Monday, December 3, 2018

ನಷ್ಟಾಶ್ವದಗ್ಧರಥನ್ಯಾಯ


ವಿಶ್ವವೇ ಹಾಗೆ. ಪರಿಪರಿಯ ನಂಟುಗಳಿನೊಂದು ಗಂಟು. ಆ ನಂಟಿನಿಂದಲೇ ಜೀವ ಜಗತ್ತು ನಡೆಯುತ್ತಿರುವುದು. ವಿಕಲತೆಯನ್ನು ಸಕಲತೆಯನ್ನಾಗಿ ಪರಿವರ್ತಿಸುವ ಶಕ್ತಿಯೂ ಇದಕ್ಕಿದೆ. ಭಾರತೀಯ ಸಂಸ್ಕೃತಿಯಲ್ಲಿ ಈ ನಂಟು ಪರಲೋಕಕ್ಕೂ ವ್ಯಾಪಿಸಿದೆ. ಗೀತಾಚಾರ್ಯನೇ ವರ್ಣಿಸುವಂತೆ ’ನಾವು ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುತ್ತೇವೆ, ದೇವತೆಗಳು ಮಳೆಗರೆದು ಸಸ್ಯ ಸಮೃದ್ಧಿಯನ್ನುಂಟುಮಾಡುತ್ತಾರೆ. ಹೀಗೆ ’ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ’ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಿಂದ ಪರಮ ಶ್ರೇಯಸ್ಸು.

ಪತಂಜಲಿ ಮಹರ್ಷಿಯ ಮಹಾಭಾಷ್ಯದಲ್ಲಿ ಕಾಣುವ ಒಂದು ಕಥೆ. ಪರಸ್ಪರ ಸಂಬಂಧವಿಲ್ಲದ ಇಬ್ಬರು ರಥಾರೋಹಿಗಳು ಪ್ರಯಾಣಹೊರಟಿದ್ದರು. ಇಬ್ಬರೂ ಗ್ರಾಮವೊಂದನ್ನು ತಲುಪಿದಾಗ ಅಲ್ಲಿ ಅಗ್ನಿ ಅನಾಹುತವಾಯಿತು. ಒಬ್ಬನ ರಥ ಸುಟ್ಟು ಕರಕಲಾದರೆ ಇನ್ನೊಬ್ಬನ ಕುದುರೆಗಳು ಬೆಂದು ಹೋದವು. ಈಗ ಒಬ್ಬನಲ್ಲಿ ರಥವಿದೆ ಕುದುರೆಗಳಿಲ್ಲ, ಹಾಗಾಗಿ ರಥ ಚಲಿಸದು. ಇನ್ನೊಬ್ಬನಲ್ಲಿ ಕುದುರೆಗಳಿವೆ ಆದರೆ ರಥವಿಲ್ಲ; ದೂರದ ಪ್ರಯಾಣ ಅಸಾಧ್ಯ. ಇಬ್ಬರ ಪ್ರಯಾಣವೂ ಒಂದೇ ಪ್ರದೇಶಕ್ಕೆ. ಅಗ್ನಿಯಿಂದ ಪಾರಾದ ರಥಕ್ಕೆ ಬದುಕುಳಿದ ಕುದುರೆಗಳನ್ನು ಕಟ್ಟಿದರು. ಇಬ್ಬರೂ ಒಟ್ಟಿಗೇ ಪ್ರಯಾಣಿಸಿ ಗಮ್ಯವನ್ನು ಸೇರಿದರು.

ಒಣ ಪ್ರತಿಷ್ಥೆಯೇ ಹೊಂದಾಣಿಕೆಗೆ ಬಾಧಕ. ಅದನ್ನು ಬಿಟ್ಟು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಗುರಿಯನ್ನು ತಲುಪಬಹುದು. ಒಬ್ಬನಲ್ಲಿ ಹಣವಿರಬಹುದು, ಚಾತುರ್ಯವಿರಲಿಕ್ಕಿಲ್ಲ. ಇನ್ನೊಬ್ಬನಲ್ಲಿ ಚಾತುರ್ಯವಿರಬಹುದು ಹಣವಿಲ್ಲದಿರಬಹುದು. ಅಂತಹ ಸಂದರ್ಭದಲ್ಲಿ ಅವರಿಬ್ಬರೂ ಒಟ್ಟಿಗೆ ಸೇರಿದರೆ ಉದ್ಯಮವನ್ನು ಯಶಸ್ವಿಯಾಗಿ ಸಾಧಿಸಬಹುದು.

ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...