Saturday, August 12, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೨ *ಗಂಗಾ ಮಮಾಂಗಾನ್ಯಮಲೀಕರೋತು.........

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೨

*ಗಂಗಾ ಮಮಾಂಗಾನ್ಯಮಲೀಕರೋತು..........*

ಜಗನ್ನಾಥನ ರಾಜನಿಷ್ಠೆ ಸಂಪೂರ್ಣ ನಲುಗಿ ಹೋಗಿತ್ತು. ಧರ್ಮಾಂಧನಾದ ಔರಂಗಜೇಬ ತನ್ನ ಸೋದರರನ್ನು ಕೊಂದು ಷಹಜಹಾನನನ್ನು ಸೆರೆಯಲ್ಲಿಟ್ಟು ರಾಜ್ಯವನ್ನು ವಶಪಡಿಸಿಕೊಂಡಾಗ ಅನಿವಾರ್ಯವಾಗಿ ದಿಲ್ಲಿಯನ್ನು ಬಿಡಬೇಕಾಯಿತು. ಯವನಿಯನ್ನು ಮದುವೆಯಾದ ಅವನನ್ನು ಸಮಾಜ ಸ್ವೀಕರಿಸಲಿಲ್ಲ. ಕೊನೆಯ ಕಾಲದಲ್ಲಿ ಕಾಶಿಯಲ್ಲಿ ಆಶ್ರಯಪಡೆಯಬೇಕಾಯಿತು. ಒಂದಿನ ಅವನ ಪ್ರೀತಿಯ ಲವಂಗಿಯೂ ಗಂಗೆಗೆ ತನ್ನನ್ನು ಸಮರ್ಪಿಸಿಕೊಂಡು ಬಿಟ್ಟಳು. ಜೀವನದ ಏಕೈಕ ಆಲಂಬನವಾದ ಅವಳೂ ತೊರೆದ ಮೇಲೆ ಜಗನ್ನಾಥನ ಮನಸ್ಸು ಜರ್ಜರಿತವಾಯಿತು.

ಹಿಂದಿನ ದಿನ ವಾರಾಣಸಿಯಲ್ಲಿ ವರುಣನ ಆರ್ಭಟ ನಡೆದಿತ್ತು. ಹೊಟ್ಟೆಪಾಡಿಗಾಗಿ ಅನ್ಯರ ಸೇವೆ ಮಾಡಿದ ಪಶ್ಚಾತ್ತಾಪ ಭಾವನೆ ಜಗನ್ನಾಥ ಪಂಡಿತನ ಮನಸ್ಸನ್ನಪ್ಪಳಿಸುತ್ತಿದ್ದಂತೆ ಗುಡುಗುಮಿಂಚುಗಳು ಭೂಮಿಯನ್ನಪ್ಪಳಿಸುತ್ತಿದ್ದವು. ಅವನ ಹೃದಯದಲ್ಲೆದ್ದ ವೈರಾಗ್ಯ ತರಂಗಗಳಂತೆ ಗಂಗಾನದಿಯಲ್ಲಿ ಅಬ್ಬರದ ಅಲೆಗಳೆದ್ದಿದ್ದವು. ಬೆಳಗು ಹರಿಯುವ ಮೊದಲೇ ಜಗನ್ನಾಥ ಸ್ನಾನಘಟ್ಟವನ್ನು ತಲುಪಿ ಅಂದು ಲವಂಗಿ ಕುಳಿತಿದ್ದ ಮೆಟ್ಟಿಲಿನ ಮೇಲೆಯೇ ವ್ಯಗ್ರನಾಗಿ ಕುಳಿತುಕೊಂಡ. ಪರಮಪಾವನಿಯಾದ ಗಂಗಾಮಾತೆ ಅವನ ಹೃದಯವನ್ನು ತಟ್ಟಲು ಆರಂಭಿಸಿದ್ದಳು. ಆ ಪವಿತ್ರ ಮಾತೆಯ ಸ್ತುತಿಯು ’ಗಂಗಾಲಹರಿ’ಯಾಗಿ ಹರಿಯಿತು. ಒಂದೊಂದೇ ಪದ್ಯವನ್ನು ಎತ್ತರದ ದನಿಯಲ್ಲಿ ಹಾಡುತ್ತಿರುವಂತೆ ಗಂಗೆ ಒಂದೊಂದೇ ಮೆಟ್ಟಿಲನ್ನು ಏರುತ್ತ ಬಂದಳು. ಭಾಗೀರಥಿಯ ನೀರು ದೇಹವನ್ನು ಸ್ಪರ್ಶಿಸುತ್ತಿದ್ದಂತೆ ಮೈಯಲ್ಲಿ ಪುಳಕವುಂಟಾಯಿತು. ತಾರಸ್ವರದಲ್ಲಿ 52 ನೆಯ ಪದ್ಯ ಮೊಳಗಿತು.

ವಿಭೂಷಿತಾನಂಗರಿಪೂತ್ತಮಾಂಗಾ
ಸದ್ಯಃಕೃತಾನೇಕಜನಾರ್ತಿಭಂಗಾ |
ಮನೋಹರೋತ್ತುಂಗಜಲತ್ತರಂಗಾ
ಗಂಗಾ ಮಮಾಂಗಾನ್ಯಮಲೀಕರೋತು ||

ಕಾಮಾರಿಯ ತಲೆಯನ್ನು ಅಲಂಕರಿಸಿರುವ, ಅನೇಕ ಜನರ ದೈನ್ಯತೆಯನ್ನು ಮುರಿದ, ಮನೋಹರವಾದ ದೊಡ್ಡ ದೊಡ್ಡ ಅಲೆಗಳನ್ನು ಹೊಂದಿರುವ ಗಂಗೆಯು ನನ್ನ ಅಂಗಗಳನ್ನು ಶುದ್ಧಿಗೊಳಿಸಲಿ.

ಜಗನ್ನಾಥ ಈ ಪದ್ಯವನ್ನು ಹೇಳಿಮುಗಿಸುತ್ತಿದ್ದಂತೆ ರಭಸವಾಗಿ ಬಂದ ತೆರೆಯೊಂದು ಅವನನ್ನು ಕೊಚ್ಚಿಕೊಂಡು ಹೋಗೇ ಬಿಟ್ಟಿತು. ಅತ್ತ ಬಾನಿನಲ್ಲಿ ಸೂರ್ಯೋದಯವಾಗುತ್ತಿದ್ದಂತೆ ಇತ್ತ ಭುವಿಯಲ್ಲಿ ಪಂಡಿತಮಾರ್ತಂಡ ಗಂಗೆಯಲ್ಲಿ ಅಸ್ತಂಗತನಾಗಿದ್ದ. ಅವನ ರಸಗಂಗಾಧರ ಎಂಬ ಲಕ್ಷಣಗ್ರಂಥ, ಭಾಮಿನಿ ವಿಲಾಸ ಮತ್ತು ಗಂಗಾಲಹರಿಯೇ ಮೊದಲಾದ ಐದು ಲಹರಿ ಕಾವ್ಯಗಳು ಮಾತ್ರವಲ್ಲದೆ ಅನೇಕ ವ್ಯಾಕರಣ ಶಾಸ್ತ್ರ ಗ್ರಂಥಗಳು ಅವನ ಪಾಂಡಿತ್ಯದ ಪ್ರತಿನಿಧಿಗಳಾಗಿ ಉಳಿದುಕೊಂಡಿವೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

1 comment:

Unknown said...

ಧನ್ಯವಾದಗಳು , ಉತ್ತಮ ವಿವರಣೆ .
ಸಂಸ್ಕ್ರತ ಕಲಿಯಬೇಕೆಂಬ ಇಚ್ಚೆಯುಳ್ಳವರಿಗೆ ಉತ್ತಮವಾದ ಮಾರ್ಗದರ್ಶನ .🙏🙏

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...