಲಿ ಮೇಲು ಕೀಳುಗಳೆಂಬ ಭಾವ ಇರದೆ ವಸುಧೈವ ಕುಟುಂಬಕಮ್ ಎಂಬ ಪಾಠ ಇರಲಿ ಎಂಬ ಬಯಕೆಯನ್ನು ಕವಿ ವ್ಯಕ್ತಪಡಿಸುತ್ತಾನೆ.

ವಸಂತ ಕೇವಲ ಹೊರಗಿನ ಪ್ರಕೃತಿಯಲ್ಲಿ ಬದಲಾವಣೆಯನ್ನು ತಂದರೆ ಸಾಲದು. ನಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲಿ ಆ ವಸಂತನ ಅನುಭವವಾಗಬೇಕು. ಎಳೆಕಂದನ ಗೆಜ್ಜೆಯ ದನಿ, ಇನಿಯಳ ಲಜ್ಜೆಯ ಕಟಾಕ್ಷಗಳಲ್ಲೂ ವಸಂತನ ಹೊಸತನವನ್ನು ಅನುಭವಿಸುವ ಇರಾದೆ ಕವಿಯದ್ದು. ಗೋಳುಗಳೇ ತುಂಬಿರುವ ಬಾಳಿನಲ್ಲಿ ಇವು ಸಂತಸದ ಹಸಿರನ್ನು ಸೃಷ್ಟಿಸಬಹುದು ಎಂಬ ಪ್ರತ್ಯಾಶೆಯೊಂದಿಗೆ ಕವಿ ಕವಿತೆಯನ್ನು ಮುಗಿಸುತ್ತಾನೆ.


ಈ ಸುಂದರ ಗೀತೆಯನ್ನು ಎಚ್.ಕೆ.ನಾರಾಯಣ ಅವರ ರಾಗಸಂಯೋಜನೆಯಲ್ಲಿ, ಸುಲೋಚನಾ ಅವರ ದನಿಯಲ್ಲಿ ಕೇಳಿ ಆನಂದಿಸಿ.

ನಿರೂಪಣೆ: ಮಹಾಬಲ ಭಟ್, ಗೋವಾ

ಹೃದಯ ಮನಸ್ಸುಗಳನ್ನು ಬೆಸೆಯುವ 'ಸಂಕ'

*ಹೃದಯ ಮನಸ್ಸುಗಳನ್ನು ಬೆಸೆಯುವ 'ಸಂಕ'.*

ಡಾ. ನವೀನ್ ಗಂಗೋತ್ರಿ ಅವರ ಚೊಚ್ಚಲ ಕಥಾಸಂಕಲನ 'ಸಂಕ' ಓದಿಗೆ ಸಿಕ್ಕಿದ್ದು ಪ್ರಿಯಕ್ಕನ ಕೃಪೆಯಿಂದ. ಕುಂಟುತ್ತಾ ತೆವಳುತ್ತಾ ಸಾಗಿದ ಓದು ಅವಲೋಕನವನ್ನು ಅಕ್ಷರಕ್ಕಿಳಿಸುವ ಉತ್ಸಾಹವನ್ನು ವಿಕಲಗೊಳಿಸಿತ್ತು. ಎರವಲು ಪಡೆದ ಪುಸ್ತಕವನ್ನು ಹಿಂದಿರುಗಿಸಿದ್ದೆ. ಆದರೂ ಉಂಡು ತೃಪ್ತಿಯಾದಾಗ ಪಾಚಕರಿಗೂ ಬಡಿಸಿದವರಿಗೂ ಕೃತಜ್ಞತೆ ಹೇಳದಿರುವುದು ಕೃತಘ್ನತೆಯ ಕುರುಹೆನಿಸಿ ಬರೆಯಲು ಉಪಕ್ರಮಿಸಿದ್ದೇನೆ‌.

ಮೊದಲ ಕಥೆ ಆವರ್ತನ ಒಂದು ಶುದ್ಧ ಸಾಂಸಾರಿಕ ಕಥನ. ಅದರಲ್ಲೂ ಸಂಸಾರದಲ್ಲಿ ಅವಶ್ಯವಾಗಿ ಬೇಕಾಗುವ ವಿವಿಧ ರೀತಿಯ ಹೊಂದಾಣಿಕೆಯ ಬಗ್ಗೆ ಮಹಿಳೆಯೊಬ್ಬಳಿಗೆ ಮೂಡುವ ಜಿಜ್ಞಾಸೆ ಈ ಕಥೆಯ ವಸ್ತು. ಲೇಖಕ ಪುರುಷನೇ ಆದರೂ ಸ್ತ್ರೀ ಸಂವೇದನೆ ಸಮರ್ಪಕವಾಗಿ ಮೂಡಿ ಬಂದಿದೆ.

ಭಾವನೆಯ ಮೂರ್ತಸ್ವರೂಪವಾಗಿರುವ ಹೆಂಡತಿ ಹಾಗೂ ಪ್ರಾಕ್ಟಿಕಲ್ ಆಗಿರುವ ಗಂಡ ಇವರ ಮಧ್ಯೆ ಉಂಟಾಗುವ ಭಾವಸಂಘರ್ಷ ಎರಡನೇ ಕಥೆಯ ಜೀವಾಳ. ಮಾತು ಸೋತಾಗ ಬರವಣಿಗೆಯನ್ನು ಅವಲಂಬಿಸಿ ಗೆಲ್ಲಬಹುದು ಎಂಬ ಗೌಣ ಪಾಠವೂ ಕಥೆಯಲ್ಲಿದೆ. ನನ್ನ ಸಂಸಾರದ ಕಥೆ ಲೇಖಕರಿಗೆ ಹೇಗೆ ಗೊತ್ತಾಯಿತು ಎಂದು ವಿಸ್ಮಯಪಡುವಷ್ಟು ಆಪ್ತವಾಯಿತು ಈ ಕಥೆ. ಕಥೆಯ ತಂತ್ರವೂ ಇಷ್ಟವಾಯಿತು.

ಮೂರನೇ ಕಥೆಯಲ್ಲಿ ಮೂರ್ನಾಲ್ಕು ಘಟನೆಗಳ‌ನ್ನು ಕಥಿಸಿ ತನ್ಮೂಲಕ ಇಷ್ಟ, ಪ್ರೀತಿ, ಕರುಣೆಗಳು ಸ್ವಪ್ರಜ್ಞೆಯೊಡಗೂಡಿ ಮೊಳಕೆಯೊಡೆವ ತತ್ತ್ವ ವನ್ನು ಮಾರ್ಮಿಕವಾಗಿ ನಿರೂಪಿಸಲಾಗಿದೆ.

ನಾಲ್ಕನೆಯ ಕಥೆಯಲ್ಲಿ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಕಳೆದು ಹೋಗುವ ಗಂಡ ಹಾಗೂ ಸಾಂಸಾರಿಕ ಭಾವಗಳಿಗೆ ಮಹತ್ತ್ವ ಕೊಡುವ ಹೆಂಡತಿಯ ನಡುವಿನ ಸಂಘರ್ಷದ ನಿರೂಪಣೆ ಇದೆ. ಸಾಂಸಾರಿಕ ಆನಂದವೇ ಗೆಲ್ಲುವುದು ಎಂಬ ಸಂದೇಶ ಕೊನೆಯಲ್ಲಿ ಧ್ವನಿಸಿದೆ.

ಐದನೇ ಕಥನವನ್ನು ಕಥೆ ಅನ್ನುವುದಕ್ಕಿಂತ ಸಂಭೋಗ ವಿಪ್ರಲಂಭಗಳ ಶೃಂಗಾರ ಕಾವ್ಯ ಎನ್ನುವುದು ಲೇಸು. ಪ್ರೀತಿಸಬೇಡ, ಹೃದಯಕ್ಕೆ ನೋವಾಗುತ್ತೆ ಎಂಬುದು ಈ ಕಾವ್ಯದ ತಂತು. ಕೊಡೆ ರಿಪೇರಿಯವನ ಪ್ರತಿಮೆ ಇಷ್ಟವಾಯಿತು.

ದೀಪ ತೋರಿದೆಡೆಗೆ ಎಂಬ ಆರನೆಯ ಕಥೆಯನ್ನು ಮೊದಲೇ ಓದಿದ್ದೆ. 'ಅಕ್ಕ' ನ ಬಹುಮಾನ ಪಡೆದ ಕಥೆಯಿದು. ಮದುವೆಗೆ ಹೆಣ್ಣು ಸಿಗದ ಮಾಣಿಯ ದುಗುಡದ ಕಥೆ.

ಏಳನೆಯದ್ದು ಮನತಟ್ಟುವ ಕಥೆ. ಹಳ್ಳಿಯ ಯುವಕರ ನಗರಾಭಿಗಮನದಿಂದ ಹಿರಿಯರ ಮೇಲಾಗುವ ಪರಿಣಾಮದ ನಿರೂಪಣೆ ಇದೆ. ಅಂತಹ ಹಿರಿಯ ದಂಪತಿಗಳು ಪರಿಸ್ಥಿತಿಗೆ ಹೊಂದಿಕೊಳ್ಳುವ ನವಿರಾದ ಭಾವ ಚಿಲುಮೆಯಿದೆ.

ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಸಣ್ಣ ಉದ್ಯಮದ ಮೇಲಾಗುವ ಪ್ರತಿಕೂಲ ಪರಿಣಾಮದ ಜೊತೆಗೆ ಯಂತ್ರಗಳು ಮನುಷ್ಯರಂತೆ ಪ್ರೀತಿಸಲಾರವು ಎಂಬ ಸಂದೇಶ ನೀಡುವ ಎಂಟನೆಯ ಕಥೆ ಹೃದಯಸ್ಪರ್ಶಿಯಾಗಿದೆ.

ಗೃಹಿಣಿಯೊಬ್ಬಳಿಗೆ ಕರಿಬೇವಿನ ಗಿಡವೂ ಮಗುವಂತೆ ಇರಬಹುದು ಎಂಬ ಹೆಂಗರುಳಿನ ಭಾವಬಂಧ ಒಂಭತ್ತನೇ ಕಥೆಯ ಹೃದಯ. ಶವಾಗಾರವನ್ನು ಆಪರೇಷನ್ ಥಿಯೇಟರ್ ಎಂದು ಭಾವಿಸಿದ ಗೃಹಸ್ಥನ ಮುಗ್ಧತೆ ಕರುಳನ್ನು ಚುರ್ ಗುಟ್ಟಿಸಿತು.

ಮಾಗಿದ ಬದುಕಿನ ಹಿಂದಿನ ನೋವನ್ನು ತೆರೆದಿಟ್ಟು ಪ್ರಸ್ತುತ ಬದುಕಿನ ಕಷ್ಟದೊಂದಿಗೆ ಹೆಣೆದು ಹೊಸದೊಂದು ಪರಿಹಾರಪ್ರಾಪ್ತಿಯ ಕಥಾಹಂದರ ಹತ್ತನೆಯ ಕಥೆಯಲ್ಲಿದೆ.

ಹಳ್ಳಿಯ ಬದುಕಿನ ಮತ್ತೊಂದು ಕಥೆ ಸಂಕಲನದ ಶೀರ್ಷಿಕೆ ಕಥೆಯಾದ ಸಂಕ.

ಶಿಖೆ ಎಂಬ ಕೊನೆಯ ಕಥೆ ಲಲಿತ ಪ್ರಬಂಧದಂತಿದ್ದು ಓದುಗರು ಮಂದಹಾಸದೊಂದಿಗೆ ಪುಸ್ತಕವನ್ನು ಮುಚ್ಚಲು ಅನುವು ಮಾಡಿ ಕೊಡುತ್ತದೆ.

ಒಟ್ಟಿನಲ್ಲಿ ಇಷ್ಟವಾದ ಚಂದದ ಸಂಕಲನ. ಭಾಷೆ ನಿರರ್ಗಳ. ಸ್ಥಾಯಿಭಾವದ ಮೊಗ್ಗನ್ನು ರಸವಾಗಿ ಅರಳಿಸುವಲ್ಲಿ ಭಾಷೆ ಸಕ್ಷಮವಾಗಿದೆ. ಕೆಲವು ಹೃದಯತಟ್ಟುವ ಸಾಲುಗಳು ಇಡೀ ಕಥೆಯನ್ನು ಆಪ್ತವಾಗಿಸುತ್ತವೆ. ಅಲ್ಲಲ್ಲಿ ಸಾಂದರ್ಭಿಕವಾಗಿ ಪೋಣಿಸಿರುವ ಪೂರ್ವ ಸೂರಿಗಳ ಅಣಿಮುತ್ತುಗಳು ತರುತಳೆದ ಪುಷ್ಪದಷ್ಟೇ ಸಹಜವಾಗಿವೆ.

ಲೇಖಕರೇ ಒಮ್ಮೆ ಹೇಳಿದ 'ಘಟನೆಗಳ ಸೀಕ್ವೆನ್ಸೇ ಕಥೆಯಲ್ಲ, ಮಾನವನ ಭಾವ ಹಾಗೂ ಜಿಜ್ಞಾಸೆಗಳು ಕಥೆಯಾಗಬೇಕು' ಎಂಬ ಮಾತು ನಿಜವೆನಿಸುವಂತಹ ಕಥೆಗಳಿವು.

ನವೀನ ಭಟ್ಟರಿಂದ ಇನ್ನೂ ಹೆಚ್ಚಿನ ಕಥಾಸಂಕಲನಗಳನ್ನು ನಿರೀಕ್ಷಿಸುತ್ತ ಶುಭಕೋರುವೆ.

ಇದನ್ನು ಓದಿ ನಿಮಗೂ ಓದುವ ಹುಮ್ಮಸ್ಸು ಮೂಡಿದರೆ ಸ್ನೇಹ ಬುಕ್ ಹೌಸ್ ನ್ನು ಸಂಪರ್ಕಿಸಿ. 9845031335
ಬೆಲೆ: ₹120/-

📖 *ಪುಸ್ತಕಾವಲೋಕನ:*
*ಮಹಾಬಲ ಭಟ್, ಗೋವಾ*

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...