Wednesday, September 16, 2026

ಸ್ನೇಹ-ಸ್ಪರ್ಧೆ

 

’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಎಮ್.ಏ. ಅಂತಿಮವರ್ಷದ ವಿದ್ಯಾರ್ಥಿಗಳು. ಉತ್ತಮ ಸ್ನೇಹಿತರು. ಹರಟೆ, ಓದು ಎರಡನ್ನೂ ಒಟ್ಟಾಗಿ ಮಾಡುವವರು. ಇವರ ಮಧ್ಯೆ ಅಂತಿಮ ವರ್ಷದ ಬಂಗಾರದ ಪದಕಕ್ಕೆ ಪೈಪೋಟಿ ಇದೆ. ಇಬ್ಬರೂ ಜಿದ್ದಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಧ್ಯಯನದಲ್ಲಿ ಏನಾದರೂ ಹೊಸದು ಹೊಳೆದರೆ ತಕ್ಷಣ ಹಂಚಿಕೊಳ್ಳುವ ತೆರೆದ ಮನಸ್ಸು ಇಬ್ಬರದೂ. ತಮಗೆ ತಿಳಿದ ವಿಷಯವನ್ನು ಗುಟ್ಟಾಗಿ ಇಟ್ಟುಕೊಂಡು ಮೊದಲ ಸ್ಥಾನ ಪಡೆದುಕೊಳ್ಳಬೇಕೆಂಬ ಹಂಬಲ ಇಬ್ಬರಿಗೂ ಇಲ್ಲ. ಪರಸ್ಪರರ ಸಾಧನೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದರು. ಸುನೀತಾಳ ಭಾಷಣ ಎಂದರೆ ಸುಜಯನಿಗೆ ತುಂಬಾ ಇಷ್ಟ. ಹಾಗೆಯೇ ಸುಜಯ ಬರೆಯುವ ಲೇಖನಗಳು ಸುನೀತಾಳಿಗೆ ಬಹಳ ಪ್ರಿಯ.

ಇಷ್ಟಾದರೂ ಅವರು ತಮ್ಮ ತಮ್ಮ ಟಿಪ್ಪಣಿಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರೇ ಹೊರತು ಒಬ್ಬರ ಟಿಪ್ಪಣಿಯನ್ನು ಇನ್ನೊಬ್ಬರು ಓದುತ್ತಿರಲಿಲ್ಲ. ಆದರೆ ಇಂದು ಸುನೀತಾ ಸುಜಯನ ಟಿಪ್ಪಣಿಯನ್ನು ಕೇಳಿದ್ದು ಅದರಲ್ಲೂ ಫೋಟೋಕಾಪಿ ಮಾಡಿ ಓದುತ್ತೇನೆ ಎಂದಿದ್ದು ಸುಜಯನಿಗೆ ಕಸಿವಿಸಿಯನ್ನು ಉಂಟುಮಾಡಿತ್ತು. ಲಿಟರರಿ ಕ್ರಿಟಿಸಿಸಮ್ ಪೇಪರಿನ ದಿನ ಪರೀಕ್ಷಾ ಕೊಠಡಿಯಿಂದ ಹೊರಬಂದ ಸುನೀತಾ ’ಸುಜಯ, ನಿನ್ನ ನೋಟ್ಸ್ ತುಂಬಾ ಚೆನ್ನಾಗಿತ್ತು ಕಣೊ, ತುಂಬಾ ಥ್ಯಾಂಕ್ಸ್. ಬಾ ಒಂದು ಕಾಫಿ ಕುಡಿಸ್ತೇನೆ’ ಅಂತ ಹೇಳಿದಳು. ಸುಜಯ ಹೂಂ ಅಂತಷ್ಟೇ ಹೇಳಿ ಅವಳನ್ನು ಹಿಂಬಾಲಿಸಿದ. ಸುನೀತಾ ಎಂದಿನಂತೆ ಹರಟುತ್ತಲೇ ಇದ್ದಳು. ಸುಜಯ ಯಾಕೋ ಗಂಭೀರನಾಗಿ ಏನನ್ನೋ ಯೋಚಿಸುತ್ತಿರುವಂತೆ ಕಾಣುತ್ತಿದ್ದ. ಅದು ಅವನ ಸ್ವಭಾವವೇ ಆಗಿದ್ದರಿಂದ ಸುನೀತಾ ಹೆಚ್ಚೇನೂ ಕೆದಕಲಿಲ್ಲ.

ಫಲಿತಾಂಶ ಬಂತು. ಸುಜಯ ಕ್ಲಾಸಿಗೆ ಮೊದಲಿಗನಾಗಿ ನಾಲ್ಕು ಬಂಗಾರದ ಪದಕವನ್ನು ಪಡೆದುಕೊಂಡ. ಅದರಲ್ಲಿ ಲಿಟರರಿ ಕ್ರಿಟಿಸಿಸಮ್ ಪೇಪರಿಗೆ ಮೀಸಲಾಗಿದ್ದ ಪದಕವೂ ಒಂದು.

ಸುನೀತಾ ಬಂದು ಸುಜಯನನ್ನು ಅಭಿನಂದಿಸಿದಾಗ ಸುಜಯನ ಕಣ್ಣಿಂದ ನೀರು  ಸುರಿಯಲಾರಂಭಿಸಿತು. ಮುಖ ತಿರುಗಿಸಿಕೊಂಡ. ಸುನೀತಾ ಅವನ ಕೈ ಹಿಡಿದುಕೊಂಡು ’ಯಾಕೋ ಏನಾಯ್ತೋ? ಇಂತಹ ಸಂತೋಷದ ಸಂದರ್ಭದಲ್ಲಿ ಅಳುವುದು ಯಾಕೋ?’ ಅಂತ ಕೇಳಿದಳು. ಸುಜಯ ಬಿಕ್ಕುತ್ತಲೇ  ’ನೀನು ಯುದ್ಧಕ್ಕಿಂತ ಮೊದಲೇ ಯಾಕೆ ಶಸ್ತ್ರವನ್ನು ಕೆಳಗಿಟ್ಟು ಶರಣಾದೆ? ನನ್ನ ಇಂದಿನ ಯಶಸ್ಸಿಗೆ ನೀನು ಈವರೆಗೆ ನನಗೆ ಕೊಟ್ಟ ಸ್ಪರ್ಧೆಯೇ ಕಾರಣ. ಕಳೆದ ವರ್ಷ ನೀನು ನನಗಿಂತ ಹೆಚ್ಚು ಅಂಕ ಗಳಿಸಿದಾಗಲೂ ನನಗೆ ಬೇಜಾಗಿರಲಿಲ್ಲ. ಆದರೆ ಈ ವರ್ಷ ನೀನು ನನ್ನ ನೋಟ್ಸ್ ನ್ನು ಯಾಕೆ ಕೇಳಿದೆ? ಆಗಲೇ  ನೀನು ಸೋತೆ ಅನಿಸಿತ್ತು. ಆದರೆ ನನಗೆ ಅಂತಹ ಗೆಲುವು ಬೇಕಾಗಿರಲಿಲ್ಲ. ನನಗೆ ತುಂಬಾ ನೋವಾಯ್ತು. ಯಾಕೆ ಹಾಗೆ ಮಾಡಿದೆ?’

’ಅಯ್ಯೋ, ಇಷ್ಟೇನಾ? ಅದನ್ನೆಲ್ಲ ಆಮೇಲೆ ಹೇಳುತ್ತೇನೆ. ಬಾ ಈಗ ನೀನು ಬಂಗಾರದ ಪದಕವನ್ನು ಪಡೆದಿದ್ದಕ್ಕೆ ಕಾಫಿಯನ್ನಾದರೂ ಕುಡಿಸು ಮಹಾರಾಯ’ ಎನ್ನುತ್ತ ಎಳೆದುಕೊಂಡು ಹೋದಳು.

ಮಹಿಳೆಯರ ವೇದ ದರ್ಶನ

 ವೇದಗಳು ಅಪೌರುಷೇಯ ಎನ್ನುವ ನಂಬಿಕೆ ಆಸ್ತಿಕವರ್ಗದ್ದು. ಋಷಿಗಳು ವೇದಗಳನ್ನು ರಚಿಸಿಲ್ಲ. ಧ್ಯಾನಾವಸ್ಥೆಯಲ್ಲಿ ಕಂಡುಕೊಂಡಿದ್ದಾರೆ. ಸನಾತನ ಭಾರತದಲ್ಲಿ ಮಹಿಳೆಯರಿಗೆ ವೇದಾಧಿಕಾರ ಇರಲಿಲ್ಲ ಎಂಬ ಮಿಥ್ಯಾವಾದವೂ ಪ್ರಚಲಿತವಾಗಿದೆ. ಆದರೆ ಆಶ್ಚರ್ಯವೆಂಬಂತೆ ಅನೇಕ ವೇದಸೂಕ್ತಗಳ ದರ್ಶನವನ್ನು ಮಹಿಳೆಯರು ಮಾಡಿಕೊಂಡಿದ್ದಾರೆ. ಅವರನ್ನು ಆ ಮಂತ್ರಗಳ ಋಷಿಗಳೆಂದು ಗೌರವಿಸಲಾಗುತ್ತದೆ. 

ಬೃಹದ್ದೇವತಾ ಎಂಬ ಗ್ರಂಥದ ಎರಡನೆಯ ಅಧ್ಯಾಯದಲ್ಲಿ ವೇದಕಾಲದ ಋಷಿಕೆಯರ ಯಾದಿಯನ್ನು ಕೊಡಲಾಗಿದೆ.

ಘೋಷಾ ಗೋಧಾ ವಿಶ್ವವಾರಾ ಅಪಾಲೋಪನಿಷನ್ನಿಷತ್ |

ಬ್ರಹ್ಮಜಾಯಾ ಜುಹುರ್ನಾಮ ಅಗಸ್ತ್ಯಸ್ಯ ಸ್ವಸಾದಿತಿ ||

ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ |

ಲೋಪಾಮುದ್ರಾ ಚ ನದ್ಯಶ್ಚ ಯಮೀ ನಾರೀ ಚ ಶಶ್ವತೀ ||

ಶ್ರೀರ್ಲಾಕ್ಷಾ ಸಾರ್ಪರಾಜ್ಞೀ ವಾಕ್ ಶ್ರದ್ಧಾ ಮೇಧಾ ಚ ದಕ್ಷಿಣಾ |

ರಾತ್ರೀ ಸೂರ್ಯಾ ಚ ಸಾವಿತ್ರೀ ಬ್ರಹ್ಮವಾದಿನ್ಯ ಈರಿತಾ: ||

ಈ ಲೇಖನದಲ್ಲಿ ಅಂತಹ ಕೆಲವು ಋಷಿಕೆಯರ ಹಾಗೂ ಅವರು ಕಂಡುಕೊಂಡ ವೇದಸೂಕ್ತಗಳ ಪರಿಚಯವನ್ನು ಮಾಡಿಕೊಳ್ಳೋಣ.

ಶಚೀ ಪೌಲೋಮಿ:

ಇವಳೊಬ್ಬಳು ಸ್ವಾಭಿಮಾನಿ ಋಷಿಕೆ. ಇವಳಿಂದ ಪ್ರಣೀತವಾದ ಶಚೀದೇವಿಯ ಕುರಿತಾದ ಋಗ್ವೇದ ಸೂಕ್ತದಲ್ಲಿ (೧೦ಮಂಡಲ,೧೫೯ಸೂಕ್ತ) ಅವಳ ಆತ್ಮಗೌರವ, ಜೀವನೋತ್ಸಾಹ, ಆತ್ಮವಿಶ್ವಾಸ, ತನ್ನ ಸಾಮರ್ಥ್ಯದ ಮೇಲೆ ಇರುವ ನಂಬಿಕೆಗಳು ತುಂಬಿ ತುಳುಕುತ್ತಿವೆ. ’ಅಹಂ ಕೇತುರಹಂ ಮೂರ್ಧಾ ಅಹಮುಗ್ರಾ ವಿವಾಚನೀ’ – ನಾನು ಮನೆಯ ಪತಾಕೆ, ನಾನು ಮನೆಯ ತಲೆ(ಮುಖ್ಯಸ್ಥೆ-ಬುದ್ಧಿವಂತೆ) ನಾನು ಅನ್ಯಾಯದ ವಿರುದ್ಧ ಉಗ್ರಳು. ನಾನು ವಿವೇಚನ ಶಕ್ತಿಯುಳ್ಳವಳು. ನನ್ನ ನಿರ್ಧಾರವನ್ನು ನನ್ನ ಪತಿ ಬೆಂಬಲಿಸುತ್ತಾನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. 

ಗಂಡು ಮಕ್ಕಳು ಒಳ್ಳೆಯವರೇ. ಅದರೆ ಹೆಣ್ಣುಮಕ್ಕಳೇನೂ ಕಡಿಮೆಯಲ್ಲ ಎಂದು ಅವಳು ಈ ಸೂಕ್ತದಲ್ಲಿ ಸ್ಪಷ್ಟವಾಗಿ ಹೇಳಿದ್ದಾಳೆ. ’ಮಮ ಪುತ್ರಾ: ಶತ್ರುಹಣೋಽಥೋ ಮಮ ದುಹಿತಾ ವಿರಾಟ್’ –’ನನ್ನ ಗಂಡು ಮಕ್ಕಳು ಶತ್ರು ಸಂಹಾರಕರು. ನನ್ನ ಹೆಣ್ಣು ಮಕ್ಕಳು ವಿರಾಟ್ ಸ್ವರೂಪದವರು. ನಾನು ಶತ್ರುವನ್ನು ಗೆದ್ದವಳು. ಹಾಗಾಗಿ ನನ್ನ ಪತಿಯೂ ನನ್ನನ್ನು ಗೌರವಿಸುತ್ತಾನೆ’ ಎಂದು ಅವಳು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ. ತ್ಯಾಗ, ಶಾಂತಿ, ಸಹನೆಗಳು ಹೆಣ್ಣಿನ ಹುಟ್ಟುಗುಣಗಳೇ ಆಗಿದ್ದರೂ ಅವು ದುರುಪಯೋಗಕ್ಕೆ ಒಳಗಾಗಬಾರದು ಎಂಬುದು ಅವಳ ಆಶಯ. ಹೆಣ್ಣು ಯಾವಾಗಲು ತಗ್ಗಿ ಬಗ್ಗಿಯೇ ನಡೆಯಬೇಕಿಲ್ಲ. ತಲೆ ಎತ್ತಿ ನಡೆಯಬಹುದು ಎಂದು ಅವಳು ಬಲವಾಗಿ ಪ್ರತಿಪಾದಿಸಿದ್ದಾಳೆ.

ಮಹಿಳೆಯರ ಸ್ವಾಭಿಮಾನವನ್ನು ಜಾಗ್ರತಗೊಳಿಸಿದ ಮೊದಲ ನಾರಿ ಎಂಬ ಬಿರುದನ್ನು ಶಚೀ ಪೌಲೋಮಿಗೆ ಕೊಡಬಹುದು. ವಿವಾಹ ಸಮಯದಲ್ಲಿ ಈ ಸೂಕ್ತವನ್ನು ವಧುವು ಪಠಿಸುವ ಪರಿಪಾಠವಿತ್ತು. ಇಂದಿಗೂ ವೈದಿಕ ಸಂಪ್ರದಾಯದ ಮದುವೆಯಲ್ಲಿ ಮದುವೆಗಿಂತ ಮುಂಚೆ ವಧುವಿನಿಂದ ಶಚೀಪೂಜೆಯನ್ನು ಮಾಡಿಸುತ್ತಾರೆ. ಆಗ ಇದೇ ಸೂಕ್ತದ ಪಠನೆಯಾಗುತ್ತದೆ. ಆ ವಧುವು ತನ್ನ ಗಂಡನ ಮನೆಯಲ್ಲಿ ಸ್ವಾಭಿಮಾನಿಯಾಗಿ ಬಾಳಲಿ ಎಂಬ ಉದ್ದೇಶ ಈ ಪೂಜೆಯ ಹಿಂದಿದೆ. ಪೂಜೆಯ ಸಮಯದಲ್ಲಿ ಇದನ್ನು ವಧುವಿಗೆ ತಿಳಿಸಿಕೊಟ್ಟರೆ ನಿಜಕ್ಕೂ ಅವಳ ಆತ್ಮವಿಶ್ವಾಸ ವರ್ಧಿಸೀತು.

ವಿಶ್ವವಾರಾ

ವೈದಿಕ ಸೂಕ್ತಗಳನ್ನು ರಚಿಸಿದ ಋಷಿಕೆಗಳಲ್ಲಿ ವಿಶ್ವವಾರಾ ಒಬ್ಬಳು. ಅತ್ರಿವಂಶಜಳಾದ ಇವಳು ರಚಿಸಿದ ಸೂಕ್ತ (ಋಗ್ವೆದದ ೫ನೇ ಮಂಡಲದ ೨೮ನೇ ಸೂಕ್ತ) ಅಗ್ನಿಯ ಕುರಿತಾದದ್ದು. ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತ ವಿಶ್ವವಾರಾ ತನ್ನ ವೈವಾಹಿಕ ಜೀವನ ಯಶಸ್ವಿಯೂ ಆನಂದಮಯವೂ ಆಗಿರಲೆಂದು ಪ್ರಾರ್ಥಿಸುತ್ತ ಅಗ್ನಿಯ ಉಪಾಸನೆಯನ್ನು ಮಾಡುತ್ತಾಳೆ. ಉಳಿದೆಲ್ಲ ದೇವತೆಗಳ ಪ್ರಾಪ್ತಿ ಅಗ್ನಿಯ ಮೂಲಕವೇ ಆಗುವುದರಿಂದ ಅಗ್ನಿಯ ಉಪಾಸನೆ ಮಹತ್ತ್ವಪೂರ್ಣವಾದದ್ದೆಂದು ಅವಳ ಪ್ರತಿಪಾದನೆ. ಅಂದಿನ ಕಾಲದಲ್ಲಿ ಸ್ತ್ರೀಯರು ಸ್ವತ: ಹೋಮ ಹವನಾದಿಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಈ ಸೂಕ್ತವೊಂದು ಸಾಕ್ಷಿ.

ಅಪಾಲಾ

ವೇದದೃಷ್ಟಾರ ಋಷಿಕೆಗಳಲ್ಲಿ ಅಗ್ರಗಣ್ಯಳು ಅಪಾಲಾ. ಇವಳು ಕೂಡ ಅತ್ರಿ ವಂಶದವಳೇ. ಅತ್ಯಂತ ಕಷ್ಟಮಯ ಜೀವನ ಇವಳದಾಗಿತ್ತು. ಪೂರ್ವಸಂಚಿತಕರ್ಮದ ಫಲವೋ ಎಂಬಂತೆ ವಿವಾಹಾನಂತರ ಚರ್ಮವ್ಯಾಧಿಗೆ ಗುರಿಯಾದಳು. ಕೈಹಿಡಿದ ಪತಿ ಸಂಸಾರಸಾಗರದಲ್ಲಿ ಅರ್ಧದಲ್ಲೇ ಕೈಬಿಟ್ಟಾಗ ತವರುಮನೆಯನ್ನೇ ಆಶ್ರಯಿಸಬೇಕಾಯಿತು. ತಂದೆ ತುಂಬ ವಾತ್ಸಲ್ಯದಿಂದ ಸಲಹಿದರು. ಅವರ ಪ್ರೇರಣೆಯಿಂದ ಆತ್ಮಸ್ಥೈರ್ಯವನ್ನು ತಂದುಕೊಂಡು ಧೈರ್ಯವಾಗಿ ಜೀವನವನ್ನು ಎದುರಿಸಿದಳು. ತನ್ನ ಪ್ರೀತಿಯ ತಂದೆಯ ತಲೆ ಕೂದಲುಗಳನ್ನು ಕಳೆದುಕೊಂಡು ಬೋಳಾಗುವುದನ್ನು ನೋಡಿ ಬೇಸರಗೊಂಡು ವೇದಮಂತ್ರದ ಮೂಲಕ ಇಂದ್ರನನ್ನು ಸ್ತುತಿಸಿದಳು (ಋಗ್ವೇದ ೮ ನೇ ಮಂಡಲ ೯೧ನೇ ಸೂಕ್ತ). ಈ ಸೂಕ್ತದಲ್ಲಿ ಏಳು ಮಂತ್ರಗಳಿವೆ. ಇಂದ್ರನ ಅವಳ ಬೇಡಿಕೆಯನ್ನು ಈಡೇರಿಸಿದ್ದಲ್ಲದೆ, ಅವಳಿಗೆ ಆರೋಗ್ಯವನ್ನೂ ಕರುಣಿಸಿದ.

ಘೋಷಾ

ಆಂಗಿರಸ ಗೋತ್ರದ ದೀರ್ಘತಮ ಋಷಿಯ ಮೊಮ್ಮಗಳೂ ಕಕ್ಷಿವಾನ್ ಮುನಿಯ ಮಗಳೂ ಆದ ಘೋಷಾ ವೇದದೃಷ್ಟಾರ ಋಷಿಕೆಯರಲ್ಲಿ ಒಬ್ಬಳು. ಚಿಕ್ಕಂದಿನಲ್ಲೇ ಕುಷ್ಠರೋಗಕ್ಕೆ ಒಳಗಾಗಿ ಬ್ರಹ್ಮಚಾರಿಣಿಯಾಗಿಯೇ ಉಳಿಯಬೇಕಾಯಿತು. ಆದರೆ ಅದಕ್ಕೆ ಬೇಸರಿಸದೆ ವೇದಶಾಸ್ತ್ರಗಳ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡಳು. ತನ್ನ ತಪಸ್ಸಿದ್ಧಿಯಿಂದ ದೇವವೈದ್ಯರಾದ ಅಶ್ವಿನೀದೇವತೆಗಳ ಮಂತ್ರವನ್ನು ಸಿದ್ಧಿಸಿಕೊಂಡು ಅವರನ್ನು ಸ್ತುತಿಸಿದಳು. ಹತ್ತನೆಯ ಮಂಡಲದ ೩೯ ಮತ್ತು ೪೦ನೆಯ ಸೂಕ್ತಗಳ ಋಷಿಕೆ ಇವಳು. ಮೊದಲ ಸೂಕ್ತದಲ್ಲಿ ಅಶ್ವಿನೀದೇವತೆಗಳನ್ನು ಪರಿಪರಿಯಾಗಿ ಸ್ತುತಿಸಿದ್ದಾಳೆ. ಎರಡನೆಯ ಸೂಕ್ತದಲ್ಲಿ ಅವಳಲ್ಲಿ ಸುಪ್ತವಾಗಿದ್ದ ವೈವಾಹಿಕ ಜೀವನದ ಕಾಮನೆಗಳು ವ್ಯಕ್ತವಾಗಿವೆ. ತನ್ನ ರೋಗವನ್ನು ಹೋಗಲಾಡಿಸಿ ಸುಂದರ ವೈವಾಹಿಕ ಜೀವನವನ್ನು ನಡೆಸಲು ಅನುವುಮಾಡಿಕೊಡುವಂತೆ ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಿದ್ದಾಳೆ. ಅಶ್ವಿನೀದೇವತೆಗಳು ಅವಳಿಗೆ ಮಧುವಿದ್ಯೆಯನ್ನು ಕಲಿಸಿ ಅವಳ ಅನಾರೋಗ್ಯ ದೂರವಾಗುವಂತೆಯೂ ಯೌವನ ಮರಳಿ ಬರುವಂತೆಯೂ ಅನುಗ್ರಹಿಸಿದರು. ನಂತರ ಅವಳು ಯೋಗ್ಯ ವರನನ್ನು ವರಿಸಿ ಸುಖಮಯ ಸಾಂಸಾರಿಕ ಜೀವನವನ್ನು ನಡೆಸಿದಳು.

ಕುಷ್ಠರೋಗಿಗಳನ್ನು ತಾತ್ಸಾರ ಮಾಡುವ ಮನೋಭಾವ ನಮ್ಮ ಸಮಾಜದಲ್ಲಿದೆ. ಅಪಾಲಾ ಹಾಗೂ ಘೋಷಾ ಇವರಿಗೆ ಅಂದು ವೈದಿಕಯುಗದಲ್ಲಿ ದೊರೆತ ಬೆಂಬಲ ಎಲ್ಲರಿಗೂ ದೊರೆಯಬೇಕು. ರೋಗಿಗಳೂ ಕೀಳರಿಮೆಯನ್ನು ಬಿಟ್ಟು ಆಶಾವಾದಿಗಳಾಗಿ ಮುಂದುವರಿಯಬೇಕು ಎಂಬ ಸಂದೇಶವನ್ನು ಘೋಷಾಳ ಜೀವನ ನೀಡುತ್ತದೆ.

ಶಾಶ್ವತಿ ಆಂಗೀರಸಿ: ಆಂಗೀರಸ ಗೋತ್ರದ ಋಷಿಕೆ ಇವಳು. ೮ನೆಯ ಮಂಡಲದ ೧ನೆಯ ಸೂಕ್ತದ ಕೊನೆಯ ಋಕ್ಕಿನ ಋಷಿಕೆ. ಇವಳ ಗಂಡನ ಪುರುಷತ್ವ ಯಾವುದೋ ಕಾರಣದಿಂದ ನಾಶವಾಗಿತ್ತು. ಇಂದ್ರನ ಪ್ರಾರ್ಥನೆಯಿಂದ ಅವನು ಅದನ್ನು ಮರಳಿ ಪಡೆದಾಗ ಶಾಶ್ವತಿ ಆನಂದ ಹೊಂದಿದಳು ಎಂಬ ವಿಚಾರ ಈ ಋಕ್ಕಿನಲ್ಲಿದೆ.

ಅದಿತಿ: ನಾಲ್ಕನೆಯ ಮಂಡಲದ ೧೮ ನೇ ಸೂಕ್ತದ ೭ನೇ ಋಕ್ಕಿನ ದೃಷ್ಟಾರಳು. ಇಲ್ಲಿ ’ನನ್ನ ಮಗನಾದ ಇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಕೊಂದು ನದಿಗಳು ಸ್ವತಂತ್ರವಾಗಿ ಹರಿಯುವಂತೆ ಮಾಡಿದನು’ ಎಂದು ಹೇಳಿದ್ದಾಳೆ. ಪ್ರಾಯ: ಕಶ್ಯಪ ಋಷಿಯ ಹೆಂಡತಿ ಹಾಗೂ ದೇವತೆಗಳ ಅಥವಾ ಆದಿತ್ಯರ ತಾಯಿಯಾದ ಅದಿತಿಯೇ ಇವಳಿರಬೇಕು.

ಅದಿತಿ ದಾಕ್ಷಾಯಣಿ: ಹತ್ತನೆಯ ಮಂಡಲದ ೭೨ ನೆಯ ಸೂಕ್ತದ ಋಷಿಕೆ. ಈ ಸೂಕ್ತ ಸೃಷ್ಟಿಯ ಕ್ರಮವನ್ನು ವರ್ಣಿಸುತ್ತದೆ. ದಕ್ಷ ಪ್ರಜಾಪತಿಯಿಂದ ಅದಿತಿ ಹುಟ್ಟಿದಳೆಂದೂ ಅವಳಿಂದ ದೇವತೆಗಳೆಲ್ಲ ಹುಟ್ಟಿದರು ಎಂದು ವರ್ಣಿಸಲಾಗಿದೆ.

ಗೋಧಾ: ಹತ್ತನೆಯ ಮಂಡಲದ ೧೩೪ನೇ ಸೂಕ್ತದ ೬ ಮತ್ತು ೭ನೆಯ ಋಕ್ಕುಗಳು ಇವಳ ಹೆಸರಿನಲ್ಲಿದೆ. ಇದು ಇಂದ್ರನನ್ನು ಹೊಗಳುವ ಹಾಗೂ ಪ್ರಾರ್ಥಿಸುವ ಸೂಕ್ತ.

ಪ್ರಾಜಾಪತ್ಯಾ ದಕ್ಷಿಣಾ: ಹತ್ತನೆಯ ಮಂಡಲದ ೧೦೭ ನೇ ಸೂಕ್ತದ ಋಷಿಕೆ. ದಕ್ಷಿಣೆಯ ಮಹತ್ತ್ವವನ್ನು ವರ್ಣಿಸಿದ್ದಾಳೆ.

ವಾಗಾಂಭ್ರಣೀ: ಅಂಭ್ರಣ ಋಷಿಯ ಕುವರಿ ವಾಕ್ ಹತ್ತನೆಯ ಮಂಡಲದ ೧೨೫ ನೇ ಸೂಕ್ತದ ಋಷಿಕೆ. ಅತ್ಯುನ್ನತ ಅದ್ವೈತತತ್ತ್ವವನ್ನು ಸಾಧಿಸಿದ್ದ ಈ ಬ್ರಹ್ಮವಾದಿನಿ ಸಚ್ಚಿತ್ಸುಖಾತ್ಮಕವಾದ ಪರಮಾತ್ಮನೊಂದಿಗೆ ತಾದಾತ್ಮ್ಯವನ್ನನುಭವಿಸುತ್ತ ತನ್ನನ್ನೇ ತಾನು ಸ್ತುತಿಸಿಕೊಳ್ಳುತ್ತಾಳೆ. ತಾನೇ ಮರುತ್, ಮಿತ್ರ, ರುದ್ರ ಎಂದೆಲ್ಲ ವರ್ಣಿಸುತ್ತ ಆತ್ಮ ಸರ್ವವನ್ನೂ ವ್ಯಾಪಿಸಿದೆ ಎಂಬ ಅದ್ವೈತ ತತ್ತ್ವವನ್ನು ಸಾರುತ್ತಾಳೆ.

ಶ್ರದ್ಧಾ ಕಾಮಾಯನೀ: ಋಗ್ವೇದದ ಹತ್ತನೆಯ ಮಂಡಲದ ೧೫೧ ನೇ ಸೂಕ್ತದ ದೇವತೆ ಶ್ರದ್ಧಾ. ಐದು ಮಂತ್ರಗಳ ಈ ಸೂಕ್ತದ ಋಷಿಕೆ ಶ್ರದ್ಧಾ ಕಾಮಾಯನೀ. ಜ್ಞಾನ ಸಂಪಾದನೆಯಲ್ಲಿ, ದಾನದಲ್ಲಿ, ಕೆಲಸದಲ್ಲಿ ಹೀಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಶ್ರದ್ಧೆ ಬೇಕು ಎಂಬುದನ್ನು ಭಗವದ್ಗೀತಾದಿಯಾಗಿ ಅನೇಕ ಗ್ರಂಥಗಳು ಹೇಳಿವೆ. ಈ ಸೂಕ್ತದಲ್ಲಿ ಋಷಿಕೆಯು ಅದನ್ನೇ ಹೇಳುತ್ತಾಳೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎಲ್ಲ ಕಾಲದಲ್ಲಿಯೂ ಶ್ರದ್ಧಾದೇವಿಯ ಅನುಗ್ರಹವಾಗಲಿ ಎಂದು ಬೇಡಿಕೊಳ್ಳುತ್ತಾಳೆ.

ಸರ್ಪರಾಜ್ಞೀ: ಋಗ್ವೇದದ ಹತ್ತನೆಯ ಮಂಡಲದ ೧೮೯ ನೇ ಸೂಕ್ತದ ಋಷಿಕೆ ಸರ್ಪರಾಜ್ಞೀ. ಸೂರ್ಯದೇವತಾಪರಕವಾದ ಈ ಸೂಕ್ತದಲ್ಲಿ ಗಾಯತ್ರಿ ಛಂದಸ್ಸಿನ ಮೂರು ಋಕ್ಕುಗಳು ಮಾತ್ರ ಇವೆ. ಈ ಸೂಕ್ತ ಇತರ ವೇದಗಳಲ್ಲಿಯೂ ಕಾಣಸಿಗುತ್ತದೆ.

ಸುದಿತಿ: ಎಂಟನೆಯ ಮಂಡಲದ ೭೧ನೆಯ ಸೂಕ್ತ. ಆಂಗಿರಸ, ಪುರುಮೀಳ ಋಷಿಗಳೊಂದಿಗೆ ಸುದಿತಿಯು ಕೂಡ ಈ ಸೂಕ್ತದ ಋಷಿಪಟ್ಟವನ್ನಲಂಕರಿಸಿದ್ದಾಳೆ. ೧೫ ಮಂತ್ರಗಳ ಈ ಸೂಕ್ತ ಅಗ್ನಿಪರಕವಾಗಿದೆ.

ಸಿಕತಾ ನಿವಾವರಿ: ಒಂಭತ್ತನೆಯ ಮಂಡಲದ ೮೬ನೇ ಸೂಕ್ತದ ೧೧ ರಿಂದ ೨೦ನೆಯ ಮಂತ್ರಗಳ ಋಷಿಕೆ ಇವಳು. ಪವಮಾನ ಸೋಮ ಈ ಸೂಕ್ತದ ದೇವತೆ.

ರೋಮಶಾ: ಬೃಹಸ್ಪತಿಯ ಮಗಳು ಹಾಗೂ ಭಾವಭವ್ಯನ ಪತ್ನಿ. ವಿದುಷಿಯಾಗಿದ್ದಳು. ಇವಳ ಮೈಯೆಲ್ಲ ರೋಮದಿಂದ ಕೂಡಿದ್ದರಿಂದ ಪತಿಗೆ ಇವಳು ಇಷ್ಟವಾಗುತ್ತಿರಲಿಲ್ಲ. ಇವಳು ಮಹಿಳೆಯರ ವಿದ್ಯಾಭ್ಯಾಸದ ಬಗ್ಗೆ, ಸ್ವಾಭಿಮಾನದಿಂದ ಕೂಡಿದ ಜೀವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದಳು. ಋಗ್ವೇದದ ಪ್ರಥಮಮಂಡಲದ ೧೨೬ ನೇ ಸೂಕ್ತದ ಕೊನೆಯ ಮಂತ್ರದ ಋಷಿಕೆ ಇವಳು. ಸಾಮವೇದದ ಅನೇಕ ಸೂಕ್ತಗಳು ಇವಳ ಹೆಸರಿನಲ್ಲಿವೆ. 

ಉರ್ವಶಿ: ಋಗ್ವೇದದಲ್ಲಿರುವ ಅನೇಕ ಸಂವಾದ ಸೂಕ್ತಗಳಲ್ಲಿ ಹತ್ತನೆಯ ಮಂಡಲದ ೯೫ ನೇ ಸೂಕ್ತವೂ ಒಂದು. ಇದರಲ್ಲಿ ಅಪ್ಸರೆ ಉರ್ವಶೀ ಹಾಗೂ ಚಂದ್ರವಂಶದ ರಾಜ ಪುರೂರವನ ಸಂವಾದವಿದೆ. 

ವಸುಕ್ರಪತ್ನಿ: ಇಂದ್ರನ ಮಗನಾದ ವಸುಕ್ರ ಎನ್ನುವವನ ಪತ್ನಿ ಇವಳು. ಹತ್ತನೆಯ ಮಂಡಲದ ಇಪ್ಪತ್ತೆಂಟನೆಯ ಸೂಕ್ತದ ಋಷಿಕೆ. ಹನ್ನೆರಡು ಮಂತ್ರಗಳನ್ನು ಹೊಂದಿರುವ ಈ ಸೂಕ್ತದಲ್ಲಿ ಇಂದ್ರನ ಹಾಗೂ ವಸುಕ್ರನ ಸ್ತುತಿಯಿದೆ.

ಇಂದ್ರಾಣಿ: ಹತ್ತನೆಯ ಮಂಡಲದ ೮೬ ನೇ ಸೂಕ್ತದ ಋಷಿಕೆ. ಇಂದ್ರಪರಕವಾದ ಈ ಸೂಕ್ತದಲ್ಲಿ ಹತ್ತು ಮಂತ್ರಗಳು ಇಂದ್ರಾಣಿಯವು.

ವೈವಸ್ವತೀ ಯಮೀ: ಸೂರ್ಯ ಮತ್ತು ಸರಣ್ಯೂ ದೇವಿಯರ ಮಕ್ಕಳು ಯಮ ಮತ್ತು ಯಮೀ. ಋಗ್ವೇದದ ೧೦ ನೆಯ ಮಂಡಲದ ಹತ್ತನೆಯ ಸೂಕ್ತ ಇವರ ಸಂವಾದವನ್ನು ಹೊಂದಿದೆ. ಹತ್ತನೆಯ ಮಂಡಲದ ೧೫೪ ನೇ ಸೂಕ್ತದ ಋಷಿಕೆಯೂ ಈ ಯಮೀ.

ರಾತ್ರಿ: ಹತ್ತನೆಯ ಮಂಡಲದ ೧೨೭ ನೇ ಸೂಕ್ತ ೮ ಮಂತ್ರಗಳನ್ನು ಹೊಂದಿದ್ದು ರಾತ್ರಿಸೂಕ್ತವೆಂದು ಪ್ರಸಿದ್ಧವಾಗಿದೆ. ಇದರ ಋಷಿಕೆಯ ಹೆಸರೂ ರಾತ್ರಿ. ಅವಳು ಭರದ್ವಾಜ ಮುನಿಯ ಮಗಳಾಗಿದ್ದಳು.

ಇಂದ್ರಮಾತಾ: ಹತ್ತನೆಯ ಮಂಡಲದ ೧೫೩ ನೇ ಸೂಕ್ತದ ಋಷಿಕೆ. ಕೇವಲ ಐದು ಮಂತ್ರಗಳಿರುವ ಸೂಕ್ತ ಇಂದ್ರಪರಕವಾಗಿದೆ.

ಶಿಖಂಡಿನೀ: ಕಶ್ಯಪಮುನಿಯ ಕುವರಿಯರಾದ ಶಿಖಂಡಿನಿಯರು ಒಂಭತ್ತನೆಯ ಮಂಡಲದ ೧೦೪ನೇ ಸೂಕ್ತದ ದ್ರಷ್ಟಾರರು. ಈ ಸೂಕ್ತ ಪವಮಾನ ಸೋಮನ ಪರಕವಾಗಿದೆ.

ಸೂರ್ಯಾ ಸಾವಿತ್ರೀ : ಸೂರ್ಯನ ಮಗಳು ಹಾಗೂ ಪ್ರಜಾಪತಿಯಿಂದ ಪಾಲಿತಳಾದವಳು. ಋಗ್ವೇದದ ಹತ್ತನೆಯ ಮಂಡಲದ ೮೫ ನೆಯ ಸೂಕ್ತದಲ್ಲಿ ಇವಳ ವಿವಾಹದ ವರ್ಣನೆಯಿದೆ. ವಿವಾಹ ಸಮಯದಲ್ಲಿ ಸೋಮನು ಇವಳಿಗೆ ಮೂರೂ ವೇದಗಳನ್ನು ಕೊಟ್ಟನು. ವಿವಾಹದಲ್ಲಿ ಬಳಸುವ ಪ್ರಸಿದ್ಧ ಮಂತ್ರಗಳು ಈ ಸೂಕ್ತದಲ್ಲಿವೆ. ಪಾಣಿಗ್ರಹಣ ಕಾಲದಲ್ಲಿ ವರನು ಹೇಳುವ ’ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ’ ಎಂಬ ಮಂತ್ರ ಇದೇ ಸೂಕ್ತದ್ದು. ವಧುವು ಸುಮಂಗಲಿಯಾಗಿದ್ದಾಳೆ. ಇವಳಿಗೆ ಸೌಭಾಗ್ಯವನ್ನು ನೀಡಿ ಎಂದು ಪ್ರಾರ್ಥಿಸುವ ’ಸುಮಂಗಲೀರಿಯಂ ವಧೂ: ಸಮೇತ ಪಶ್ಯತ’ ಎಂಬ ಮಂತ್ರವೂ ಇದೆ. ಕೊನೆಯ ಮಂತ್ರ ’ಸಮ್ರಾಜ್ಞೀ ಶ್ವಶುರೇ ಭವ, ಸಮ್ರಾಜ್ಞೀ ಶ್ವಶ್ರ್ವಾಂ ಭವ’ ಎಂಬ ಮಂತ್ರದ್ತಲ್ಲಂತೂ ಗಂಡನ ಮನೆಯಲ್ಲಿ ವಧುವು ಮಾವ, ಅತ್ತೆ ಮೈದುನರು ಹಾಗೂ ನಾದಿನಿಯರ ಮನವನ್ನು ಗೆದ್ದು ಸಾಮ್ರಾಜ್ಞಿಯಾಗಿ ಮೆರೆಯಲಿ ಎಂಬ ಉನ್ನತ ಆಶಯ ವ್ಯಕ್ತವಾಗಿದೆ.

ಉಪಸಂಹಾರ:

ಸನಾತನ ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಪ್ರಾಶಸ್ತ್ಯವಿತ್ತು. ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು ಹಾಗೂ ಅವರು ಸ್ವತಂತ್ರವಾಗಿ ಸ್ವಾಭಿಮಾನದ ಜೀವನವನ್ನು ನಡೆಸುತ್ತಿದ್ದರು ಎಂಬುದಕ್ಕೆ ಮಹಿಳೆಯರು ಋಷಿಕೆಯಾಗಿರುವ ವೇದಮಂತ್ರಗಳು ಹಾಗೂ ಅವುಗಳಲ್ಲಿ ವ್ಯಕ್ತವಾಗಿರುವ ವಿಚಾರಗಳೇ ಸಾಕ್ಷಿ. ಇಂದಿಗೂ ನಾವು ಮಹಿಳೆಯರಿಗೆ ಅದೇ ಗೌರವವನ್ನು ಕೊಟ್ಟು ಸನಾತನ ಭಾರತವನ್ನು ಬಲಪಡಿಸೋಣ.


ನಮ್ಮನೆ ಮೇಷ್ಟ್ರು

 ರಾತ್ರಿ ಮಲಗುವುದು ಎಷ್ಟೊತ್ತಾದರೂ ನನ್ನವಳು ಬೆಳಿಗ್ಗೆ 5 ಗಂಟೆಗೇ ಏಳುವುದು. ಸವಿನಿದ್ದೆಯಲ್ಲಿರುವ ನನಗೆ ಎಚ್ಚರವಾಗಬಾರದೆಂದು ನನ್ನ ಪಾದವನ್ನು ಸ್ಪರ್ಶಿಸದೆ ಸ್ವಲ್ಪ ದೂರದಿಂದಲೇ ನಮಸ್ಕಾರ ಮಾಡಿ ಹೋಗುತ್ತಾಳಂತೆ. ನಾನು ಅದನ್ನು ನೋಡಿಲ್ಲವಾದರೂ ನಂಬಿದ್ದೇನೆ. ಅವಳು ಹಲ್ಲುಜ್ಜುವ ಸದ್ದಾಗಲಿ, ಮುಖ ತೊಳೆಯಲು ತಿರುಗಿಸಿದ ನಲ್ಲಿಯ ನೀರಿನ ಸದ್ದಾಗಲೀ ನನ್ನ ನಿದ್ರಾಭಂಗವನ್ನು ಮಾಡಿಲ್ಲ. ಆದರೂ ಅವೆಲ್ಲವನ್ನೂ ಅವಳು ಮಾಡುತ್ತಾಳೆ ಎಂದು ಬಲವಾಗಿ ನಂಬಿದ್ದೇನೆ. 

ಹಿಂದಿನ ರಾತ್ರಿ ನನ್ನಿಂದ ತೊಳೆಸಿದ ಪಾತ್ರೆಗಳನ್ನು ಜೋಡಿಸುವಾಗ ಅಪ್ಪಿ ತಪ್ಪಿ ಕೈಜಾರಿದ ಪಾತ್ರೆಯ ಸದ್ದು ನನ್ನ ನಿದ್ರಾಭಂಗವನ್ನು ಮಾಡಿದ್ದಿದೆ. ಆಗೆಲ್ಲ ಅವಳಿಂದ ತಪ್ಪುಗಾಣಿಕೆಯನ್ನು ಪಡೆದಿದ್ದೇನೆ.

6 ಹೊಡೆಯಿತು ಅಂತಾದರೆ ಎಲ್ಲರನ್ನೂ ಎಬ್ಬಿಸುವ ಪ್ರಯತ್ನ ಶುರು ಅದು ಅವಳ ಬೆಳಗಿನ ತಿಂಡಿಯ ತಯಾರಿಯ ಜೊತೆ ಜೊತೆಗೇ ಅರ್ಧಗಂಟೆಯವರೆಗೆ ನಡೆಯುತ್ತಾ ಇರುತ್ತದೆ. ಮೊದಲು ನನ್ನನ್ನು ಎಬ್ಬಿಸುವ ಕರ್ಮ. ಮೊದಲ ಕರೆಗೆ 'ಇನ್ನೈದು ನಿಮಿಷ ಕಣೆ' ಎನ್ನುವುದು, ಎರಡನೇ ಕರೆಗೆ 'ಗೀಸರ್ ಸ್ವಿಚ್ ಹಾಕಿದೆಯಾ' ಎಂದು ಕೇಳುವುದು, ಮೂರನೇ ಕರೆಗೆ ಮನಸ್ಸಿಲ್ಲದ ಮನಸ್ಸಿನಿಂದ ಏಳುವುದು ನನ್ನ ದಿನಚರಿಯ ಆರಂಭ. ಕೆಲವೊಮ್ಮೆ ಅಂತೂ ಅವಳು ಬಿಸಿ ಸೌಟನ್ನು ಹಿಡಿದು ಮಲಗುವ ಕೋಣೆಯನ್ನು ಪ್ರವೇಶಿಸಿದಾಗಲೇ ಏಳುವುದು. ಹೆಂಡತಿಗೆ ಹೆದರದಿದ್ದರೂ ಸೌಟಿಗಾದರೂ ಗೌರವ ಕೊಡಬೇಕಲ್ಲ!

ಪ್ರೊಫೆಸರ್ ಆಗಿರುವ ನಾನು ಮರೆಗುಳಿ ಆಗಿರುವುದು ಸಹಜ ತಾನೇ? ಹಾಗಾಗಿ ಪ್ರತಿದಿನ ಟೊವೆಲ್ ಮರೆತೇ ಬಚ್ಚಲಿಗೆ ಹೋಗುವುದು ನಾನು. ಟೊವೆಲ್ ಕೊಡಲು ಒಲೆಯ ಮೇಲಿಟ್ಟ ಒಗ್ಗರಣೆಯನ್ನು ಬಿಟ್ಟು ಬಂದ ಅವಳ ಮುಖವನ್ನು ನೋಡಿದಾಗ ಅವಳಿಂದ ಬೆನ್ನುಜ್ಜಿಸಿಕೊಳ್ಳುವ ಆಸೆಯನ್ನು ಹೇಳುವ ಧೈರ್ಯವಾದರೂ ಹೇಗೆ ಬಂದೀತು?

ನಮ್ಮ ದೇವರು ಕುಳಿತಿರುವುದು ಅಡುಗೆ ಮನೆಯಲ್ಲೇ. ಹಾಗಾಗಿ ಮಾಡಿದ ಅಡುಗೆಯೆಲ್ಲಾ ಅವನ ಪ್ರಸಾದವೇ ಎಂದು ತಿಳಿದು ಪ್ರತ್ಯೇಕ ನೈವೇದ್ಯ ಮಾಡುವುದೇ ಇಲ್ಲ. ವಿಷಯ ಅದಲ್ಲ. ನಾನು ಪೂಜೆಗೆ ಕುಳಿತರೂ ಮಂತ್ರ ಹೇಳುವವಳು ಅವಳು. 'ಎದ್ರೆನೊ? ಟೈಮಾಯಿತು, ಎದ್ದೇಳಿ, ಹಲ್ಲುಜ್ಜಿ ಸ್ನಾನ ಮಾಡಿ. ಸ್ಕೂಲ್ ಬಸ್ ತಪ್ಪಿದರೆ ನನಗೇ ಕಷ್ಟ' ಎಂದು ಇಬ್ಬರು ಮಕ್ಕಳನ್ನು ಎಬ್ಬಿಸಲು ಐದಾರು ಸಲವಾದರೂ ಪ್ರತಿದಿನ  ಈ ಮಂತ್ರವನ್ನು ಪಠಿಸುತ್ತಾಳೆ. ಅಂತೂ ಅವರನ್ನು ಎಬ್ಬಿಸಿ ಸ್ನಾನ ಮಾಡಿಸಿ, ಸಮವಸ್ತ್ರ ತೊಡಿಸಿ, ಟಿಫಿನ್ ಬಾಕ್ಸ್, ನೀರಿನ ಬಾಟಲಿ ತುಂಬಿ ಅವರ ಬ್ಯಾಗಿಗೆ ಹಾಕಿ ಬಸ್ ಹತ್ತಿಸಿದರೆ ಒಂದು ಹಂತ ಮುಗೀತು.

ಮಕ್ಕಳಿಗೆ ತಮ್ಮಂತೆ ಅಪ್ಪಾಜಿಯೂ ಸ್ಕೂಲಿಗೆ ಹೋಗುತ್ತಾರೆ ಎಂದು ಖುಷಿ. ಅಪ್ಪಾಜಿ ಮೇಷ್ಟ್ರು ಕಣ್ರೋ ಅಂದ್ರೆ ಅವರಿಗೆ ನಂಬಿಕೆಯೇ ಬರಲ್ಲ. 'ನಾನು ಸ್ಕೂಲಿನಲ್ಲಿ ಮಾತ್ರ ಮೇಷ್ಟ್ರು ಕಣ್ರೋ, ಮನೆಯಲ್ಲಿ ನಮಗೆಲ್ಲರಿಗೂ ನಿಮ್ಮಮ್ಮನೇ ಮೇಷ್ಟ್ರು' ಎನ್ನುವ ನನ್ನ ಕಡೆಗೆ ವೇಗವಾಗಿ ಬರುವ ಅವಳ ದೃಷ್ಟಿಯ ಬಾಣದಿಂದ ಪಾರಾಗುವ ಉಪಾಯ ಹುಡುಕುತ್ತೇನೆ. 

ನನಗೆ ತಿಂಡಿ, ಚಹಾ ಕೊಟ್ಟು, ಟಿಫಿನ್ ಬಾಕ್ಸ್, ನೀರಿನ ಬಾಟಲಿ ಹಾಕಿ, ಶರ್ಟ್ ಪ್ಯಾಂಟ್ ಗಳನ್ನು ಸರಿಯಾಗಿ ಹಾಕಿಕೊಂಡಿದ್ದೇನೆಯೇ ಎಂದು ಚೆಕ್ ಮಾಡಿ, ಎಲ್ಲೋ ಇಟ್ಟುಕೊಂಡಿರುವ ನನ್ನ ಮೊಬೈಲ್, ಬೈಕ್ ಕೀಗಳನ್ನು ಹುಡುಕಿ ತಂದು ನನ್ನ ಕೈಯಲ್ಲಿ ಹಿಡಿಸಿ, ಕರವಸ್ತ್ರವನ್ನು ಜೇಬಿಗೆ ತುರುಕಿ 'ಲೇಟಾಯಿತು, ಸಾವಕಾಶವಾಗಿ ಹೋಗಿ' ಎನ್ನುವ ಪರಸ್ಪರ ವಿರುದ್ಧವಾದ ಮಾತುಗಳನ್ನು ಆಡಿ ನನ್ನನ್ನು ಕಳಿಸಿಕೊಡುತ್ತಾಳೆ. ಮಕ್ಕಳನ್ನು ಶಾಲೆಗೆ ಕಳಿಸುವಾಗ ಅವರ ಹಣೆಗೆ ಸಿಗುವ ಭಾಗ್ಯ ನನ್ನ ಕೆನ್ನೆಗೆ ಸಿಗಬಹುದೇನೋ ಎಂದು ಕಾಯುತ್ತೇನೆ. ಸಿಹಿಯೋ ಕಹಿಯೋ ಎಡ ಕೆನ್ನೆಗೆ ದೊರೆತುದುದು ಬಲ ಕೆನ್ನೆಗೂ ಸಿಗಲಿ ಎಂದು ಬಯಸುತ್ತೇನೆ. ನಾನು ಹೊಸ್ತಿಲು ದಾಟುವಾಗ ಅವಳ ಉಸ್ಸಪ್ಪ ಎಂದು ಸೋಫಾದ ಮೇಲೆ ಕುಳಿತಿದ್ದು ಕಂಡರೂ ಕಾಣದವನಂತೆ ನಾನು ಬೈಕ್ ಚಾಲು ಮಾಡುತ್ತೇನೆ.

ಕೊನೆಯ ಗುಟುಕು: ಇದನ್ನು ಓದಿ ನನ್ನವಳು ಒಬ್ಬಳು ಆದರ್ಶ ಪತ್ನಿ, ನಾನೊಬ್ಬ ಮಾಮೂಲಿ ಗಂಡ ಅಂತೇನೂ ನೀವು ಅಂದುಕೋ ಬೇಕಾಗಿಲ್ಲ. ದಿನವಿಡೀ ಮಾಡಿದ ಶ್ರಮದ ಪರಿಹಾರಕ್ಕೆ ರಾತ್ರಿ ಬಹಳ ಹೊತ್ತು ನನ್ನಿಂದ ಕಾಲನ್ನು ಒತ್ತಿಸಿಕೊಳ್ಳುತ್ತಾಳೆ!!

Monday, October 21, 2024

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರಾಮಚರಿತೆಯ ಚಿತ್ರಗಳನ್ನು ನೋಡುವ ಸಂದರ್ಭದಲ್ಲಿ ಮತ್ತೆ ತಪೋವನಕ್ಕೆ ಹೋಗುವ ಬಯಕೆ ಸೀತೆಯಲ್ಲಿ ಮೂಡುತ್ತದೆ. ಅದನ್ನು ಕೇಳಲೆ ಎಂದು ರಾಮನಲ್ಲಿ ಕೇಳಿದಾಗ, ’ಕೇಳುವುದಲ್ಲ, ಆಜ್ಞಾಪಿಸು’ ಎಂದು ತಾನು ಅವಳ ಸೇವಕನೆಂಬಂತೆ ವರ್ತಿಸುತ್ತಾನೆ. 

ಸೀತೆ ರಾಮನ ತೋಳನ್ನೇ ದಿಂಬಾಗಿಸಿ ಗಾಢನಿದ್ರೆಗೆ ಜಾರಿದಾಗಲೇ ಗೂಢಚರ ಬಂದು ಸೀತೆಯ ವಿಷಯದಲ್ಲಿ ಪೌರಜನರಾಡಿಕೊಳ್ಳುತ್ತಿದ್ದ ಮಾತನ್ನು ರಾಮನಿಗೆ  ಹೇಳುತ್ತಾನೆ. ರಾಮನಿಗೆ ವಜ್ರಾಘಾತವಾಗುತ್ತದೆ. ತೋಳಿನಲ್ಲಿ ಪ್ರೀತಿಯ ಮಡದಿ, ಕಿವಿಯಲ್ಲಿ ಇಂತಹ ಕಠೋರ ಮಾತು. ಸೀತೆಗೆ ನಿದ್ರಾಭಂಗವಾಗದಂತೆ ವಿಲಪಿಸುತ್ತಾನೆ. ಕೊನೆಗೂ ಕಠಿನನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾದ್ದರಿಂದ ಅವಳ ತಲೆಯನ್ನು ಮೆಲ್ಲಗೆ ತೋಳಿನಿಂದ ಜಾರಿಸಿ ಅವಳ ಪಾದಗಳ ಬಳಿಬಂದು ಅವಳ ಚರಣಗಳನ್ನು  ತನ್ನ ತಲೆಗೊತ್ತಿಕೊಂಡು  ’ದೇವಿ, ಅಯಂ ಪಶ್ಚಿಮಸ್ತೇ ರಾಮಶಿರಸಾ ಪಾದಪಂಕಜಸ್ಪರ್ಶಃ (ದೇವಿ, ರಾಮನ ಶಿರಸ್ಸಿನಿಂದ ಇದೇ ನಿನ್ನ ಪಾದಪಂಕಜದ ಕೊನೆಯ ಸ್ಪರ್ಶ). ಇಲ್ಲಿ ಕೊನೆಯ ಸ್ಪರ್ಶ ಎನ್ನುವುದು ಗಮನಾರ್ಹ. ಸೀತೆಯ ಚರಣಗಳಿಗೆ ತಲೆಬಾಗುವುದು ರಾಮನ ನಿತ್ಯಕ್ರಿಯೆಯಾಗಿತ್ತು ಎಂಬುದು ಇಲ್ಲಿನ ಧ್ವನಿಯಾಗಿರಬಹುದು ಅಲ್ಲವೆ?

ಶಂಬೂಕವಧೆಯ ವ್ಯಾಜದಿಂದ ವನಪ್ರವೇಶ ಮಾಡಿದ ರಾಮನಿಗೆ ಮತ್ತೆ ಸೀತೆಯ ನೆನಪಾಗುತ್ತದೆ. ಪರಿಪರಿಯಾಗಿ ವಿಲಪಿಸುತ್ತಾನೆ. ಭಾಗೀರಥಿಯ ವರದಿಂದ ಸೀತೆ ಯಾರಿಗೂ ಕಾಣದಂತೆ ಅದೃಶ್ಯರೂಪವನ್ನು ತಳೆದಿದ್ದಳು. ಅವಳು ರಾಮನನ್ನು ಸಂತೈಸಲು ಅವನನ್ನು ಸ್ಪರ್ಶಿಸಿದಾಗ ರಾಮ ತನಗೆ ಸೀತೆಯ ಅನುಗ್ರಹವಾಯಿತು ಎಂದು ಭಾವಿಸುತ್ತಾನೆ.

ಪ್ರಸಾದ ಇವ ಮೂರ್ತಸ್ತೇ ಸ್ಪರ್ಶಃ ಸ್ನೇಹಾರ್ದ್ರಶೀತಲಃ|

ಅದ್ಯಾಪ್ಯಾನಂದಯತಿ ಮಾಂ ತ್ವಂ ಪುನಃ ಕ್ವಾಸಿ ನಂದಿನೀ || ಉ.ರಾ.ಚ., ತೃತೀಯೋಂಕಃ, ೧೪

ಪುರುಷನಾದವನು ಕಾಂತೆಯನ್ನು ಸೇವೆಯಿಂದ ಒಲಿಸಿಕೊಳ್ಳಬೇಕೇ ಹೊರತು ಪೌರುಷದಿಂದ ಪೀಡಿಸಬಾರದು ಎನ್ನುವ ಸಂದೇಶವನ್ನು ರಾಮನ ಮೂಲಕ ಭವಭೂತಿ ನೀಡಿದ್ದಾನೆ. ವನದೇವತೆ ವಾಸಂತಿಯೊಡನೆ ವನದ ಆಗುಹೋಗುಗಳನ್ನು ವೀಕ್ಷಿಸುತ್ತ, ಅವೆಲ್ಲವನ್ನೂ ತನ್ನ ಹಾಗೂ ಸೀತೆಯ ಜೀವನದೊಂದಿಗೆ ಹೋಲಿಸಿಕೊಳ್ಳುತ್ತ ಇರುವ ಸಂದರ್ಭದಲ್ಲಿ ಒಂದು ಆನೆಜೋಡಿಯನ್ನು ನೋಡುತ್ತಾನೆ. ಅದರಲ್ಲಿ ಗಂಡಾನೆ ಹೆಣ್ಣಾನೆಯನ್ನು ಒಲಿಸಿಕೊಳ್ಳುತ್ತಿರುವ ವರ್ಣನೆ ತುಂಬ ಸುಂದರವಾಗಿದೆ.

ಲೀಲೋತ್ಖಾತಮೃಣಾಲಕಾಂಡಕವಚ್ಛೇದೇಷು ಸಂಪಾದಿತಾಃ

ಪುಷ್ಯತ್ಪುಷ್ಕರವಾಸಿತಸ್ಯ ಪಯಸೋ ಗಂಡೂಷಸಂಕ್ರಾಂತಯಃ|

ಸೇಕಃ ಶೀಕರಿಣಾ ಕರೇಣ ವಿಹಿತಃ ಕಾಮಂ ವಿರಾಮೋ ಪುನ-

ರ್ಯತ್ಸ್ನೇಹಾದನರಾಲನಾಲನಲಿನೀಪತ್ರಾತಪತ್ರಂ ಧೃತಮ್ || ಉ.ರಾ.ಚ., ತೃತೀಯೋಂಕಃ, ೧೬

(ಆಟದಲ್ಲಿ ಕಿತ್ತ ತಾವರೆದೇಟುಗಳ ತುತ್ತುಗಳನ್ನು ಕೊಡುತ್ತ, ನಡು ನಡುವೆ ಅರಳಿದ ತಾವರೆಗಳಿಂದ (ಅಥವಾ ಪುಷ್ಟವಾದ ಸೊಂಡಿಲಿಂದ) ಸುವಾಸಿತವಾದ ನೀರಿನ ಗುಟುಕುಗಳನ್ನು ಆ ಹೆಣ್ಣಾನೆಗೆ ನೀಡಿದೆ. ಆ ಮೇಲೆ ತನ್ನ ಸೊಂಡಿಲಿಂದ ಸಿಡಿಯುವ ನೀರಧಾರೆಗಳಿಂದ ಅದಕ್ಕೆ ಬೇಕಾದಷ್ಟು ಜಲಸೇಚನೆಯನ್ನು ಮಾಡಿದೆ; ಸ್ನಾನ ಮಾಡಿಸಿಯಾದ ಮೇಲೆ ಪ್ರೀತಿಯಿಂದ ಒಂದು ನೇರವಾದ ನಾಳವಿರುವ ತಾವರೆಯೆಲೆಯನ್ನು ಛತ್ರಿಯಂತೆ ಅದರ ಮೇಲೆ ಹಿಡಿದಿದೆ.)  ಅನುವಾದ: ಡಾ. ಕೆ. ಕೃಷ್ಣಮೂರ್ತಿ, ಡಾ. ಬಿ.ಆರ್. ಮೋಡಕ

ರಾಮ ಇದನ್ನು ವಾಸಂತಿಗೆ ತೋರಿಸುತ್ತ “ಪಶ್ಯ ಪಶ್ಯ, ಕಾಂತಾನುವೃತ್ತಿಚಾತುರ್ಯಮಪಿ ಶಿಕ್ಷಿತಂ ವತ್ಸೇನ” (ಈ ಆನೆಮರಿ ತನ್ನ ಕಾಂತೆಯನ್ನು ಒಲಿಸಿಕೊಳ್ಳುವ ಕೌಶಲ್ಯವನ್ನೂ ಕಲಿತುಕೊಂಡಿದೆ ) ಎನ್ನುತ್ತಾನೆ.

🌸🌸🌸🌸🌸

ಆತ್ಮೀಯರೇ, ರಾಮಾಯಣದೊಂದಿಗೆ ಆರಂಭಿಸಿದ ಲೇಖನಮಾಲೆಗೆ ರಾಮನೊಂದಿಗೆ ವಿರಾಮವನ್ನು ಹೇಳುತ್ತಿದ್ದೇನೆ. ಇದು ಅಲ್ಪ ವಿರಾಮವೇ ಹೊರತು ಪೂರ್ಣವಿರಾಮವಲ್ಲ. ಇಂತಹ ಸನ್ನಿವೇಶಗಳು ಇನ್ನಷ್ಟು ಗ್ರಂಥಗಳಲ್ಲಿ ಮತ್ತಷ್ಟು ಸಿಕ್ಕರೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಓದಿನಲ್ಲಿಯೂ ನಿಮಗೆ ಎಲ್ಲಾದರೂ ಈ ಲೇಖನಮಾಲೆಗೆ ಪೂರಕವಾದ ಮಾಹಿತಿಗಳು ದೊರೆತರೆ ದಯವಿಟ್ಟು ಹಂಚಿಕೊಳ್ಳಿ. 

ನನ್ನ ಮಟ್ಟಿಗೆ ಇದೊಂದು ವಿಶಿಷ್ಟ ಲೇಖನಮಾಲೆ. ಅನೇಕ ಗ್ರಂಥಗಳನ್ನು ಓದುವ ಅವಕಾಶವನ್ನು ಒದಗಿಸಿಕೊಟ್ಟ ಬರಹವಿದು. ಇಲ್ಲಿನ ವಿಷಯಗಳ ಬಗ್ಗೆ ಕೆಲವರು ನಿರ್ಬಿಢೆಯಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರಿ. ನಿಮಗೆಲ್ಲ ನಾನು ಕೃತಜ್ಞ. ಎಲ್ಲರೂ ಸ್ವಾಭಿಪ್ರಾಯವನ್ನು ಹೇಳಬೇಕೆಂದು ನನ್ನ ಸವಿನಯ ಬಿನ್ನಹ. ನಿಮಗೆ ಇಷ್ಟವಾಗದಿದ್ದರೂ ದಯವಿಟ್ಟು ಹೇಳಿ. 

ಮತ್ತೊಂದು ಲೇಖನಮಾಲೆಯೊಂದಿಗೆ ಮತ್ತೆ ಬರುತ್ತೇನೆ. ಆದರೆ ಯಾವಾಗ ಎಂದು ಹೇಳಲಾಗದು ’ಕಾಲೋ ಹ್ಯಯಂ ನಿರವಧಿಃ ....(ಉ.ರಾ.ಚ.). ಅಲ್ಲಿಯವರೆಗೆ ರಾಮ್... ರಾಮ್...

ಮಹಾಬಲ ಭಟ್ಟ, ಗೋವಾ

Sunday, October 20, 2024

ನಾರೀವಿಧೇಯರು-ಶಕಾರ-ಚಾರುದತ್ತ(ಮೃಚ್ಛಕಟಿಕಮ್)

ಸಾಮಾನ್ಯ ಪ್ರಜೆಯೊಬ್ಬನನ್ನು ನಾಯಕನನ್ನಾಗಿ ಮಾಡಿ ಜನಸಾಮಾನ್ಯರ ಜೀವನವನ್ನು ಚಿತ್ರಿಸಿದ ಶೂದ್ರಕನ ಮೃಚ್ಛಕಟಿಕ ನಾಟಕದಲ್ಲಿಯೂ ನಾರೀವಿಧೇಯತೆಯ ಸನ್ನಿವೇಶಗಳನ್ನು ಕಾಣಬಹುದು. 

ಈ ನಾಟಕದ ಖಳನಾಯಕ ಶಕಾರ ವಸಂತಸೇನೆಯನ್ನು ವಶಮಾಡಿಕೊಳ್ಳಲು ನಾನಾವಿಧವಾಗಿ ಪ್ರಯತ್ನಿಸುತ್ತಾನೆ. ಪ್ರವಹಣ ವಿಪರ್ಯಯದಿಂದ ಚಾರುದತ್ತನಲ್ಲಿಗೆ ಹೋಗಬೇಕಾದ ವಸಂತಸೇನೆ ಶಕಾರನ ಅಡ್ಡೆಯನ್ನು ಪ್ರವೇಶಿಸುತ್ತಾಳೆ. ಹಿಂದೊಮ್ಮೆ ಶಕಾರನ ವಿಷಯದಲ್ಲಿ ರುಷ್ಟಳಾಗಿದ್ದ ಅವಳ ಕಾಲಿಗೆ ಬಿದ್ದು  ಶಕಾರ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ’ಸಾಂಪ್ರತಂ ಪಾದಯೋಃ ಪತಿತ್ವಾ ಪ್ರಸಾದಯಾಮಿ’ ಎಂದು ವಿಟನಿಗೆ ಹೇಳುತ್ತಾ ಹೋಗಿ ಅವಳ ಕಾಲಿಗೆ ಬೀಳುತ್ತಾನೆ.

ಏಷ ಪತಾಮಿ ಚರಣಯೋರ್ವಿಶಾಲನೇತ್ರೇ

ಹಸ್ತಾಂಜಲಿಂ ದಶನಖೇ ತವ ಶುದ್ಧದಂತಿ |

ಯತ್ತವ ಮಯಾಪಕೃತಂ ಮದನಾತುರೇಣ 

ತತ್ಕ್ಷಾಮಿತಾಸಿ ವರಗಾತ್ರಿ ತವಾಸ್ಮಿ ದಾಸಃ||  ಮೃಚ್ಛಕಟಿಕಮ್, ಅಷ್ಟಮೋಂಕಃ, ೧೮

(ಓ ವಿಶಾಲವಾದ ದೃಷ್ಟಿಯುಳ್ಳವಳೇ ನಾನು ನಿನ್ನ ಕಾಲಿಗೆ ಬೀಳುತ್ತೇನೆ. ಮುತ್ತಿನಂಥ ಹಲ್ಲಿನವಳೇ, ನಿನ್ನ ಪಾದಗಳ ಹತ್ತು ಉಗುರುಗಳ ಮೇಲೆ ಹಸ್ತಾಂಜಲಿಯನ್ನಿಡುತ್ತೇನೆ. ಹೇ ಸುಂದರಶರೀರದವಳೇ, ಕಾಮಾತುರನಾಗಿ ನಿನ್ನ ವಿಷಯದಲ್ಲಿ ನಾನು ಮಾಡಿದ ಅಪರಾಧವನ್ನು ಕ್ಷಮಿಸು. ನಾನು ನಿನ್ನ ದಾಸನಾಗಿದ್ದೇನೆ.)

ವಸಂತಸೇನೆಯು ’ತೊಲಗು ಇಲ್ಲಿಂದ’ ಎನ್ನುತ್ತ ಕಾಲಿಗೆ ಬಿದ್ದ ಅವನನ್ನು ಒದೆಯುತ್ತಾಳೆ. ಆಗ ಕೋಪಗೊಂಡ ಶಕಾರ ಹೇಳುತ್ತಾನೆ - 

ಯಚ್ಚುಂಬಿತಮಂಬಿಕಾಮಾತೃಕಾಭಿರ್ಗತಂ

ನ ದೇವಾನಾಮಪಿ ಯತ್ಪ್ರಣಾಮಮ್ |

ತತ್ಪಾತಿತಂ ಪಾದತಲೇನ ಮುಂಡಂ

ವನೇ ಶೃಗಾಲೇನ ಯಥಾ ಮೃತಾಂಗಮ್ || ಮೃಚ್ಛಕಟಿಕಮ್, ಅಷ್ಟಮೋಂಕಃ, ೩೧

(ನನ್ನ ತಾಯಿಯಿಂದ ಚುಂಬಿಸಲ್ಪಟ್ಟ, ಯಾವ ದೇವರಿಗೂ ಮಣಿಯದ ಈ ನನ್ನ ತಲೆಯನ್ನು ನರಿಯು ಶವವನ್ನು ಒದ್ದಂತೆ ನಿನ್ನ ಪಾದಗಳಿಂದ ಒದ್ದೆಯಲ್ಲ!)

ವಸಂತಸೇನೆ ಅವನನ್ನು ಬಹುವಿಧವಾಗಿ ತಿರಸ್ಕರಿಸಿದರೂ ಮತ್ತೆ ಮತ್ತೆ ಅವಳನ್ನು ಬೇಡಿಕೊಳ್ಳುತ್ತಾನೆ ಶಕಾರ.

ಸುವರ್ಣಕಂ ದದಾಮಿ ಪ್ರಿಯಮ್ ವದಾಮಿ ಪತಾಮಿ ಶೀರ್ಷೇಣ ಸವೇಷ್ಟನೇನ|

ತಥಾಪಿ ಮಾಂ ನೇಚ್ಛತಿ ಶುದ್ಧದಂತಿ ಕಿಂ ಸೇವಕಂ ಕಷ್ಟಮಯಾ ಮನುಷ್ಯಾಃ|| 

(ಚಿನ್ನವನ್ನು ಕೊಡುತ್ತೇನೆ. ಮುಂಡಾಸಿನ ತಲೆಯೊಂದಿಗೆ (ಪಾದಗಳಿಗೆ) ಬೀಳುತ್ತೇನೆ. ಆದರೂ ನನ್ನನ್ನು ನಿನ್ನ ಸೇವಕನನ್ನಾಗಿ ಸ್ವೀಕರಿಸುತ್ತಿಲ್ಲ ಯಾಕೆ? ಮನುಷ್ಯರ ಜೀವನ ಕಷ್ಟಮಯ)

ಮೃಚ್ಛಕಟಿಕದ ನಾಯಕ ಚಾರುದತ್ತ ಉದಾತ್ತ ವ್ಯಕ್ತಿತ್ವವನ್ನು ಹೊಂದಿದವನು. ಶಕಾರನಿಂದ ತಪ್ಪಿಸಿಕೊಂಡು ಚಾರುದತ್ತನ ಮನೆಯನ್ನು ವಸಂತಸೇನೆ ಪ್ರವೇಶಿಸಿದಾಗ ಅಲ್ಲಿ ಕತ್ತಲೆಯಿತ್ತು. ಚಾರುದತ್ತನು ಅವಳನ್ನು ತನ್ನ ಸೇವಿಕೆ ರದನಿಕೆಯೆಂದು ತಿಳಿದು ಶೀತವಾಯುವಿನಿಂದ ಪೀಡಿತನಾದ ಮಗನನ್ನು ಒಳಗೆ ಕರೆದುಕೊಂಡು ಹೋಗಿ ಅವನನ್ನು ಹೊದಿಕೆಯಿಂದ ರಕ್ಷಿಸುವಂತೆ ಆದೇಶಿಸುತ್ತಾನೆ. ಅನಂತರ ಸತ್ಯವನ್ನು ತಿಳಿದು ಬೇಜಾರುಮಾಡಿಕೊಂಡು ಅವಳಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ’ಭವತಿ ವಸಂತಸೇನೇ, ಅನೇನಾವಿಜ್ಞಾನಾದಪರಿಜ್ಞಾತಪರಿಜನೋಪಚಾರೇಣಾಪರಾದ್ಧೋಽಸ್ಮಿ| ಶಿರಸಾ ಭವತೀಮನುನಯಾಮಿ |’  (ಆದರಣೀಯ ವಸಂತಸೇನೆ, ಅಜ್ಞಾನದಿಂದ ಸರಿಯಾಗಿ ಗುರುತಿಸದೆ ಸೇವಕಿಯಂತೆ ನಡೆಸಿಕೊಂಡು ಅಪರಾಧಿಯಾಗಿದ್ದೇನೆ. ತಲೆಬಾಗಿ ಕ್ಷಮೆ ಯಾಚಿಸುತ್ತೇನೆ.) 

ವಸಂತಸೇನೆಯು ವೇಶ್ಯೆಯಾಗಿದ್ದರೂ ಅವಳನ್ನು ಚಾರುದತ್ತ ಎಂದಿಗೂ ಆ ದೃಷ್ಟಿಯಿಂದ ನೋಡಲಿಲ್ಲ. ’ದೇವತೋಪಸ್ಥಾನಯೋಗ್ಯಾ ಯುವತಿರಿಯಂ’ ಎಂದು ಅವಳನ್ನು ಗೌರವದಿಂದ ನೋಡುತ್ತಾನೆ. ಅವಳು ನ್ಯಾಸವಾಗಿಟ್ಟಿದ್ದ ಆಭರಣಗಳ ಅಪಹರಣವಾದಾಗ ಅಷ್ಟೇ ವಿನಯಪೂರ್ವಕವಾಗಿ ಗೆಳೆಯ ಮೈತ್ರೇಯನ ಮೂಲಕವಾಗಿ ಸಂದೇಶವನ್ನು ಕಳಿಸುತ್ತಾನೆ.  ಮೈತ್ರೇಯನು ’ತತ್ರ ಭವಾನ್ ಚಾರುದತ್ತಃ ಶೀರ್ಷೇಽಂಜಲಿಂ ಕೃತ್ವಾ ಭವತೀಂ ವಿಜ್ಞಾಪಯತಿ’(ಮಾನ್ಯ ಚಾರುದತ್ತನು ತಲೆಬಾಗಿ ಅಂಜಲಿಬದ್ಧನಾಗಿ ನಿನ್ನಲ್ಲಿ ವಿಜ್ಞಾಪಿಸಿಕೊಳ್ಳುತ್ತಿದ್ದಾನೆ.)  ಎನ್ನುತ್ತ ಅವನ ಸಂದೇಶವನ್ನು ಅವಳಿಗೆ ತಿಳಿಸುತ್ತಾನೆ.

ಹೀಗೆ ಮೃಚ್ಛಕಟಿಕ ನಾಟಕದಲ್ಲಿ ಶೂದ್ರಕ ಕವಿ ಖಳ ಶಕಾರನ ಕಪಟ ವಿಧೇಯತೆಯನ್ನೂ, ನಾಯಕ ಚಾರುದತ್ತನ ನೈಜ ವಿಧೇಯತೆಯನ್ನೂ ಸುಂದರವಾಗಿ ಚಿತ್ರಿಸಿದ್ದಾನೆ.

ಮಹಾಬಲ ಭಟ್ಟ, ಗೋವಾ

ನಾರೀವಿಧೇಯರು-ಉದಯನ(ರತ್ನಾವಲೀ)

ಹರ್ಷಮಹಾರಾಜನ ಇನ್ನೊಂದು ಪ್ರಸಿದ್ಧ ನಾಟಿಕಾ ’ರತ್ನಾವಲೀ’. ಇಲ್ಲಿಯೂ ಉದಯನನೇ ನಾಯಕ. ನಾಯಿಕೆ ರತ್ನಾವಳಿ ಅಥವಾ ಸಾಗರಿಕೆ. ಸಿಂಹಳದೇಶದಿಂದ ಬರುವಾಗ ಸಮುದ್ರದ ನೀರಿಗೆ ಬಿದ್ದು ಅಲ್ಲಿಂದ ರಕ್ಷಿತಳಾಗಿ ಕೌಶಾಂಬಿಯನ್ನು ಸೇರಿದ್ದರಿಂದ ಅವಳಿಗೆ ಸಾಗರಿಕೆ ಎಂಬ ಅಭಿಧಾನ. ಈ ನಾಟಕದಲ್ಲಿಯೂ ನಾಯಕ ತನ್ನ ಪತ್ನಿ ವಾಸವದತ್ತೆಗೆ ಹೆದರಿ ಕಾಲಿಗೆ ಬೀಳುವ ಸನ್ನಿವೇಶ ಇದೆ. ಉದಯನನಿಗೆ ವಾಸವದತ್ತೆಯ ಮೇಲಿರುವ ಪ್ರೀತಿ ಪ್ರಶ್ನಾತೀತ. ಹಾಗಾಗಿಯೇ ವಾಸವದತ್ತೆ ಕೋಪಗೊಂಡಾಗಲೂ ಅವಳನ್ನು ಧಿಕ್ಕರಿಸದೆ ಕಾಲಿಗೆ ಬಿದ್ದು ಅನುನಯಿಸುತ್ತಾನೆ. ಉತ್ಕಟ ಪ್ರೀತಿಯಿಂದಾಗಿಯೇ ಸ್ವಲ್ಪ ಭಯವೂ ಇದೆ. ವಾಸವದತ್ತೆಗೆ ಉದಯನನನ್ನು ತನ್ನವನನ್ನಾಗಿಯೇ ಇರಿಸಿಕೊಳ್ಳಬೇಕೆಂಬ ಹಂಬಲ. ಹಾಗಾಗಿ ತನ್ನ ಪರಿಜನರಲ್ಲಿ ಸುಂದರವಾಗಿರುವ ಕನ್ಯೆಯರನ್ನು ಅವನಿಂದ ಬಚ್ಚಿಡಲು ಪ್ರಯತ್ನಿಸುತ್ತಾಳೆ. ನಂತರ ಆ ಕನ್ಯಕೆಯರು ಅಭಿಜಾತರೆಂದು ತಿಳಿದಾಗ ಅವರನ್ನು ಉದಯನನಿಗೆ ಒಪ್ಪಿಸುತ್ತಾಳೆ. ಇರಲಿ.

ಒಂದನೆಯ ಅಂಕದಲ್ಲಿ ಮದನಿಕೆ ಎಂಬ ವಾಸವದತ್ತೆಯ ಸಖಿ ರಾಜ್ಞಿಯ ನಿರೋಪವನ್ನು ರಾಜನಿಗೆ ತಿಳಿಸುತ್ತ ’ದೇವೀ ವಿಜ್ಞಾಪಯತಿ' ಎಂದು ಹೇಳುವಲ್ಲಿ 'ದೇವ್ಯಾಜ್ಞಾಪಯತಿ' ಎಂದು ಹೇಳಿ ನಂತರ ಸರಿಪಡಿಸಿಕೊಳ್ಳುತ್ತಾಳೆ. ರಾಜನಿಗೆ ಅವಳ ಮಾತನ್ನು ಕೇಳಿ ಅವ್ಯಕ್ತ ಆನಂದವಾಗುತ್ತದೆ. ’ಮದನಿಕೇ! ನನ್ವಾಜ್ಞಾಪಯತೀತ್ಯೇವ ರಮಣೀಯಮ್’ ಎಂದು ಹೇಳಿ ವಾಸವದತ್ತೆಯ ಬಗ್ಗೆ ತನಗಿರುವ ಆದರವನ್ನು ಉದಯನ ವ್ಯಕ್ತಪಡಿಸುತ್ತಾನೆ. ಮದನಪೂಜೆಯ ಸಂದರ್ಭದಲ್ಲಿ ರಾಜನನ್ನು ನೋಡಿ ಮನ್ಮಥನ ಬಾಣಗಳಿಗೆ ತುತ್ತಾದ ಸಾಗರಿಕೆ ಅಲ್ಲಿಯೇ ರಾಜನ ಚಿತ್ರವೊಂದನ್ನು ಬರೆಯುತ್ತಾಳೆ. ಅವಳ ಸಖಿ ಸುಸಂಗತೆ ಅದರ ಪಕ್ಕದಲ್ಲೇ ಸಾಗರಿಕೆಯ ಚಿತ್ರವನ್ನೂ ಬರೆಯುತ್ತಾಳೆ. ಅಲ್ಲಿಗೆ ಬಂದ ರಾಜ ಅದನ್ನು ನೋಡಿ ಸಾಗರಿಕೆಯಲ್ಲಿ ಅನುರಕ್ತನಾಗುತ್ತಾನೆ. ಅವರ ಪ್ರಣಯಚೇಷ್ಟೆಯನ್ನು ರಾಣಿಗೆ ತಿಳಿಸುವುದಾಗಿ ಸುಸಂಗತೆಯು ಹೇಳಿದಾಗ ರಾಜನು ಅವಳಿಗೆ ಆಭರಣಾದಿಗಳನ್ನು ಕೊಟ್ಟು ರಾಣಿಗೆ ತಿಳಿಸದಂತೆ ಅನುನಯಿಸುತ್ತಾನೆ. 

ಮುಂದೆ ವಿದೂಷಕನು ಸಾಗರಿಕೆಯನ್ನು ಅಪರವಾಸವದತ್ತೆ ಎಂದು ಕರೆದಾಗ ರಾಜನು ವಾಸವದತ್ತೆಯ ನಾಮಸ್ಮರಣದಿಂದಲೇ ಬೆಚ್ಚಿಬಿದ್ದು ತಾನು ಹಿಡಿದಿದ್ದ ಸಾಗರಿಕೆಯ ಕೈಯನ್ನು ಬಿಟ್ಟು ಬಿಡುತ್ತಾನೆ. ಆಷ್ಟೊಂದು ಭಯ ಅವನಿಗೆ ವಾಸವದತ್ತೆಯ ವಿಷಯದಲ್ಲಿ. ಅಲ್ಲಿಗೆ ಅವರ ಪ್ರಣಯಭಂಗ ಉಂಟಾಗುತ್ತದೆ. ಆದರೆ  ಕಾಕತಾಳೀಯವಾಗಿ ವಾಸವದತ್ತೆ ನಿಜವಾಗಿಯೂ ಅಲ್ಲಿಗೆ ಆಗಮಿಸುತ್ತಾಳೆ. ಅಲ್ಲಿ ಸಾಗರಿಕೆ ಉದಯನರ ಚಿತ್ರಗಳನ್ನು ನೋಡಿ ಕುಪಿತಳಾಗುತ್ತಾಳೆ. ಅವಳ ಕೋಪದ ಪ್ರಶ್ನೆಯನ್ನು ಕೇಳಿ ನಡುಗಿದ ರಾಜನಿಗೆ ಏನು ಹೇಳಬೇಕೆಂದೇ ತೋಚುವುದಿಲ್ಲ. ಆಗ ವಿದೂಷಕನೇ ಸುಳ್ಳು ಹೇಳುತ್ತಾನೆ. ರಾಜ್ಞಿಯು ಸಂಶಯಪೀಡಿತಳಾದರೂ ತಲೆ ನೋವಿನ ನೆವದಿಂದ ಅಲ್ಲಿಂದ ಹೋಗಲುದ್ಯುಕ್ತಳಾಗುತ್ತಾಳೆ. ಅವಳು ಕೋಪಗೊಂಡಿದ್ದಾಳೆ ಎಂದು ಅರಿತ ವತ್ಸರಾಜ ಅವಳ ಸೆರಗನ್ನು ಹಿಡಿದು ಅನುನಯಿಸಲು ಮುಂದಾಗುತ್ತಾನೆ.

ಪ್ರಸೀದೇತಿ ಬ್ರೂಯಾಮಿದಮಸತಿ ಕೋಪೇ ನ ಘಟತೇ 

ಕರಿಷ್ಯಾಮ್ಯೇವಂ ನೋ ಪುನರಿತಿ ಭವೇದಭ್ಯುಪಗಮಃ |

ನ ಮೇ ದೋಷೋಽಸ್ತೀತಿ ತ್ವಮಿದಮಪಿ ನ ಜ್ಞಾಸ್ಯಸಿ ಮೃಷಾ

ಕಿಮೇತಸ್ಮಿನ್ ವಕ್ತುಂ ಕ್ಷಮಮಿತಿ ನ ವೇದ್ಮಿ ಪ್ರಿಯತಮೇ ||


ಓವೋ ದೇವಿಯೆ ಶಾಂತಳಾಗೆನೆ ಕಂಡುಬಾರದು ನೀನು ಕೋಪಗೊಂಡುದು

ಮತ್ತೆ ನಾನಿಂತೆಸೆಗೆನೆಂದೆನೆ ನಾನು ಮಾಡಿದ ತಪ್ಪಿನೊಪ್ಪಿಗೆಯಪ್ಪುದು |

ನನ್ನ ಕಡೆಯಿಂದಾವ ತಪ್ಪೂ ಇಲ್ಲವೆಂದೆನೆ  ನೀನು ಸುಳ್ಳೆಂದೆನುವೆ

ಆದ ಕಾರಣ ಏನು ಪೇಳ್ವುದು ಯುಕ್ತವೆನುವುದನರಿಯದಿಂದಾನಿರ್ಪೆನು ||


ಎಷ್ಟೇ ಹೇಳಿದರೂ ಕೇಳಿದೆ ದೇವಿ ಹೊರಟೇ ಬಿಟ್ಟಳು. ಅವಳನ್ನು ಅನುನಯಿಸುವುದಕ್ಕಾಗಿ ಉದಯನನೂ ಅಂತಃಪುರದತ್ತ ಸಾಗುತ್ತಾನೆ.


ವಿದೂಷಕನ ಉಪಾಯದಿಂದ ಸಾಗರಿಕೆಯು ವಾಸವದತ್ತೆಯ ವೇಷವನ್ನೂ ಅವಳ ಸಖಿ ಸುಸಂಗತೆಯು ವಾಸವದತ್ತೆಯ ಸಖಿ ಕಾಂಚನಮಾಲಾಳ ವೇಷವನ್ನೂ ಧರಿಸಿ ಉದಯನನನ್ನು ಭೇಟಿಯಾಗಲು ಬರುವ ಯೋಜನೆ ತಯಾರಾಗುತ್ತದೆ. ಆದರೆ ಇದರ ಸುಳಿವು ಹೇಗೋ ವಾಸವದತ್ತೆಗೆ ಸಿಕ್ಕಿಬಿಡುತ್ತದೆ. ಅವಳೇ ಮೊದಲು ಸಂಕೇತಸ್ಥಾನಕ್ಕೆ ಹೋಗುತ್ತಾಳೆ. ರಾಜನು ಸಾಗರಿಕೆಯೆಂದೇ ತಿಳಿದು ಪ್ರೇಮನಿವೇದನೆಯನ್ನು ಮಾಡಿಕೊಂಡಾಗ ರೋಷಗೊಂಡು ತಪಿಸುತ್ತಾಳೆ. ಆಗ ರಾಜನು ಅನನ್ಯಗತಿಕನಾಗಿ ಅವಳ ಪಾದಗಳ ಮೇಲೆ ತಲೆಯಿಡುತ್ತಾ ಬೇಡಿಕೊಳ್ಳುತ್ತಾನೆ.


ಆತಾಮ್ರತಾಮಪನಯಾಮಿ ವಿಲಕ್ಷ ಏಷ

ಲಾಕ್ಷಾಕೃತಾಂ ಚರಣಯೋಸ್ತವ ದೇವಿ ಮೂರ್ಧ್ನಾ |

ಕೋಪೋಪರಾಗಜನಿತಾಂ ತು ಮುಖೇಂದುಬಿಂಬೇ

ಹರ್ತುಂ ಕ್ಷಮೋ ಯದಿ ಪರಂ ಕರುಣಾಮಯಿ ಸ್ಯಾತ್ || ರತ್ನಾವಲೀ, ತೃತೀಯೋಂಕಃ, ೧೪


ಅಲತಿಗೆ ರಸದಿಂದಾದೀ ನಿನ್ನಡಿಯೊಂದರುಣತೆಯನು ನಾನಿಂದು

ಬೇಗನೆ ನನ್ನೀ ಮುಡಿಯಿಂದುಬ್ಬುತೆ ತೊಡೆವೆನು ಲಜ್ಜೆಯೊಳುರೆಸಂದು |

ಆದರೆ ಕೋಪಗ್ರಹಣದೊಳಾದೀವದನೇಂದುವಿನೊಂದರುಣತೆಯ

ತೊಡೆಯಲು ಶಕ್ತನು ನಾನಹೆನೆನ್ನೊಳು ತೋರುವುದಾದರೆ ನೀಂ-ದಯೆಯ|| ಕನ್ನಡ ಹರ್ಷಮಹಾಸಂಪುಟ, ಪು.೯೨


ಆದರೆ ಖತಿಗೊಂಡ ರಾಣಿ ಸಮಾಧಾನವನ್ನು ಪಡೆಯದೆ ಹೊರಡಲು ಅಣಿಯಾಗುತ್ತಾಳೆ. ಕಾಲಿಗೆ ಬಿದ್ದಿರುವ ಪತಿಯನ್ನು ಹಾಗೆ ತಿರಸ್ಕರಿಸುವುದು ಯೋಗ್ಯವಲ್ಲವೆಂದು ಕಾಂಚನಮಾಲೆಯು ಹೇಳಿದರೂ ಕೇಳದೆ ಹೊರಟುಹೋಗುತ್ತಾಳೆ. ಉದಯನ ಮಾತ್ರ “ದೇವೀಪ್ರಸಾದನಂ ಮುಕ್ತ್ವಾ ನಾನ್ಯದತ್ರೋಪಾಯಂ ಪಶ್ಯಾಮಿ' ಎನ್ನುತ್ತ ಅವಳನ್ನೇ ಅನುಸರಿಸುತ್ತಾನೆ.

ಹೀಗೆ ಹೋಗುವಾಗ ಮಧ್ಯೆ ವಾಸವದತ್ತೆಯ ವೇಷದಲ್ಲಿ ನೇಣುಹಾಕಿಕೊಳ್ಳಲು ಪ್ರಯತ್ನಿಸುತ್ತಿರುವ ಸಾಗರಿಕೆ ಗೋಚರವಾಗುತ್ತಾಳೆ. ಅವಳನ್ನು ವಾಸವದತ್ತೆಯೆಂದೇ ಭ್ರಮಿಸಿದರೂ ನಂತರ ಸಾಗರಿಕೆಯೆಂದು ತಿಳಿದು ಹರ್ಷವನ್ನು ಹೊಂದುತ್ತಾನೆ ರಾಜ. ಅತ್ತ ಕಾಲಿಗೆ ಬಿದ್ದ ಆರ್ಯಪುತ್ರನನ್ನು ಅಲಕ್ಷಿಸಿ ನಿಷ್ಠುರಳಾದ ಬಗ್ಗೆ ಬೇಸರಿಸಿಕೊಂಡ ವಾಸವದತ್ತೆ ಅವನನ್ನು ಅನುನಯನಗೊಳಿಸಲು ಮತ್ತದೇ ಸ್ಥಾನಕ್ಕೆ ಬರುತ್ತಾಳೆ. ಅಷ್ಟರಲ್ಲಿ ಸಾಗರಿಕೆ ಹಾಗೂ ಉದಯನರ ಸಂವಾದ ಆರಂಭವಾಗಿರುತ್ತದೆ. ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾದ ದೇವಿಯ ವಿಷಯದಲ್ಲಿ ಯಾಕೆ ಅಪರಾಧವನ್ನು ಎಸಗುತ್ತೀ ಎಂದು ಕೇಳಿದಾಗ ರಾಜ ಹೇಳುತ್ತಾನೆ – 


ಶ್ವಾಸೋತ್ಕಂಪಿನಿ ಕಂಪಿತಂ ಕುಚಯುಗೇ ಮೌನೇ ಪ್ರಿಯಂ ಭಾಷಿತಂ

ವಕ್ತ್ರೇಽಸ್ಯಾಃ ಕುಟಿಲೀಕೃತಭ್ರುಣಿ ತಥಾ ಯಾತಂ ಮಯಾ ಪಾದಯೋಃ |

ಇತ್ಥಂ ನಃ ಸಹಜಾಭಿಜಾತಜನಿತಾ ಸೇವೈವ ದೇವ್ಯಾಃ ಪರಮ್

ಪ್ರೇಮಾಬಂಧವಿವರ್ಧಿತಾಧಿಕರಸಾ ಪ್ರೀತಿಸ್ತು ಯಾ ಸಾ ತ್ವಯಿ || ರತ್ನಾವಲೀ, ತೃತೀಯೋಂಕಃ, ೧೮


ಯತ್ನದಿಂದುಸಿರೆಳೆದು ಬಿಡುವಂದು ಅದುರುತಿರು-

ವವಳ ಆ ಕುಚಯುಗವು ನಡುಗಿದೆನು ನಾನು 

ಮೌನದಿಂದವಳಿರ್ದವೇಳೆಯೊಳು ಅವಳಿಗತಿ-

ಹಿತವಾಗಿ ಸವಿನುಡಿಯನಾಡಿದೆನು ನಾನು

ಕೋಪದಿಂದಿರದವಳು ಹುಬ್ಬು ಗಂಟಿಕ್ಕಿರಲು

ಅವಳ ಆ ಪಾದಗಳಿಗೆರಗಿದೆನು ನಾನು

ಅವಳ ಆ ಸದ್ವಂಶ ಸಂಜನಿತ ಅಭಿಮಾನ-

ಕೊಪ್ಪುವಷ್ಟನೆ ನಾನು ಸೇವೆಯೆಸಗಿದೆನು

ಪ್ರೇಮಾನುಬಂಧದಿಂದಧಿಕವನೆ ವೃದ್ಧಿಸಿದ

ರಸಸಾರಸರ್ವವನು ನಿನಗೊಪ್ಪಿಸಿದೆನು.


ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಾಸವದತ್ತೆಗೆ ನಾಯಿಯ ಬಾಲದಂತೆ ಮತ್ತೆ ಡೊಂಕಾದ ರಾಜನ ಮೇಲೆ ಅಪಾರ ಸಿಟ್ಟುಬಂತು. ಅವಳನ್ನು ನೋಡಿ ಬೆಚ್ಚಿದ ವತ್ಸರಾಜ ಮತ್ತೆ ಅವಳ ಕಾಲಿಗೆರಗಿ ತಪ್ಪಾಯಿತೆಂದು ಅಲವೊತ್ತುಕೊಂಡ. ವೇಷಸಾದೃಶ್ಯದಿಂದಾಗಿ ಈ ರೀತಿಯ ಸಂಭ್ರಾಂತಿಯುಂಟಾಯಿತು ಎಂದು ಅನುನಯಿಸಲು ಯತ್ನಿಸಿದ. ಆದರೆ ಎಲ್ಲವೂ ಪ್ರತ್ಯಕ್ಷಗೋಚರವೇ ಆಗಿದ್ದರಿಂದ ಮಹಾರಾಜ್ಞಿ ಅವನನ್ನು ತಿರಸ್ಕರಿಸಿ ವಿದೂಷಕನನ್ನೂ ಸಾಗರಿಕೆಯನ್ನೂ ಬಂಧಿಸಿ ಮುನ್ನಡೆಯುತ್ತಾಳೆ.


ಮಹಾಬಲ ಭಟ್ಟ, ಗೋವಾ

Friday, October 18, 2024

ನಾರೀವಿಧೇಯರು - ಉದಯನ (ಪ್ರಿಯದರ್ಶಿಕಾ)

ಹರ್ಷಚಕ್ರವರ್ತಿಯ ಪ್ರಿಯದರ್ಶಿಕಾ ನಾಟಕದಲ್ಲಿ ನಾಯಕ ಉದಯನ ತನ್ನ ಪತ್ನಿ ವಾಸವದತ್ತೆಯ ಕಾಲಿಗೆರಗುವ ಸಂದರ್ಭ ಚಿತ್ರಿತವಾಗಿದೆ. ವಾಸವದತ್ತೆಯಲ್ಲಿ ನ್ಯಸ್ತವಾಗಿಟ್ಟಿರುವ ದೃಢವರ್ಮಸುತೆ ಪ್ರಿಯದರ್ಶಿಕೆಯು ಪ್ರಾಯಪ್ರಬುದ್ಧೆಯಾದಾಗ ರಾಜನ ಕಣ್ಣಿಗೆ ಬಿದ್ದು ಪ್ರೇಮಪ್ರಕರಣದ ಆರಂಭವಾಗುತ್ತದೆ. ವಾಸವದತ್ತೆ ಹಾಗೂ ಉದಯನರ ಪ್ರಣಯಪ್ರಸಂಗದ ನಾಟಕವೊಂದು ಕೌಮುದೀಮಹೋತ್ಸವದ ಸಂದರ್ಭದಲ್ಲಿ ಅರಮನೆಯಲ್ಲಿ ಏರ್ಪಾಡಾಗಿರುತ್ತದೆ. ಅದರಲ್ಲಿ ಪ್ರಿಯದರ್ಶಿಕೆ ವಾಸವದತ್ತೆಯ ಪಾತ್ರವನ್ನು ವಹಿಸಿದರೆ, ಅವಳ ಗೆಳತಿ ಮನೋರಮೆ ವತ್ಸರಾಜನ ಪಾತ್ರವನ್ನು ವಹಿಸುವುದೆಂದು ನಿಶ್ಚಯವಾಗಿತ್ತು. ಆದರೆ ರಾಜನ ನರ್ಮ ಸಚಿವ ವಿದೂಷಕ ವಸಂತಕ ಹಾಗೂ ಮನೋರಮೆಯರು ಉದಯನನಿಗೆ ಪ್ರಿಯದರ್ಶಿಕೆಯನ್ನು ಹತ್ತಿರದಿಂದ ನೋಡುವ, ಸ್ಪರ್ಶಿಸುವ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಸ್ವಯಂ ಉದಯನನೇ ಉದಯನನಾಗಿ ರಂಗಪ್ರವೇಶಿಸುವ ಯೋಜನೆಯನ್ನು ಹಾಕಿದರು. ನಾಟಕ ಮುಗಿದಮೇಲೆ ಹೇಗೋ ಈ ವಿಷಯವನ್ನು ತಿಳಿದ ವಾಸವದತ್ತೆ ಕೆಂಡಾಮಂಡಲಳಾದಳು. ಅವಳ ಕೋಪವನ್ನು ತಣಿಸುವುದಕ್ಕಾಗಿ ಎಲ್ಲರೆದುರೇ ಅವಳ ಕಾಲಿಗೆ ಬೀಳುತ್ತಾನೆ ಕೌಶಾಂಬೀಶ ಉದಯನ.


ಸ್ನಿಗ್ಧಂ ಯದ್ಯಪಿ ವೀಕ್ಷಿತಂ ನಯನಯೋಸ್ತಾಮ್ರಾ ತಥಾಪಿ ದ್ಯುತಿ-

ರ್ಮಾಧುರ್ಯೇಽಪಿ ಸತಿ ಸ್ಖಲತ್ಯನುಪದಂ ತೇ ಗದ್ಗದಾ ವಾಗಿಯಮ್|

ನಿಶ್ವಾಸಾ ನಿಯತಾ ಅಪಿ ಸ್ತನಭರೋತ್ಕಂಪೇನ ಸಂಲಕ್ಷಿತಾಃ

ಕೋಪಸ್ತೇ ಪ್ರಕಟಪ್ರಯತ್ನವಿಘೃತೋಽಪ್ಯೇಷ ಸ್ಫುಟಂ ಲಕ್ಷ್ಯತೇ || 

(ಪ್ರಿಯದರ್ಶಿಕಾ ತೃತೀಯೋಂಕಃ, ೧೩)


(ಸ್ನಿಗ್ಧವಾದುದು ನಿನ್ನ ನೋಟವು ಈಗ ಕಡು ಕೆಂಪೇರಿದೆ. 

ಮಧುರವಾಗಿಹ ನಿನ್ನ ಗದ್ಗದ ಪದಪದಕೆ ತೊದಲುತ್ತಿದೆ

ನಿಯತವಿದ್ದರು ನಿನ್ನ ಉಸಿರಿದು ನಡುಕವೆದೆಯೊಳು ತೋರಿದೆ

ಯತ್ನದಿಂದವಿತಿದ್ದರೂ ಈ ಕೋಪ ಸಲೆ ಹೊರತೋರಿದೆ.)

(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)


ಎಂದು ಮಹಾರಾಣಿಯ ಕೋಪವನ್ನು ವರ್ಣಿಸುತ್ತ ’ಪ್ರಸೀದ ಪ್ರಿಯೇ ಪ್ರಸೀದ’ ಎಂದು ಬೇಡುತ್ತ ಅವಳ ಚರಣಗಳಿಗೆ ಮಣಿಯುತ್ತಾನೆ. ಅದಕ್ಕೆ ವಾಸವದತ್ತೆಯು ಆರಣ್ಯಿಕೆಯ ರೂಪದಲ್ಲಿರುವ ಪ್ರಿಯದರ್ಶಿಕೆಯನ್ನು ಎಳೆಯುತ್ತ ’ನೀನು ಕೋಪಗೊಂಡಿರುವೆಯೆಂದು ತಿಳಿದು ರಾಜನು ಅನುನಯಿಸುತ್ತಿರುವನು, ಹೋಗು’ ಎನ್ನುತ್ತಾ ತನ್ನ ಕೋಪವನ್ನು ಮರೆಮಾಚಲು ಯತ್ನಿಸುತ್ತಾಳೆ. ಆಗ ರಾಜ ಮತ್ತೆ ಅವಳನ್ನು ಅನುನಯಿಸುತ್ತಾನೆ.


ಬರಿದೆ ಹುಬ್ಬನ್ನೇಕೆ ಮುರಿಯುವೆ ಹಣೆಯ ಈ ಶಶಿಗೇಕೆ ಕುಂದನ್ನೆಸಗುವೆ?

ನಡುಗುದುಟಿಗಳ ನೆಲರಿಗದುರುವ ಬಂಧುಜೀವದ ನನಗೆ ಏಕೆಣೆಯೆನಿಸುವೆ?

ಎದೆಯ ಕುಚಯುಗಭಾರದಿಂದೀ ನಿನ್ನ ಬಡುನಡು ನೋಡು ಕಡು ಬಸವಳಿದಿದೆ

ನಿನ್ನ ಚಿತ್ತವ ಸೆಳೆಯಲೆಂದಾನಿಂತು ಆಡಿದೆ ಕೋಪವನು ಬಿಡೆ ಮಾನಿನಿ. 

(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)


ಎಂದು ಹೇಳುತ್ತಾ ಮತ್ತೆ ಅವಳ ಕಾಲಿಗೆ ಬೀಳುತ್ತಾನೆ. ಅಷ್ಟಾದರೂ ವಾಸವದತ್ತೆಯ ಕೋಪ ಇಳಿಯುವುದಿಲ್ಲ. ರಾಜನಿಗೆ ಪ್ರಿಯಸಮಾಗಮದ ಖುಷಿಯ ಜೊತೆಗೆ ಪಟ್ಟದರಸಿಯ ಕೋಪದ ಭೀತಿ. ’ಭೀತಶ್ಚೋತ್ಸುಕಮಾನಸಶ್ಚ ಮಹತಿ ಕ್ಷಿಪ್ತೋಽಸ್ಮ್ಯಹಂ ಸಂಕಟೇ’ (ಭೀತಿ ಮೇಣೌತ್ಸುಕ್ಯ ಭಾವದೊಳಿಹೆನು ನಾನಿಂದೋವೊ ಬಹು ಸಂಕಟದೊಳು.) ಎಂದು ವಿದೂಷಕನಲ್ಲಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತ ’ಶಯ್ಯಾಗೃಹಕ್ಕೆ ಹೋಗಿ ದೇವಿಯನ್ನು ಪ್ರಸನ್ನಗೊಳಿಸುವ ಉಪಾಯವನ್ನು ಚಿಂತಿಸುತ್ತೇನೆ’ ಎಂದು ಹೋಗುತ್ತಾನೆ.

ವಾಸವದತ್ತೆಯನ್ನು ಪ್ರಸನ್ನಗೊಳಿಸುವುದೊಂದೇ ಅವಳ ಬಂಧನದಲ್ಲಿರುವ ಪ್ರಿಯದರ್ಶಿಕೆಯನ್ನು ಬಿಡಿಸುವ ಉಪಾಯ ಎಂದು ಉದಯನ ಯೋಚಿಸುತ್ತಿದ್ದಾನೆ. ಚತುರಂಗ ಬಲದ ಅಧಿಪತಿ ತಾನಾದರೂ ಪತ್ನಿಯ ಕೋಪದ ಎದುರಲ್ಲಿ ಅದಾವುದೂ ಪ್ರಯೋಜನಕ್ಕೆ ಬಾರದು ಎಂದು ಅವನು ಅರಿತಿದ್ದಾನೆ. ಅದಕ್ಕಾಗಿ ಅವನು ಎಷ್ಟು ಬಾರಿಯಾದರೂ ಅಂಜಲಿಬದ್ಧನಾಗಿ ಅವಳ ಕಾಲಿಗೆರಗಲು ಸಿದ್ಧನಿದ್ದಾನೆ. ಅದನ್ನೇ ವಿದೂಷಕನಿಗೆ ಹೇಳುತ್ತಾನೆ – ’ಕಿಂ ತಿಷ್ಠಾಮಿ ಕೃತಾಂಜಲಿರ್ನಿಪತಿತೋ ದೇವ್ಯಾಃ ಪುರಃ ಪಾದಯೋಃ’.(ಪ್ರಿಯದರ್ಶಿಕಾ, ಚತುರ್ಥೋಂಕಃ ೧) “ಅಲ್ಲದಿರೆ ಕೈಮುಗಿಯುತವಳ ಪಾದಾಬ್ಜಯುಗಳಕೆ ಅಡ್ಡಬೀಳುತ ಬೇಡಿಕೊಳ್ಳಲೆ ದೇವಿಯ” – ಕನ್ನಡ ಹರ್ಷಮಹಾಸಂಪುಟ ಪು.ಸಂ.೩೮

ರಾಜ ಲಜ್ಜೆಯಿಂದ ಮಹಾರಾಣಿಯ ಬಳಿಗೆ ಹೋಗುತ್ತಾನೆ. ಅವನನ್ನು ಕಂಡ ರಾಣಿ ಪೀಠವನ್ನು ಬಿಟ್ಟೇಳುತ್ತಾಳೆ. ಉದಯನ ಅದರ ಆವಶ್ಯಕತೆ ಇಲ್ಲ ಎಂದು ಹೇಳುತ್ತಾನೆ. ಅವಳ ನೋಟದ ಪ್ರಸಾದಕ್ಕಾಗಿ ಕಾಯುತ್ತಿರುವವನು ತಾನು ಎಂದು ಹೇಳಿಕೊಳ್ಳುತ್ತಾನೆ. ವಸ್ತುತಃ ವಾಸವದತ್ತೆಯು ತನ್ನ ಚಿಕ್ಕಮ್ಮನ ಕುರಿತಾಗಿ ಯೋಚಿಸುತ್ತಿದ್ದಳು. ಚಿಂತೆಯಿಂದ ಪೀಠ ಬಿಟ್ಟು ನೆಲದ ಮೇಲೆ ಕುಳಿತ ರಾಣಿಯನ್ನು ನೋಡಿ ರಾಜನೂ ನೆಲದ ಮೇಲೆ ಕುಳಿತು ಕೈಮುಗಿದುಕೊಂಡು ಪ್ರಸನ್ನಳಾಗುವಂತೆ ಪ್ರಾರ್ಥಿಸುತ್ತಾನೆ.  ಕಿಮೇವಂ ಪ್ರಣತೇಽಪಿ ಮಯಿ ಗಂಭೀರತರಂ ಕೋಪಮುದ್ವಹಸಿ. 


“ಸ್ತಿಮಿತವಾಗಿಹ ನಿನ್ನ ಕೋಪವು ಮುಸುಕಿನೊಳಗಿನ ಗುದ್ದಿನಂದದೆ ನನ್ನ ನೋಯಿಸುತಿರ್ಪುದು.” (ಕೋಪಸ್ತೇ ಸ್ತಿಮಿತೋ ನಿಪೀಡಯತಿ ಮಾಂ ಗೂಢಪ್ರಹಾರೋಪಮಮ್).

ಎನ್ನುತ್ತ ಮತ್ತೆ ಅವಳ ಕಾಲಿಗೆರಗುತ್ತಾನೆ. ನಂತರ ಅವಳ ದುಃಖದ ಕಾರಣವನ್ನು ತಿಳಿದು ಸಮಾಧಾನಪಡಿಸುತ್ತಾನೆ. ವಾಸವದತ್ತೆಯ ಬಂಧುಗಳ ಕಷ್ಟನಿವಾರಣೆಗಾಗಿ ವತ್ಸರಾಜ ವಾಸವದತ್ತೆ ಕೇಳಿಕೊಳ್ಳುವ ಮೊದಲೇ ಕಾರ್ಯಪ್ರವೃತ್ತನಾಗಿದ್ದ. ಅದು ವಾಸವದತ್ತೆಯ ಬಗ್ಗೆ ಉದಯನನಿಗಿರುವ ಪ್ರೀತ್ಯಾದರಗಳನ್ನು ತೋರಿಸುತ್ತದೆ. ಕೊನೆಯಲ್ಲಿ ಪ್ರಿಯದರ್ಶಿಕೆಯ ಕೈಯನ್ನು ರಾಜನ ಕೈಯಲ್ಲಿಟ್ಟು ಪರಿಗ್ರಹಿಸಲು ಒತ್ತಾಯಿಸಿದ ವಾಸವದತ್ತೆಗೆ ’ದೇವೀ ಪ್ರಭವತಿ| ಕುತೋಽಸ್ಮಾಕಮನ್ಯಥಾ ಕರ್ತುಂ ವಿಭವಃ?’ (ದೇವಿಯದೇ ಅಧಿಕಾರ. ಬೇರೆ ರೀತಿಯಲ್ಲಿ ವರ್ತಿಸಲು ನಮಗೆ ಸಾಮರ್ಥ್ಯವೆಲ್ಲಿದೆ?)ಎನ್ನುತ್ತಾನೆ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ. 

ಮಹಾಬಲ ಭಟ್ಟ, ಗೋವಾ

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...