Monday, October 19, 2020

ಚಂದ್ರಘಂಟಾ

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ|

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತುತೇ||

ಆತ್ಮೀಯ ಸ್ನೇಹಿತರೆ

ಸಕಲರಿಗೂ ಪ್ರಣತಿಗಳು.

ಇಂದು ನವರಾತ್ರವ್ರತದ ಮೂರನೆಯ ದಿನ. ಈ ದಿನದ ಅಧಿಷ್ಠಾತ್ರಿ ದುರ್ಗೆ ಚಂದ್ರಘಂಟಾ.

ಚಂದ್ರಃ ಘಂಟಾಯಾಂ ಯಸ್ಯಾಃ ಸಾ ಚಂದ್ರಘಂಟಾ | ಘಂಟೆಯಲ್ಲಿ ಚಂದ್ರನನ್ನು ಹೊಂದಿರುವವಳು ಎಂಬುದು ಇದರ ಅರ್ಥ. ಅಥವಾ ಗಂಟೆಯಂತೆ ತೋರುವ ಚಂದ್ರನನ್ನು ಹೊಂದಿರುವವಳು ಎಂದೂ ಅರ್ಥೈಸಬಹುದು. ಪಾರ್ವತಿಯ ವಿವಾಹಸಮಯದ ರೂಪ ಇದು ಎಂದು ವಿದ್ವಾಂಸರ ಅಭಿಪ್ರಾಯ. ಚಂದ್ರಶೇಖರನಾದ ಶಿವನ ಅರ್ಧಾಂಗಿಯಾಗುವ ಪಾರ್ವತಿಯೂ ಹಣೆಯಲ್ಲಿ ಅರ್ಧಚಂದ್ರನನ್ನು ಧರಿಸಿದಳು. ಅದು ಘಂಟೆಯ ಆಕಾರವನ್ನು ತಳೆದಿತ್ತು. ಹಾಗಾಗಿ ಇವಳಿಗೆ ಚಂದ್ರಘಂಟಾ ಎಂಬ ಹೆಸರು.

ಹತ್ತು ಕೈಗಳನ್ನು ಹೊಂದಿರುವ ದೇವಿ ಇವಳು. ತನ್ನ ಕೈಗಳಲ್ಲಿ ತ್ರಿಶೂಲ, ಗದೆ, ಖಡ್ಗ, ಅಭಯಮುದ್ರೆ, ಬಿಲ್ಲು, ಬಾಣ, ಕಮಲ ಇವುಗಳನ್ನು ಧರಿಸಿದ್ದು ಒಂದು ಕೈಯಲ್ಲಿ ಅಭಯಮುದ್ರೆಯನ್ನು ಹೊಂದಿದ್ದಾಳೆ. ಸಿಂಹ ಅಥವಾ ಹುಲಿಯ ಮೇಲೆ ಕುಳಿತಿದ್ದಾಳೆ.

ಚಂದ್ರಘಂಟಾದೇವಿಯನ್ನು ಪೂಜಿಸುವಾಗ ಹೇಳುವ ಶ್ಲೋಕ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||

ಸಿಂಹವನ್ನು ಆರೋಹಿಸಿರುವ ಪ್ರಚಂಡ ಕೋಪವನ್ನು ಹೊಂದಿ ವಿವಿಧ ಅಸ್ತ್ರಗಳಿಂದ ಶೋಭಿತಳಾದ ಚಂದ್ರಘಂಟೆಯೆಂದು ವಿಖ್ಯಾತಳಾದ ದೇವಿಯು ನನ್ನ ವಿಷಯದಲ್ಲಿ ಪ್ರಸನ್ನತೆಯನ್ನು ಹೊಂದಿದ್ದಾಳೆ.

ಚಂದ್ರಘಂಟೆಯ ಅನುಸಂಧಾನದಿಂದ ಮಣಿಪೂರಚಕ್ರದ ಉದ್ದೀಪನವಾಗುವುದು.

ದೇವೀ ಭಾಗವತದಲ್ಲಿ ಅನೇಕ ಕಡೆ ದೇವಿಯ ಮಹಿಮೆ ವರ್ಣಿತವಾಗಿದೆ. ಪರಾಶಕ್ತಿಯೇ ಯೋಗನಿದ್ರೆಯಾಗಿ ವಿಷ್ಣುವನ್ನು ಆವರಿಸಿಕೊಂಡಿದ್ದಳು ಎಂದು ಅಲ್ಲಿ ವರ್ಣಿಸಲ್ಪಟ್ಟಿದೆ. ಇದನ್ನು ಸೂತಪುರಾಣಿಕರ ಬಾಯಿಯಿಂದ ಕೇಳಿದ ಶೌನಕಾದಿ ಮುನಿಗಳು ಆಶ್ಚರ್ಯಚಕಿತರಾದರು. ಪರಾತ್ಪರನೆಂದು ಭಜಿಸಲ್ಪಡುವ ವಿಷ್ಣುವನ್ನೇ ಸಂಮೋಹಗೊಳಿಸಿದ್ದು ಹೇಗೆ ಎಂಬುದು ಅವರ ಪ್ರಶ್ನೆ. ಆಗ ಸೂತಪುರಾಣಿಕರು ವಿಷ್ಣುವಿನಿಂದ ಬ್ರಹ್ಮನಿಗೆ, ಬ್ರಹ್ಮನಿಂದ ನಾರದನಿಗೆ, ನಾರದನಿಂದ ಸೂತಪುರಾಣಿಕನಿಗೆ ಹೇಳಲ್ಪಟ್ಟ ರಹಸ್ಯವೊಂದನ್ನು ಮುನಿಗಳಿಗೆ ಹೇಳುತ್ತಾರೆ.

ಈ ಜಗತ್ತಿನ ಸಕಲಚರಾಚರಗಳಲ್ಲೂ ಶಕ್ತಿ ಎಂಬ ಚೈತನ್ಯವಿರುತ್ತದೆ. ಆ ಶಕ್ತಿಯಿಂದಲೇ ಎಲ್ಲರೂ ಸಕ್ರಿಯವಾಗಿರುವುದು. ಶಕ್ತಿಹೀನಂ ತು ನಿಂದ್ಯಂ ಸ್ಯಾದ್ವಸ್ತುಮಾತ್ರಂ ಚರಾಚರಮ್ | ಶಕ್ತಿಹೀನವಾದ ವಸ್ತುವಿಗೆ ಅಸ್ತಿತ್ವವೇ ಇರುವುದಿಲ್ಲ. ಈ ಶಕ್ತಿಯೇ ಬ್ರಹ್ಮವಿಷ್ಣುಮಹೇಶ್ವರರಲ್ಲಿ ಕ್ರಮವಾಗಿ ರಾಜಸೀ, ಸಾತ್ವಿಕೀ, ತಾಮಸೀ ರೂಪದಲ್ಲಿದ್ದು ಅವರನ್ನು ಸೃಷ್ಟಿ, ಸ್ಥಿತಿ, ಲಯಕಾರ್ಯಗಳಲ್ಲಿ ತೊಡಗಿಸಿದೆ.

ತೇ ವೈ ಶಕ್ತಿಂ ಪರಾಂ ದೇವೀಂ ಬ್ರಹ್ಮಾಖ್ಯಾಂ ಪರಮಾತ್ಮಿಕಾಮ್|

ಧ್ಯಾಯಂತಿ ಮನಸಾ ನಿತ್ಯಂ ನಿತ್ಯಾಂ ಮತ್ವಾ ಸನಾತನೀಮ್||

ಇದೇ ಬ್ರಹ್ಮನೆಂದು ಕರೆಸಿಕೊಳ್ಳುವ ಪರಮಾತ್ಮಿಕೆಯಾದ ಪರಾ ಶಕ್ತಿ. ತ್ರಿಮೂರ್ತಿಗಳೂ ಇತರ ದೇವತೆಗಳೂ ನಿತ್ಯಳೂ, ಸನಾತನಿಯೂ ಆದ ಅವಳನ್ನೇ ಮನಸಾ ಧ್ಯಾನಿಸುತ್ತಾರೆ. ಹಾಗಾಗಿ ವಿಷ್ಣುವು ಅವಳ ವಶವಾದುದರಲ್ಲಿ ವಿಸ್ಮಯವೇನೂ ಇಲ್ಲ.

ಶ್ರೀ ಶಂಕರಭಗವತ್ಪಾದರೂ ತಮ್ಮ ಸೌಂದರ್ಯಲಹರಿ ಗ್ರಂಥದಲ್ಲಿ

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್|

ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ||

ಎಂದು ದೇವಿಯ ಮಹಿಮೆಯನ್ನು ವರ್ಣಿಸಿದ್ದಾರೆ.

ಧರ್ಮಾರ್ಥಕಾಮಮೋಕ್ಷಾಣಾಂ ಸ್ವಾಮಿನೀ ಸಾ ನಿರಾಕುಲಾ |

ದದಾತಿ ವಾಂಛಿತಾನ್ಕಾಮಾನ್ಪೂಜಿತಾ ವಿಧಿಪೂರ್ವಕಮ್ ||

ನಾವು ಧರ್ಮಾರ್ಥಕಾಮಮೋಕ್ಷಗಳ ಸ್ವಾಮಿನಿಯಾದ ಅವಳನ್ನು ವಿಧಿಪೂರ್ವಕವಾಗಿ ಅರ್ಚಿಸಿದರೆ ನಮ್ಮ ಇಚ್ಚೆಯನ್ನು ಪೂರ್ಣಗೊಳಿಸುತ್ತಾಳೆ.

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|

ನಮಸ್ತೈಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಆತ್ಮೀಯರೆ, ನಾಳೆ ಕೂಷ್ಮಾಂಡಾ ದೇವಿಯ ಬಗ್ಗೆ ತಿಳಿದುಕೊಳ್ಳೋಣ. ನಮಸ್ಕಾರ.


No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...