Tuesday, February 5, 2019

ಅಕ್ಷಿಪಾತ್ರನ್ಯಾಯ


ಒಂದು ಸಣ್ಣ ಧೂಳಿನ ಕಣ ನಮಗೆ ಏನು ಮಾಡಬಲ್ಲದು? ಮೈಗೆ ಹತ್ತಿದರೆ ಕೊಡವಿಕೊಳ್ಳಬಹುದು. ಸೂಕ್ಷ್ಮವಾದ ಮೂಗಿನೊಳಗೆ ಹೊಕ್ಕರೆ ಸೀನು ತೆಗೆದು ಹೊರಹಾಕಬಹುದು. ಆದರೆ ಅದೇ ಕಣ ಅತಿ ಸೂಕ್ಷ್ಮವಾದ ಕಣ್ಣನ್ನು ಹೊಕ್ಕರೆ ಜಗತ್ತೇ ಕಾಣದಂತಾಗುವುದು. ಹೊರಹಾಕಲು ಹರಸಾಹಸ ಮಾಡಬೇಕಾದೀತು. ಕಣ್ಣೀರಧಾರೆಯನ್ನೇ ಹರಿಸಬೇಕಾದೀತು. ಅಸಹನೀಯ ನೋವನ್ನನುಭವಿಸಬೇಕಾದೀತು.

ನೋವು ಸಣ್ಣದೋ ದೊಡ್ದದೋ ಎನ್ನುವುದು ಅದನ್ನು ಅನುಭವಿಸುವವರನ್ನು ಅವಲಂಬಿಸಿರುತ್ತದೆ. ಕಠಿಣ ಹೃದಯಿಯು ದೊಡ್ಡ ನೋವನ್ನೂ ತಡೆದುಕೊಳ್ಳಬಲ್ಲ. ಮೃದುಹೃದಯವುಳ್ಳವನಿಗೆ ಸಣ್ಣ ಸಣ್ಣ ವಿಚಾರಗಳೂ ಅಸಹನೀಯ ನೋವನ್ನುಂಟುಮಾಡಬಹುದು.

ಶಿಕ್ಷೆಯ ವಿಷಯದಲ್ಲೂ ಹಾಗೆಯೇ. ಪಾತ್ರತ್ವವನ್ನು ಅರಿತು ನೀಡಬೇಕಾಗುತ್ತದೆ. ದೊಡ್ಡವರಿಗೆ ವಿಧಿಸುವ ಶಿಕ್ಷೆಯನ್ನೇ ಚಿಕ್ಕ ಮಕ್ಕಳಿಗೂ ವಿಧಿಸಲಾಗದು. ಹಾಗಾಗಿ ಬಾಲಾಪರಾಧಿಗಳಿಗೆ ಪ್ರತ್ಯೇಕ ಶಿಕ್ಷೆಯ ವ್ಯವಸ್ಥೆಯೇ ಇದೆ. ಸೂಕ್ಷ್ಮಮನಸ್ಥಿತಿಯವರಿಗೆ ಸಣ್ಣ ಶಿಕ್ಷೆಯೂ ದೊಡ್ದ ನೋವನ್ನುಂಟುಮಾಡಬಹುದು. ಕೋಣನಿಗೆ ಲತ್ತೆಯ ಪೆಟ್ಟು ಬೇಕಾಗುತ್ತದೆ. ಆದರೆ ಜಾಣನಿಗೆ ಮಾತಿನ ಪೆಟ್ಟೇ ನೋವನ್ನು ಕೊಡಬಲ್ಲದು.


ನಮ್ಮ ಮಾತು ಕೃತಿಗಳು ನಮ್ಮ ದೃಷ್ಟಿಯಲ್ಲಿ ಮೃದುವಾಗಿಯೇ ಇರಬಹುದು. ಆದರೆ ಅವೇ ಕೆಲವೊಮ್ಮೆ ಇನ್ನೊಬ್ಬರಿಗೆ ನೋವನ್ನುಂಟುಮಾಡಬಹುದು. ಇಲ್ಲಿ ನಮ್ಮ ಕಟುತ್ವಕ್ಕಿಂತ ಅವರ ಮೃದುತ್ವ ಕಾರಣವಾಗಿರುತ್ತದೆ. ಹಾಗಾಗಿ ಮಾತನಾಡುವಾಗ, ಕೃತಿಯನ್ನು ಎಸಗುವಾಗ ಫಲಾನುಭವಿಗಳನ್ನು ಲಕ್ಷ್ಯದಲ್ಲಿರಿಸಿಕೊಳ್ಳುವುದು ಅತ್ಯವಶ್ಯಕ ಎಂಬುದು ಈ ನ್ಯಾಯದ ತಿರುಳು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...