Tuesday, October 15, 2024

ನಾರೀವಿಧೇಯರು-ಮಾಧವ (ಗೀತಗೋವಿಂದ)


ಜಯದೇವಕವಿಯ ಗೀತಗೋವಿಂದಮ್ ಎನ್ನುವ ಗೀತಕಾವ್ಯ ಅಪ್ರತಿಮಪ್ರೇಮಕಾವ್ಯವೆಂದು ಪ್ರಥಿತವಾಗಿದೆ. ರಾಧಾ-ಕೃಷ್ಣರ ಪ್ರೇಮದ ಪರಾಕಾಷ್ಠತೆಯ ವರ್ಣನೆ ಈ ಕಾವ್ಯದಲ್ಲಿದೆ. ಈ ಕಾವ್ಯದಲ್ಲಿ ಅನೇಕ ಕಡೆ ಕೃಷ್ಣ ರಾಧೆಗೆ ಶರಣಾಗುವ ಸನ್ನಿವೇಶಗಳು ಚಿತ್ರಿತವಾಗಿವೆ.

ಕಾವ್ಯದ ಪ್ರಥಮಸರ್ಗದಲ್ಲಿ ಕವಿಯು ತನ್ನನ್ನು ಪದ್ಮಾವತೀಚರಣಚಾರಣಚಕ್ರವರ್ತೀ ಎಂದು ಕರೆದುಕೊಂಡು ತಾನು ಪತ್ನಿಯ ಚರಣಪೂಜಕ ಎಂದು ವ್ಯಕ್ತವಾಗಿಯೇ ಹೇಳಿ ಅವಳಿಗೆ ಗೌರವವನ್ನು ಸಲ್ಲಿಸಿದ್ದಾನೆ. ಅನೇಕ ವಿಮರ್ಶಕರು ಪದ್ಮಾವತಿ ಎಂದರೆ ಲಕ್ಷ್ಮೀ ಎಂದು ಅರ್ಥೈಸಬೇಕು ಎಂದು ಅಭಿಪ್ರಾಯಪಟ್ಟರೂ, ಲಕ್ಷ್ಮಿಯ ಇನ್ನ್ಯಾವುದೇ ಪರ್ಯಾಯಪದವನ್ನು ಬಳಸದೆ ತನ್ನ ಪತ್ನಿಯ ಹೆಸರನ್ನೇ ಬಳಸಿರುವುದು ಅವನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ತೃತೀಯಸರ್ಗದಲ್ಲಿ ರಾಧೆಯನ್ನು ಕಾಣದೆ ಮಾಧವನ ವಿರಹಬೇಗೆ ಹೆಚ್ಚುತ್ತಾ ಇದೆ. ಬೇರೆ ಗೋಪಿಕೆಯರಿಂದ ಸುತ್ತುವರಿದ ಕೃಷ್ಣನನ್ನು ನೋಡಿ ಕೋಪಗೊಂಡು ಅವಳು ಹೊರಟುಹೋಗಿದ್ದಾಳೆ. ಅವಳು ಹಾಗೆ ಹೊರಟು ಹೋಗಿದ್ದಕ್ಕೆ ತಾನೇ ಕಾರಣ ಎಂದು ಕೃಷ್ಣ ವಿಲಪಿಸುತ್ತಿದ್ದಾನೆ. ಅವಳು ಹೋಗುವಾಗಲೂ ಅದೇ ಅಪರಾಧಿಭಾವದಿಂದಾಗಿ ಉಂಟಾದ ಭಯದಿಂದ ಅವಳನ್ನು ತಡೆಯಲೂ ಮಾಧವನಿಗೆ ಸಾಧ್ಯವಾಗಲಿಲ್ಲ. 

ಸಾಪರಾಧತಯಾ ಮಯಾಽಪಿ ನ ವಾರಿತಾಽತಿಭಯೇನ |

ಹರಿ ಹರಿ ಹತಾದರತಯಾ ಗತಾ ಸಾ ಕುಪಿತೈವ || (ಗೀ.ಗೋ. ಸರ್ಗ೩, ಗೀತಂ೭)

ಹೀಗೆ ಭಯಗೊಂಡ ಮಾಧವ ಅವಳನ್ನು ವಿನಯದಿಂದ ಅನುನಯಿಸಲು ಬಯಸುತ್ತಾನೆ - ತನ್ನ ವೇದ್ಮಿ ಕುತೋ ಗತಾಸಿ ನತೇನ ತೇಽನುನಯಾಮಿ ಎಂದು ಅಲವತ್ತುಕೊಳ್ಳುತ್ತಾನೆ. ಕ್ಷಮ್ಯತಾಮಪರಂ ಕದಾಪಿ ತವೇದೃಶಂ ನ ಕರೋಮಿ ಎಂದು ಮತ್ತೆ ಮತ್ತೆ ಮನಸ್ಸಿನಲ್ಲಿಯೇ ಕ್ಷಮೆ ಯಾಚಿಸುತ್ತಾನೆ.

ಅತ್ತ ರಾಧೆಯೂ ಕೃಷ್ಣನ ವಿರಹದಿಂದ ಬೇಯುತ್ತಾಳೆ. ಮಾಧವನೂ ತನ್ನ ವಿರಹದಿಂದ ಬಳಲುತ್ತಿದ್ದಾನೆ ಎಂಬ ಕಲ್ಪನೆ ಅವಳಿಗಿಲ್ಲ. ಅವನು ಅನ್ಯಗೋಪಿಕೆಯೊಂದಿಗೆ ಸರಸದಲ್ಲಿ ನಿರತನಾಗಿದ್ದಾನೆ ಎಂದೇ ಕಲ್ಪಿಸಿಕೊಳ್ಳುತ್ತಾಳೆ. ತನ್ನ ಸಖಿಗೆ ಆ ಕಲ್ಪನೆಯನ್ನು ವಿಸ್ತರಿಸಿ ವರ್ಣಿಸುತ್ತ ಹೀಗೆ ವರ್ಣಿಸುತ್ತಾಳೆ - 

ಚರಣಕಿಸಲಯೇ ಕಮಲಾನಿಲಯೇ ನಖಮಣಿಗಣಪೂಜಿತೇ|

ಬಹಿರಪವರಣಂ ಯಾವಕಭರಣಂ ಜನಯತಿ ಹೃದಿ ಯೋಜಿತೇ || (ಗೀ.ಗೋ. ಸರ್ಗ೭, ಗೀತಂ೧೫)

(ಕಮಲೆಯ ನಿಲಯವಿದೆನ್ನುವ ನಖಮಣಿಗಣದಿಂದೊಪ್ಪುವ ಚೆಂದಳಿರಡಿಗಳನು

ಯಾವಾಭರಣದ ಬಹಿರಾವರಣದಿನಳವಡಿಪನು ಉರದೊಳು ಕಳೆದದನಚ್ಯುತನು)

ತನ್ನ ಪ್ರಿಯತಮೆಯ ಚೆಂದದ ಅಡಿಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು ಮುದ್ದಿಸುತ್ತಿರುವನು ಎಂದು ಇಲ್ಲಿ ವರ್ಣಿಸಲಾಗಿದೆ. ಮುಂದೆ ಕೆಂಪು ಮದರಂಗಿಯನ್ನು ಹಚ್ಚಿಕೊಂಡ ಅವಳ ಪಾದದ ಗುರುತು ನಿನ್ನೆದೆಯ ಮೇಲೆ ಮೂಡಿದೆ (ಪ್ರಿಯಾಪಾದಾಲಕ್ತಚ್ಛುರಿತಮರಣದ್ಯೋತಿಹೃದಯಮ್ - ಅವಳಡಿದಾವರೆಯಲತಿಗೆ ರಸದೊಳು ನಿನ್ನೆದೆ ಸಲೆ ನಾಂದಿಹುದಿಂದು - ಎಸ್.ವಿ.ಪರಮೇಶ್ವರಭಟ್ಟರ ಅನುವಾದ - ಸಂಸ್ಕೃತಿ ಸಲ್ಲಾಪ) ಎಂದೂ ಕೃಷ್ಣನನ್ನು ದೂಷಿಸುತ್ತಾಳೆ. 

ರಾಧೆ ತನ್ನ ಮೇಲೆ ಕೋಪಗೊಂಡೇ ಹೊರಟು ಹೋಗಿದ್ದಾಳೆ ಎಂದು ಬಲವಾಗಿ ನಂಬಿರುವ ಮಾಧವ ಅವಳನ್ನು ಒಲಿಸಿಕೊಳ್ಳಲು ಏನನ್ನೂ ಮಾಡಲು ಸಿದ್ಧನಾಗಿದ್ದಾನೆ. ತನ್ನನ್ನು ಪೂರ್ಣವಾಗಿ ಅವಳಿಗೆ ಸಮರ್ಪಿಸಿಕೊಂಡು ಅವಳು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಾಗಿದ್ದಾನೆ. ಹತ್ತನೆಯ ಸರ್ಗದ ೧೯ ನೆಯ ಗೀತೆಯಲ್ಲಿ ನಿನ್ನ ಯಾವ ಶಿಕ್ಷೆಯೂ ತನಗೆ ಸುಖವನ್ನು ನೀಡುತ್ತದೆ ಅನ್ನುತ್ತಾನೆ.

ಸತ್ಯಮೇವಾಸಿ ಯದಿ ಸುದತಿ ಮಯಿ ಕೋಪಿನೀ

ದೇಹಿ ಖರನಖರಶರಘಾತಂ

ಘಟಯ ಭುಜಬಂಧನಂ ಜನಯ ರದಖಂಡನಂ

ಯೇನ ವಾ ಭವತಿ ಸುಖಜಾತಂ

(ನನ್ನೊಳುರುಕೋಪವಿದು ಸುದತಿ ನಿಜವೆನ್ನುವೊಡೆ ಕುಡು ನನಗೆ ಖರನಖರ ಶರಘಾತಗಳನು 

ಘಟಿಸು ಭುಜಬಂಧವನು ಜನಿಸು ರದಖಂಡವನು ಎಂತಾದರೂ ಸರಿಯೆ ಸುಖವನನುಗೊಳಿಸು.)

ಇದೇ ಗೀತೆಯಲ್ಲಿ ನನ್ನ ಹೃದಯವನ್ನು ರಂಜಿಸುವ ನಿನ್ನ ಚರಣದ್ವಂದ್ವಕ್ಕೆ ಅಲಕ್ತಕರಾಗವನ್ನು ಹಚ್ಚಿ ಸೇವೆ ಮಾಡುವಂತೆ ನನಗೆ ಆಜ್ಞಾಪಿಸು ಎನ್ನುತ್ತಾನೆ.

ಸ್ಥಲಕಮಲಗಂಜನಂ ಮಮ ಹೃದಯರಂಜನಂ

ಜನಿತರತಿರಂಗಪರಭಾಗಂ

ಭಣ ಮಸೃಣವಾಣಿ ಕರವಾಣಿ ಚರಣದ್ವಯಂ

ಸರಸಸದಲಕ್ತಕಸರಾಗಂ

(ತಾವರೆಯ ಗ೦ಜಿಸುವ ನನ್ನೆದೆಯ ರಂಜಿಸುವ ರತಿಯ ನರ್ತನ ಗತಿಯ ರಾಗವನೆ ಮೆರೆವ

ನಿನ್ನಡಿಯನಲತಿಗೆಯ ತೊಡೆದರುಣಗೊಳಿಸುವೆನು ಜೇನ್ದನಿಯ ನುಡಿಯವಳೆ ತೋರು ಕರುಣೆಯನು.)

ಪ್ರೇಯಸಿಯ ಚರಣಾರಾಧನೆಯ ಪರಾಕಾಷ್ಠತೆಯನ್ನು ಮುಂದಿನ ಪದ್ಯದಲ್ಲಿ ಕಾಣಬಹುದು. 

ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ

ದೇಹಿ ಪದಪಲ್ಲವಮುದಾರಂ

ಜ್ವಲತಿ ಮಯಿ ದಾರುಣೋ ಮದನಕದನಾನಲೋ

ಹರತು ತದುಪಾಹಿತವಿಕಾರಂ

(ಸ್ಮರಗರಲ ಖ೦ಡನವಿದೆನುವ ತವ ಚರಣವನು ನನ್ನ ಶಿರಮಂಡನವನೆಸಗೆಲಗೆ ನೀಡು 

ಸುಡುತಿಹನು ದಾರುಣನು ಮದನ ಕದನಾರುಣನು ನಿನ್ನ ಪದ ತಾಪವನು ಪರಿಹರಿಸಲಿಂದು.)

ಈ ಪದ್ಯವನ್ನು ಬರೆಯಲು ಜಯದೇವಕವಿ ಹಿಂಜರಿದನಂತೆ. ಕವಿಯು ಸ್ನಾನಕ್ಕೆ ತೆರಳಿದಾಗ ಶ್ರೀಕೃಷ್ಣನೇ ಕವಿಯ ವೇಶದಲ್ಲಿ ಮನೆಗೆ ಬಂದು ಅದನ್ನು ಬರೆದಿಟ್ಟು ಹೋದ ಎಂಬ ಕಥೆ ಪ್ರಚಲಿತದಲ್ಲಿದೆ.

ಹನ್ನೊಂದನೆಯ ಸರ್ಗದ ೨೦ ನೆಯ ಗೀತೆಯಲ್ಲಿ ರಾಧೆಯ ಸಖಿ ಮಾಧವನ ಮೇಲಿನ ಹುಸಿಕೋಪವನ್ನು ಬಿಟ್ಟು ಅವನನ್ನು ಅನುಸರಿಸು ಎನ್ನುವಾಗ ಅವನು ಚರಣೇ ರಚಿತಪ್ರಣಿಪಾತಂ - ನಿನ್ನ ಚರಣಕ್ಕೆ ಆನತನಾದ ವಿನಯೀ ಎನ್ನುವುದನ್ನು ನೆನಪಿಸುತ್ತಾಳೆ. ಮುಂದೆ ಅವಳೇ ಕೃಷ್ಣನನ್ನು ರಾಧೆಯು ತನ್ನ ಹುಬ್ಬಿನ ಚಾಲನೆಯೆಂಬ ಲಕ್ಷ್ಮಿಯಿಂದ ಕೊಂಡುಕೊಂಡ ಚರಣಸೇವಕ ದಾಸ ಎಂದು ವರ್ಣಿಸುತ್ತಾಳೆ.

ಅಸ್ಯಾಂಕಂ ತದಲಂಕುರು ಕ್ಷಣಮಿಹ ಭ್ರೂಕ್ಷೇಪಲಕ್ಷ್ಮೀಲವ_

ಕ್ರೀತೇ ದಾಸ ಇವೋಪಸೇವಿತಪದಾಂಭೋಜೇ ಕುತಃ ಸಂಭ್ರಮಃ|

ಅಂತೂ ಕೊನೆಯಲ್ಲಿ ರಾಧಾಕೃಷ್ಣರ ಸಮಾಗಮವಾಗುತ್ತದೆ. ಆಗಲೂ ಅವನು ರಾಧೆಯ ಚರಣಾರಾಧನೆಮಾಡಲು ಸಿದ್ಧನಾಗಿಯೇ ಇದ್ದಾನೆ. ಕಮಲನಾಳಗಳಿಂದ ಶಯನ ಅಲಂಕೃತವಾಗಿದೆ. ಅದರ ಮೇಲೆ ನಿನ್ನ ಚರಣಗಳನ್ನು ಇಡು ಎಂದು ರಾಧೆಗೆ ಹೇಳುತ್ತಾನೆ. ಕಮಲತಂತುಗಳು ಎಷ್ಟೇ ಕೋಮಲವಾಗಿದ್ದರೂ ನಿನ್ನ ಪಾದಪಲ್ಲವಗಳಿಂದ ಸೋಲನ್ನು ಅನುಭವಿಸಲಿ ಎನ್ನುತ್ತಾನೆ. ಅಂತಹ ಹಾಸಿಗೆಯ ಮೇಲಿಟ್ಟ ಚರಣಗಳನ್ನು ನನ್ನ ಕರಕಮಲಗಳಿಂದ ಒತ್ತಿ ಸೇವೆ ಮಾಡುವ ಮೂಲಕ ಪೂಜಿಸುತ್ತೇನೆ. ಯಾಕೆಂದರೆ ಬಹಳ ದೂರದಿಂದ ನಿನ್ನನ್ನು ಕರೆಸಿಕೊಂಡಿದ್ದೇನೆ. ಹಾಸಿಗೆಯಲ್ಲಿ ನಿನ್ನ ಗೆಜ್ಜೆಗಳಿಗೆ ಉಪಕರಿಸಿದಂತೆ ನನಗೂ ಉಪಕಾರ ಮಾಡು (ನಿನ್ನ ಚರಣಗಳಲ್ಲಿ ನನಗೆ ಸ್ಥಾನ ಕೊಟ್ಟು ಉಪಕರಿಸು ಎಂದರ್ಥ) ಎಂದು ಬೇಡಿಕೊಳ್ಳುತ್ತಾನೆ.

ಕಿಸಲಯಶಯನತಲೇ ಕುರು ಕಾಮಿನಿ ಚರಣನಲಿನವಿನಿವೇಶಂ

ತವ ಪದಪಲ್ಲವವೈರಿಪರಾಭವಮಿದಮನುಭವತು ಸುವೇಶಂ  

ಕ್ಷಣಮಧುನಾ ನಾರಾಯಣಮನುಗತಮನುಸರ ಮಾಂ ರಾಧಿಕೇ ||

ಕರಕಮಲೇನ ಕರೋಮಿ ಚರಣಮಹಮಾಗಮಿತಾಸಿ ವಿದೂರಂ

ಕ್ಷಣಮುಪಕುರು ಶಯನೋಪರಿ ಮಾಮಿವ ನೂಪುರಮನುಗತಿಶೂರಂ|

(ಮೆಲ್ಲನೆ ಕಿಸಲಯಶಯನದೊಳಿಡು ವರಕಾಮಿನಿ ತಾವರೆಯಂದದ ನಿನ್ನಡಿಯ 

ತವ ಪದಪವಲ್ಲವವೈರಿವೊಲಿರುವೀ ತಳಿರಿನ ಪಾಸಿದು ಪಡೆಯಲಿ ಧಿಕ್ಕೃತಿಯ 

ಪಾಸಿನೊಳರೆಚಣವಿಡು ಬಹುದೂರವ ನಡೆದುರುನೋಯುವ ಮೆಲ್ಲಡಿ ಜೋಡಿಯನು

ಅಂದುಗೆವೋಲನುಸರಿಸಿದ ಶೂರನು ನಾ ಕರಕಮಲಗಳಿ೦ದಿದನೊತ್ತುವೆನು). 

ಮುಂದೆ, ಸತ್ತಂತಿಹ ದಾಸನಾಗಿಹ ನನಗೆ ಅಧರರಸವೆಂಬ ಅಮೃತದಿಂದ ಜೀವ ತುಂಬು ಎಂದು ಪ್ರಾರ್ಥಿಸುತ್ತಾನೆ. (ಅಧರಸುಧಾರಸಮುಪನಯ ಭಾಮಿನಿ ಜೀವಯ ಮೃತಮಿವ ದಾಸಮ್)

ರತಿಕ್ರೀಡೆಯ ನಂತರ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಆಗ ರಾಧೆ ತನ್ನ ಸಡಿಲಾದ ಸೀರೆಯ ಗಂಟನ್ನು ಮತ್ತೆ ಹಾಕಿ ಸೊಂಟದ ಪಟ್ಟಿಯನ್ನು ಬಿಗಿ ಮಾಡು ಎಂದು ಕೃಷ್ಣನಿಗೇ ಆಜ್ಞಾಪಿಸುತ್ತಾಳೆ. ಅಷ್ಟೇ ಅಲ್ಲ, ಕಳಚಿದ ಬಳೆಯನ್ನೂ, ಕಾಲಿನ ಮಣಿನೂಪುರವನ್ನು ಪುನಃ ತೊಡಿಸುವಂತೆ ಆದೇಶಿಸುತ್ತಾಳೆ. ಮಾಧವನಾದರೋ ಪ್ರೀತಿಯಿಂದ ವಿಧೇಯ ಸೇವಕನಂತೆ ಅವಳ ಆದೇಶವನ್ನು ಪಾಲಿಸುತ್ತಾನೆ.(ಗೀ.ಗೋ. ಸರ್ಗ೧೨, ಗೀತಂ ೨೪ ಪದ್ಯ೯)

ರಾಧೆಯೂ ಕೂಡ ತನ್ನನ್ನು ಕೃಷ್ಣನಿಗೆ ಸಮರ್ಪಿಸಿಕೊಂಡವಳೇ. ಆದರೆ ಕೃಷ್ಣನ ಸಮರ್ಪಣೆ ಸಾಮಾನ್ಯ ಲೋಕರೂಢಿಗೆ ವಿರುದ್ಧವಾಗಿರುವುದರಿಂದ ವಿಶಿಷ್ಟವಾಗಿ ತೋರುತ್ತದೆ. 

ಮಹಾಬಲ ಭಟ್ಟ, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...