Friday, February 28, 2020

ಹೃದಯ ಮನಸ್ಸುಗಳನ್ನು ಬೆಸೆಯುವ 'ಸಂಕ'

*ಹೃದಯ ಮನಸ್ಸುಗಳನ್ನು ಬೆಸೆಯುವ 'ಸಂಕ'.*

ಡಾ. ನವೀನ್ ಗಂಗೋತ್ರಿ ಅವರ ಚೊಚ್ಚಲ ಕಥಾಸಂಕಲನ 'ಸಂಕ' ಓದಿಗೆ ಸಿಕ್ಕಿದ್ದು ಪ್ರಿಯಕ್ಕನ ಕೃಪೆಯಿಂದ. ಕುಂಟುತ್ತಾ ತೆವಳುತ್ತಾ ಸಾಗಿದ ಓದು ಅವಲೋಕನವನ್ನು ಅಕ್ಷರಕ್ಕಿಳಿಸುವ ಉತ್ಸಾಹವನ್ನು ವಿಕಲಗೊಳಿಸಿತ್ತು. ಎರವಲು ಪಡೆದ ಪುಸ್ತಕವನ್ನು ಹಿಂದಿರುಗಿಸಿದ್ದೆ. ಆದರೂ ಉಂಡು ತೃಪ್ತಿಯಾದಾಗ ಪಾಚಕರಿಗೂ ಬಡಿಸಿದವರಿಗೂ ಕೃತಜ್ಞತೆ ಹೇಳದಿರುವುದು ಕೃತಘ್ನತೆಯ ಕುರುಹೆನಿಸಿ ಬರೆಯಲು ಉಪಕ್ರಮಿಸಿದ್ದೇನೆ‌.

ಮೊದಲ ಕಥೆ ಆವರ್ತನ ಒಂದು ಶುದ್ಧ ಸಾಂಸಾರಿಕ ಕಥನ. ಅದರಲ್ಲೂ ಸಂಸಾರದಲ್ಲಿ ಅವಶ್ಯವಾಗಿ ಬೇಕಾಗುವ ವಿವಿಧ ರೀತಿಯ ಹೊಂದಾಣಿಕೆಯ ಬಗ್ಗೆ ಮಹಿಳೆಯೊಬ್ಬಳಿಗೆ ಮೂಡುವ ಜಿಜ್ಞಾಸೆ ಈ ಕಥೆಯ ವಸ್ತು. ಲೇಖಕ ಪುರುಷನೇ ಆದರೂ ಸ್ತ್ರೀ ಸಂವೇದನೆ ಸಮರ್ಪಕವಾಗಿ ಮೂಡಿ ಬಂದಿದೆ.

ಭಾವನೆಯ ಮೂರ್ತಸ್ವರೂಪವಾಗಿರುವ ಹೆಂಡತಿ ಹಾಗೂ ಪ್ರಾಕ್ಟಿಕಲ್ ಆಗಿರುವ ಗಂಡ ಇವರ ಮಧ್ಯೆ ಉಂಟಾಗುವ ಭಾವಸಂಘರ್ಷ ಎರಡನೇ ಕಥೆಯ ಜೀವಾಳ. ಮಾತು ಸೋತಾಗ ಬರವಣಿಗೆಯನ್ನು ಅವಲಂಬಿಸಿ ಗೆಲ್ಲಬಹುದು ಎಂಬ ಗೌಣ ಪಾಠವೂ ಕಥೆಯಲ್ಲಿದೆ. ನನ್ನ ಸಂಸಾರದ ಕಥೆ ಲೇಖಕರಿಗೆ ಹೇಗೆ ಗೊತ್ತಾಯಿತು ಎಂದು ವಿಸ್ಮಯಪಡುವಷ್ಟು ಆಪ್ತವಾಯಿತು ಈ ಕಥೆ. ಕಥೆಯ ತಂತ್ರವೂ ಇಷ್ಟವಾಯಿತು.

ಮೂರನೇ ಕಥೆಯಲ್ಲಿ ಮೂರ್ನಾಲ್ಕು ಘಟನೆಗಳ‌ನ್ನು ಕಥಿಸಿ ತನ್ಮೂಲಕ ಇಷ್ಟ, ಪ್ರೀತಿ, ಕರುಣೆಗಳು ಸ್ವಪ್ರಜ್ಞೆಯೊಡಗೂಡಿ ಮೊಳಕೆಯೊಡೆವ ತತ್ತ್ವ ವನ್ನು ಮಾರ್ಮಿಕವಾಗಿ ನಿರೂಪಿಸಲಾಗಿದೆ.

ನಾಲ್ಕನೆಯ ಕಥೆಯಲ್ಲಿ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಕಳೆದು ಹೋಗುವ ಗಂಡ ಹಾಗೂ ಸಾಂಸಾರಿಕ ಭಾವಗಳಿಗೆ ಮಹತ್ತ್ವ ಕೊಡುವ ಹೆಂಡತಿಯ ನಡುವಿನ ಸಂಘರ್ಷದ ನಿರೂಪಣೆ ಇದೆ. ಸಾಂಸಾರಿಕ ಆನಂದವೇ ಗೆಲ್ಲುವುದು ಎಂಬ ಸಂದೇಶ ಕೊನೆಯಲ್ಲಿ ಧ್ವನಿಸಿದೆ.

ಐದನೇ ಕಥನವನ್ನು ಕಥೆ ಅನ್ನುವುದಕ್ಕಿಂತ ಸಂಭೋಗ ವಿಪ್ರಲಂಭಗಳ ಶೃಂಗಾರ ಕಾವ್ಯ ಎನ್ನುವುದು ಲೇಸು. ಪ್ರೀತಿಸಬೇಡ, ಹೃದಯಕ್ಕೆ ನೋವಾಗುತ್ತೆ ಎಂಬುದು ಈ ಕಾವ್ಯದ ತಂತು. ಕೊಡೆ ರಿಪೇರಿಯವನ ಪ್ರತಿಮೆ ಇಷ್ಟವಾಯಿತು.

ದೀಪ ತೋರಿದೆಡೆಗೆ ಎಂಬ ಆರನೆಯ ಕಥೆಯನ್ನು ಮೊದಲೇ ಓದಿದ್ದೆ. 'ಅಕ್ಕ' ನ ಬಹುಮಾನ ಪಡೆದ ಕಥೆಯಿದು. ಮದುವೆಗೆ ಹೆಣ್ಣು ಸಿಗದ ಮಾಣಿಯ ದುಗುಡದ ಕಥೆ.

ಏಳನೆಯದ್ದು ಮನತಟ್ಟುವ ಕಥೆ. ಹಳ್ಳಿಯ ಯುವಕರ ನಗರಾಭಿಗಮನದಿಂದ ಹಿರಿಯರ ಮೇಲಾಗುವ ಪರಿಣಾಮದ ನಿರೂಪಣೆ ಇದೆ. ಅಂತಹ ಹಿರಿಯ ದಂಪತಿಗಳು ಪರಿಸ್ಥಿತಿಗೆ ಹೊಂದಿಕೊಳ್ಳುವ ನವಿರಾದ ಭಾವ ಚಿಲುಮೆಯಿದೆ.

ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಸಣ್ಣ ಉದ್ಯಮದ ಮೇಲಾಗುವ ಪ್ರತಿಕೂಲ ಪರಿಣಾಮದ ಜೊತೆಗೆ ಯಂತ್ರಗಳು ಮನುಷ್ಯರಂತೆ ಪ್ರೀತಿಸಲಾರವು ಎಂಬ ಸಂದೇಶ ನೀಡುವ ಎಂಟನೆಯ ಕಥೆ ಹೃದಯಸ್ಪರ್ಶಿಯಾಗಿದೆ.

ಗೃಹಿಣಿಯೊಬ್ಬಳಿಗೆ ಕರಿಬೇವಿನ ಗಿಡವೂ ಮಗುವಂತೆ ಇರಬಹುದು ಎಂಬ ಹೆಂಗರುಳಿನ ಭಾವಬಂಧ ಒಂಭತ್ತನೇ ಕಥೆಯ ಹೃದಯ. ಶವಾಗಾರವನ್ನು ಆಪರೇಷನ್ ಥಿಯೇಟರ್ ಎಂದು ಭಾವಿಸಿದ ಗೃಹಸ್ಥನ ಮುಗ್ಧತೆ ಕರುಳನ್ನು ಚುರ್ ಗುಟ್ಟಿಸಿತು.

ಮಾಗಿದ ಬದುಕಿನ ಹಿಂದಿನ ನೋವನ್ನು ತೆರೆದಿಟ್ಟು ಪ್ರಸ್ತುತ ಬದುಕಿನ ಕಷ್ಟದೊಂದಿಗೆ ಹೆಣೆದು ಹೊಸದೊಂದು ಪರಿಹಾರಪ್ರಾಪ್ತಿಯ ಕಥಾಹಂದರ ಹತ್ತನೆಯ ಕಥೆಯಲ್ಲಿದೆ.

ಹಳ್ಳಿಯ ಬದುಕಿನ ಮತ್ತೊಂದು ಕಥೆ ಸಂಕಲನದ ಶೀರ್ಷಿಕೆ ಕಥೆಯಾದ ಸಂಕ.

ಶಿಖೆ ಎಂಬ ಕೊನೆಯ ಕಥೆ ಲಲಿತ ಪ್ರಬಂಧದಂತಿದ್ದು ಓದುಗರು ಮಂದಹಾಸದೊಂದಿಗೆ ಪುಸ್ತಕವನ್ನು ಮುಚ್ಚಲು ಅನುವು ಮಾಡಿ ಕೊಡುತ್ತದೆ.

ಒಟ್ಟಿನಲ್ಲಿ ಇಷ್ಟವಾದ ಚಂದದ ಸಂಕಲನ. ಭಾಷೆ ನಿರರ್ಗಳ. ಸ್ಥಾಯಿಭಾವದ ಮೊಗ್ಗನ್ನು ರಸವಾಗಿ ಅರಳಿಸುವಲ್ಲಿ ಭಾಷೆ ಸಕ್ಷಮವಾಗಿದೆ. ಕೆಲವು ಹೃದಯತಟ್ಟುವ ಸಾಲುಗಳು ಇಡೀ ಕಥೆಯನ್ನು ಆಪ್ತವಾಗಿಸುತ್ತವೆ. ಅಲ್ಲಲ್ಲಿ ಸಾಂದರ್ಭಿಕವಾಗಿ ಪೋಣಿಸಿರುವ ಪೂರ್ವ ಸೂರಿಗಳ ಅಣಿಮುತ್ತುಗಳು ತರುತಳೆದ ಪುಷ್ಪದಷ್ಟೇ ಸಹಜವಾಗಿವೆ.

ಲೇಖಕರೇ ಒಮ್ಮೆ ಹೇಳಿದ 'ಘಟನೆಗಳ ಸೀಕ್ವೆನ್ಸೇ ಕಥೆಯಲ್ಲ, ಮಾನವನ ಭಾವ ಹಾಗೂ ಜಿಜ್ಞಾಸೆಗಳು ಕಥೆಯಾಗಬೇಕು' ಎಂಬ ಮಾತು ನಿಜವೆನಿಸುವಂತಹ ಕಥೆಗಳಿವು.

ನವೀನ ಭಟ್ಟರಿಂದ ಇನ್ನೂ ಹೆಚ್ಚಿನ ಕಥಾಸಂಕಲನಗಳನ್ನು ನಿರೀಕ್ಷಿಸುತ್ತ ಶುಭಕೋರುವೆ.

ಇದನ್ನು ಓದಿ ನಿಮಗೂ ಓದುವ ಹುಮ್ಮಸ್ಸು ಮೂಡಿದರೆ ಸ್ನೇಹ ಬುಕ್ ಹೌಸ್ ನ್ನು ಸಂಪರ್ಕಿಸಿ. 9845031335
ಬೆಲೆ: ₹120/-

📖 *ಪುಸ್ತಕಾವಲೋಕನ:*
*ಮಹಾಬಲ ಭಟ್, ಗೋವಾ*

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...