Thursday, October 22, 2020

ಕಾತ್ಯಾಯನೀ

ನವರಾತ್ರವ್ರತ ಆರನೆಯ ದಿನಕ್ಕೆ ಕಾಲಿಟ್ಟಿದೆ. ಕಾತ್ಯಾಯನೀ ಎಂಬ ದುರ್ಗಾರೂಪದ ಆರಾಧನೆ ಈ ದಿನ ನಡೆಯುತ್ತದೆ.

ಕತಸ್ಯ ಗೋತ್ರಾಪತ್ಯಂ ಸ್ತ್ರೀ ಕಾತ್ಯಾಯನೀ. ಕತ ಎಂಬ ಮಹರ್ಷಿಯ ಗೋತ್ರದಲ್ಲಿ ಹುಟ್ಟಿದವಳು ಎಂದರ್ಥ ಕತಗೋತ್ರದ ಕಾತ್ಯಾಯನ ಮಹರ್ಷಿಯು ದೇವಿಯ ಕುರಿತು ತಪಸ್ಸನ್ನಾಚರಿಸಿ ಆದಿಶಕ್ತಿಯೇ ತನ್ನ ಮಗಳಾಗಿ ಹುಟ್ಟುವಂತೆ ವರ ಪಡೆದ.

ಮಹಿಷಾಸುರನನ್ನು ಕೊಲ್ಲಲು ತ್ರಿಮೂರ್ತಿಗಳ ಕೋಪದಿಂದ ಹುಟ್ಟಿದವಳು ಮಹಿಷಮರ್ದಿನಿ.

ತತೋತಿಕೋಪಪೂರ್ಣಸ್ಯ ಚಕ್ರಿಣೋ ವದನಾತ್ತತಃ|

ನಿಶ್ಚಕ್ರಾಮ ಮಹತ್ತೇಜೋ ಬ್ರಹ್ಮಣಃ ಶಂಕರಸ್ಯ ಚ||

ಹೀಗೆ ತ್ರಿಮೂರ್ತಿಗಳಿಂದ ಹಾಗೂ ಇತರ ದೇವತೆಗಳಿಂದ ಹೊರಟ ತೇಜಃಕಿರಣಗಳು ಒಂದೆಡೆ ಸೇರಿ ದೇವಿಯ ಪ್ರಾದುರ್ಭಾವವಾದದ್ದು ಕಾತ್ಯಾಯನ ಮಹರ್ಷಿಯ ಆಶ್ರಮಪರಿಸರದಲ್ಲಿ. ಕಾತ್ಯಾಯನ ಮಹರ್ಷಿಯೇ ಅವಳನ್ನು ಮೊದಲು ಪೂಜಿಸಿದವ. ಹಾಗಾಗಿ ಅವಳಿಗೆ ಕಾತ್ಯಾಯನಿ ಎಂಬ ಹೆಸರು ಬಂತು.

ಕಾತ್ಯಾಯನಿಯ ಶರೀರದ ಒಂದೊಂದು ಅವಯವಗಳೂ ಒಬ್ಬೊಬ್ಬ ದೇವತೆಯ ಅಂಶದಿಂದ ರೂಪುಗೊಂಡಿತು.

ಶಂಭುವಿನ ತೇಜಸ್ಸಿನಿಂದ ಮುಖ, ಯಮನಿಂದ ಕೇಶ, ವಿಷ್ಣುವಿನಿಂದ ಬಾಹುಗಳು, ಬುಧನಿಂದ ಸ್ತನಗಳು, ಚಂದ್ರನಿಂದ ಕಟಿ, ವರುಣನಿಂದ ತೊಡೆ ಮತ್ತು ಜಂಘಾ, ಭೂಮಿಯಿಂದ ನಿತಂಬ, ಬ್ರಹ್ಮನ ತೇಜಸ್ಸಿನಿಂದ ಪಾದಗಳು, ಸೂರ್ಯನಿಂದ ಅದರ ಕಾಲ್ಬೆರಳುಗಳು, ವಸುಗಳಿಂದ ಕೈಬೆರಳುಗಳು, ಕುಬೇರನಿಂದ ಮೂಗು, ಪ್ರಜಾಪತಿಯ ತೇಜಸ್ಸಿನಿಂದ ಹಲ್ಲುಗಳು, ಅಗ್ನಿಯಿಂದ ಕಣ್ಣುಗಳು, ಸಂಧ್ಯೆಯರ ತೇಜಸ್ಸಿನಿಂದ ಹುಬ್ಬು, ವಾಯುವಿನಿಂದ ಕಿವಿಗಳು ಹೀಗೆ ದೇವಿಯ ಅಂಗಗಳು ರೂಪುಗೊಂಡವು,

ವಿವಿಧ ದೇವತೆಗಳು ತಮ್ಮ ತಮ್ಮ ಆಯುಧಗಳಿಂದ ಪ್ರತ್ಯಾಯುಧಗಳನ್ನು ನಿರ್ಮಿಸಿಕೊಟ್ಟರು. ಶಿವನಿಂದ ಶೂಲ, ವಿಷ್ಣುವಿನಿಂದ ಚಕ್ರ, ವರುಣನಿಂದ ಶಂಖ, ಅಗ್ನಿಯಿಂದ ಶಕ್ತಿ, ಮಾರುತನಿಂದ ಬಿಲ್ಲು ಮತ್ತು ಶರಗಳಿಂದ ತುಂಬಿದ ಬತ್ತಳಿಕೆ, ಇಂದ್ರನಿಂದ ವಜ್ರಾಯುಧ ಐರಾವತದಿಂದ ಘಂಟೆ ಯಮನಿಂದ ದಂಡ, ವರುಣನಿಂದ ಪಾಶ, ಪ್ರಜಾಪತಿಯಿಂದ ಅಕ್ಷಮಾಲೆ, ಬ್ರಹ್ಮನಿಂದ ಕಮಂಡಲು, ಕಾಲನಿಂದ ಖಡ್ಗ, ವಿಶ್ವಕರ್ಮನಿಂದ ಕೊಡಲಿ, ಹೀಗೆ ದೇವಿಯು ಶಸ್ತ್ರ ಸಂಪನ್ನಳಾದಳು. ಅದರಂತೆ ಅನೇಕರು ಅವಳಿಗೆ ದಿವ್ಯ ಆಭೂಷಣಗಳನ್ನು ನೀಡಿದರು. ಕ್ಷೀರಸಾಗರ ಹಾರ, ವಸ್ತ್ರ, ಚೂಡಾಮಣಿ, ಕುಂಡಲ, ಅರ್ಧಚಂದ್ರ, ಕೇಯೂರ, ಗೆಜ್ಜೆ, ಉಂಗುರ ಇತ್ಯಾದಿಗಳನ್ನು ನೀಡಿದ. ಸಮುದ್ರರಾಜ ಬಾಡದ ಕಮಲಮಾಲೆಯನ್ನೂ, ಕಮಲಪುಷ್ಪವನ್ನೂ, ಹಿಮವಂತ ಸವಾರಿಗಾಗಿ ಸಿಂಹವನ್ನೂ, ಅನೇಕ ರತ್ನಗಳನ್ನೂ ನೀಡಿದ. ಕುಬೇರ ಸುರೆಯಿಂದ ತುಂಬಿದ ಪಾನಪಾತ್ರೆಯನ್ನೂ, ಶೇಷ ಮಹಾಮಣಿಗಳನ್ನೂ ನಾಗಹಾರವನ್ನೂ ಕೊಟ್ಟ. ಇತರ ದೇವತೆಗಳಿಂದಲೂ ವಿವಿಧ ಆಭೂಷಣಗಳನ್ನೂ ಆಯುಧಗಳನ್ನೂ ಪಡೆದುಕೊಂಡು ದೇವಿಯು ಸಾಲಂಕೃತಳೂ ಸಾಯುಧಳೂ ಆದಳು.

ಇಂತಹ ಕಾತ್ಯಾಯನಿಯನ್ನು ಸ್ತುತಿಸುವ ಶ್ಲೋಕ

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ|

ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ||

ಕೈಯಲ್ಲಿ ಚಂದ್ರಹಾಸ ದಂತೆ ಹೊಳೆಯುವ ಆಯುಧವನ್ನು ಧರಿಸಿ, ಹುಲಿಯನ್ನು ಏರಿರುವ, ದಾನವರ ನಾಶ ಮಾಡುವ ಕಾತ್ಯಾಯನಿ ದೇವಿ ನಮಗೆ ಶುಭವನ್ನುಂಟುಮಾಡಲಿ ಈ ಶ್ಲೋಕದ ಆಶಯ.

ಈ ಸಂದರ್ಭ ಕಾತ್ಯಾಯನಿಯು ಅನೇಕ ಆಯುಧಗಳನ್ನು ಧರಿಸಿ ಭೀಕರಾಟ್ಟಹಾಸಮಾಡುವ ಮಹಿಷಮರ್ದಿನಿ ಎಂದು ವರ್ಣಿಸಿದರೂ ಪೂಜೆಗೊಳ್ಳುವ ಕಾತ್ಯಾಯನಿಯ ರೂಪವನ್ನು ವಿಭಿನ್ನವಾಗಿ ಕಲ್ಪಿಸಲಾಗಿದೆ.

ಎತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್|

ಪಾತು ನಃ ಸರ್ವಭೂತೇಭ್ಯಃ ಕಾತ್ಯಾಯನಿ ನಮೋಸ್ತುತೇ||

ಕಾತ್ಯಾಯನಿಯ ಮುಖ ಮೂರುಕಣ್ಣುಗಳಿಂದ ಶೋಭಿಸುತ್ತ ಸೌಮ್ಯವಾಗಿದೆ. ಅಂತಹ ಕಾತ್ಯಾಯನಿಯು ಸಕಲಚರಾಚರಗಳಿಂದ ನಮ್ಮನ್ನು ರಕ್ಷಿಸಲಿ ಎಂದು ಈ ಪ್ರಾರ್ಥನೆ ತಿಳಿಸುತ್ತದೆ.

 ಕಾತ್ಯಾಯನಿಗೆ ನಾಲ್ಕು ಭುಜಗಳು. ಎಡಭಾಗದ ಒಂದು ಕೈಯಲ್ಲಿ ಕಮಲವನ್ನೂ ಇನ್ನೊಂದರಲ್ಲಿ ಖಡ್ಗವನ್ನೂ ಹಿಡಿದಿದ್ದಾಳೆ. ಬಲಭಾಗದ ಒಂದು ಕೈಯಲ್ಲಿ ವರದಮುದ್ರೆ ಹಾಗೂ ಇನ್ನೊಂದರಲ್ಲಿ ಅಭಯಮುದ್ರೆ ಇದೆ.

 ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಕಾತ್ಯಾಯನ ವ್ರತದ ಉಲ್ಲೇಖ ಇದೆ. ಗೋಪಿಕೆಯರು ಶ್ರೀಕೃಷ್ಣನನ್ನೇ ಪತಿಯನ್ನಾಗಿ ಪಡೆಯಲು ಈ ವ್ರತವನ್ನು ಆಚರಿಸಿದರು ಎಂದು ಅಲ್ಲಿ ಉಲ್ಲೇಖವಿದೆ.

ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ|

ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ||

ಮಹಾಯೋಗಿನಿಗಳ ಅಧೀಶ್ವರಿಯೂ ಮಹಾಮಾಯೆಯೂ ಆಗಿರುವ ಹೇ ಕಾತ್ಯಾಯನಿ, ನಂದಗೋಪಕುಮಾರನನ್ನು ನನ್ನ ಪತಿಯನ್ನಾಗಿ ಮಾಡು ಎಂದು ಪ್ರತಿಯೊಬ್ಬ ಗೋಪಿಕೆಯೂ ಬೇಡಿಕೊಳ್ಳುತ್ತಿದ್ದಳು.

ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಡಬೇಕೆಂದು ಅವಳ ಅಣ್ಣ ರುಕ್ಮ ನಿರ್ಧರಿಸಿದಾಗ ರುಕ್ಮಿಣಿಯು ಕಾತ್ಯಾಯನಿಯ ಪೂಜೆಯನ್ನು ಮಾಡಿಯೇ ಸಂಕಷ್ಟದಿಂದ ಪಾರಾಗಿ ಕೃಷ್ಣನನ್ನು ಪತಿಯನ್ನಾಗಿ ಪಡೆದಳು ಎಂಬ ಕಥೆಯೂ ಇದೆ.

ಆಜ್ಞಾಚಕ್ರದಲ್ಲಿ ಮನವನ್ನಿರಿಸಿ ಕಾತ್ಯಾಯನಿಯನ್ನು ಶ್ರದ್ಧಾಭಕ್ತಿ ಸಮನ್ವಿತರಾಗಿ ಆರಾಧಿಸಿ ರೋಗ, ಶೋಕ, ಸಂತಾಪ ಭಯಗಳನ್ನು ನಿವಾರಿಸಿಕೊಂಡು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸೋಣ. ನಾಳೆಯ ದಿನ ಕಾಲರಾತ್ರಿ ದುರ್ಗೆಯ ಅನುಸಂಧಾನದಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...