ಸಾಮಾನ್ಯ ಪ್ರಜೆಯೊಬ್ಬನನ್ನು ನಾಯಕನನ್ನಾಗಿ ಮಾಡಿ ಜನಸಾಮಾನ್ಯರ ಜೀವನವನ್ನು ಚಿತ್ರಿಸಿದ ಶೂದ್ರಕನ ಮೃಚ್ಛಕಟಿಕ ನಾಟಕದಲ್ಲಿಯೂ ನಾರೀವಿಧೇಯತೆಯ ಸನ್ನಿವೇಶಗಳನ್ನು ಕಾಣಬಹುದು.
ಈ ನಾಟಕದ ಖಳನಾಯಕ ಶಕಾರ ವಸಂತಸೇನೆಯನ್ನು ವಶಮಾಡಿಕೊಳ್ಳಲು ನಾನಾವಿಧವಾಗಿ ಪ್ರಯತ್ನಿಸುತ್ತಾನೆ. ಪ್ರವಹಣ ವಿಪರ್ಯಯದಿಂದ ಚಾರುದತ್ತನಲ್ಲಿಗೆ ಹೋಗಬೇಕಾದ ವಸಂತಸೇನೆ ಶಕಾರನ ಅಡ್ಡೆಯನ್ನು ಪ್ರವೇಶಿಸುತ್ತಾಳೆ. ಹಿಂದೊಮ್ಮೆ ಶಕಾರನ ವಿಷಯದಲ್ಲಿ ರುಷ್ಟಳಾಗಿದ್ದ ಅವಳ ಕಾಲಿಗೆ ಬಿದ್ದು ಶಕಾರ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ’ಸಾಂಪ್ರತಂ ಪಾದಯೋಃ ಪತಿತ್ವಾ ಪ್ರಸಾದಯಾಮಿ’ ಎಂದು ವಿಟನಿಗೆ ಹೇಳುತ್ತಾ ಹೋಗಿ ಅವಳ ಕಾಲಿಗೆ ಬೀಳುತ್ತಾನೆ.
ಏಷ ಪತಾಮಿ ಚರಣಯೋರ್ವಿಶಾಲನೇತ್ರೇ
ಹಸ್ತಾಂಜಲಿಂ ದಶನಖೇ ತವ ಶುದ್ಧದಂತಿ |
ಯತ್ತವ ಮಯಾಪಕೃತಂ ಮದನಾತುರೇಣ
ತತ್ಕ್ಷಾಮಿತಾಸಿ ವರಗಾತ್ರಿ ತವಾಸ್ಮಿ ದಾಸಃ|| ಮೃಚ್ಛಕಟಿಕಮ್, ಅಷ್ಟಮೋಂಕಃ, ೧೮
(ಓ ವಿಶಾಲವಾದ ದೃಷ್ಟಿಯುಳ್ಳವಳೇ ನಾನು ನಿನ್ನ ಕಾಲಿಗೆ ಬೀಳುತ್ತೇನೆ. ಮುತ್ತಿನಂಥ ಹಲ್ಲಿನವಳೇ, ನಿನ್ನ ಪಾದಗಳ ಹತ್ತು ಉಗುರುಗಳ ಮೇಲೆ ಹಸ್ತಾಂಜಲಿಯನ್ನಿಡುತ್ತೇನೆ. ಹೇ ಸುಂದರಶರೀರದವಳೇ, ಕಾಮಾತುರನಾಗಿ ನಿನ್ನ ವಿಷಯದಲ್ಲಿ ನಾನು ಮಾಡಿದ ಅಪರಾಧವನ್ನು ಕ್ಷಮಿಸು. ನಾನು ನಿನ್ನ ದಾಸನಾಗಿದ್ದೇನೆ.)
ವಸಂತಸೇನೆಯು ’ತೊಲಗು ಇಲ್ಲಿಂದ’ ಎನ್ನುತ್ತ ಕಾಲಿಗೆ ಬಿದ್ದ ಅವನನ್ನು ಒದೆಯುತ್ತಾಳೆ. ಆಗ ಕೋಪಗೊಂಡ ಶಕಾರ ಹೇಳುತ್ತಾನೆ -
ಯಚ್ಚುಂಬಿತಮಂಬಿಕಾಮಾತೃಕಾಭಿರ್ಗತಂ
ನ ದೇವಾನಾಮಪಿ ಯತ್ಪ್ರಣಾಮಮ್ |
ತತ್ಪಾತಿತಂ ಪಾದತಲೇನ ಮುಂಡಂ
ವನೇ ಶೃಗಾಲೇನ ಯಥಾ ಮೃತಾಂಗಮ್ || ಮೃಚ್ಛಕಟಿಕಮ್, ಅಷ್ಟಮೋಂಕಃ, ೩೧
(ನನ್ನ ತಾಯಿಯಿಂದ ಚುಂಬಿಸಲ್ಪಟ್ಟ, ಯಾವ ದೇವರಿಗೂ ಮಣಿಯದ ಈ ನನ್ನ ತಲೆಯನ್ನು ನರಿಯು ಶವವನ್ನು ಒದ್ದಂತೆ ನಿನ್ನ ಪಾದಗಳಿಂದ ಒದ್ದೆಯಲ್ಲ!)
ವಸಂತಸೇನೆ ಅವನನ್ನು ಬಹುವಿಧವಾಗಿ ತಿರಸ್ಕರಿಸಿದರೂ ಮತ್ತೆ ಮತ್ತೆ ಅವಳನ್ನು ಬೇಡಿಕೊಳ್ಳುತ್ತಾನೆ ಶಕಾರ.
ಸುವರ್ಣಕಂ ದದಾಮಿ ಪ್ರಿಯಮ್ ವದಾಮಿ ಪತಾಮಿ ಶೀರ್ಷೇಣ ಸವೇಷ್ಟನೇನ|
ತಥಾಪಿ ಮಾಂ ನೇಚ್ಛತಿ ಶುದ್ಧದಂತಿ ಕಿಂ ಸೇವಕಂ ಕಷ್ಟಮಯಾ ಮನುಷ್ಯಾಃ||
(ಚಿನ್ನವನ್ನು ಕೊಡುತ್ತೇನೆ. ಮುಂಡಾಸಿನ ತಲೆಯೊಂದಿಗೆ (ಪಾದಗಳಿಗೆ) ಬೀಳುತ್ತೇನೆ. ಆದರೂ ನನ್ನನ್ನು ನಿನ್ನ ಸೇವಕನನ್ನಾಗಿ ಸ್ವೀಕರಿಸುತ್ತಿಲ್ಲ ಯಾಕೆ? ಮನುಷ್ಯರ ಜೀವನ ಕಷ್ಟಮಯ)
ಮೃಚ್ಛಕಟಿಕದ ನಾಯಕ ಚಾರುದತ್ತ ಉದಾತ್ತ ವ್ಯಕ್ತಿತ್ವವನ್ನು ಹೊಂದಿದವನು. ಶಕಾರನಿಂದ ತಪ್ಪಿಸಿಕೊಂಡು ಚಾರುದತ್ತನ ಮನೆಯನ್ನು ವಸಂತಸೇನೆ ಪ್ರವೇಶಿಸಿದಾಗ ಅಲ್ಲಿ ಕತ್ತಲೆಯಿತ್ತು. ಚಾರುದತ್ತನು ಅವಳನ್ನು ತನ್ನ ಸೇವಿಕೆ ರದನಿಕೆಯೆಂದು ತಿಳಿದು ಶೀತವಾಯುವಿನಿಂದ ಪೀಡಿತನಾದ ಮಗನನ್ನು ಒಳಗೆ ಕರೆದುಕೊಂಡು ಹೋಗಿ ಅವನನ್ನು ಹೊದಿಕೆಯಿಂದ ರಕ್ಷಿಸುವಂತೆ ಆದೇಶಿಸುತ್ತಾನೆ. ಅನಂತರ ಸತ್ಯವನ್ನು ತಿಳಿದು ಬೇಜಾರುಮಾಡಿಕೊಂಡು ಅವಳಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ’ಭವತಿ ವಸಂತಸೇನೇ, ಅನೇನಾವಿಜ್ಞಾನಾದಪರಿಜ್ಞಾತಪರಿಜನೋಪಚಾರೇಣಾಪರಾದ್ಧೋಽಸ್ಮಿ| ಶಿರಸಾ ಭವತೀಮನುನಯಾಮಿ |’ (ಆದರಣೀಯ ವಸಂತಸೇನೆ, ಅಜ್ಞಾನದಿಂದ ಸರಿಯಾಗಿ ಗುರುತಿಸದೆ ಸೇವಕಿಯಂತೆ ನಡೆಸಿಕೊಂಡು ಅಪರಾಧಿಯಾಗಿದ್ದೇನೆ. ತಲೆಬಾಗಿ ಕ್ಷಮೆ ಯಾಚಿಸುತ್ತೇನೆ.)
ವಸಂತಸೇನೆಯು ವೇಶ್ಯೆಯಾಗಿದ್ದರೂ ಅವಳನ್ನು ಚಾರುದತ್ತ ಎಂದಿಗೂ ಆ ದೃಷ್ಟಿಯಿಂದ ನೋಡಲಿಲ್ಲ. ’ದೇವತೋಪಸ್ಥಾನಯೋಗ್ಯಾ ಯುವತಿರಿಯಂ’ ಎಂದು ಅವಳನ್ನು ಗೌರವದಿಂದ ನೋಡುತ್ತಾನೆ. ಅವಳು ನ್ಯಾಸವಾಗಿಟ್ಟಿದ್ದ ಆಭರಣಗಳ ಅಪಹರಣವಾದಾಗ ಅಷ್ಟೇ ವಿನಯಪೂರ್ವಕವಾಗಿ ಗೆಳೆಯ ಮೈತ್ರೇಯನ ಮೂಲಕವಾಗಿ ಸಂದೇಶವನ್ನು ಕಳಿಸುತ್ತಾನೆ. ಮೈತ್ರೇಯನು ’ತತ್ರ ಭವಾನ್ ಚಾರುದತ್ತಃ ಶೀರ್ಷೇಽಂಜಲಿಂ ಕೃತ್ವಾ ಭವತೀಂ ವಿಜ್ಞಾಪಯತಿ’(ಮಾನ್ಯ ಚಾರುದತ್ತನು ತಲೆಬಾಗಿ ಅಂಜಲಿಬದ್ಧನಾಗಿ ನಿನ್ನಲ್ಲಿ ವಿಜ್ಞಾಪಿಸಿಕೊಳ್ಳುತ್ತಿದ್ದಾನೆ.) ಎನ್ನುತ್ತ ಅವನ ಸಂದೇಶವನ್ನು ಅವಳಿಗೆ ತಿಳಿಸುತ್ತಾನೆ.
ಹೀಗೆ ಮೃಚ್ಛಕಟಿಕ ನಾಟಕದಲ್ಲಿ ಶೂದ್ರಕ ಕವಿ ಖಳ ಶಕಾರನ ಕಪಟ ವಿಧೇಯತೆಯನ್ನೂ, ನಾಯಕ ಚಾರುದತ್ತನ ನೈಜ ವಿಧೇಯತೆಯನ್ನೂ ಸುಂದರವಾಗಿ ಚಿತ್ರಿಸಿದ್ದಾನೆ.
ಮಹಾಬಲ ಭಟ್ಟ, ಗೋವಾ
No comments:
Post a Comment