ಕಾಳಿದಾಸನ ಇನ್ನೊಂದು ಪ್ರಣಯಭರಿತ ಕೃತಿ ”ಮಾಲವಿಕಾಗ್ನಿಮಿತ್ರಮ್’. ಈ ಕೃತಿಯ ಮೂರನೆಯ ಅಂಕದಲ್ಲಿ ಅಶೋಕದೋಹದ ಪ್ರಸಂಗ ಇದೆ. ಸುಂದರಿಯರು ತಮ್ಮ ಅಲಂಕೃತಪಾದಗಳಿಂದ ಒದ್ದರೆ ಹೂ ಬಿಡದ ಅಶೋಕವೃಕ್ಷವು ಪುಷ್ಪಿತವಾಗುತ್ತದೆ ಎಂಬುದು ಕವಿಸಮಯ. ಪ್ರಾಯಃ ಎಲ್ಲ ಸಂಸ್ಕೃತಕಾವ್ಯಗಳಲ್ಲಿಯೂ ಇದರ ಉಲ್ಲೇಖ ಬರುತ್ತದೆ. ಅಶೋಕ ವೃಕ್ಷ ಸುಂದರಿಯರ ಪಾದಾಹತಿಯನ್ನು ಬಯಸುತ್ತದೆ ಎಂದೂ, ಒಂದು ವೇಳೆ ಹಾಗೆ ವೃಕ್ಷವು ಪುಷ್ಪಿತವಾದರೆ ಅದು ಆ ತರುಣಿಯ ಸೌಂದರ್ಯಕ್ಕೆ ಪ್ರಮಾಣ ಎಂತಲೂ ವರ್ಣಿಸಲಾಗುತ್ತದೆ.
ಧಾರಿಣೀ ಇರಾವತೀ ಎಂಬ ಇಬ್ಬರು ಹೆಂಡಿರ ಮುದ್ದಿನ ರಾಜನಾಗಿದ್ದರೂ ಧೀರಲಲಿತ ನಾಯಕ ಅಗ್ನಿಮಿತ್ರನಿಗೆ ಮಾಳವಿಕೆಯೆಂಬ ನಾಟ್ಯಚತುರೆ ತರುಣಿಯಲ್ಲಿ ಆಸಕ್ತಿ. ಅದಕ್ಕೆ ಅವನ ನರ್ಮಸಚಿವ ಗೌತಮನ ಕುಮ್ಮಕ್ಕು ಬೇರೆ. ಗಣದಾಸ ಹರದತ್ತರ ಜಗಳದ ನೆಪದಿಂದ ಮಾಳವಿಕೆಯ ದರ್ಶನ ಪಡೆದ ಅಗ್ನಿಮಿತ್ರ ಅವಳನ್ನೇ ಕನವರಿಸುತ್ತಿರುತ್ತಾನೆ. ಧಾರಿಣಿಯ ಕಾಲುನೋವಿನಿಂದಾಗಿ ಅಶೋಕದೋಹದಕ್ಕೆ ಅಣಿಯಾಗುತ್ತಿರುವ ಮಾಳವಿಕೆಯೊದಿಗೆ ಉಪವನದಲ್ಲಿ ಅಗ್ನಿಮಿತ್ರನ ಸಮಾಗಮದ ಸನ್ನಿವೇಶ ಕಾಳಿದಾಸನ ಲೇಖನಿಯಿಂದ ಅದ್ಭುತವಾಗಿ ಚಿತ್ರಿತವಾಗಿದೆ.
ಬಕುಲಾವಲಿಕೆ ಎನ್ನುವ ದಾಸಿ ಮಾಳವಿಕೆಯ ಪಾದಗಳಿಗೆ ವರ್ಣವಿನ್ಯಾಸಮಾಡಿ ಅವಳನ್ನು ಅಣಿಗೊಳಿಸುತ್ತಿದ್ದಾಳೆ. ಮರೆಯಲ್ಲಿ ನಿಂತಿರುವ ಅಗ್ನಿಮಿತ್ರ ಅದನ್ನು ಆಸ್ವಾದಿಸುತ್ತಿದ್ದಾನೆ. ಅವಳ ಸುಂದರ ಪಾದಗಳು ಅಶೋಕದ ದೋಹದಾಪೇಕ್ಷೆಯನ್ನೂ, ಅಪರಾಧಿಯಾಗಿ ತಲೆ ಬಾಗಿದ ಪ್ರಿಯತಮನನ್ನೂ ದಮನಿಸಲು ಶಕ್ತವಾಗಿವೆ ಎಂದು ವರ್ಣಿಸುತ್ತಾನೆ.
ನವಕಿಸಲಯರಾಗೇಣಾಗ್ರಪಾದೇನ ಬಾಲಾ ಸ್ಫುರಿತನಖರುಚಾ ದ್ವೌ ಹಂತುಮರ್ಹತ್ಯನೇನ |
ಅಕುಸುಮಿತಮಶೋಕಂ ದೋಹದಾಪೇಕ್ಷಯಾ ವಾ ಪ್ರಣಮಿತಶಿರಸಂ ವಾ ಕಾಂತಮಾರ್ದ್ರಾಪರಾಧಮ್ ||
ಅದಕ್ಕೆ ವಿದೂಷಕ ’ಅಪರಾಧಿಯಾದ ನಿನಗೇ ಒದೆಯುತ್ತಾಳೆ’ ಎನ್ನುತ್ತಾನೆ. ಸಿದ್ಧದರ್ಶಿಯಾದ ಬ್ರಾಹ್ಮಣನ ಮಾತನ್ನು ಶಿರಸಾಪರಿಗ್ರಹಿಸುತ್ತೇನೆ ಎನ್ನುತ್ತ ಅಗ್ನಿಮಿತ್ರ ಮಾಳವಿಕೆಯ ಪಾದಾಹತಿಯು ತನಗೂ ಪ್ರಿಯವೇ ಎಂಬ ಭಾವವನ್ನು ಹೊರಗೆಡಹುತ್ತಾನೆ.
ಬಕುಲಾವಲಿಕೆಯು ತನ್ನ ಪಾದವನ್ನು ಅಲಂಕರಿಸಿದ ಪರಿಯನ್ನು ಮಾಳವಿಕೆಯು ಬಹುವಾಗಿ ಮೆಚ್ಚಿಕೊಂಡಾಗ ಬಕುಲಾವಲಿಕೆಯು ತಾನು ಈ ವಿಷಯದಲ್ಲಿ ಸ್ವಾಮಿಯ(ರಾಜನ) ಶಿಷ್ಯೆ ಎನ್ನುತ್ತಾಳೆ. ಅದರಿಂದ ಅಗ್ನಿಮಿತ್ರನು ದಾಸಿಯರ ಸಮಕ್ಷದಲ್ಲೇ ತನ್ನ ರಾಣಿಯರ ಚರಣಾಲಂಕಾರವನ್ನು ಮಾಡುತ್ತಿದ್ದ ಎಂಬುದು ವಿದಿತವಾಗುತ್ತದೆ. ಒಂದು ಪಾದದ ಅಲಂಕಾರ ಮುಗಿದಾಗ ಬಕುಲಾವಲಿಕೆಯು ’ಅಲಂಕಾರ ಮುಗಿಯಿತು, ಬಾಯಿಯಿಂದ ಗಾಳಿ ಊದಿ ಒಣಗಿಸಬೇಕಾಗಿದೆ’ ಎಂದಾಗ ರಾಜನಿಗೆ ಈ ಅವಕಾಶ ತನಗೆ ಸಿಕ್ಕರೆ ಅದೆಷ್ಟು ಚೆನ್ನಾಗಿತ್ತು ಎನಿಸಿತು.
ಆರ್ದ್ರಾಲಕ್ತಕಮಸ್ಯಾಶ್ಚರಣಂ ಮುಖಮಾರುತೇನ ವೀಜಯಿತುಮ್ |
ಪ್ರತಿಪನ್ನಃ ಪ್ರಥಮತರಃ ಸಂಪ್ರತಿ ಸೇವಾವಕಾಶೋ ಮೇ ||
ಅನಂತರ ಮಾಳವಿಕೆಯು ಅಶೋಕವೃಕ್ಷಕ್ಕೆ ತನ್ನ ಪಾದದಿಂದ ಒದ್ದಾಗ ತಾನು ಪಾದಪ್ರಹಾರವನ್ನು ಪಡೆಯುವ ಭಾಗ್ಯದಿಂದ ವಂಚಿತನಾಗಿರುವೆನಲ್ಲ ಎಂದು ಹಳಹಳಿಸುತ್ತಾನೆ.
ಹೀಗೆ ಅಗ್ನಿಮಿತ್ರನು ತನ್ನ ಮನಸ್ಸನ್ನು ಮಾಳವಿಕೆಯ ಚರಣಗಳಿಗೆ ಅರ್ಪಿಸಿಕೊಂಡಿರುವಾಗ ಅವನ ಎರಡನೆಯ ರಾಣಿ ಇರಾವತಿಯ ಪ್ರವೇಶವಾಗುತ್ತದೆ. ಮಾಳವಿಕೆಯೊಂದಿಗೆ ರಾಜನು ಸರಸವಾಡುತ್ತಿರುವುದನ್ನು ಕಂಡು ಕ್ರುದ್ಧಳಾಗುತ್ತಾಳೆ. ತನ್ನ ಕಟಿಪಟ್ಟವನ್ನು(ಸೊಂಟದ ಪಟ್ಟಿ-ಬೆಲ್ಟ್!) ತೆಗೆದುಕೊಂಡು ರಾಜನಿಗೆ ಹೊಡೆಯಲು ಮುಂದಾಗುತ್ತಾಳೆ. ಅದನ್ನು ಅಗ್ನಿಮಿತ್ರನು ವರ್ಣಿಸುವ ಪರಿಯನ್ನು ನೋಡಿ-
ಬಾಷ್ಪಾಸಾರಾ ಹೇಮಕಾಂಚೀಗುಣೇನ ಶ್ರೋಣೀಬಿಂಬಾದಪ್ಯುಪೇಕ್ಷಾಚ್ಯುತೇನ |
ಚಂಡೀ ಚಂಡಂ ಹಂತುಮಭ್ಯುದ್ಯತಾ ಮಾಂ ವಿದ್ಯುದ್ದಾಮ್ನಾ ಮೇಘರಾಜೀವ ವಿಂಧ್ಯಮ್ ||
ತನ್ನನ್ನು ಹೊಡೆಯಲು ಮೇಖಲೆಯನ್ನು ಎತ್ತಿರುವ ಇರಾವತಿಯು ಚಂಡನನ್ನು ಸಂಹರಿಸಲು ಆಯುಧವನ್ನು ಎತ್ತಿರುವ ಚಂಡಿಯಂತೆ ತೋರುತ್ತಿದ್ದಾಳೆ, ವಜ್ರಾಯುಧದಿಂದ ವಿಂಧ್ಯಪರ್ವತವನ್ನು ಹೊಡೆಯಲು ಸಿದ್ಧವಾಗಿರುವ ಮೇಘಪಂಕ್ತಿಯಂತೆ ಕಾಣುತ್ತಿದ್ದಾಳೆ ಎಂದು ವರ್ಣಿಸುತ್ತಾನೆ. ಇರಾವತಿಯು ಒಂದು ಕ್ಷಣ ತಡೆದಾಗ ’ಅಪರಾಧಿಯಾಗಿರುವ ನನ್ನನ್ನು ಹೊಡೆಯಲು ಎತ್ತಿರುವ ಆಯುಧವನ್ನು ಯಾಕೆ ಉಪಸಂಹರಿಸಿದೆ? ದಾಸಜನರ ಮೇಲೆ ಸಿಟ್ಟಾಗುವುದು ನಿನಗೆ ಯುಕ್ತವೇ ಆಗಿದೆ’ ಎಂದು ಅವಳ ಕಾಲಿಗೆ ಬೀಳುತ್ತಾನೆ. ’ನಿನ್ನ ದೋಹದವನ್ನು ಪೂರ್ತಿಗೊಳಿಸುವ ಮಾಳವಿಕೆಯ ಕಾಲುಗಳಲ್ಲ ಇವು’ ಎಂದು ಕಾಲಿಗೆರಗಿದ ರಾಜನನ್ನು ತಿರಸ್ಕರಿಸಿ ಇರಾವತಿಯು ಬಿರಬಿರನೆ ಅಲ್ಲಿಂದ ನಡೆಯುತ್ತಾಳೆ.
*ಮಹಾಬಲ ಭಟ್ಟ, ಗೋವಾ*
No comments:
Post a Comment