Tuesday, February 5, 2019

ಅಗತಿಕಗತಿನ್ಯಾಯ:


ದುಃಶಾಸನನು ಸೀರೆಯನ್ನು ಸೆಳೆಯುತ್ತಿರುವಾಗ ದ್ರೌಪದಿ ಮಾನವನ್ನು ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡಿದಳು. ಆದರೂ ಸಾಧ್ಯವಾಗಲಿಲ್ಲ. ಮಾನ ಕಾಪಾಡಬೇಕಾಗಿದ್ದ ಐವರು ಶೂರ ಗಂಡಂದಿರು ಜೂಜಿನಲ್ಲಿ ತಮ್ಮತನವನ್ನೇ ಸೋತು ಅಸಹಾಯಕರಾಗಿ ಕುಳಿತಿದ್ದರು. ತನ್ನೆಲ್ಲ ಪ್ರಯತ್ನವೂ ವಿಫಲವಾದಾಗ, ’ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’ ಎರಡೂ ಕೈಯನ್ನೆತ್ತಿದಳು. ಆಗ ಭಗವಂತ ಧಾವಿಸಿ ಬಂದು ಅಕ್ಷಯಾಂಬರವನ್ನಿತ್ತ.

ನಮಗೆ ಕಷ್ಟ ಬಂದಾಗ ಎಲ್ಲ ರೀತಿಯ ಮಾನವ ಪ್ರಯತ್ನವನ್ನು ಮಾಡಿ ಅಗತಿಕರಾದಾಗ ಭಗವಂತನನ್ನು ನೆನೆಯುತ್ತೇವೆ. ಸತಾಂ ಗತಿಯಾದ ಭಗವಂತ ಅಗತಿಕಗತಿಯಾಗುತ್ತಾನೆ.

ಇನ್ನೊಂದು ಮುಖದಲ್ಲಿಯೂ ಈ ನ್ಯಾಯವನ್ನು ವಿವೇಚಿಸಬಹುದು. ಜೀವನ ಸಹಚರರನ್ನು ಹುಡುಕುವ ಎಷ್ಟೋ ಜನರು ಮೊದಲೆಲ್ಲ ತಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕವರನ್ನು ಹುಡುಕುತ್ತ ಸಿಗದೆ ಇರುವಾಗ ಗತಿಯಿಲ್ಲದೆ ಯಾರನ್ನೋ ಒಬ್ಬರನ್ನು ವರಿಸುತ್ತಾರೆ. ಜಗತ್ತಿನಲ್ಲಿ ಎಷ್ಟೋ ವಸ್ತುಗಳು ಹಾಗೆಯೇ. ನಾವು ಬಯಸುವ ಮಟ್ಟದ್ದು ಸಿಗಲಿಕ್ಕಿಲ್ಲ. ಹುಡುಕಿ ಹುಡುಕಿ ಸಾಕಾಗಿ ಏನೋ ಒಂದು ಸಿಕ್ಕರೆ ಸಾಕು ಎಂದು ಹೊಂದಿಕೊಳ್ಳುತ್ತೇವೆ.

ನೀರಲ್ಲಿ ಮುಳುಗುತ್ತಿರುವವನೊಬ್ಬ ಜೀವ ಉಳಿಸಿಕೊಳ್ಳಲು ಕ್ಷುಲ್ಲಕವಾದ ಹುಲ್ಲು ಕಡ್ಡಿಯನ್ನೂ ಆಶ್ರಯಿಸುತ್ತಾನೆ. ಬೇರೇನೂ ಇಲ್ಲದಿರುವಾಗ ಕ್ಷುಲ್ಲಕವೂ ಮಹತ್ತ್ವವನ್ನು ಪಡೆಯುತ್ತದೆ. ಆಪದ್ಧರ್ಮವೂ ಅದನ್ನೇ ಹೇಳುವುದು. ಬಾಯಾರಿ ಜೀವ ಹೋಗುವ ಹೊತ್ತಿಗೆ ಕಶ್ಮಲವಾದ ನೀರೂ ಗಂಗಾಜಲವೇ ಆದೀತು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...