ತರಾಸು ಅವರ ಅಮರ ಕೃತಿ ’ದುರ್ಗಾಸ್ತಮಾನ’
ನಾನಿಷ್ಟರವರೆಗೆ ಎಷ್ಟೋ
ಕಾದಂಬರಿಗಳನ್ನು ಓದಿದ್ದರೂ ತರಾಸು ಅವರ ಒಂದೂ ಪುಸ್ತಕವನ್ನು ಮುಟ್ಟಿರಲಿಲ್ಲ. ಅವರ
ದುರ್ಗಾಸ್ತಮಾನ ಕಾದಂಬರಿಯ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದೆ. ಓದುವ ತುಡಿತ ಹೆಚ್ಚಾದಾಗ
ಮೈಸೂರಿನ ಮಿತ್ರ ಸಂಸ್ಕೃತಿ ಸುಬ್ರಹ್ಮಣ್ಯರಿಗೆ ಫೋನಾಯಿಸಿ ಪುಸ್ತಕವನ್ನು ತರಿಸಿಕೊಂಡೆ.
ಪುಸ್ತಕವನ್ನು ಕೈಯಲ್ಲಿ
ಹಿಡಿದಾಗಲೇ ಮೈಯಲ್ಲಿ ಪುಳಕವಾಗಿತ್ತು. ಆರು ನೂರಾ ಆರವತ್ತುಮೂರು ಪುಟಗಳ ದಪ್ಪ ಪುಸ್ತಕ. ನನಗೆ
ದಪ್ಪ ಪುಸ್ತಕಗಳು ಎಂದರೆ ಸ್ವಲ್ಪ ಅಲರ್ಜಿ. ಬೇಗ ಓದಿ ಮುಗಿಯುವಂತಹ ಪುಸ್ತಕವಾಗಬೇಕು. ಆರಂಭದ
ಉತ್ಸಾಹ ಇಳಿಯುವುದರೊಳಗೆ ಪುಸ್ತಕವನ್ನು ಓದಿ ಮುಗಿಸಬೇಕು. ಆದರೂ ದುರ್ಗಾಸ್ತಮಾನದ ಕೀರ್ತಿ
ಧೈರ್ಯವನ್ನು ನೀಡಿತು.
ಓದುತ್ತ ಹೋದಂತೆ ಮಾಧುರ್ಯ,
ಓಜಸ್, ಪ್ರಸಾದ ಗಳೆಂಬ ಗುಣತ್ರಯಗಳು ಸಂದರ್ಭೋಚಿತವಾಗಿ ಬಳಕೆಯಾದುದು ಅನುಭವಕ್ಕೆ ಬರುತ್ತಾ
ಹೋಯಿತು. ಇಂತಹ ಕಾದಂಬರಿಯನ್ನು ಓದುವುದೂ ಮಹಾಕಾವ್ಯವೊಂದನ್ನು ಓದುವುದೂ ಒಂದೇ ಅನುಭವ ಅನಿಸಿತು. ಸಣ್ಣ
ಸಣ್ಣ ವಾಕ್ಯಗಳ ಮೂಲಕ ಚಿತ್ರದುರ್ಗದ ಆ ಚಿತ್ರಣವನ್ನು ಕಟ್ಟಿಕೊಡುತ್ತಿರುವಾಗ ಜುಳು ಜುಳು ಹರಿಯುವ
ನದಿಯಂತೆ ತೋರುವ ಬರವಣಿಗೆ ಹೈದರಾಲಿಯ ಕ್ರೌರ್ಯವನ್ನೂ ರಣರಂಗದಲ್ಲಿ ನಾಯಕನ ಶೌರ್ಯವನ್ನೂ ವರ್ಣಿಸುವ
ಸಂದರ್ಭದಲ್ಲಿ ಧುಮ್ಮಿಕ್ಕುವ ಜಲಪಾತದಂತೆ ಭೋರ್ಗರೆಯುತ್ತಿದೆಯೋ ಎಂಬಂತೆ ಭಾಸವಾಗುತ್ತದೆ.
ಕಾದಂಬರಿಯ ’ಅಂಗೀ’ (ಪ್ರಧಾನ)
ರಸ ವೀರ. ಚಿತ್ರದುರ್ಗದ ವೀರರ ಅದರಲ್ಲೂ ವೀರ ಮದಕರಿ ನಾಯಕನ ಶೌರ್ಯವನ್ನು ವರ್ಣಿಸುವಾಗ
ಧಾರಾಪ್ರವಾಹವಾಗಿ ಹರಿಯುವ ವೀರರಸ ನನ್ನನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿತ್ತು. ನಾಯಕನ
ಅಂತಃಪುರದ ಶೃಂಗಾರ, ಸಣ್ಣ ತಪ್ಪಿಗೂ ತನ್ನವರನ್ನು ಶಿಕ್ಷಿಸುವ ಹೈದರಾಲಿಯ ರೌದ್ರ, ಯುದ್ಧಾನಂತರದ
ರಣಾಂಗಣದ ಬೀಭತ್ಸ, ವ್ಯೂಹ ರಚನೆಯ ಅದ್ಭುತ, ಪಟ್ಟದ ರಾಣಿಯರ ಕಣ್ಗಳಲ್ಲಿ ಆಗಾಗ ಇಣುಕುವ ಕರುಣ,
ಯುದ್ಧರಾತ್ರಿಗಳ ವರ್ಣನೆಯಲ್ಲಿ ಸೂಸುವ ಭಯಾನಕ ರಸಗಳು ಸಶಕ್ತ ಅಂಗಗಳಾಗಿ ಪ್ರಧಾನರಸದ ಪೋಷಕಗಳಾಗಿ ಕಥಾಹಂದರವನ್ನು
ಗಟ್ಟಿಗೊಳಿಸಿವೆ.
ಸನ್ನಿವೇಶಗಳನ್ನು ಕಣ್ಣಿಗೆ
ಕಟ್ಟುವಂತೆ ವರ್ಣಿಸುವಲ್ಲಿ ತರಾಸು ಎತ್ತಿದ ಕೈ. ಅದು ಕರುಣರಸದ ಸನ್ನಿವೇಶವೇ ಆಗಲಿ, ವೀರರಸದ್ದೇ
ಆಗಲಿ, ಓದುಗರು ತಮ್ಮನ್ನು ಮರೆಯುವಂತೆ ಮಾಡುವಲ್ಲಿ ವರ್ಣನೆಗಳು ಯಶಸ್ವಿಯಾಗುತ್ತವೆ. ಹೈದಾರಾಲಿಯ
ವ್ಯೂಹ ರಚನೆ, ಅದಕ್ಕೆ ತಕ್ಕಂತಹ ನಾಯಕರ ಪ್ರತಿವ್ಯೂಹ, ಇಬ್ಬರ ನಡುವೆಯೂ ನಡೆಯುವ ರಾಜಕೀಯ ಚದುರಂಗದಾಟ
ಇವುಗಳನ್ನೆಲ್ಲ ಓದುತ್ತಿರುವಾಗ ತರಾಸು ಅವರ ಸರ್ಜನಶಕ್ತಿ, ಪಾಳೆಯಗಾರರ ಇತಿಹಾಸದ ಬಗೆಗೆ
ಅವರಿಗಿದ್ದ ಅಪಾರ ಜ್ಞಾನ, ರಾಜತಂತ್ರದ ಸೂಕ್ಷ್ಮಗ್ರಹಿಕೆಗಳು ಅನುಭವಕ್ಕೆ ಬರುತ್ತವೆ.
ಇನ್ನೊಂದು ಗಮನಿಸಬೇಕಾದ ಅಂಶ
ಲೇಖಕರು ಬಳಸಿದ ಭಾಷೆ. ಆಧುನಿಕ ಕನ್ನಡಿಗರಿಗೆ ಗೊತ್ತೇ ಇಲ್ಲ ಎನ್ನುವಂತಹ ಆ ಕಾಲಕ್ಕೆ ತಕ್ಕಂತಹ ಚಿತ್ರದುರ್ಗದ
ಆಸುಪಾಸಿನ ಪಾಳೆಯಗಾರರ ಅಚ್ಚಕನ್ನಡದ ಶಬ್ದಗಳು, ಹೈದರಾಲಿಯ ವರ್ಣನೆಯಲ್ಲಿ ಬಳಕೆಯಾದ
ಉರ್ದುಮಿಶ್ರಿತ ಭಾಷೆ ಯಾವುದೇ ಅಡೆತಡೆಯಿಲ್ಲದೆ ಪ್ರವಾಹರೂಪವಾಗಿ ಹರಿದಿವೆ. ಅವುಗಳನ್ನು
ಅರಗಿಸಿಕೊಂಡು ಹೋಗುವುದೇ ಒಂದು ವಿಶಿಷ್ಟ ಅನುಭವವನ್ನು ನೀಡುತ್ತವೆ.
ದುಃಖಾಂತ್ಯದ ಈ ಕಾದಂಬರಿಯನ್ನು
ಓದಿ ಮುಗಿಸುವಾಗ ’ಅಯ್ಯೋ! ಮದಕರಿ ನಾಯಕ ಸತ್ತೇ ಹೋದನಲ್ಲ, ದುರ್ಗ ಹೈದರಾಲಿಯ ವಶವಾಯಿತಲ್ಲ’ ಎಂಬ
ನಿರಾಶಾಭಾವ ಮೂಡಿದರೂ ಅದ್ಭುತಗ್ರಂಥವನ್ನು ಓದಿದ ತೃಪ್ತಿಯಿಂದ ಮುಖವು ಪ್ರಸನ್ನಮುದ್ರೆಯನ್ನು
ಪಡೆಯುತ್ತದೆ.
ಗಟ್ಟಿ ಹೊದಿಕೆಯ ಮೇಲೆ ಮೂಡಿದ
ಸುಂದರ ವರ್ಣಚಿತ್ರ, ತಪ್ಪಿಲ್ಲದ ಮುದ್ರಣ, ತಿರುವುವಾಗ ಕೈಗೆ ಸ್ಪರ್ಶಸುಖ ನೀಡುವ ನವಿರಾದ ಕಾಗದ
ಇವು ಓದಿನ ಖುಷಿಯನ್ನು ಹೆಚ್ಚಿಸುತ್ತವೆ.
ಇದು ಜೀವನದಲ್ಲಿ ಓದಲೇಬೇಕಾದ ಒಂದು
ಉದ್ಗ್ರಂಥ. ಇದಕ್ಕೆ ಕೇಂದ್ರ ಸಾಹಿತ್ಯ
ಅಕಾಡೆಮಿಯ ಪುರಸ್ಕಾರ ಸಂದಿದ್ದು ಪುರಸ್ಕಾರದ ಮೌಲ್ಯವನ್ನು ಹೆಚ್ಚಿಸಿದೆ. ಪುಸ್ತಕದ ಪ್ರಕಾಶಕರು ಹೇಮಂತ ಸಾಹಿತ್ಯ ಬೆಂಗಳೂರು.
ಪ್ರತಿಗಳು ಬೇಕಾದಲ್ಲಿ ಶ್ರೀನಿಧಿ ಸುಬ್ರಹ್ಮಣ್ಯ ಅವರನ್ನು ೯೮೮೬೧೭೫೦೧೦ ದೂರವಾಣಿಯ ಮೂಲಕ ಸಂಪರ್ಕಿಸಬಹುದು.
ಪುಸ್ತಕಾವಲೋಕನ: ಮಹಾಬಲ ಭಟ್, ಗೋವಾ
No comments:
Post a Comment