ಮಳೆಗಾಗಿ
ಕಪ್ಪೆಗಳ ಮದುವೆ ಮಾಡಿದ ವಿಡಿಯೊ ವಾಟ್ಸ್ಯಾಪ್ ನಲ್ಲಿ ಓಡಾಡುತ್ತಿರುವುದನ್ನು ನೋಡಿ ಹದಿನೈದು
ವರ್ಷಗಳ ಹಿಂದೆ ಕಪ್ಪೆಯ ಬಗ್ಗೆ ನಾ ಬರೆದಿದ್ದ ಲೇಖನವೊಂದು ನೆನಪಿಗೆ ಬಂತು. ಈ ಲೇಖನ ’ಕಸ್ತೂರಿ’
ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಋಗ್ವೇದದಲ್ಲೊಂದು
ಕಪ್ಪೆಯ ಸ್ತುತಿ!
ಶ್ರೀ ಮಹಾವಿಷ್ಣುವು ಜಲವಾಸಿಯಾದ ಮೀನಿನ ರೂಪದಲ್ಲಿಯೂ ಉಭಯವಾಸಿಯಾದ
ಕೂರ್ಮದ ರೂಪದಲ್ಲಿಯೂ ಅವತರಿಸಿದ ಕಥೆ ಪುರಾಣದಲ್ಲಿದೆ. ಆದರೆ ವಿಷ್ಣುವಾಗಲೀ ಅನ್ಯ ದೇವತೆಯಾಗಲೀ
ಕಪ್ಪೆಯ ಅವತಾರ ತಾಳಿದ ಉಲ್ಲೇಖ ಎಲ್ಲಿಯೂ ಇಲ್ಲ.
ಆದರೂ ಇದೇನು ಕಪ್ಪೆಯ ಸ್ತುತಿ ಎಂದು ಕೆಲವರಿಗೆ ಆಶ್ಚರ್ಯವಾಗಬಹುದು. ಇದು ಪುರಾಣಗಳಿಗಿಂತ ಹಿಂದಿನ ಮಾತು. ಸಂಸ್ಕೃತದ
ಪ್ರಥಮ ಗ್ರಂಥ ಋಗ್ವೇದದಲ್ಲಿ ಕಪ್ಪೆಯ ಸ್ತುತಿ ಇರುವುದಂತೂ ನಿಜ. ಋಗ್ವೇದದ ಏಳನೆಯ ಮಂಡಲದ ೧೦೩ ನೇ
ಸೂಕ್ತವು ಮಂಡೂಕ ಸೂಕ್ತ ಎಂದೇ ಪ್ರಸಿದ್ಧವಾಗಿದೆ.
ಶ್ರೀ
ಸಾಯಣಾಚಾರ್ಯರು ತಮ್ಮ ಋಗ್ವೇದ ಭಾಷ್ಯದಲ್ಲಿ ಮಂಡೂಕ ಸೂಕ್ತದ ರಚನೆಯ ಉದ್ದೇಶ ಹಿನ್ನಲೆಗಳನ್ನು
ವಿವರಿಸಿದ್ದಾರೆ. ಪ್ರಕೃತಿ ಶಕ್ತಿಗಳ ಆರಾಧನೆಯನ್ನೇ ಉದ್ದೇಶವಾಗಿಟ್ಟುಕೊಂಡು ರಚಿತವಾದ
ಋಗ್ವೇದದಲ್ಲಿ ನಿಸರ್ಗದ ವಿವಿಧ ಮುಖಗಳ ಪ್ರತಿಬಿಂಬವನ್ನು ಕಾಣಬಹುದು. ಮಳೆ ಬೀಳಬೇಕಾದ ಸಮಯದಲ್ಲಿ
ಬೀಳದಿದ್ದರೆ ಪರ್ಜನ್ಯ ಸೂಕ್ತವನ್ನು ಪಠಿಸುವುದು ಪದ್ಧತಿ. ಒಮ್ಮೆ ವಸಿಷ್ಠನೆಂಬ ಋಷಿ ಮಳೆಗಾಗಿ
ಉಚ್ಚಸ್ವರದಿಂದ ಪರ್ಜನ್ಯಸೂಕ್ತವನ್ನು ಪಠಿಸುತ್ತಿರುವಾಗ "ವಟರ್ ವಟರ್ " ಎಂದು ಕೂಗುವ
ಕಪ್ಪೆಗಳು ಅವರೊಂದಿಗೆ ದನಿಗೂಡಿಸಿದವು. ಅದರಿಂದ ವಿಸ್ಮಿತನೂ ಸಂತೋಷ ಚಿತ್ತನೂ ಆದ ಆ ಋಷಿವರ್ಯ ಆ
ಮಂಡೂಕಗಳನ್ನೇ ಸ್ತುತಿಸಲಾರಂಭಿಸಿದ. ವಸಿಷ್ಠ ಋಷಿಗಳಿಂದ ಪ್ರಣೀತವಾದ ಆ ಮಂತ್ರಗುಚ್ಛವೇ
ಮಂಡೂಕಸೂಕ್ತ ಎಂದು ಸಾಯಣರು ತಿಳಿಸಿದ್ದಾರೆ.
ಮಂಡೂಕ
ಸೂಕ್ತವು ಕಾವ್ಯ ಸೌಂದರ್ಯದ ದೃಷ್ಟಿಯಿಂದಲೂ ಲೌಕಿಕ ದೃಷ್ಟಿಕೋನದಿಂದಲೂ ತುಂಬ ಮಹತ್ವಪೂರ್ಣವಾದುದ್ದು.
ನಮ್ಮ ನಿಸರ್ಗದ ಜೊತೆಗೆ ನಮ್ಮ ಪ್ರಾಚೀನ ಋಷಿಮುನಿಗಳು ಹೊಂದಿದ್ದ ತಾದಾತ್ಮ್ಯವನ್ನು ಈ
ಸೂಕ್ತದಲ್ಲಿ ನಾವು ಕಾಣಬಹುದು. ಸೂಕ್ತದ ಮೊದಲ ಮಂತ್ರದಲ್ಲಿ "ವರ್ಷಗಟ್ಟಲೇ ಗುಹೆಯಲ್ಲಿಯೇ
ಕುಳಿತು ತಪವನ್ನಾಚರಿಸುವ ಬ್ರಾಹ್ಮಣರಂತೆ ಭುವಿಯಡಿಯಲ್ಲಿ ಅಡಗಿರುವ ಕಪ್ಪೆಗಳು ಪರ್ಜನ್ಯನ ತುಷ್ಟಿಗಾಗಿ
ಸ್ತೋತ್ರವನ್ನು ಪಠಿಸಲಾರಂಭಿಸಿದವು" ಎಂಬ
ಸುಂದರ ಉಪಮೆಯನ್ನು ನೋಡಬಹುದು.
ಸಂವತ್ಸರಂ ಶಯಾನಾ
ಬ್ರಾಹ್ಮಣಾ ವ್ರತಚಾರಿಣಃ |
ವಾಚಂ ಪರ್ಜನ್ಯಜಿನ್ವಿತಾಂ
ಪ್ರ ಮಂಡೂಕಾ ಅವಾದಿಷುಃ ||
ಬೇಸಿಗೆಯ ಬೇಗೆಯನ್ನು ತಡೆಯಲಾರದೇ ಭೂಮಿಯಲ್ಲಿ ಬಿಲ ತೋಡಿ ವಾಸಿಸುವ
ಕಪ್ಪೆಗಳ ಜೀವನ ಚಕ್ರದ ವಿಷಯದಲ್ಲಿ ಋಷಿಗಳಿಗಿದ್ದ ಸೂಕ್ಷ್ಮದೃಷ್ಟಿ ಇಲ್ಲಿ ವ್ಯಕ್ತವಾಗಿದೆ.
ಮುಂದೆ ಒಂದು ಮಂತ್ರದಲ್ಲಿ ಕಪ್ಪೆಗಳ ಚರ್ಮ ಉಗ್ರವಾದ ಬಿಸಿಲಿನಿಂದ ಗಡುಸಾಗಿದೆ ಎಂದು
ವರ್ಣಿಸಲಾಗಿದೆ. ಉರಿ ಬೇಸಿಗೆಯಲ್ಲಿಯೂ ಕಪ್ಪೆಯ ದೇಹ ತಂಪಾಗಿಯೇ ಇರುತ್ತದೆ. ಕಪ್ಪೆಯನ್ನು
ಮುಟ್ಟಿದರೆ ಶೀತಲ ಸ್ಪರ್ಶದ ಅನುಭವವಾಗುತ್ತದೆ. ಇಲ್ಲಿ ಋಷಿವರನು ಈ ವರ್ಣನೆಯ ಮೂಲಕ ಬಿಸಿಲಿನ
ಉಗ್ರತೆಯನ್ನು ಸೂಚಿಸಿದ್ದಾನೆ. ಮಳೆಹನಿಗಳನ್ನು ಕಂಡಾಕ್ಷಣ ಚಾತಕಪಕ್ಷಿಯನ್ನು ಬಿಟ್ಟರೆ ಅತ್ಯಂತ
ಸಂತಸಪಡುವ ಪ್ರಾಣಿ ಕಪ್ಪೆಯೇ ಇರಬೇಕು. ಮಳೆ ಬಿದ್ದಾಕ್ಷಣ ಕಪ್ಪೆಗಳು ಸಂತಸದಿಂದ ನಲಿದಾಡುತ್ತ
ಒಬ್ಬರಿಗೊಬ್ಬರು ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತವ ಎಂದು ಇಲ್ಲಿ
ವರ್ಣಿಸಲಾಗಿದೆ.
ಅನ್ಯೋ ಅನ್ಯಮನುಗೃಭ್ಣಾ ತ್ಯೇನೋರ್
ಅಪಾಂ ಪ್ರಸರ್ಗೇ
ಯದಮಂದಿಷಾತಾಮ್||
ವರ್ಷಾಕಾಲ ಆರಂಭವಾದಾಗ
ಯಾವೊಂದು ಕಪ್ಪೆಯೂ ಅಡಗಿಕೊಂಡಿರುವುದಿಲ್ಲ. ಯಜ್ಞ ವೇದಿಕೆಯ ಮುಂದೆ ಕುಳಿತ ಅಧ್ವರ್ಯುವು, ಸೋಮರಸವನ್ನು ಹಿಂಡುವ ಬ್ರಾಹ್ಮಣರೂ ಉಚ್ಚಸ್ವರದಲ್ಲಿ ಮಂತ್ರ ಘೋಷ
ಮಾಡುವಂತೆ ಇವು ಕೂಡ ಧ್ವನಿಯೆತ್ತರಿಸಿ ಕೂಗುತ್ತವೆ.
ನೈಸರ್ಗಿಕ
ಸಮತೋಲನ ಕಾಪಾಡುವಲ್ಲಿ ಕಪ್ಪೆಗಳ ಪಾತ್ರ ಮಹತ್ವದ್ದು. ಆಹಾರ ಸರಪಣಿಯಲ್ಲಿ ಕಪ್ಪೆ ಒಂದು ಅವಿಭಾಜ್ಯ
ಅಂಗ. ಪ್ರಕೃತಿಯಲ್ಲಿ ಮಾನವನಿಗೂ ಬೆಳೆಗಳಿಗೂ ಹಾನಿಯುಂಟುಮಾಡುವ ಕ್ರಿಮಿಕೀಟಗಳನ್ನು ತಿಂದು ಅವುಗಳ
ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಹಾಗೂ ಸ್ವಯಂ ಹಾವು ಮುಂತಾದ ಸರೀಸೃಪಗಳಿಗೆ ಆಹಾರವಾಗುತ್ತದೆ.
ಒಟ್ಟಿನಲ್ಲಿ ಕಪ್ಪೆಗಳು ನಿಸರ್ಗದ ಮಿತ್ರರೆನ್ನಬಹುದು. ದೇವನಿರ್ಮಿತ ಋತುನಿಯಮಗಳನ್ನು ಇವು
ನಿಷ್ಠೆಯಿಂದ ಪಾಲಿಸುತ್ತವೆ. ವಸಿಷ್ಠರು ಅದನ್ನು ಒಂದು ಮಂತ್ರದಲ್ಲಿ ಸುಂದರವಾಗಿ
ವರ್ಣಿಸಿದ್ದಾರೆ.
ದೇವಹಹಿತಂ
ಜುಗುಪುರ್ದ್ವಾದಶಸ್ಯ
ಋತುಂ ನರೋ ನ
ಪ್ರಮಿನಂತ್ಯೇತೇ|
ಸಂವತ್ಸರೇ ಪ್ರಾವೃಷ್ಯಾಗ
ತಾಯಾಂ
ತಪ್ತಾ ಫರ್ಮಾ ಅಶ್ನುವತೇ
ವಿಸರ್ಗಮ್||
"ದೇವರಿಂದ ಮಾಡಲ್ಪಟ್ಟ ಹನ್ನೆರಡು ಮಾಸಗಳ
ಋತುನಿಯಮವನ್ನು ಇವು ಉಲ್ಲಂಘಿಸುವುದಿಲ್ಲ. ವರ್ಷವಿಡೀ ಅಡಗಿಕೊಂಡಿರುವ ಬಿಸಿಲಿನಿಂದ ಸಂತಪ್ತವಾದ
ಅವು ಮಳೆ ಬಂದಾಕ್ಷಣ ಬಂಧನದಿಂದ ಬಿಡುಗಡೆ ಹೊಂದುತ್ತವೆ."
ನಮ್ಮ
ಪರಿಸರದಲ್ಲಿ ನಾವು ವಿವಿಧ ವರ್ಣಗಳ ವಿವಿಧ ಪ್ರಕಾರಗಳ ಕಪ್ಪೆಗಳನ್ನು ಕಾಣಬಹುದು. ಋಷಿಗಳು ಅದನ್ನೂ
ಸೂಕ್ಷ್ಮವಾಗಿ ಅವಲೋಕಿಸಿದ್ದರು. ಅನೇಕ ರೀತಿಯ ಕಪ್ಪೆಗಳ ಉಲ್ಲೇಖ ಈ ಸೂಕ್ತದಲ್ಲಿದೆ. ಆಕಳ
ಬಣ್ಣದವು (ಅಂದರೆ ಸಾಮಾನ್ಯವಾಗಿ ಕಂಡುಬರುವ ಕಂದುಬಣ್ಣದವಿರಬೇಕು.) ಆಡಿನ ಬಣ್ಣದವು, ಹಳದಿ ಬಣ್ಣದವು,
ಹಸಿರು ಬಣ್ಣದವು ಹೀಗೆ
ಅನೇಕ ರೀತಿಯ ಕಪ್ಪೆಗಳ ಉಲ್ಲೇಖವನ್ನು ವಸಿಷ್ಠರು ಮಾಡಿದ್ದಾರೆ. ನಮ್ಮ ಚಿಕ್ಕಂದಿನಲ್ಲಿ ಹಸಿರು
ಬಣ್ಣದ ಕಪ್ಪೆಗಳನ್ನೂ, ಬೆನ್ನಮೇಲೆ ಕೆಂಪು
ಪಟ್ಟಿಯಿರುವ ಕಪ್ಪೆಗಳನ್ನೂ ನೋಡಿದ ನೆನಪಿದೆ. ಕೆಂಪು ಬೆನ್ನಿನ ಕಪ್ಪೆಯು
"ರಾಮಕಪ್ಪೆ" ಎಂದೂ ಅದು ರಾಮಾಂಶ ಯುಕ್ತವೆಂದೂ ಹಿರಿಯರು ನಮಗೆ ಬೋಧಿಸುತ್ತಿದ್ದರು.
ಅನೇಕ ಪ್ರದೇಶಗಳಲ್ಲಿ ಕಪ್ಪೆಗಳಲ್ಲಿ ಲಕ್ಷ್ಮಿಯ ಅಂಶವಿದೆ ಎಂಬ ನಂಬಿಕೆಯಿಂದ ಅವು ಮನೆಯೊಳಗೆ
ಪ್ರವೇಶಿಸಿದರೆ ಅರಿಶಿನ ಕುಂಕುಮ ಅರ್ಪಿಸುವ ಸಂಪ್ರದಾಯವಿದೆ. ವಸಿಷ್ಠ ಋಷಿಗಳೂ ಕಪ್ಪೆಗಳು
ಸಂಪತ್ತನ್ನು ಅನುಗ್ರಹಿಸುತ್ತವೆ ಎಂದು ಸೂಕ್ತದ ಕೊನೆಯ ಮಂತ್ರದಲ್ಲಿ ವರ್ಣಿಸಿದ್ದಾರೆ.
ಗೋಮಾಯುರದಾದಜಮಾಯುರದಾತ್
ಪ್ರಶ್ನಿರದಾದ್ಧರಿತೋ ನೋ
ವಸೂನಿ|
ಗದಾಂ ಮಂಡೂಕಾ ದದತಃ
ಶತಾನಿ
ಸಹಸ್ರಪಾವೇ ಪ್ರತಿರಂತ
ಆಯುಃ||
ಸದಾ ಆಧ್ಯಾತ್ಮ
ಸರೋವರದಲ್ಲೇ ವಿಹರಿಸುತ್ತಿದ್ದ ಪ್ರಾಚೀನ ಋಷಿಗಳು ಲೌಕಿಕತೆಯಿಂದ ವಿಮುಕ್ತರಾಗಿರಲಿಲ್ಲವೆಂಬುದಕ್ಕೆ
ಮಂಡೂಕ ಸೂಕ್ತವೊಂದು ಸಾಕ್ಷಿ. ಪ್ರಕೃತಿಯ ಪ್ರತಿಯೊಂದು ಅಂಶವನ್ನೂ ದೈವತ್ವದ ನೆಲೆಯಲ್ಲಿ
ಕಾಣುವುದು ನಮ್ಮ ಸನಾತನ ಸಂಪ್ರದಾಯ. ಮಳೆಗಾಗಿ ಪರ್ಜನ್ಯ ದೇವತೆಯನ್ನು ಸ್ತುತಿಸುವಾಗ
ದನಿಗೂಡಿಸಿದವೆಂಬ ಒಂದೇ ಕಾರಣಕ್ಕಾಗಿ ಕಪ್ಪೆಗಳನ್ನು ದೇವರೆಂದು ಭಾವಿಸಿ ಸ್ತುತಿಸಿದ ವಸಿಷ್ಠ ಋಷಿಯ
ಕಾರ್ಯ ಪ್ರಾಚೀನ ಋಷಿಗಳ ಹೃದಯ ವೈಶಾಲ್ಯಕ್ಕೆ ಹಿಡಿದ ಕೈಗನ್ನಡಿ. ಋಷಿಗಳ ಜೀವನವು ಪರಿಸರದೊಂದಿಗೆ
ಹೆಣೆದುಕೊಂಡಿದ್ದ ಅವಿನಾಭಾವ ಸಂಬಂಧಕ್ಕೆ ಇದೊಂದು ದೃಷ್ಟಾಂತ. ಅನೇಕ ವಿಧದಲ್ಲಿ ಮಾನವನಿಗೆ
ಉಪಕಾರಿಗಳಾಗಿರುವ ಕಪ್ಪೆಗಳನ್ನು ಸ್ತುತಿಸಿದ್ದು ನಿಜಕ್ಕೂ ಔಚಿತ್ಯಪೂರ್ಣ.
ಇಂತಹ ಮಂಡೂಕ ದೇವತೆಗಳ
ಸಂತತಿ ನಶಿಸುತ್ತಿರುವುದು ದುರಂತದ ಸಂಗತಿ. ಹಿಂದೆಲ್ಲ ಮಳೆಗಾಲ ಆರಂಭವಾಯಿತೆಂದರೆ ಕಪ್ಪೆಗಳ ಕೂಗು
ಕಿವಿ ಕಿವುಡಾಗುವಷ್ಟು ಕೇಳಿ ಬರುತ್ತಿತ್ತು.
ಆದರೆ ಈಗ ಆ ಕೂಗು ಕ್ಷೀಣಿಸಿದೆ. ನಗರ ಪ್ರದೇಶಗಳಲ್ಲಂತೂ ಕಪ್ಪೆಗಳ ಕೂಗು ಕೇಳಿಬರುವುದೇ
ಅಪರೂಪ. ವಿವಿಧ ನೈಸರ್ಗಿಕ ವಿಕೋಪಗಳಿಂದಾಗಿ ಅವು ಸಾಯುತ್ತಿರುವುದು ಒಂದು ಕಡೆಯಾದರೆ, ಸ್ವಾರ್ಥಿ ಮಾನವನ ಆಹಾರಕ್ಕಾಗಿಯೂ ಬಲಿಯಾಗುತ್ತಿರುವುದು ವಿಷಾದದ
ಸಂಗತಿ. ಮುಖ್ಯವಾಗಿ ಗೋವಾ ರಾಜ್ಯದ ಹಾಗೂ ಕರ್ನಾಟಕದ ಕರಾವಳೀ ತಾಲೂಕುಗಳಲ್ಲಿ ಜೂನ್ ಜುಲೈ
ಮಾಸದಲ್ಲಿ ಮೀನುಗಾರಿಕೆಯ ಬದಲಾಗಿ ಕಪ್ಪೆಗಾರಿಕೆ ನಡೆಯುತ್ತಿದೆ. ಇಲ್ಲಿನ ಪ್ರತಿಷ್ಟಿತ ಹೊಟೇಲ್‌ಗಳಲ್ಲಿ
"ಫ್ಲಾಯಿಂಗ್ ಚಿಕನ್" ಅಥವಾ " ಜಂಪಿಂಗ್ ಚಿಕನ್" ಎನ್ನುವ ಹೆಸರಲ್ಲಿ ಕಪ್ಪೆಗಳ
ವಿವಿಧ ಭಕ್ಷ್ಯ ಗಳು ತಯಾರಾಗುತ್ತವೆ. ಚೀನಾ,
ಥೈಲ್ಯಾಂಡ್ ಮೊದಲಾದ
ದೇಶಗಳು ಕಪ್ಪೆ ಆಹಾರ ರಪ್ತಿನಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಕಪ್ಪೆ ಹಿಡಿಯುವುದನ್ನು
ನಿಷೇಧಿಸಲಾಗಿದ್ದರೂ ರಾಜಾ ರೋಷವಾಗಿ ಆ ಕಾರ್ಯ ನಡೆಯುತ್ತಿದೆ.
ವ್ಯವಸಾಯ ಕ್ಷೇತ್ರ ಕಪ್ಪೆಗಳ ವಾಸಭೂಮಿ. ಕೃಷಿಗೆ ಬಾಧೆ
ಯನ್ನುಂಟುಮಾಡುವ ಕೀಟಗಳ ಭಕ್ಷಣೆ ಯಲ್ಲಿ ಕಪ್ಪೆಗಳ ಪಾತ್ರ ಮಹತ್ವದ್ದು. ಆದರೆ ಕೃಷಿ
ಕ್ಷೇತ್ರದಲ್ಲಿ ಉಪಯೋಗಿಸುತ್ತಿರುವ ವಿವಿಧ ರಾಸಾಯನಿಕಗಳು ಕಪ್ಪೆಗಳ ಸಂತತಿಗೆ ಮುಳುವಾಗಿವೆ. ಇಂದು
ಅನೇಕ ರೀತಿಯ ಕಪ್ಪೆತಳಿಗಳು ಕಾಣಸಿಗುವುದೇ ಇಲ್ಲ. ಇದರಿಂದ ಬೆಳೆಗಳಿಗೆ ಕೀಟಗಳ ಬಾಧೆ ಹೆಚ್ಚಿದೆ.
ಮನೆಗಳಲ್ಲಿ ನೊಣ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ. ಆಹಾರಕ್ಕಾಗಿ ಕಪ್ಪೆಗಳನ್ನೇ ಅವಲಂಬಿಸಿರುವ
ಹಾವುಗಳಲ್ಲಿ ಅನೇಕ ಪೌಷ್ಠಿಕಾಂಶಗಳ ಕೊರತೆ ಕಾಣಿಸುತ್ತಿದ್ದು ಆಹಾರ ಸರಪಣಿ ಶಿಥಿಲವಾಗುವ ಸೂಚನೆ
ಕಾಣಿಸುತ್ತಿದೆ. ಎಂದು ಅನೇಕ ಪ್ರಾಣಿಶಾಸ್ತೃಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಕಪ್ಪೆಗಳ
ದೈವತ್ವವನ್ನು ಒಪ್ಪಲಿ ಬಿಡಲಿ, ನಿಸರ್ಗದಲ್ಲಿ
ಅವುಗಳಿಗಿರುವ ಮಹತ್ವವನ್ನು ಅರಿತುಕೊಳ್ಳದಿದ್ದರೆ ಅಪಾಯ ಬಲುದೂರವಿರಲಾರದು.
-
ಮಹಾಬಲ ಭಟ್, ಗೋವಾ
No comments:
Post a Comment