Thursday, March 28, 2024

ಸಂಸ್ಕೃತದ ಹಿರಿಮೆ

 ಕೆ.ಎಲ್.ಇ. ಧ್ವನಿಯ ಶ್ರೊತೃಗಳಿಗೆಲ್ಲ ನಮಸ್ಕಾರ. ರಕ್ಷಾಬಂಧನ ಹಾಗೂ ಸಂಸ್ಕೃತದಿನದ ಶುಭಾಶಯಗಳು.

ಸಂಸ್ಕೃತ ಎಂದಾಕ್ಷಣವೇ ನಮಗೆಲ್ಲ ನೆನಪಾಗುವುದು ಪ್ರಾಚೀನಭಾರತ. ತಕ್ಷಶಿಲೆ, ನಲಂದಾ ಮೊದಲಾದ ವಿಶ್ವವಿಖ್ಯಾತವಿದ್ಯಾಕೇಂದ್ರಗಳ ಜಗದ್ಗುರು ಭಾರತ. ಹೌದು. ಹಿಂದೊಮ್ಮೆ ಭಾರತೀಯ ಜ್ಞಾನಪರಂಪರೆ ವಿಶ್ವಕ್ಕೇ ಮಾದರಿಯಾಗಿತ್ತು. ಜ್ಞಾನಪಿಪಾಸುಗಳೆಲ್ಲ ಭಾರತದತ್ತ ಮುಖ ಮಾಡುತ್ತಿದ್ದರು. ಇಂದಿಗೂ ಭಾರತಕ್ಕೆ ಆ ಸಾಮರ್ಥ್ಯವಿದೆ. ಅದರ ಹಿಂದಿನ ವಾಹಕ ಶಕ್ತಿ ಇದೇ ಸಂಸ್ಕೃತವೆಂಬ ಭಾಷೆ.

ಭಾರತೀಯರಿಗೆ ಭಾಷೆಯೆಂಬುದು ಕೇವಲ ಸಂವಹನ ಮಾಧ್ಯಮವಲ್ಲ. ಅದು ಸಂಸ್ಕೃತಿಯ ವಾಹಿನೀ. ನಮ್ಮತನದ ಸಂಕೇತವೂ ಹೌದು. ಹಾಗಾಗಿ ಭಾಷೆಯ ರಕ್ಷಣೆ ಎಂದರೆ ಸಂಸ್ಕೃತಿಯ ರಕ್ಷಣೆ. ತನ್ಮೂಲಕ ಅಭಿಜಾತ ಸಮಾಜದ ರಕ್ಷಣೆ. ಇಂದಿಗೂ ಸಂಸ್ಕೃತಭಾಷೆ ಭಾರತೀಯತ್ವದ ಸಂಕೇತವಾಗಿ ನಿಲ್ಲುವುದು ಆ ಕಾರಣಕ್ಕೆ.

ಸಂಸ್ಕೃತದ ಬಗ್ಗೆ ಸಂಸ್ಕೃತದಲ್ಲಿಯೇ ಒಂದು ಮಾತಿದೆ: ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ. ಭಾಷೆಗಳಲ್ಲಿ ಮುಖ್ಯವೂ, ಮಧುರವೂ, ದಿವ್ಯವೂ ಆದ ಭಾಷೆ ಸಂಸ್ಕೃತಭಾಷೆ. ಈ ಮಾತಿನ ಹಿಂದಿರುವ ವಿಚಾರಗಳನ್ನು ತಿಳಿಯುತ್ತ ಹೋದರೆ ಸಂಸ್ಕೃತಭಾಷೆಯ ವಿಭಿನ್ನಪದರುಗಳು ಗೋಚರವಾಗುತ್ತ ಹೋಗುತ್ತವೆ.

ಸಂಸ್ಕೃತಭಾಷೆ ಭಾಷೆಗಳಲ್ಲಿ ಮುಖ್ಯವಾಗಿ ಗೋಚರವಾಗುವುದಕ್ಕೆ ಮುಖ್ಯಕಾರಣ ಅದರ ವೈಜ್ಞಾನಿಕ ರಚನೆ. ವರ್ಣಮಾಲೆಯನ್ನೇ ತೆಗೆದುಕೊಂಡರೆ ಅಲ್ಲಿರುವ ಹೃಸ್ವ-ದೀರ್ಘ-ಪ್ಲುತ ಸ್ವರಗಳು, ಅನುಸ್ವಾರ, ವಿಸರ್ಗ, ವರ್ಗೀಯ-ಅವರ್ಗೀಯ, ಕರ್ಕಶ-ಮೃದು-ಅನುನಾಸಿಕ, ಅಲ್ಪಪ್ರಾಣ-ಮಹಾಪ್ರಾಣ ವ್ಯಂಜನಗಳು ಇವನ್ನೆಲ್ಲ ಗಮನಿಸಿದರೆ ಭಾಷೆ ಎಂತಹ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂಬ ಅರಿವಾಗುತ್ತದೆ ಅಷ್ಟೇ ಅಲ್ಲ ಇನ್ನಿತರ ಎಷ್ಟೋ ಭಾಷೆಗಳ ಸಂರಚನೆಗೆ ಆಧಾರಭೂತವಾಗಿ ನಿಂತಿದೆ ಎಂದು ತಿಳಿಯುತ್ತದೆ. ಸಂಸ್ಕೃತಶಬ್ದಗಳ ಉಚ್ಚಾರಣೆಯಿಂದ ಪ್ರಾಣಾಯಾಮ ಮಾಡಿದಂತಾಗುವುದರಿಂದ ಆರೋಗ್ಯವರ್ಧನೆಯಾಗುತ್ತದೆ ಎಂಬುದೂ ಪ್ರಾಜ್ಞರ ಅಂಬೋಣ. ಉಚ್ಚಾರಣಶಾಸ್ತ್ರದ ವಿಷಯದಲ್ಲಿ ಪಾಣಿನೀಯ ಶಿಕ್ಷಾ ಇತ್ಯಾದಿ ಗ್ರಂಥಗಳ ಕೊಡುಗೆ ಅಪಾರ. ಜಗತ್ತಿನ ಅನೇಕ ಭಾಷೆಗಳಿಗೆ ಸಂಸ್ಕೃತ ಫೊನೆಟಿಕ್ಸ್ ಮಾರ್ಗದರ್ಶಕವಾಗಿ ನಿಂತಿದೆ.

ಸಂಸ್ಕೃತಭಾಷೆ ಮುಖ್ಯ ಎನಿಸಲಿಕ್ಕೆ ಇನ್ನೊಂದು ಕಾರಣ ಅದರ ಅಗಾಧ ಸಾಹಿತ್ಯರಾಶಿ. ವೇದಗಳಿಂದ ಹಿಡಿದು ಇಂದಿನ ಗೇಯ ಗೀತೆಗಳವರೆಗೆ ಊಹಿಸಲಾಗದಷ್ಟು ಸಾಹಿತ್ಯವನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಜಗತ್ತಿನ ಅನೇಕ ಭಾಷೆಗಳಲ್ಲಿ ರಚಿತವಾದ ಬಹಳಷ್ಟು ಸಾಹಿತ್ಯಗಳು ಸಂಸ್ಕೃತದ ಪ್ರಾಚೀನಗ್ರಂಥಗಳ ಆಧಾರದಲ್ಲಿ ರಚಿತವಾದವು. ಕನ್ನಡದಲ್ಲಿಯೂ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಇತ್ಯಾದಿ ಮಹಾಕವಿಗಳ ಕಾವ್ಯಗಳೂ ಮೂಲ ಸಂಸ್ಕೃತಕಾವ್ಯಗಳ ನೆರಳಲ್ಲೇ ರಚಿತವಾದವು ಎಂಬುದನ್ನು ಗಮನಿಸಬೇಕು. ಎಷ್ಟೋ ಸಹಸ್ರವರ್ಷಗಳು ಕಳೆದರೂ ಇಂದಿಗೂ ಸಂಸ್ಕೃತಸಾಹಿತ್ಯ ಇತರರ ಸಾಹಿತ್ಯರಚನೆಗೆ ಸಾಮಗ್ರಿಗಳನ್ನು ಒದಗಿಸುತ್ತಲೇ ಇದೆ. ಸಂಸ್ಕೃತದಲ್ಲಿ ಯಾವ ಪ್ರಕಾರದ ಸಾಹಿತ್ಯವೂ ಇಲ್ಲವೆಂಬಂತ್ತಿಲ್ಲ. ಋಷಿಗಳಿಂದ ದರ್ಶಿಸಲ್ಪಟ್ಟ ವೇದಗಳು, ಅದ್ಭುತಪುರಾಣಗಳು, ರಾಮಾಯಣ ಮಹಾಭಾರತದಂತಹ ಆರ್ಷಕಾವ್ಯಗಳು, ಕಾಳಿದಾಸ, ಬಾಣಭಟ್ಟರಂತಹ ಕವಿಗಳ ಅನುಪಮ ಕಾವ್ಯ-ನಾಟಕಗಳು, ಅರ್ಥಶಾಸ್ತ್ರ, ಗಣಿತ, ವಿಜ್ಞಾನ, ಆಧುನಿಕ ಕಾದಂಬರಿಗಳು, ಗೇಯಗೀತೆಗಳು, ಶಿಶುಸಾಹಿತ್ಯ ಹೀಗೆ ವೈವಿಧ್ಯಮಯವಾದ ಅಪರಿಮಿತ ಸಾಹಿತ್ಯವನ್ನು ಸಂಸ್ಕೃತಭಾಷೆಯಲ್ಲಿ ಕಾಣಬಹುದು.

ಇಂದು ಅನೇಕ ಭಾಷೆಗಳಲ್ಲಿ ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಸಂಸ್ಕೃತಶಬ್ದಗಳು ಹೇರಳವಾಗಿ ಬಳಸಲ್ಪಡುತ್ತವೆ. ಕನ್ನಡಭಾಷೆಯಲ್ಲಿಯೂ ಸಾಕಷ್ಟು ಸಂಸ್ಕೃತಶಬ್ದಗಳು ಹಾಸುಹೊಕ್ಕಾಗಿವೆ. ಅನೇಕ ಶಬ್ದಗಳು ಸಂಸ್ಕೃತದಿಂದ ನಿಷ್ಪನ್ನವಾಗಿ ತದ್ಭವ ಎನಿಸಿಕೊಳ್ಳುತ್ತವೆ. ಸಂಸ್ಕೃತದ ಅಗಾಧ ಶಬ್ದಸಂಪತ್ತು ಇತರ ಭಾಷೆಗಳನ್ನೂ ಶ್ರೀಮಂತಗೊಳಿಸುತ್ತದೆ. ಅಷ್ಟೇ ಅಲ್ಲ ಉಪಸರ್ಗ-ಪ್ರತ್ಯಯಗಳ ಜೋಡಣೆಯಿಂದ ಹೊಸಶಬ್ದಗಳನ್ನು ಸೃಷ್ಟಿಸುವ ಶಕ್ತಿಯೂ ಸಂಸ್ಕೃತಕ್ಕೆ ಅಪಾರವಾಗಿದೆ.

ಸಂಸ್ಕೃತಭಾಷೆ ಜನಪ್ರಿಯವಾಗಲು ಅದರ ಮಾಧುರ್ಯ ಒಂದು ಮುಖ್ಯ ಕಾರಣ. ಕಾಳಿದಾಸನ ಅಲಂಕಾರವೈದುಷ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ, ಗೀತಗೋವಿಂದದ ಗೇಯತೆ ಹೀಗೆ ಸಂಸ್ಕೃತಕಾವ್ಯಗಳ ಅನುಸಂಧಾನದಿಂದ ದೊರಕುವ ಅನುಭೂತಿ ಅನುಪಮ, ಅತಿಶಯ. ಲಲಿತಲವಂಗಲತಾಪರಿಶೀಲನಕೋಮಲಮಲಯಸಮೀರೇ|

ಮಧುಕರ-ನಿಕರ-ಕರಂಬಿತ-ಕೋಕಿಲ-ಕೂಜಿತ-ಕುಂಜ-ಕುಟಿರೇ ||

ಎಂಬ ಜಯದೇವನ ಗೀತಗೋವಿಂದದ ಸಾಲುಗಳೇ ಅದಕ್ಕೆ ಸಾಕ್ಷಿ. ಸುಭಾಷಿತಗಳು ಸಂಸ್ಕೃತಭಾಷೆಯ ವೈಶಿಷ್ಟ್ಯಗಳಲ್ಲಿ ಒಂದು. ಜೀವನಕ್ಕೆ ಮಾರ್ಗದರ್ಶಕವಾಗಿರುವ ಸುಂದರವಾದ ಸುಭಾಷಿತಗಳು ಮಹಾಕವಿಗಳ ಕಾವ್ಯಗಳಲ್ಲಿ ಹೇರಳವಾಗಿ ದೊರೆಯುತ್ತವೆ.

ಸಂಸ್ಕೃತಭಾಷೆಗೆ ಒಂದು ರೀತಿಯ ದಿವ್ಯತೆ ಇದೆ. ಆಧ್ಯಾತ್ಮ ಸಾಧಕರಿಗೆ, ದೈವಭಕ್ತರಿಗೆ ಮಾರ್ಗದರ್ಶನ ನೀಡುವ ಮುಖ್ಯ ಗ್ರಂಥಗಳು ಸಂಸ್ಕೃತದಲ್ಲೇ ಇವೆ. ವೇದಮಂತ್ರಗಳೇ ಆಗಿರಬಹುದು ಇಲ್ಲ ದರ್ಶನಗಳಾಗಿರಬಹುದು, ಭಗವದ್ಗೀತೆ, ಬ್ರಹ್ಮಸೂತ್ರ, ಉಪನಿಷತ್ತುಗಳಂತಹ ಆಧ್ಯಾತ್ಮಗ್ರಂಥಗಳಾಗಿರಬಹುದು ಅಥವಾ ಸರಳವಾದ ಸ್ತೋತ್ರಗಳಾಗಿರಬಹುದು ಅವುಗಳನ್ನು ಪಠಿಸಿದವರಿಗೆ ದಿವ್ಯಾನುಭೂತಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.  ಬ್ರಹ್ಮಾನಂದಸಹೋದರನೆಂದು ಕರೆಸಿಕೊಳ್ಳುವ ಕಾವ್ಯಾನಂದವೂ ಬಾಳಿಗೆ ದಿವ್ಯತೆಯನ್ನು ತರುತ್ತದೆ.

ಇಷ್ಟೆಲ್ಲ ವಿಶಾಲ ಸಾಹಿತ್ಯಪ್ರಪಂಚವನ್ನು ಹೊಂದಿದ್ದರೂ ಇಂದಿನ ಈ ಆಧುನಿಕಯುಗದಲ್ಲಿ ಸಂಸ್ಕೃತದ ಆವಶ್ಯಕತೆ ಇದೆಯೆ ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತದೆ. ಅದರ ಜೊತೆಗೆ ಸಂಸ್ಕೃತವು ಕಬ್ಬಿಣದ ಕಡಲೆ, ಉಚ್ಚಕುಲದ ಭಾಷೆ, ಮೃತಭಾಷೆ ಮುಂತಾದ ತಪ್ಪು ಕಲ್ಪನೆಗಳು ಅನೇಕರನ್ನು ಇದರ ಅಭ್ಯಾಸದಿಂದ ವಿಮುಖರನ್ನಾಗಿಸುತ್ತವೆ.

ಆದರೆ ಸಂಸ್ಕೃತವು ಸರಳವಾದ, ಸಾಮಾಜಿಕಸಾಮರಸ್ಯವನ್ನು ವರ್ಧಿಸುವ ಅಮೃತಭಾಷೆ. ಇತ್ತೀಚಿನದಿನಗಳಲ್ಲಿ ಅದರ ಜನಪ್ರಿಯತೆ ಸಾಕಷ್ಟು ವಿಸ್ತರಿಸಿದೆ. ಇಂದಿನ ಯುವಪೀಳಿಗೆಯು ಸಂಸ್ಕೃತವನ್ನು ಕಲಿಯುವತ್ತ ಮನಮಾಡುತ್ತಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳು, ಹಾಗೂ ಸಂಸ್ಕೃತಭಾರತಿಯಂತಹ ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸಮಾಡುತ್ತಿವೆ. ಇಂದು ಅನೇಕ ಲಕ್ಷ ಜನರು ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ನವ್ಯ ಸಾಹಿತ್ಯಕೃಷಿಯಲ್ಲಿ ಸಾಕಷ್ತು ಯುವಕರು ತೊಡಗಿಸಿಕೊಂಡಿದ್ದಾರೆ.

ಸಂಸ್ಕೃತವೂ ಪ್ರಾಚೀನಭಾಷೆಯೇ ಆಗಿದ್ದರೂ ಆಧುನಿಕಭಾಷೆಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಐತಿಹಾಸಿಕ, ಸಾಮಾಜಿಕ ವಿಷಯವಸ್ತುವನ್ನು ಇಟ್ಟುಕೊಂಡು ರಚಿಸಲ್ಪಡುತ್ತಿರುವ ಆಧುನಿಕ ಸಂಸ್ಕೃತ ಸಾಹಿತ್ಯವೇ ಅದಕ್ಕೆ ಸಾಕ್ಷಿ. ಬೇರೆ ಬೇರೆ ಭಾಷೆಗಳ ಸಾಹಿತ್ಯದ ಸಂಸ್ಕೃತ ಅನುವಾದ ಕೂಡ ನಡೆಯುತ್ತಿದೆ. ಕನ್ನಡದ ಮೇರು ಲೇಖಕ ಎಸ್. ಎಲ್. ಭೈರಪ್ಪನವರ ಅನೇಕ ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿದೆ.

ಇಂದಿನ ತಂತ್ರಜ್ಞಾನಯುಗದಲ್ಲಿ ತಂತ್ರಜ್ಞಾನಬಳಕೆಯಲ್ಲಾಗಲಿ, ತಂತ್ರಜ್ಞಾನನಿರ್ಮಾಣದಲ್ಲಾಗಲಿ ಸಂಸ್ಕೃತಭಾಷೆ ಹಾಗೂ ಸಂಸ್ಕೃತಜ್ಞರು ಹಿಂದೆ ಬಿದ್ದಿಲ್ಲ. ಇಂದು ಅಪಾರ ಸಂಸ್ಕೃತ ಗ್ರಂಥಗಳ ಡಿಜಿಟಲ್ ಆವೃತ್ತಿ ಅಂತರ್ಜಾಲದಲ್ಲಿ ಲಭ್ಯ ಇದೆ. ಸಂಸ್ಕೃತ ಅಧ್ಯಯನಕ್ಕಾಗಿ ಎಣಿಸಲಾಗದಷ್ಟು ಅಂತರ್ಜಾಲ ತಾಣಗಳು, ಮೊಬೈಲ್ ಎಪ್ ಗಳು, ಟೂಲ್ ಗಳು ಲಭ್ಯ ಇವೆ, ಹೊಸ ಹೊಸದರ ನಿರ್ಮಾಣ ನಡೆಯುತ್ತಲೇ ಇದೆ. ಆಯ್.ಆಯ್.ಟಿ. ಯಂತಹ ಸಂಸ್ಥೆಗಳು ಭಾರತೀಯ ಅಧ್ಯಯನ ವಿಭಾಗದಡಿ ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಂಡಿವೆ. ಅನೇಕ ವಿದೇಶೀಯ ಸಂಸ್ಥೆಗಳೂ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅತ್ಯಾಧುನಿಕ ಅಧ್ಯಯನ ಪರಿಕರಗಳನ್ನು ನಿರ್ಮಿಸಿವೆ. ಪಾಣಿನೀಯ ಅಷ್ಟಾಧ್ಯಾಯಿಯಂತಹ ಉದ್ಗ್ರಂಥಗಳೂ ಇಂದು ಬೆರಳತುದಿಯಲ್ಲಿ ಲಭ್ಯ ಇವೆ. ಪಾಣಿನೀಯ ವ್ಯಾಕರಣದ ಸಂರಚನೆಯ ಆಧಾರದಲ್ಲಿ ಕಂಪ್ಯೂಟರ್ ಪ್ರೊಗ್ರಾಮಿಂಗ್ ರಚಿಸುವ ಸಾಧ್ಯತೆಯ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ.

ಹೀಗೆ ಪ್ರಾಚೀನವು, ಆಧುನಿಕವು ಆದ ಸಂಸ್ಕೃತಭಾಷೆ ನಮ್ಮೆಲ್ಲರ ಜೀವನದ ಅಂಗವಾಗಬೇಕು. ಅನೇಕ ವಿಶ್ವವಿದ್ಯಾಲಯಗಳೂ, ಸ್ವಯಂ ಸೇವಾ ಸಂಸ್ಥೆಗಳೂ ಮನೆಯಲ್ಲೇ ಕುಳಿತು ಸಂಸ್ಕೃತ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಭಾಷೆಯನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ನಾವೆಲ್ಲ ಇದನ್ನು ಕಲಿತು, ಕಲಿಸಿ, ಪ್ರಸರಿಸಿ ಧನ್ಯರಾಗುವ ಸಂಕಲ್ಪವನ್ನು ಈ ಶುಭದಿನದಂದು ಮಾಡೋಣ.

(ಶೋಭಕೃತ್ ಸಂವತ್ಸರದ ಸಂಸ್ಕೃತದಿನದಂದು  ಕೆ.ಎಲ್.ಇ. ಧ್ವನಿಯಲ್ಲಿ ಪ್ರಸಾರವಾದ ಉಪನ್ಯಾಸ)

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...