ಆಯುರ್ವೇದ ನಮ್ಮ ದೇಶದ
ಪ್ರಾಚೀನ ವೈದ್ಯಪದ್ಧತಿಗಳಲ್ಲಿ ಒಂದು. ಈಗಲೂ ಕೆಲವೊಂದು ರೋಗಗಳ ನಿವಾರಣೆಯಲ್ಲಿ ಈ ಪದ್ಧತಿ
ಏಕಸ್ವಾಮ್ಯವನ್ನು ಹೊಂದಿದೆ ಎನ್ನಬಹುದು. ಈ ವೈದ್ಯಪದ್ಧತಿಯನ್ನು ಅಧ್ಯಯನ ಮಾಡಬಯಸುವವರಿಗೆ ನಮ್ಮ
ದೇಶದ ಹೆಚ್ಚಿನ ವಿಶ್ವವಿದ್ಯಾಲಯಗಳು ಬಿ.ಎ.ಎಂ.ಎಸ್. ಎಂಬ ಪದವಿ ಶಿಕ್ಷಣವನ್ನು ಮತ್ತು
ಆಲೋಪಥಿಯಂತೆ ಸ್ನಾತಕೋತ್ತರ ಅಧ್ಯಯನದ ಅವಕಾಶವನ್ನೂ ಒದಗಿಸುತ್ತಿವೆ.
ಆಯುರ್ವೇದ ವೈದ್ಯಪದ್ಧತಿ
ಕೇವಲ ರೋಗನಿದಾನ ಹಾಗೂ ನಿವಾರಣೆಗೆ ಸಂಬಂಧಪಟ್ಟಿದ್ದಲ್ಲ. ಮಾನವನ ಸಂಪೂರ್ಣ ಸ್ವಾಸ್ಥ್ಯವನ್ನು
ಲಕ್ಷದಲ್ಲಿರಿಸಿಕೊಂಡಿರುವ ಈ ಪದ್ಧತಿ ಭಾರತೀಯ ದರ್ಶನಗಳ ತಳಹದಿಯ ಮೇಲೆ ನಿಂತಿದೆ.
ಸತ್ಯಾನ್ವೇಷಣೆಯ ಸಂದರ್ಭದಲ್ಲಿ ಮಾನವಕುಲಕ್ಕೆ ದೊರಕಿದ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ,
ಮೀಮಾಂಸೆ, ವೇದಾಂತ ಎಂಬ ಆಸ್ತಿಕ ದರ್ಶನಗಳ ಹಾಗೂ ಚಾರ್ವಾಕ, ಬೌದ್ಧ, ಜೈನ ಮುಂತಾದ ನಾಸ್ತಿಕ
ದರ್ಶನಗಳ ಹದವಾದ ಪಾಕವನ್ನು ಆಯುರ್ವೇದದಲ್ಲಿ ನಾವು ಕಾಣಬಹುದು. ಹಾಗಾಗಿ ಈ ಎಲ್ಲ ದರ್ಶನಗಳ
ಜ್ಞಾನವಿಲ್ಲದೆ ಆಯುರ್ವೇದದ ಅಧ್ಯಯನ ಪರಿಪೂರ್ಣವಾಗದು. ಆಯುರ್ವೇದ ಪದಾರ್ಥ ವಿಜ್ಞಾನ ಎಂಬ ವಿಷಯ
ಆಯುರ್ವೇದ ವಿದ್ಯಾರ್ಥಿಗಳಿಗೆ ಇವುಗಳ ಸ್ಥೂಲಪರಿಚಯಕ್ಕೆ ಅವಕಾಶ ಮಾಡಿಕೊಡುತ್ತದೆ.
ಇಂದು ಆಯುರ್ವೇದದ
ತರಗತಿಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿಯೇ ಅಧ್ಯಯನ ನಡೆದರೂ ಆಯುರ್ವೇದದ ಮೂಲ ಗ್ರಂಥಗಳಿರುವುದು
ಸಂಸ್ಕೃತದಲ್ಲಿ ಅನ್ನುವುದನ್ನು ಮರೆಯುವಂತಿಲ್ಲ. ಸಂಸ್ಕೃತದಿಂದ ಇತರ ಭಾಷೆಗಳಿಗೆ ಗ್ರಂಥಗಳನ್ನು
ಅನುವಾದಿಸುವಾಗ ಸಂಸ್ಕೃತದ ಸರಿಯಾದ ಜ್ಞಾನವಿಲ್ಲದಿದ್ದರೆ ಪ್ರಮಾದವಾಗುವ ಸಂಭವವಿರುತ್ತದೆ.
ಆಯುರ್ವೇದದ
ಪದಾರ್ಥವಿಜ್ಞಾನವನ್ನು ತಮ್ಮ ತಾಯ್ನುಡಿಯಲ್ಲಿಯೇ ಓದಿ ಅರ್ಥೈಸಿಕೊಳ್ಳಬೇಕೆಂಬ ಕನ್ನಡಮೂಲದ
ವಿದ್ಯಾರ್ಥಿಗಳ ಹಾಗೂ ಇತರ ಜಿಜ್ಞಾಸುಗಳ ಅನುಕೂಲಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ
ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಚಂದ್ರಮೌಳಿ ನಾಯ್ಕರ ಅವರು ’ಆಯುರ್ವೇದೀಯ ಪದಾರ್ಥವಿಜ್ಞಾನ’
ಎಂಬ ಕನ್ನಡ ಪುಸ್ತಕವನ್ನು ರಚಿಸಿದ್ದಾರೆ. ಇಪ್ಪತ್ತೈದು ಅಧ್ಯಾಯಗಳಲ್ಲಿ ಅತ್ಯಂತ ಸರಳ ಭಾಷೆಯಲ್ಲಿ
ವಿವಿಧ ದರ್ಶನಗಳ ಹಿನ್ನೆಲೆಯಲ್ಲಿ ಆಯುರ್ವೇದದ ಪದಾರ್ಥ ವಿಜ್ಞಾನವನ್ನು ವಿವೇಚಿಸಿದ್ದಾರೆ.
ಗ್ರಂಥದ ಆರಂಭದಲ್ಲಿ
ಆಯುರ್ವೇದದ ಸ್ಥೂಲ ಪರಿಚಯವಿದೆ. ಆಯುರ್ವೇದದಲ್ಲಿ ಇತರ ದರ್ಶನಗಳ ಉಪಯುಕ್ತತೆಯನ್ನು ಮುಂದಿನ
ಅಧ್ಯಾಯದಲ್ಲಿ ವಿಶದೀಕರಿಸಿದ್ದಾರೆ. ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ, ಅಭಾವ
ಎಂಬ ಸಪ್ತಪದಾರ್ಥಗಳ ಹಾಗೂ ಅವುಗಳ ’ಪ್ರಮಾ’ ಅಂದರೆ ಸತ್ಯಜ್ಞಾನ, ಅದಕ್ಕೆ ಬೇಕಾದ ಪ್ರತ್ಯಕ್ಷಾದಿ
ಪ್ರಮಾಣಗಳ ವಿವೇಚನೆಯನ್ನು ಶಾಸ್ತ್ರಗಳ ಬೆಳಕಿನಲ್ಲಿ ಸವಿಸ್ತರವಾಗಿ ಮಾಡಿದ್ದಾರೆ. ಒಟ್ಟಿನಲ್ಲಿ ಈ
ಪುಸ್ತಕ ಆಯುರ್ವೇದ ಅಭ್ಯಾಸಿಗಳಿಗೆ ಹಾಗೂ ಜಿಜ್ಞಾಸುಗಳಿಗೆ ಉತ್ತಮವಾದ ಕೈಪಿಡಿ ಎನ್ನುವುದರಲ್ಲಿ
ಸಂಶಯವಿಲ್ಲ.
ಗಟ್ಟಿ ಹೊದಿಕೆಯ ೪೦೮ ಪುಟಗಳ
ಈ ಹೊತ್ತಿಗೆಯ ಬೆಲೆ ೩೦೦ ರೂಪಾಯಿಗಳು. ಆಸಕ್ತರು ಲೇಖಕರನ್ನು ಚರದೂರವಾಣಿ ಸಂಖ್ಯೆ ೬೩೬೩೦೭೮೦೦೫
ಮೂಲಕ ಸಂಪರ್ಕಿಸಿ ಪ್ರತಿಗಳನ್ನು ತರಿಸಿಕೊಳ್ಳಬಹುದಾಗಿದೆ.
No comments:
Post a Comment