ಕಾಳಿದಾಸನ ವಿಕ್ರಮೋರ್ವಶೀಯಮ್ ನಾಟಕದಲ್ಲಿ ಪುರೂರವ ಅಥವಾ ವಿಕ್ರಮ ನಾಯಕ. ದೇವಲೋಕದ ಅಪ್ಸರೆ ಊರ್ವಶಿ ನಾಯಿಕೆ. ರಾಕ್ಷಸನೊಬ್ಬನ ಕೈಯಿಂದ ನಾಯಿಕೆಯನ್ನು ರಕ್ಷಿಸುವ ಪ್ರಸಂಗದಿಂದ ಇಬ್ಬರ ಮಧ್ಯೆಯೂ ಪ್ರಣಯ ಅಂಕುರಿಸಿ ದೊಡ್ಡದಾಗಿ ಬೆಳೆಯುತ್ತದೆ. ನಾಯಿಕೆ ಊರ್ವಶಿ ಬರೆದ ಪತ್ರವೊಂದು ಅದಾಗಲೇ ಅವರ ಪ್ರೇಮಪ್ರಕರಣದ ಬಗ್ಗೆ ದಾಸಿಯಿಂದ ಕೇಳಿದ್ದ ಮಹಾರಾಣಿ ಕಾಶೀರಾಜಪುತ್ರಿಯ ಕೈಗೆ ಸಿಗುತ್ತದೆ. ಉದ್ಯಾನವನದಲ್ಲಿ ಅವರ ಸಮಾಗಮದ ಸುಳಿವನ್ನು ಪಡೆದು ಅಲ್ಲಿಗೆ ಆಗಮಿಸಿದ ಅವಳನ್ನು ಕಂಡು ಪುರೂರವ ಬೆಚ್ಚುತ್ತಾನೆ. ಅವಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸುತ್ತಾನೆ.
ಅಪರಾಧೀ ನಾಮಾಹಂ ಪ್ರಸೀದ ರಂಭೋರು ವಿರಮ ಸಂರಂಭಾತ್ |
ಸೇವ್ಯೋ ಜನಶ್ಚ ಕುಪಿತಃ ಕಥಂ ನು ದಾಸೋ ನಿರಪರಾಧಃ||
(ಹೇ ಸುಂದರಿ! ಪ್ರಸನ್ನಳಾಗು, ಕುಪಿತಳಾಗಬೇಡ, ನಾನೇ ಅಪರಾಧಿ. ಸ್ವಾಮಿನಿಯು ಕೋಪಗೊಂಡಾಗ ದಾಸನು ಹೇಗೆ ನಿರಪರಾಧಿಯಾದಾನು?)
ರಾಜನ ಚಾತುರ್ಯವನ್ನು ಮನಗೊಂಡ ಮಹಾರಾಣಿ ಅವನ ಶರಣಾಗತಿಯನ್ನು ತಿರಸ್ಕರಿಸಿ ಹೋಗುತ್ತಾಳೆ.
ಇಷ್ಟಾದರೂ ರಾಜನ ಪ್ರಣಯದಾಟ ಮುಂದುವರಿಯುತ್ತದೆ. ಪತಿಯ ಶರಣಾಗತಿಯನ್ನೂ ತಿರಸ್ಕರಿಸಿದ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ ಪತಿಪ್ರಸಾದನ ಎಂಬ ವ್ರತವನ್ನು ಮಾಡಿದ ಮಹಾರಾಣಿ ವ್ರತಪಾರಣೆಯ ದಿನ ಪತಿದರ್ಶನಕ್ಕೆಂದು ಮಣಿಹರ್ಮ್ಯ ಎಂಬ ಅರಮನೆಗೆ ಬಂದಾಗಲೂ ರಾಜ ತನ್ನ (ಕೃತ್ರಿಮ) ವಿನಯವನ್ನು ತೋರಿಸುತ್ತಾನೆ. ’ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ’ ಎಂದು ಹೇಳಿದ ರಾಣಿಗೆ ’ತೊಂದರೆಯೇನು ಬಂತು? ಇದು ನೀನು ನನಗೆ ಮಾಡುತ್ತಿರುವ ಅನುಗ್ರಹ’ ಎನ್ನುತ್ತಾನೆ. ವ್ರತ ಮಾಡುತ್ತ ದೇಹವನ್ನು ದಂಡಿಸುತ್ತಿರುವ ಅವಳನ್ನು ಕುರಿತು
ಅನೇನ ಕಲ್ಯಾಣಿ ಮೃಣಾಲಕೋಮಲಂ
ವ್ರತೇನ ಗಾತ್ರಂ ಗ್ಲಪಯತ್ಯಕಾರಣಮ್|
ಪ್ರಸಾದಮಾಕಾಂಕ್ಷತಿ ಯಸ್ತವೋತ್ಸುಕಃ
ಸ ಕಿಂ ತ್ವಯಾ ದಾಸಜನಃ ಪ್ರಸಾದ್ಯತೇ||
(ನಿನ್ನ ಕೋಮಲವಾದ ಶರೀರವನ್ನು ವ್ರತದ ನೆವದಿಂದ ಯಾಕೆ ದಂಡಿಸುತ್ತಿರುವೆ. ನಿನ್ನ ಪ್ರಸಾದವನ್ನು ಪಡೆಯಲು ಬಯಸುವ ಈ ದಾಸನನ್ನು ಪ್ರಸನ್ನಗೊಳಿಸಲು ಇಷ್ಟು ಕಷ್ಟ ಯಾಕೆ?) ಎನ್ನುತ್ತಾನೆ.
’ದಾತುಮಸಹನೇ ಪ್ರಭವಸ್ಯನ್ಯಸ್ಯೈ ಕರ್ತುಮೇವ ವಾ ದಾಸಮ್’ (ನನ್ನನ್ನು ಬೇರೆಯವಳಿಗೆ ಕೊಡಲು ಅಥವಾ ದಾಸನನ್ನಾಗಿಸಿಕೊಳ್ಳಲು ನಿನಗೆ ಸಂಪೂರ್ಣ ಅಧಿಕಾರ ಇದೆ’ ಎಂದು ಅವಳಿಗೆ ಹೇಳುತ್ತಾನೆ.
ಮಹಾರಾಣಿ ಅಲ್ಲಿಂದ ತೆರಳಿದ ತರುವಾಯ ರಾಜನ ಮನಸ್ಸು ಮತ್ತೆ ಊರ್ವಶಿಯತ್ತ ಹೊರಳುತ್ತದೆ. ತನ್ನ ನರ್ಮಸಚಿವನ ಜೊತೆಗೆ ಮಾತನಾಡುತ್ತ ತಾನು ಊರ್ವಶಿಯ ದಾಸ ಎಂದು ಹೇಳಿಕೊಳ್ಳುತ್ತಾನೆ- ’ಅನನ್ಯನಾರೀಸಾಮಾನ್ಯಃ ದಾಸಸ್ತಸ್ಯಾಃ ಪುರೂರವಾ’
ಮುಂದೆ ಊರ್ವಶಿಯೊಂದಿಗೆ ಮಂದಾಕಿನೀ ತೀರದಲ್ಲಿ ವಿಹರಿಸುತ್ತಿರುವಾಗ ಉದಯವತೀ ಎಂಬ ವಿದ್ಯಾಧರ ಕನ್ಯೆಯನ್ನು ಎವೆಯಿಕ್ಕದೆ ನೋಡಿದ ಪುರೂರವನ ಮೇಲೆ ಊರ್ವಶಿ ಸಿಟ್ಟುಗೊಳ್ಳುತ್ತಾಳೆ. ಆಗ ಪುರೂರವ ಅವಳ ಕಾಲಿಗೆ ಬಿದ್ದು ಅನುನಯಿಸುತ್ತಾನೆ. ಆದರೂ ಊರ್ವಶಿ ಸಮಾಧಾನಗೊಳ್ಳದೆ ಕುಮಾರವನವನ್ನು ಪ್ರವೇಶಿಸಿ ಲತೆಯಾಗಿ ಪರಿವರ್ತಿತಳಾಗುತ್ತಾಳೆ. ಅವಳನ್ನು ಕಾಣದೆ ವಿಲಪಿಸುತ್ತ ’ಕಮಪರಾಧಲವಂ ಮಮ ಪಶ್ಯಸಿ ತ್ಯಜಸಿ ಮಾನಿನಿ ದಾಸಜನಂ ಯತಃ’(ನನ್ನ ಯಾವ ಸಣ್ಣ ಅಪರಾಧವನ್ನು ನೋಡಿ ಈ ದಾಸನನ್ನು ತ್ಯಜಿಸಿದೆ?) ಎನ್ನುತ್ತಾನೆ. ಕೊನೆಯಲ್ಲಿ ಅದೇ ಲತೆಯನ್ನು ನೋಡಿ ’ಚಂಡೀ ಮಾಮವಧೂಯ ಪಾದಪತಿತಂ ಜಾತಾನುತಾಪೇವ ಸಾ’ (ಕಾಲಿಗೆ ಬಿದ್ದ ನನ್ನನ್ನು ಚಂಡಿಯಂತೆ ಕುಪಿತಳಾಗಿ ತಿರಸ್ಕರಿಸಿ ಪಶ್ಚಾತ್ತಾಪಪಡುತ್ತಿರುವವಳಂತೆ ತೋರುತ್ತಿದೆ) ಎಂದು ವರ್ಣಿಸುತ್ತಾನೆ.
ಒಟ್ಟಿನಲ್ಲಿ ಪಟ್ಟದ ರಾಣಿಯ ಕೋಪಕ್ಕೆ ಹೆದರಿ, ಪ್ರಿಯತಮೆಯನ್ನು ಒಲಿಸಿಕೊಳ್ಳುವ ಸಲುವಾಗಿ ಇಬ್ಬರ ಎದುರೂ ಬಗ್ಗುವ ಪರಿಸ್ಥಿತಿ 'ವಿಕ್ರಮ'ನದ್ದು.
ಮಹಾಬಲ ಭಟ್ಟ, ಗೋವಾ
No comments:
Post a Comment