ಆತ್ಮೀಯರೇ,
ನವರಾತ್ರಿಯ ಪರ್ವ ಮುಗಿದಿದೆ. ಪ್ರಕೃತಿಸ್ವರೂಪ ನಾರೀತತ್ತ್ವವನ್ನು ಪೂಜಿಸುವ ಈ ಪರ್ವ ಪ್ರತಿಯೊಬ್ಬರಲ್ಲೂ ಸ್ತ್ರೀಯರ ಬಗ್ಗೆ ಪೂಜ್ಯ ಭಾವನೆಯನ್ನು ಮೂಡಿಸದರೆ ಆಚರಣೆ ಹೆಚ್ಚು ಅರ್ಥಪೂರ್ಣ ಅನಿಸುತ್ತದೆ. ನವರಾತ್ರಿ ಪ್ರಾಚೀನಕಾಲದಿಂದಲೂ ನಡೆದು ಬಂದಿರುವ ಮಹಿಳಾ ಜಾಗೃತಿಯ ಅಭಿಯಾನ ಎಂದರೂ ತಪ್ಪಿಲ್ಲ. ಈ ಪರ್ವ ಕೊನೆಗೊಳ್ಳುವ ಹೊತ್ತಿನಲ್ಲಿ ಒಂದು ಹೊಸ ಲೇಖನಸರಣಿಯನ್ನು ಆರಂಭಿಸಲು ಯೋಚಿಸಿದ್ದೇನೆ.
ನಮ್ಮದು ಪ್ರಾಚೀನಕಾಲದಿಂದಲೂ ಪುರುಷಪ್ರಧಾನವಾದ ಕುಟುಂಬ ವ್ಯವಸ್ಥೆ. ಪುರುಷನೇ ಕುಟುಂಬದ ಹಿರಿಯನೂ ಮುಖ್ಯಸ್ಥನೂ ಆಗಿರುತ್ತಾನೆ. ಅವನ ಇಚ್ಛೆಯಂತೆ ಕುಟುಂಬ ಸಾಗುತ್ತದೆ. ಅವನ ಹೆಂಡತಿಯು ಅವನಿಗಿಂತ ವಯಸ್ಸಿನಲ್ಲಿ ಕಿರಿಯಳಾಗಿರುತ್ತಾಳೆ. ಹಾಗಾಗಿ ಅವಳು ಗಂಡನನ್ನು ಗೌರವದಿಂದ ಕಂಡು ಅವನ ಸೇವೆಯನ್ನು ಮಾಡಬೇಕು. ಅವನ ಇಚ್ಛೆಯಂತೆ ನಡೆದುಕೊಳ್ಳಬೇಕು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ವ್ಯವಸ್ಥೆ. ಒಂದು ವೇಳೆ ಗಂಡನು ಹೆಂಡತಿಯ ಮಾತಿನಂತೆ ನಡೆಯುವವನಾದರೆ ಅವನನ್ನು ಸಮಾಜ ಅಮ್ಮಾವ್ರ ಗಂಡ ಎಂತಲೋ, ಹೆಣ್ಣಿಗ ಅಂತಲೋ ಮೂದಲಿಸುತ್ತ ನಗೆಪಾಟಲು ಮಾಡುತ್ತದೆ. ’ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ’ ಮುಂತಾದ ಅನೇಕ ಗಾದೆಗಳು ಮಹಿಳೆಯರಿಗೆ ಮನೆಯ ಯಜಮಾನಿಕೆಯನ್ನು ಕೊಡುವುದಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಹೆಚ್ಚಿನ ಸಾಹಿತ್ಯಗಳು ವಿಶೇಷವಾಗಿ ಪ್ರಾಚೀನ ಗ್ರಂಥಗಳು ಪುರುಷಪಾರಮ್ಯವನ್ನೇ ಮೆರೆಸುತ್ತ ಮಹಿಳೆಯನ್ನು ಪುರುಷವಿಧೇಯಳನ್ನಾಗಿಯೇ ಚಿತ್ರಿಸುತ್ತ ಬಂದಿವೆ. ವೈಕುಂಠದಲ್ಲಿ ನಾರಾಯಣನ ಪಾದಸೇವೆ ಮಾಡುವ ಲಕ್ಷ್ಮಿಯ ಚಿತ್ರ ಆದರ್ಶ ದಾಂಪತ್ಯದ ಪ್ರತೀಕವಾಗಿ ತೋರಿಸಲ್ಪಡುತ್ತದೆ. ಪಾತಿವ್ರತ್ಯದ ಮಹಿಮೆಯನ್ನು ಕೊಂಡಾಡುವ ಅದೆಷ್ಟೋ ಗ್ರಂಥಗಳಿವೆ. ಆದರೆ ಸಾತಿವ್ರತ್ಯದ ಬಗ್ಗೆ ಹೇಳುವವರಾಗಲೀ, ಅನುಸರಿಸುವವರಾಗಲಿ ವಿರಳಾತಿವಿರಳ.
ಸಂಸ್ಕೃತಸಾಹಿತ್ಯಪ್ರಪಂಚದ ಕೆಲವು ಕೃತಿಗಳನ್ನು ಓದುವಾಗ ಇದಕ್ಕೆ ವಿಪರೀತವಾದ ಕೆಲವು ಸನ್ನಿವೇಶಗಳು ನನ್ನ ಗಮನಕ್ಕೆ ಬಂದವು. ಸಂಸ್ಕೃತನಾಟಕ ಅಥವಾ ಕಾವ್ಯದ ಕೆಲವು ನಾಯಕರು ಹೆಂಡತಿಗೆ ಹೆದರಿ ಅವಳ ಕಾಲಿಗೆ ಬೀಳುವ ಸನ್ನಿವೇಶಗಳು ಚಿತ್ರಿತವಾಗಿವೆ. ಅದರಲ್ಲೂ ಇನ್ನೊಬ್ಬ ಹೆಣ್ಣಿನೊಂದಿಗೆ ಚೆಲ್ಲಾಟವಾಡುವಾಗ ಹೆಂಡತಿಯ ಕೈಗೆ ಕೆಂಪುಹಸ್ತರಾಗಿ ಸಿಕ್ಕಿಬಿದ್ದು ಕ್ಷಮೆ ಕೇಳುವ ಅನೇಕ ಪ್ರಸಂಗಗಳು ಸಂಸ್ಕೃತದ ಪ್ರಣಯಕಾವ್ಯಗಳಲ್ಲಿ ಕಂಡುಬರುತ್ತವೆ. ಪ್ರಿಯತಮೆಯ ದಾಸನಾಗಿ ಅವಳ ಸೇವೆ ಮಾಡಲು ಮುಂದಾಗುವ ಪ್ರಿಯತಮರನ್ನೂ ಕಾಣಬಹುದು. ಹೆಂಡತಿಯ ಅಧಿಕಾರಯುತ ವ್ಯವಹಾರದಿಂದ ದೀನನಾದ ಗಂಡನನ್ನೂ ನೋಡಬಹುದು. ತಾನು ಬಯಸಿದ ಹೆಣ್ಣನ್ನು ಒಲಿಸಿಕೊಳ್ಳಲು ಅವಳ ಕಾಲಿಗೆ ಬೀಳುವ ನಾಟಕವನ್ನಾಡುವ ಖಳನಾಯಕರೂ ಅಲ್ಲಲ್ಲಿ ತೋರುತ್ತಾರೆ. ಈ ಲೇಖನ ಸರಣಿಯಲ್ಲಿ ಅಂತಹ ಕೆಲವು ಸನ್ನಿವೇಶಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತೇನೆ. ಇವುಗಳನ್ನು ವಿನೋದ ಪ್ರಸಂಗಗಳೆಂದೊ, ಗಂಭೀರ ಸನ್ನಿವೇಶಗಳೆಂದೋ, ಮಹಿಳೆಯರಿಗೆ ಸಲ್ಲಬೇಕಾದ ನೈಜ ಗೌರವವೆಂದೋ ಓದುಗರು ತಮ್ಮ ಲಹರಿಗನ್ವಯ ಅರ್ಥೈಸಿಕೊಳ್ಳಬಹುದು. ಈ ಸರಣಿಯನ್ನು ಒಪ್ಪಿಕೊಳ್ಳುವುದೊ ಬಿಡುವುದೋ ಸಹೃದಯರಿಗೆ ಬಿಟ್ಟ ವಿಚಾರ.
🙏🏻🙏🏻🙏🏻
No comments:
Post a Comment