ಒಬ್ಬ ತಂದೆ ಹಾಗೂ ಅವನ ಚಿಕ್ಕ ಮಗಳು ಇಕ್ಕಟ್ಟಾದ ಸಂಕವನ್ನು ದಾಟುತ್ತಿದ್ದರು. ಆಗ ತಂದೆ
ತನ್ನ ಕೈಯನ್ನು ಹಿಡಿದುಕೊಳ್ಳುವಂತೆ ಸೂಚಿಸಿದ. ಆಗ ಮಗಳೆಂದಳು – “ಅಪ್ಪಾ! ನೀನೇ ನನ್ನ
ಕೈಹಿಡಿದುಕೋ. ನಾನು ನಿನ್ನ ಕೈ ಹಿಡಿದುಕೊಂಡು ಜಾರಿದರೆ ಹೆದರಿ ಬಿಟ್ಟು ಬಿಟ್ಟೇನು. ಆದರೆ ನೀನು
ನನ್ನ ಕೈ ಹಿಡಿದುಕೊಂಡರೆ ಎಂತಹ ಆಪತ್ತು ಬಂದರೂ ಬಿಡಲಾರೆ ಎಂಬ ವಿಶ್ವಾಸವಿದೆ.”
ನಮ್ಮ ಹಾಗೂ ಭಗವಂತನ ನಡುವೆಯ ಸಂಬಂಧವೂ ಹೀಗೇ. ಎಷ್ಟೋ ಸಂದರ್ಭಗಳಲ್ಲಿ ನಾವು ಶ್ರದ್ಧೆಯನ್ನು
ಕಳೆದುಕೊಳ್ಳುತ್ತೇವೆ. ಆದರೆ ಭಗವಂತ ಒಮ್ಮೆ ನಮ್ಮ ಕೈ ಹಿಡಿದುಕೊಂಡರೆ ಎಂತಹ ಸಂದರ್ಭದಲ್ಲೂ
ಅದನ್ನು ಬಿಡಲಾರ. ಭಗವದ್ಗೀತೆಯಲ್ಲಿ ಪರಮಾತ್ಮ ಅದನ್ನು ಸ್ಪಷ್ಟಪಡಿಸಿದ್ದಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ
ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ
ಯೋಗಕ್ಷೇಮಂ ವಹಾಮ್ಯಹಮ್ ||
ಅನನ್ಯಗತಿಕರಾಗಿ ಯಾರು ನನ್ನನ್ನು ಭಜಿಸುತ್ತಾರೋ ಅವರ ಯೋಗ(ಅಪ್ರಾಪ್ತಸ್ಯ ಪ್ರಾಪ್ತಿಃ) ಹಾಗೂ
ಕ್ಷೇಮ(ಪ್ರಾಪ್ತಸ್ಯ ರಕ್ಷಣಂ) ಎರಡನ್ನೂ ನಾನು ವಹಿಸಿಕೊಳ್ಳುತ್ತೇನೆ ಎಂಬುದು ಭಗವಂತನ ಅಂಬೋಣ.
ಮಾರ್ಜಾರ ಜಾತಿಗೆ ಸೇರಿದ ಬೆಕ್ಕು, ಹುಲಿ ಹಾಗೂ ಸಿಂಹಗಳು ತಮ್ಮ ಮರಿಗಳನ್ನು ಒಂದೆಡೆಯಿಂದ
ಇನ್ನೊಂದೆಡೆಗೆ ಬಾಯಿಯಲ್ಲಿ ಕಚ್ಚಿಕೊಂಡು ಸಾಗಿಸುತ್ತವೆ. ಮರಿಗಳು ಹಿಡಿತ ತಪ್ಪಿ ಬೀಳುವುದೂ ಇಲ್ಲ,
ಹರಿತ ಹಲ್ಲುಗಳಿಂದ ಅವುಗಳಿಗೆ ಅಪಾಯವೂ ಆಗುವುದಿಲ್ಲ. ಅದರಂತೆ ನಮ್ಮನ್ನು ಭಗವಂತ ನೋವಾಗದಂತೆ ಚ್ಯುತಿಯಿಲ್ಲದಂತೆ
ದಾಟಿಸುತ್ತಾನೆ ಎಂಬುದು ಈ ನ್ಯಾಯದ ತಾತ್ಪರ್ಯ.
No comments:
Post a Comment