Tuesday, February 5, 2019

ಮಂಡೂಕತೋಲನನ್ಯಾಯ:



ಚಂಚಲತೆಗೆ ಹೆಸರಾದ ಪ್ರಾಣಿ ಕಪ್ಪೆ. ಒಂದೆಡೆ ನಿಲ್ಲುವುದೇ ಕಡಿಮೆ. ಅಪಾಯದ ಸ್ವಲ್ಪ ಸೂಚನೆ ಸಿಕ್ಕರೂ ಹಾರಿಬಿಡುತ್ತದೆ. ಅಂತಹ ಒಂದಿಷ್ಟು ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದರೆ ಹೇಗೆ?

ಒಂದು ಕಪ್ಪೆಯನ್ನು ತೆಗೆದು ತಟ್ಟೆಯಲ್ಲಿಟ್ಟರೆ ಇನ್ನೊಂದು ಹೊರ ಹಾರುತ್ತದೆ. ಅದನ್ನು ಒಳಹಾಕುವಷ್ಟರಲ್ಲಿ ಇನ್ನೆರಡು ಜಿಗಿಯುತ್ತವೆ. ಒಟ್ಟಿನಲ್ಲಿ ಎಲ್ಲ ಕಪ್ಪೆಗಳನ್ನು ಒಮ್ಮೆಲೇ ಪಾತ್ರೆಯಲ್ಲಿಟ್ಟು ತೂಕವನ್ನು ನೋಡುವುದು ಕಷ್ಟಸಾಧ್ಯವೇ.
ಮಕ್ಕಳಲ್ಲಿಯೂ ಅದಮ್ಯ ಉತ್ಸಾಹ ತುಂಬಿಕೊಂಡಿರುವುದರಿಂದ ಒಂದೆಡೆ ಕೂಡಿಸುವುದು ಕಷ್ಟ. ಆಗಲೂ ಈ ನ್ಯಾಯದ ಬಳಕೆಯಾಗುತ್ತದೆ.

ನಮ್ಮ ಮನಸ್ಸೂ ಹಾಗೇ. ಒಂದು ಉತ್ತಮಗುಣವನ್ನು ಅರ್ಜಿಸುವಷ್ಟರಲ್ಲಿ ಇನ್ನೊಂದು ಹೊರಹಾರಿರುತ್ತದೆ. ಎಲ್ಲ ಕಲ್ಯಾಣಗುಣಗಳನ್ನು ಒಮ್ಮೆಲೇ ಕಲೆಹಾಕುವುದು ಸುಲಭದ ಮಾತಲ್ಲ. ಅದೇ ರೀತಿ ದುರ್ಗುಣಗಳೂ ಹೊರ ಹಾಕಿದಷ್ಟೂ ಮತ್ತೆ ಮತ್ತೆ ಬಂದು ಕೂರುತ್ತವೆ.

ಸಂಘಟನೆಯೂ ಹಾಗೆ. ಒಂದಿಬ್ಬರು ಒಳಸೇರಿದರೆ ಇನ್ಯಾರೋ ಹೊರಹೋಗುತ್ತಾರೆ. ವಿವಿಧ ಸ್ವಭಾವದ ಜನರನ್ನೆಲ್ಲ ಒಗ್ಗೂಡಿಸುವುದು ಸುಲಭದ ಮಾತಲ್ಲ. ಕಪ್ಪೆಯನ್ನು ತೂಗುವ ದುರ್ಲಭ ಯೋಜಕನೊಬ್ಬ ಎಲ್ಲ ಸಂಘಟನೆಗಳಿಗೂ ಬೇಕು.

ಈ ನ್ಯಾಯವನ್ನು ಇನ್ನೊಂದು ರೀತಿಯಲ್ಲಿಯೂ ವ್ಯಾಖ್ಯಾನಿಸಬಹುದು. ಕಲಬೆರಕೆ ಮಾಡುವ ವಂಚಕ ವರ್ತಕನೊಬ್ಬ ಒಮ್ಮೆ ಬೆರೆಸಲು ಯಾವ ವಸ್ತುವೂ ಕಾಣದೆ ಕಪ್ಪೆಗಳನ್ನು ಹಾಕಿದನಂತೆ. ಕಪ್ಪೆಗಳು ತಮ್ಮ ಸ್ವಭಾವಕ್ಕನುಗುಣವಾಗಿ ಹೊರ ಹಾರಿ ಆ ವರ್ತಕನ ವಂಚನೆಯನ್ನು ಬಯಲಿಗೆಳದವಂತೆ. ವಂಚನೆ ಎಂದಾದರೂ ಬಯಲಾಗದೆ ಇರದು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...