Friday, October 30, 2020

ಮಹಾಗೌರಿ

ಸರ್ವಾಧಿಷ್ಠಾನರೂಪಾಯೈ ಕೂಟಸ್ಥಾಯೈ ನಮೋ ನಮಃ|

ಅರ್ಧಮಾತ್ರಾರ್ಥಭೂತಾಯೈ ಹೃಲ್ಲೇಖಾಯೈ ನಮೋ ನಮಃ||

ನವರಾತ್ರ ಮಹೋತ್ಸವದ ಎಂಟನೆಯ ದಿನ ಪೂಜೆಗೊಂಬ ದೇವಿ ಮಹಾಗೌರಿ. ಗೌರ ಅಂದ್ರೆ ಬಿಳಿ. ಅವದಾತಃ ಸಿತೋ ಗೌರೋ ವಲಕ್ಷೋ ಧವಲೋರ್ಜುನಃ| ಬೆಳ್ಳಗಿರುವವಳೇ ಗೌರಿ. ಧವಳವರ್ಣದ ಹಿಮವತ್ಪರ್ವತದ ಪುತ್ರಿಯಾದ ಪಾರ್ವತಿಯೂ ಶ್ವೇತವರ್ಣೆಯೇ ಆಗಿದ್ದಳು. ಅವಳ ಬಿಳಿಯ ಬಣ್ಣ ಅನುಪಮವಾಗಿತ್ತು. ಹಾಗಾಗಿ ಅವಳು ಮಹಾಗೌರಿ. ಆದಿಶಕ್ತಿಸ್ವರೂಪಿಣಿಯೂ ಆಗಿರುವುದರಿಂದ ಅವಳನ್ನು ಮಹಾಗೌರಿಯೆಂದು ಕರೆಯುವುದು ಯುಕ್ತವೇ ಆಗಿದೆ.

ದಕ್ಷನ ಯಜ್ಞದಲ್ಲಿ ದಾಕ್ಷಾಯಣಿ ದಹಿಸಿಹೋದದ್ದನ್ನು ಕೇಳಿ ಕ್ರುದ್ಧನಾದ ಶಿವ ತನ್ನ ಗಣಗಳೊಂದಿಗೆ ಯಜ್ಞಶಾಲೆಯನ್ನು ಪ್ರವೇಶಿಸಿ ಯಜ್ಞವನ್ನು ಧ್ವಂಸಗೊಳಿಸಿದ. ದಾಕ್ಷಾಯಣಿಯ ಕುರಿತಾದ ಅಪ್ರತಿಮ ಪ್ರೀತಿಯಿಂದ ವಿಲಪಿಸುತ್ತ ಅವಳ ಅರ್ಧಬೆಂದ ದೇಹವನ್ನು ತನ್ನ ಹೆಗಲಮೇಲೇರಿಸಿಕೊಂಡು ಉನ್ಮತ್ತನಂತೆ ತಿರುಗಲು ಆರಂಭಿಸಿದ. ಇದನ್ನು ನೋಡಿ ಬ್ರಹ್ಮಾದಿದೇವತೆಗಳು ಚಿಂತಿತರಾದರು. ಆಗ ವಿಷ್ಣುವು ತನ್ನ ಶಾರ್ಙ್ಗಧನುವಿಗೆ ಬಾಣಗಳನ್ನು ಹೂಡಿ ಆ ಶರೀರವನ್ನು ಛಿದ್ರಗೊಳಿಸಿದ. ಆಗ ಸತಿಯ ಅವಯವಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬಿದ್ದವು. ಆ ಪ್ರದೇಶಗಳಲ್ಲೆಲ್ಲ ಶಿವ ಬೇರೆ ಬೇರೆ ರೂಪಗಳಲ್ಲಿ ನೆಲೆನಿಂತ. ಈ ಸ್ಥಾನಗಳಲ್ಲಿ ದೇವಿಯ ಶಕ್ತಿ ಜಾಗ್ರತವಾಗಿರುವುದು ಹಾಗೂ ಇಲ್ಲಿ ಮಾಡುವ ಜಪತಪಾನುಷ್ಠಾನಗಳು ಹೆಚ್ಚು ಸಿದ್ಧಿಯನ್ನು ಪಡೆಯುವವು ಎಂದು ಶಂಕರನು ಅನುಗ್ರಹವನ್ನೂ ಮಾಡಿದ.

ಈ ಕಥೆಯನ್ನು ಜನಮೇಜಯನಿಗೆ ಹೇಳಿದ ವ್ಯಾಸಮಹರ್ಷಿಗಳು ಅಂತಹ ಸಿದ್ಧಿಪೀಠಗಳ ಹೆಸರುಗಳನ್ನೂ ಹೇಳುತ್ತಾರೆ. ವಾರಾಣಸ್ಯಾಂ ವಿಶಾಲಾಕ್ಷೀ ಗೌರೀಮುಖನಿವಾಸಿನೀ ಎಂದು ಆರಂಭಿಸಿ, ನೈಮಿಷಾರಣ್ಯದಲ್ಲಿ ಲಿಂಗಧಾರಿಣಿ, ಪ್ರಯಾಗದಲ್ಲಿ ಲಲಿತಾ, ಗಂಧಮಾದನದಲ್ಲಿ ಕಾಮುಕೀ, ಮಾನಸಸರೋವರ ಪರಿಸರದಲ್ಲಿ ಕುಮುದಾ, ಗೋಮಂತದಲ್ಲಿ ಗೋಮತಿ, ಮಂದರದಲ್ಲಿ ಕಾಮಚಾರಿಣೀ, ಚೈತ್ರರಥದಲ್ಲಿ ಮದೋತ್ಕಟಾ, ಹಸ್ತಿನಾಪುರದಲ್ಲಿ ಜಯಂತಿ ಹೀಗೆ ಹೇಳುತ್ತ ಗೌರೀ ಪ್ರೋಕ್ತಾ ಕಾನ್ಯಕುಬ್ಜೇ ಎನ್ನುತ್ತಾರೆ. ಕಾನ್ಯಕುಬ್ಜದಲ್ಲಿರುವ ಸತಿಯಶಕ್ತಿಗೆ ಗೌರಿ ಎಂದು ಹೆಸರು. ಇದು ದೇವೀಭಾಗವತದ ಸಪ್ತಮ ಸ್ಕಂಧದ ಒಂದು ಉಲ್ಲೇಖ.

ಶೈಲಪುತ್ರಿಯು ಬ್ರಹ್ಮಚಾರಿಣಿಯಾಗಿ ಶಿವನನ್ನು ಹೊಂದಲು ಕಠಿನತಪಸ್ಸನ್ನಾಚರಿಸಿದ್ದು ನಮಗೆಲ್ಲ ತಿಳಿದಿದೆ. ವ್ರಿಯೇಽಹಂ ವರದಂ ಶಂಭುಂ ನಾನ್ಯಂ ದೇವಂ ಮಹೇಶ್ವರಾತ್ ಎಂದು ಅವಳು ಪ್ರತಿಜ್ಞೆ ಮಾಡಿದ್ದಳು. ಅವಳ ಗೌರವರ್ಣವನ್ನೂ ಸೌಂದರ್ಯವನ್ನೂ ನೋಡಿದ ಮನ್ಮಥ ತನ್ನ ಕೆಲಸ ಸುಲಭವಾಗಬಹುದೆಂದು ತರ್ಕಿಸಿದ. ಮಹಾಕವಿ ಕಾಲಿದಾಸ ಪಾರ್ವತಿಯನ್ನು ಅನೇಕಕಡೆ ಗೌರಿಯೆಂದೇ ಸಂಬೋಧಿಸಿದ್ದಾನೆ. ಶಿವನಸೇವೆಯಲ್ಲಿ ನಿರತಳಾಗಿದ್ದ ಗೌರಿಯ ವರ್ಣನೆಯನ್ನು ಅತ್ಯಂತ ಮನೋಹರವಾಗಿ ಮಾಡಿದ್ದಾನೆ.

ಅಥೋಪನಿನ್ಯೇ ಗಿರಿಶಾಯ ಗೌರೀ ತಪಸ್ವಿನೇ ತಾಮ್ರರುಚಾ ಕರೇಣ|

ವಿಶೋಷಿತಾಂ ಭಾನುಮತೋ ಮಯೂಖೈರ್ಮಂದಾಕಿನೀಪುಷ್ಕರಬೀಜಮಾಲಾಮ್||

ತನ್ನ ಕೆಂಪಾದ ಕೈಗಳಿಂದ ಮಂದಾಕಿನಿಯಲ್ಲಿ ಸೂರ್ಯಕಿರಣಗಳಿಂದ ಒಣಗಿದ ಕಮಲಗಳ ಬೀಜಗಳಿಂದ ಮಾಡಿದ ಜಪಮಾಲೆಯನ್ನು ಶಿವನಿಗೆ ಸಮರ್ಪಿಸಿದಳು.

ಮಹಾಗೌರಿಯ ಆರಾಧನೆಯ ಮಂತ್ರ ಹೀಗಿದೆ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ|

ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||

ಮಹಾಗೌರಿ ಬಿಳಿಯ ವೃಷಭವನ್ನು ಏರಿದ್ದಾಳೆ. ಬಿಳಿಯಬಣ್ಣ ಶುದ್ಧತೆಯ ಸಂಕೇತ. ಶುದ್ಧಚಾರಿತ್ರ್ಯದ ಪ್ರತೀಕವಾದ ಶ್ವೇತವಸ್ತ್ರವನ್ನು ಧರಿಸಿದ್ದಾಳೆ. ಮಹಾದೇವನಿಗೆ ಸದಾ ಸಂತಸವನ್ನು ನೀಡುವ ಮಹಾಗೌರಿ ನಮಗೆ ಶುಭವನ್ನು ನೀಡಲಿ ಎಂಬ ಪ್ರಾರ್ಥನೆ ಈ ಶ್ಲೋಕದಲ್ಲಿದೆ.

ಚತುರ್ಭುಜೆಯಾದ ಇವಳ ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಡಮರು ಇವೆ. ಓಂದುಕೈ ಅಭಯಮುದ್ರೆಯಲ್ಲಿದ್ದರೆ ಮತ್ತೊಂದು ಹಸ್ತ ವರದಹಸ್ತವಾಗಿದೆ.

ಮಹಾಗೌರಿಯ ಉಪಾಸನೆಯಿಂದ ನಮ್ಮ ಕಲ್ಮಶಗಳೆಲ್ಲ ದೂರವಾಗುತ್ತದೆ. ಪಾಪ. ಸಂತಾಪ, ದೈನ್ಯ ದುಃಖಗಳೆಲ್ಲ ದೂರಾಗಿ ಅಕ್ಷಯಸುಖದ ಜೀವನ ನಮ್ಮದಾಗುತ್ತದೆ ಎಂಬ ನಂಬಿಕೆ ಆಸ್ತಿಕಜನರದ್ದು. ನಾವೂ ಮಹಾಗೌರಿಯ ಆರಾಧನೆಯನ್ನು ಮಾಡಿ ಧನ್ಯರಾಗೋಣ.ನಾಳೆ ದುರ್ಗೆಯ ಕೊನೆಯ ರೂಪವಾದ ಸಿದ್ಧಿಧಾತ್ರಿಯ ಬಗ್ಗೆ ತಿಳಿದುಕೊಳ್ಳೋಣ.


Friday, October 23, 2020

ಕಾಲರಾತ್ರಿ

ಏಳನೆಯ ದಿನ ಕಾಲರಾತ್ರಿಯ ದಿನ.

ನಮೋ ದೇವಿ ವಿಶ್ವೇಶ್ವರಿ ಪ್ರಾಣನಾಥೇ

ಸದಾನಂದರೂಪೇ ಸುರಾನಂದದೇ ತೇ|

ನಮೊ ದಾನವಾನ್ತಪ್ರದೇ ಮಾನವಾನಾ-

ಮನೇಕಾರ್ಥದೇ ಭಕ್ತಿಗಮ್ಯಸ್ವರೂಪೇ||

ಸುಜನವೃಂದಕ್ಕೆ ಸವಿನಯ ನಮಸ್ಕಾರ.

ಏಳನೆಯ ದಿನ ಕಾಲರಾತ್ರಿಯ ದಿನ. ಕಾಲಃ ಕಾಲರೂಪಾ ಬ್ರಹ್ಮೈಕದಿನೇ ಚತುರ್ದಶಮನೂನಾಮಧಿಕಾರಾವಸಾನೇ ಸೃಷ್ಟಿಸಂಹಾರಹೇತುಭೂತಾ ರಾತ್ರಿಃ ಎಂದು ಶಬ್ದಕಲ್ಪದ್ರುಮ ಕಾಲರಾತ್ರಿಶಬ್ದವನ್ನು ವಿವರಿಸುತ್ತದೆ. ಹದಿನಾಲ್ಕು ಮನುಗಳ ಕಾಲ ಅಂದರೆ ಒಂದು ಕಲ್ಪ ಅದುವೇ ಬ್ರಹ್ಮನ ಒಂದು ದಿನ. ಈ ದಿನ ಮುಗಿದಾಕ್ಷಣ ಬರುವ ರಾತ್ರಿಯಲ್ಲಿ ಸಮಸ್ತ ಸೃಷ್ಟಿಯ ನಾಶವಾಗುತ್ತದೆ. ಆ ರಾತ್ರಿಗೆ ಕಾಲರಾತ್ರಿ ಎಂದು ಹೆಸರು. ದೇವೀಮಾಹಾತ್ಮ್ಯಗ್ರಂಥದ ಟೀಕಾಕಾರರಾದ ವಿದ್ಯಾವಿನೋದರ ಪ್ರಕಾರ ಮರಣಂ ತದುಪಲಕ್ಷಿತಾ ರಾತ್ರಿಃ  ಕಲ್ಪಾಂತರಾತ್ರಿಃ ಇತ್ಯರ್ಥಃ| ಒಟ್ಟಿನಲ್ಲಿ ಕಾಲರಾತ್ರಿ ಎಂದರೆ ನಾಶಕರ್ತ್ರೀ ಎಂದೇ ಅರ್ಥ.

ದೇವೀ ಭಾಗವತದ ಪಂಚಮಸ್ಕಂದದ ಇಪ್ಪತ್ಮೂರನೆಯ ಅಧ್ಯಾಯದಲ್ಲಿ ಕಾಲರಾತ್ರಿಯ ಪ್ರಾದುರ್ಭಾವವನ್ನು ವರ್ಣಿಸಲಾಗಿದೆ. ಶುಂಭನೆಂಬ ದೈತ್ಯರಾಜ ತನ್ನ ತಮ್ಮನಾದ ನಿಶುಂಭನೊಂದಿಗೆ ಸ್ವರ್ಗವನ್ನು ಆಕ್ರಮಿಸಿದಾಗ ಸ್ವರ್ಗವಾಸಿಗಳು ಕೈಲಾಸಕ್ಕೆ ದೌಡಾಯಿಸಿದರು. ಜಗನ್ಮಾತೆ ಪಾರ್ವತಿಯನ್ನು ಭಕ್ತಿಯಿಂದ ಸ್ತುತಿಸಿ ತಮ್ಮ ದುಃಖವನ್ನು ತೋಡಿಕೊಂಡರು. ಅವರ ಪ್ರಾರ್ಥನೆಯನ್ನು ಆಲಿಸಿದ ಶಿವಜಾಯೆ ತನ್ನ ಶರೀರದಿಂದ ಇನ್ನೊಂದು ರೂಪವನ್ನು ಹೊರಹಾಕಿದಳು. ಅಂಬಿಕೆಯೆಂಬ ಆ ರೂಪ ಹೊರಬಿದ್ದಾಕ್ಷಣ ಗೌರವರ್ಣದ ಗೌರಿ ಕಪ್ಪು ಬಣ್ಣಕ್ಕೆ ತಿರುಗಿ ಕಾಲಿಕೆಯಾದಳು. ಕಾಲರಾತ್ರಿ ಅಂತಲೂ ಕರೆಸಿಕೊಳ್ಳುವ ಅವಳ ವರ್ಣನೆ ಹೀಗಿದೆ.

ಮಷೀವರ್ಣಾ ಮಹಾಘೋರಾ ದೈತ್ಯಾನಾಂ ಭಯವರ್ಧಿನೀ|

ಕಾಲರಾತ್ರೀತಿ ಸಾ ಪ್ರೋಕ್ತಾ ಸರ್ವಕಾಮಫಲಪ್ರದಾ ||

ಕಪ್ಪುಬಣ್ಣದವಳಾಗಿ, ಘೋರಾಕಾರವನ್ನು ಹೊಂದಿ ದೈತ್ಯರ ಭಯವನ್ನು ವರ್ಧಿಸಿದಳು. ಸರ್ವಕಾಮಪ್ರದೆಯಾದ ಅವಳನ್ನು ಕಾಲರಾತ್ರಿ ಎಂದು ಕರೆಯಲ್ಪಡುತ್ತಾಳೆ ಎಂಬುದಾಗಿ ದೇವೀಭಾಗವತ ವರ್ಣಿಸುತ್ತದೆ. ಮುಂದೆ ಘಟಿಸಿದ ಘೋರವಾದ ಯುದ್ಧದಲ್ಲಿ ಅಂಬಿಕೆಯ ಸೂಚನೆಯಂತೆ ಕಾಲರಾತ್ರಿಯು ಚಂಡಮುಂಡರ ರುಂಡವನ್ನು ಚೆಂಡಾಡಿ ರಕ್ತವನ್ನು ಹೀರುತ್ತಾಳೆ. ಚಕರ್ತ ತರಸಾ ಕಾಲೀ ಪಪೌ ಚ ರುಧಿರಂ ಮುದಾ|

ಆನಂತರ ಆಗಮಿಸಿದ ರಕ್ತಬೀಜನ ರಕ್ತ ನೆಲಕ್ಕೆ ಬೀಳದಂತೆ ಅವನನ್ನು ಕೃತ್ರಿಮ ರಕ್ತಬೀಜರನ್ನೂ ಭಕ್ಷಿಸಿದವಳು ಕಾಲರಾತ್ರಿ.ಶುಂಭ ನಿಶುಂಭವಧೆಯನ್ನೂ ಮಾಡಿ ಲೋಕಕಲ್ಯಾಣವನ್ನು ಮಾಡಿದ ಜಗದಂಬಿಕೆ ಇವಳು.

ಮಹಾಭಾರತದ ಸೌಪ್ತಿಕಪರ್ವದಲ್ಲೂ ಕಾಲರಾತ್ರಿಯ ಉಲ್ಲೇಖವಿದೆ. ಮಹಾಭಾರತದ ಯುದ್ಧಕೊನೆಗೊಂಡ ರಾತ್ರಿ ಅಶ್ವತ್ಥಾಮ ಪಾಂಡವಶಿಬಿರವನ್ನು ಹೊಕ್ಕು ಧೃಷ್ಟದ್ಯುಮ್ನನನ್ನೂ ಉಪಪಾಂಡವರನ್ನೂ ತರಿದು ರಾಕ್ಷಸವೃತ್ತಿಯನ್ನು ತಳೆದಿದ್ದಾಗ ಅಲ್ಲಿ ಕಾಣಿಸಿದ ಕಾಲರಾತ್ರಿ ಎಲ್ಲರನ್ನೂ ಪಾಶದಲ್ಲಿ ಬಂಧಿಸಿ ಕರೆದೊಯ್ಯುತ್ತಿದ್ದಳು.

ದದೃಶುಃ ಕಾಲರಾತ್ರಿಂ ತೇ ಸ್ಮಯಮಾನಾಮವಸ್ಥಿತಾಂ|

ನರಾಶ್ವಕುಂಜರಾನ್ಪಾಶೈರ್ಬದ್ಧ್ವಾ ಘೋರೈಃ ಪ್ರತಸ್ಥುಷೀಂ|

ಹರಂತೀಂ ವಿವಿಧಾನ್ಪ್ರೇತಾನ್ಪಾಶಬದ್ಧಾನ್ವಿಮೂರ್ಧಜಾನ್|

ಎಂದು ಅಲ್ಲಿ ಕಾಲರಾತ್ರಿಯನ್ನು ವರ್ಣಿಸಲಾಗಿದೆ.

ಮಾರ್ಕಂಡೇಯಪುರಾಣದ ದುರ್ಗಾಸಪ್ತಶತಿಯಲ್ಲಿ

ಪ್ರಕೃತಿಸ್ತ್ವಂಚ ಸರ್ವಸ್ಯ ಗುಣತ್ರಯವಿಭಾವಿನೀ|

ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ||

ಎಂದು ಕಾಲರಾತ್ರಿದೇವಿಯನ್ನು ವರ್ಣಿಸಲಾಗಿದೆ. ನೀನೇ ಎಲ್ಲರ ಪ್ರಕೃತಿ ಅಂದರೆ ಮೂಲ ಬೀಜ. ಗುಣತ್ರಯರೂಪಿಣಿ. ಘೋರವಾದ ಕಾಲರಾತ್ರಿ, ಮಹಾರಾತ್ರಿ ಮತ್ತು ಮೋಹರಾತ್ರಿ.

ಸ್ಕಂದಪುರಾಣದಲ್ಲಿ ದುರ್ಗಾಸುರನ ಸಂಹಾರಕಳು ಕಾಲರಾತ್ರಿ ಎಂದು ಹೇಳಲಾಗಿದೆ. ವಿಷ್ಣುಧರ್ಮೋತ್ತರಪುರಾಣದಲ್ಲಿ ಕಾಲನಾದ ಯಮನ ಅರ್ಧಾಂಗಿ ಕಾಲರಾತ್ರಿ ಎನ್ನಲಾಗಿದೆ. ಬ್ರಹ್ಮಾಂಡಪುರಾಣದ ಲಲಿತಾಸಹಸ್ರನಾಮದಲ್ಲೂ ಈ ಹೆಸರಿನ ಉಲ್ಲೇಖವಿದೆ.

ಕಾಶೀಖಂಡದಲ್ಲಿ ಕಾಲರಾತ್ರಿಸ್ವರೂಪರಾದ ದುರ್ಗೆಯ ಶಕ್ತಿಗಳೇ ಕಾಶಿಯನ್ನು ರಕ್ಷಿಸುತ್ತಿವೆ ಎಂದು ವರ್ಣಿಸಲಾಗಿದೆ.

ಸಾ ದುರ್ಗಾ ಶಕ್ತಿಭಿಃ ಸಾರ್ಧಂ ಕಾಶೀಂ ರಕ್ಷತಿ ಸರ್ವತಃ|

ತಾಃ ಪ್ರಯತ್ನೇನ ಸಂಪೂಜ್ಯಾಃ ಕಾಲರಾತ್ರಿಮುಖಾ ನರೈಃ||

ಕಾಲರಾತ್ರಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ, ಒಂದು ಕೈಯಲ್ಲಿ ಖಡ್ಗವನ್ನೂ ಇನ್ನೊಂದರಲ್ಲಿ ವಜ್ರಾಯುಧವನ್ನೂ ಹಿಡಿದಿದ್ದಾಳೆ. ಇನ್ನೆರಡು ಕೈಗಳಲ್ಲಿ ಅಭಯಮುದ್ರೆಯನ್ನೂ ವರದಮುದ್ರೆಯನ್ನೂ ತೋರಿದ್ದಾಳೆ. ಕೂದಲನ್ನು ಹರಡಿಕೊಂಡು, ಕತ್ತೆಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.

ಜಗತ್ತಿನ ದುಷ್ಟಶಕ್ತಿಗಳನ್ನು ನಾಶಮಾಡುವ, ನಮ್ಮಲ್ಲಿರುವ ದುಷ್ಟತನವನ್ನೂ ಹೋಗಲಾಡಿಸುವ ಕಾಲರಾತ್ರಿಯನ್ನು ಧ್ಯಾನಿಸಿ ಧನ್ಯಾರಾಗೋಣ. ನಾಳೆ ಮಹಾಗೌರಿಯ ಅನುಸಂಧಾನಕ್ಕಾಗಿ ಮತ್ತೆ ಭೇಟಿಯಾಗೋಣ.


Thursday, October 22, 2020

ಕಾತ್ಯಾಯನೀ

ನವರಾತ್ರವ್ರತ ಆರನೆಯ ದಿನಕ್ಕೆ ಕಾಲಿಟ್ಟಿದೆ. ಕಾತ್ಯಾಯನೀ ಎಂಬ ದುರ್ಗಾರೂಪದ ಆರಾಧನೆ ಈ ದಿನ ನಡೆಯುತ್ತದೆ.

ಕತಸ್ಯ ಗೋತ್ರಾಪತ್ಯಂ ಸ್ತ್ರೀ ಕಾತ್ಯಾಯನೀ. ಕತ ಎಂಬ ಮಹರ್ಷಿಯ ಗೋತ್ರದಲ್ಲಿ ಹುಟ್ಟಿದವಳು ಎಂದರ್ಥ ಕತಗೋತ್ರದ ಕಾತ್ಯಾಯನ ಮಹರ್ಷಿಯು ದೇವಿಯ ಕುರಿತು ತಪಸ್ಸನ್ನಾಚರಿಸಿ ಆದಿಶಕ್ತಿಯೇ ತನ್ನ ಮಗಳಾಗಿ ಹುಟ್ಟುವಂತೆ ವರ ಪಡೆದ.

ಮಹಿಷಾಸುರನನ್ನು ಕೊಲ್ಲಲು ತ್ರಿಮೂರ್ತಿಗಳ ಕೋಪದಿಂದ ಹುಟ್ಟಿದವಳು ಮಹಿಷಮರ್ದಿನಿ.

ತತೋತಿಕೋಪಪೂರ್ಣಸ್ಯ ಚಕ್ರಿಣೋ ವದನಾತ್ತತಃ|

ನಿಶ್ಚಕ್ರಾಮ ಮಹತ್ತೇಜೋ ಬ್ರಹ್ಮಣಃ ಶಂಕರಸ್ಯ ಚ||

ಹೀಗೆ ತ್ರಿಮೂರ್ತಿಗಳಿಂದ ಹಾಗೂ ಇತರ ದೇವತೆಗಳಿಂದ ಹೊರಟ ತೇಜಃಕಿರಣಗಳು ಒಂದೆಡೆ ಸೇರಿ ದೇವಿಯ ಪ್ರಾದುರ್ಭಾವವಾದದ್ದು ಕಾತ್ಯಾಯನ ಮಹರ್ಷಿಯ ಆಶ್ರಮಪರಿಸರದಲ್ಲಿ. ಕಾತ್ಯಾಯನ ಮಹರ್ಷಿಯೇ ಅವಳನ್ನು ಮೊದಲು ಪೂಜಿಸಿದವ. ಹಾಗಾಗಿ ಅವಳಿಗೆ ಕಾತ್ಯಾಯನಿ ಎಂಬ ಹೆಸರು ಬಂತು.

ಕಾತ್ಯಾಯನಿಯ ಶರೀರದ ಒಂದೊಂದು ಅವಯವಗಳೂ ಒಬ್ಬೊಬ್ಬ ದೇವತೆಯ ಅಂಶದಿಂದ ರೂಪುಗೊಂಡಿತು.

ಶಂಭುವಿನ ತೇಜಸ್ಸಿನಿಂದ ಮುಖ, ಯಮನಿಂದ ಕೇಶ, ವಿಷ್ಣುವಿನಿಂದ ಬಾಹುಗಳು, ಬುಧನಿಂದ ಸ್ತನಗಳು, ಚಂದ್ರನಿಂದ ಕಟಿ, ವರುಣನಿಂದ ತೊಡೆ ಮತ್ತು ಜಂಘಾ, ಭೂಮಿಯಿಂದ ನಿತಂಬ, ಬ್ರಹ್ಮನ ತೇಜಸ್ಸಿನಿಂದ ಪಾದಗಳು, ಸೂರ್ಯನಿಂದ ಅದರ ಕಾಲ್ಬೆರಳುಗಳು, ವಸುಗಳಿಂದ ಕೈಬೆರಳುಗಳು, ಕುಬೇರನಿಂದ ಮೂಗು, ಪ್ರಜಾಪತಿಯ ತೇಜಸ್ಸಿನಿಂದ ಹಲ್ಲುಗಳು, ಅಗ್ನಿಯಿಂದ ಕಣ್ಣುಗಳು, ಸಂಧ್ಯೆಯರ ತೇಜಸ್ಸಿನಿಂದ ಹುಬ್ಬು, ವಾಯುವಿನಿಂದ ಕಿವಿಗಳು ಹೀಗೆ ದೇವಿಯ ಅಂಗಗಳು ರೂಪುಗೊಂಡವು,

ವಿವಿಧ ದೇವತೆಗಳು ತಮ್ಮ ತಮ್ಮ ಆಯುಧಗಳಿಂದ ಪ್ರತ್ಯಾಯುಧಗಳನ್ನು ನಿರ್ಮಿಸಿಕೊಟ್ಟರು. ಶಿವನಿಂದ ಶೂಲ, ವಿಷ್ಣುವಿನಿಂದ ಚಕ್ರ, ವರುಣನಿಂದ ಶಂಖ, ಅಗ್ನಿಯಿಂದ ಶಕ್ತಿ, ಮಾರುತನಿಂದ ಬಿಲ್ಲು ಮತ್ತು ಶರಗಳಿಂದ ತುಂಬಿದ ಬತ್ತಳಿಕೆ, ಇಂದ್ರನಿಂದ ವಜ್ರಾಯುಧ ಐರಾವತದಿಂದ ಘಂಟೆ ಯಮನಿಂದ ದಂಡ, ವರುಣನಿಂದ ಪಾಶ, ಪ್ರಜಾಪತಿಯಿಂದ ಅಕ್ಷಮಾಲೆ, ಬ್ರಹ್ಮನಿಂದ ಕಮಂಡಲು, ಕಾಲನಿಂದ ಖಡ್ಗ, ವಿಶ್ವಕರ್ಮನಿಂದ ಕೊಡಲಿ, ಹೀಗೆ ದೇವಿಯು ಶಸ್ತ್ರ ಸಂಪನ್ನಳಾದಳು. ಅದರಂತೆ ಅನೇಕರು ಅವಳಿಗೆ ದಿವ್ಯ ಆಭೂಷಣಗಳನ್ನು ನೀಡಿದರು. ಕ್ಷೀರಸಾಗರ ಹಾರ, ವಸ್ತ್ರ, ಚೂಡಾಮಣಿ, ಕುಂಡಲ, ಅರ್ಧಚಂದ್ರ, ಕೇಯೂರ, ಗೆಜ್ಜೆ, ಉಂಗುರ ಇತ್ಯಾದಿಗಳನ್ನು ನೀಡಿದ. ಸಮುದ್ರರಾಜ ಬಾಡದ ಕಮಲಮಾಲೆಯನ್ನೂ, ಕಮಲಪುಷ್ಪವನ್ನೂ, ಹಿಮವಂತ ಸವಾರಿಗಾಗಿ ಸಿಂಹವನ್ನೂ, ಅನೇಕ ರತ್ನಗಳನ್ನೂ ನೀಡಿದ. ಕುಬೇರ ಸುರೆಯಿಂದ ತುಂಬಿದ ಪಾನಪಾತ್ರೆಯನ್ನೂ, ಶೇಷ ಮಹಾಮಣಿಗಳನ್ನೂ ನಾಗಹಾರವನ್ನೂ ಕೊಟ್ಟ. ಇತರ ದೇವತೆಗಳಿಂದಲೂ ವಿವಿಧ ಆಭೂಷಣಗಳನ್ನೂ ಆಯುಧಗಳನ್ನೂ ಪಡೆದುಕೊಂಡು ದೇವಿಯು ಸಾಲಂಕೃತಳೂ ಸಾಯುಧಳೂ ಆದಳು.

ಇಂತಹ ಕಾತ್ಯಾಯನಿಯನ್ನು ಸ್ತುತಿಸುವ ಶ್ಲೋಕ

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ|

ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ||

ಕೈಯಲ್ಲಿ ಚಂದ್ರಹಾಸ ದಂತೆ ಹೊಳೆಯುವ ಆಯುಧವನ್ನು ಧರಿಸಿ, ಹುಲಿಯನ್ನು ಏರಿರುವ, ದಾನವರ ನಾಶ ಮಾಡುವ ಕಾತ್ಯಾಯನಿ ದೇವಿ ನಮಗೆ ಶುಭವನ್ನುಂಟುಮಾಡಲಿ ಈ ಶ್ಲೋಕದ ಆಶಯ.

ಈ ಸಂದರ್ಭ ಕಾತ್ಯಾಯನಿಯು ಅನೇಕ ಆಯುಧಗಳನ್ನು ಧರಿಸಿ ಭೀಕರಾಟ್ಟಹಾಸಮಾಡುವ ಮಹಿಷಮರ್ದಿನಿ ಎಂದು ವರ್ಣಿಸಿದರೂ ಪೂಜೆಗೊಳ್ಳುವ ಕಾತ್ಯಾಯನಿಯ ರೂಪವನ್ನು ವಿಭಿನ್ನವಾಗಿ ಕಲ್ಪಿಸಲಾಗಿದೆ.

ಎತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್|

ಪಾತು ನಃ ಸರ್ವಭೂತೇಭ್ಯಃ ಕಾತ್ಯಾಯನಿ ನಮೋಸ್ತುತೇ||

ಕಾತ್ಯಾಯನಿಯ ಮುಖ ಮೂರುಕಣ್ಣುಗಳಿಂದ ಶೋಭಿಸುತ್ತ ಸೌಮ್ಯವಾಗಿದೆ. ಅಂತಹ ಕಾತ್ಯಾಯನಿಯು ಸಕಲಚರಾಚರಗಳಿಂದ ನಮ್ಮನ್ನು ರಕ್ಷಿಸಲಿ ಎಂದು ಈ ಪ್ರಾರ್ಥನೆ ತಿಳಿಸುತ್ತದೆ.

 ಕಾತ್ಯಾಯನಿಗೆ ನಾಲ್ಕು ಭುಜಗಳು. ಎಡಭಾಗದ ಒಂದು ಕೈಯಲ್ಲಿ ಕಮಲವನ್ನೂ ಇನ್ನೊಂದರಲ್ಲಿ ಖಡ್ಗವನ್ನೂ ಹಿಡಿದಿದ್ದಾಳೆ. ಬಲಭಾಗದ ಒಂದು ಕೈಯಲ್ಲಿ ವರದಮುದ್ರೆ ಹಾಗೂ ಇನ್ನೊಂದರಲ್ಲಿ ಅಭಯಮುದ್ರೆ ಇದೆ.

 ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಕಾತ್ಯಾಯನ ವ್ರತದ ಉಲ್ಲೇಖ ಇದೆ. ಗೋಪಿಕೆಯರು ಶ್ರೀಕೃಷ್ಣನನ್ನೇ ಪತಿಯನ್ನಾಗಿ ಪಡೆಯಲು ಈ ವ್ರತವನ್ನು ಆಚರಿಸಿದರು ಎಂದು ಅಲ್ಲಿ ಉಲ್ಲೇಖವಿದೆ.

ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ|

ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ||

ಮಹಾಯೋಗಿನಿಗಳ ಅಧೀಶ್ವರಿಯೂ ಮಹಾಮಾಯೆಯೂ ಆಗಿರುವ ಹೇ ಕಾತ್ಯಾಯನಿ, ನಂದಗೋಪಕುಮಾರನನ್ನು ನನ್ನ ಪತಿಯನ್ನಾಗಿ ಮಾಡು ಎಂದು ಪ್ರತಿಯೊಬ್ಬ ಗೋಪಿಕೆಯೂ ಬೇಡಿಕೊಳ್ಳುತ್ತಿದ್ದಳು.

ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಡಬೇಕೆಂದು ಅವಳ ಅಣ್ಣ ರುಕ್ಮ ನಿರ್ಧರಿಸಿದಾಗ ರುಕ್ಮಿಣಿಯು ಕಾತ್ಯಾಯನಿಯ ಪೂಜೆಯನ್ನು ಮಾಡಿಯೇ ಸಂಕಷ್ಟದಿಂದ ಪಾರಾಗಿ ಕೃಷ್ಣನನ್ನು ಪತಿಯನ್ನಾಗಿ ಪಡೆದಳು ಎಂಬ ಕಥೆಯೂ ಇದೆ.

ಆಜ್ಞಾಚಕ್ರದಲ್ಲಿ ಮನವನ್ನಿರಿಸಿ ಕಾತ್ಯಾಯನಿಯನ್ನು ಶ್ರದ್ಧಾಭಕ್ತಿ ಸಮನ್ವಿತರಾಗಿ ಆರಾಧಿಸಿ ರೋಗ, ಶೋಕ, ಸಂತಾಪ ಭಯಗಳನ್ನು ನಿವಾರಿಸಿಕೊಂಡು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸೋಣ. ನಾಳೆಯ ದಿನ ಕಾಲರಾತ್ರಿ ದುರ್ಗೆಯ ಅನುಸಂಧಾನದಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.

Wednesday, October 21, 2020

ಸ್ಕಂದಮಾತೆ:

ನಮೋ ದೇವಿ ಮಹಾವಿದ್ಯೇ ನಮಾಮಿ ಚರಣೌ ತವ|

ಸದಾ ಜ್ಞಾನಪ್ರಕಾಶಂ ಮೇ ದೇಹಿ ಸರ್ವಾರ್ಥದೇ ಶಿವೇ||

ಇಂದು ನವರಾತ್ರಪರ್ವದ ಐದನೆಯ ದಿನ. ಲಲಿತಾಪಂಚಮಿ ಎಂದು ಕರೆಸಿಕೊಳ್ಳುವ ಈ ದಿನ ವಿಶೇಷವಾಗಿ ಲಲಿತಾತ್ರಿಪುರಸುಂದರಿದೇವಿಯ ಉಪಾಸನೆ ನಡೆಯುತ್ತದೆ. ಇಂದು ಪೂಜಿತಗೊಳ್ಳುವ ದುರ್ಗೆ ಸ್ಕಂದಮಾತೆ. ’ಪಾರ್ವತೀನಂದನಃ ಸ್ಕಂದಃ ಸೇನಾನೀರಗ್ನಿಭೂರ್ಗುಹಃ’ ಅಮರಕೋಶದನ್ವಯ ಸ್ಕಂದನೆಂದರೆ ಷಣ್ಮುಖ. ಕಾರ್ತಿಕೇಯ ಎಂಬುದು ಅವನ ಇನ್ನೊಂದು ಅಭಿಧಾನ. ಶಿವನ ರೇತಸ್ಸನ್ನು ಅಪಹರಿಸಿದ ಅಗ್ನಿ ಅದರ ತೇಜಸ್ಸನ್ನು ತಾಳಲಾರದೆ ಗಂಗೆಯಲ್ಲಿ ಬಿಟ್ಟ. ಗಂಗೆಯಲ್ಲಿ ಸ್ನಾನಮಾಡಿದ ಕೃತ್ತಿಕೆಯರು ಗರ್ಭಧರಿಸಿದರು. ಪತಿಭಯದಿಂದ ಅವರು ತಮ್ಮ ಗರ್ಭವನ್ನು ಶರವಣ ಹುಲ್ಲಿನ ಮೇಲೆ ಚೆಲ್ಲಿದಳು. ಅಲ್ಲಿ ಹುಟ್ಟಿದ ಮಗು ಆರುಮುಖಗಳನ್ನು ಪಡೆದುಕೊಂಡಿತು. ಅದರಿಂದ ಆರು ಕೃತ್ತಿಕೆಯರ ಸ್ತನ್ಯವನ್ನು ಒಮ್ಮೆಲೇ  ಕುಡಿಯಲು ಸಾಧ್ಯವಾಯಿತು. ಹೀಗೆ ಶರಜನ್ಮಾ, ಷಡಾನನ, ಕಾರ್ತಿಕೇಯ ಮುಂತಾದ ಹೆಸರುಗಳನ್ನು ಪಡೆದುಕೊಂಡ ಕುಮಾರ ಪಾರ್ವತೀಕುಮಾರನಾಗಿ ಸ್ಕಂದ ಎಂಬ ಅಭಿಧಾನವನ್ನು ಹೊಂದಿದ. ಸ್ಕಂದ ಇತ್ಯೇವ ವಿಖ್ಯಾತೋ ಗೌರೀಪುತ್ರೋ ಭವಿಷ್ಯತಿ ಎಂದು ಶಿವನೇ ಉದ್ಘೋಷಿಸಿದ್ದಾನೆ ಎಂದು ವಾಮನಪುರಾಣ ಹೇಳುತ್ತದೆ.

ಸ್ಕಂದ ಶಬ್ದಕ್ಕೆ ಶಬ್ದ ಕಲ್ಪದ್ರುಮವು ಸ್ಕಂದತೇ ಉತ್ಪ್ಲುತ್ಯ ಗಚ್ಛತಿ ಇತಿ ಸ್ಕಂದಃ ಎಂದು ಎಂಬ ವ್ಯುತ್ಪತ್ತಿಯನ್ನು ನೀಡಿದೆ. ನೆಗೆಯುತ್ತ ಹೋಗುವವನು ಎಂದರ್ಥ. ಶಿವನ ರೇತಸ್ಸು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿದ್ದರಿಂದ ಆ ಹೆಸರು. ರಾಕ್ಷಸರನ್ನು ಶೋಷಿಸುವವನು, ಶಿಕ್ಷಿಸುವವನು ಎಂಬರ್ಥದಲ್ಲಿ

ಸ್ಕಂದತಿ ಶೋಷಯತಿ ದೈತ್ಯಾನ್ ವಾ ಎಂಬ ನಿರ್ವಚನೆಯೂ ಇದೆ. ತಾರಕನೆಂಬ ದೈತ್ಯನ ಸಂಹಾರಕ್ಕಾಗಿಯೇ ಸ್ಕಂದನ ಜನನವಾದುದು. ದೇವಸೈನ್ಯದ ನಾಯಕತ್ವವನ್ನು ವಹಿಸಿ ತಾರಕವಧೆಯನ್ನು ಮಾಡಿ ಲೋಕಕ್ಕೆ ಒದಗಿದ್ದ ಕಂಟಕವನ್ನು ನಿವಾರಿಸಿದವನು ಸ್ಕಂದ.

ಛಾಂದೋಗ್ಯ ಉಪನಿಷತ್ತಿನಲ್ಲಿ ಬ್ರಹ್ಮಮಾನಸಪುತ್ರನಾದ ಸನತ್ಕುಮಾರನೇ ಸ್ಕಂದನಾಗಿ ಹುಟ್ಟಿಬಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಮಾನ್ಯತೇ ಪೂಜ್ಯತೇ ಯಾ ಸಾ ಮಾತಾ. ಮಾತೆ ಎಂಬ ಶಬ್ದಕ್ಕೆ ಪೂಜ್ಯಳು ಅಂತಲೇ ಅರ್ಥ. ಒಟ್ಟಿನಲ್ಲಿ ಸ್ಕಂದಸ್ಯ ಮಾತಾ ಸ್ಕಂದಮಾತಾ. ಸ್ಕಂದನ ತಾಯಿ ಸಸ್ಸ್ಕಂದಮಾತೆ.

ಪಾರ್ವತಿಯು ಶಿವನೊಂದಿಗೆ ದಿವ್ಯವಿಮಾನದಲ್ಲಿ ಬಂದು ಸ್ಕಂದನನ್ನು ತನ್ನ ತೊಡೆಯ ಮೇಲೆ ಕೂಡ್ರಿಸಿಕೊಂಡ ಸನ್ನಿವೇಶವನ್ನು ಕಾಲಿದಾಸ ತನ್ನ ಕುಮಾರಸಂಭವಮ್ ಗ್ರಂಥದಲ್ಲಿ ರಮ್ಯವಾಗಿ ವರ್ಣಿಸಿದ್ದಾನೆ.

ವಿನಮ್ರದೇವಾಸುರಪೃಷ್ಟಗಾಭ್ಯಾಮಾದಾಯ ತಂ ಪಾಣಿಸರೋರುಹಾಭ್ಯಾಮ್|

ನವೋದಯಂ ಪಾರ್ವಣಚಂದ್ರಚಾರುಂ ಗೌರೀ ಸಮುತ್ಸುಂಗತಲಂ ನಿನಾಯ||

ನಮಸ್ಕರಿಸಿದ ದೇವಾಸುರರ ಬೆನ್ನುಗಳನ್ನು ನೇವರಿಸಿದ ತನ್ನ ಕರಕಮಲಗಳಿಂದ ಈಗಷ್ಟೇ ಉದಿಸಿದ ಪೂರ್ಣಿಮೆಯ ಚಂದ್ರನಂತೆ ಸುಂದರನಾಗಿರುವ ಆ ಮಗುವನ್ನು ಅವಳು ತನ್ನ ತೊಡೆಯ ಮೇಲೆ ಇರಿಸಿಕೊಂಡಳು.

ಸ್ವಮಂಕಮಾರೋಪ್ಯಸುಧಾನಿಧಾನಮಿವಾತ್ಮನೋ ನಂದನಮಿಂದುವಕ್ತ್ರಾ|

ತಮೇಕಮೀಷಾಂ ಜಗದೇಕವೀರಂ ಬಭೂವ ಪೂಜ್ಯಾ ಧುರಿ ಪುತ್ರಿಣೀನಾಮ್||

ಸುಧಾಕರನಂತಿರುವ ಜಗದೇಕವೀರನಾದ ತನ್ನ ಮಗನನ್ನು ತನ್ನ ತೊಡೆಯೇರಿಸಿಕೊಂಡು ಆ ಇಂದುವದನೆ ತಾಯಿಯರ ಸಾಲಿನಲ್ಲಿ ಪೂಜ್ಯಳಾದಳು.

ಕಾಳಿದಾಸ ವರ್ಣಿಸಿದಂತೆಯೇ ಸ್ಕಂದಮಾತೆ ಸ್ಕಂದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಒಂದು ಕೈಯಲ್ಲಿ ಅವನನ್ನು ಹಿಡಿದಿದ್ದಾಳೆ. ಚತುರ್ಭುಜೆಯಾದ ಅವಳ ಇನ್ನೊಂದು ಕೈ ಅಭಯಹಸ್ತವಾದರೆ ಇನ್ನೆರಡು ಕೈಗಳಲ್ಲಿ ಕಮಲಪುಷ್ಪವನ್ನು ಹಿಡಿದಿದ್ದಾಳೆ. ಸಿಂಹದ ಮೇಲೆ ಸವಾರಿ ಮಾಡುತ್ತಿರುವ ಅವಳು ನಮಗೆ ಶುಭವನ್ನುಂಟುಮಾಡಲಿ ಎಂಬ ಪ್ರಾರ್ಥನೆ ಈ ದಿನದ್ದು.

ಸಿಂಹಾಸನಗತಾ ನಿತ್ಯಂ ಪದ್ಮಾಂಚಿತಕರದ್ವಯಾ|

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ||

ವಿಶುದ್ಧಚಕ್ರದಲ್ಲಿ ನಮ್ಮ ಮನಸ್ಸನ್ನು ನೆಲೆಗೊಳಿಸಿ ಸ್ಕಂದಮಾತೆಯ ಆರಾಧನೆ ಮಾಡೋಣ. ತನ್ನ ಪುತ್ರ ಕಾರ್ತಿಕೇಯನಿಗೆ ತೋರಿದ ಮಾತೃವಾತ್ಸಲ್ಯವನ್ನು ನಮಗೂ ತೋರಲಿ ಎಂದು ಆಶಿಸುತ್ತ, ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ಎಂಬ ಶ್ರೀ ಶಂಕರಭಗವತ್ಪಾದರ ಮಾತುಗಳನ್ನು ಸ್ಮರಿಸುತ್ತ ತಿಳಿದೋ ತಿಳಿಯದೆಯೋ ಮಾಡಿದ ಸಕಲ ಅಪರಾಧಗಳನ್ನೂ ಮನ್ನಿಸೆಂದು ಅವಳಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ.

 

Tuesday, October 20, 2020

ಕೂಷ್ಮಾಂಡಾ

 ನಮೋ ದೇವ್ಯೈ ಮಹಾ ದೇವ್ಯೈ ಶಿವಾಯೈ ಸತತಮ್ ನಮಃ|

ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮ ತಾಮ್||

ಸಕಲ ಸಜ್ಜನರಿಗೆ ಅಭಿವಂದನೆಗಳು.

ನವರಾತ್ರೋತ್ಸವದ ನಾಲ್ಕನೆಯ ದಿನವನ್ನು ತಲುಪಿದ್ದೇವೆ. ಈ ದಿನ ಪೂಜಿತಗೊಳ್ಳುವ ದುರ್ಗೆಯ ಅಭಿಧಾನ ಕೂಷ್ಮಾಂಡಾ. ಕುತ್ಸಿತಃ ಊಷ್ಮಾ ಕೂಷ್ಮಾ. ಅಂದರೆ ಕೆಟ್ಟದಾದ ತಾಪ ಎಂದರ್ಥ. ಉಷ್ಮ ಊಷ್ಮಾಗಮಸ್ತಪಃ|  ನಮ್ಮ ಸಂಸಾರ ಆಧಿಭೌತಿಕ, ಆಧಿದೈವಿಕ ಆಧ್ಯಾತ್ಮಿಕ ಎಂಬ ತಾಪತ್ರಯಗಳಿಂದ ಯುಕ್ತವಾಗಿದೆ. ಮೃಗಪಕ್ಷಿಕ್ರಿಮಿಕೀಟಾದಿಗಳಿಂದ ಹಾಗೂ ಪ್ರಕೃತಿವಿಕೋಪದಿಂದ ಬರುವ ದುಃಖ ಆಧಿಭೌತಿಕ. ದೇವತಾಪ್ರಕೋಪದಿಂದ ಬರುವ ದುಃಖ ಆಧಿದೈವಿಕ, ದೇಹಕ್ಕೆ ಬರುವ ವ್ಯಾಧಿ ಹಾಗೂ ಮನಸ್ಸಿಗೆ ಬರುವ ಆಧಿ ಆಧ್ಯಾತ್ಮಿಕ ದುಃಖ. ಈ ತಾಪತ್ರಯಗಳಿಂದ ಕೂಡಿದ ಸಂಸಾರವೇ ಕೂಷ್ಮಾ. ಕೂಷ್ಮಾ ಅಂಡೇ, ಮಾಂಸಪೇಶ್ಯಾಮುದರರೂಪಾಯಾಂ ಯಸ್ಯಾಃ ಸಾ ಕೂಷ್ಮಾಂಡಾ. ಬ್ರಹ್ಮಾಂಡವನ್ನು ತನ್ನ ಉದರದಲ್ಲಿ ಧರಿಸಿದವಳೇ ಕೂಷ್ಮಾಂಡಾ. ಕೂಷ್ಮಾಂಡ ಎಂದರೆ ಕುಂಬಳಕಾಯಿ ಎನ್ನುವ ಅರ್ಥವೂ ಇದೆ. ಕುಂಬಳಕಾಯಿಯ ಬಲಿ ದೇವಿಗೆ ಇಷ್ಟವಾದುದರಿಂದಲೂ ಈ ಹೆಸರು ಬಂದಿದೆ ಎಂಬ ವಾದವೂ ಇದೆ.

ಕೂಷ್ಮಾಂಡಾದೇವಿಯ ಅಧಿಷ್ಠಾನ ಇರುವುದು ತೇಜೋಮಯವಾದ ಸೂರ್ಯಮಂಡಲದಲ್ಲಿ. ತಸ್ಯ ಭಾಸಾ ಸರ್ವಮಿದಮ್ ವಿಭಾತಿ ಎಂಬ ಉಪನಿಷತ್ತಿನಲ್ಲಿ ವರ್ಣಿತವಾದ ಬ್ರಹ್ಮತತ್ತ್ವವೇ ಜಗನ್ಮಾತೆಯಾದುದರಿಂದ ಸೂರ್ಯಮಂಡಲದ ಪ್ರಕಾಶವು ದೇವಿಯಿಂದಲೇ ಪ್ರದತ್ತವಾದುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಬ್ರಹ್ಮಾಂಡದ ಸೃಷ್ಟಿಗಿಂತ ಮೊದಲು ಎಲ್ಲೆಲ್ಲೂ ಕತ್ತಲೆಯಾವರಿಸಿತ್ತು. ಆಗ ಸೂರ್ಯಮಂಡಲದಿಂದ ಬಂದಂತಹ ಸ್ವರ್ಣರೇಖೆಯಂತಹ ಬೆಳಕಿನ ಕಿರಣವೇ ದೇವಿಯ ಸ್ವರೂಪವನ್ನು ಪಡೆದು ಅವಳ ಮಂದಹಾಸದಿಂದಲೇ ಈ ಜಗತ್ತು ಸೃಷ್ಟಿಯಾಯಿತು ಎಂದು ಪುರಾಣಗಳು ವರ್ಣಿಸುತ್ತವೆ. ಬ್ರಹ್ಮಾಂಡಂ ದರ್ಶಯತ್ಯೇಷಾ ಕೃತ್ವಾ ವೈ ಪರಮಾತ್ಮನೇ|

ದೇವಿಯ ಸ್ವರೂಪವನ್ನು  ತಿಳಿದುಕೊಳ್ಳುವ ಉದ್ದೇಶದಿಂದ ತ್ರಿಮೂರ್ತಿಗಳು ಒಮ್ಮೆ ದಿವ್ಯ ವಿಮಾನಾರೂಢರಾಗಿ ದೇವಿಯ ಶೋಭಾಯಮಾನ ಲೋಕವನ್ನು ಪ್ರವೇಶಿಸಿದರು. ದಿವ್ಯ ಸ್ತ್ರೀಯರಗಡಣದಿಂದ ಸಂಸೇವಿತಳಾದ ಮಹಾದೇವಿಯ ಅರಮನೆಯನ್ನು ಹೊಕ್ಕ ಮರುಕ್ಷಣದಲ್ಲಿ ಮೂರೂ ಪುರುಷೋತ್ತಮರು ನಾರಿಯರಾಗಿ ಬದಲಾದರು. ಮಣಿಮಯ ಪಾದಪೀಠದ ಮೇಲೆ ಶೋಭಿತವಾದ ಮಹಾಮಾತೆಯ ಪಾದಗಳೆಡೆಯಲ್ಲಿ ಕೈಮುಗಿದು ನಿಂತಿರುವ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಅವಳ ಪಾದದುಗುರಿನಲ್ಲಿ ಬ್ರಹ್ಮಾಂಡವೇ ಗೋಚರವಾಯಿತು. ಸತ್ಯಲೋಕಾದಿ ಹದಿನಾಲ್ಕು ಲೋಕಗಳು, ವೈಕುಂಠ, ಕೈಲಾಸ, ಸಮಸ್ತ ದೇವತೆಗಳು, ಯಕ್ಷ, ನರ ರಾಕ್ಷಸರೆಲ್ಲ ಗೋಚರರಾದರು.

ಬ್ರಹ್ಮಾಂಡಮಖಿಲಂ ಸರ್ವಂ ತತ್ರ ಸ್ಥಾವರಜಂಗಮಮ್|

ನಖದರ್ಪಣಮಧ್ಯೇ ವೈ ದೇವ್ಯಾಶ್ಚರಣಪಂಕಜೇ||

ಕನ್ನಡಿಯಲ್ಲಿ ಕಂಡಂತೆ ದೇವಿಯ ಹೊಳೆಯುವ ನಖಗಳಲ್ಲಿ ಸ್ಥಾವರಜಂಗಮೋಪೇತವಾದ ಬ್ರಹ್ಮಾಂಡವನ್ನು ಕಂಡ ವಿಷ್ಣು ಅವಳನ್ನು ಭಕ್ತಿಯಿಂದ ಸ್ತುತಿಸಿದ.

ಜ್ಞಾತಮ್ ಮಯಾಖಿಲಮಿದಂ ತ್ವಯಿ ಸನ್ನಿವಿಷ್ಟಂ

ತ್ವತ್ತೋಸ್ಯ ಸಂಭವಲಯಾವಪಿ ಮಾತರದ್ಯ |

ಶಕ್ತಿಶ್ಚ ತೇಽಸ್ಯ ಕರಣೇ ವಿತತಪ್ರಭಾವಾ

ಜ್ಞಾತಾಽಧುನಾ ಸಕಲಲೋಕಮಯೀತಿ ನೂನಮ್ ||

ಹೇ, ಅಂಬ, ಅಖಿಲ ಜಗತ್ತು ನಿನ್ನಲ್ಲಿಯೇ ಸನ್ನಿವಿಷ್ಟವಾಗಿದೆ, ನಿನ್ನಿಂದಲೇ ಈ ಜಗತ್ತಿನ ಉತ್ಪತ್ತಿ ಮತ್ತು ನಾಶ. ನಿನ್ನ ಶಕ್ತಿಯಿಂದಲೇ ಇಲ್ಲಿ ಎಲ್ಲವೂ ನಡೆಯುವುದು ನೀನು ಸಕಲಲೋಕಮಯಿ ಎಂದು ತಿಳಿಯಿತು ಎಂದು ನಾರಾಯಣನು ಭಕ್ತಿಯಿಂದ ಪ್ರಾರ್ಥಿಸಿದ. ಅವನನ್ನನುಸರಿಸಿ ಬ್ರಹ್ಮ, ಈಶರೂ ಮಾತೆಯನ್ನು ಸ್ತುತಿಸಿದರು. ಸುಪ್ರಸನ್ನಳಾದ ದೇವಿಯು ಮಹಾಸರಸ್ವತೀ, ಮಹಾಲಕ್ಷ್ಮೀ ಮತ್ತು ಮಹಾಕಾಲೀ ಎಂಬ ತನ್ನ ಮೂರು ಶಕ್ತಿಗಳನ್ನು ಕ್ರಮವಾಗಿ ಬ್ರಹ್ಮವಿಷ್ಣುಮಹೇಶ್ವರರಿಗೆ ಪ್ರದಾನ ಮಾಡಿದಳು ಎಂದು ದೇವೀ ಭಾಗವತ ವರ್ಣಿಸುತ್ತದೆ.

ಕೂಷ್ಮಾಂಡಾ ದೇವಿ ಎಂಟು ಕರಗಳನ್ನು ಹೊಂದಿದ್ದು ಕಮಂಡಲು, ಬಿಲ್ಲು, ಬಾಣ, ಕಲಶ, ಚಕ್ರ, ಗದೆ, ಮತ್ತು ಜಪಮಾಲೆಗಳನ್ನು ಧರಿಸಿದ್ದಾಳೆ. ಇನ್ನೊಂದು ಕೈಯಲ್ಲಿ ಸುರಾಕಲಶವನ್ನು ಹಿಡಿದಿದ್ದಾಳೆ. ಸಿಂಹಾರೂಢಳಾಗಿರುವ ಅವಳನ್ನು ಪೂಜಿಸುವಾಗ ಹೇಳುವ ಮಂತ್ರ

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ|

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||

ರಕ್ತಸಿಕ್ತವಾದ ಸುರೆಯ ಕಲಶವನ್ನು ತನ್ನ ಕಾಲಿನಮೇಲಿಟ್ಟುಕೊಂಡು ಕೈಯಲ್ಲಿ ಹಿಡಿದಿರುವ ಕುಷ್ಮಾಂಡಾ ದೇವಿಯು ನನಗೆ ಶುಭವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಲಾಗುತ್ತದೆ.

ತಾಮಸಪ್ರವೃತ್ತಿಯ ದೈತ್ಯರನ್ನು ಸಂಹರಿಸಲು ದೇವಿಯು ತಾಮಸರೂಪವನ್ನೇ ತಳೆದಿದ್ದಳು. ಮಹಿಷಾಸುರನ ವಧೆಯ ಸಂದರ್ಭದಲ್ಲಿ ಸುರೆಯನ್ನು ಕುಡಿದು ಅಟ್ಟಹಾಸ ಮಾಡಿದಳು ಎಂದು ದೇವೀಸಪ್ತಶತಿಯಲ್ಲಿ ವರ್ಣಿಸಲಾಗಿದೆ.

ತತಃ ಕ್ರುದ್ಧಾ ಜಗನ್ಮಾತಾ ಚಂಡಿಕಾ ಪಾನಮುತ್ತಮಮ್|

ಪಪೌ ಪುನಃಪುನಶ್ಚೈವ ಜಹಾಸಾರುಣಲೋಚನಾ ||

ಎಂದು ದೇವಿಯ ಭಯಂಕರರೂಪವನ್ನು ವರ್ಣಿಸಲಾಗಿದೆ. ಲಲಿತಾಸಹಸ್ರನಾಮದಲ್ಲಿಯೂ ಮಾಧ್ವೀಪಾನಾಲಸಾಮತ್ತಾ ಎಂದು ದೇವಿಯನ್ನು ಬಣ್ಣಿಸಿರುವುದನ್ನು ಗಮನಿಸಬಹುದು. ಸುರಾ ಎನ್ನುವ ಪದವನ್ನು ಸುಧಾ ಎಂದು ಅರ್ಥೈಸಿ ಅಮೃತಕಲಶವನ್ನು ಹಿಡಿದಿರುವವಳು ಎಂದೂ ತಿಳಿಯಬಹುದು. ದುಷ್ಟನಿಗ್ರಹಕ್ಕಾಗಿಯೇ ಅವತಾರ ಎತ್ತಿದ ದೇವಿಯ ಕೈಗಳು ಸದಾ ರಕ್ತಸಿಕ್ತವಾಗಿಯೇ ಇರುತ್ತವೆ.

ಅನಾಹತಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಕುಷ್ಮಾಂಡಾದೇವಿಯ ಉಪಾಸನೆಯನ್ನು ಮಾಡಿದರೆ ಸಕಲ ರೋಗರುಜಿನಗಳೂ ಕ್ಷಯಹೊಂದಿ ತೇಜೋವೃದ್ಧಿಯಾಗುವುದೆಂಬುದು ಆಸ್ತಿಕರ ದೃಢವಿಶ್ವಾಸ. ನಾವೂ ಭಕ್ತಿಯಿಂದ ಅವಳ ಅನುಸಂಧಾನವನ್ನು ಮಾಡಿ ಧನ್ಯರಾಗೋಣ. ನಾಳೆ ದುರ್ಗೆಯ ಐದನೆಯ ಅವತಾರವಾದ ಸ್ಕಂದಮಾತೆಯ ಬಗ್ಗೆ ತಿಳಿದುಕೊಳ್ಳೋಣ.

Monday, October 19, 2020

ಚಂದ್ರಘಂಟಾ

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ|

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತುತೇ||

ಆತ್ಮೀಯ ಸ್ನೇಹಿತರೆ

ಸಕಲರಿಗೂ ಪ್ರಣತಿಗಳು.

ಇಂದು ನವರಾತ್ರವ್ರತದ ಮೂರನೆಯ ದಿನ. ಈ ದಿನದ ಅಧಿಷ್ಠಾತ್ರಿ ದುರ್ಗೆ ಚಂದ್ರಘಂಟಾ.

ಚಂದ್ರಃ ಘಂಟಾಯಾಂ ಯಸ್ಯಾಃ ಸಾ ಚಂದ್ರಘಂಟಾ | ಘಂಟೆಯಲ್ಲಿ ಚಂದ್ರನನ್ನು ಹೊಂದಿರುವವಳು ಎಂಬುದು ಇದರ ಅರ್ಥ. ಅಥವಾ ಗಂಟೆಯಂತೆ ತೋರುವ ಚಂದ್ರನನ್ನು ಹೊಂದಿರುವವಳು ಎಂದೂ ಅರ್ಥೈಸಬಹುದು. ಪಾರ್ವತಿಯ ವಿವಾಹಸಮಯದ ರೂಪ ಇದು ಎಂದು ವಿದ್ವಾಂಸರ ಅಭಿಪ್ರಾಯ. ಚಂದ್ರಶೇಖರನಾದ ಶಿವನ ಅರ್ಧಾಂಗಿಯಾಗುವ ಪಾರ್ವತಿಯೂ ಹಣೆಯಲ್ಲಿ ಅರ್ಧಚಂದ್ರನನ್ನು ಧರಿಸಿದಳು. ಅದು ಘಂಟೆಯ ಆಕಾರವನ್ನು ತಳೆದಿತ್ತು. ಹಾಗಾಗಿ ಇವಳಿಗೆ ಚಂದ್ರಘಂಟಾ ಎಂಬ ಹೆಸರು.

ಹತ್ತು ಕೈಗಳನ್ನು ಹೊಂದಿರುವ ದೇವಿ ಇವಳು. ತನ್ನ ಕೈಗಳಲ್ಲಿ ತ್ರಿಶೂಲ, ಗದೆ, ಖಡ್ಗ, ಅಭಯಮುದ್ರೆ, ಬಿಲ್ಲು, ಬಾಣ, ಕಮಲ ಇವುಗಳನ್ನು ಧರಿಸಿದ್ದು ಒಂದು ಕೈಯಲ್ಲಿ ಅಭಯಮುದ್ರೆಯನ್ನು ಹೊಂದಿದ್ದಾಳೆ. ಸಿಂಹ ಅಥವಾ ಹುಲಿಯ ಮೇಲೆ ಕುಳಿತಿದ್ದಾಳೆ.

ಚಂದ್ರಘಂಟಾದೇವಿಯನ್ನು ಪೂಜಿಸುವಾಗ ಹೇಳುವ ಶ್ಲೋಕ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||

ಸಿಂಹವನ್ನು ಆರೋಹಿಸಿರುವ ಪ್ರಚಂಡ ಕೋಪವನ್ನು ಹೊಂದಿ ವಿವಿಧ ಅಸ್ತ್ರಗಳಿಂದ ಶೋಭಿತಳಾದ ಚಂದ್ರಘಂಟೆಯೆಂದು ವಿಖ್ಯಾತಳಾದ ದೇವಿಯು ನನ್ನ ವಿಷಯದಲ್ಲಿ ಪ್ರಸನ್ನತೆಯನ್ನು ಹೊಂದಿದ್ದಾಳೆ.

ಚಂದ್ರಘಂಟೆಯ ಅನುಸಂಧಾನದಿಂದ ಮಣಿಪೂರಚಕ್ರದ ಉದ್ದೀಪನವಾಗುವುದು.

ದೇವೀ ಭಾಗವತದಲ್ಲಿ ಅನೇಕ ಕಡೆ ದೇವಿಯ ಮಹಿಮೆ ವರ್ಣಿತವಾಗಿದೆ. ಪರಾಶಕ್ತಿಯೇ ಯೋಗನಿದ್ರೆಯಾಗಿ ವಿಷ್ಣುವನ್ನು ಆವರಿಸಿಕೊಂಡಿದ್ದಳು ಎಂದು ಅಲ್ಲಿ ವರ್ಣಿಸಲ್ಪಟ್ಟಿದೆ. ಇದನ್ನು ಸೂತಪುರಾಣಿಕರ ಬಾಯಿಯಿಂದ ಕೇಳಿದ ಶೌನಕಾದಿ ಮುನಿಗಳು ಆಶ್ಚರ್ಯಚಕಿತರಾದರು. ಪರಾತ್ಪರನೆಂದು ಭಜಿಸಲ್ಪಡುವ ವಿಷ್ಣುವನ್ನೇ ಸಂಮೋಹಗೊಳಿಸಿದ್ದು ಹೇಗೆ ಎಂಬುದು ಅವರ ಪ್ರಶ್ನೆ. ಆಗ ಸೂತಪುರಾಣಿಕರು ವಿಷ್ಣುವಿನಿಂದ ಬ್ರಹ್ಮನಿಗೆ, ಬ್ರಹ್ಮನಿಂದ ನಾರದನಿಗೆ, ನಾರದನಿಂದ ಸೂತಪುರಾಣಿಕನಿಗೆ ಹೇಳಲ್ಪಟ್ಟ ರಹಸ್ಯವೊಂದನ್ನು ಮುನಿಗಳಿಗೆ ಹೇಳುತ್ತಾರೆ.

ಈ ಜಗತ್ತಿನ ಸಕಲಚರಾಚರಗಳಲ್ಲೂ ಶಕ್ತಿ ಎಂಬ ಚೈತನ್ಯವಿರುತ್ತದೆ. ಆ ಶಕ್ತಿಯಿಂದಲೇ ಎಲ್ಲರೂ ಸಕ್ರಿಯವಾಗಿರುವುದು. ಶಕ್ತಿಹೀನಂ ತು ನಿಂದ್ಯಂ ಸ್ಯಾದ್ವಸ್ತುಮಾತ್ರಂ ಚರಾಚರಮ್ | ಶಕ್ತಿಹೀನವಾದ ವಸ್ತುವಿಗೆ ಅಸ್ತಿತ್ವವೇ ಇರುವುದಿಲ್ಲ. ಈ ಶಕ್ತಿಯೇ ಬ್ರಹ್ಮವಿಷ್ಣುಮಹೇಶ್ವರರಲ್ಲಿ ಕ್ರಮವಾಗಿ ರಾಜಸೀ, ಸಾತ್ವಿಕೀ, ತಾಮಸೀ ರೂಪದಲ್ಲಿದ್ದು ಅವರನ್ನು ಸೃಷ್ಟಿ, ಸ್ಥಿತಿ, ಲಯಕಾರ್ಯಗಳಲ್ಲಿ ತೊಡಗಿಸಿದೆ.

ತೇ ವೈ ಶಕ್ತಿಂ ಪರಾಂ ದೇವೀಂ ಬ್ರಹ್ಮಾಖ್ಯಾಂ ಪರಮಾತ್ಮಿಕಾಮ್|

ಧ್ಯಾಯಂತಿ ಮನಸಾ ನಿತ್ಯಂ ನಿತ್ಯಾಂ ಮತ್ವಾ ಸನಾತನೀಮ್||

ಇದೇ ಬ್ರಹ್ಮನೆಂದು ಕರೆಸಿಕೊಳ್ಳುವ ಪರಮಾತ್ಮಿಕೆಯಾದ ಪರಾ ಶಕ್ತಿ. ತ್ರಿಮೂರ್ತಿಗಳೂ ಇತರ ದೇವತೆಗಳೂ ನಿತ್ಯಳೂ, ಸನಾತನಿಯೂ ಆದ ಅವಳನ್ನೇ ಮನಸಾ ಧ್ಯಾನಿಸುತ್ತಾರೆ. ಹಾಗಾಗಿ ವಿಷ್ಣುವು ಅವಳ ವಶವಾದುದರಲ್ಲಿ ವಿಸ್ಮಯವೇನೂ ಇಲ್ಲ.

ಶ್ರೀ ಶಂಕರಭಗವತ್ಪಾದರೂ ತಮ್ಮ ಸೌಂದರ್ಯಲಹರಿ ಗ್ರಂಥದಲ್ಲಿ

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್|

ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ||

ಎಂದು ದೇವಿಯ ಮಹಿಮೆಯನ್ನು ವರ್ಣಿಸಿದ್ದಾರೆ.

ಧರ್ಮಾರ್ಥಕಾಮಮೋಕ್ಷಾಣಾಂ ಸ್ವಾಮಿನೀ ಸಾ ನಿರಾಕುಲಾ |

ದದಾತಿ ವಾಂಛಿತಾನ್ಕಾಮಾನ್ಪೂಜಿತಾ ವಿಧಿಪೂರ್ವಕಮ್ ||

ನಾವು ಧರ್ಮಾರ್ಥಕಾಮಮೋಕ್ಷಗಳ ಸ್ವಾಮಿನಿಯಾದ ಅವಳನ್ನು ವಿಧಿಪೂರ್ವಕವಾಗಿ ಅರ್ಚಿಸಿದರೆ ನಮ್ಮ ಇಚ್ಚೆಯನ್ನು ಪೂರ್ಣಗೊಳಿಸುತ್ತಾಳೆ.

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|

ನಮಸ್ತೈಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಆತ್ಮೀಯರೆ, ನಾಳೆ ಕೂಷ್ಮಾಂಡಾ ದೇವಿಯ ಬಗ್ಗೆ ತಿಳಿದುಕೊಳ್ಳೋಣ. ನಮಸ್ಕಾರ.


Sunday, October 18, 2020

ಬ್ರಹ್ಮಚಾರಿಣಿ

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ||

ಸರ್ವರಿಗೂ ಆದರದ ನಮನಗಳು

ಇಂದು ನವರಾತ್ರಿಯ ಎರಡನೆಯ ದಿನ. ಇಂದಿನ ಅಧಿದೇವತೆ ಬ್ರಹ್ಮಚಾರಿಣೀ ಎಂಬ ಅಭಿಧಾನದ ದುರ್ಗೆ. ನಿನ್ನೆ ಶೈಲಪುತ್ರಿಯ ಸ್ವರೂಪಾನುಸಂಧಾನವನ್ನು ಮಾಡಿದ್ದೇವೆ. ದಕ್ಷಪ್ರಜಾಪತಿಯ ನಿರೀಶ್ವರಯಾಗದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಣಿ ಪಾರ್ವತಿಯಾಗಿ ಜನ್ಮತಳೆದುದನ್ನು ತಿಳಿದುಕೊಂಡಿದ್ದೇವೆ.

ಪಾರ್ವತಿ ಶಿವನನ್ನು ಸೇರುವುದಕ್ಕೇ ಹುಟ್ಟಿದ್ದಳು. ಆದರೆ ಬಹಿರ್ಮುಖನಾಗುವ ಸೂಚನೆಯನ್ನೇ ತೋರದೆ ಧ್ಯಾನಸ್ಥನಾಗಿದ್ದ ಶಿವನನ್ನು ಸೇರುವುದು ಅಷ್ಟು ಸುಲಭವಾಗಿರಲಿಲ್ಲ. ದೇವರ್ಷಿ ನಾರದರ ಸೂಚನೆಯಂತೆ ಪಾರ್ವತಿ ಶಿವನ ಕುರಿತು ತಪಸ್ಸನ್ನಾಚರಿಸುತ್ತಾಳೆ. ಬ್ರಹ್ಮಚರ್ಯವ್ರತವನ್ನು ಪಾಲನೆ ಮಾಡುತ್ತ ಕಠಿನ ತಪಸ್ಸಿನಲ್ಲಿ ನಿರತಳಾದ ಪಾರ್ವತಿಯ ರೂಪವೇ ಬ್ರಹ್ಮಚಾರಿಣಿ.

ವೇದಸ್ತತ್ತ್ವಂ ತಪೋ ಬ್ರಹ್ಮ ಎಂಬ ಕೋಶದ ಉಕ್ತಿಯನ್ನು ಅನುಸರಿಸಿ ಬ್ರಹ್ಮ ಶಬ್ದಕ್ಕೆ ವೇದ, ತತ್ತ್ವ, ತಪಸ್ಸು ಮುಂತಾದ ಅರ್ಥಗಳನ್ನು ಹೇಳಬಹುದು. ವೇದೇಷು ಚರತೇ ಯಸ್ಮಾತ್ತೇನ ಸಾ ಬ್ರಹ್ಮಚಾರಿಣೀ ಎಂದು ದೇವೀಪುರಾಣದಲ್ಲಿ ವರ್ಣಿಸಲಾಗಿದೆ. ವೇದಗಳಲ್ಲಿ ವರ್ಣಿತಳಾದ ಬ್ರಹ್ಮಸ್ವರೂಪಳೇ ಅವಳು. ತಪಸ್ಸಿನಲ್ಲಿ ನಿರತಳಾಗಿರುವವಳು ಎಂಬರ್ಥದಲ್ಲಿಯೂ ಬ್ರಹ್ಮಚಾರಿಣಿ ಶಬ್ದವನ್ನು ಗ್ರಹಿಸಬಹುದು. ಬ್ರಹ್ಮ ಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣೀ | ಚಿದಾನಂದ ಸ್ವರೂಪದ ಬ್ರಹ್ಮತತ್ತ್ವದ ಅನುಸಂಧಾನದಲ್ಲಿ ತೊಡಗಿಸಿಕೊಂಡವಳು ಎಂಬುದೂ ಈ ಪದದ ಇನ್ನೊಂದು ಅರ್ಥ. ಬ್ರಹ್ಮಚರ್ಯ ಎನ್ನುವುದು ಚತುರಾಶ್ರಮಗಳಲ್ಲಿ ಮೊದಲಿನದು. ಗೃಹಸ್ಥಾಶ್ರಮ ಅಂದರೆ ವೈವಾಹಿಕ ಜೀವನವನ್ನು ಪ್ರವೇಶಿಸುವ ಮುನ್ನಿನ ಆಶ್ರಮ. ಮನೋನಿಗ್ರಹ ಈ ಆಶ್ರಮದ ಮುಖ್ಯ ಲಕ್ಷಣ. ಚಿತ್ತಕ್ಷೋಭೆಯನ್ನುಂಟುಮಾಡುವ ಅನೇಕ ದುಷ್ಟ ಆಕರ್ಷಣೆಗಳಿದ್ದರೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿರುವವಳೇ ಬ್ರಹ್ಮಚಾರಿಣಿ. ಮನ್ಮಥನ ಬಾಣಗಳಿಗೆ ಎರವಾದರೂ ಸಂಯಮವನ್ನು ಬಿಡದೆ ಶಿವನು ಬಹಿರ್ಮುಖನಾಗುವವರೆಗೂ ಅವನ ಸೇವೆ ಹಾಗೂ ತಪಸ್ಸಿನಲ್ಲಿ ನಿರತಳಾಗಿದ್ದಳು ಪಾರ್ವತೀ. ಅದೂ ಒಂದೆರಡು ವರ್ಷಗಳಲ್ಲ ಸುಮಾರು ಐದುಸಾವಿರವರ್ಷಗಳಷ್ಟು ಕಾಲ. ತಾನು ತಿನ್ನುವ ಆಹಾರವನ್ನೂ ಕಡಿಮೆ ಮಾಡುತ್ತ ಒಂದು ಹಂತದಲ್ಲಿ ಕೇವಲ ಬಿಲ್ವದಳಗಳನ್ನು ಮಾತ್ರ ಸೇವಿಸಿ ತಪಸ್ಸನ್ನು ಆಚರಿಸುತ್ತಿದ್ದಳು. ಆನಂತರ ಅದನ್ನೂ ತ್ಯಜಿಸಿ ’ಅಪರ್ಣಾ’ ಎಂಬ ಅಭಿಧಾನವನ್ನು ಹೊಂದಿದಳು.

ಬ್ರಹ್ಮಚಾರಿಣಿಯ ಸ್ವರೂಪವನ್ನು ಈ ಶ್ಲೋಕ ತಿಳಿಸಿಕೊಡುತ್ತದೆ.

ದಧಾನಾ ಕರಕಮಲಾಭ್ಯಾಮಕ್ಷಮಾಲಾ ಕಮಂಡಲೂ|

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಬ್ರಹ್ಮಚಾರಿಣಿಯರ ಸಾಮಾನ್ಯ ವೇಷವನ್ನು ಧರಿಸಿದ್ದಾಳೆ ಇವಳು. ತನ್ನ ಒಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ಜಪಮಾಲೆಗೆ ಅಕ್ಷಮಾಲೆ ಎಂಬ ಹೆಸರೂ ಇದೆ. ಗೌತಮಮುನಿ ಹೇಳುವಂತೆ

ಪಂಚಾಶಲ್ಲಿಪಿಭಿರ್ಮಾಲಾ ವಿಹಿತಾ ಜಪಕರ್ಮಸು |

ಅಕಾರಾದಿ ಕ್ಷಕಾರಾಂತಾ ಅಕ್ಷಮಾಲಾ ಪ್ರಕೀರ್ತಿತಾ ||

ಅಕಾರದಿಂದ ಕ್ಷ ದ ವರೆಗೆ ಐವತ್ತು ಅಕ್ಷರಗಳಿಂದ ಮಾಡಿರುವ ಮಾಲೆಯೇ ಅಕ್ಷಮಾಲೆ. ಅನಯಾ ಸರ್ವಮಂತ್ರಾಣಾಂ ಜಪಃ ಸರ್ವಸಮೃದ್ಧಿದಃ ಎಂಬ ತಂತ್ರಸಾರದ ಮಾತಿನಂತೆ ಈ ಅಕ್ಷಮಾಲೆಯಿಂದ ಮಾಡುವ ಎಲ್ಲ ಮಂತ್ರಜಪಗಳು ಸಿದ್ಧಿಪ್ರದವಾಗುತ್ತವೆ. ಅಂತಹ ಪವಿತ್ರವಾದ ಅಕ್ಷಮಾಲೆಯನ್ನು ಅವಳು ಬಲಗೈಯಲ್ಲಿ ಧರಿಸಿದ್ದಾಳೆ.

ಎಡಗೈಯಲ್ಲಿ ಕಮಂಡಲು ಇದೆ. ಕಮಂಡಲು ಎಂದರೆ ಜಲಪಾತ್ರೆ. ಸಂನ್ಯಾಸಿಗಳು ಹಾಗೂ ಬ್ರಹ್ಮಚಾರಿಗಳು ತಮ್ಮ ಆಚಮನಾದಿ ಕ್ರಿಯೆಗಳಿಗೆ ಬೇಕಾಗುವ ನೀರನ್ನು ಹೊಂದಿರುವ ಪಾತ್ರೆ. ಇದರಲ್ಲಿರುವ ಪವಿತ್ರಜಲದಿಂದಲೇ ನಿಗ್ರಹಾನುಗ್ರಹಗಳನ್ನೂ ಮಾಡುತ್ತಾರೆ ಅವರು. ಅಂತಹ ಕಮಂಡಲುವನ್ನು ಬ್ರಹ್ಮಚಾರಿಣಿ ಹಿಡಿದಿದ್ದಾಳೆ. ಶ್ವೇತಾಂಬರೆಯಾಗಿ, ಮೆಟ್ಟುಗಳನ್ನು ತೊಡದೆ, ವಾಹನಸವಾರಿಯನ್ನು ಮಾಡದೆ ನೆಲದ ಮೇಲೆ ನಿಂತಿರುವ ಬ್ರಹ್ಮಚಾರಿಣಿ ಪ್ರೀತಿ, ಸಂಯಮ, ಸರಳತೆಗಳ ಪ್ರತೀಕವಾಗಿದ್ದಾಳೆ. ಅಂತಹ ಅತ್ತ್ಯುತ್ತಮ ಬ್ರಹ್ಮಚಾರಿಣಿಯು ನಮ್ಮಲ್ಲಿ ಪ್ರಸನ್ನಳಾಗಲಿ ಎಂಬುದು ಈ ದಿನದ ಪ್ರಾರ್ಥನೆ.

ಸ್ವಾಧಿಷ್ಠಾನಚಕ್ರದ ಅಧಿಷ್ಠಾತ್ರಿಯಾದ ಈ ದುರ್ಗೆ ನಮ್ಮ ಸಕಲ ದುರ್ಗುಣಗಳನ್ನು ನಾಶಮಾಡಲಿ ಎಂದು ಪ್ರಾರ್ಥಿಸುತ್ತ ನಾಳೆ ಚಂದ್ರಘಂಟೆಯ ಅನುಸಂಧಾನಕ್ಕೆ ಅಣಿಯಾಗೋಣ.

ಶೈಲಪುತ್ರೀ

 

ಎಲ್ಲರಿಗೂ ನಮಸ್ಕಾರ.

ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜಂತೋಃ ಸ್ವಸ್ಥೈಃ ಸ್ಮೃತಾ ಮ್ತಿಮತೀವಶುಭಾಂ ದದಾಸಿ|

ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ ಸರ್ವೊಪಕಾರಕರಣಾಯ ಸದಾಽಽರ್ದ್ರಚಿತ್ತಾ||

ಇಂದು ನವರಾತ್ರಿಯ ಮೊದಲದಿನ. ಘಟಸ್ಥಾಪನೆಯ ಮೂಲಕ ನವರಾತ್ರವ್ರತದ ಶುಭಾರಂಭ ಮಾಡುವ ದಿನ. ಘಟ ಅಂದರೆ ಕೊಡ. ಒಂದು ಕೊಡದಲ್ಲೋ, ಸ್ಥಾಲಿಯಲ್ಲೋ ಮಣ್ಣನ್ನು ತುಂಬಿ ಅದರಲ್ಲಿ ಸಪ್ತಧಾನ್ಯಗಳನ್ನು ಹಾಕಿ ಪವಿತ್ರಜಲವನ್ನು ಸಿಂಪಡಿಸಬೇಕು. ಯವ(ಬಾರ್ಲಿ), ಗೋಧಿ, ಭತ್ತ, ಎಳ್ಳು, ಹೆಸರು, ಉದ್ದು, ಕಡಲೆ ಇವು ಸಪ್ತಧಾನ್ಯಗಳು.

ಮೊದಲನೆಯ ದಿನ ಪ್ರಥಮಂ ಶೈಲಪುತ್ರೀ ಚ ಎಂಬ ನುಡಿಯನ್ನು ಅನುಸರಿಸಿ ಶೈಲಪುತ್ರೀ ಎಂಬ ದುರ್ಗೆಯ ಆರಾಧನೆ ನಡೆಯುತ್ತದೆ. ಶೈಲಪುತ್ರೀ ಎಂದರೆ ಪರ್ವತದ ಮಗಳು ಎಂದರ್ಥ. ಅರ್ಥಾತ್ ಪಾರ್ವತೀದೇವಿಯ ಆರಾಧನೆ ಅಂದು ನಡೆಯುತ್ತದೆ.

ಒಮ್ಮೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಂಕರನ ಅಧ್ಯಕ್ಷತೆಯಲ್ಲಿ ಜ್ಞಾನಸತ್ರವೊಂದು ಏರ್ಪಾಡಾಗಿತ್ತು. ಸಭೆ ನಡೆಯುತ್ತಿರುವಾಗ ಅಲ್ಲಿಗೆ ಆಗಮಿಸಿದ ದಕ್ಷ ಪ್ರಜಾಪತಿ ಎಲ್ಲರಿಂದಲೂ ವಂದನೆಯನ್ನು ಸ್ವೀಕರಿಸಿದ. ಅಧ್ಯಕ್ಷತೆಯನ್ನು ವಹಿಸಿದ್ದ ಶಿವ ಸಭಾಮರ್ಯಾದೆಯಂತೆ ಆಸನವನ್ನು ಬಿಟ್ಟೇಳಲಿಲ್ಲ. ಅದರಿಂದ ಸಿಟ್ಟುಗೊಂಡ ದಕ್ಷಪ್ರಜಾಪತಿ ಶಿವನನ್ನು ಬಗೆ ಬಗೆಯಾಗಿ ನಿಂದಿಸಿ ತನ್ನ ರಾಜಧಾನಿಗೆ ತೆರಳಿ ನಿರೀಶ್ವರಯಾಗವನ್ನು ಆರಂಭಿಸಿದ. ಎಲ್ಲ ದೇವಾನುದೇವತೆಗಳನ್ನು ಆಹ್ವಾನಿಸಿದ. ಶಂಕರನನ್ನು ಕರೆಯಲಿಲ್ಲ. ಇದನ್ನು ತಿಳಿದ ಶಿವ ಧ್ಯಾನಸ್ಥನಾದ. ತನ್ನಪ್ಪನ ಕೌಟಿಲ್ಯವನ್ನು ಅರಿಯದ ದಾಕ್ಷಾಯಣಿ ಶಿವನಾಜ್ಞೆಯನ್ನೂ ಮೀರಿ ತವರುಮನೆಗೆ ಬಂದಳು. ಆದರೆ ಅವಳನ್ನು ಅಲ್ಲಿ ಯಾರೂ ಆದರಿಸಲಿಲ್ಲ. ಅಪ್ಪ ಮಾಡುತ್ತಿರುವುದು ನಿರೀಶ್ವರಯಾಗವೆಂದು ಅರಿತು ಆ ಯಜ್ಞವನ್ನು ಕೆಡಿಸುವುದಕ್ಕೋಸ್ಕರ ತನ್ನನ್ನೇ ತಾನು ದಹಿಸಿಕೊಂಡು ಪ್ರಾಣಾರ್ಪಣೆ ಮಾಡಿದಳು.

ಹೀಗೆ ಗತಿಸಿದ ದಾಕ್ಷಾಯಣಿಯೇ ಹಿಮವಂತ ಮತ್ತು ಮೈನಾದೇವಿಯರ ಮಗಳಾಗಿ ಹುಟ್ಟಿಬಂದಳು. ಅತ್ತ ತಾರಕಾಸುರ ಅಟ್ಟಹಾಸದಿಂದ ಮೆರೆಯುತ್ತಿದ್ದ. ಶಿವನ ಮಗನಿಂದಲೇ ಅವನ ಮರಣ ಎಂಬುದು ನಿಶ್ಚಿತವಾಗಿತ್ತು. ಹಾಗಾಗಿ ದಾಕ್ಷಾಯಣಿಯ ಪುನರ್ಜನ್ಮ ಅನಿವಾರ್ಯವಾಗಿತ್ತು.

ಮಹಾಕವಿ ಕಾಲಿದಾಸ ತನ್ನ ಕುಮಾರಸಂಭವಮ್ ಎಂಬ ಮಹಾಕಾವ್ಯದಲ್ಲಿ ಪಾರ್ವತಿಯ ಜನನ ವೃತ್ತಾಂತವನ್ನು ಸುಂದರವಾಗಿ ವರ್ಣಿಸಿದ್ದಾನೆ.

ಅಥಾವಮಾನೇನ ಪಿತುಃ ಪ್ರಯುಕ್ತಾ ದಕ್ಷಸ್ಯ ಕನ್ಯಾ ಭವಪೂರ್ವಪತ್ನೀ|

ಸತೀ ಸತೀ ಯೋಗವಿಸೃಷ್ಟದೇಹಾ ತಾಂ ಜನ್ಮನೇ ಶೈಲವಧೂಂ ಪ್ರಪೇದೇ||

ಸರಸ್ವತಿ ಲಕ್ಷ್ಮಿ ಪಾರ್ವತಿಯರು ಆದಿಶಕ್ತಿಯ ಅಂಶಸಂಭೂತರೇ ಆಗಿದ್ದರೂ ಪಾರ್ವತಿಯನ್ನು ಪರಾಶಕ್ತಿಯ ಪೂರ್ಣಾವತಾರವೆಂದು ತಿಳಿದು ವರ್ಣಿಸುವುದನ್ನು ನಾವು ಅನೇಕ ಕಡೆ ನೋಡಬಹುದು. ಶ್ರೀ ಶಂಕರಭಗವತ್ಪಾದರು ತಮ್ಮ ಸೌಂದರ್ಯಲಹರಿಯಲ್ಲೂ ಅದೇ ರೀತಿಯಲ್ಲಿ ದೇವಿಯನ್ನು ಸ್ತುತಿಸಿದ್ದಾರೆ. ಪಾರ್ವತಿಯನ್ನೇ ದುರ್ಗೆ, ಚಂಡಿಕೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಶೈಲಪುತ್ರೀ ಎನ್ನುವ ಹೆಸರು ಹಿಮವಂತನ ಮಗಳಾದುದರಿಂದ ಬಂದುದು ಎಂಬುದು ಒಂದು ಕಾರಣವಾದರೆ ಈ ಹೆಸರಿನ ಹಿಂದೆ ಇನ್ನೊಂದು ಕಥೆಯೂ ಇದೆ ಎಂದು ಅಂತರ್ಜಾಲದಲ್ಲಿ ಈ ವಿಷಯವನ್ನು ಹುಡುಕುವಾಗ ತಿಳಿಯಿತು.

ಪಾರ್ವತಿಯು ಒಮ್ಮೆ ಕಮಲಗಳಿಂದ ಶೋಭಿತವಾದ ಸರೋವರಕ್ಕೆ ವಿಹಾರಾರ್ಥವಾಗಿ ಹೋಗಿದ್ದಳು. ಅಲ್ಲಿಗೆ ಎಲ್ಲಿಂದಲೋ ಬಂದ ಹಸುವೊಂದು ಅವಳನ್ನು ಒಂದು ಹುಲ್ಲುಗಾವಲಿಗೆ ಒಯ್ದಿತು. ಅಲ್ಲಿ ಅವಳು ದನಗಳ ಎಲುಬಿನ ದೊಡ್ಡ ಗುಡ್ಡೆಯನ್ನು ನೋಡಿದಳು. ಅದನ್ನು ನೋಡಿ ಆಶ್ಚರ್ಯಪಡುತ್ತಿರುವಾಗಲೇ ಘೋರಾಕಾರದ ರಾಕ್ಷಸಿಯೊಬ್ಬಳು ಪ್ರತ್ಯಕ್ಷಳಾದಳು. ಅವಳು ತಾರಕಾಸುರನ ಸೋದರಿಯಾದ ತಾರಿಕೆ. ಅವಳೇ ಗೋವುಗಳನ್ನೆಲ್ಲ ತಿಂದು ಹಾಕುತ್ತಿದ್ದಳು. ಪಾರ್ವತಿಯನ್ನು ನೋಡಿದ ರಾಕ್ಷಸಿಯು ಮೈಮೇಲೆ ಏರಿ ಬಂದಳು. ಆಗ ಪಾರ್ವತಿಯು ಸಣ್ಣ ಪರ್ವತದ ಆಕಾರವನ್ನು ತಳೆದು ಗೋವುಗಳನ್ನು ತನ್ನ ಹಿಂದೆ ಇಟ್ಟು ರಕ್ಷಿಸಿದಳು. ತಾರಿಕೆಯು ಇದನ್ನು ಕಂಡು ಪರ್ವತವನ್ನು ಪುಡಿಗೈಯಹೊರಟಳು. ಅವಳ ಸತತ ಹೊಡೆತಕ್ಕೆ ಸಿಕ್ಕು ಪರ್ವತವು ಒಡೆದುಹೋಯಿತು. ಅಲ್ಲಿಂದ ಸ್ವರ್ಣಕಿರೀಟವನ್ನೂ ಒಂದು ಕೈಯಲ್ಲಿ ತ್ರಿಶೂಲವನ್ನೂ ಇನ್ನೊಂದು ಕೈಯಲ್ಲಿ ಕಮಲಪುಷ್ಪವನ್ನೂ ಹಿಡಿದಿರುವ ಪಾರ್ವತಿಯು ಆವಿರ್ಭವಿಸಿದಳು. ತಾರಿಕೆಯನ್ನು ಸಂಹರಿಸಿದ ಅವಳನ್ನು ಪರ್ವತರಾಜನೇ ಶೈಲಪುತ್ರಿಯೆಂದು ಕರೆದ.

ಶೈಲಪುತ್ರಿಯ ಪ್ರಾರ್ಥನೆಗೆ ಬಳಸುವ ಶ್ಲೋಕ ಇದು-

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ |

ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಶೈಲಪುತ್ರಿಯು ಅರ್ಧಚಂದ್ರನನ್ನು ತನ್ನ ತಲೆಯಲ್ಲಿ ಧರಿಸಿದ್ದಾಳೆ. ಚಂದ್ರ ಆಹ್ಲಾದಕತೆಯ ಸಂಕೇತ. ಮನೋಕಾರಕನೂ ಹೌದು. ಅರ್ಧಚಂದ್ರ ವೃದ್ಧಿಯ ಸಂಕೇತ. ವೃಷಭವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಸೊಕ್ಕಿನ ಮೇಲೆ ಸವಾರಿ ಮಾಡಿ ಅದನ್ನು ದಮನಿಸುವುದರ ಸಂಕೇತವದು. ವೃಷಭವು ಪಾವಿತ್ರ್ಯದ ಸಂಕೇತವೂ ಹೌದು. ಬಲಗೈಯಲ್ಲಿ ತ್ರಿಶೂಲವಿದೆ. ನಮ್ಮ ಆಧಿದೈವಿಕ, ಆಧಿಭೌತಿಕ ಆಧ್ಯಾತ್ಮಿಕ ಎಂಬ ತಾಪತ್ರಯಗಳನ್ನು ಹೋಗಲಾಡಿಸುವ ಪರಮ ಆಯುಧ ಅದು. ಎಡಗೈಯಲ್ಲಿರುವ ಕಮಲದ ಹೂವು ಪ್ರೀತಿ ಹಾಗೂ ಶಾಂತಿಯ ಸಂಕೇತ. ಯಶಸ್ವಿಯಾಗಿ ದೈತ್ಯದಮನವನ್ನು ಮಾಡಿ ನಮ್ಮ ಬಾಳಿನ ಯಶಸ್ಸಿಗೂ ಅನುಗ್ರಹ ಮಾಡುವ ಪರಮ ಕೃಪಾಳು ದೇವಿ. ಮೂಲಾಧಾರ ಚಕ್ರದ ಅಧಿಷ್ಠಾತ್ರಿಯಾಗಿ ಯೋಗಮಾರ್ಗದ ಮೂಲವೂ ಆಗಿದ್ದಾಳೆ. ಅವಳನ್ನು ಭಜಿಸಿ, ಪೂಜಿಸಿ ಅನುಸಂಧಾನಿಸಿ ನಮ್ಮ ಅಭೀಷ್ಟವನ್ನು ಪೂರೈಸಿಕೊಂಡು ಧನ್ಯರಾಗೋಣ. ನಾಳೆ ಎರಡನೆಯ ದಿನ. ಬ್ರಹ್ಮಚಾರಿಣಿ ದುರ್ಗೆಯ ಅನುಸಂಧಾನವನ್ನು ಮಾಡೋಣ. ನಮಸ್ಕಾರ.

ನವರಾತ್ರಿ ಪೂರ್ವಪೀಠಿಕೆ

ಶರಣಾಗತದೀನಾರ್ತಪರಿತ್ರಾಣಪರಾಯಣೇ|

ಸರ್ವಾಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತುತೇ||

ಆತ್ಮೀಯ ಸ್ನೇಹಿತರೆ,

ಎಲ್ಲರಿಗೂ ಆದರಪೂರ್ವಕ ನಮಸ್ಕಾರ.

ಸಾಮಾನ್ಯವಾಗಿ ಶ್ರಾವಣಮಾಸದಿಂದಲೇ ನಮ್ಮ ಹಬ್ಬಗಳ ಸಾಲು ಆರಂಭವಾಗುತ್ತವೆ. ಗಣೇಶ ಚತುರ್ಥಿಯ ನಂತರ ಬರುವ ದೊಡ್ಡ ಹಬ್ಬ ನವರಾತ್ರಿ. ಜಗತ್ತಿನ ಸೃಷ್ಟಿಗೆ ಮೂಲಕಾರಣವಾದ ಪ್ರಕೃತಿತತ್ತ್ವವನ್ನು ಆರಾಧಿಸುವ ಮಹಾಪರ್ವ ಇದು.

ಈ ಜಗತ್ತಿನ ಸೃಷ್ಟಿಯ ವಿಷಯದಲ್ಲಿ ಅನಾದಿಕಾಲದಿಂದ ಅನೇಕ ವಾದಗಳು ಹುಟ್ಟಿಕೊಂಡಿವೆ. ಕೆಲವರು ಜಗತ್ತಿನ ಬೀಜಸ್ವರೂಪ ಪರಬ್ರಹ್ಮ ಲಿಂಗರಹಿತತತ್ತ್ವವೆಂದು ವಾದಿಸಿದರೆ ಇನ್ನು ಕೆಲವರು ಸ್ತ್ರೀತತ್ತ್ವವೇ ಪ್ರಕೃತಿ ಅದರಿಂದಲೇ ಜಗತ್ತಿನ ಸೃಷ್ಟಿ ಎನ್ನುತ್ತಾರೆ. ಸರ್ವಾಶ್ರಯಾಖಿಲಮಿದಂ ಜಗದಂಶಭೂತಮವ್ಯಾಕೃತಾ ಹಿ ಪರಮಾ ಪ್ರಕೃತಿಸ್ತ್ವಮಾದ್ಯಾ ಎಂದು ಮಾರ್ಕಂಡೇಯ ಪುರಾಣದಲ್ಲಿ ದೇವಿಯನ್ನು ವರ್ಣಿಸಲಾಗಿದೆ. ಮತ್ತೆ ಕೆಲವರು ಪುರುಷನ ಸಾನಿಧ್ಯವೇ ಸೃಷ್ಟಿಗೆ ಕಾರಣ ಎಂಬ ವಾದವನ್ನು ಮುಂದಿಡುತ್ತಾರೆ. ಹಾಗಾಗಿ ನಮ್ಮ ಸಂಪ್ರದಾಯದಲ್ಲಿ, ಆಚರಣೆಯಲ್ಲಿ, ನಂಬಿಕೆಯಲ್ಲಿ ವೈವಿಧ್ಯ ಕಂಡುಬರುತ್ತದೆ. ಈ ವಿವಿಧತೆ ಕೆಲವೊಮ್ಮೆ ವಿಭ್ರಮೆಯನ್ನುಂಟುಮಾಡುತ್ತದೆ. ಕೇವಲ ನಮ್ಮಂತಹ ಪಾಮರರಿಗಷ್ಟೇ ಅಲ್ಲ ಸಮಸ್ತ ಪುರಾಣಗಳ ಸೃಷ್ಟಿಕರ್ತೃವಾದ ವೇದವ್ಯಾಸರಿಗೇ ಯಾವ ವಾದ ಸರಿ ಎಂಬುದು ತಿಳಿಯದೆ ನಾರದರ ಮೊರೆಹೊಕ್ಕರಂತೆ.

ಮಾರ್ಕಂಡೇಯ ಪುರಾಣದನ್ವಯ ದೇವಿ ಮೊದಲಿಗೆ ಪ್ರಕಟವಾದದ್ದು ಮಧುಕೈಟಭವಧೆಯ ಸಮಯದಲ್ಲಿ. ಆದಿಮಾಯೆಯಾದ ದೇವಿ ಯೋಗನಿದ್ರೆಯಾಗಿ ಶ್ರೀಮನ್ನಾರಾಯಣನನ್ನು ಆವರಿಸಿಕೊಂಡಿದ್ದಳು. ಮಧು ಕೈಟಭರೆಂಬ ಯುಗಳ ರಾಕ್ಷಸರು ಮಲಗಿದ್ದ ವಿಷ್ಣುವನ್ನೂ ಅವನ ನಾಭಿಕಮಲದಲ್ಲಿ ಕುಳಿತಿದ್ದ ಬ್ರಹ್ಮನನ್ನೂ ಪೀಡಿಸಲು ಯತ್ನಿಸಿದಾಗ ಬ್ರಹ್ಮನ ಪ್ರಾರ್ಥನೆಗೆ ಒಲಿದು ವಿಷ್ಣುವಿನ ಕಣ್ಣು, ಮೂಗು, ಬಾಯಿ, ಹೃದಯ, ಹೊಟ್ಟೆಗಳಿಂದ ಹೊರಬಂದ ಬ್ರಹ್ಮನ ಮುಂದೆ ಪ್ರತ್ಯಕ್ಷಳಾದಳು. ಅವಳ ಅಣತಿಯಂತ ಬ್ರಹ್ಮದೇವ ಸೃಷ್ಟಿಯನ್ನ ಮಾಡಿದ ಎಂದು ಮಾರ್ಕಂಡೇಯ ಪುರಾಣದಲ್ಲಿ ಉಪವರ್ಣಿತವಾಗಿದೆ.

ಹಿಂದೆ ನೂರು ವರ್ಷಗಳ ಕಾಲ ದೇವಾಸುರ ಸಂಗ್ರಾಮ ನಡೆಯಿತಂತೆ. ಅದರಲ್ಲಿ ಮಹಿಷಾಸುರ ಅತಿವರಬಲಾನ್ವಿತನಾಗಿ ದೇವತೆಗಳನ್ನೆಲ್ಲ ಸೋಲಿಸಿ ಸ್ವರ್ಗವನ್ನು ಸ್ವಾಧೀನಪಡಿಸಿಕೊಂಡ. ದೇವತೆಗಳು ತ್ರಿಮೂರ್ತಿಗಳಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡಾಗ ಅವರಿಂದ ಹೊರಟ ಕೋಪಾಗ್ನಿಕಣಗಳೊಟ್ಟಾಗಿ ದೇವಿಯ ಸ್ವರೂಪ ಪ್ರಕಟವಾಯಿತು ಎಂದು ಪುರಾಣದಲ್ಲಿ ವರ್ಣನೆಯಿದೆ. ತಸ್ಮಾನ್ಮೇ ಮರಣಂ ನೂನಂ ಕಾಮಿನ್ಯಾಃ ಕುರು ಪದ್ಮಜ| ಅಬಲಾ ಮಾಂ ಕಥಂ ಹಂತುಂ ಕಥಂ ಶಕ್ತಾ ಭವಿಷ್ಯತಿ|| ಎಂದು ಮಹಿಷಾಸುರ ಹೆಣ್ಣಿನಿಂದ ಮಾತ್ರ ಮರಣಹೊಂದುವಂತೆ ವರವನ್ನು ಪಡೆದಿದ್ದ. ಹಾಗಾಗಿ ದೇವಿಯೇ ಪ್ರಕಟವಾಗಬೇಕಾಯಿತು.

ಜಗತ್ತಿನ ಸೃಷ್ಟಿಸ್ಥಿತಿಲಯಗಳಿಗೆ ಕಾರಣೀಕರ್ತರಾದ ತ್ರಿಮೂರ್ತಿಗಳೂ ಜಗನ್ಮಾತೆಯಾದ ಮಹಾಮಾಯೆಯ ಆಣತಿಯಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದಿಮಾಯೆ ತನ್ನಂಶದಿಂದಲೇ ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿಯೆಂಬ ಮೂರು ಸ್ತ್ರೀರೂಪಗಳನ್ನು ಸೃಷ್ಟಿಸಿ ಕ್ರಮವಾಗಿ ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಪ್ರದಾನ ಮಾಡುತ್ತಾಳೆ.

ನವರಾತ್ರಿ ಸ್ತ್ರೀತತ್ತ್ವವನ್ನು ಪೂಜಿಸುವ ದೊಡ್ಡಹಬ್ಬ. ನವಾನಾಂ ರಾತ್ರೀಣಾಂ ಸಮಾಹಾರಃ ನವರಾತ್ರಮ್. ಹೆಸರೇ ಸೂಚಿಸುವಂತೆ ಒಂಭತ್ತು ರಾತ್ರಿಗಳಲ್ಲಿ ಆಚರಿಸಲ್ಪಡುವ ವಿಶಿಷ್ಟ ಉತ್ಸವ. ದೇವಿಯು ಒಂಭತ್ತು ರಾತ್ರಿಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿ ವಿಜಯದಶಮಿಯ ಬೆಳಗಿನಲ್ಲಿ ಅವನನ್ನು ಸಂಹರಿಸಿದಳು ಎಂದು ಪುರಾಣಗಳು ಹೇಳುತ್ತವೆ.

ದೇವೀಭಾಗವತದಲ್ಲಿ ನವರಾತ್ರವ್ರತದ ಆಚರಣೆಯ ವಿಧಿಯನ್ನು ವರ್ಣಿಸಲಾಗಿದೆ. ವರ್ಷದಲ್ಲಿ ಎರಡು ನವರಾತ್ರಿಗಳು ಆಚರಿಸಲ್ಪಡುತ್ತವೆ. ಚೈತ್ರಮಾಸದ ಪ್ರತಿಪದೆಯಿಂದ ನವಮಯವರೆಗೆ ವಸಂತನವರಾತ್ರಿ, ಶರದೃತುವಿನ ಪಾಡ್ಯದಿಂದ ನವಮಿಯವರೆಗೆ ಶರನ್ನವರಾತ್ರಿ. ಕೆಲವೆಡೆ ಮಾಘನವರಾತ್ರಿ ಹಾಗೂ ಆಷಾಢನವರಾತ್ರಿಗಳ ಆಚರಣೆಯೂ ನಡೆಯುತ್ತದೆ ಎನ್ನಲಾಗಿದೆ.

ದೇವೀ ಭಾಗವತದಲ್ಲಿ ವಸಂತನವರಾತ್ರಿ ಹಾಗೂ ಶರನ್ನವರಾತ್ರಿಗಳು ದೇವಿಯ ಆರಾಧನೆಗೆ ಪ್ರಶಸ್ತವಾಗಿವೆ ಎಂದು ವರ್ಣಿಸಲಾಗಿದೆ. ಈ ಎರಡೂ ಋತುಗಳಿಗೆ ಯಮದಂಷ್ಟ್ರ ಎಂಬ ಹೆಸರಿದೆ. ಅನೇಕರೋಗಗಳನ್ನು ಉಂಟುಮಾಡುವ ಈ ಋತುಗಳಲ್ಲಿ ಚಂಡಿಕೆಯ ಪೂಜೆಯನ್ನು ಮಾಡಬೇಕು ಎಂಬ ನಿರ್ದೇಶ ಅಲ್ಲಿದೆ. ತಸ್ಮಾತ್ತತ್ರ ಪ್ರಕರ್ತವ್ಯಂ ಚಂಡಿಕಾಪೂಜನಂ ಬುಧೈಃ ಎಂದ ಹೇಳಲಾಗಿದೆ.

ನವರಾತ್ರಿ ವ್ರತ ಪ್ರತಿಪದೆಯ ಹಿಂದಿನ ದಿನ ಅಂದರೆ ಅಮಾವಾಸ್ಯೆಯಂದೇ ಆರಂಭವಾಗುತ್ತದೆ. ಅಂದು ಒಂದೇ ಹೊತ್ತು ಊಟಮಾಡಿ ದೇವಿಯ ಸ್ಥಾಪನೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು. ಹದಿನಾರು ಹಸ್ತ ವಿಸ್ತೀರ್ಣದ ಜಾಗವನ್ನು ಗೋಮಯಾದಿಸೇಚನದಿಂದ ಶುಚಿಗೊಳಿಸಿ ಅಲ್ಲಿ ನಾಲ್ಕು ಹಸ್ತಗಳಷ್ಟು ಎತ್ತರವಾದ ಜಾಗದಲ್ಲಿ ದೇವಿಯ ಪೀಠವನ್ನು ಸ್ಥಾಪಿಸಬೇಕು. ಸುಂದರವಾದ ಸ್ತಂಭಗಳಿಂದ ಯುಕ್ತವಾದ ಮಂಟಪವನ್ನು ನಿರ್ಮಿಸಬೇಕು.

ನವರಾತ್ರವ್ರತದ ಒಂಭತ್ತು ದಿನಗಳೂ ಒಪ್ಪತ್ತು ಊಟ. ಮದ್ಯಮಾಂಸಾದಿಗಳು ವರ್ಜ್ಯ. ಸಾತ್ತ್ವಿಕ ಆಹಾರ ಸೇವನೆಯ ಮೂಲಕ ಮೈಮನಗಳನ್ನು ಶುಚಿಯಾಗಿರಿಸಿಕೊಂಡು ಭಕ್ತಿಭಾವದಿಂದ ವ್ರತವನ್ನು ಆಚರಿಸಬೇಕು.

ಪೂರ್ವನಿರ್ಮಿತವಾದ ಮಂಟಪದಲ್ಲಿ ನಾಲ್ಕು ಕೈಗಳುಳ್ಳ ಸಾಯುಧ ದೇವಿಯ ಪ್ರತಿಷ್ಠಾಪನೆ ಮಾಡಬೇಕು. ಸುಂದರವಾದ ಕಲಶವನ್ನು ಸ್ಥಾಪಿಸಿ ಅದರಲ್ಲಿ ಪ್ರಾಣಪ್ರತಿಷ್ಠೆಯನ್ನು ಮಾಡಬೇಕು. ದೇವಿಯನ್ನು ಭಕ್ತಿಯಿಂದ ಪೂಜಿಸಿ, ಕುಮಾರಿಕಾ ಪೂಜೆಯನ್ನು ನೆರವೇರಿಸಬೇಕು. 

ಪ್ರಾದೇಶಿಕ ಸಂಪ್ರದಾಯಗಳನ್ನು ಅನುಸರಿಸಿ ದೇಶಾದ್ಯಂತ ಆಚರಣೆಯಲ್ಲಿ ವೈವಿಧ್ಯ ಕಾಣಸಿಗುತ್ತದೆ. ಪಶ್ಚಿಮಬಂಗಾಳವೂ ಸೇರಿದಂತೆ ದೇಶದ ಪೂರ್ವಭಾಗದಲ್ಲಿ ದುರ್ಗಾಪೂಜೆ ವೈಭವದಿಂದ ನಡೆಯುತ್ತದೆ. ಉತ್ತರಭಾರತದಲ್ಲಿ ರಾಮಲೀಲಾ ಉತ್ಸವ ನಡೆಯುತ್ತದೆ. ಪಶ್ಚಿಮದ ಗುಜರಾತಿನಲ್ಲಿ ಗರ್ಭಾ ಮತ್ತು ದಾಂಡಿಯಾ ನೃತ್ಯದ ಮೂಲಕ ನವರಾತ್ರಿಯ ಸಂಭ್ರಮ ಕಾಣಸಿಗುತ್ತದೆ. ದಕ್ಷಿಣಭಾರತದಲ್ಲಿ ದಸರಾ ವಿಶೇಷವಾಗಿ ಉತ್ಸವ ರೂಪದಲ್ಲಿ ಆಚರಿಸಲ್ಪಡುತ್ತದೆ.

ನವರಾತ್ರಿಯ ಒಂದೊಂದು ದಿನವೂ ಒಂದೊಂದು ದುರ್ಗೆಯ ಪೂಜೆ ನಡೆಯುತ್ತದೆ. ದುರ್ಗಾಸಪ್ತಶತಿಯಲ್ಲಿ ನವದುರ್ಗೆಯರ ಉಲ್ಲೇಖ ಕಾಣಸಿಗುತ್ತದೆ.

ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ |

ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀ ತಥಾ |

ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ ||

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |

ಮುಂದಿನ ಒಂಭತ್ತು ದಿನಗಳಲ್ಲಿ ನವದುರ್ಗೆಯರ ಅನುಸಂಧಾನವನ್ನು ಮಾಡುತ್ತ ನವರಾತ್ರವ್ರತವನ್ನು ಆಚರಿಸೋಣ. ನಾಳೆ ಶೈಲಪುತ್ರಿಯ ಬಗ್ಗೆ ಮಾಹಿತಿಯನ್ನು ನಿರೀಕ್ಷಿಸಿ.

ನಮಸ್ಕಾರ


नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...