Sunday, October 20, 2024

ನಾರೀವಿಧೇಯರು-ಉದಯನ(ರತ್ನಾವಲೀ)

ಹರ್ಷಮಹಾರಾಜನ ಇನ್ನೊಂದು ಪ್ರಸಿದ್ಧ ನಾಟಿಕಾ ’ರತ್ನಾವಲೀ’. ಇಲ್ಲಿಯೂ ಉದಯನನೇ ನಾಯಕ. ನಾಯಿಕೆ ರತ್ನಾವಳಿ ಅಥವಾ ಸಾಗರಿಕೆ. ಸಿಂಹಳದೇಶದಿಂದ ಬರುವಾಗ ಸಮುದ್ರದ ನೀರಿಗೆ ಬಿದ್ದು ಅಲ್ಲಿಂದ ರಕ್ಷಿತಳಾಗಿ ಕೌಶಾಂಬಿಯನ್ನು ಸೇರಿದ್ದರಿಂದ ಅವಳಿಗೆ ಸಾಗರಿಕೆ ಎಂಬ ಅಭಿಧಾನ. ಈ ನಾಟಕದಲ್ಲಿಯೂ ನಾಯಕ ತನ್ನ ಪತ್ನಿ ವಾಸವದತ್ತೆಗೆ ಹೆದರಿ ಕಾಲಿಗೆ ಬೀಳುವ ಸನ್ನಿವೇಶ ಇದೆ. ಉದಯನನಿಗೆ ವಾಸವದತ್ತೆಯ ಮೇಲಿರುವ ಪ್ರೀತಿ ಪ್ರಶ್ನಾತೀತ. ಹಾಗಾಗಿಯೇ ವಾಸವದತ್ತೆ ಕೋಪಗೊಂಡಾಗಲೂ ಅವಳನ್ನು ಧಿಕ್ಕರಿಸದೆ ಕಾಲಿಗೆ ಬಿದ್ದು ಅನುನಯಿಸುತ್ತಾನೆ. ಉತ್ಕಟ ಪ್ರೀತಿಯಿಂದಾಗಿಯೇ ಸ್ವಲ್ಪ ಭಯವೂ ಇದೆ. ವಾಸವದತ್ತೆಗೆ ಉದಯನನನ್ನು ತನ್ನವನನ್ನಾಗಿಯೇ ಇರಿಸಿಕೊಳ್ಳಬೇಕೆಂಬ ಹಂಬಲ. ಹಾಗಾಗಿ ತನ್ನ ಪರಿಜನರಲ್ಲಿ ಸುಂದರವಾಗಿರುವ ಕನ್ಯೆಯರನ್ನು ಅವನಿಂದ ಬಚ್ಚಿಡಲು ಪ್ರಯತ್ನಿಸುತ್ತಾಳೆ. ನಂತರ ಆ ಕನ್ಯಕೆಯರು ಅಭಿಜಾತರೆಂದು ತಿಳಿದಾಗ ಅವರನ್ನು ಉದಯನನಿಗೆ ಒಪ್ಪಿಸುತ್ತಾಳೆ. ಇರಲಿ.

ಒಂದನೆಯ ಅಂಕದಲ್ಲಿ ಮದನಿಕೆ ಎಂಬ ವಾಸವದತ್ತೆಯ ಸಖಿ ರಾಜ್ಞಿಯ ನಿರೋಪವನ್ನು ರಾಜನಿಗೆ ತಿಳಿಸುತ್ತ ’ದೇವೀ ವಿಜ್ಞಾಪಯತಿ' ಎಂದು ಹೇಳುವಲ್ಲಿ 'ದೇವ್ಯಾಜ್ಞಾಪಯತಿ' ಎಂದು ಹೇಳಿ ನಂತರ ಸರಿಪಡಿಸಿಕೊಳ್ಳುತ್ತಾಳೆ. ರಾಜನಿಗೆ ಅವಳ ಮಾತನ್ನು ಕೇಳಿ ಅವ್ಯಕ್ತ ಆನಂದವಾಗುತ್ತದೆ. ’ಮದನಿಕೇ! ನನ್ವಾಜ್ಞಾಪಯತೀತ್ಯೇವ ರಮಣೀಯಮ್’ ಎಂದು ಹೇಳಿ ವಾಸವದತ್ತೆಯ ಬಗ್ಗೆ ತನಗಿರುವ ಆದರವನ್ನು ಉದಯನ ವ್ಯಕ್ತಪಡಿಸುತ್ತಾನೆ. ಮದನಪೂಜೆಯ ಸಂದರ್ಭದಲ್ಲಿ ರಾಜನನ್ನು ನೋಡಿ ಮನ್ಮಥನ ಬಾಣಗಳಿಗೆ ತುತ್ತಾದ ಸಾಗರಿಕೆ ಅಲ್ಲಿಯೇ ರಾಜನ ಚಿತ್ರವೊಂದನ್ನು ಬರೆಯುತ್ತಾಳೆ. ಅವಳ ಸಖಿ ಸುಸಂಗತೆ ಅದರ ಪಕ್ಕದಲ್ಲೇ ಸಾಗರಿಕೆಯ ಚಿತ್ರವನ್ನೂ ಬರೆಯುತ್ತಾಳೆ. ಅಲ್ಲಿಗೆ ಬಂದ ರಾಜ ಅದನ್ನು ನೋಡಿ ಸಾಗರಿಕೆಯಲ್ಲಿ ಅನುರಕ್ತನಾಗುತ್ತಾನೆ. ಅವರ ಪ್ರಣಯಚೇಷ್ಟೆಯನ್ನು ರಾಣಿಗೆ ತಿಳಿಸುವುದಾಗಿ ಸುಸಂಗತೆಯು ಹೇಳಿದಾಗ ರಾಜನು ಅವಳಿಗೆ ಆಭರಣಾದಿಗಳನ್ನು ಕೊಟ್ಟು ರಾಣಿಗೆ ತಿಳಿಸದಂತೆ ಅನುನಯಿಸುತ್ತಾನೆ. 

ಮುಂದೆ ವಿದೂಷಕನು ಸಾಗರಿಕೆಯನ್ನು ಅಪರವಾಸವದತ್ತೆ ಎಂದು ಕರೆದಾಗ ರಾಜನು ವಾಸವದತ್ತೆಯ ನಾಮಸ್ಮರಣದಿಂದಲೇ ಬೆಚ್ಚಿಬಿದ್ದು ತಾನು ಹಿಡಿದಿದ್ದ ಸಾಗರಿಕೆಯ ಕೈಯನ್ನು ಬಿಟ್ಟು ಬಿಡುತ್ತಾನೆ. ಆಷ್ಟೊಂದು ಭಯ ಅವನಿಗೆ ವಾಸವದತ್ತೆಯ ವಿಷಯದಲ್ಲಿ. ಅಲ್ಲಿಗೆ ಅವರ ಪ್ರಣಯಭಂಗ ಉಂಟಾಗುತ್ತದೆ. ಆದರೆ  ಕಾಕತಾಳೀಯವಾಗಿ ವಾಸವದತ್ತೆ ನಿಜವಾಗಿಯೂ ಅಲ್ಲಿಗೆ ಆಗಮಿಸುತ್ತಾಳೆ. ಅಲ್ಲಿ ಸಾಗರಿಕೆ ಉದಯನರ ಚಿತ್ರಗಳನ್ನು ನೋಡಿ ಕುಪಿತಳಾಗುತ್ತಾಳೆ. ಅವಳ ಕೋಪದ ಪ್ರಶ್ನೆಯನ್ನು ಕೇಳಿ ನಡುಗಿದ ರಾಜನಿಗೆ ಏನು ಹೇಳಬೇಕೆಂದೇ ತೋಚುವುದಿಲ್ಲ. ಆಗ ವಿದೂಷಕನೇ ಸುಳ್ಳು ಹೇಳುತ್ತಾನೆ. ರಾಜ್ಞಿಯು ಸಂಶಯಪೀಡಿತಳಾದರೂ ತಲೆ ನೋವಿನ ನೆವದಿಂದ ಅಲ್ಲಿಂದ ಹೋಗಲುದ್ಯುಕ್ತಳಾಗುತ್ತಾಳೆ. ಅವಳು ಕೋಪಗೊಂಡಿದ್ದಾಳೆ ಎಂದು ಅರಿತ ವತ್ಸರಾಜ ಅವಳ ಸೆರಗನ್ನು ಹಿಡಿದು ಅನುನಯಿಸಲು ಮುಂದಾಗುತ್ತಾನೆ.

ಪ್ರಸೀದೇತಿ ಬ್ರೂಯಾಮಿದಮಸತಿ ಕೋಪೇ ನ ಘಟತೇ 

ಕರಿಷ್ಯಾಮ್ಯೇವಂ ನೋ ಪುನರಿತಿ ಭವೇದಭ್ಯುಪಗಮಃ |

ನ ಮೇ ದೋಷೋಽಸ್ತೀತಿ ತ್ವಮಿದಮಪಿ ನ ಜ್ಞಾಸ್ಯಸಿ ಮೃಷಾ

ಕಿಮೇತಸ್ಮಿನ್ ವಕ್ತುಂ ಕ್ಷಮಮಿತಿ ನ ವೇದ್ಮಿ ಪ್ರಿಯತಮೇ ||


ಓವೋ ದೇವಿಯೆ ಶಾಂತಳಾಗೆನೆ ಕಂಡುಬಾರದು ನೀನು ಕೋಪಗೊಂಡುದು

ಮತ್ತೆ ನಾನಿಂತೆಸೆಗೆನೆಂದೆನೆ ನಾನು ಮಾಡಿದ ತಪ್ಪಿನೊಪ್ಪಿಗೆಯಪ್ಪುದು |

ನನ್ನ ಕಡೆಯಿಂದಾವ ತಪ್ಪೂ ಇಲ್ಲವೆಂದೆನೆ  ನೀನು ಸುಳ್ಳೆಂದೆನುವೆ

ಆದ ಕಾರಣ ಏನು ಪೇಳ್ವುದು ಯುಕ್ತವೆನುವುದನರಿಯದಿಂದಾನಿರ್ಪೆನು ||


ಎಷ್ಟೇ ಹೇಳಿದರೂ ಕೇಳಿದೆ ದೇವಿ ಹೊರಟೇ ಬಿಟ್ಟಳು. ಅವಳನ್ನು ಅನುನಯಿಸುವುದಕ್ಕಾಗಿ ಉದಯನನೂ ಅಂತಃಪುರದತ್ತ ಸಾಗುತ್ತಾನೆ.


ವಿದೂಷಕನ ಉಪಾಯದಿಂದ ಸಾಗರಿಕೆಯು ವಾಸವದತ್ತೆಯ ವೇಷವನ್ನೂ ಅವಳ ಸಖಿ ಸುಸಂಗತೆಯು ವಾಸವದತ್ತೆಯ ಸಖಿ ಕಾಂಚನಮಾಲಾಳ ವೇಷವನ್ನೂ ಧರಿಸಿ ಉದಯನನನ್ನು ಭೇಟಿಯಾಗಲು ಬರುವ ಯೋಜನೆ ತಯಾರಾಗುತ್ತದೆ. ಆದರೆ ಇದರ ಸುಳಿವು ಹೇಗೋ ವಾಸವದತ್ತೆಗೆ ಸಿಕ್ಕಿಬಿಡುತ್ತದೆ. ಅವಳೇ ಮೊದಲು ಸಂಕೇತಸ್ಥಾನಕ್ಕೆ ಹೋಗುತ್ತಾಳೆ. ರಾಜನು ಸಾಗರಿಕೆಯೆಂದೇ ತಿಳಿದು ಪ್ರೇಮನಿವೇದನೆಯನ್ನು ಮಾಡಿಕೊಂಡಾಗ ರೋಷಗೊಂಡು ತಪಿಸುತ್ತಾಳೆ. ಆಗ ರಾಜನು ಅನನ್ಯಗತಿಕನಾಗಿ ಅವಳ ಪಾದಗಳ ಮೇಲೆ ತಲೆಯಿಡುತ್ತಾ ಬೇಡಿಕೊಳ್ಳುತ್ತಾನೆ.


ಆತಾಮ್ರತಾಮಪನಯಾಮಿ ವಿಲಕ್ಷ ಏಷ

ಲಾಕ್ಷಾಕೃತಾಂ ಚರಣಯೋಸ್ತವ ದೇವಿ ಮೂರ್ಧ್ನಾ |

ಕೋಪೋಪರಾಗಜನಿತಾಂ ತು ಮುಖೇಂದುಬಿಂಬೇ

ಹರ್ತುಂ ಕ್ಷಮೋ ಯದಿ ಪರಂ ಕರುಣಾಮಯಿ ಸ್ಯಾತ್ || ರತ್ನಾವಲೀ, ತೃತೀಯೋಂಕಃ, ೧೪


ಅಲತಿಗೆ ರಸದಿಂದಾದೀ ನಿನ್ನಡಿಯೊಂದರುಣತೆಯನು ನಾನಿಂದು

ಬೇಗನೆ ನನ್ನೀ ಮುಡಿಯಿಂದುಬ್ಬುತೆ ತೊಡೆವೆನು ಲಜ್ಜೆಯೊಳುರೆಸಂದು |

ಆದರೆ ಕೋಪಗ್ರಹಣದೊಳಾದೀವದನೇಂದುವಿನೊಂದರುಣತೆಯ

ತೊಡೆಯಲು ಶಕ್ತನು ನಾನಹೆನೆನ್ನೊಳು ತೋರುವುದಾದರೆ ನೀಂ-ದಯೆಯ|| ಕನ್ನಡ ಹರ್ಷಮಹಾಸಂಪುಟ, ಪು.೯೨


ಆದರೆ ಖತಿಗೊಂಡ ರಾಣಿ ಸಮಾಧಾನವನ್ನು ಪಡೆಯದೆ ಹೊರಡಲು ಅಣಿಯಾಗುತ್ತಾಳೆ. ಕಾಲಿಗೆ ಬಿದ್ದಿರುವ ಪತಿಯನ್ನು ಹಾಗೆ ತಿರಸ್ಕರಿಸುವುದು ಯೋಗ್ಯವಲ್ಲವೆಂದು ಕಾಂಚನಮಾಲೆಯು ಹೇಳಿದರೂ ಕೇಳದೆ ಹೊರಟುಹೋಗುತ್ತಾಳೆ. ಉದಯನ ಮಾತ್ರ “ದೇವೀಪ್ರಸಾದನಂ ಮುಕ್ತ್ವಾ ನಾನ್ಯದತ್ರೋಪಾಯಂ ಪಶ್ಯಾಮಿ' ಎನ್ನುತ್ತ ಅವಳನ್ನೇ ಅನುಸರಿಸುತ್ತಾನೆ.

ಹೀಗೆ ಹೋಗುವಾಗ ಮಧ್ಯೆ ವಾಸವದತ್ತೆಯ ವೇಷದಲ್ಲಿ ನೇಣುಹಾಕಿಕೊಳ್ಳಲು ಪ್ರಯತ್ನಿಸುತ್ತಿರುವ ಸಾಗರಿಕೆ ಗೋಚರವಾಗುತ್ತಾಳೆ. ಅವಳನ್ನು ವಾಸವದತ್ತೆಯೆಂದೇ ಭ್ರಮಿಸಿದರೂ ನಂತರ ಸಾಗರಿಕೆಯೆಂದು ತಿಳಿದು ಹರ್ಷವನ್ನು ಹೊಂದುತ್ತಾನೆ ರಾಜ. ಅತ್ತ ಕಾಲಿಗೆ ಬಿದ್ದ ಆರ್ಯಪುತ್ರನನ್ನು ಅಲಕ್ಷಿಸಿ ನಿಷ್ಠುರಳಾದ ಬಗ್ಗೆ ಬೇಸರಿಸಿಕೊಂಡ ವಾಸವದತ್ತೆ ಅವನನ್ನು ಅನುನಯನಗೊಳಿಸಲು ಮತ್ತದೇ ಸ್ಥಾನಕ್ಕೆ ಬರುತ್ತಾಳೆ. ಅಷ್ಟರಲ್ಲಿ ಸಾಗರಿಕೆ ಹಾಗೂ ಉದಯನರ ಸಂವಾದ ಆರಂಭವಾಗಿರುತ್ತದೆ. ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾದ ದೇವಿಯ ವಿಷಯದಲ್ಲಿ ಯಾಕೆ ಅಪರಾಧವನ್ನು ಎಸಗುತ್ತೀ ಎಂದು ಕೇಳಿದಾಗ ರಾಜ ಹೇಳುತ್ತಾನೆ – 


ಶ್ವಾಸೋತ್ಕಂಪಿನಿ ಕಂಪಿತಂ ಕುಚಯುಗೇ ಮೌನೇ ಪ್ರಿಯಂ ಭಾಷಿತಂ

ವಕ್ತ್ರೇಽಸ್ಯಾಃ ಕುಟಿಲೀಕೃತಭ್ರುಣಿ ತಥಾ ಯಾತಂ ಮಯಾ ಪಾದಯೋಃ |

ಇತ್ಥಂ ನಃ ಸಹಜಾಭಿಜಾತಜನಿತಾ ಸೇವೈವ ದೇವ್ಯಾಃ ಪರಮ್

ಪ್ರೇಮಾಬಂಧವಿವರ್ಧಿತಾಧಿಕರಸಾ ಪ್ರೀತಿಸ್ತು ಯಾ ಸಾ ತ್ವಯಿ || ರತ್ನಾವಲೀ, ತೃತೀಯೋಂಕಃ, ೧೮


ಯತ್ನದಿಂದುಸಿರೆಳೆದು ಬಿಡುವಂದು ಅದುರುತಿರು-

ವವಳ ಆ ಕುಚಯುಗವು ನಡುಗಿದೆನು ನಾನು 

ಮೌನದಿಂದವಳಿರ್ದವೇಳೆಯೊಳು ಅವಳಿಗತಿ-

ಹಿತವಾಗಿ ಸವಿನುಡಿಯನಾಡಿದೆನು ನಾನು

ಕೋಪದಿಂದಿರದವಳು ಹುಬ್ಬು ಗಂಟಿಕ್ಕಿರಲು

ಅವಳ ಆ ಪಾದಗಳಿಗೆರಗಿದೆನು ನಾನು

ಅವಳ ಆ ಸದ್ವಂಶ ಸಂಜನಿತ ಅಭಿಮಾನ-

ಕೊಪ್ಪುವಷ್ಟನೆ ನಾನು ಸೇವೆಯೆಸಗಿದೆನು

ಪ್ರೇಮಾನುಬಂಧದಿಂದಧಿಕವನೆ ವೃದ್ಧಿಸಿದ

ರಸಸಾರಸರ್ವವನು ನಿನಗೊಪ್ಪಿಸಿದೆನು.


ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಾಸವದತ್ತೆಗೆ ನಾಯಿಯ ಬಾಲದಂತೆ ಮತ್ತೆ ಡೊಂಕಾದ ರಾಜನ ಮೇಲೆ ಅಪಾರ ಸಿಟ್ಟುಬಂತು. ಅವಳನ್ನು ನೋಡಿ ಬೆಚ್ಚಿದ ವತ್ಸರಾಜ ಮತ್ತೆ ಅವಳ ಕಾಲಿಗೆರಗಿ ತಪ್ಪಾಯಿತೆಂದು ಅಲವೊತ್ತುಕೊಂಡ. ವೇಷಸಾದೃಶ್ಯದಿಂದಾಗಿ ಈ ರೀತಿಯ ಸಂಭ್ರಾಂತಿಯುಂಟಾಯಿತು ಎಂದು ಅನುನಯಿಸಲು ಯತ್ನಿಸಿದ. ಆದರೆ ಎಲ್ಲವೂ ಪ್ರತ್ಯಕ್ಷಗೋಚರವೇ ಆಗಿದ್ದರಿಂದ ಮಹಾರಾಜ್ಞಿ ಅವನನ್ನು ತಿರಸ್ಕರಿಸಿ ವಿದೂಷಕನನ್ನೂ ಸಾಗರಿಕೆಯನ್ನೂ ಬಂಧಿಸಿ ಮುನ್ನಡೆಯುತ್ತಾಳೆ.


ಮಹಾಬಲ ಭಟ್ಟ, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...