Showing posts with label ನಾರೀವಿಧೇಯರು. Show all posts
Showing posts with label ನಾರೀವಿಧೇಯರು. Show all posts

Monday, October 21, 2024

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರಾಮಚರಿತೆಯ ಚಿತ್ರಗಳನ್ನು ನೋಡುವ ಸಂದರ್ಭದಲ್ಲಿ ಮತ್ತೆ ತಪೋವನಕ್ಕೆ ಹೋಗುವ ಬಯಕೆ ಸೀತೆಯಲ್ಲಿ ಮೂಡುತ್ತದೆ. ಅದನ್ನು ಕೇಳಲೆ ಎಂದು ರಾಮನಲ್ಲಿ ಕೇಳಿದಾಗ, ’ಕೇಳುವುದಲ್ಲ, ಆಜ್ಞಾಪಿಸು’ ಎಂದು ತಾನು ಅವಳ ಸೇವಕನೆಂಬಂತೆ ವರ್ತಿಸುತ್ತಾನೆ. 

ಸೀತೆ ರಾಮನ ತೋಳನ್ನೇ ದಿಂಬಾಗಿಸಿ ಗಾಢನಿದ್ರೆಗೆ ಜಾರಿದಾಗಲೇ ಗೂಢಚರ ಬಂದು ಸೀತೆಯ ವಿಷಯದಲ್ಲಿ ಪೌರಜನರಾಡಿಕೊಳ್ಳುತ್ತಿದ್ದ ಮಾತನ್ನು ರಾಮನಿಗೆ  ಹೇಳುತ್ತಾನೆ. ರಾಮನಿಗೆ ವಜ್ರಾಘಾತವಾಗುತ್ತದೆ. ತೋಳಿನಲ್ಲಿ ಪ್ರೀತಿಯ ಮಡದಿ, ಕಿವಿಯಲ್ಲಿ ಇಂತಹ ಕಠೋರ ಮಾತು. ಸೀತೆಗೆ ನಿದ್ರಾಭಂಗವಾಗದಂತೆ ವಿಲಪಿಸುತ್ತಾನೆ. ಕೊನೆಗೂ ಕಠಿನನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾದ್ದರಿಂದ ಅವಳ ತಲೆಯನ್ನು ಮೆಲ್ಲಗೆ ತೋಳಿನಿಂದ ಜಾರಿಸಿ ಅವಳ ಪಾದಗಳ ಬಳಿಬಂದು ಅವಳ ಚರಣಗಳನ್ನು  ತನ್ನ ತಲೆಗೊತ್ತಿಕೊಂಡು  ’ದೇವಿ, ಅಯಂ ಪಶ್ಚಿಮಸ್ತೇ ರಾಮಶಿರಸಾ ಪಾದಪಂಕಜಸ್ಪರ್ಶಃ (ದೇವಿ, ರಾಮನ ಶಿರಸ್ಸಿನಿಂದ ಇದೇ ನಿನ್ನ ಪಾದಪಂಕಜದ ಕೊನೆಯ ಸ್ಪರ್ಶ). ಇಲ್ಲಿ ಕೊನೆಯ ಸ್ಪರ್ಶ ಎನ್ನುವುದು ಗಮನಾರ್ಹ. ಸೀತೆಯ ಚರಣಗಳಿಗೆ ತಲೆಬಾಗುವುದು ರಾಮನ ನಿತ್ಯಕ್ರಿಯೆಯಾಗಿತ್ತು ಎಂಬುದು ಇಲ್ಲಿನ ಧ್ವನಿಯಾಗಿರಬಹುದು ಅಲ್ಲವೆ?

ಶಂಬೂಕವಧೆಯ ವ್ಯಾಜದಿಂದ ವನಪ್ರವೇಶ ಮಾಡಿದ ರಾಮನಿಗೆ ಮತ್ತೆ ಸೀತೆಯ ನೆನಪಾಗುತ್ತದೆ. ಪರಿಪರಿಯಾಗಿ ವಿಲಪಿಸುತ್ತಾನೆ. ಭಾಗೀರಥಿಯ ವರದಿಂದ ಸೀತೆ ಯಾರಿಗೂ ಕಾಣದಂತೆ ಅದೃಶ್ಯರೂಪವನ್ನು ತಳೆದಿದ್ದಳು. ಅವಳು ರಾಮನನ್ನು ಸಂತೈಸಲು ಅವನನ್ನು ಸ್ಪರ್ಶಿಸಿದಾಗ ರಾಮ ತನಗೆ ಸೀತೆಯ ಅನುಗ್ರಹವಾಯಿತು ಎಂದು ಭಾವಿಸುತ್ತಾನೆ.

ಪ್ರಸಾದ ಇವ ಮೂರ್ತಸ್ತೇ ಸ್ಪರ್ಶಃ ಸ್ನೇಹಾರ್ದ್ರಶೀತಲಃ|

ಅದ್ಯಾಪ್ಯಾನಂದಯತಿ ಮಾಂ ತ್ವಂ ಪುನಃ ಕ್ವಾಸಿ ನಂದಿನೀ || ಉ.ರಾ.ಚ., ತೃತೀಯೋಂಕಃ, ೧೪

ಪುರುಷನಾದವನು ಕಾಂತೆಯನ್ನು ಸೇವೆಯಿಂದ ಒಲಿಸಿಕೊಳ್ಳಬೇಕೇ ಹೊರತು ಪೌರುಷದಿಂದ ಪೀಡಿಸಬಾರದು ಎನ್ನುವ ಸಂದೇಶವನ್ನು ರಾಮನ ಮೂಲಕ ಭವಭೂತಿ ನೀಡಿದ್ದಾನೆ. ವನದೇವತೆ ವಾಸಂತಿಯೊಡನೆ ವನದ ಆಗುಹೋಗುಗಳನ್ನು ವೀಕ್ಷಿಸುತ್ತ, ಅವೆಲ್ಲವನ್ನೂ ತನ್ನ ಹಾಗೂ ಸೀತೆಯ ಜೀವನದೊಂದಿಗೆ ಹೋಲಿಸಿಕೊಳ್ಳುತ್ತ ಇರುವ ಸಂದರ್ಭದಲ್ಲಿ ಒಂದು ಆನೆಜೋಡಿಯನ್ನು ನೋಡುತ್ತಾನೆ. ಅದರಲ್ಲಿ ಗಂಡಾನೆ ಹೆಣ್ಣಾನೆಯನ್ನು ಒಲಿಸಿಕೊಳ್ಳುತ್ತಿರುವ ವರ್ಣನೆ ತುಂಬ ಸುಂದರವಾಗಿದೆ.

ಲೀಲೋತ್ಖಾತಮೃಣಾಲಕಾಂಡಕವಚ್ಛೇದೇಷು ಸಂಪಾದಿತಾಃ

ಪುಷ್ಯತ್ಪುಷ್ಕರವಾಸಿತಸ್ಯ ಪಯಸೋ ಗಂಡೂಷಸಂಕ್ರಾಂತಯಃ|

ಸೇಕಃ ಶೀಕರಿಣಾ ಕರೇಣ ವಿಹಿತಃ ಕಾಮಂ ವಿರಾಮೋ ಪುನ-

ರ್ಯತ್ಸ್ನೇಹಾದನರಾಲನಾಲನಲಿನೀಪತ್ರಾತಪತ್ರಂ ಧೃತಮ್ || ಉ.ರಾ.ಚ., ತೃತೀಯೋಂಕಃ, ೧೬

(ಆಟದಲ್ಲಿ ಕಿತ್ತ ತಾವರೆದೇಟುಗಳ ತುತ್ತುಗಳನ್ನು ಕೊಡುತ್ತ, ನಡು ನಡುವೆ ಅರಳಿದ ತಾವರೆಗಳಿಂದ (ಅಥವಾ ಪುಷ್ಟವಾದ ಸೊಂಡಿಲಿಂದ) ಸುವಾಸಿತವಾದ ನೀರಿನ ಗುಟುಕುಗಳನ್ನು ಆ ಹೆಣ್ಣಾನೆಗೆ ನೀಡಿದೆ. ಆ ಮೇಲೆ ತನ್ನ ಸೊಂಡಿಲಿಂದ ಸಿಡಿಯುವ ನೀರಧಾರೆಗಳಿಂದ ಅದಕ್ಕೆ ಬೇಕಾದಷ್ಟು ಜಲಸೇಚನೆಯನ್ನು ಮಾಡಿದೆ; ಸ್ನಾನ ಮಾಡಿಸಿಯಾದ ಮೇಲೆ ಪ್ರೀತಿಯಿಂದ ಒಂದು ನೇರವಾದ ನಾಳವಿರುವ ತಾವರೆಯೆಲೆಯನ್ನು ಛತ್ರಿಯಂತೆ ಅದರ ಮೇಲೆ ಹಿಡಿದಿದೆ.)  ಅನುವಾದ: ಡಾ. ಕೆ. ಕೃಷ್ಣಮೂರ್ತಿ, ಡಾ. ಬಿ.ಆರ್. ಮೋಡಕ

ರಾಮ ಇದನ್ನು ವಾಸಂತಿಗೆ ತೋರಿಸುತ್ತ “ಪಶ್ಯ ಪಶ್ಯ, ಕಾಂತಾನುವೃತ್ತಿಚಾತುರ್ಯಮಪಿ ಶಿಕ್ಷಿತಂ ವತ್ಸೇನ” (ಈ ಆನೆಮರಿ ತನ್ನ ಕಾಂತೆಯನ್ನು ಒಲಿಸಿಕೊಳ್ಳುವ ಕೌಶಲ್ಯವನ್ನೂ ಕಲಿತುಕೊಂಡಿದೆ ) ಎನ್ನುತ್ತಾನೆ.

🌸🌸🌸🌸🌸

ಆತ್ಮೀಯರೇ, ರಾಮಾಯಣದೊಂದಿಗೆ ಆರಂಭಿಸಿದ ಲೇಖನಮಾಲೆಗೆ ರಾಮನೊಂದಿಗೆ ವಿರಾಮವನ್ನು ಹೇಳುತ್ತಿದ್ದೇನೆ. ಇದು ಅಲ್ಪ ವಿರಾಮವೇ ಹೊರತು ಪೂರ್ಣವಿರಾಮವಲ್ಲ. ಇಂತಹ ಸನ್ನಿವೇಶಗಳು ಇನ್ನಷ್ಟು ಗ್ರಂಥಗಳಲ್ಲಿ ಮತ್ತಷ್ಟು ಸಿಕ್ಕರೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಓದಿನಲ್ಲಿಯೂ ನಿಮಗೆ ಎಲ್ಲಾದರೂ ಈ ಲೇಖನಮಾಲೆಗೆ ಪೂರಕವಾದ ಮಾಹಿತಿಗಳು ದೊರೆತರೆ ದಯವಿಟ್ಟು ಹಂಚಿಕೊಳ್ಳಿ. 

ನನ್ನ ಮಟ್ಟಿಗೆ ಇದೊಂದು ವಿಶಿಷ್ಟ ಲೇಖನಮಾಲೆ. ಅನೇಕ ಗ್ರಂಥಗಳನ್ನು ಓದುವ ಅವಕಾಶವನ್ನು ಒದಗಿಸಿಕೊಟ್ಟ ಬರಹವಿದು. ಇಲ್ಲಿನ ವಿಷಯಗಳ ಬಗ್ಗೆ ಕೆಲವರು ನಿರ್ಬಿಢೆಯಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರಿ. ನಿಮಗೆಲ್ಲ ನಾನು ಕೃತಜ್ಞ. ಎಲ್ಲರೂ ಸ್ವಾಭಿಪ್ರಾಯವನ್ನು ಹೇಳಬೇಕೆಂದು ನನ್ನ ಸವಿನಯ ಬಿನ್ನಹ. ನಿಮಗೆ ಇಷ್ಟವಾಗದಿದ್ದರೂ ದಯವಿಟ್ಟು ಹೇಳಿ. 

ಮತ್ತೊಂದು ಲೇಖನಮಾಲೆಯೊಂದಿಗೆ ಮತ್ತೆ ಬರುತ್ತೇನೆ. ಆದರೆ ಯಾವಾಗ ಎಂದು ಹೇಳಲಾಗದು ’ಕಾಲೋ ಹ್ಯಯಂ ನಿರವಧಿಃ ....(ಉ.ರಾ.ಚ.). ಅಲ್ಲಿಯವರೆಗೆ ರಾಮ್... ರಾಮ್...

ಮಹಾಬಲ ಭಟ್ಟ, ಗೋವಾ

Sunday, October 20, 2024

ನಾರೀವಿಧೇಯರು-ಶಕಾರ-ಚಾರುದತ್ತ(ಮೃಚ್ಛಕಟಿಕಮ್)

ಸಾಮಾನ್ಯ ಪ್ರಜೆಯೊಬ್ಬನನ್ನು ನಾಯಕನನ್ನಾಗಿ ಮಾಡಿ ಜನಸಾಮಾನ್ಯರ ಜೀವನವನ್ನು ಚಿತ್ರಿಸಿದ ಶೂದ್ರಕನ ಮೃಚ್ಛಕಟಿಕ ನಾಟಕದಲ್ಲಿಯೂ ನಾರೀವಿಧೇಯತೆಯ ಸನ್ನಿವೇಶಗಳನ್ನು ಕಾಣಬಹುದು. 

ಈ ನಾಟಕದ ಖಳನಾಯಕ ಶಕಾರ ವಸಂತಸೇನೆಯನ್ನು ವಶಮಾಡಿಕೊಳ್ಳಲು ನಾನಾವಿಧವಾಗಿ ಪ್ರಯತ್ನಿಸುತ್ತಾನೆ. ಪ್ರವಹಣ ವಿಪರ್ಯಯದಿಂದ ಚಾರುದತ್ತನಲ್ಲಿಗೆ ಹೋಗಬೇಕಾದ ವಸಂತಸೇನೆ ಶಕಾರನ ಅಡ್ಡೆಯನ್ನು ಪ್ರವೇಶಿಸುತ್ತಾಳೆ. ಹಿಂದೊಮ್ಮೆ ಶಕಾರನ ವಿಷಯದಲ್ಲಿ ರುಷ್ಟಳಾಗಿದ್ದ ಅವಳ ಕಾಲಿಗೆ ಬಿದ್ದು  ಶಕಾರ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ’ಸಾಂಪ್ರತಂ ಪಾದಯೋಃ ಪತಿತ್ವಾ ಪ್ರಸಾದಯಾಮಿ’ ಎಂದು ವಿಟನಿಗೆ ಹೇಳುತ್ತಾ ಹೋಗಿ ಅವಳ ಕಾಲಿಗೆ ಬೀಳುತ್ತಾನೆ.

ಏಷ ಪತಾಮಿ ಚರಣಯೋರ್ವಿಶಾಲನೇತ್ರೇ

ಹಸ್ತಾಂಜಲಿಂ ದಶನಖೇ ತವ ಶುದ್ಧದಂತಿ |

ಯತ್ತವ ಮಯಾಪಕೃತಂ ಮದನಾತುರೇಣ 

ತತ್ಕ್ಷಾಮಿತಾಸಿ ವರಗಾತ್ರಿ ತವಾಸ್ಮಿ ದಾಸಃ||  ಮೃಚ್ಛಕಟಿಕಮ್, ಅಷ್ಟಮೋಂಕಃ, ೧೮

(ಓ ವಿಶಾಲವಾದ ದೃಷ್ಟಿಯುಳ್ಳವಳೇ ನಾನು ನಿನ್ನ ಕಾಲಿಗೆ ಬೀಳುತ್ತೇನೆ. ಮುತ್ತಿನಂಥ ಹಲ್ಲಿನವಳೇ, ನಿನ್ನ ಪಾದಗಳ ಹತ್ತು ಉಗುರುಗಳ ಮೇಲೆ ಹಸ್ತಾಂಜಲಿಯನ್ನಿಡುತ್ತೇನೆ. ಹೇ ಸುಂದರಶರೀರದವಳೇ, ಕಾಮಾತುರನಾಗಿ ನಿನ್ನ ವಿಷಯದಲ್ಲಿ ನಾನು ಮಾಡಿದ ಅಪರಾಧವನ್ನು ಕ್ಷಮಿಸು. ನಾನು ನಿನ್ನ ದಾಸನಾಗಿದ್ದೇನೆ.)

ವಸಂತಸೇನೆಯು ’ತೊಲಗು ಇಲ್ಲಿಂದ’ ಎನ್ನುತ್ತ ಕಾಲಿಗೆ ಬಿದ್ದ ಅವನನ್ನು ಒದೆಯುತ್ತಾಳೆ. ಆಗ ಕೋಪಗೊಂಡ ಶಕಾರ ಹೇಳುತ್ತಾನೆ - 

ಯಚ್ಚುಂಬಿತಮಂಬಿಕಾಮಾತೃಕಾಭಿರ್ಗತಂ

ನ ದೇವಾನಾಮಪಿ ಯತ್ಪ್ರಣಾಮಮ್ |

ತತ್ಪಾತಿತಂ ಪಾದತಲೇನ ಮುಂಡಂ

ವನೇ ಶೃಗಾಲೇನ ಯಥಾ ಮೃತಾಂಗಮ್ || ಮೃಚ್ಛಕಟಿಕಮ್, ಅಷ್ಟಮೋಂಕಃ, ೩೧

(ನನ್ನ ತಾಯಿಯಿಂದ ಚುಂಬಿಸಲ್ಪಟ್ಟ, ಯಾವ ದೇವರಿಗೂ ಮಣಿಯದ ಈ ನನ್ನ ತಲೆಯನ್ನು ನರಿಯು ಶವವನ್ನು ಒದ್ದಂತೆ ನಿನ್ನ ಪಾದಗಳಿಂದ ಒದ್ದೆಯಲ್ಲ!)

ವಸಂತಸೇನೆ ಅವನನ್ನು ಬಹುವಿಧವಾಗಿ ತಿರಸ್ಕರಿಸಿದರೂ ಮತ್ತೆ ಮತ್ತೆ ಅವಳನ್ನು ಬೇಡಿಕೊಳ್ಳುತ್ತಾನೆ ಶಕಾರ.

ಸುವರ್ಣಕಂ ದದಾಮಿ ಪ್ರಿಯಮ್ ವದಾಮಿ ಪತಾಮಿ ಶೀರ್ಷೇಣ ಸವೇಷ್ಟನೇನ|

ತಥಾಪಿ ಮಾಂ ನೇಚ್ಛತಿ ಶುದ್ಧದಂತಿ ಕಿಂ ಸೇವಕಂ ಕಷ್ಟಮಯಾ ಮನುಷ್ಯಾಃ|| 

(ಚಿನ್ನವನ್ನು ಕೊಡುತ್ತೇನೆ. ಮುಂಡಾಸಿನ ತಲೆಯೊಂದಿಗೆ (ಪಾದಗಳಿಗೆ) ಬೀಳುತ್ತೇನೆ. ಆದರೂ ನನ್ನನ್ನು ನಿನ್ನ ಸೇವಕನನ್ನಾಗಿ ಸ್ವೀಕರಿಸುತ್ತಿಲ್ಲ ಯಾಕೆ? ಮನುಷ್ಯರ ಜೀವನ ಕಷ್ಟಮಯ)

ಮೃಚ್ಛಕಟಿಕದ ನಾಯಕ ಚಾರುದತ್ತ ಉದಾತ್ತ ವ್ಯಕ್ತಿತ್ವವನ್ನು ಹೊಂದಿದವನು. ಶಕಾರನಿಂದ ತಪ್ಪಿಸಿಕೊಂಡು ಚಾರುದತ್ತನ ಮನೆಯನ್ನು ವಸಂತಸೇನೆ ಪ್ರವೇಶಿಸಿದಾಗ ಅಲ್ಲಿ ಕತ್ತಲೆಯಿತ್ತು. ಚಾರುದತ್ತನು ಅವಳನ್ನು ತನ್ನ ಸೇವಿಕೆ ರದನಿಕೆಯೆಂದು ತಿಳಿದು ಶೀತವಾಯುವಿನಿಂದ ಪೀಡಿತನಾದ ಮಗನನ್ನು ಒಳಗೆ ಕರೆದುಕೊಂಡು ಹೋಗಿ ಅವನನ್ನು ಹೊದಿಕೆಯಿಂದ ರಕ್ಷಿಸುವಂತೆ ಆದೇಶಿಸುತ್ತಾನೆ. ಅನಂತರ ಸತ್ಯವನ್ನು ತಿಳಿದು ಬೇಜಾರುಮಾಡಿಕೊಂಡು ಅವಳಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ’ಭವತಿ ವಸಂತಸೇನೇ, ಅನೇನಾವಿಜ್ಞಾನಾದಪರಿಜ್ಞಾತಪರಿಜನೋಪಚಾರೇಣಾಪರಾದ್ಧೋಽಸ್ಮಿ| ಶಿರಸಾ ಭವತೀಮನುನಯಾಮಿ |’  (ಆದರಣೀಯ ವಸಂತಸೇನೆ, ಅಜ್ಞಾನದಿಂದ ಸರಿಯಾಗಿ ಗುರುತಿಸದೆ ಸೇವಕಿಯಂತೆ ನಡೆಸಿಕೊಂಡು ಅಪರಾಧಿಯಾಗಿದ್ದೇನೆ. ತಲೆಬಾಗಿ ಕ್ಷಮೆ ಯಾಚಿಸುತ್ತೇನೆ.) 

ವಸಂತಸೇನೆಯು ವೇಶ್ಯೆಯಾಗಿದ್ದರೂ ಅವಳನ್ನು ಚಾರುದತ್ತ ಎಂದಿಗೂ ಆ ದೃಷ್ಟಿಯಿಂದ ನೋಡಲಿಲ್ಲ. ’ದೇವತೋಪಸ್ಥಾನಯೋಗ್ಯಾ ಯುವತಿರಿಯಂ’ ಎಂದು ಅವಳನ್ನು ಗೌರವದಿಂದ ನೋಡುತ್ತಾನೆ. ಅವಳು ನ್ಯಾಸವಾಗಿಟ್ಟಿದ್ದ ಆಭರಣಗಳ ಅಪಹರಣವಾದಾಗ ಅಷ್ಟೇ ವಿನಯಪೂರ್ವಕವಾಗಿ ಗೆಳೆಯ ಮೈತ್ರೇಯನ ಮೂಲಕವಾಗಿ ಸಂದೇಶವನ್ನು ಕಳಿಸುತ್ತಾನೆ.  ಮೈತ್ರೇಯನು ’ತತ್ರ ಭವಾನ್ ಚಾರುದತ್ತಃ ಶೀರ್ಷೇಽಂಜಲಿಂ ಕೃತ್ವಾ ಭವತೀಂ ವಿಜ್ಞಾಪಯತಿ’(ಮಾನ್ಯ ಚಾರುದತ್ತನು ತಲೆಬಾಗಿ ಅಂಜಲಿಬದ್ಧನಾಗಿ ನಿನ್ನಲ್ಲಿ ವಿಜ್ಞಾಪಿಸಿಕೊಳ್ಳುತ್ತಿದ್ದಾನೆ.)  ಎನ್ನುತ್ತ ಅವನ ಸಂದೇಶವನ್ನು ಅವಳಿಗೆ ತಿಳಿಸುತ್ತಾನೆ.

ಹೀಗೆ ಮೃಚ್ಛಕಟಿಕ ನಾಟಕದಲ್ಲಿ ಶೂದ್ರಕ ಕವಿ ಖಳ ಶಕಾರನ ಕಪಟ ವಿಧೇಯತೆಯನ್ನೂ, ನಾಯಕ ಚಾರುದತ್ತನ ನೈಜ ವಿಧೇಯತೆಯನ್ನೂ ಸುಂದರವಾಗಿ ಚಿತ್ರಿಸಿದ್ದಾನೆ.

ಮಹಾಬಲ ಭಟ್ಟ, ಗೋವಾ

ನಾರೀವಿಧೇಯರು-ಉದಯನ(ರತ್ನಾವಲೀ)

ಹರ್ಷಮಹಾರಾಜನ ಇನ್ನೊಂದು ಪ್ರಸಿದ್ಧ ನಾಟಿಕಾ ’ರತ್ನಾವಲೀ’. ಇಲ್ಲಿಯೂ ಉದಯನನೇ ನಾಯಕ. ನಾಯಿಕೆ ರತ್ನಾವಳಿ ಅಥವಾ ಸಾಗರಿಕೆ. ಸಿಂಹಳದೇಶದಿಂದ ಬರುವಾಗ ಸಮುದ್ರದ ನೀರಿಗೆ ಬಿದ್ದು ಅಲ್ಲಿಂದ ರಕ್ಷಿತಳಾಗಿ ಕೌಶಾಂಬಿಯನ್ನು ಸೇರಿದ್ದರಿಂದ ಅವಳಿಗೆ ಸಾಗರಿಕೆ ಎಂಬ ಅಭಿಧಾನ. ಈ ನಾಟಕದಲ್ಲಿಯೂ ನಾಯಕ ತನ್ನ ಪತ್ನಿ ವಾಸವದತ್ತೆಗೆ ಹೆದರಿ ಕಾಲಿಗೆ ಬೀಳುವ ಸನ್ನಿವೇಶ ಇದೆ. ಉದಯನನಿಗೆ ವಾಸವದತ್ತೆಯ ಮೇಲಿರುವ ಪ್ರೀತಿ ಪ್ರಶ್ನಾತೀತ. ಹಾಗಾಗಿಯೇ ವಾಸವದತ್ತೆ ಕೋಪಗೊಂಡಾಗಲೂ ಅವಳನ್ನು ಧಿಕ್ಕರಿಸದೆ ಕಾಲಿಗೆ ಬಿದ್ದು ಅನುನಯಿಸುತ್ತಾನೆ. ಉತ್ಕಟ ಪ್ರೀತಿಯಿಂದಾಗಿಯೇ ಸ್ವಲ್ಪ ಭಯವೂ ಇದೆ. ವಾಸವದತ್ತೆಗೆ ಉದಯನನನ್ನು ತನ್ನವನನ್ನಾಗಿಯೇ ಇರಿಸಿಕೊಳ್ಳಬೇಕೆಂಬ ಹಂಬಲ. ಹಾಗಾಗಿ ತನ್ನ ಪರಿಜನರಲ್ಲಿ ಸುಂದರವಾಗಿರುವ ಕನ್ಯೆಯರನ್ನು ಅವನಿಂದ ಬಚ್ಚಿಡಲು ಪ್ರಯತ್ನಿಸುತ್ತಾಳೆ. ನಂತರ ಆ ಕನ್ಯಕೆಯರು ಅಭಿಜಾತರೆಂದು ತಿಳಿದಾಗ ಅವರನ್ನು ಉದಯನನಿಗೆ ಒಪ್ಪಿಸುತ್ತಾಳೆ. ಇರಲಿ.

ಒಂದನೆಯ ಅಂಕದಲ್ಲಿ ಮದನಿಕೆ ಎಂಬ ವಾಸವದತ್ತೆಯ ಸಖಿ ರಾಜ್ಞಿಯ ನಿರೋಪವನ್ನು ರಾಜನಿಗೆ ತಿಳಿಸುತ್ತ ’ದೇವೀ ವಿಜ್ಞಾಪಯತಿ' ಎಂದು ಹೇಳುವಲ್ಲಿ 'ದೇವ್ಯಾಜ್ಞಾಪಯತಿ' ಎಂದು ಹೇಳಿ ನಂತರ ಸರಿಪಡಿಸಿಕೊಳ್ಳುತ್ತಾಳೆ. ರಾಜನಿಗೆ ಅವಳ ಮಾತನ್ನು ಕೇಳಿ ಅವ್ಯಕ್ತ ಆನಂದವಾಗುತ್ತದೆ. ’ಮದನಿಕೇ! ನನ್ವಾಜ್ಞಾಪಯತೀತ್ಯೇವ ರಮಣೀಯಮ್’ ಎಂದು ಹೇಳಿ ವಾಸವದತ್ತೆಯ ಬಗ್ಗೆ ತನಗಿರುವ ಆದರವನ್ನು ಉದಯನ ವ್ಯಕ್ತಪಡಿಸುತ್ತಾನೆ. ಮದನಪೂಜೆಯ ಸಂದರ್ಭದಲ್ಲಿ ರಾಜನನ್ನು ನೋಡಿ ಮನ್ಮಥನ ಬಾಣಗಳಿಗೆ ತುತ್ತಾದ ಸಾಗರಿಕೆ ಅಲ್ಲಿಯೇ ರಾಜನ ಚಿತ್ರವೊಂದನ್ನು ಬರೆಯುತ್ತಾಳೆ. ಅವಳ ಸಖಿ ಸುಸಂಗತೆ ಅದರ ಪಕ್ಕದಲ್ಲೇ ಸಾಗರಿಕೆಯ ಚಿತ್ರವನ್ನೂ ಬರೆಯುತ್ತಾಳೆ. ಅಲ್ಲಿಗೆ ಬಂದ ರಾಜ ಅದನ್ನು ನೋಡಿ ಸಾಗರಿಕೆಯಲ್ಲಿ ಅನುರಕ್ತನಾಗುತ್ತಾನೆ. ಅವರ ಪ್ರಣಯಚೇಷ್ಟೆಯನ್ನು ರಾಣಿಗೆ ತಿಳಿಸುವುದಾಗಿ ಸುಸಂಗತೆಯು ಹೇಳಿದಾಗ ರಾಜನು ಅವಳಿಗೆ ಆಭರಣಾದಿಗಳನ್ನು ಕೊಟ್ಟು ರಾಣಿಗೆ ತಿಳಿಸದಂತೆ ಅನುನಯಿಸುತ್ತಾನೆ. 

ಮುಂದೆ ವಿದೂಷಕನು ಸಾಗರಿಕೆಯನ್ನು ಅಪರವಾಸವದತ್ತೆ ಎಂದು ಕರೆದಾಗ ರಾಜನು ವಾಸವದತ್ತೆಯ ನಾಮಸ್ಮರಣದಿಂದಲೇ ಬೆಚ್ಚಿಬಿದ್ದು ತಾನು ಹಿಡಿದಿದ್ದ ಸಾಗರಿಕೆಯ ಕೈಯನ್ನು ಬಿಟ್ಟು ಬಿಡುತ್ತಾನೆ. ಆಷ್ಟೊಂದು ಭಯ ಅವನಿಗೆ ವಾಸವದತ್ತೆಯ ವಿಷಯದಲ್ಲಿ. ಅಲ್ಲಿಗೆ ಅವರ ಪ್ರಣಯಭಂಗ ಉಂಟಾಗುತ್ತದೆ. ಆದರೆ  ಕಾಕತಾಳೀಯವಾಗಿ ವಾಸವದತ್ತೆ ನಿಜವಾಗಿಯೂ ಅಲ್ಲಿಗೆ ಆಗಮಿಸುತ್ತಾಳೆ. ಅಲ್ಲಿ ಸಾಗರಿಕೆ ಉದಯನರ ಚಿತ್ರಗಳನ್ನು ನೋಡಿ ಕುಪಿತಳಾಗುತ್ತಾಳೆ. ಅವಳ ಕೋಪದ ಪ್ರಶ್ನೆಯನ್ನು ಕೇಳಿ ನಡುಗಿದ ರಾಜನಿಗೆ ಏನು ಹೇಳಬೇಕೆಂದೇ ತೋಚುವುದಿಲ್ಲ. ಆಗ ವಿದೂಷಕನೇ ಸುಳ್ಳು ಹೇಳುತ್ತಾನೆ. ರಾಜ್ಞಿಯು ಸಂಶಯಪೀಡಿತಳಾದರೂ ತಲೆ ನೋವಿನ ನೆವದಿಂದ ಅಲ್ಲಿಂದ ಹೋಗಲುದ್ಯುಕ್ತಳಾಗುತ್ತಾಳೆ. ಅವಳು ಕೋಪಗೊಂಡಿದ್ದಾಳೆ ಎಂದು ಅರಿತ ವತ್ಸರಾಜ ಅವಳ ಸೆರಗನ್ನು ಹಿಡಿದು ಅನುನಯಿಸಲು ಮುಂದಾಗುತ್ತಾನೆ.

ಪ್ರಸೀದೇತಿ ಬ್ರೂಯಾಮಿದಮಸತಿ ಕೋಪೇ ನ ಘಟತೇ 

ಕರಿಷ್ಯಾಮ್ಯೇವಂ ನೋ ಪುನರಿತಿ ಭವೇದಭ್ಯುಪಗಮಃ |

ನ ಮೇ ದೋಷೋಽಸ್ತೀತಿ ತ್ವಮಿದಮಪಿ ನ ಜ್ಞಾಸ್ಯಸಿ ಮೃಷಾ

ಕಿಮೇತಸ್ಮಿನ್ ವಕ್ತುಂ ಕ್ಷಮಮಿತಿ ನ ವೇದ್ಮಿ ಪ್ರಿಯತಮೇ ||


ಓವೋ ದೇವಿಯೆ ಶಾಂತಳಾಗೆನೆ ಕಂಡುಬಾರದು ನೀನು ಕೋಪಗೊಂಡುದು

ಮತ್ತೆ ನಾನಿಂತೆಸೆಗೆನೆಂದೆನೆ ನಾನು ಮಾಡಿದ ತಪ್ಪಿನೊಪ್ಪಿಗೆಯಪ್ಪುದು |

ನನ್ನ ಕಡೆಯಿಂದಾವ ತಪ್ಪೂ ಇಲ್ಲವೆಂದೆನೆ  ನೀನು ಸುಳ್ಳೆಂದೆನುವೆ

ಆದ ಕಾರಣ ಏನು ಪೇಳ್ವುದು ಯುಕ್ತವೆನುವುದನರಿಯದಿಂದಾನಿರ್ಪೆನು ||


ಎಷ್ಟೇ ಹೇಳಿದರೂ ಕೇಳಿದೆ ದೇವಿ ಹೊರಟೇ ಬಿಟ್ಟಳು. ಅವಳನ್ನು ಅನುನಯಿಸುವುದಕ್ಕಾಗಿ ಉದಯನನೂ ಅಂತಃಪುರದತ್ತ ಸಾಗುತ್ತಾನೆ.


ವಿದೂಷಕನ ಉಪಾಯದಿಂದ ಸಾಗರಿಕೆಯು ವಾಸವದತ್ತೆಯ ವೇಷವನ್ನೂ ಅವಳ ಸಖಿ ಸುಸಂಗತೆಯು ವಾಸವದತ್ತೆಯ ಸಖಿ ಕಾಂಚನಮಾಲಾಳ ವೇಷವನ್ನೂ ಧರಿಸಿ ಉದಯನನನ್ನು ಭೇಟಿಯಾಗಲು ಬರುವ ಯೋಜನೆ ತಯಾರಾಗುತ್ತದೆ. ಆದರೆ ಇದರ ಸುಳಿವು ಹೇಗೋ ವಾಸವದತ್ತೆಗೆ ಸಿಕ್ಕಿಬಿಡುತ್ತದೆ. ಅವಳೇ ಮೊದಲು ಸಂಕೇತಸ್ಥಾನಕ್ಕೆ ಹೋಗುತ್ತಾಳೆ. ರಾಜನು ಸಾಗರಿಕೆಯೆಂದೇ ತಿಳಿದು ಪ್ರೇಮನಿವೇದನೆಯನ್ನು ಮಾಡಿಕೊಂಡಾಗ ರೋಷಗೊಂಡು ತಪಿಸುತ್ತಾಳೆ. ಆಗ ರಾಜನು ಅನನ್ಯಗತಿಕನಾಗಿ ಅವಳ ಪಾದಗಳ ಮೇಲೆ ತಲೆಯಿಡುತ್ತಾ ಬೇಡಿಕೊಳ್ಳುತ್ತಾನೆ.


ಆತಾಮ್ರತಾಮಪನಯಾಮಿ ವಿಲಕ್ಷ ಏಷ

ಲಾಕ್ಷಾಕೃತಾಂ ಚರಣಯೋಸ್ತವ ದೇವಿ ಮೂರ್ಧ್ನಾ |

ಕೋಪೋಪರಾಗಜನಿತಾಂ ತು ಮುಖೇಂದುಬಿಂಬೇ

ಹರ್ತುಂ ಕ್ಷಮೋ ಯದಿ ಪರಂ ಕರುಣಾಮಯಿ ಸ್ಯಾತ್ || ರತ್ನಾವಲೀ, ತೃತೀಯೋಂಕಃ, ೧೪


ಅಲತಿಗೆ ರಸದಿಂದಾದೀ ನಿನ್ನಡಿಯೊಂದರುಣತೆಯನು ನಾನಿಂದು

ಬೇಗನೆ ನನ್ನೀ ಮುಡಿಯಿಂದುಬ್ಬುತೆ ತೊಡೆವೆನು ಲಜ್ಜೆಯೊಳುರೆಸಂದು |

ಆದರೆ ಕೋಪಗ್ರಹಣದೊಳಾದೀವದನೇಂದುವಿನೊಂದರುಣತೆಯ

ತೊಡೆಯಲು ಶಕ್ತನು ನಾನಹೆನೆನ್ನೊಳು ತೋರುವುದಾದರೆ ನೀಂ-ದಯೆಯ|| ಕನ್ನಡ ಹರ್ಷಮಹಾಸಂಪುಟ, ಪು.೯೨


ಆದರೆ ಖತಿಗೊಂಡ ರಾಣಿ ಸಮಾಧಾನವನ್ನು ಪಡೆಯದೆ ಹೊರಡಲು ಅಣಿಯಾಗುತ್ತಾಳೆ. ಕಾಲಿಗೆ ಬಿದ್ದಿರುವ ಪತಿಯನ್ನು ಹಾಗೆ ತಿರಸ್ಕರಿಸುವುದು ಯೋಗ್ಯವಲ್ಲವೆಂದು ಕಾಂಚನಮಾಲೆಯು ಹೇಳಿದರೂ ಕೇಳದೆ ಹೊರಟುಹೋಗುತ್ತಾಳೆ. ಉದಯನ ಮಾತ್ರ “ದೇವೀಪ್ರಸಾದನಂ ಮುಕ್ತ್ವಾ ನಾನ್ಯದತ್ರೋಪಾಯಂ ಪಶ್ಯಾಮಿ' ಎನ್ನುತ್ತ ಅವಳನ್ನೇ ಅನುಸರಿಸುತ್ತಾನೆ.

ಹೀಗೆ ಹೋಗುವಾಗ ಮಧ್ಯೆ ವಾಸವದತ್ತೆಯ ವೇಷದಲ್ಲಿ ನೇಣುಹಾಕಿಕೊಳ್ಳಲು ಪ್ರಯತ್ನಿಸುತ್ತಿರುವ ಸಾಗರಿಕೆ ಗೋಚರವಾಗುತ್ತಾಳೆ. ಅವಳನ್ನು ವಾಸವದತ್ತೆಯೆಂದೇ ಭ್ರಮಿಸಿದರೂ ನಂತರ ಸಾಗರಿಕೆಯೆಂದು ತಿಳಿದು ಹರ್ಷವನ್ನು ಹೊಂದುತ್ತಾನೆ ರಾಜ. ಅತ್ತ ಕಾಲಿಗೆ ಬಿದ್ದ ಆರ್ಯಪುತ್ರನನ್ನು ಅಲಕ್ಷಿಸಿ ನಿಷ್ಠುರಳಾದ ಬಗ್ಗೆ ಬೇಸರಿಸಿಕೊಂಡ ವಾಸವದತ್ತೆ ಅವನನ್ನು ಅನುನಯನಗೊಳಿಸಲು ಮತ್ತದೇ ಸ್ಥಾನಕ್ಕೆ ಬರುತ್ತಾಳೆ. ಅಷ್ಟರಲ್ಲಿ ಸಾಗರಿಕೆ ಹಾಗೂ ಉದಯನರ ಸಂವಾದ ಆರಂಭವಾಗಿರುತ್ತದೆ. ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾದ ದೇವಿಯ ವಿಷಯದಲ್ಲಿ ಯಾಕೆ ಅಪರಾಧವನ್ನು ಎಸಗುತ್ತೀ ಎಂದು ಕೇಳಿದಾಗ ರಾಜ ಹೇಳುತ್ತಾನೆ – 


ಶ್ವಾಸೋತ್ಕಂಪಿನಿ ಕಂಪಿತಂ ಕುಚಯುಗೇ ಮೌನೇ ಪ್ರಿಯಂ ಭಾಷಿತಂ

ವಕ್ತ್ರೇಽಸ್ಯಾಃ ಕುಟಿಲೀಕೃತಭ್ರುಣಿ ತಥಾ ಯಾತಂ ಮಯಾ ಪಾದಯೋಃ |

ಇತ್ಥಂ ನಃ ಸಹಜಾಭಿಜಾತಜನಿತಾ ಸೇವೈವ ದೇವ್ಯಾಃ ಪರಮ್

ಪ್ರೇಮಾಬಂಧವಿವರ್ಧಿತಾಧಿಕರಸಾ ಪ್ರೀತಿಸ್ತು ಯಾ ಸಾ ತ್ವಯಿ || ರತ್ನಾವಲೀ, ತೃತೀಯೋಂಕಃ, ೧೮


ಯತ್ನದಿಂದುಸಿರೆಳೆದು ಬಿಡುವಂದು ಅದುರುತಿರು-

ವವಳ ಆ ಕುಚಯುಗವು ನಡುಗಿದೆನು ನಾನು 

ಮೌನದಿಂದವಳಿರ್ದವೇಳೆಯೊಳು ಅವಳಿಗತಿ-

ಹಿತವಾಗಿ ಸವಿನುಡಿಯನಾಡಿದೆನು ನಾನು

ಕೋಪದಿಂದಿರದವಳು ಹುಬ್ಬು ಗಂಟಿಕ್ಕಿರಲು

ಅವಳ ಆ ಪಾದಗಳಿಗೆರಗಿದೆನು ನಾನು

ಅವಳ ಆ ಸದ್ವಂಶ ಸಂಜನಿತ ಅಭಿಮಾನ-

ಕೊಪ್ಪುವಷ್ಟನೆ ನಾನು ಸೇವೆಯೆಸಗಿದೆನು

ಪ್ರೇಮಾನುಬಂಧದಿಂದಧಿಕವನೆ ವೃದ್ಧಿಸಿದ

ರಸಸಾರಸರ್ವವನು ನಿನಗೊಪ್ಪಿಸಿದೆನು.


ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಾಸವದತ್ತೆಗೆ ನಾಯಿಯ ಬಾಲದಂತೆ ಮತ್ತೆ ಡೊಂಕಾದ ರಾಜನ ಮೇಲೆ ಅಪಾರ ಸಿಟ್ಟುಬಂತು. ಅವಳನ್ನು ನೋಡಿ ಬೆಚ್ಚಿದ ವತ್ಸರಾಜ ಮತ್ತೆ ಅವಳ ಕಾಲಿಗೆರಗಿ ತಪ್ಪಾಯಿತೆಂದು ಅಲವೊತ್ತುಕೊಂಡ. ವೇಷಸಾದೃಶ್ಯದಿಂದಾಗಿ ಈ ರೀತಿಯ ಸಂಭ್ರಾಂತಿಯುಂಟಾಯಿತು ಎಂದು ಅನುನಯಿಸಲು ಯತ್ನಿಸಿದ. ಆದರೆ ಎಲ್ಲವೂ ಪ್ರತ್ಯಕ್ಷಗೋಚರವೇ ಆಗಿದ್ದರಿಂದ ಮಹಾರಾಜ್ಞಿ ಅವನನ್ನು ತಿರಸ್ಕರಿಸಿ ವಿದೂಷಕನನ್ನೂ ಸಾಗರಿಕೆಯನ್ನೂ ಬಂಧಿಸಿ ಮುನ್ನಡೆಯುತ್ತಾಳೆ.


ಮಹಾಬಲ ಭಟ್ಟ, ಗೋವಾ

Friday, October 18, 2024

ನಾರೀವಿಧೇಯರು - ಉದಯನ (ಪ್ರಿಯದರ್ಶಿಕಾ)

ಹರ್ಷಚಕ್ರವರ್ತಿಯ ಪ್ರಿಯದರ್ಶಿಕಾ ನಾಟಕದಲ್ಲಿ ನಾಯಕ ಉದಯನ ತನ್ನ ಪತ್ನಿ ವಾಸವದತ್ತೆಯ ಕಾಲಿಗೆರಗುವ ಸಂದರ್ಭ ಚಿತ್ರಿತವಾಗಿದೆ. ವಾಸವದತ್ತೆಯಲ್ಲಿ ನ್ಯಸ್ತವಾಗಿಟ್ಟಿರುವ ದೃಢವರ್ಮಸುತೆ ಪ್ರಿಯದರ್ಶಿಕೆಯು ಪ್ರಾಯಪ್ರಬುದ್ಧೆಯಾದಾಗ ರಾಜನ ಕಣ್ಣಿಗೆ ಬಿದ್ದು ಪ್ರೇಮಪ್ರಕರಣದ ಆರಂಭವಾಗುತ್ತದೆ. ವಾಸವದತ್ತೆ ಹಾಗೂ ಉದಯನರ ಪ್ರಣಯಪ್ರಸಂಗದ ನಾಟಕವೊಂದು ಕೌಮುದೀಮಹೋತ್ಸವದ ಸಂದರ್ಭದಲ್ಲಿ ಅರಮನೆಯಲ್ಲಿ ಏರ್ಪಾಡಾಗಿರುತ್ತದೆ. ಅದರಲ್ಲಿ ಪ್ರಿಯದರ್ಶಿಕೆ ವಾಸವದತ್ತೆಯ ಪಾತ್ರವನ್ನು ವಹಿಸಿದರೆ, ಅವಳ ಗೆಳತಿ ಮನೋರಮೆ ವತ್ಸರಾಜನ ಪಾತ್ರವನ್ನು ವಹಿಸುವುದೆಂದು ನಿಶ್ಚಯವಾಗಿತ್ತು. ಆದರೆ ರಾಜನ ನರ್ಮ ಸಚಿವ ವಿದೂಷಕ ವಸಂತಕ ಹಾಗೂ ಮನೋರಮೆಯರು ಉದಯನನಿಗೆ ಪ್ರಿಯದರ್ಶಿಕೆಯನ್ನು ಹತ್ತಿರದಿಂದ ನೋಡುವ, ಸ್ಪರ್ಶಿಸುವ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಸ್ವಯಂ ಉದಯನನೇ ಉದಯನನಾಗಿ ರಂಗಪ್ರವೇಶಿಸುವ ಯೋಜನೆಯನ್ನು ಹಾಕಿದರು. ನಾಟಕ ಮುಗಿದಮೇಲೆ ಹೇಗೋ ಈ ವಿಷಯವನ್ನು ತಿಳಿದ ವಾಸವದತ್ತೆ ಕೆಂಡಾಮಂಡಲಳಾದಳು. ಅವಳ ಕೋಪವನ್ನು ತಣಿಸುವುದಕ್ಕಾಗಿ ಎಲ್ಲರೆದುರೇ ಅವಳ ಕಾಲಿಗೆ ಬೀಳುತ್ತಾನೆ ಕೌಶಾಂಬೀಶ ಉದಯನ.


ಸ್ನಿಗ್ಧಂ ಯದ್ಯಪಿ ವೀಕ್ಷಿತಂ ನಯನಯೋಸ್ತಾಮ್ರಾ ತಥಾಪಿ ದ್ಯುತಿ-

ರ್ಮಾಧುರ್ಯೇಽಪಿ ಸತಿ ಸ್ಖಲತ್ಯನುಪದಂ ತೇ ಗದ್ಗದಾ ವಾಗಿಯಮ್|

ನಿಶ್ವಾಸಾ ನಿಯತಾ ಅಪಿ ಸ್ತನಭರೋತ್ಕಂಪೇನ ಸಂಲಕ್ಷಿತಾಃ

ಕೋಪಸ್ತೇ ಪ್ರಕಟಪ್ರಯತ್ನವಿಘೃತೋಽಪ್ಯೇಷ ಸ್ಫುಟಂ ಲಕ್ಷ್ಯತೇ || 

(ಪ್ರಿಯದರ್ಶಿಕಾ ತೃತೀಯೋಂಕಃ, ೧೩)


(ಸ್ನಿಗ್ಧವಾದುದು ನಿನ್ನ ನೋಟವು ಈಗ ಕಡು ಕೆಂಪೇರಿದೆ. 

ಮಧುರವಾಗಿಹ ನಿನ್ನ ಗದ್ಗದ ಪದಪದಕೆ ತೊದಲುತ್ತಿದೆ

ನಿಯತವಿದ್ದರು ನಿನ್ನ ಉಸಿರಿದು ನಡುಕವೆದೆಯೊಳು ತೋರಿದೆ

ಯತ್ನದಿಂದವಿತಿದ್ದರೂ ಈ ಕೋಪ ಸಲೆ ಹೊರತೋರಿದೆ.)

(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)


ಎಂದು ಮಹಾರಾಣಿಯ ಕೋಪವನ್ನು ವರ್ಣಿಸುತ್ತ ’ಪ್ರಸೀದ ಪ್ರಿಯೇ ಪ್ರಸೀದ’ ಎಂದು ಬೇಡುತ್ತ ಅವಳ ಚರಣಗಳಿಗೆ ಮಣಿಯುತ್ತಾನೆ. ಅದಕ್ಕೆ ವಾಸವದತ್ತೆಯು ಆರಣ್ಯಿಕೆಯ ರೂಪದಲ್ಲಿರುವ ಪ್ರಿಯದರ್ಶಿಕೆಯನ್ನು ಎಳೆಯುತ್ತ ’ನೀನು ಕೋಪಗೊಂಡಿರುವೆಯೆಂದು ತಿಳಿದು ರಾಜನು ಅನುನಯಿಸುತ್ತಿರುವನು, ಹೋಗು’ ಎನ್ನುತ್ತಾ ತನ್ನ ಕೋಪವನ್ನು ಮರೆಮಾಚಲು ಯತ್ನಿಸುತ್ತಾಳೆ. ಆಗ ರಾಜ ಮತ್ತೆ ಅವಳನ್ನು ಅನುನಯಿಸುತ್ತಾನೆ.


ಬರಿದೆ ಹುಬ್ಬನ್ನೇಕೆ ಮುರಿಯುವೆ ಹಣೆಯ ಈ ಶಶಿಗೇಕೆ ಕುಂದನ್ನೆಸಗುವೆ?

ನಡುಗುದುಟಿಗಳ ನೆಲರಿಗದುರುವ ಬಂಧುಜೀವದ ನನಗೆ ಏಕೆಣೆಯೆನಿಸುವೆ?

ಎದೆಯ ಕುಚಯುಗಭಾರದಿಂದೀ ನಿನ್ನ ಬಡುನಡು ನೋಡು ಕಡು ಬಸವಳಿದಿದೆ

ನಿನ್ನ ಚಿತ್ತವ ಸೆಳೆಯಲೆಂದಾನಿಂತು ಆಡಿದೆ ಕೋಪವನು ಬಿಡೆ ಮಾನಿನಿ. 

(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)


ಎಂದು ಹೇಳುತ್ತಾ ಮತ್ತೆ ಅವಳ ಕಾಲಿಗೆ ಬೀಳುತ್ತಾನೆ. ಅಷ್ಟಾದರೂ ವಾಸವದತ್ತೆಯ ಕೋಪ ಇಳಿಯುವುದಿಲ್ಲ. ರಾಜನಿಗೆ ಪ್ರಿಯಸಮಾಗಮದ ಖುಷಿಯ ಜೊತೆಗೆ ಪಟ್ಟದರಸಿಯ ಕೋಪದ ಭೀತಿ. ’ಭೀತಶ್ಚೋತ್ಸುಕಮಾನಸಶ್ಚ ಮಹತಿ ಕ್ಷಿಪ್ತೋಽಸ್ಮ್ಯಹಂ ಸಂಕಟೇ’ (ಭೀತಿ ಮೇಣೌತ್ಸುಕ್ಯ ಭಾವದೊಳಿಹೆನು ನಾನಿಂದೋವೊ ಬಹು ಸಂಕಟದೊಳು.) ಎಂದು ವಿದೂಷಕನಲ್ಲಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತ ’ಶಯ್ಯಾಗೃಹಕ್ಕೆ ಹೋಗಿ ದೇವಿಯನ್ನು ಪ್ರಸನ್ನಗೊಳಿಸುವ ಉಪಾಯವನ್ನು ಚಿಂತಿಸುತ್ತೇನೆ’ ಎಂದು ಹೋಗುತ್ತಾನೆ.

ವಾಸವದತ್ತೆಯನ್ನು ಪ್ರಸನ್ನಗೊಳಿಸುವುದೊಂದೇ ಅವಳ ಬಂಧನದಲ್ಲಿರುವ ಪ್ರಿಯದರ್ಶಿಕೆಯನ್ನು ಬಿಡಿಸುವ ಉಪಾಯ ಎಂದು ಉದಯನ ಯೋಚಿಸುತ್ತಿದ್ದಾನೆ. ಚತುರಂಗ ಬಲದ ಅಧಿಪತಿ ತಾನಾದರೂ ಪತ್ನಿಯ ಕೋಪದ ಎದುರಲ್ಲಿ ಅದಾವುದೂ ಪ್ರಯೋಜನಕ್ಕೆ ಬಾರದು ಎಂದು ಅವನು ಅರಿತಿದ್ದಾನೆ. ಅದಕ್ಕಾಗಿ ಅವನು ಎಷ್ಟು ಬಾರಿಯಾದರೂ ಅಂಜಲಿಬದ್ಧನಾಗಿ ಅವಳ ಕಾಲಿಗೆರಗಲು ಸಿದ್ಧನಿದ್ದಾನೆ. ಅದನ್ನೇ ವಿದೂಷಕನಿಗೆ ಹೇಳುತ್ತಾನೆ – ’ಕಿಂ ತಿಷ್ಠಾಮಿ ಕೃತಾಂಜಲಿರ್ನಿಪತಿತೋ ದೇವ್ಯಾಃ ಪುರಃ ಪಾದಯೋಃ’.(ಪ್ರಿಯದರ್ಶಿಕಾ, ಚತುರ್ಥೋಂಕಃ ೧) “ಅಲ್ಲದಿರೆ ಕೈಮುಗಿಯುತವಳ ಪಾದಾಬ್ಜಯುಗಳಕೆ ಅಡ್ಡಬೀಳುತ ಬೇಡಿಕೊಳ್ಳಲೆ ದೇವಿಯ” – ಕನ್ನಡ ಹರ್ಷಮಹಾಸಂಪುಟ ಪು.ಸಂ.೩೮

ರಾಜ ಲಜ್ಜೆಯಿಂದ ಮಹಾರಾಣಿಯ ಬಳಿಗೆ ಹೋಗುತ್ತಾನೆ. ಅವನನ್ನು ಕಂಡ ರಾಣಿ ಪೀಠವನ್ನು ಬಿಟ್ಟೇಳುತ್ತಾಳೆ. ಉದಯನ ಅದರ ಆವಶ್ಯಕತೆ ಇಲ್ಲ ಎಂದು ಹೇಳುತ್ತಾನೆ. ಅವಳ ನೋಟದ ಪ್ರಸಾದಕ್ಕಾಗಿ ಕಾಯುತ್ತಿರುವವನು ತಾನು ಎಂದು ಹೇಳಿಕೊಳ್ಳುತ್ತಾನೆ. ವಸ್ತುತಃ ವಾಸವದತ್ತೆಯು ತನ್ನ ಚಿಕ್ಕಮ್ಮನ ಕುರಿತಾಗಿ ಯೋಚಿಸುತ್ತಿದ್ದಳು. ಚಿಂತೆಯಿಂದ ಪೀಠ ಬಿಟ್ಟು ನೆಲದ ಮೇಲೆ ಕುಳಿತ ರಾಣಿಯನ್ನು ನೋಡಿ ರಾಜನೂ ನೆಲದ ಮೇಲೆ ಕುಳಿತು ಕೈಮುಗಿದುಕೊಂಡು ಪ್ರಸನ್ನಳಾಗುವಂತೆ ಪ್ರಾರ್ಥಿಸುತ್ತಾನೆ.  ಕಿಮೇವಂ ಪ್ರಣತೇಽಪಿ ಮಯಿ ಗಂಭೀರತರಂ ಕೋಪಮುದ್ವಹಸಿ. 


“ಸ್ತಿಮಿತವಾಗಿಹ ನಿನ್ನ ಕೋಪವು ಮುಸುಕಿನೊಳಗಿನ ಗುದ್ದಿನಂದದೆ ನನ್ನ ನೋಯಿಸುತಿರ್ಪುದು.” (ಕೋಪಸ್ತೇ ಸ್ತಿಮಿತೋ ನಿಪೀಡಯತಿ ಮಾಂ ಗೂಢಪ್ರಹಾರೋಪಮಮ್).

ಎನ್ನುತ್ತ ಮತ್ತೆ ಅವಳ ಕಾಲಿಗೆರಗುತ್ತಾನೆ. ನಂತರ ಅವಳ ದುಃಖದ ಕಾರಣವನ್ನು ತಿಳಿದು ಸಮಾಧಾನಪಡಿಸುತ್ತಾನೆ. ವಾಸವದತ್ತೆಯ ಬಂಧುಗಳ ಕಷ್ಟನಿವಾರಣೆಗಾಗಿ ವತ್ಸರಾಜ ವಾಸವದತ್ತೆ ಕೇಳಿಕೊಳ್ಳುವ ಮೊದಲೇ ಕಾರ್ಯಪ್ರವೃತ್ತನಾಗಿದ್ದ. ಅದು ವಾಸವದತ್ತೆಯ ಬಗ್ಗೆ ಉದಯನನಿಗಿರುವ ಪ್ರೀತ್ಯಾದರಗಳನ್ನು ತೋರಿಸುತ್ತದೆ. ಕೊನೆಯಲ್ಲಿ ಪ್ರಿಯದರ್ಶಿಕೆಯ ಕೈಯನ್ನು ರಾಜನ ಕೈಯಲ್ಲಿಟ್ಟು ಪರಿಗ್ರಹಿಸಲು ಒತ್ತಾಯಿಸಿದ ವಾಸವದತ್ತೆಗೆ ’ದೇವೀ ಪ್ರಭವತಿ| ಕುತೋಽಸ್ಮಾಕಮನ್ಯಥಾ ಕರ್ತುಂ ವಿಭವಃ?’ (ದೇವಿಯದೇ ಅಧಿಕಾರ. ಬೇರೆ ರೀತಿಯಲ್ಲಿ ವರ್ತಿಸಲು ನಮಗೆ ಸಾಮರ್ಥ್ಯವೆಲ್ಲಿದೆ?)ಎನ್ನುತ್ತಾನೆ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ. 

ಮಹಾಬಲ ಭಟ್ಟ, ಗೋವಾ

Thursday, October 17, 2024

ನಾರೀವಿಧೇಯರು-ಯಕ್ಷ-ಮೇಘದೂತಮ್

 


ಮೇಘದೂತಮ್ ಮಹಾಕವಿ ಕಾಳಿದಾಸನ ಅಮೋಘಖಂಡಕಾವ್ಯ. ಇದರಲ್ಲಿ ಯಕ್ಷನೊಬ್ಬ ತನ್ನ ಪತ್ನಿ ಯಕ್ಷಿಗೆ ವಿರಹ ಸಂದೇಶವನ್ನು ಕಳಿಸುತ್ತಾನೆ. ಅಲ್ಲಿ ಅಲಕಾನಗರಿಯನ್ನು ವರ್ಣಿಸುತ್ತ ಅಲ್ಲಿರುವ ರಕ್ತಾಶೋಕವೃಕ್ಷ ಹಾಗೂ ಕೇಸರತರುವಿನ ಬಗ್ಗೆ ಬರೆಯುತ್ತಾನೆ. ರಕ್ತಾಶೋಕವು ತನ್ನಂತೆ ನಿನ್ನ ಸಖಿಯ ವಾಮಪಾದವನ್ನು ಬಯಸುತ್ತದೆ ಹಾಗೂ ಕೇಸರ ತರು ನನ್ನಂತೆ ಅವಳ ಬಾಯಿಯಿಂದ ಚಿಮ್ಮುವ ಮದಿರೆಯನ್ನು ಬಯಸುತ್ತದೆ ಎನ್ನುತ್ತಾನೆ.

ಏಕಸ್ಸಖ್ಯಾಸ್ತವ ಹಸ ಮಯಾ ವಾಮಪಾದಾಭಿಲಾಷೀ

ಕಾಂಕ್ಷತ್ಯನ್ಯೋ ವದನಮದಿರಾಂ ದೋಹದಚ್ಛದ್ಮನಾಸ್ಯಾಃ|| ಉತ್ತರಮೇಘ, ೧೭


(ನನ್ನಂತೆ ಚೆನ್ನಸುಗೆ ಕಾತರಿಸುತಿಹುದಲ್ಲಿ 

ನಿನ್ನ ಗೆಳತಿಯ ವಾಮಚರಣಕೆಳಸಿ

ದೋಹದವ್ಯಾಜದಿಂದೆನ್ನವೊಲು ಬಯಸುತಿದೆ

ಕೇಸರವು ಸತಿಯ ಮುಖಮದಿರೆಗೆಳಸಿ). ಕನ್ನಡ ಕಾಳಿದಾಸ ಮಹಾಸಂಪುಟ, ಪು.೫೯


ರಾಮಗಿರಿಯ ಆಶ್ರಮದಲ್ಲಿ ತನ್ನ ಪ್ರಿಯೆಯ ವಿರಹವ್ಯಥೆಯನ್ನು ಕಳೆಯಲು ಕಲ್ಲಿನ ಮೇಲೆ ಧಾತುರಾಗವನ್ನು ಬಳಸಿ ಚಿತ್ರವನ್ನು ಬಿಡಿಸಲು ಪ್ರಯತ್ನಿಸುತ್ತಾನೆ ಯಕ್ಷ. ಪ್ರಣಯಕುಪಿತೆಯಾದ ಅವಳನ್ನು ಚಿತ್ರಿಸಿ ಅವಳ ಕಾಲಿಗೆ ಬಿದ್ದ ತನ್ನನ್ನು ಚಿತ್ರಿಸುವುದು ಯಕ್ಷನ ಇಚ್ಛೆ. ಆದರೆ ಕಣ್ಣೀರು ಕಣ್ಣನ್ನು ಅಂಧಗೊಳಿಸಿ ಅದನ್ನು ಆಗಗೊಡುವುದಿಲ್ಲ ಎಂದು ಮೇಘನ ಮೂಲಕ ಸಂದೇಶ ಕಳಿಸುತ್ತಾನೆ.


ತ್ವಾಮಾಲಿಖ್ಯ ಪ್ರಣಯಕುಪಿತಾಂ ಧಾತುರಾಗೈಶ್ಶಿಲಾಯಾ-

ಮಾತ್ಮಾನಂ ತೇ ಚರಣಪತಿತಂ ಯಾವದಿಚ್ಛಾಮಿ ಕರ್ತುಂ|

ಅಸ್ರೈಸ್ತಾವನ್ಮುಹುರುಪಚಿತೈರ್ದೃಷ್ಟಿರಾಲುಪ್ಯತೇ ಮೇ

ಕ್ರೂರಸ್ತಸ್ಮಿನ್ನಪಿ ನ ಸಹತೇ ಸಂಗಮಂ ನೌ ಕೃತಾಂತಃ || ಉತ್ತರಮೇಘ, ೪೫


(ಅರೆಗಳಲ್ಲಿ ಕೆಂಗಾವಿಯಿಂದ ಹುಸಿ ಮುನಿಸಿನವಳ ಬರೆದು

ನಿನ್ನ ಮೆಲ್ಲಡಿಗೆ ಕೆಡಹಿಕೊಳಲು ಬರುತಿರಲು ಮುಂದುವರಿದು|

ಕಣ್ಣು ತುಂಬಿ ಕಂಗೆಡಿಸಿ ಕಂಬನಿಯ ಹಳ್ಳ ಹರಿದಿತಲ್ಲಽ

ಚಿತ್ರದಲ್ಲಿ ಕೂಡುವುದು ಕೂಡ ಆ ಇದಿಗೆ ಸೇರಲಿಲ್ಲಽ||) ಅಂಬಿಕಾತನಯದತ್ತ,ಕನ್ನಡ ಮೇಘದೂತ, ಉ.ಮೇ. ೪೨


ಮಹಾಬಲ ಭಟ್ಟ, ಗೋವಾ

ನಾರೀವಿಧೇಯರು-ದುಷ್ಯಂತ(ಅಭಿಜ್ಞಾನ ಶಾಕುಂತಲಮ್)


 ಕವಿಕುಲಗುರುವಿನ ಮಾಸ್ಟರ್ ಪೀಸ್ ಎಂದು ಕರೆಯಿಸಿಕೊಳ್ಳುವ ಅಭಿಜ್ಞಾನಶಾಕುಂತಲಮ್ ಗ್ರಂಥದಲ್ಲಿಯೂ ಕಥಾನಾಯಕ ದುಷ್ಯಂತ ಶಕುಂತಲೆಯ ಪಾದಕ್ಕೆರಗುವ ಸನ್ನಿವೇಶ ಇದೆ. ಕಣ್ವಾಶ್ರಮದಲ್ಲಿ ಕಾಮಜ್ವರದಿಂದ ಬಳಲುತ್ತಿರುವ ಶಕುಂತಲೆಯ ಉಪಚಾರ ಮಾಡಲು ಮುಂದಾದ ದುಷ್ಯಂತ ’ಕಮಲದಂತೆ ಕೆಂಪಾಗಿರುವ ನಿನ್ನ ಚರಣಗಳನ್ನು ನನ್ನ ತೊಡೆಯಮೇಲಿರಿಸಿಕೊಂಡು ಒತ್ತಲೇನು?’ (ಅಂಕೇ ನಿಧಾಯ ಕರಭೋರು ಯಥಾಸುಖಂ ತೇ | ಸಂವಾಹಯಾಮಿ ಚರಣಾವುತ ಪದ್ಮತಾಮ್ರೌ || ಅಭಿಜ್ಞಾನಶಾಕುಂತಲಮ್, ತೃತೀಯೋಂಕಃ, ೧೯)

ಎಂದು ಕೇಳುತ್ತಾನೆ.


ದುರ್ವಾಸಮುನಿಯ ಶಾಪದಿಂದಾಗಿ ಶಕುಂತಲೆಯನ್ನು ತಿರಸ್ಕರಿಸಿದ ದುಷ್ಯಂತ ನಿಜವನ್ನು ತಿಳಿದಾಗ ಅತ್ಯಂತ ದುಃಖಕ್ಕೆ ಒಳಗಾಗುತ್ತಾನೆ. ಇಂದ್ರನ ಸಹಾಯಕ್ಕಾಗಿ ದೇವಲೋಕಕ್ಕೆ ಹೋಗಿ ಹಿಂದಿರುಗಿ ಬರುವಾಗ ಮಾರೀಚಾಶ್ರಮದಲ್ಲಿ ಶಕುಂತಲೆಯ ದರ್ಶನವಾಗುತ್ತದೆ. ಆಗ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತರೂಪವಾಗಿ ಶಕುಂತಲೆಯ ಕಾಲಿಗೆ ಬಿದ್ದು ಕ್ಷಮೆಯನ್ನು ಯಾಚಿಸುತ್ತಾನೆ. 

ಸುತನು ಹೃದಯಾತ್ಪ್ರತ್ಯಾದೇಶವ್ಯಲೀಕಮಪೈತು ತೇ

ಕಿಮಪಿ ಮನಸಃ ಸಂಮೋಹೋ ಮೇ ತದಾ ಬಲವಾನಭೂತ್|

ಪ್ರಬಲತಮಸಾಮೇವಂಪ್ರಾಯಾಃ ಶುಭೇಷು ಹಿ ವೃತ್ತಯಃ 

ಸ್ರಜಮಪಿ ಶಿರಸ್ಯಂಧಃ ಕ್ಷಿಪ್ತಾಂ ಧುನೋತ್ಯಹಿಶಂಕಯಾ ||


(ಸುತನು ಬಿಡು ನೀ ಕೆಮ್ಮನಿನಿಯನುತೊರೆದನೆನುವೊಂದಳಲನು

ಏನೋ ಬಲವತ್ತರದ ಸಮ್ಮೋಹನವು ಮುಸುಕಿತ್ತೆದೆಯನು |

ತಮವು ದಟ್ಟೈಸಿರ್ಪರಿಂತಾಡುವರು ಕುರಿತಹ ಶುಭವನು 

ಭ್ರಮಿಸಿ ಹಾವೆಂದೆಸೆವನಂಧನು ಕೊರಳಿಗಿರಿಸಿದ ಸರವನು || )


ಶಕುಂತಲೆಯು ಇದು ತನ್ನ ಜನ್ಮಾಂತರ ಪಾಪದ ಫಲವಾಗಿರಬಹುದು, ನಿನ್ನದೇನು ತಪ್ಪಿಲ್ಲ ಎನ್ನುತ್ತ ಪತಿಯನ್ನು ಆದರಿಸುತ್ತಾಳೆ.


ಮಹಾಬಲ ಭಟ್ಟ, ಗೋವಾ

Wednesday, October 16, 2024

ನಾರೀವಿಧೇಯರು-ಅಗ್ನಿಮಿತ್ರ-ಮಾಲವಿಕಾಗ್ನಿಮಿತ್ರಮ್


ಕಾಳಿದಾಸನ ಇನ್ನೊಂದು ಪ್ರಣಯಭರಿತ ಕೃತಿ ”ಮಾಲವಿಕಾಗ್ನಿಮಿತ್ರಮ್’. ಈ ಕೃತಿಯ ಮೂರನೆಯ ಅಂಕದಲ್ಲಿ ಅಶೋಕದೋಹದ ಪ್ರಸಂಗ ಇದೆ. ಸುಂದರಿಯರು ತಮ್ಮ ಅಲಂಕೃತಪಾದಗಳಿಂದ ಒದ್ದರೆ ಹೂ ಬಿಡದ ಅಶೋಕವೃಕ್ಷವು ಪುಷ್ಪಿತವಾಗುತ್ತದೆ ಎಂಬುದು ಕವಿಸಮಯ. ಪ್ರಾಯಃ ಎಲ್ಲ ಸಂಸ್ಕೃತಕಾವ್ಯಗಳಲ್ಲಿಯೂ ಇದರ ಉಲ್ಲೇಖ ಬರುತ್ತದೆ. ಅಶೋಕ ವೃಕ್ಷ ಸುಂದರಿಯರ ಪಾದಾಹತಿಯನ್ನು ಬಯಸುತ್ತದೆ  ಎಂದೂ, ಒಂದು ವೇಳೆ ಹಾಗೆ ವೃಕ್ಷವು ಪುಷ್ಪಿತವಾದರೆ ಅದು ಆ ತರುಣಿಯ ಸೌಂದರ್ಯಕ್ಕೆ ಪ್ರಮಾಣ ಎಂತಲೂ ವರ್ಣಿಸಲಾಗುತ್ತದೆ. 


ಧಾರಿಣೀ ಇರಾವತೀ ಎಂಬ ಇಬ್ಬರು ಹೆಂಡಿರ ಮುದ್ದಿನ ರಾಜನಾಗಿದ್ದರೂ ಧೀರಲಲಿತ ನಾಯಕ ಅಗ್ನಿಮಿತ್ರನಿಗೆ ಮಾಳವಿಕೆಯೆಂಬ ನಾಟ್ಯಚತುರೆ ತರುಣಿಯಲ್ಲಿ ಆಸಕ್ತಿ. ಅದಕ್ಕೆ ಅವನ ನರ್ಮಸಚಿವ ಗೌತಮನ ಕುಮ್ಮಕ್ಕು ಬೇರೆ. ಗಣದಾಸ ಹರದತ್ತರ ಜಗಳದ ನೆಪದಿಂದ ಮಾಳವಿಕೆಯ ದರ್ಶನ ಪಡೆದ ಅಗ್ನಿಮಿತ್ರ ಅವಳನ್ನೇ ಕನವರಿಸುತ್ತಿರುತ್ತಾನೆ. ಧಾರಿಣಿಯ ಕಾಲುನೋವಿನಿಂದಾಗಿ ಅಶೋಕದೋಹದಕ್ಕೆ ಅಣಿಯಾಗುತ್ತಿರುವ ಮಾಳವಿಕೆಯೊದಿಗೆ ಉಪವನದಲ್ಲಿ  ಅಗ್ನಿಮಿತ್ರನ ಸಮಾಗಮದ ಸನ್ನಿವೇಶ ಕಾಳಿದಾಸನ ಲೇಖನಿಯಿಂದ ಅದ್ಭುತವಾಗಿ ಚಿತ್ರಿತವಾಗಿದೆ. 

ಬಕುಲಾವಲಿಕೆ ಎನ್ನುವ ದಾಸಿ ಮಾಳವಿಕೆಯ ಪಾದಗಳಿಗೆ ವರ್ಣವಿನ್ಯಾಸಮಾಡಿ ಅವಳನ್ನು ಅಣಿಗೊಳಿಸುತ್ತಿದ್ದಾಳೆ. ಮರೆಯಲ್ಲಿ ನಿಂತಿರುವ ಅಗ್ನಿಮಿತ್ರ ಅದನ್ನು ಆಸ್ವಾದಿಸುತ್ತಿದ್ದಾನೆ. ಅವಳ ಸುಂದರ ಪಾದಗಳು ಅಶೋಕದ ದೋಹದಾಪೇಕ್ಷೆಯನ್ನೂ, ಅಪರಾಧಿಯಾಗಿ ತಲೆ ಬಾಗಿದ ಪ್ರಿಯತಮನನ್ನೂ ದಮನಿಸಲು ಶಕ್ತವಾಗಿವೆ ಎಂದು ವರ್ಣಿಸುತ್ತಾನೆ.

ನವಕಿಸಲಯರಾಗೇಣಾಗ್ರಪಾದೇನ ಬಾಲಾ ಸ್ಫುರಿತನಖರುಚಾ ದ್ವೌ ಹಂತುಮರ್ಹತ್ಯನೇನ |

ಅಕುಸುಮಿತಮಶೋಕಂ ದೋಹದಾಪೇಕ್ಷಯಾ ವಾ ಪ್ರಣಮಿತಶಿರಸಂ ವಾ ಕಾಂತಮಾರ್ದ್ರಾಪರಾಧಮ್ ||

ಅದಕ್ಕೆ ವಿದೂಷಕ ’ಅಪರಾಧಿಯಾದ ನಿನಗೇ ಒದೆಯುತ್ತಾಳೆ’ ಎನ್ನುತ್ತಾನೆ. ಸಿದ್ಧದರ್ಶಿಯಾದ ಬ್ರಾಹ್ಮಣನ ಮಾತನ್ನು ಶಿರಸಾಪರಿಗ್ರಹಿಸುತ್ತೇನೆ ಎನ್ನುತ್ತ ಅಗ್ನಿಮಿತ್ರ ಮಾಳವಿಕೆಯ ಪಾದಾಹತಿಯು ತನಗೂ ಪ್ರಿಯವೇ ಎಂಬ ಭಾವವನ್ನು ಹೊರಗೆಡಹುತ್ತಾನೆ.

ಬಕುಲಾವಲಿಕೆಯು ತನ್ನ ಪಾದವನ್ನು ಅಲಂಕರಿಸಿದ ಪರಿಯನ್ನು  ಮಾಳವಿಕೆಯು ಬಹುವಾಗಿ ಮೆಚ್ಚಿಕೊಂಡಾಗ ಬಕುಲಾವಲಿಕೆಯು ತಾನು ಈ ವಿಷಯದಲ್ಲಿ ಸ್ವಾಮಿಯ(ರಾಜನ) ಶಿಷ್ಯೆ ಎನ್ನುತ್ತಾಳೆ. ಅದರಿಂದ ಅಗ್ನಿಮಿತ್ರನು ದಾಸಿಯರ ಸಮಕ್ಷದಲ್ಲೇ ತನ್ನ ರಾಣಿಯರ ಚರಣಾಲಂಕಾರವನ್ನು ಮಾಡುತ್ತಿದ್ದ ಎಂಬುದು ವಿದಿತವಾಗುತ್ತದೆ. ಒಂದು ಪಾದದ ಅಲಂಕಾರ ಮುಗಿದಾಗ ಬಕುಲಾವಲಿಕೆಯು ’ಅಲಂಕಾರ ಮುಗಿಯಿತು, ಬಾಯಿಯಿಂದ ಗಾಳಿ ಊದಿ ಒಣಗಿಸಬೇಕಾಗಿದೆ’ ಎಂದಾಗ ರಾಜನಿಗೆ ಈ ಅವಕಾಶ ತನಗೆ ಸಿಕ್ಕರೆ ಅದೆಷ್ಟು ಚೆನ್ನಾಗಿತ್ತು ಎನಿಸಿತು.

ಆರ್ದ್ರಾಲಕ್ತಕಮಸ್ಯಾಶ್ಚರಣಂ ಮುಖಮಾರುತೇನ ವೀಜಯಿತುಮ್ |

ಪ್ರತಿಪನ್ನಃ ಪ್ರಥಮತರಃ ಸಂಪ್ರತಿ ಸೇವಾವಕಾಶೋ ಮೇ ||

ಅನಂತರ ಮಾಳವಿಕೆಯು ಅಶೋಕವೃಕ್ಷಕ್ಕೆ ತನ್ನ ಪಾದದಿಂದ ಒದ್ದಾಗ ತಾನು ಪಾದಪ್ರಹಾರವನ್ನು ಪಡೆಯುವ ಭಾಗ್ಯದಿಂದ ವಂಚಿತನಾಗಿರುವೆನಲ್ಲ ಎಂದು ಹಳಹಳಿಸುತ್ತಾನೆ. 

ಹೀಗೆ ಅಗ್ನಿಮಿತ್ರನು ತನ್ನ ಮನಸ್ಸನ್ನು ಮಾಳವಿಕೆಯ ಚರಣಗಳಿಗೆ ಅರ್ಪಿಸಿಕೊಂಡಿರುವಾಗ ಅವನ ಎರಡನೆಯ ರಾಣಿ ಇರಾವತಿಯ ಪ್ರವೇಶವಾಗುತ್ತದೆ. ಮಾಳವಿಕೆಯೊಂದಿಗೆ ರಾಜನು ಸರಸವಾಡುತ್ತಿರುವುದನ್ನು ಕಂಡು ಕ್ರುದ್ಧಳಾಗುತ್ತಾಳೆ. ತನ್ನ ಕಟಿಪಟ್ಟವನ್ನು(ಸೊಂಟದ ಪಟ್ಟಿ-ಬೆಲ್ಟ್!) ತೆಗೆದುಕೊಂಡು ರಾಜನಿಗೆ ಹೊಡೆಯಲು ಮುಂದಾಗುತ್ತಾಳೆ. ಅದನ್ನು ಅಗ್ನಿಮಿತ್ರನು ವರ್ಣಿಸುವ ಪರಿಯನ್ನು ನೋಡಿ-

ಬಾಷ್ಪಾಸಾರಾ ಹೇಮಕಾಂಚೀಗುಣೇನ ಶ್ರೋಣೀಬಿಂಬಾದಪ್ಯುಪೇಕ್ಷಾಚ್ಯುತೇನ |

ಚಂಡೀ ಚಂಡಂ ಹಂತುಮಭ್ಯುದ್ಯತಾ ಮಾಂ ವಿದ್ಯುದ್ದಾಮ್ನಾ ಮೇಘರಾಜೀವ ವಿಂಧ್ಯಮ್ ||

ತನ್ನನ್ನು ಹೊಡೆಯಲು ಮೇಖಲೆಯನ್ನು ಎತ್ತಿರುವ ಇರಾವತಿಯು ಚಂಡನನ್ನು ಸಂಹರಿಸಲು ಆಯುಧವನ್ನು ಎತ್ತಿರುವ ಚಂಡಿಯಂತೆ ತೋರುತ್ತಿದ್ದಾಳೆ, ವಜ್ರಾಯುಧದಿಂದ ವಿಂಧ್ಯಪರ್ವತವನ್ನು ಹೊಡೆಯಲು ಸಿದ್ಧವಾಗಿರುವ ಮೇಘಪಂಕ್ತಿಯಂತೆ ಕಾಣುತ್ತಿದ್ದಾಳೆ ಎಂದು ವರ್ಣಿಸುತ್ತಾನೆ. ಇರಾವತಿಯು ಒಂದು ಕ್ಷಣ ತಡೆದಾಗ ’ಅಪರಾಧಿಯಾಗಿರುವ ನನ್ನನ್ನು ಹೊಡೆಯಲು ಎತ್ತಿರುವ ಆಯುಧವನ್ನು ಯಾಕೆ ಉಪಸಂಹರಿಸಿದೆ? ದಾಸಜನರ ಮೇಲೆ ಸಿಟ್ಟಾಗುವುದು ನಿನಗೆ ಯುಕ್ತವೇ ಆಗಿದೆ’ ಎಂದು ಅವಳ ಕಾಲಿಗೆ ಬೀಳುತ್ತಾನೆ. ’ನಿನ್ನ ದೋಹದವನ್ನು ಪೂರ್ತಿಗೊಳಿಸುವ ಮಾಳವಿಕೆಯ ಕಾಲುಗಳಲ್ಲ ಇವು’ ಎಂದು ಕಾಲಿಗೆರಗಿದ ರಾಜನನ್ನು ತಿರಸ್ಕರಿಸಿ ಇರಾವತಿಯು ಬಿರಬಿರನೆ ಅಲ್ಲಿಂದ ನಡೆಯುತ್ತಾಳೆ.

*ಮಹಾಬಲ ಭಟ್ಟ, ಗೋವಾ*

Tuesday, October 15, 2024

ನಾರೀವಿಧೇಯರು-ಪುರೂರವ (ವಿಕ್ರಮೋರ್ವಶೀಯಮ್)


ಕಾಳಿದಾಸನ ವಿಕ್ರಮೋರ್ವಶೀಯಮ್ ನಾಟಕದಲ್ಲಿ ಪುರೂರವ ಅಥವಾ ವಿಕ್ರಮ ನಾಯಕ. ದೇವಲೋಕದ ಅಪ್ಸರೆ  ಊರ್ವಶಿ ನಾಯಿಕೆ. ರಾಕ್ಷಸನೊಬ್ಬನ ಕೈಯಿಂದ ನಾಯಿಕೆಯನ್ನು ರಕ್ಷಿಸುವ ಪ್ರಸಂಗದಿಂದ ಇಬ್ಬರ ಮಧ್ಯೆಯೂ ಪ್ರಣಯ ಅಂಕುರಿಸಿ ದೊಡ್ಡದಾಗಿ ಬೆಳೆಯುತ್ತದೆ. ನಾಯಿಕೆ ಊರ್ವಶಿ ಬರೆದ ಪತ್ರವೊಂದು ಅದಾಗಲೇ ಅವರ ಪ್ರೇಮಪ್ರಕರಣದ ಬಗ್ಗೆ ದಾಸಿಯಿಂದ ಕೇಳಿದ್ದ ಮಹಾರಾಣಿ ಕಾಶೀರಾಜಪುತ್ರಿಯ ಕೈಗೆ ಸಿಗುತ್ತದೆ. ಉದ್ಯಾನವನದಲ್ಲಿ ಅವರ ಸಮಾಗಮದ ಸುಳಿವನ್ನು ಪಡೆದು ಅಲ್ಲಿಗೆ ಆಗಮಿಸಿದ ಅವಳನ್ನು ಕಂಡು ಪುರೂರವ ಬೆಚ್ಚುತ್ತಾನೆ. ಅವಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸುತ್ತಾನೆ.

ಅಪರಾಧೀ ನಾಮಾಹಂ ಪ್ರಸೀದ ರಂಭೋರು ವಿರಮ ಸಂರಂಭಾತ್ |

ಸೇವ್ಯೋ ಜನಶ್ಚ ಕುಪಿತಃ ಕಥಂ ನು ದಾಸೋ ನಿರಪರಾಧಃ||

(ಹೇ ಸುಂದರಿ! ಪ್ರಸನ್ನಳಾಗು, ಕುಪಿತಳಾಗಬೇಡ, ನಾನೇ ಅಪರಾಧಿ. ಸ್ವಾಮಿನಿಯು ಕೋಪಗೊಂಡಾಗ ದಾಸನು ಹೇಗೆ ನಿರಪರಾಧಿಯಾದಾನು?)

ರಾಜನ ಚಾತುರ್ಯವನ್ನು ಮನಗೊಂಡ ಮಹಾರಾಣಿ ಅವನ ಶರಣಾಗತಿಯನ್ನು ತಿರಸ್ಕರಿಸಿ ಹೋಗುತ್ತಾಳೆ.

ಇಷ್ಟಾದರೂ ರಾಜನ ಪ್ರಣಯದಾಟ ಮುಂದುವರಿಯುತ್ತದೆ. ಪತಿಯ ಶರಣಾಗತಿಯನ್ನೂ ತಿರಸ್ಕರಿಸಿದ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ  ಪತಿಪ್ರಸಾದನ ಎಂಬ ವ್ರತವನ್ನು ಮಾಡಿದ ಮಹಾರಾಣಿ ವ್ರತಪಾರಣೆಯ ದಿನ ಪತಿದರ್ಶನಕ್ಕೆಂದು ಮಣಿಹರ್ಮ್ಯ ಎಂಬ ಅರಮನೆಗೆ ಬಂದಾಗಲೂ ರಾಜ ತನ್ನ (ಕೃತ್ರಿಮ) ವಿನಯವನ್ನು ತೋರಿಸುತ್ತಾನೆ. ’ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ’ ಎಂದು ಹೇಳಿದ ರಾಣಿಗೆ ’ತೊಂದರೆಯೇನು ಬಂತು? ಇದು ನೀನು ನನಗೆ ಮಾಡುತ್ತಿರುವ ಅನುಗ್ರಹ’ ಎನ್ನುತ್ತಾನೆ. ವ್ರತ ಮಾಡುತ್ತ ದೇಹವನ್ನು ದಂಡಿಸುತ್ತಿರುವ ಅವಳನ್ನು ಕುರಿತು

ಅನೇನ ಕಲ್ಯಾಣಿ ಮೃಣಾಲಕೋಮಲಂ

ವ್ರತೇನ ಗಾತ್ರಂ ಗ್ಲಪಯತ್ಯಕಾರಣಮ್|

ಪ್ರಸಾದಮಾಕಾಂಕ್ಷತಿ ಯಸ್ತವೋತ್ಸುಕಃ

ಸ ಕಿಂ ತ್ವಯಾ ದಾಸಜನಃ ಪ್ರಸಾದ್ಯತೇ||

(ನಿನ್ನ ಕೋಮಲವಾದ ಶರೀರವನ್ನು ವ್ರತದ ನೆವದಿಂದ ಯಾಕೆ ದಂಡಿಸುತ್ತಿರುವೆ. ನಿನ್ನ ಪ್ರಸಾದವನ್ನು ಪಡೆಯಲು ಬಯಸುವ ಈ ದಾಸನನ್ನು ಪ್ರಸನ್ನಗೊಳಿಸಲು ಇಷ್ಟು ಕಷ್ಟ ಯಾಕೆ?) ಎನ್ನುತ್ತಾನೆ.

’ದಾತುಮಸಹನೇ ಪ್ರಭವಸ್ಯನ್ಯಸ್ಯೈ ಕರ್ತುಮೇವ ವಾ ದಾಸಮ್’ (ನನ್ನನ್ನು ಬೇರೆಯವಳಿಗೆ ಕೊಡಲು ಅಥವಾ ದಾಸನನ್ನಾಗಿಸಿಕೊಳ್ಳಲು ನಿನಗೆ ಸಂಪೂರ್ಣ ಅಧಿಕಾರ ಇದೆ’ ಎಂದು ಅವಳಿಗೆ ಹೇಳುತ್ತಾನೆ.

ಮಹಾರಾಣಿ ಅಲ್ಲಿಂದ ತೆರಳಿದ ತರುವಾಯ ರಾಜನ ಮನಸ್ಸು ಮತ್ತೆ ಊರ್ವಶಿಯತ್ತ ಹೊರಳುತ್ತದೆ. ತನ್ನ ನರ್ಮಸಚಿವನ ಜೊತೆಗೆ ಮಾತನಾಡುತ್ತ ತಾನು ಊರ್ವಶಿಯ ದಾಸ ಎಂದು ಹೇಳಿಕೊಳ್ಳುತ್ತಾನೆ- ’ಅನನ್ಯನಾರೀಸಾಮಾನ್ಯಃ ದಾಸಸ್ತಸ್ಯಾಃ ಪುರೂರವಾ’

ಮುಂದೆ ಊರ್ವಶಿಯೊಂದಿಗೆ ಮಂದಾಕಿನೀ ತೀರದಲ್ಲಿ ವಿಹರಿಸುತ್ತಿರುವಾಗ ಉದಯವತೀ ಎಂಬ ವಿದ್ಯಾಧರ ಕನ್ಯೆಯನ್ನು ಎವೆಯಿಕ್ಕದೆ ನೋಡಿದ ಪುರೂರವನ ಮೇಲೆ ಊರ್ವಶಿ ಸಿಟ್ಟುಗೊಳ್ಳುತ್ತಾಳೆ. ಆಗ ಪುರೂರವ ಅವಳ ಕಾಲಿಗೆ ಬಿದ್ದು ಅನುನಯಿಸುತ್ತಾನೆ. ಆದರೂ ಊರ್ವಶಿ ಸಮಾಧಾನಗೊಳ್ಳದೆ ಕುಮಾರವನವನ್ನು ಪ್ರವೇಶಿಸಿ ಲತೆಯಾಗಿ ಪರಿವರ್ತಿತಳಾಗುತ್ತಾಳೆ. ಅವಳನ್ನು ಕಾಣದೆ ವಿಲಪಿಸುತ್ತ ’ಕಮಪರಾಧಲವಂ ಮಮ ಪಶ್ಯಸಿ ತ್ಯಜಸಿ ಮಾನಿನಿ ದಾಸಜನಂ ಯತಃ’(ನನ್ನ ಯಾವ ಸಣ್ಣ ಅಪರಾಧವನ್ನು ನೋಡಿ ಈ ದಾಸನನ್ನು ತ್ಯಜಿಸಿದೆ?) ಎನ್ನುತ್ತಾನೆ. ಕೊನೆಯಲ್ಲಿ ಅದೇ ಲತೆಯನ್ನು ನೋಡಿ ’ಚಂಡೀ ಮಾಮವಧೂಯ ಪಾದಪತಿತಂ ಜಾತಾನುತಾಪೇವ ಸಾ’ (ಕಾಲಿಗೆ ಬಿದ್ದ ನನ್ನನ್ನು ಚಂಡಿಯಂತೆ ಕುಪಿತಳಾಗಿ ತಿರಸ್ಕರಿಸಿ ಪಶ್ಚಾತ್ತಾಪಪಡುತ್ತಿರುವವಳಂತೆ ತೋರುತ್ತಿದೆ) ಎಂದು ವರ್ಣಿಸುತ್ತಾನೆ.

ಒಟ್ಟಿನಲ್ಲಿ ಪಟ್ಟದ ರಾಣಿಯ ಕೋಪಕ್ಕೆ ಹೆದರಿ, ಪ್ರಿಯತಮೆಯನ್ನು ಒಲಿಸಿಕೊಳ್ಳುವ ಸಲುವಾಗಿ ಇಬ್ಬರ ಎದುರೂ ಬಗ್ಗುವ ಪರಿಸ್ಥಿತಿ 'ವಿಕ್ರಮ'ನದ್ದು.

ಮಹಾಬಲ ಭಟ್ಟ, ಗೋವಾ

ನಾರೀವಿಧೇಯರು-ಮಾಧವ (ಗೀತಗೋವಿಂದ)


ಜಯದೇವಕವಿಯ ಗೀತಗೋವಿಂದಮ್ ಎನ್ನುವ ಗೀತಕಾವ್ಯ ಅಪ್ರತಿಮಪ್ರೇಮಕಾವ್ಯವೆಂದು ಪ್ರಥಿತವಾಗಿದೆ. ರಾಧಾ-ಕೃಷ್ಣರ ಪ್ರೇಮದ ಪರಾಕಾಷ್ಠತೆಯ ವರ್ಣನೆ ಈ ಕಾವ್ಯದಲ್ಲಿದೆ. ಈ ಕಾವ್ಯದಲ್ಲಿ ಅನೇಕ ಕಡೆ ಕೃಷ್ಣ ರಾಧೆಗೆ ಶರಣಾಗುವ ಸನ್ನಿವೇಶಗಳು ಚಿತ್ರಿತವಾಗಿವೆ.

ಕಾವ್ಯದ ಪ್ರಥಮಸರ್ಗದಲ್ಲಿ ಕವಿಯು ತನ್ನನ್ನು ಪದ್ಮಾವತೀಚರಣಚಾರಣಚಕ್ರವರ್ತೀ ಎಂದು ಕರೆದುಕೊಂಡು ತಾನು ಪತ್ನಿಯ ಚರಣಪೂಜಕ ಎಂದು ವ್ಯಕ್ತವಾಗಿಯೇ ಹೇಳಿ ಅವಳಿಗೆ ಗೌರವವನ್ನು ಸಲ್ಲಿಸಿದ್ದಾನೆ. ಅನೇಕ ವಿಮರ್ಶಕರು ಪದ್ಮಾವತಿ ಎಂದರೆ ಲಕ್ಷ್ಮೀ ಎಂದು ಅರ್ಥೈಸಬೇಕು ಎಂದು ಅಭಿಪ್ರಾಯಪಟ್ಟರೂ, ಲಕ್ಷ್ಮಿಯ ಇನ್ನ್ಯಾವುದೇ ಪರ್ಯಾಯಪದವನ್ನು ಬಳಸದೆ ತನ್ನ ಪತ್ನಿಯ ಹೆಸರನ್ನೇ ಬಳಸಿರುವುದು ಅವನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ತೃತೀಯಸರ್ಗದಲ್ಲಿ ರಾಧೆಯನ್ನು ಕಾಣದೆ ಮಾಧವನ ವಿರಹಬೇಗೆ ಹೆಚ್ಚುತ್ತಾ ಇದೆ. ಬೇರೆ ಗೋಪಿಕೆಯರಿಂದ ಸುತ್ತುವರಿದ ಕೃಷ್ಣನನ್ನು ನೋಡಿ ಕೋಪಗೊಂಡು ಅವಳು ಹೊರಟುಹೋಗಿದ್ದಾಳೆ. ಅವಳು ಹಾಗೆ ಹೊರಟು ಹೋಗಿದ್ದಕ್ಕೆ ತಾನೇ ಕಾರಣ ಎಂದು ಕೃಷ್ಣ ವಿಲಪಿಸುತ್ತಿದ್ದಾನೆ. ಅವಳು ಹೋಗುವಾಗಲೂ ಅದೇ ಅಪರಾಧಿಭಾವದಿಂದಾಗಿ ಉಂಟಾದ ಭಯದಿಂದ ಅವಳನ್ನು ತಡೆಯಲೂ ಮಾಧವನಿಗೆ ಸಾಧ್ಯವಾಗಲಿಲ್ಲ. 

ಸಾಪರಾಧತಯಾ ಮಯಾಽಪಿ ನ ವಾರಿತಾಽತಿಭಯೇನ |

ಹರಿ ಹರಿ ಹತಾದರತಯಾ ಗತಾ ಸಾ ಕುಪಿತೈವ || (ಗೀ.ಗೋ. ಸರ್ಗ೩, ಗೀತಂ೭)

ಹೀಗೆ ಭಯಗೊಂಡ ಮಾಧವ ಅವಳನ್ನು ವಿನಯದಿಂದ ಅನುನಯಿಸಲು ಬಯಸುತ್ತಾನೆ - ತನ್ನ ವೇದ್ಮಿ ಕುತೋ ಗತಾಸಿ ನತೇನ ತೇಽನುನಯಾಮಿ ಎಂದು ಅಲವತ್ತುಕೊಳ್ಳುತ್ತಾನೆ. ಕ್ಷಮ್ಯತಾಮಪರಂ ಕದಾಪಿ ತವೇದೃಶಂ ನ ಕರೋಮಿ ಎಂದು ಮತ್ತೆ ಮತ್ತೆ ಮನಸ್ಸಿನಲ್ಲಿಯೇ ಕ್ಷಮೆ ಯಾಚಿಸುತ್ತಾನೆ.

ಅತ್ತ ರಾಧೆಯೂ ಕೃಷ್ಣನ ವಿರಹದಿಂದ ಬೇಯುತ್ತಾಳೆ. ಮಾಧವನೂ ತನ್ನ ವಿರಹದಿಂದ ಬಳಲುತ್ತಿದ್ದಾನೆ ಎಂಬ ಕಲ್ಪನೆ ಅವಳಿಗಿಲ್ಲ. ಅವನು ಅನ್ಯಗೋಪಿಕೆಯೊಂದಿಗೆ ಸರಸದಲ್ಲಿ ನಿರತನಾಗಿದ್ದಾನೆ ಎಂದೇ ಕಲ್ಪಿಸಿಕೊಳ್ಳುತ್ತಾಳೆ. ತನ್ನ ಸಖಿಗೆ ಆ ಕಲ್ಪನೆಯನ್ನು ವಿಸ್ತರಿಸಿ ವರ್ಣಿಸುತ್ತ ಹೀಗೆ ವರ್ಣಿಸುತ್ತಾಳೆ - 

ಚರಣಕಿಸಲಯೇ ಕಮಲಾನಿಲಯೇ ನಖಮಣಿಗಣಪೂಜಿತೇ|

ಬಹಿರಪವರಣಂ ಯಾವಕಭರಣಂ ಜನಯತಿ ಹೃದಿ ಯೋಜಿತೇ || (ಗೀ.ಗೋ. ಸರ್ಗ೭, ಗೀತಂ೧೫)

(ಕಮಲೆಯ ನಿಲಯವಿದೆನ್ನುವ ನಖಮಣಿಗಣದಿಂದೊಪ್ಪುವ ಚೆಂದಳಿರಡಿಗಳನು

ಯಾವಾಭರಣದ ಬಹಿರಾವರಣದಿನಳವಡಿಪನು ಉರದೊಳು ಕಳೆದದನಚ್ಯುತನು)

ತನ್ನ ಪ್ರಿಯತಮೆಯ ಚೆಂದದ ಅಡಿಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು ಮುದ್ದಿಸುತ್ತಿರುವನು ಎಂದು ಇಲ್ಲಿ ವರ್ಣಿಸಲಾಗಿದೆ. ಮುಂದೆ ಕೆಂಪು ಮದರಂಗಿಯನ್ನು ಹಚ್ಚಿಕೊಂಡ ಅವಳ ಪಾದದ ಗುರುತು ನಿನ್ನೆದೆಯ ಮೇಲೆ ಮೂಡಿದೆ (ಪ್ರಿಯಾಪಾದಾಲಕ್ತಚ್ಛುರಿತಮರಣದ್ಯೋತಿಹೃದಯಮ್ - ಅವಳಡಿದಾವರೆಯಲತಿಗೆ ರಸದೊಳು ನಿನ್ನೆದೆ ಸಲೆ ನಾಂದಿಹುದಿಂದು - ಎಸ್.ವಿ.ಪರಮೇಶ್ವರಭಟ್ಟರ ಅನುವಾದ - ಸಂಸ್ಕೃತಿ ಸಲ್ಲಾಪ) ಎಂದೂ ಕೃಷ್ಣನನ್ನು ದೂಷಿಸುತ್ತಾಳೆ. 

ರಾಧೆ ತನ್ನ ಮೇಲೆ ಕೋಪಗೊಂಡೇ ಹೊರಟು ಹೋಗಿದ್ದಾಳೆ ಎಂದು ಬಲವಾಗಿ ನಂಬಿರುವ ಮಾಧವ ಅವಳನ್ನು ಒಲಿಸಿಕೊಳ್ಳಲು ಏನನ್ನೂ ಮಾಡಲು ಸಿದ್ಧನಾಗಿದ್ದಾನೆ. ತನ್ನನ್ನು ಪೂರ್ಣವಾಗಿ ಅವಳಿಗೆ ಸಮರ್ಪಿಸಿಕೊಂಡು ಅವಳು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಾಗಿದ್ದಾನೆ. ಹತ್ತನೆಯ ಸರ್ಗದ ೧೯ ನೆಯ ಗೀತೆಯಲ್ಲಿ ನಿನ್ನ ಯಾವ ಶಿಕ್ಷೆಯೂ ತನಗೆ ಸುಖವನ್ನು ನೀಡುತ್ತದೆ ಅನ್ನುತ್ತಾನೆ.

ಸತ್ಯಮೇವಾಸಿ ಯದಿ ಸುದತಿ ಮಯಿ ಕೋಪಿನೀ

ದೇಹಿ ಖರನಖರಶರಘಾತಂ

ಘಟಯ ಭುಜಬಂಧನಂ ಜನಯ ರದಖಂಡನಂ

ಯೇನ ವಾ ಭವತಿ ಸುಖಜಾತಂ

(ನನ್ನೊಳುರುಕೋಪವಿದು ಸುದತಿ ನಿಜವೆನ್ನುವೊಡೆ ಕುಡು ನನಗೆ ಖರನಖರ ಶರಘಾತಗಳನು 

ಘಟಿಸು ಭುಜಬಂಧವನು ಜನಿಸು ರದಖಂಡವನು ಎಂತಾದರೂ ಸರಿಯೆ ಸುಖವನನುಗೊಳಿಸು.)

ಇದೇ ಗೀತೆಯಲ್ಲಿ ನನ್ನ ಹೃದಯವನ್ನು ರಂಜಿಸುವ ನಿನ್ನ ಚರಣದ್ವಂದ್ವಕ್ಕೆ ಅಲಕ್ತಕರಾಗವನ್ನು ಹಚ್ಚಿ ಸೇವೆ ಮಾಡುವಂತೆ ನನಗೆ ಆಜ್ಞಾಪಿಸು ಎನ್ನುತ್ತಾನೆ.

ಸ್ಥಲಕಮಲಗಂಜನಂ ಮಮ ಹೃದಯರಂಜನಂ

ಜನಿತರತಿರಂಗಪರಭಾಗಂ

ಭಣ ಮಸೃಣವಾಣಿ ಕರವಾಣಿ ಚರಣದ್ವಯಂ

ಸರಸಸದಲಕ್ತಕಸರಾಗಂ

(ತಾವರೆಯ ಗ೦ಜಿಸುವ ನನ್ನೆದೆಯ ರಂಜಿಸುವ ರತಿಯ ನರ್ತನ ಗತಿಯ ರಾಗವನೆ ಮೆರೆವ

ನಿನ್ನಡಿಯನಲತಿಗೆಯ ತೊಡೆದರುಣಗೊಳಿಸುವೆನು ಜೇನ್ದನಿಯ ನುಡಿಯವಳೆ ತೋರು ಕರುಣೆಯನು.)

ಪ್ರೇಯಸಿಯ ಚರಣಾರಾಧನೆಯ ಪರಾಕಾಷ್ಠತೆಯನ್ನು ಮುಂದಿನ ಪದ್ಯದಲ್ಲಿ ಕಾಣಬಹುದು. 

ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ

ದೇಹಿ ಪದಪಲ್ಲವಮುದಾರಂ

ಜ್ವಲತಿ ಮಯಿ ದಾರುಣೋ ಮದನಕದನಾನಲೋ

ಹರತು ತದುಪಾಹಿತವಿಕಾರಂ

(ಸ್ಮರಗರಲ ಖ೦ಡನವಿದೆನುವ ತವ ಚರಣವನು ನನ್ನ ಶಿರಮಂಡನವನೆಸಗೆಲಗೆ ನೀಡು 

ಸುಡುತಿಹನು ದಾರುಣನು ಮದನ ಕದನಾರುಣನು ನಿನ್ನ ಪದ ತಾಪವನು ಪರಿಹರಿಸಲಿಂದು.)

ಈ ಪದ್ಯವನ್ನು ಬರೆಯಲು ಜಯದೇವಕವಿ ಹಿಂಜರಿದನಂತೆ. ಕವಿಯು ಸ್ನಾನಕ್ಕೆ ತೆರಳಿದಾಗ ಶ್ರೀಕೃಷ್ಣನೇ ಕವಿಯ ವೇಶದಲ್ಲಿ ಮನೆಗೆ ಬಂದು ಅದನ್ನು ಬರೆದಿಟ್ಟು ಹೋದ ಎಂಬ ಕಥೆ ಪ್ರಚಲಿತದಲ್ಲಿದೆ.

ಹನ್ನೊಂದನೆಯ ಸರ್ಗದ ೨೦ ನೆಯ ಗೀತೆಯಲ್ಲಿ ರಾಧೆಯ ಸಖಿ ಮಾಧವನ ಮೇಲಿನ ಹುಸಿಕೋಪವನ್ನು ಬಿಟ್ಟು ಅವನನ್ನು ಅನುಸರಿಸು ಎನ್ನುವಾಗ ಅವನು ಚರಣೇ ರಚಿತಪ್ರಣಿಪಾತಂ - ನಿನ್ನ ಚರಣಕ್ಕೆ ಆನತನಾದ ವಿನಯೀ ಎನ್ನುವುದನ್ನು ನೆನಪಿಸುತ್ತಾಳೆ. ಮುಂದೆ ಅವಳೇ ಕೃಷ್ಣನನ್ನು ರಾಧೆಯು ತನ್ನ ಹುಬ್ಬಿನ ಚಾಲನೆಯೆಂಬ ಲಕ್ಷ್ಮಿಯಿಂದ ಕೊಂಡುಕೊಂಡ ಚರಣಸೇವಕ ದಾಸ ಎಂದು ವರ್ಣಿಸುತ್ತಾಳೆ.

ಅಸ್ಯಾಂಕಂ ತದಲಂಕುರು ಕ್ಷಣಮಿಹ ಭ್ರೂಕ್ಷೇಪಲಕ್ಷ್ಮೀಲವ_

ಕ್ರೀತೇ ದಾಸ ಇವೋಪಸೇವಿತಪದಾಂಭೋಜೇ ಕುತಃ ಸಂಭ್ರಮಃ|

ಅಂತೂ ಕೊನೆಯಲ್ಲಿ ರಾಧಾಕೃಷ್ಣರ ಸಮಾಗಮವಾಗುತ್ತದೆ. ಆಗಲೂ ಅವನು ರಾಧೆಯ ಚರಣಾರಾಧನೆಮಾಡಲು ಸಿದ್ಧನಾಗಿಯೇ ಇದ್ದಾನೆ. ಕಮಲನಾಳಗಳಿಂದ ಶಯನ ಅಲಂಕೃತವಾಗಿದೆ. ಅದರ ಮೇಲೆ ನಿನ್ನ ಚರಣಗಳನ್ನು ಇಡು ಎಂದು ರಾಧೆಗೆ ಹೇಳುತ್ತಾನೆ. ಕಮಲತಂತುಗಳು ಎಷ್ಟೇ ಕೋಮಲವಾಗಿದ್ದರೂ ನಿನ್ನ ಪಾದಪಲ್ಲವಗಳಿಂದ ಸೋಲನ್ನು ಅನುಭವಿಸಲಿ ಎನ್ನುತ್ತಾನೆ. ಅಂತಹ ಹಾಸಿಗೆಯ ಮೇಲಿಟ್ಟ ಚರಣಗಳನ್ನು ನನ್ನ ಕರಕಮಲಗಳಿಂದ ಒತ್ತಿ ಸೇವೆ ಮಾಡುವ ಮೂಲಕ ಪೂಜಿಸುತ್ತೇನೆ. ಯಾಕೆಂದರೆ ಬಹಳ ದೂರದಿಂದ ನಿನ್ನನ್ನು ಕರೆಸಿಕೊಂಡಿದ್ದೇನೆ. ಹಾಸಿಗೆಯಲ್ಲಿ ನಿನ್ನ ಗೆಜ್ಜೆಗಳಿಗೆ ಉಪಕರಿಸಿದಂತೆ ನನಗೂ ಉಪಕಾರ ಮಾಡು (ನಿನ್ನ ಚರಣಗಳಲ್ಲಿ ನನಗೆ ಸ್ಥಾನ ಕೊಟ್ಟು ಉಪಕರಿಸು ಎಂದರ್ಥ) ಎಂದು ಬೇಡಿಕೊಳ್ಳುತ್ತಾನೆ.

ಕಿಸಲಯಶಯನತಲೇ ಕುರು ಕಾಮಿನಿ ಚರಣನಲಿನವಿನಿವೇಶಂ

ತವ ಪದಪಲ್ಲವವೈರಿಪರಾಭವಮಿದಮನುಭವತು ಸುವೇಶಂ  

ಕ್ಷಣಮಧುನಾ ನಾರಾಯಣಮನುಗತಮನುಸರ ಮಾಂ ರಾಧಿಕೇ ||

ಕರಕಮಲೇನ ಕರೋಮಿ ಚರಣಮಹಮಾಗಮಿತಾಸಿ ವಿದೂರಂ

ಕ್ಷಣಮುಪಕುರು ಶಯನೋಪರಿ ಮಾಮಿವ ನೂಪುರಮನುಗತಿಶೂರಂ|

(ಮೆಲ್ಲನೆ ಕಿಸಲಯಶಯನದೊಳಿಡು ವರಕಾಮಿನಿ ತಾವರೆಯಂದದ ನಿನ್ನಡಿಯ 

ತವ ಪದಪವಲ್ಲವವೈರಿವೊಲಿರುವೀ ತಳಿರಿನ ಪಾಸಿದು ಪಡೆಯಲಿ ಧಿಕ್ಕೃತಿಯ 

ಪಾಸಿನೊಳರೆಚಣವಿಡು ಬಹುದೂರವ ನಡೆದುರುನೋಯುವ ಮೆಲ್ಲಡಿ ಜೋಡಿಯನು

ಅಂದುಗೆವೋಲನುಸರಿಸಿದ ಶೂರನು ನಾ ಕರಕಮಲಗಳಿ೦ದಿದನೊತ್ತುವೆನು). 

ಮುಂದೆ, ಸತ್ತಂತಿಹ ದಾಸನಾಗಿಹ ನನಗೆ ಅಧರರಸವೆಂಬ ಅಮೃತದಿಂದ ಜೀವ ತುಂಬು ಎಂದು ಪ್ರಾರ್ಥಿಸುತ್ತಾನೆ. (ಅಧರಸುಧಾರಸಮುಪನಯ ಭಾಮಿನಿ ಜೀವಯ ಮೃತಮಿವ ದಾಸಮ್)

ರತಿಕ್ರೀಡೆಯ ನಂತರ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಆಗ ರಾಧೆ ತನ್ನ ಸಡಿಲಾದ ಸೀರೆಯ ಗಂಟನ್ನು ಮತ್ತೆ ಹಾಕಿ ಸೊಂಟದ ಪಟ್ಟಿಯನ್ನು ಬಿಗಿ ಮಾಡು ಎಂದು ಕೃಷ್ಣನಿಗೇ ಆಜ್ಞಾಪಿಸುತ್ತಾಳೆ. ಅಷ್ಟೇ ಅಲ್ಲ, ಕಳಚಿದ ಬಳೆಯನ್ನೂ, ಕಾಲಿನ ಮಣಿನೂಪುರವನ್ನು ಪುನಃ ತೊಡಿಸುವಂತೆ ಆದೇಶಿಸುತ್ತಾಳೆ. ಮಾಧವನಾದರೋ ಪ್ರೀತಿಯಿಂದ ವಿಧೇಯ ಸೇವಕನಂತೆ ಅವಳ ಆದೇಶವನ್ನು ಪಾಲಿಸುತ್ತಾನೆ.(ಗೀ.ಗೋ. ಸರ್ಗ೧೨, ಗೀತಂ ೨೪ ಪದ್ಯ೯)

ರಾಧೆಯೂ ಕೂಡ ತನ್ನನ್ನು ಕೃಷ್ಣನಿಗೆ ಸಮರ್ಪಿಸಿಕೊಂಡವಳೇ. ಆದರೆ ಕೃಷ್ಣನ ಸಮರ್ಪಣೆ ಸಾಮಾನ್ಯ ಲೋಕರೂಢಿಗೆ ವಿರುದ್ಧವಾಗಿರುವುದರಿಂದ ವಿಶಿಷ್ಟವಾಗಿ ತೋರುತ್ತದೆ. 

ಮಹಾಬಲ ಭಟ್ಟ, ಗೋವಾ

Monday, October 14, 2024

ನಾರೀವಿಧೇಯರು - ದಶರಥ - ರಾಮಾಯಣ


ಆದಿಕಾವ್ಯ ರಾಮಾಯಣದ ಕೈಕೇಯಿಯ ವರಪ್ರಸಂಗ ನಾರೀಮೇಲ್ಮೆಯ ಉದಾಹರಣೆಯಾಗಿ ನಿಲ್ಲುತ್ತದೆ. ಸೂರ್ಯವಂಶದ ಚಕ್ರವರ್ತಿಯಾದ ದಶರಥ ತನ್ನ ಪತ್ನಿಯನ್ನೇ ವಿರೋಧಿಸಲು ಸಾಧ್ಯವಾಗದೆ, ಅವಳ ಸಮ್ಮುಖದಲ್ಲಿ ನಿಸ್ಸಹಾಯಕನಾಗಿ ನಿಲ್ಲಬೇಕಾದ ಸಂದರ್ಭ ಸೃಷ್ಟಿಯಾಯಿತು. ಈ ಪ್ರಸಂಗ ಸ್ತ್ರೀನಿರ್ದಯತೆಗೆ ಸಾಕ್ಷಿಯಾಗಿ ಅಶುಭಕರವೆನಿಸಿದರೂ ರಾಮಾಯಣವು ಆದಿಕಾವ್ಯವಾದ್ದರಿಂದ ಅದನ್ನು ಆರಂಭದಲ್ಲಿಯೇ ಉಲ್ಲೇಖಿಸುತ್ತೇನೆ.


ಶ್ರೀರಾಮನನ್ನು ಕಾಡಿಗೆ ಕಳುಹಿಸಿ ಭರತನನ್ನು ರಾಜನನ್ನಾಗಿ ಮಾಡಬೇಕೆಂಬ ಕೈಕೇಯಿಯ ವಚನವನ್ನು ಕೇಳಿ ದಶರಥನಿಗೆ ವಜ್ರಾಘಾತವಾಗುತ್ತದೆ. ಕೈಕೇಯಿಯನ್ನು ಪರಿಪರಿಯಾಗಿ ಅನುನಯಿಸಲು ಪ್ರಯತ್ನಿಸುತ್ತಾನೆ. ’ಅಂಜಲಿಂ ಕುರ್ಮಿ ಕೈಕೇಯಿ ಪಾದೌ ಚಾಪಿ ಸ್ಪೃಶಾಮಿ ತೇ’ [ಕೈಜೋಡಿಸಿ ಬೇಡುತ್ತೇನೆ, ಪಾದಸ್ಪರ್ಶವನ್ನು ಮಾಡುತ್ತೇನೆ] (ಅಯೋಧ್ಯಾಕಾಂಡ; ಸರ್ಗ೧೧, ಪದ್ಯ ೩೬) ಎಂದು ಬೇಡಿಕೊಳ್ಳುತ್ತಾನೆ.  ಕೈಕೇಯಿ ಇನ್ನೂ ಕಟುವಾಗಿ ನಿಂದಿಸಿದಾಗ ಮತ್ತೆ ’ಸ್ಪೃಶಾಮಿ ಪಾದಾವಪಿ ತೇ ಪ್ರಸೀದ ಮೇ’  (ಅಯೋಧ್ಯಾಕಾಂಡ; ಸರ್ಗ೧೨, ಪದ್ಯ ೧೧೧) ಎಂದು ಪ್ರಾರ್ಥಿಸುತ್ತ ಅವಳ ಕಾಲಿಗೆರಗುತ್ತಾನೆ. ಆದರೆ ಕೈಕೇಯಿ ಅದಕ್ಕೂ ಅವಕಾಶಕೊಡದೆ ಕಾಲುಗಳನ್ನು ಹಿಂದಕ್ಕೆಳೆದುಕೊಳ್ಳುತ್ತಾಳೆ. ಪಾದಗಳ ಮೇಲೆ ಬೀಳಬೇಕೆಂದು ಎರಗಿದವನು ಅವು ಸಿಗದೆ ರೋಗಿಯಂತೆ ಭೂಮಿಯ ಮೇಲೆ ಬಿದ್ದನು ಎಂದು ವಾಲ್ಮೀಕಿ ಮಹರ್ಷಿಗಳು ಕರುಣಾಪೂರ್ಣವಾಗಿ ಈ ಸಂದರ್ಭವನ್ನು ವರ್ಣಿಸುತ್ತಾರೆ:


’ಪಪಾತ ದೇವ್ಯಾಶ್ಚರಣೌ ಪ್ರಾಸಾರಿತಾವುಭಾವಸಂಪ್ರಾಪ್ಯ ಯಥಾತುರಸ್ತಥಾ’ | (ಅಯೋಧ್ಯಾಕಾಂಡ; ಸರ್ಗ೧೨, ಪದ್ಯ ೧೧೨)


ಹೇಗೋ ಎದ್ದು ಸಂಭಾಳಿಸಿಕೊಂಡು ಮತ್ತೆ ಅಂಜಲಿಬದ್ಧನಾಗಿ ದಯೆ ತೋರುವಂತೆ ಬೇಡಿಕೊಳ್ಳುತ್ತಾನೆ. ’ಕ್ರಿಯತಾಂ ಮೇ ದಯಾಂ ಭದ್ರೇ ಮಯಾಯಂ ಸಂಯತಾಂಜಲಿಃ’  (ಅಯೋಧ್ಯಾಕಾಂಡ; ಸರ್ಗ೧೩, ಪದ್ಯ ೧೮)


ದಶರಥನ ರೋದನವು ಕೈಕೇಯಿಯ ಹೃದಯವನ್ನು ಕರಗಿಸಲಿಲ್ಲ. ಕಾಳಿದಾಸನು ರಘುವಂಶದಲ್ಲಿ ಅವಳನ್ನು ’ಸಾ ಕಿಲಾಶ್ವಾಸಿತಾ ಚಂಡೀ’ ಎಂದು ವರ್ಣಿಸಿದ್ದಾನೆ. ಅವಳು ಅತ್ಯಂತ ನಿರ್ಘೃಣಳಾಗಿ ದಶರಥನನ್ನು ಸಂಪೂರ್ಣವಾಗಿ ತನಗೆ ಶರಣಾಗುವಂತೆ ಮಾಡಿದಳು.


ಮಹಾಬಲ ಭಟ್ಟ, ಗೋವಾ

ನಾರೀವಿಧೇಯರು - ಪ್ರಸ್ತಾವನೆ

 ಆತ್ಮೀಯರೇ,


ನವರಾತ್ರಿಯ ಪರ್ವ ಮುಗಿದಿದೆ. ಪ್ರಕೃತಿಸ್ವರೂಪ ನಾರೀತತ್ತ್ವವನ್ನು ಪೂಜಿಸುವ ಈ ಪರ್ವ ಪ್ರತಿಯೊಬ್ಬರಲ್ಲೂ ಸ್ತ್ರೀಯರ ಬಗ್ಗೆ ಪೂಜ್ಯ ಭಾವನೆಯನ್ನು ಮೂಡಿಸದರೆ ಆಚರಣೆ ಹೆಚ್ಚು ಅರ್ಥಪೂರ್ಣ ಅನಿಸುತ್ತದೆ. ನವರಾತ್ರಿ ಪ್ರಾಚೀನಕಾಲದಿಂದಲೂ ನಡೆದು ಬಂದಿರುವ ಮಹಿಳಾ ಜಾಗೃತಿಯ ಅಭಿಯಾನ ಎಂದರೂ ತಪ್ಪಿಲ್ಲ. ಈ ಪರ್ವ ಕೊನೆಗೊಳ್ಳುವ ಹೊತ್ತಿನಲ್ಲಿ ಒಂದು ಹೊಸ ಲೇಖನಸರಣಿಯನ್ನು ಆರಂಭಿಸಲು ಯೋಚಿಸಿದ್ದೇನೆ. 


ನಮ್ಮದು ಪ್ರಾಚೀನಕಾಲದಿಂದಲೂ ಪುರುಷಪ್ರಧಾನವಾದ ಕುಟುಂಬ ವ್ಯವಸ್ಥೆ. ಪುರುಷನೇ ಕುಟುಂಬದ ಹಿರಿಯನೂ ಮುಖ್ಯಸ್ಥನೂ ಆಗಿರುತ್ತಾನೆ. ಅವನ ಇಚ್ಛೆಯಂತೆ ಕುಟುಂಬ ಸಾಗುತ್ತದೆ. ಅವನ ಹೆಂಡತಿಯು ಅವನಿಗಿಂತ ವಯಸ್ಸಿನಲ್ಲಿ ಕಿರಿಯಳಾಗಿರುತ್ತಾಳೆ. ಹಾಗಾಗಿ ಅವಳು ಗಂಡನನ್ನು ಗೌರವದಿಂದ ಕಂಡು ಅವನ ಸೇವೆಯನ್ನು ಮಾಡಬೇಕು. ಅವನ ಇಚ್ಛೆಯಂತೆ ನಡೆದುಕೊಳ್ಳಬೇಕು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ವ್ಯವಸ್ಥೆ. ಒಂದು ವೇಳೆ ಗಂಡನು ಹೆಂಡತಿಯ ಮಾತಿನಂತೆ ನಡೆಯುವವನಾದರೆ ಅವನನ್ನು ಸಮಾಜ ಅಮ್ಮಾವ್ರ ಗಂಡ ಎಂತಲೋ, ಹೆಣ್ಣಿಗ ಅಂತಲೋ ಮೂದಲಿಸುತ್ತ ನಗೆಪಾಟಲು ಮಾಡುತ್ತದೆ. ’ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ’ ಮುಂತಾದ ಅನೇಕ ಗಾದೆಗಳು ಮಹಿಳೆಯರಿಗೆ ಮನೆಯ ಯಜಮಾನಿಕೆಯನ್ನು ಕೊಡುವುದಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಹೆಚ್ಚಿನ ಸಾಹಿತ್ಯಗಳು ವಿಶೇಷವಾಗಿ ಪ್ರಾಚೀನ ಗ್ರಂಥಗಳು ಪುರುಷಪಾರಮ್ಯವನ್ನೇ ಮೆರೆಸುತ್ತ ಮಹಿಳೆಯನ್ನು ಪುರುಷವಿಧೇಯಳನ್ನಾಗಿಯೇ ಚಿತ್ರಿಸುತ್ತ ಬಂದಿವೆ. ವೈಕುಂಠದಲ್ಲಿ ನಾರಾಯಣನ ಪಾದಸೇವೆ ಮಾಡುವ ಲಕ್ಷ್ಮಿಯ ಚಿತ್ರ ಆದರ್ಶ ದಾಂಪತ್ಯದ ಪ್ರತೀಕವಾಗಿ ತೋರಿಸಲ್ಪಡುತ್ತದೆ. ಪಾತಿವ್ರತ್ಯದ ಮಹಿಮೆಯನ್ನು ಕೊಂಡಾಡುವ ಅದೆಷ್ಟೋ ಗ್ರಂಥಗಳಿವೆ. ಆದರೆ ಸಾತಿವ್ರತ್ಯದ ಬಗ್ಗೆ ಹೇಳುವವರಾಗಲೀ, ಅನುಸರಿಸುವವರಾಗಲಿ ವಿರಳಾತಿವಿರಳ.


ಸಂಸ್ಕೃತಸಾಹಿತ್ಯಪ್ರಪಂಚದ ಕೆಲವು ಕೃತಿಗಳನ್ನು ಓದುವಾಗ ಇದಕ್ಕೆ ವಿಪರೀತವಾದ ಕೆಲವು ಸನ್ನಿವೇಶಗಳು ನನ್ನ ಗಮನಕ್ಕೆ ಬಂದವು. ಸಂಸ್ಕೃತನಾಟಕ ಅಥವಾ ಕಾವ್ಯದ ಕೆಲವು ನಾಯಕರು ಹೆಂಡತಿಗೆ ಹೆದರಿ ಅವಳ ಕಾಲಿಗೆ ಬೀಳುವ ಸನ್ನಿವೇಶಗಳು ಚಿತ್ರಿತವಾಗಿವೆ. ಅದರಲ್ಲೂ ಇನ್ನೊಬ್ಬ ಹೆಣ್ಣಿನೊಂದಿಗೆ ಚೆಲ್ಲಾಟವಾಡುವಾಗ ಹೆಂಡತಿಯ ಕೈಗೆ ಕೆಂಪುಹಸ್ತರಾಗಿ ಸಿಕ್ಕಿಬಿದ್ದು ಕ್ಷಮೆ ಕೇಳುವ ಅನೇಕ ಪ್ರಸಂಗಗಳು ಸಂಸ್ಕೃತದ ಪ್ರಣಯಕಾವ್ಯಗಳಲ್ಲಿ ಕಂಡುಬರುತ್ತವೆ. ಪ್ರಿಯತಮೆಯ ದಾಸನಾಗಿ ಅವಳ ಸೇವೆ ಮಾಡಲು ಮುಂದಾಗುವ ಪ್ರಿಯತಮರನ್ನೂ ಕಾಣಬಹುದು. ಹೆಂಡತಿಯ ಅಧಿಕಾರಯುತ ವ್ಯವಹಾರದಿಂದ ದೀನನಾದ ಗಂಡನನ್ನೂ ನೋಡಬಹುದು. ತಾನು ಬಯಸಿದ ಹೆಣ್ಣನ್ನು ಒಲಿಸಿಕೊಳ್ಳಲು ಅವಳ ಕಾಲಿಗೆ ಬೀಳುವ ನಾಟಕವನ್ನಾಡುವ ಖಳನಾಯಕರೂ ಅಲ್ಲಲ್ಲಿ ತೋರುತ್ತಾರೆ. ಈ ಲೇಖನ ಸರಣಿಯಲ್ಲಿ ಅಂತಹ ಕೆಲವು ಸನ್ನಿವೇಶಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತೇನೆ. ಇವುಗಳನ್ನು ವಿನೋದ ಪ್ರಸಂಗಗಳೆಂದೊ, ಗಂಭೀರ ಸನ್ನಿವೇಶಗಳೆಂದೋ, ಮಹಿಳೆಯರಿಗೆ ಸಲ್ಲಬೇಕಾದ ನೈಜ ಗೌರವವೆಂದೋ ಓದುಗರು ತಮ್ಮ ಲಹರಿಗನ್ವಯ ಅರ್ಥೈಸಿಕೊಳ್ಳಬಹುದು. ಈ ಸರಣಿಯನ್ನು ಒಪ್ಪಿಕೊಳ್ಳುವುದೊ ಬಿಡುವುದೋ ಸಹೃದಯರಿಗೆ ಬಿಟ್ಟ ವಿಚಾರ. 

🙏🏻🙏🏻🙏🏻

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...