Sunday, October 18, 2020

ನವರಾತ್ರಿ ಪೂರ್ವಪೀಠಿಕೆ

ಶರಣಾಗತದೀನಾರ್ತಪರಿತ್ರಾಣಪರಾಯಣೇ|

ಸರ್ವಾಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತುತೇ||

ಆತ್ಮೀಯ ಸ್ನೇಹಿತರೆ,

ಎಲ್ಲರಿಗೂ ಆದರಪೂರ್ವಕ ನಮಸ್ಕಾರ.

ಸಾಮಾನ್ಯವಾಗಿ ಶ್ರಾವಣಮಾಸದಿಂದಲೇ ನಮ್ಮ ಹಬ್ಬಗಳ ಸಾಲು ಆರಂಭವಾಗುತ್ತವೆ. ಗಣೇಶ ಚತುರ್ಥಿಯ ನಂತರ ಬರುವ ದೊಡ್ಡ ಹಬ್ಬ ನವರಾತ್ರಿ. ಜಗತ್ತಿನ ಸೃಷ್ಟಿಗೆ ಮೂಲಕಾರಣವಾದ ಪ್ರಕೃತಿತತ್ತ್ವವನ್ನು ಆರಾಧಿಸುವ ಮಹಾಪರ್ವ ಇದು.

ಈ ಜಗತ್ತಿನ ಸೃಷ್ಟಿಯ ವಿಷಯದಲ್ಲಿ ಅನಾದಿಕಾಲದಿಂದ ಅನೇಕ ವಾದಗಳು ಹುಟ್ಟಿಕೊಂಡಿವೆ. ಕೆಲವರು ಜಗತ್ತಿನ ಬೀಜಸ್ವರೂಪ ಪರಬ್ರಹ್ಮ ಲಿಂಗರಹಿತತತ್ತ್ವವೆಂದು ವಾದಿಸಿದರೆ ಇನ್ನು ಕೆಲವರು ಸ್ತ್ರೀತತ್ತ್ವವೇ ಪ್ರಕೃತಿ ಅದರಿಂದಲೇ ಜಗತ್ತಿನ ಸೃಷ್ಟಿ ಎನ್ನುತ್ತಾರೆ. ಸರ್ವಾಶ್ರಯಾಖಿಲಮಿದಂ ಜಗದಂಶಭೂತಮವ್ಯಾಕೃತಾ ಹಿ ಪರಮಾ ಪ್ರಕೃತಿಸ್ತ್ವಮಾದ್ಯಾ ಎಂದು ಮಾರ್ಕಂಡೇಯ ಪುರಾಣದಲ್ಲಿ ದೇವಿಯನ್ನು ವರ್ಣಿಸಲಾಗಿದೆ. ಮತ್ತೆ ಕೆಲವರು ಪುರುಷನ ಸಾನಿಧ್ಯವೇ ಸೃಷ್ಟಿಗೆ ಕಾರಣ ಎಂಬ ವಾದವನ್ನು ಮುಂದಿಡುತ್ತಾರೆ. ಹಾಗಾಗಿ ನಮ್ಮ ಸಂಪ್ರದಾಯದಲ್ಲಿ, ಆಚರಣೆಯಲ್ಲಿ, ನಂಬಿಕೆಯಲ್ಲಿ ವೈವಿಧ್ಯ ಕಂಡುಬರುತ್ತದೆ. ಈ ವಿವಿಧತೆ ಕೆಲವೊಮ್ಮೆ ವಿಭ್ರಮೆಯನ್ನುಂಟುಮಾಡುತ್ತದೆ. ಕೇವಲ ನಮ್ಮಂತಹ ಪಾಮರರಿಗಷ್ಟೇ ಅಲ್ಲ ಸಮಸ್ತ ಪುರಾಣಗಳ ಸೃಷ್ಟಿಕರ್ತೃವಾದ ವೇದವ್ಯಾಸರಿಗೇ ಯಾವ ವಾದ ಸರಿ ಎಂಬುದು ತಿಳಿಯದೆ ನಾರದರ ಮೊರೆಹೊಕ್ಕರಂತೆ.

ಮಾರ್ಕಂಡೇಯ ಪುರಾಣದನ್ವಯ ದೇವಿ ಮೊದಲಿಗೆ ಪ್ರಕಟವಾದದ್ದು ಮಧುಕೈಟಭವಧೆಯ ಸಮಯದಲ್ಲಿ. ಆದಿಮಾಯೆಯಾದ ದೇವಿ ಯೋಗನಿದ್ರೆಯಾಗಿ ಶ್ರೀಮನ್ನಾರಾಯಣನನ್ನು ಆವರಿಸಿಕೊಂಡಿದ್ದಳು. ಮಧು ಕೈಟಭರೆಂಬ ಯುಗಳ ರಾಕ್ಷಸರು ಮಲಗಿದ್ದ ವಿಷ್ಣುವನ್ನೂ ಅವನ ನಾಭಿಕಮಲದಲ್ಲಿ ಕುಳಿತಿದ್ದ ಬ್ರಹ್ಮನನ್ನೂ ಪೀಡಿಸಲು ಯತ್ನಿಸಿದಾಗ ಬ್ರಹ್ಮನ ಪ್ರಾರ್ಥನೆಗೆ ಒಲಿದು ವಿಷ್ಣುವಿನ ಕಣ್ಣು, ಮೂಗು, ಬಾಯಿ, ಹೃದಯ, ಹೊಟ್ಟೆಗಳಿಂದ ಹೊರಬಂದ ಬ್ರಹ್ಮನ ಮುಂದೆ ಪ್ರತ್ಯಕ್ಷಳಾದಳು. ಅವಳ ಅಣತಿಯಂತ ಬ್ರಹ್ಮದೇವ ಸೃಷ್ಟಿಯನ್ನ ಮಾಡಿದ ಎಂದು ಮಾರ್ಕಂಡೇಯ ಪುರಾಣದಲ್ಲಿ ಉಪವರ್ಣಿತವಾಗಿದೆ.

ಹಿಂದೆ ನೂರು ವರ್ಷಗಳ ಕಾಲ ದೇವಾಸುರ ಸಂಗ್ರಾಮ ನಡೆಯಿತಂತೆ. ಅದರಲ್ಲಿ ಮಹಿಷಾಸುರ ಅತಿವರಬಲಾನ್ವಿತನಾಗಿ ದೇವತೆಗಳನ್ನೆಲ್ಲ ಸೋಲಿಸಿ ಸ್ವರ್ಗವನ್ನು ಸ್ವಾಧೀನಪಡಿಸಿಕೊಂಡ. ದೇವತೆಗಳು ತ್ರಿಮೂರ್ತಿಗಳಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡಾಗ ಅವರಿಂದ ಹೊರಟ ಕೋಪಾಗ್ನಿಕಣಗಳೊಟ್ಟಾಗಿ ದೇವಿಯ ಸ್ವರೂಪ ಪ್ರಕಟವಾಯಿತು ಎಂದು ಪುರಾಣದಲ್ಲಿ ವರ್ಣನೆಯಿದೆ. ತಸ್ಮಾನ್ಮೇ ಮರಣಂ ನೂನಂ ಕಾಮಿನ್ಯಾಃ ಕುರು ಪದ್ಮಜ| ಅಬಲಾ ಮಾಂ ಕಥಂ ಹಂತುಂ ಕಥಂ ಶಕ್ತಾ ಭವಿಷ್ಯತಿ|| ಎಂದು ಮಹಿಷಾಸುರ ಹೆಣ್ಣಿನಿಂದ ಮಾತ್ರ ಮರಣಹೊಂದುವಂತೆ ವರವನ್ನು ಪಡೆದಿದ್ದ. ಹಾಗಾಗಿ ದೇವಿಯೇ ಪ್ರಕಟವಾಗಬೇಕಾಯಿತು.

ಜಗತ್ತಿನ ಸೃಷ್ಟಿಸ್ಥಿತಿಲಯಗಳಿಗೆ ಕಾರಣೀಕರ್ತರಾದ ತ್ರಿಮೂರ್ತಿಗಳೂ ಜಗನ್ಮಾತೆಯಾದ ಮಹಾಮಾಯೆಯ ಆಣತಿಯಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದಿಮಾಯೆ ತನ್ನಂಶದಿಂದಲೇ ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿಯೆಂಬ ಮೂರು ಸ್ತ್ರೀರೂಪಗಳನ್ನು ಸೃಷ್ಟಿಸಿ ಕ್ರಮವಾಗಿ ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಪ್ರದಾನ ಮಾಡುತ್ತಾಳೆ.

ನವರಾತ್ರಿ ಸ್ತ್ರೀತತ್ತ್ವವನ್ನು ಪೂಜಿಸುವ ದೊಡ್ಡಹಬ್ಬ. ನವಾನಾಂ ರಾತ್ರೀಣಾಂ ಸಮಾಹಾರಃ ನವರಾತ್ರಮ್. ಹೆಸರೇ ಸೂಚಿಸುವಂತೆ ಒಂಭತ್ತು ರಾತ್ರಿಗಳಲ್ಲಿ ಆಚರಿಸಲ್ಪಡುವ ವಿಶಿಷ್ಟ ಉತ್ಸವ. ದೇವಿಯು ಒಂಭತ್ತು ರಾತ್ರಿಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿ ವಿಜಯದಶಮಿಯ ಬೆಳಗಿನಲ್ಲಿ ಅವನನ್ನು ಸಂಹರಿಸಿದಳು ಎಂದು ಪುರಾಣಗಳು ಹೇಳುತ್ತವೆ.

ದೇವೀಭಾಗವತದಲ್ಲಿ ನವರಾತ್ರವ್ರತದ ಆಚರಣೆಯ ವಿಧಿಯನ್ನು ವರ್ಣಿಸಲಾಗಿದೆ. ವರ್ಷದಲ್ಲಿ ಎರಡು ನವರಾತ್ರಿಗಳು ಆಚರಿಸಲ್ಪಡುತ್ತವೆ. ಚೈತ್ರಮಾಸದ ಪ್ರತಿಪದೆಯಿಂದ ನವಮಯವರೆಗೆ ವಸಂತನವರಾತ್ರಿ, ಶರದೃತುವಿನ ಪಾಡ್ಯದಿಂದ ನವಮಿಯವರೆಗೆ ಶರನ್ನವರಾತ್ರಿ. ಕೆಲವೆಡೆ ಮಾಘನವರಾತ್ರಿ ಹಾಗೂ ಆಷಾಢನವರಾತ್ರಿಗಳ ಆಚರಣೆಯೂ ನಡೆಯುತ್ತದೆ ಎನ್ನಲಾಗಿದೆ.

ದೇವೀ ಭಾಗವತದಲ್ಲಿ ವಸಂತನವರಾತ್ರಿ ಹಾಗೂ ಶರನ್ನವರಾತ್ರಿಗಳು ದೇವಿಯ ಆರಾಧನೆಗೆ ಪ್ರಶಸ್ತವಾಗಿವೆ ಎಂದು ವರ್ಣಿಸಲಾಗಿದೆ. ಈ ಎರಡೂ ಋತುಗಳಿಗೆ ಯಮದಂಷ್ಟ್ರ ಎಂಬ ಹೆಸರಿದೆ. ಅನೇಕರೋಗಗಳನ್ನು ಉಂಟುಮಾಡುವ ಈ ಋತುಗಳಲ್ಲಿ ಚಂಡಿಕೆಯ ಪೂಜೆಯನ್ನು ಮಾಡಬೇಕು ಎಂಬ ನಿರ್ದೇಶ ಅಲ್ಲಿದೆ. ತಸ್ಮಾತ್ತತ್ರ ಪ್ರಕರ್ತವ್ಯಂ ಚಂಡಿಕಾಪೂಜನಂ ಬುಧೈಃ ಎಂದ ಹೇಳಲಾಗಿದೆ.

ನವರಾತ್ರಿ ವ್ರತ ಪ್ರತಿಪದೆಯ ಹಿಂದಿನ ದಿನ ಅಂದರೆ ಅಮಾವಾಸ್ಯೆಯಂದೇ ಆರಂಭವಾಗುತ್ತದೆ. ಅಂದು ಒಂದೇ ಹೊತ್ತು ಊಟಮಾಡಿ ದೇವಿಯ ಸ್ಥಾಪನೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು. ಹದಿನಾರು ಹಸ್ತ ವಿಸ್ತೀರ್ಣದ ಜಾಗವನ್ನು ಗೋಮಯಾದಿಸೇಚನದಿಂದ ಶುಚಿಗೊಳಿಸಿ ಅಲ್ಲಿ ನಾಲ್ಕು ಹಸ್ತಗಳಷ್ಟು ಎತ್ತರವಾದ ಜಾಗದಲ್ಲಿ ದೇವಿಯ ಪೀಠವನ್ನು ಸ್ಥಾಪಿಸಬೇಕು. ಸುಂದರವಾದ ಸ್ತಂಭಗಳಿಂದ ಯುಕ್ತವಾದ ಮಂಟಪವನ್ನು ನಿರ್ಮಿಸಬೇಕು.

ನವರಾತ್ರವ್ರತದ ಒಂಭತ್ತು ದಿನಗಳೂ ಒಪ್ಪತ್ತು ಊಟ. ಮದ್ಯಮಾಂಸಾದಿಗಳು ವರ್ಜ್ಯ. ಸಾತ್ತ್ವಿಕ ಆಹಾರ ಸೇವನೆಯ ಮೂಲಕ ಮೈಮನಗಳನ್ನು ಶುಚಿಯಾಗಿರಿಸಿಕೊಂಡು ಭಕ್ತಿಭಾವದಿಂದ ವ್ರತವನ್ನು ಆಚರಿಸಬೇಕು.

ಪೂರ್ವನಿರ್ಮಿತವಾದ ಮಂಟಪದಲ್ಲಿ ನಾಲ್ಕು ಕೈಗಳುಳ್ಳ ಸಾಯುಧ ದೇವಿಯ ಪ್ರತಿಷ್ಠಾಪನೆ ಮಾಡಬೇಕು. ಸುಂದರವಾದ ಕಲಶವನ್ನು ಸ್ಥಾಪಿಸಿ ಅದರಲ್ಲಿ ಪ್ರಾಣಪ್ರತಿಷ್ಠೆಯನ್ನು ಮಾಡಬೇಕು. ದೇವಿಯನ್ನು ಭಕ್ತಿಯಿಂದ ಪೂಜಿಸಿ, ಕುಮಾರಿಕಾ ಪೂಜೆಯನ್ನು ನೆರವೇರಿಸಬೇಕು. 

ಪ್ರಾದೇಶಿಕ ಸಂಪ್ರದಾಯಗಳನ್ನು ಅನುಸರಿಸಿ ದೇಶಾದ್ಯಂತ ಆಚರಣೆಯಲ್ಲಿ ವೈವಿಧ್ಯ ಕಾಣಸಿಗುತ್ತದೆ. ಪಶ್ಚಿಮಬಂಗಾಳವೂ ಸೇರಿದಂತೆ ದೇಶದ ಪೂರ್ವಭಾಗದಲ್ಲಿ ದುರ್ಗಾಪೂಜೆ ವೈಭವದಿಂದ ನಡೆಯುತ್ತದೆ. ಉತ್ತರಭಾರತದಲ್ಲಿ ರಾಮಲೀಲಾ ಉತ್ಸವ ನಡೆಯುತ್ತದೆ. ಪಶ್ಚಿಮದ ಗುಜರಾತಿನಲ್ಲಿ ಗರ್ಭಾ ಮತ್ತು ದಾಂಡಿಯಾ ನೃತ್ಯದ ಮೂಲಕ ನವರಾತ್ರಿಯ ಸಂಭ್ರಮ ಕಾಣಸಿಗುತ್ತದೆ. ದಕ್ಷಿಣಭಾರತದಲ್ಲಿ ದಸರಾ ವಿಶೇಷವಾಗಿ ಉತ್ಸವ ರೂಪದಲ್ಲಿ ಆಚರಿಸಲ್ಪಡುತ್ತದೆ.

ನವರಾತ್ರಿಯ ಒಂದೊಂದು ದಿನವೂ ಒಂದೊಂದು ದುರ್ಗೆಯ ಪೂಜೆ ನಡೆಯುತ್ತದೆ. ದುರ್ಗಾಸಪ್ತಶತಿಯಲ್ಲಿ ನವದುರ್ಗೆಯರ ಉಲ್ಲೇಖ ಕಾಣಸಿಗುತ್ತದೆ.

ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ |

ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀ ತಥಾ |

ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ ||

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |

ಮುಂದಿನ ಒಂಭತ್ತು ದಿನಗಳಲ್ಲಿ ನವದುರ್ಗೆಯರ ಅನುಸಂಧಾನವನ್ನು ಮಾಡುತ್ತ ನವರಾತ್ರವ್ರತವನ್ನು ಆಚರಿಸೋಣ. ನಾಳೆ ಶೈಲಪುತ್ರಿಯ ಬಗ್ಗೆ ಮಾಹಿತಿಯನ್ನು ನಿರೀಕ್ಷಿಸಿ.

ನಮಸ್ಕಾರ


No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...