Tuesday, January 26, 2016

ಗೆಳೆಯ ರಾಮಚಂದ್ರ ಹೆಗಡೆಗೆ ಅಭಿನಂದನೆ.

೨೦೦೨ ನೇ ಇಸ್ವಿಯ ಆರಂಭದಲ್ಲಿ ಯು.ಜಿ.ಸಿ.ಯ ಒಂದು ಉಪಕ್ರಮದಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಣ್ಣದೊಂದು ನೌಕರಿ ದೊರೆತಿತ್ತು. ಸಂಸ್ಕೃತಭಾರತಿಯ ಕಾರ್ಯಕರ್ತನಾದುದರಿಂದ ಸೋದರ ಸಂಸ್ಥೆ ವಿದ್ಯಾರ್ಥಿಪರಿಷತ್ತಿನ ಕಾರ್ಯಾಲಯದಲ್ಲಿ ನನ್ನ ವಾಸವ್ಯವಸ್ಥೆಯಾಗಿತ್ತು.ಅಲ್ಲಿಗೆ ಬಂದು ಹೋಗುತ್ತಿದ್ದ ಅನೇಕ ವಿದ್ಯಾರ್ಥಿಗಳಲ್ಲಿ ಒಬ್ಬ ದಿನ ಕಳೆದಂತೆ ನನಗೆ ಆಪ್ತನಾದ. ಅವನ ಮುಖದಲ್ಲಿ ಅದಮ್ಯ ಉತ್ಸಾಹ, ಉತ್ಕಟ ರಾಷ್ಟ್ರಾಭಿಮಾನ ಬತ್ತದ ಕ್ರಿಯಾಶೀಲತೆಗಳು ಪ್ರತಿಫಲನಗೊಂಡಿರುವುದನ್ನು ಗಮನಿಸಿದ್ದೆ. ಒಂದಿನ ಅವನ ಪ್ರೀತಿಯ ಕರೆಗೆ ಓಗೊಟ್ಟು ಪಕ್ಕದಲ್ಲೇ ಇದ್ದ ಅನಾಥಾಶ್ರಮವೆಂಬ ಛಾತ್ರಾವಾಸಕ್ಕೆ ಹೋಗಿದ್ದೆ. ತನ್ನ ಇಂಜಿನಿಯರಿಂಗ್ ಪುಸ್ತಕಗಳ ಮಧ್ಯದಿಂದ ಸಣ್ಣ ದಿನಚರಿ ಪುಸ್ತಕವನ್ನು ತೆಗೆದು ತಾನು ಬರೆದಿದ್ದ ನಾಲ್ಕಾರು ಮುಕ್ತಕಗಳನ್ನೂ ಒಂದೆರಡು ಕವಿತೆಗಳನ್ನೂ ತೋರಿಸಿದ. ನಾನು ಅವನಲ್ಲಿ ಕಂಡ ಗುಣಗಳು ಅಲ್ಲಿಯೂ ಪ್ರತಿಬಿಂಬಿತವಾಗಿದ್ದವು. ದೇಶದ ಬಗ್ಗೆ, ಯುವಕರ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಅವನ ಪ್ರತಿ ಮಾತಿನಲ್ಲೂ ತಾನು ತನ್ನ ನೆಲಕ್ಕಾಗಿ, ನಮ್ಮ ಜನರಿಗಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ ಕಾಣುತ್ತಿತ್ತು.
ನಾನು ಮೈಸೂರನ್ನು ಬಿಟ್ಟು ಗೋವಾಕ್ಕೆ ಬಂದ ಮೇಲೂ ಪತ್ರಗಳ ಮೂಲಕ ನಮ್ಮ ಸಂಪರ್ಕ ನಿರಂತರವಾಗಿತ್ತು. ನಾನೊಂದು ಹಸ್ತಪ್ರತಿಯ ಪತ್ರಿಕೆಯನ್ನು ಆರಂಭಿಸುತ್ತೇನೆ. ನೀವು ಅದಕ್ಕೆ ನಿರಂತರವಾಗಿ ಲೇಖನ ಬರೆಯಬೇಕು ಎಂದು ಒತ್ತಾಯಿಸುತ್ತಿದ್ದ. ಆಯಿತು ಎಂದು ಒಪ್ಪಿದ್ದೆ. ಹೀಗೆ ತನ್ನ ಸಹವಾಸಿ ನಾರಾಯಣ ಹೆಗಡೆ ಮತ್ತಿತರರನ್ನು ಕಲೆಹಾಕಿ ಏ೩ ಆಕಾರದ ಒಂದು ಹಾಳೆಯ ಒಂದೇ ಮಗ್ಗುಲಲ್ಲಿ ಬರೆದ ಪತ್ರಿಕೆಯನ್ನು ಆರಂಭಿಸಿಯೇ ಬಿಟ್ಟ. ೨೦೦೪ ರ ಮೇ ತಿಂಗಳಿನಲ್ಲಿ ಕಾರ್ಯನಿಮಿತ್ತ ಮೈಸೂರಿಗೆ ಹೋದಾಗ ’ಭಟ್ರೆ! ಇದು ನಿಮ್ಮ ಕೈಯಿಂದಲೇ ಬಿಡುಗಡೆ ಆಗಲಿ’ ಎಂದು ಕಾಗದದ ಸುರುಳಿಯೊಂದನ್ನು ನನ್ನ ಕೈಗಿತ್ತ. ಒಂದೆರಡು ಹೊಸ್ಟೆಲ್ ವಾಸಿಗಳ ಸಮ್ಮುಖದಲ್ಲಿ ಸರಳವಾಗಿ ’ಚೈತ್ರರಶ್ಮಿ – A ray of hope’ (ಖಾಸಗಿ ಪ್ರಸಾರಕ್ಕಾಗಿ ಮಾತ್ರ) ಬಿಡುಗಡೆಯಾಗಿತ್ತು. ತನ್ನ ಖರ್ಚಿನಲ್ಲಿಯೇ ಒಂದೆರಡು ಝೆರೊಕ್ಸ್ ಪ್ರತಿಗಳನ್ನು ಮಾಡಿ ಓದುವವರಿಗೆ ಮಾತ್ರ ಹಂಚಿದ. ಈ ಪತ್ರಿಕೆ ಅವಕಾಶವಂಚಿತ ಗ್ರಾಮೀಣ ಯುವಬರಹಗಾರರಿಗೆ ಒಂದು ವೇದಿಕೆಯಾಗಬೇಕೆಂದು ಅವನ ಆಸೆಯಾಗಿತ್ತು. ಮುಂದೆ ಸಾವಕಾಶವಾಗಿ ಹಸ್ತಪ್ರತಿ ಡಿ.ಟಿ.ಪಿ.ಗೆ ತಿರುಗಿ, ಪುಸ್ತಕದ ಆಕಾರವನ್ನು ಪಡೆದುಕೊಂಡುದೂ ಅಲ್ಲದೆ ಓದುಗರು ಹಾಗೂ ಬರಹಗಾರರ ಸಂಖ್ಯೆ ನಾಲ್ಕರಿಂದ ಎಂಟಾಗಿ, ಎಂಟರಿಂದ ಹದಿನಾರಾಗಿ ಬೆಳೆಯುತ್ತ ತನ್ನ ವ್ಯಾಪ್ತಿಯನ್ನು ಮೈಸೂರಿನಿಂದ ಬೆಂಗಳೂರು, ಕರಾವಳಿ, ಮಲೆನಾಡು, ಬಯಲುಸೀಮೆಗಳಲ್ಲೆಲ್ಲ ವಿಸ್ತರಿಸಿತ್ತು. ಅದೊಂದು ಪತ್ರಿಕೆಯಾಗಷ್ಟೆ ಉಳಿಯದೆ ಪ್ರೀತಿಯ ಸಂಬಂಧಗಳ ಭಾವಯಾನವಾಗಿ ’ಚೈತ್ರರಶ್ಮಿ’ ಪರಿವಾರವನ್ನು ಹುಟ್ಟುಹಾಕಿತ್ತು.

ನಾನು ಯಾರ ಬಗ್ಗೆ ಬರೆಯುತ್ತಿರುವೆ ಎನ್ನುವುದು ನಿಮಗೆ ಇನ್ನೂ ಒಗಟಾಗಿಯೆ ಇದೆಯೇ? ಇರಲಿಕ್ಕಿಲ್ಲ. ನಿಜ, ಇದು ಅದೇ ರಾಚಂ ಅಥವಾ ರಾಮಚಂದ್ರ ಹೆಗಡೆಯವರ ’ಚೈತ್ರರಶ್ಮಿ’ಯ ಕಥೆ.

ಇಂದು ಆ ಪತ್ರಿಕೆ ಇಲ್ಲದೆ ಇರಬಹುದು. ಆದರೆ ಅದು ಯುವ ಬರಹಗಾರರಲ್ಲಿ ಮೂಡಿಸಿದ ಸಂಚಲನ ಅವರ್ಣನೀಯ. ಕಲ್ಲಬ್ಬೆಯ ಪ್ರಿಯಕ್ಕ, ಕರ್ಕಿಸವಲಿನ ಸುಧಕ್ಕ, ಗಂಗೋತ್ರಿಯ ನವೀನ, ಹಳವಳ್ಳಿಯ ನರಸಿಂಹಣ್ಣ, ಎನ್ವೀ, ಸಂಜಯ, ಸೋದರಿ ರಜನಿ ಹಾಗೂ ನಾನು ಬೆಳೆದಿದ್ದು ಚೈತ್ರರಶ್ಮಿಯಿಂದ ಅಲ್ಲದಿರಬಹುದು. ಆದರೆ ಆಗ ಬೆಳಕಿಗೆ ಬಂದಿದ್ದು ಚೈತ್ರರಶ್ಮಿಯಿಂದ ಎಂದು ಧೈರ್ಯವಾಗಿ ಹೇಳಬಲ್ಲೆ. ನಮ್ಮೆಲ್ಲರ ಮೊಳಕೆಯೊಡೆಯುತ್ತಿದ್ದ ಪ್ರತಿಭೆಗೆ ಚೈತ್ರರಶ್ಮಿ ಒಂದು ದಿಕ್ಕನ್ನು ತೋರಿಸಿತು ಎಂದೂ ನಿಸ್ಸಂಶಯವಾಗಿ ಹೇಳಬಲ್ಲೆ.  ಉದ್ಯೋಗವಿಲ್ಲದೆ ಅಲೆಯುತ್ತಿದ್ದ ಕಾಲದಲ್ಲಿಯೂ ರಾಚಂ ತಮ್ಮ ಕಾಯಕವನ್ನು ಬಿಡಲಿಲ್ಲ. ಲೇಖಕರನ್ನೂ ಓದುಗರನ್ನೂ ಅವರಷ್ಟಕ್ಕೇ ಬಿಡದೆ ಅವರ ಮನೆಗೆ ಹೋಗಿ ಒಂದು ದಿನ ಉಳಿದು, ಅವರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಬಾಂಧವ್ಯವನ್ನು ಸ್ಥಾಪಿಸಿದಾಗಲೇ ಅವರಿಗೆ ಸಮಾಧಾನ.

ನಾಯಕ ಆಲದಮರದಂತೆ ಆದರೆ ಇತರರಿಗೆ ತಂಪಾದ ನೆರಳನ್ನಷ್ಟೇ ನೀಡಬಲ್ಲ. ಆ ನೆರಳಲ್ಲಿ ಇನ್ಯಾವುದೇ ಗಿಡ ಬೆಳೆಯುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ತನ್ನ ಗೆಳೆಯರ ಕವನ ಸಂಕಲನಗಳು ತಯಾರಾದಾಗ ಅವರಿಗಿಂತ ಹೆಚ್ಚು ಸಂಭ್ರಮಿಸಿದ್ದು ಈ ರಾಮು. ಪುಸ್ತಕದ ಡಿ.ಟಿ.ಪಿ.ಯಿಂದ ಹಿಡಿದು ಬಿಡುಗಡೆಯವರೆಗೆ ಅವರೊಂದಿಗೆ ನಿಂತು ಎಲ್ಲವನ್ನೂ ಸರಿಯಾಗಿದೆ ಎಂದು ಮನದಟ್ಟಾದಾಗಲೇ ಅವರಿಗೆ ಸಮಾಧಾನ.

ಬರಹಗಾರನಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂದು ಪ್ರತಿಪಾದಿಸುವ ರಾಚಂ ಬರಹ-ಕೃತಿ ಪರಸ್ಪರ ವಿರುದ್ಧವಾಗಿರುವ ಲೇಖಕರ ಮೇಲೆ ಹರಿಹಾಯುತ್ತಾರೆ. ತಮ್ಮ ಇಂಜಿನಿಯರ್ ಗೆಳೆಯರೊಂದಿಗೆ ಸಮಾಜ ಸೇವಕರ ಸಮಿತಿಯನ್ನು ರಚಿಸಿಕೊಂಡು ನೆರವು ಬೇಕಾದಲ್ಲಿ ಧಾವಿಸುವ ಇವರ ಸಾಮಾಜಿಕ ಬದ್ಧತೆ ಪ್ರಶ್ನಾತೀತ. ೨೦೧೦ರಲ್ಲಿ ಉತ್ತರಕರ್ನಾಟಕ ನೆರೆಹಾವಳಿಗೆ ತುತ್ತಾದಾಗ ತಮ್ಮ ಗೆಳೆಯರೊಂದಿಗೆ ಅವರ ನೆರವಿಗೆ ಧಾವಿಸಿದ್ದಲ್ಲದೆ, ಅಲ್ಲಿಯ ಚಿತ್ರಣ ಮನಮುಟ್ಟುವಂತೆ ’ನೆರೆಯ ನೋವಿಗೆ ಸ್ಪಂದನ’ ಎಂಬ ಪುಸ್ತಕವನ್ನೂ ಹೊರತಂದು ಹಂಚಿದರು. ಇನ್ಫೋಸಿಸ್ ಸೇರಿದ ಮೇಲೂ ಅಲ್ಲಿಯೂ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ.

ನನ್ನ ಮತ್ತು ಅವರ ಮೈತ್ರಿ ಹೆಚ್ಚು ಬೆಳೆಯಲು ಇಬ್ಬರೂ ಮಂಕುತಿಮ್ಮನ ಭಕ್ತರಾಗಿದ್ದು ಕಾರಣ ಅನಿಸುತ್ತಿದೆ. ನನ್ನ ಮದುವೆ ನಿಶ್ಚಿತವಾದಾಗ ಇವರು ಗಾಬರಿಯಾಗಿದ್ದರು. ಸಂಸಾರಕೂಪದಲ್ಲಿ ಬಿದ್ದು ಭಟ್ಟರೆಲ್ಲಿ ಕಾಣೆಯಾಗಿ ಬಿಡುತ್ತಾರೊ ಎಂಬ ಭಯ ಅವರಲ್ಲಿತ್ತು. ನನ್ನ ಭಾವೀ ಪತ್ನಿಯ ವಿಳಾಸವನ್ನು ಇಸಕೊಂಡು ’ಭಟ್ಟರನ್ನು ಸಂಪೂರ್ಣ ಹೈಜಾಕ್ ಮಾಡಿಬಿಡಬೇಡಿ. ನಮಗೂ ಸ್ವಲ್ಪ ಉಳಿಸಿ’ ಎಂದು ಪತ್ರ ಬರೆದಿದ್ದನ್ನು ನನ್ನ ಪತ್ನಿ ಇಂದಿಗೂ ಸ್ಮರಿಸುತ್ತಾಳೆ. ಗೆಳೆಯರೊಂದಿಗೆ ವ್ಯವಹರಿಸುವಾಗ ಅದೇ ಮುಗ್ಧತೆ ಅವರ ಮಾತಿನಲ್ಲಿ. ಇನ್ಫೋಸಿಸ್ ಸೇರಿದ ಹೊಸದರಲ್ಲಿ ಮೊದಲ ಬಾರಿ ವಿಮಾನ ಪ್ರಯಾಣದ ಅವಕಾಶ ದೊರೆತಾಗ ಗೆಳೆಯರಿಗೆಲ್ಲ ಫೋನ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು ಇನ್ನೂ ನೆನಪಿದೆ.

ಅವರಿಗೆ ಸಿಕ್ಕಿದ್ದು ಪದ್ಮಪ್ರಶಸ್ತಿಯೋ ಭಾರತರತ್ನವೋ ಆಗಿಲ್ಲದಿರಬಹುದು. ಆದರೂ ಅವರ ಸ್ನೇಹಿತರು ಸಂಭ್ರಮಪಡುವುದರಲ್ಲಿ ಅರ್ಥವಿದೆ. ಇದು ಅವರು ಅರ್ಜಿಹಾಕಿ ಅಥವಾ ವಶೀಲಿ ಹಚ್ಚಿ ಪಡೆದ ಪ್ರಶಸ್ತಿಯಲ್ಲ. ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಎಷ್ಟೋ ಎಲೆಮರೆಯ ಕಾಯಿಗಳನ್ನು ಹೊರಗೆ ತಂದು ಅವರಲ್ಲಿರುವ ಸಿಹಿಯನ್ನು ಸಮಾಜಕ್ಕೆ ತೋರಿದ ವ್ಯಕ್ತಿ ಎಲೆಮರೆಯ ಕಾಯಾಗಿಯೇ ಇರುವುದು ತರವಲ್ಲ. ಈ ಪ್ರಶಸ್ತಿ ಅವರ ಹೆಚ್ಚಿನ ಸಾಧನೆಗೆ ಪ್ರೇರಣೆಯಾಗಲಿ, ಪ್ರಶಸ್ತಿಯ ಮಾಯೆ ಅವರನ್ನು ಆವರಿಸದಿರಲಿ ಎಂದು ಆಶಿಸೋಣ.


नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...