ಈ ಪ್ರಪಂಚದಲ್ಲಿ ಸಜ್ಜನರೊಂದಿಗೂ
ದುರ್ಜನರೊಂದಿಗೂ ವ್ಯವಹರಿಸಬೇಕಾದ ಅನಿವಾರ್ಯತೆ ಒದಗುತ್ತದೆ. ಸಜ್ಜನರ ಸಂಗ ಹೆಜ್ಜೇನು
ಸವಿದಂತಿದ್ದರೆ, ದುರ್ಜನರ ಸಂಗ ಹೆಜ್ಜೇನು ಕಡಿದಂತೆ ಎಂದು ಸರ್ವಜ್ಞ ಹೇಳಿದ್ದು ಅತಿಶಯೋಕ್ತಿಯೇನೂ
ಅಲ್ಲ. ದುಷ್ಟರ ಸಂಸರ್ಗದಿಂದ ಸಜ್ಜನರು ಹೆಜ್ಜೆ ಹೆಜ್ಜೆಗೂ ಅವಮಾನವನ್ನನುಭವಿಸಬೇಕಾಗುತ್ತದೆ.
ಮತಿವಿಕಲ ನಾಯಿಯಂತೆ ದುರ್ಜನರ ವ್ಯವಹಾರ.
ನಾಯಿಗೆ ಹೆದರಿ ಓಡಿದರೆ ಅಟ್ಟಿಸಿಕೊಂಡು ಬಂದು ವಿಕೃತಾನಂದವನ್ನು ಪಡೆಯುತ್ತದೆ. ಎದುರಿಸಿದೆವೋ,
ಅದರ ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪಾರಾಗುವ ಒಂದೇ ಉಪಾಯ ಆಹಾರವನ್ನೆಸೆಯುವುದು.
ಅದು ನಾವು ಎಸೆದ ಆಹಾರವನ್ನು
ತಿಂದು ಸಂತೋಷದಿಂದ ಬಾಲ ಅಲ್ಲಾಡಿಸುತ್ತದೆ.
ಸಜ್ಜನರು ಸದಾತುಷ್ಟರು. ಅವರು ಸರ್ವದಾ
ವಂದ್ಯರೇ ಆದರೂ ವಂದನೆಯ ಅಪೇಕ್ಷೆ ಅವರಿಗಿಲ್ಲ. ದುರ್ಜನರು ಹಾಗಲ್ಲ. ಮುಗಿದ ಕೈ ಓರೆಯಾದರೂ ಕೆರಳುವರು.
ಹಾಗಾಗಿಯೇ ಸುಭಾಷಿತಕಾರನೊಬ್ಬ ಉದ್ಗರಿಸಿದ್ದು – ’ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಂ’.
ದುಷ್ಟರನ್ನು ಖುಷಿಯಾಗಿಟ್ಟರೆ ಬೀಸೋ
ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಅವರು ಖುಷಿಯಾಗಿರುವಷ್ಟು ಕಾಲ ನಮ್ಮ ತಂಟೆಗೆ ಬರಲಾರರು.
ಅಫಝಲ್ ಖಾನ್ ಶಿವಾಜಿಮಹಾರಾಜನನ್ನು
ಮಣಿಸಲು ಅಪಾರಸೇನೆಯೊಂದಿಗೆ ಪ್ರತಾಪದುರ್ಗವನ್ನು ಸಮೀಪಿಸಿದ್ದ. ಅವನ ಸೇನೆಯನ್ನು ಎದುರಿಸುವುದು ಸುಲಭಸಾಧ್ಯವಾಗಿರಲಿಲ್ಲ.
ಚತುರಮತಿ ಶಿವಾಜಿ ತಾನು ಭಯಗೊಂಡಿರುವೆನೆಂದೂ, ಶರಣಾಗಲು ಬರುವೆನೆಂದೂ ನಿರೋಪವನ್ನು ಕಳಿಸಿದ. ದುಷ್ಟ
ಸಂತುಷ್ಟನಾದ. ಅವನ ಸೈನಿಕರೂ ಮೈಮರೆತರು. ಕುರಿ ಬಲಿತಷ್ಟೂ ಕಟುಕನಿಗೆ ಲಾಭ. ಅಫಝಲ್ ಖಾನ್
ಶಿವಾಜಿಯ ನಖಗಳಿಗೆ ಬಲಿಯಾಗಿ ಹೋದ.
ದುಷ್ಟರೊಂದಿಗಿನ ವ್ಯವಹಾರದಲ್ಲಿ ತುಷ್ಯತುದುರ್ಜನನ್ಯಾಯ ಸದಾ ದಾರಿದೀಪ.
No comments:
Post a Comment