ಶಿವಾಜಿ ಮಹಾರಾಜ ಕೋಟೆಯೊಂದನ್ನು ಕಟ್ಟಿಸುತ್ತಿದ್ದ. ಅಲ್ಲಿ ಕೆಲಸ ಮಾಡುತ್ತಿರುವ
ಕಾರ್ಮಿಕರನ್ನು ನೋಡಿ ’ಇವರೆಲ್ಲ ನನ್ನಿಂದಲೇ ಜೀವನಕ್ಕೆ ಬೇಕಾದ ಆದಾಯವನ್ನು ಪಡೆಯುತ್ತಿದ್ದಾರೆ.
ನಾನು ಕೆಲಸ ಕೊಡದಿದ್ದರೆ ಇವರ ಕುಟುಂಬ ಉಪವಾಸ ಬಿದ್ದು ಸಾಯಬೇಕಾಗುತ್ತದೆ’ ಎಂದು ಮನದಲ್ಲೇ ಗರ್ವ
ಪಟ್ಟುಕೊಂಡ. ಗುರುಗಳಾದ ರಾಮದಾಸರಿಗೆ ಇದು ತಿಳಿದು ಹೋಯಿತು. ತಕ್ಷಣ ಅಲ್ಲಿ ಪ್ರತ್ಯಕ್ಷರಾದರು.
ಕೋಟೆಯನ್ನು ಕಟ್ಟಲು ಸಂಗ್ರಹಿಸಿದ್ದ ಕಲ್ಲೊಂದನ್ನು ಶಿವಾಜಿಯ ಮುಂದೆಯೇ ಒಡೆಯಲು ಕಲ್ಲು
ಕುಟುಗನಿಗೆ ಆಜ್ಞಾಪಿಸಿದರು. ಹಾಗೆ ಮಾಡಿದಾಕ್ಷಣ ಕಲ್ಲಿನ ಒಳಗಿಂದ ನೀರು ಒಸರಿತು, ಕಪ್ಪೆಯೊಂದು
ಹೊರಗೆ ಜಿಗಿಯಿತು. ’ಈ ಕಪ್ಪೆಯೂ ನಿನ್ನಿಂದಲೇ ಜೀವಿಸಿತ್ತೇ?’ ಎಂದು ರಾಮದಾಸರು ಶಿವಾಜಿಯನ್ನು
ಪ್ರಶ್ನಿಸಿದರು. ಶಿವಾಜಿ ನಾಚಿಕೆಯಿಂದ ಅಧೋಮುಖನಾದ.
ಈ ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಏಳುತ್ತಲೇ ಇರುತ್ತವೆ.
ಆಸ್ತಿಕರು ಅದನ್ನು ದೈವಲೀಲೆ ಎಂದು ಕರೆದರೆ ನಾಸ್ತಿಕರು ಪ್ರಕೃತಿ ವಿಸ್ಮಯ ಎನ್ನುತ್ತಾರೆ.
ಪೂರ್ಣಫಲವೆಂದು ಖ್ಯಾತವಾದ ತೆಂಗಿನ ಕಾಯನ್ನು ನೋಡಿ. ಶೂಲದಿಂದ ಮಾತ್ರ ಸುಲಿಯಬಹುದಾದ
ಸಿಪ್ಪೆ, ಬಲವಾದ ಹೊಡೆತದಿಂದ ಮಾತ್ರ ಒಡೆಯಬಹುದಾದ ಗಟ್ಟಿಯಾದ ಚಿಪ್ಪು, ನಂತರ ತಿನ್ನಬಹುದಾದ ಭಾಗ.
ಇವೆಲ್ಲವುದರ ಮಧ್ಯೆ ಸಿಹಿಯಾದ ನೀರು. ಅದನ್ನು ಇಟ್ಟವರಾರು ಎಂಬ ಪ್ರಶ್ನೆಗೆ ಉತ್ತರ ಇಂದಿಗೂ
ದೊರಕಿಲ್ಲ.
ಅಂತಹ ಪ್ರಶ್ನೆಗೆ ಈ ನ್ಯಾಯವೇ ಉತ್ತರ.
No comments:
Post a Comment