ಮಹಿಳಾ ದಿನಾಚರಣೆಗೆ ವಿಶಿಷ್ಟ
ಲೇಖನ ಸರಣಿ
ಸನಾತನ ಭಾರತದ
ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ 5
ಘುಷ್ಮಾ
ದೇವಗಿರಿ ಪ್ರಾಂತದಲ್ಲೊಬ್ಬ ಬ್ರಾಹ್ಮಣ. ಸುಧರ್ಮನೆಂದು ಅವನ ಹೆಸರು. ಸುದೇಹಾ ಅವನ
ಧರ್ಮಪತ್ನಿ. ಅನ್ಯೋನ್ಯರಾಗಿದ್ದ ದಂಪತಿಗಳು ಅನೇಕ ವರ್ಷಗಳವರೆಗೂ ಸಂತಾನವಾಗದೆ
ಪರಿತಪಿಸುತ್ತಿದ್ದರು. ಒಂದಿನ ಸುದೇಹಾ ತನ್ನ ತಂಗಿ ಘುಷ್ಮಾಳನ್ನು ಮದುವೆಯಾಗುವಂತೆ
ಒತ್ತಾಯಿಸಿದಳು. ಅವಳ ಒತ್ತಾಯಕ್ಕೆ ಮಣಿದು ಸುಧರ್ಮ ಘುಷ್ಮಾಳನ್ನು ಮದುವೆಯಾದ.
ಘುಷ್ಮಾ ಶಿವನ ಪರಮಭಕ್ತೆಯಾಗಿದ್ದಳು. ದಿನವೂ ಮಣ್ಣಿನ ಶಿವಲಿಂಗವನ್ನು ಮಾಡಿ ಪೂಜಿಸಿ
ಸರೋವರದಲ್ಲಿ ವಿಸರ್ಜಿಸುತ್ತಿದ್ದಳು. ಅಕ್ಕತಂಗಿಯರು ಸವತಿಯರಾಗಲಿಲ್ಲ. ಬಲು ಪ್ರೀತಿಯಿಂದ ಜೀವನ
ಸಾಗಿಸುತ್ತಿದ್ದರು. ಕಾಲಕ್ರಮದಲ್ಲಿ ಘುಷ್ಮಾ ಮಗನೊಬ್ಬನನ್ನು ಹೆತ್ತಳು. ಮಗನ ಆಗಮನಾನಂತರ ಸುದೇಹಳ
ಮನೋಭೂಮಿಕೆಯಲ್ಲಿ ಬದಲಾವಣೆಯಾಯಿತು. ವಂಶೋದ್ಧಾರಕನನ್ನು ಹೆತ್ತ ಘುಷ್ಮಾಳಿಗೆ ಗಂಡನ ಪ್ರೀತಿ
ಹೆಚ್ಚು ಸಿಗುವುದೆಂಬ ಮಾತ್ಸರ್ಯಭಾವ ಬಲಿಯಿತು. ಮಗನಿಗೆ ಮದುವೆಯೂ ಆಯಿತು. ಸೊಸೆ ಬಂದ ಮೇಲಂತೂ
ತನ್ನ ಮಹತ್ತ್ವ ಕಡಿಮೆಯಾಗುವುದೆಂದು ಯೋಚಿಸುತ್ತ ಮಾತ್ಸರ್ಯ ದ್ವೇಷಕ್ಕೆ ತಿರುಗಿತು. ಒಂದಿನ
ಮಲಗಿರುವ ಮಗನನ್ನು ಕೊಂದು ಸರೋವರಕ್ಕೆ ಎಸೆದಳು. ತನ್ನ ಗಂಡನನ್ನು ಎಬ್ಬಿಸಲು ಬಂದ ಅವಳ ಸೊಸೆ
ಹಾಸಿಗೆಯ ಮೇಲೆ ಗಂಡನನ್ನು ಕಾಣದೆ ರಕ್ತಕಲೆಗಳಿರುವುದನ್ನು ನೋಡಿ ಅಳುತ್ತ ಘುಷ್ಮಾಳಿಗೆ
ವಿಷಯವನ್ನು ತಿಳಿಸಿದಳು. ಶಿವಪೂಜೆಯಲ್ಲಿ ನಿರತಳಾಗಿದ್ದ ಅವಳು ವಿಚಲಿತಳಾಗಲಿಲ್ಲ. ಭಕ್ತಿಯಿಂದ
ಪೂಜೆಯನ್ನು ಮುಗಿಸಿ ಲಿಂಗ ವಿಸರ್ಜನೆ ಮಾಡುತ್ತಿರುವಾಗ ಮಗ ಸರೋವರದಿಂದ ಎದ್ದು ಬಂದು
ನಮಸ್ಕರಿಸಿದ. ಮಲತಾಯಿಯ ಮೇಲೆ ಸಿಟ್ಟುಗೊಂಡ ಅವನನ್ನು ಘುಷ್ಮಾ ಸಮಾಧಾನಪಡಿಸಿದಳು. ಅಷ್ಟರಲ್ಲಿ
ಪ್ರತ್ಯಕ್ಷನಾದ ಶಿವನಲ್ಲಿಯೂ ಸುದೇಹಳಿಗೆ ಸದ್ಬುದ್ಧಿಯನ್ನು ಕೊಡುವಂತೆ ಪ್ರಾರ್ಥಿಸಿ, ಅದೇ
ಪ್ರದೇಶದಲ್ಲಿ ಜ್ಯೋತಿರ್ಲಿಂಗರೂಪದಲ್ಲಿ ನೆಲೆನಿಲ್ಲಬೇಕೆಂದು ಕೇಳಿಕೊಂಡಳು. ಘುಷ್ಮಾಳ
ಕ್ಷಮಾಗುಣವನ್ನು ಮೆಚ್ಚಿದ ಶಿವ ಘುಷ್ಮೇಶ್ವರನೆಂಬ ಹೆಸರಿಂದ ಅಲ್ಲಿ ನೆಲೆನಿಂತ.
ಮಹಾಬಲ ಭಟ್, ಗೋವಾ
No comments:
Post a Comment