Saturday, August 5, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೫ *ಜಲಮಧ್ಯೇ ಡುಬುಕ್ ಡುಬುಕ್*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೫


*ಜಲಮಧ್ಯೇ ಡುಬುಕ್ ಡುಬುಕ್*


ಭೋಜರಾಜ ಪಂಡಿತರನ್ನು ಗೌರವಾದರಗಳಿಂದ ಕಾಣುತ್ತಾನೆ ಎಂಬುದನ್ನು ತಿಳಿದ ನಾಲ್ವರು ಪಂಡಿತಂಮನ್ಯರು (ತಮ್ಮನ್ನು ತಾವೇ ಪಂಡಿತರೆಂದು ತಿಳಿದುಕೊಂಡವರು) ಧಾರಾನಗರಿಗೆ ಹೊರಟರು. ರಾಜನನ್ನು ಸುಪ್ರೀತಗೊಳಿಸಲು ಪದ್ಯವೊಂದನ್ನು ಬರೆಯಬೇಕಾಗಿತ್ತು. ದಾರಿಯುದ್ದಕ್ಕೂ ಯೋಚಿಸಿದರೂ ಯಾವುದೇ ಕವಿತಾಕಾಮಿನಿ ಅವರಿಗೆ ಒಲಿಯಲಿಲ್ಲ. ಪ್ರಯಾಣದಿಂದ ದಣಿದ ಅವರು ವಿಶ್ರಾಂತಿಗಾಗಿ ಸರೋವರವೊಂದರ ತೀರದಲ್ಲಿ ಮರದ ನೆರಳನ್ನಾಶ್ರಯಿಸಿದರು. ಅದು ಜಂಬೂಫಲದ ಮರವಾಗಿತ್ತು. ಮರದಲ್ಲಿ ಕಳಿತ ಹಣ್ಣುಗಳನ್ನು ನೋಡಿದ ಅವರಲ್ಲೊಬ್ಬ ಶ್ಲೋಕದ ಒಂದು ಪಾದವನ್ನು ರಚಿಸಿದ –’ಜಂಬೂಫಲಾನಿ ಪಕ್ವಾನಿ’. ಅವು ಸರೋವರದ ನೀರಿನಲ್ಲಿ ಬೀಳುತ್ತಿರುವುದನ್ನು ನೋಡಿದ ಇನ್ನೊಬ್ಬ ಎಂದ ಪತಂತಿ ವಿಮಲೇ ಜಲೇ’ ಮತ್ತೊಬ್ಬ ಸರೋವರದಲ್ಲಿ ಇಣುಕಿ ಹಾಕಿದ. ಅದರಲ್ಲಿರುವ ಮೀನುಗಳು ಹಣ್ಣುಗಳನ್ನು ತಿನ್ನದೇ ದೂರ ಓಡಿ ಹೋಗುತ್ತಿದ್ದುದನ್ನು ನೋಡಿ ’ತಾನಿ ಮತ್ಸ್ಯಾ ನ ಖಾದಂತಿ’ ಎಂದ. ನಾಲ್ಕನೆಯವನು ಕೊನೆಯ ಚರಣವನ್ನು ಕಟ್ಟಲು ಕಷ್ಟಪಟ್ಟ. ಹಣ್ಣುಗಳು ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಕಂಡು ಹೇಳಿದ – ’ಜಲಮಧ್ಯೇ ಡುಬುಕ್ ಡುಬುಕ್’. ನಾಲ್ವರಿಗೂ ಸಮಾಧಾನವಾಯಿತು. ಎಲ್ಲರೂ ಸೇರಿ ರಚಿಸಿದ ನಾಲ್ಕು ಸಾಲುಗಳನ್ನು ರಾಜನ ಮುಂದೆ ವಾಚಿಸಿದರು.

ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಲಮಧ್ಯೇ ಡುಬುಕ್ ಡುಬುಕ್ ||


ಸ್ವತ: ಕವಿಯಾಗಿದ್ದ ಭೋಜರಾಜ ಪ್ರತಿಭಾಶೂನ್ಯವಾದ ಈ ಕವಿತೆಯನ್ನು ಕೇಳಿ ನಾಲ್ವರಿಗೂ ಛೀಮಾರಿ ಹಾಕಿ ಕಳಿಸಿದ. ಹಣದಾಸೆಯಿಂದ ಬಂದಿದ್ದ ಅವರು ಕಂದಿದ ಮುಖವನ್ನು ಹೊತ್ತು ಹೊರಬಿದ್ದರು. ದಾರಿಯಲ್ಲಿ ಭೇಟಿಯಾದ ಕಾಳಿದಾಸ ಏನಾಯ್ತೆಂದು ಕೇಳಿದ. ಅವರು ಕಾಳಿದಾಸನಿಗೆ ಎಲ್ಲವನ್ನೂ ಹೇಳಿದರು. ಅವನು ಅವರ ಪದ್ಯವನ್ನು ನೋಡಿ ನಸುನಕ್ಕು ಕೊನೆಯ ಚರಣವೊಂದನ್ನು ಬದಲಿಸಿದ.


ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಾಲಗೋಲಕಶಂಕಯಾ ||


ಪಕ್ವವಾದ ಜಂಬೂ ಫಲಗಳು ನೀರಿನಲ್ಲಿ ಬೀಳುತ್ತಿವೆ. ಆದರೆ ಅವು ತಮ್ಮನ್ನು ಹಿಡಿಯಲು ಹಾಕಿರುವ ಬಲೆಯ ಚೆಂಡುಗಳೋ (ಬಲೆ ಮುಳುಗದಿರಲೆಂದು ಕಟ್ಟಿರುವ) ಎಂಬ ಸಂಶಯದಿಂದ ಮೀನುಗಳು ಅವನ್ನು ತಿನ್ನುತ್ತಿಲ್ಲ.


ಆ ಕೊನೆಯ ಪಾದ ಕವಿತೆಯ ಭಾಗ್ಯವನ್ನೇ ಬದಲಿಸಿಬಿಟ್ಟಿತು. ಅಪೂರ್ವವಾದ ಸೌಂದರ್ಯ ಆ ಕವಿತೆಗೊದಗಿತು. ಪಂಡಿತರು ಮತ್ತೆ ಒಳಹೋಗಿ ರಾಜನ ಮುಂದೆ ಬದಲಾವಣೆಯೊಂದಿಗೆ ವಾಚಿಸಿದರು. ಭೋಜನಿಗೆ ಇದು ಕಾಳಿದಾಸನ ಕೈವಾಡ ಎಂದು ಅರಿವಾದರೂ ಮುಗುಳ್ನಕ್ಕು ಆ ಪಂಡಿತಪುತ್ರರನ್ನು ಸತ್ಕರಿಸಿ ಕಳಿಸಿಕೊಟ್ಟ.

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕತಿ ತಿಳಿಯಿರಿ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...