ಹರ್ಷಚಕ್ರವರ್ತಿಯ ಪ್ರಿಯದರ್ಶಿಕಾ ನಾಟಕದಲ್ಲಿ ನಾಯಕ ಉದಯನ ತನ್ನ ಪತ್ನಿ ವಾಸವದತ್ತೆಯ ಕಾಲಿಗೆರಗುವ ಸಂದರ್ಭ ಚಿತ್ರಿತವಾಗಿದೆ. ವಾಸವದತ್ತೆಯಲ್ಲಿ ನ್ಯಸ್ತವಾಗಿಟ್ಟಿರುವ ದೃಢವರ್ಮಸುತೆ ಪ್ರಿಯದರ್ಶಿಕೆಯು ಪ್ರಾಯಪ್ರಬುದ್ಧೆಯಾದಾಗ ರಾಜನ ಕಣ್ಣಿಗೆ ಬಿದ್ದು ಪ್ರೇಮಪ್ರಕರಣದ ಆರಂಭವಾಗುತ್ತದೆ. ವಾಸವದತ್ತೆ ಹಾಗೂ ಉದಯನರ ಪ್ರಣಯಪ್ರಸಂಗದ ನಾಟಕವೊಂದು ಕೌಮುದೀಮಹೋತ್ಸವದ ಸಂದರ್ಭದಲ್ಲಿ ಅರಮನೆಯಲ್ಲಿ ಏರ್ಪಾಡಾಗಿರುತ್ತದೆ. ಅದರಲ್ಲಿ ಪ್ರಿಯದರ್ಶಿಕೆ ವಾಸವದತ್ತೆಯ ಪಾತ್ರವನ್ನು ವಹಿಸಿದರೆ, ಅವಳ ಗೆಳತಿ ಮನೋರಮೆ ವತ್ಸರಾಜನ ಪಾತ್ರವನ್ನು ವಹಿಸುವುದೆಂದು ನಿಶ್ಚಯವಾಗಿತ್ತು. ಆದರೆ ರಾಜನ ನರ್ಮ ಸಚಿವ ವಿದೂಷಕ ವಸಂತಕ ಹಾಗೂ ಮನೋರಮೆಯರು ಉದಯನನಿಗೆ ಪ್ರಿಯದರ್ಶಿಕೆಯನ್ನು ಹತ್ತಿರದಿಂದ ನೋಡುವ, ಸ್ಪರ್ಶಿಸುವ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಸ್ವಯಂ ಉದಯನನೇ ಉದಯನನಾಗಿ ರಂಗಪ್ರವೇಶಿಸುವ ಯೋಜನೆಯನ್ನು ಹಾಕಿದರು. ನಾಟಕ ಮುಗಿದಮೇಲೆ ಹೇಗೋ ಈ ವಿಷಯವನ್ನು ತಿಳಿದ ವಾಸವದತ್ತೆ ಕೆಂಡಾಮಂಡಲಳಾದಳು. ಅವಳ ಕೋಪವನ್ನು ತಣಿಸುವುದಕ್ಕಾಗಿ ಎಲ್ಲರೆದುರೇ ಅವಳ ಕಾಲಿಗೆ ಬೀಳುತ್ತಾನೆ ಕೌಶಾಂಬೀಶ ಉದಯನ.
ಸ್ನಿಗ್ಧಂ ಯದ್ಯಪಿ ವೀಕ್ಷಿತಂ ನಯನಯೋಸ್ತಾಮ್ರಾ ತಥಾಪಿ ದ್ಯುತಿ-
ರ್ಮಾಧುರ್ಯೇಽಪಿ ಸತಿ ಸ್ಖಲತ್ಯನುಪದಂ ತೇ ಗದ್ಗದಾ ವಾಗಿಯಮ್|
ನಿಶ್ವಾಸಾ ನಿಯತಾ ಅಪಿ ಸ್ತನಭರೋತ್ಕಂಪೇನ ಸಂಲಕ್ಷಿತಾಃ
ಕೋಪಸ್ತೇ ಪ್ರಕಟಪ್ರಯತ್ನವಿಘೃತೋಽಪ್ಯೇಷ ಸ್ಫುಟಂ ಲಕ್ಷ್ಯತೇ ||
(ಪ್ರಿಯದರ್ಶಿಕಾ ತೃತೀಯೋಂಕಃ, ೧೩)
(ಸ್ನಿಗ್ಧವಾದುದು ನಿನ್ನ ನೋಟವು ಈಗ ಕಡು ಕೆಂಪೇರಿದೆ.
ಮಧುರವಾಗಿಹ ನಿನ್ನ ಗದ್ಗದ ಪದಪದಕೆ ತೊದಲುತ್ತಿದೆ
ನಿಯತವಿದ್ದರು ನಿನ್ನ ಉಸಿರಿದು ನಡುಕವೆದೆಯೊಳು ತೋರಿದೆ
ಯತ್ನದಿಂದವಿತಿದ್ದರೂ ಈ ಕೋಪ ಸಲೆ ಹೊರತೋರಿದೆ.)
(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)
ಎಂದು ಮಹಾರಾಣಿಯ ಕೋಪವನ್ನು ವರ್ಣಿಸುತ್ತ ’ಪ್ರಸೀದ ಪ್ರಿಯೇ ಪ್ರಸೀದ’ ಎಂದು ಬೇಡುತ್ತ ಅವಳ ಚರಣಗಳಿಗೆ ಮಣಿಯುತ್ತಾನೆ. ಅದಕ್ಕೆ ವಾಸವದತ್ತೆಯು ಆರಣ್ಯಿಕೆಯ ರೂಪದಲ್ಲಿರುವ ಪ್ರಿಯದರ್ಶಿಕೆಯನ್ನು ಎಳೆಯುತ್ತ ’ನೀನು ಕೋಪಗೊಂಡಿರುವೆಯೆಂದು ತಿಳಿದು ರಾಜನು ಅನುನಯಿಸುತ್ತಿರುವನು, ಹೋಗು’ ಎನ್ನುತ್ತಾ ತನ್ನ ಕೋಪವನ್ನು ಮರೆಮಾಚಲು ಯತ್ನಿಸುತ್ತಾಳೆ. ಆಗ ರಾಜ ಮತ್ತೆ ಅವಳನ್ನು ಅನುನಯಿಸುತ್ತಾನೆ.
ಬರಿದೆ ಹುಬ್ಬನ್ನೇಕೆ ಮುರಿಯುವೆ ಹಣೆಯ ಈ ಶಶಿಗೇಕೆ ಕುಂದನ್ನೆಸಗುವೆ?
ನಡುಗುದುಟಿಗಳ ನೆಲರಿಗದುರುವ ಬಂಧುಜೀವದ ನನಗೆ ಏಕೆಣೆಯೆನಿಸುವೆ?
ಎದೆಯ ಕುಚಯುಗಭಾರದಿಂದೀ ನಿನ್ನ ಬಡುನಡು ನೋಡು ಕಡು ಬಸವಳಿದಿದೆ
ನಿನ್ನ ಚಿತ್ತವ ಸೆಳೆಯಲೆಂದಾನಿಂತು ಆಡಿದೆ ಕೋಪವನು ಬಿಡೆ ಮಾನಿನಿ.
(ಎಸ್.ವಿ.ಪರಮೇಶ್ವರಭಟ್ಟರ ಕನ್ನಡ ಹರ್ಷಮಹಾಸಂಪುಟ ಪು.೩೪)
ಎಂದು ಹೇಳುತ್ತಾ ಮತ್ತೆ ಅವಳ ಕಾಲಿಗೆ ಬೀಳುತ್ತಾನೆ. ಅಷ್ಟಾದರೂ ವಾಸವದತ್ತೆಯ ಕೋಪ ಇಳಿಯುವುದಿಲ್ಲ. ರಾಜನಿಗೆ ಪ್ರಿಯಸಮಾಗಮದ ಖುಷಿಯ ಜೊತೆಗೆ ಪಟ್ಟದರಸಿಯ ಕೋಪದ ಭೀತಿ. ’ಭೀತಶ್ಚೋತ್ಸುಕಮಾನಸಶ್ಚ ಮಹತಿ ಕ್ಷಿಪ್ತೋಽಸ್ಮ್ಯಹಂ ಸಂಕಟೇ’ (ಭೀತಿ ಮೇಣೌತ್ಸುಕ್ಯ ಭಾವದೊಳಿಹೆನು ನಾನಿಂದೋವೊ ಬಹು ಸಂಕಟದೊಳು.) ಎಂದು ವಿದೂಷಕನಲ್ಲಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತ ’ಶಯ್ಯಾಗೃಹಕ್ಕೆ ಹೋಗಿ ದೇವಿಯನ್ನು ಪ್ರಸನ್ನಗೊಳಿಸುವ ಉಪಾಯವನ್ನು ಚಿಂತಿಸುತ್ತೇನೆ’ ಎಂದು ಹೋಗುತ್ತಾನೆ.
ವಾಸವದತ್ತೆಯನ್ನು ಪ್ರಸನ್ನಗೊಳಿಸುವುದೊಂದೇ ಅವಳ ಬಂಧನದಲ್ಲಿರುವ ಪ್ರಿಯದರ್ಶಿಕೆಯನ್ನು ಬಿಡಿಸುವ ಉಪಾಯ ಎಂದು ಉದಯನ ಯೋಚಿಸುತ್ತಿದ್ದಾನೆ. ಚತುರಂಗ ಬಲದ ಅಧಿಪತಿ ತಾನಾದರೂ ಪತ್ನಿಯ ಕೋಪದ ಎದುರಲ್ಲಿ ಅದಾವುದೂ ಪ್ರಯೋಜನಕ್ಕೆ ಬಾರದು ಎಂದು ಅವನು ಅರಿತಿದ್ದಾನೆ. ಅದಕ್ಕಾಗಿ ಅವನು ಎಷ್ಟು ಬಾರಿಯಾದರೂ ಅಂಜಲಿಬದ್ಧನಾಗಿ ಅವಳ ಕಾಲಿಗೆರಗಲು ಸಿದ್ಧನಿದ್ದಾನೆ. ಅದನ್ನೇ ವಿದೂಷಕನಿಗೆ ಹೇಳುತ್ತಾನೆ – ’ಕಿಂ ತಿಷ್ಠಾಮಿ ಕೃತಾಂಜಲಿರ್ನಿಪತಿತೋ ದೇವ್ಯಾಃ ಪುರಃ ಪಾದಯೋಃ’.(ಪ್ರಿಯದರ್ಶಿಕಾ, ಚತುರ್ಥೋಂಕಃ ೧) “ಅಲ್ಲದಿರೆ ಕೈಮುಗಿಯುತವಳ ಪಾದಾಬ್ಜಯುಗಳಕೆ ಅಡ್ಡಬೀಳುತ ಬೇಡಿಕೊಳ್ಳಲೆ ದೇವಿಯ” – ಕನ್ನಡ ಹರ್ಷಮಹಾಸಂಪುಟ ಪು.ಸಂ.೩೮
ರಾಜ ಲಜ್ಜೆಯಿಂದ ಮಹಾರಾಣಿಯ ಬಳಿಗೆ ಹೋಗುತ್ತಾನೆ. ಅವನನ್ನು ಕಂಡ ರಾಣಿ ಪೀಠವನ್ನು ಬಿಟ್ಟೇಳುತ್ತಾಳೆ. ಉದಯನ ಅದರ ಆವಶ್ಯಕತೆ ಇಲ್ಲ ಎಂದು ಹೇಳುತ್ತಾನೆ. ಅವಳ ನೋಟದ ಪ್ರಸಾದಕ್ಕಾಗಿ ಕಾಯುತ್ತಿರುವವನು ತಾನು ಎಂದು ಹೇಳಿಕೊಳ್ಳುತ್ತಾನೆ. ವಸ್ತುತಃ ವಾಸವದತ್ತೆಯು ತನ್ನ ಚಿಕ್ಕಮ್ಮನ ಕುರಿತಾಗಿ ಯೋಚಿಸುತ್ತಿದ್ದಳು. ಚಿಂತೆಯಿಂದ ಪೀಠ ಬಿಟ್ಟು ನೆಲದ ಮೇಲೆ ಕುಳಿತ ರಾಣಿಯನ್ನು ನೋಡಿ ರಾಜನೂ ನೆಲದ ಮೇಲೆ ಕುಳಿತು ಕೈಮುಗಿದುಕೊಂಡು ಪ್ರಸನ್ನಳಾಗುವಂತೆ ಪ್ರಾರ್ಥಿಸುತ್ತಾನೆ. ಕಿಮೇವಂ ಪ್ರಣತೇಽಪಿ ಮಯಿ ಗಂಭೀರತರಂ ಕೋಪಮುದ್ವಹಸಿ.
“ಸ್ತಿಮಿತವಾಗಿಹ ನಿನ್ನ ಕೋಪವು ಮುಸುಕಿನೊಳಗಿನ ಗುದ್ದಿನಂದದೆ ನನ್ನ ನೋಯಿಸುತಿರ್ಪುದು.” (ಕೋಪಸ್ತೇ ಸ್ತಿಮಿತೋ ನಿಪೀಡಯತಿ ಮಾಂ ಗೂಢಪ್ರಹಾರೋಪಮಮ್).
ಎನ್ನುತ್ತ ಮತ್ತೆ ಅವಳ ಕಾಲಿಗೆರಗುತ್ತಾನೆ. ನಂತರ ಅವಳ ದುಃಖದ ಕಾರಣವನ್ನು ತಿಳಿದು ಸಮಾಧಾನಪಡಿಸುತ್ತಾನೆ. ವಾಸವದತ್ತೆಯ ಬಂಧುಗಳ ಕಷ್ಟನಿವಾರಣೆಗಾಗಿ ವತ್ಸರಾಜ ವಾಸವದತ್ತೆ ಕೇಳಿಕೊಳ್ಳುವ ಮೊದಲೇ ಕಾರ್ಯಪ್ರವೃತ್ತನಾಗಿದ್ದ. ಅದು ವಾಸವದತ್ತೆಯ ಬಗ್ಗೆ ಉದಯನನಿಗಿರುವ ಪ್ರೀತ್ಯಾದರಗಳನ್ನು ತೋರಿಸುತ್ತದೆ. ಕೊನೆಯಲ್ಲಿ ಪ್ರಿಯದರ್ಶಿಕೆಯ ಕೈಯನ್ನು ರಾಜನ ಕೈಯಲ್ಲಿಟ್ಟು ಪರಿಗ್ರಹಿಸಲು ಒತ್ತಾಯಿಸಿದ ವಾಸವದತ್ತೆಗೆ ’ದೇವೀ ಪ್ರಭವತಿ| ಕುತೋಽಸ್ಮಾಕಮನ್ಯಥಾ ಕರ್ತುಂ ವಿಭವಃ?’ (ದೇವಿಯದೇ ಅಧಿಕಾರ. ಬೇರೆ ರೀತಿಯಲ್ಲಿ ವರ್ತಿಸಲು ನಮಗೆ ಸಾಮರ್ಥ್ಯವೆಲ್ಲಿದೆ?)ಎನ್ನುತ್ತಾನೆ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ.
ಮಹಾಬಲ ಭಟ್ಟ, ಗೋವಾ
No comments:
Post a Comment