Friday, March 17, 2017

ಶಾಂಡಿಲಿ


ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೭

ಶಾಂಡಿಲಿ:

ಸತಿ ಶಾಂಡಿಲಿ ಅನಸೂಯೆಯ ಸಮಕಾಲೀನಳು. ಸಹನೆ, ನಿಷ್ಠೆ ಹಾಗೂ ಪಾತಿವ್ರತ್ಯಕ್ಕೆ ಪ್ರಸಿದ್ಧಳು. ಅವಳ ಪತಿಯ ಹೆಸರು ಕೌಶಿಕನೆಂಬ ಮಹಾದುಷ್ಟ ಬ್ರಾಹ್ಮಣ. ವಿವಿಧ ಚಟಗಳಿಗೆ ದಾಸನಾಗಿ ಕುಷ್ಠರೋಗಕ್ಕೆ ಒಳಗಾಗಿದ್ದ. ಶಾಂಡಿಲಿ ನಿಷ್ಠೆಯಿಂದ ಅವನ ಸೇವೆಯನ್ನು ಮಾಡುತ್ತಿದ್ದಳು. ಆದರೆ ಅವನಿಗೆ ಪತ್ನಿಯ ಮೇಲೆ ಆದರವಾಗಲೀ ಪ್ರೀತಿಯಾಗಲೀ ಇರಲಿಲ್ಲ. ಸದಾ ಕಾಲ ಅವಳಿಗೆ ಬಯ್ಯುತ್ತ, ಹಿಂಸಿಸುತ್ತಿದ್ದ. ಸಹನೆಯ ಮೂರ್ತಿಯಾಗಿದ್ದ ಶಾಂಡಿಲಿ ಅವನಿಗೆ ಎಂದೂ ಎದುರಾಡುತ್ತಿರಲಿಲ್ಲ. ಒಮ್ಮೆ ಅವರ ಮನೆಯ ಮುಂದಿನ ದಾರಿಯಲ್ಲಿ ಹೋಗುತ್ತಿದ್ದ ವೇಶ್ಯೆಯೋರ್ವಳನ್ನು ನೋಡಿ ಅವಳ ಮನೆಗೆ ತನ್ನನ್ನು ಕರೆದೊಯ್ಯುವಂತೆ ಪತ್ನಿಯನ್ನು ಪೀಡಿಸಿದ. ಪತಿಯ ಬಯಕೆಯನ್ನು ಪೂರೈಸುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ ಸಾಧ್ವಿ ಶಾಂಡಿಲಿಯು ನಡೆಯಲಾರದ ಅವನನ್ನು ಹೊತ್ತು ವೇಶ್ಯಾಗೃಹದೆಡೆಗೆ ನಡೆದಳು. ಅದೇ ದಾರಿಯಲ್ಲಿ ಮಾಂಡವ್ಯನೆಂಬ ಮುನಿಯನ್ನು ಕಳ್ಳನೆಂಬ ಭ್ರಾಂತಿಯಿಂದ ಶೂಲಕ್ಕೇರಿಸಿದ್ದರು. ಕತ್ತಲೆಯಲ್ಲಿ ಕೌಶಿಕನ ಕಾಲು ಇನ್ನೂ ಜೀವಂತವಿದ್ದ ಅವನಿಗೆ ತಗಲಿ ಅತೀವ ವೇದನೆಯುಂಟಾಯಿತು. ತಕ್ಷಣ ಶಾಪವಿತ್ತ – ’ನನ್ನ ವೇದನೆಗೆ ಕಾರಣನಾದವನು ಸೂರ್ಯೋದಯದೊಳಗೆ ಸಾಯಲಿ.’ ಶಾಂಡಿಲಿ ಆಘಾತಕ್ಕೊಳಗಾದಳು. ಸಾಧ್ವಿಶಿರೋಮಣಿಯಾಗಿದ್ದ ಅವಳು ’ಸೂರ್ಯೋದಯವೇ ಆಗದಿರಲಿ’ ಎಂದು ಕಾಲಕ್ಕೇ ಸವಾಲು ಹಾಕಿದಳು. ಅನೇಕ ದಿನಗಳಾಗುವಷ್ಟು ಸಮಯ ಸರಿದರೂ ನೇಸರು ಕಾಣಿಸಲೇ ಇಲ್ಲ. ಜಗತ್ತಿನಲ್ಲಿ ಅಲ್ಲೋಲಕಲ್ಲೋಲವುಂಟಾಯಿತು. ಸಾಧ್ವಿಯ ಸಾಂತ್ವನ ಸಾಧ್ವಿಯಿಂದಲೇ ಸಾಧ್ಯವೆಂದರಿತ ದೇವತೆಗಳೂ, ಮಾನವಮುಖ್ಯರೂ ಅನಸೂಯಾದೇವಿಯ ಮರೆಹೊಕ್ಕರು. ಅವಳು ’ನಾನು ನಿನ್ನ ಪತಿಯನ್ನು ಬದುಕಿಸಿಕೊಡುತ್ತೇನೆ’ ಎಂಬ ಭರವಸೆಯಿತ್ತ ಮೇಲೆ ತನ್ನ ಶಾಪವನ್ನು ಹಿಂಪಡೆದಳು. ದಿನಪನು ಆಕಾಶದಲ್ಲಿ ಕಾಣಿಸಿದಾಕ್ಷಣ ಕೌಶಿಕ ಧರೆಗುರುಳಿದ. ಅನಸೂಯೆಯ ಶಕ್ತಿಯಿಂದ ಮತ್ತೆ ಎದ್ದು ನಿಂತ.

ಸನಾತನ ಕಾಲದಿಂದ ಸ್ತ್ರೀಯರು ಸಾಮಾನ್ಯದವರಾಗಿರಲಿಲ್ಲ. ಕಾಲಕ್ಕೂ ಸವಾಲು ಹಾಕುವ ಶಕ್ತಿ ಅವರಿಗಿತ್ತು. ಬ್ರಹ್ಮವೈವರ್ತಕ ಪುರಾಣದಲ್ಲಿ ’ಸುರಾ: ಸರ್ವೇ ಚ ಮುನಯೋ ಭೀತಾಸ್ತಾಭ್ಯಶ್ಚ ಸಂತತಮ್’ ಅವರನ್ನು ಎದುರು ಹಾಕಿಕೊಳ್ಳಲು ದೇವತೆಗಳೂ ಮುನಿಗಳೂ ಹೆದರುತ್ತಿದ್ದರು ಎಂದು ಹೇಳಲಾಗಿದೆ.


ಮಹಾಬಲ ಭಟ್, ಗೋವಾ

Thursday, March 16, 2017

ಸತ್ಯವಾದಿನಿ ಜಾಬಾಲಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೬

ಸತ್ಯವಾದಿನಿ ಜಾಬಾಲಾ

ಜಾಬಾಲಾ ಶೂದ್ರಕುಲದಲ್ಲಿ ಹುಟ್ಟಿ ಪರಗೃಹದಲ್ಲಿ ದಾಸಿಯಾಗಿ ಜೀವನ ಸವೆಸಿದ ಮಹಿಳೆ. ಹೀಗೆ ದಾಸ್ಯಜೀವನ ನಡೆಸುವಾಗ ಅನೇಕಪುರುಷರ ಉಪಭೋಗಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಅವಳಿಗೊದಗಿತ್ತು. ಆ ಮಾರ್ಗದಲ್ಲಿಯೇ ಗರ್ಭವತಿಯಾಗಿ ಪುತ್ರನೊಬ್ಬನನ್ನು ಅವಳು ಪಡೆದಳು. ದಾಸಿಯಾಗಿದ್ದರೂ ವಿವೇಕಮತಿಯೂ, ಸಂಸ್ಕಾರದ ಮಹತ್ತ್ವವನ್ನೂ ಅರಿತವಳೂ ಆಗಿದ್ದ ಜಾಬಾಲಾ ತನ್ನ ಮಗನಿಗೆ ಉತ್ತಮ ಸಂಸ್ಕಾರ ನೀಡಿದಳು. ಅವಳ ಮಗನ ಹೆಸರು ’ಸತ್ಯಕಾಮ’. ಜೀವನದ ಸತ್ಯವನ್ನು ಹುಡುಕುವುದರಲ್ಲಿ ಆಸಕ್ತಿಯುಳ್ಳವನೂ ಸತ್ಯಸಂಧನೂ ಆಗಿರಬೇಕೆಂಬ ಬಯಕೆಯಿಂದ ಮಗನಿಗೆ ಆ ಹೆಸರನ್ನಿತ್ತಿದ್ದಳು. ಒಟ್ಟಿನಲ್ಲಿ ಒಂಟಿ ಪಾಲಕ (Single parent) ಳಾಗಿ ಮಗನನ್ನು ಬೆಳೆಸಿದಳು.

ತಂದೆ ಯಾರೆಂದು ಗೊತ್ತಿಲ್ಲದ ಮಕ್ಕಳಿಗೆ ಮೊದಲ ಸವಾಲು ಎದುರಾಗುವುದು ಗುರುಕುಲವನ್ನು ಸೇರುವಾಗ. ಗುರುಕುಲವನ್ನು ಸೇರುವಾಗ ಗೋತ್ರವನ್ನು ತಿಳಿಸುವುದು ಅನಿವಾರ್ಯವಾಗಿತ್ತು. ತನ್ನ ಮಗ ವಿದ್ಯಾಸಂಪನ್ನನಾಗಬೇಕು ಎಂಬ ಹೆಬ್ಬಯಕೆಯಿಂದ ಜಾಬಾಲಾ ಹರಿದ್ರುಮ ಮಹರ್ಷಿಯ ಮಗನಾದ ಗೌತಮನಲ್ಲಿಗೆ ಅವನನ್ನು ಕಳಿಸಿದಳು. ಅಲ್ಲಿ ಅವನಿಗೆ ಗುರುಗಳು ಕೇಳಿದ ಮೊದಲ ಪ್ರಶ್ನೆ’ನಿನ್ನ ಹೆಸರೇನು?’. ಆ ಪ್ರಶ್ನೆಯನ್ನು ಉತ್ತರಿಸಿದ ಸತ್ಯಕಾಮನಿಗೆ ಎದುರಾದದ್ದು ಜಟಿಲವಾದ ಎರಡನೆಯ ಪ್ರಶ್ನೆ –’ನಿನ್ನ ಗೋತ್ರವಾವುದು?’. ಸತ್ಯಕಾಮನಿಗೆ ತಿಳಿದಿರಲಿಲ್ಲ. ಸುಳ್ಳನ್ನು ಹೇಳುವ ಅಭ್ಯಾಸವೇ ಅವನಿಗಿಲ್ಲವಾದ್ದರಿಂದ ’ತಿಳಿದಿಲ್ಲ ಗುರುಗಳೆ. ನಾನು ನೋಡಿದ್ದು ತಾಯಿಯನ್ನು ಮಾತ್ರ.’ ಎಂದ ಗುರುಗಳು ’ಹೋಗು ನಿನ್ನ ತಾಯಿಯನ್ನು ಕೇಳಿ ಬಾ’ ಎಂದಾಗ ಧಾವಿಸಿ ಮನೆಗೆ ಬಂದು ಕೇಳಿದ ’ಅಮ್ಮಾ! ನನ್ನ ತಂದೆ ಯಾರು? ಗೋತ್ರ ಯಾವುದು?’ ತಾಯಿ ಈ ಇಕ್ಕಟ್ಟಿನ ಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ. ’ಮಗನು ಗೋತ್ರವನ್ನು ಹೇಳದಿದ್ದರೆ ಅವನಿಗೆ ಗುರುಕುಲದಲ್ಲಿ ಪ್ರವೇಶ ಸಿಗಲಿಕ್ಕಿಲ್ಲ. ಅವನ ವಿದ್ಯಾಭಾಸದ ಅಭಿಲಾಷೆ ಕಮರಿ ಹೋದೀತು. ಹಾಗಂತ ಏನಾದರೊಂದು ಸುಳ್ಳು ಹೇಳಿ ಸಾಗಹಾಕಲೆ? ಇಷ್ಟು ದಿನ ಬೋಧಿಸಿದ ಸತ್ಯದ ವ್ರತವನ್ನು ತಾನೇ ಮುರಿದು ಹಾಕಲೆ’? ಎಂದು ಚಿಂತಿಸಿದಳು. ಕೊನೆಗೂ ಗೆದ್ದದ್ದು ಅವಳ ಸತ್ಯಶೀಲತೆಯೇ. ’ಏನಾದರಾಗಲಿ ಸತ್ಯವನ್ನೇ ಹೇಳುತ್ತೇನೆ’ ಎಂದು ನಿರ್ಧರಿಸಿದಳು. ’ಮಗನೇ, ನಾನು ದಾಸಿಯಾಗಿ ಪರರ ಮನೆಯಲ್ಲಿ ಕೆಲಸ ಮಾಡುವಾಗ ಹುಟ್ಟಿದವನು ನೀನು. ಹಾಗಾಗಿ ನಿನ್ನ ತಂದೆ ಯಾರೆಂದು ನನಗೂ ಗೊತ್ತಿಲ್ಲ. ನಾನು ಜಾಬಾಲಾ. ಅದೇ ನಿನ್ನ ಗೋತ್ರವಾಗಲಿ. ನಿನ್ನ ಹೆಸರನ್ನು ಸತ್ಯಕಾಮ ಜಾಬಾಲಾ ಎಂದು ಹೇಳು’ ಎಂದಳು. ಸತ್ಯಕಾಮ ಗುರುಕುಲಕ್ಕೆ ತೆರಳಿ ಅದೇ ರೀತಿ ಹೇಳಿದಾಗ ಗೌತಮ ಋಷಿಗೆ ಅವನ ಮುಖದಲ್ಲಿ ಸತ್ಯದ ತೇಜಸ್ಸು ಗೋಚರಿಸಿತು. ’ನೀನು ದಾಸಿಯ ಪುತ್ರನೇ ಆಗಿದ್ದರೂ ಆಚರಣೆಯಲ್ಲಿ ಬ್ರಾಹ್ಮಣನೇ ಆಗಿರುವೆ’ ಎಂದು ಹೇಳಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಮುಂದೆ ಸತ್ಯಕಾಮ ಸಕಲವಿದ್ಯಾಪಾರಂಗತನಾಗಿ ತನ್ನದೇ ಗುರುಕುಲವನ್ನು ಸ್ಥಾಪಿಸಿದ.

ವಿಷಮಪರಿಸ್ಥಿತಿಯ ಮಧ್ಯೆಯೂ ಮಗನನ್ನು ಸುಶೀಲನನ್ನಾಗಿ, ಸತ್ಯವಂತನನ್ನಾಗಿ, ವಿದ್ಯಾವಂತನನ್ನಾಗಿ ಬೆಳೆಸಿದ ಜಾಬಾಲಾ ಎಲ್ಲ ತಾಯಂದಿರಿಗೆ ಮಾದರಿಯಾಗಿ ನಿಲ್ಲುತ್ತಾಳೆ. ಸತ್ಯಕಾಮ ತನ್ನ ಹೆಸರಿನೊಂದಿಗೆ ತಾಯಿಯ ಹೆಸರನ್ನು ಸೇರಿಸಿಕೊಂಡ ಮೊದಲ ಮಗ ಎನ್ನಬಹುದು.


ಮಹಾಬಲ ಭಟ್, ಗೋವಾ

Wednesday, March 15, 2017

ಚಿಂತನಶೀಲೆ ಜುಹೂ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೫

ಚಿಂತನಶೀಲೆ ಜುಹೂ:

ವೇದದೃಷ್ಟಾರ ಋಷಿಕೆಗಳಲ್ಲಿ ಅನ್ಯತಮಳು ಜುಹು. ಅವಳು ಬ್ರಹ್ಮನ ಪುತ್ರಿಯೆಂದೂ ದೇವಗುರು ಬೃಹಸ್ಪತಿಯ ಪತ್ನಿ ಎಂದೂ ಅನಂತರದ ಗ್ರಂಥಗಳಲ್ಲಿ ಉಲ್ಲೇಖವಿದೆ. ಋಗ್ವೇದದ ೧೦ ನೆಯ ಮಂಡಲದ ೧೦೯ ನೆಯ ಸೂಕ್ತದ ಋಷಿಕೆ ಇವಳು. ಸರ್ವಶಾಸ್ತ್ರ ಪಾರಂಗತೆಯೂ ಬ್ರಹ್ಮಜ್ಞಾನಿಯೂ ಆದ ಇವಳು ಸೋಮನಿಂದ ಅಪಹರಿಸಲ್ಪಟ್ಟು ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಇದನ್ನು ತಿಳಿದ ವರುಣಾದಿಗಳು ಅವಳನ್ನು ಮರಳಿ ತಂದು ಬೃಹಸ್ಪತಿಗೆ ಒಪ್ಪಿಸುತ್ತಾರೆ. ಪತಿತೆಯಾದ ಅವಳನ್ನು ಗಂಡ ಹಾಗೂ ಸಮಾಜ ತಿರಸ್ಕರಿಸಿರಬಹುದು ಎಂದು ಊಹಿಸಿದರೆ ಅದು ತಪ್ಪು. ಈ ಪ್ರಕರಣದಲ್ಲಿ ಅವಳ ತಪ್ಪಿಲ್ಲವೆಂದು ಅರಿತ ಸಪ್ತರ್ಷಿಗಳು ನಿರ್ದೋಷಿಯಾದ ಅವಳನ್ನು ಸ್ವೀಕರಿಸುವಂತೆ ಬೃಹಸ್ಪತಿಗೆ ಸಲಹೆ ನೀಡುತ್ತಾರೆ. ಬೃಹಸ್ಪತಿಯೂ ಅಂಗೀಕರಿಸುತ್ತಾನೆ.

ಆಧುನಿಕ ಕಾಲದ ವಿಚಾರಧಾರೆಯ ಆರಂಭ ಜುಹುವಿನಿಂದ ಆಗಿತ್ತು. ಸಮಾನ ಗುಣ, ನಡತೆ ಮತ್ತು ಅಭಿರುಚಿಯುಳ್ಳ ಹೆಣ್ಣು-ಗಂಡುಗಳ ಮಧ್ಯೆಯೇ ವಿವಾಹ ಸಂಬಂಧ ಏರ್ಪಡಬೇಕು. ಮದುವೆಗೆ ಮುನ್ನ ಗಂಡು ಹೆಣ್ಣುಗಳು ಪರಸ್ಪರ ಒಪ್ಪಿಕೊಳ್ಳಬೇಕು. ಮದುವೆಯ ನಂತರ ಗಂಡನು ಹೆಂಡತಿಯನ್ನು ಹಿಂಸಿಸುವುದು ಹಾಗೂ ತ್ಯಜಿಸುವುದು ಅನೈತಿಕ ಎಂದು ಅವಳು ಪ್ರತಿಪಾದಿಸಿದ್ದಾಳೆ.

ಯಜ್ಞವಿಜ್ಞಾನದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಇವಳು ಬೃಹಸ್ಪತಿಗೇ ಅದನ್ನು ಬೋಧಿಸಿದಳು. ಇದು ಅಂದಿನ ಕಾಲದ ಸ್ತ್ರೀಯರ ಉನ್ನತ ಸ್ಥಾನಮಾನವನ್ನೂ, ವಿದ್ಯಾಭ್ಯಾಸದ ಮಟ್ಟವನ್ನೂ ತಿಳಿಸಿಕೊಡುತ್ತದೆ.


ಮಹಾಬಲ ಭಟ್, ಗೋವಾ

Monday, March 13, 2017

ವೀರಯೋಧೆ ಇಂದ್ರಸೇನೆ:

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೪

ವೀರಯೋಧೆ ಇಂದ್ರಸೇನೆ:

ಋಗ್ವೇದದ ೧೦ ನೆಯ ಮಂಡಲದ ೧೦ನೆಯ ಸೂಕ್ತದಲ್ಲಿ ಉಲ್ಲೇಖವಾಗಿರುವ ಇನ್ನೊಬ್ಬಳು ವೀರಯೋಧೆ ಇಂದ್ರಸೇನೆ. ನಳಾಯನಿ ಹಾಗೂ ಮುದ್ಗಲಾನಿ ಎಂಬವು ಅವಳ ಇನ್ನೆರಡು ಹೆಸರುಗಳು. ವಿಖ್ಯಾತನಾದ ನಳಮಹಾರಾಜನ ಮಗಳು. ಅಶ್ವಹೃದಯ ವಿದ್ಯೆಯನ್ನು ಬಲ್ಲವನಾದ ನಳನಿಂದ ಸಾರಥ್ಯವಿದ್ಯೆಯನ್ನು ಅರಗಿಸಿಕೊಂಡಿದ್ದಳು. ಅಸ್ತ್ರ-ಶಸ್ತ್ರಗಳ ವಿದ್ಯೆಯಲ್ಲಿ ನಿಷ್ಣಾತಳಾಗಿದ್ದಳು. ಅವಳನ್ನು ಭರ್ಮ್ಯಶ್ವ ಭೂಪಾಲನ ಮಗನಾದ ಮುದ್ಗಲನಿಗೆ ಮದುವೆ ಮಾಡಿಕೊಡಲಾಗಿತ್ತು. ಅಪಾರ ಗೋ ಸಂಪತ್ತಿನ ಒಡೆಯನಾದ ಮದ್ಗಲನ ಗೋವುಗಳನ್ನು ಒಮ್ಮೆ ಕಳ್ಳರು ಅಪಹರಿಸಿದರು. ಅವರನ್ನು ಹಿಡಿಯುವುದಕ್ಕಾಗಿ ಮುದ್ಗಲ ಹೊರಟ. ಇಂದ್ರಸೇನೆಯೇ ಅವನ ಸಾರಥಿಯಾಗಿ ರಥವನ್ನು ನಡೆಸಿದಳು. ಕಳ್ಳರೊಡನೆ ಯುದ್ಧಮಾಡಬೇಕಾಗಿ ಬಂದಾಗ ಉತ್ತಮ ಸಾರಥ್ಯ ನಿರ್ವಹಣೆ ಮಾಡಿದ್ದಲ್ಲದೆ ರಾಜನಿಗೆ ಉತ್ತಮ ಸೇನಾಪತಿಯಾಗಿ ಶೌರ್ಯದಿಂದ ಹೋರಾಡಿದಳು.


ಮಹಾಬಲ ಭಟ್, ಗೋವಾ

ವೀರಾಂಗನಾ ವಿಶ್ಪಲಾ:

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೩

ವೀರಾಂಗನಾ ವಿಶ್ಪಲಾ:

ವೈದಿಕ ಕಾಲದ ಸ್ತ್ರೀಯರಲ್ಲಿ ಋಷಿಪತ್ನಿಯರು ಹಾಗೂ ಋಷಿಕನ್ಯಕೆಯರೇ ಹೆಚ್ಚು ಪ್ರಸಿದ್ಧರು. ಆದರೆ ಇಲ್ಲೊಬ್ಬಳು ಯುದ್ಧವಿಶಾರದೆಯಾದ ನಾರಿಯಿದ್ದಾಳೆ. ಅವಳೇ ವಿಶ್ಪಲಾ. ಋಗ್ವೇದದ ಪ್ರಥಮ ಮಂಡಲದ ೧೧೨,೧೧೬,೧೧೭,೧೧೮ ಹಾಗೂ ಹತ್ತನೆಯ ಮಂಡಲದ ೩೯ನೆಯ ಸೂಕ್ತಗಳಲ್ಲಿ ಇವಳ ಉಲ್ಲೇಖವಿದೆ. ಇವಳು ಖೇಲ ರಾಜನ ಮಹಾರಾಣಿಯಾಗಿದ್ದಳು. ವೇದಶಾಸ್ತ್ರಗಳಲ್ಲೂ, ಶಸ್ತ್ರಾಸ್ತ್ರ ವಿದ್ಯೆಯಲ್ಲೂ ಅವಳು ಪಾರಂಗತಳಾಗಿದ್ದಳು. ಒಮ್ಮೆ ಮಹಾರಾಜನು ಶತ್ರುಗಳೊಡನೆ ಯುದ್ಧ ಮಾಡಬೇಕಾಗಿ ಬಂದಾಗ ತಾನೂ ಕೂಡ ರಣಾಂಗಣಕ್ಕೆ ಹೋದಳು. ಶೂರತನದಿಂದ ಕಾದಾಡಿ ಶತ್ರುಗಳ ರುಂಡವನ್ನು ಚೆಂಡಾಡುತ್ತಿರುವಾಗ ಅವಳ ಕಾಲನ್ನು ಯಾರೋ ಕತ್ತರಿಸಿಬಿಟ್ಟರು. ವಿಶ್ಪಲೆಯು ದೇವ ವೈದ್ಯರಾದ ಅಶ್ವಿನೀದೇವತೆಗಳನ್ನು ಸ್ತುತಿಸಿದಾಗ ಅವರು ಪ್ರತ್ಯಕ್ಷರಾಗಿ ಕಬ್ಬಿಣದ ಕೃತಕ ಕಾಲನ್ನು ಜೋಡಿಸಿದರು (ಕೃತಕ ಕಾಲಿನ ಜೋಡಣೆಯ ಉಲ್ಲೇಖ ಋಗ್ವೇದದಲ್ಲಿಯೇ ಇರುವುದನ್ನು ಗಮನಿಸಿ. ಋಗ್ವೇದ ೧ – ೧೧೬ – ೧೫) ನಂತರ ಮತ್ತೆ ಅವಳು ರಣಾಂಗಣದಲ್ಲಿ ಹೋರಾಡಿ ಜಯವನ್ನು ತಂದುಕೊಟ್ಟಳು. ಸನಾತನ ಭಾರತದ ಪ್ರಥಮ ಯುದ್ಧಾಂಗನೆ ಈ ವಿಶ್ಪಲಾ.


ಮಹಾಬಲ ಭಟ್, ಗೋವಾ

Saturday, March 11, 2017

ಮೈತ್ರೇಯಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೨

ಮೈತ್ರೇಯಿ

ಯಾಜ್ಞವಲ್ಕ್ಯನನ್ನು ಕೆಣಕಿದ ಗಾರ್ಗಿಯ ಸೋದರಿಯ ಮಗಳು ಮೈತ್ರೇಯಿ. ವಿದೇಹರಾಜ ಜನಕನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಮಿತ್ರನೆಂಬವಳ ಪುತ್ರಿ ಇವಳು. ಚಿಕ್ಕ ವಯಸ್ಸಿನಲ್ಲಿಯೇ ಆಳವಾದ ಅಧ್ಯಯನ ಮಾಡಿ ಆಧ್ಯಾತ್ಮದತ್ತ ಒಲವು ಹೊಂದಿದ್ದ ಮೈತ್ರೇಯಿ ಯಾಜ್ಞವಲ್ಕ್ಯನ ಪಾಂಡಿತ್ಯವನ್ನು ನೋಡಿ ನಿಬ್ಬೆರಗಾದಳು. ತನ್ನ ಜ್ಞಾನದ ಹಸಿವನ್ನು ಇವನು ಮಾತ್ರ ಇಂಗಿಸಬಲ್ಲ ಎಂಬುದಾಗಿ ಯೋಚಿಸಿದಳು. ಅವನ ಈ ಜ್ಞಾನಸಂಪತ್ತಿನ ಉತ್ತರಾಧಿಕಾರಿ ತಾನಾಗಬೇಕೆಂಬ ಹಂಬಲದಿಂದ ತನ್ನನ್ನು ಮದುವೆಯಾಗಬೇಕೆಂದು ಯಾಜ್ಞವಲ್ಕ್ಯನನ್ನು ವಿನಂತಿಸಿಕೊಂಡಳು. ಕಾತ್ಯಾಯನಿಯ ಜೊತೆ ಸುಖಸಂಸಾರವನ್ನು ನಡೆಸಿಕೊಂಡಿದ್ದ ಯಾಜ್ಞವಲ್ಕ್ಯನಿಗೆ ಮತ್ತೊಂದು ಮದುವೆಯಾಗುವ ಮನಸ್ಸಿರಲಿಲ್ಲ. ಆದರೂ ಮೈತ್ರೇಯಿ ಇದು ಜ್ಞಾನಾರ್ಜನೆಗೆ ಮಾತ್ರ ಎಂದು ಅನುರೋಧಿಸಿದ್ದರಿಂದ ಒಪ್ಪಿಕೊಂಡ. ಬ್ರಹ್ಮಜ್ಞಾನಿಯ ಸಾಂಗತ್ಯದಲ್ಲಿ ಜೀವನದ ರಹಸ್ಯಗಳನ್ನು ಮೈತ್ರೇಯಿ ಅರಿತುಕೊಂಡಳು.

ಬ್ರಹ್ಮಚರ್ಯ, ಗೃಹಸ್ಥಾಶ್ರಮಗಳನ್ನು ಕಳೆದ ಯಾಜ್ಞವಲ್ಕ್ಯನಿಗೆ ಸಂಸಾರವನ್ನು ತ್ಯಜಿಸಿ ಸಂನ್ಯಾಸಿಯಾಗುವ ಬಯಕೆಯಾಯಿತು. ಜನಕನ ಆಸ್ಥಾನವಿದ್ವಾಂಸನಾಗಿದ್ದ ಅವನಲ್ಲಿ ಧನಕನಕಗೋಸಂಪತ್ತು ಹೇರಳವಾಗಿತ್ತು. ಆ ಲೌಕಿಕ ಸಂಪತ್ತನ್ನು ತನ್ನ ಪತ್ನಿಯರ ಜೀವನನಿರ್ವಹಣೆಗಾಗಿ ಪಾಲುಮಾಡಿಕೊಡಲು ಮುಂದಾದ. ಪತಿಯ ನಿರ್ಧಾರವನ್ನು ಸಾಧ್ವಿ ಕಾತ್ಯಾಯನಿ ಒಪ್ಪಿಕೊಂಡಳು. ಆದರೆ ಮೈತ್ರೇಯಿ ಯಾಜ್ಞವಲ್ಕ್ಯನನ್ನು ಕೇಳಿದಳು – ’ಈ ಸಂಪತ್ತಿಂದ ಆತ್ಮನನ್ನು ಅರಿತುಕೊಳ್ಳಲು ಸಾಧ್ಯವೇ? ಈ ಸಂಪತ್ತು ನಮಗೆ ಶಾಶ್ವತ ಆನಂದನನ್ನು ನೀಡುತ್ತದೆಯೇ?’ ಯಾಜ್ಞವಲ್ಕ್ಯ ’ಇಲ್ಲ’ ಎಂದುತ್ತರಿಸಿದ. ’ಹಾಗಾದರೆ ನನಗೆ ಈ ಸಂಪತ್ತಿನಲ್ಲಿ ಪಾಲು ಬೇಡ. ಎಲ್ಲವನ್ನೂ ಕಾತ್ಯಾಯನಿಯೇ ಇಟ್ಟುಕೊಳ್ಳಲಿ. ನನಗೆ ನಿಮ್ಮ ಆತ್ಮಾನುಭವದ ಜ್ಞಾನವನ್ನು ಕೊಡಿ’ ಎಂದು ಮೈತ್ರೇಯಿ ಬೇಡಿಕೊಂಡಳು. ಪ್ರಾಪಂಚಿಕ ವಸ್ತುಗಳ ಮೇಲೆ ಮೈತ್ರೇಯಿಗಿರುವ ತಿರಸ್ಕಾರವನ್ನೂ ಆಧ್ಯಾತ್ಮಜ್ಞಾನದೊಲವನ್ನೂ ಕಂಡು ಮೆಚ್ಚಿದ ಯಾಜ್ಞವಲ್ಕ್ಯ ಅವಳೊಂದಿಗೆ ವಾನಪ್ರಸ್ಥಾಶ್ರಮವನ್ನು ಕೈಗೊಂಡು ತನ್ನ ಸಕಲಜ್ಞಾನವನ್ನೂ ಅವಳಿಗೆ ನೀಡಿದ. ಬೃಹದಾರಣ್ಯಕೋಪನಿಷತ್ತಿನ ಎರಡನೆಯ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣ ಹಾಗೂ ನಾಲ್ಕನೆಯ ಅಧ್ಯಾಯದ ಐದನೆಯ ಬ್ರಾಹ್ಮಣದಲ್ಲಿ ಯಾಜ್ಞವಲ್ಕ್ಯ-ಮೈತ್ರೇಯಿ ಸಂವಾದ ಇದೆ.


ಮಹಾಬಲ ಭಟ್, ಗೋವಾ

Friday, March 10, 2017

ಗಾರ್ಗಿ ವಾಚಕ್ನವಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೧

ಗಾರ್ಗಿ ವಾಚಕ್ನವಿ

ವೇದಕಾಲದ ಬ್ರಹ್ಮವಾದಿನಿಯರಲ್ಲಿ ಅಗ್ರಗಣ್ಯಳು ಗಾರ್ಗಿ ವಾಚಕ್ನವಿ. ಗರ್ಗ ಗೋತ್ರದಲ್ಲಿ ಹುಟ್ಟಿದ್ದರಿಂದ ಗಾರ್ಗಿ ಎಂತಲೂ ವಚಕ್ನು ಮುನಿಯ ಮಗಳಾದ್ದರಿಂದ ವಾಚಕ್ನವಿ ಎಂತಲೂ ಅಭಿಧಾನವನ್ನು ಹೊಂದಿದ್ದಳು. ಸಕಲ ಶಾಸ್ತ್ರಪಾರಂಗತೆಯಾಗಿದ್ದ ಇವಳು ಕುಂಡಲಿನೀ ವಿದ್ಯೆಯನ್ನೂ ಕರಗತ ಮಾಡಿಕೊಂಡು ಆ ಕಾಲದ ಬ್ರಹ್ಮಜಿಜ್ಞಾಸು ಪಂಡಿತಮಂಡಳಿಯಲ್ಲಿ ಗೌರವಸ್ಥಾನವನ್ನು ಹೊಂದಿದ್ದಳು.

ವಿದೇಹ ರಾಜ್ಯದ ರಾಜರ್ಷಿ ಜನಕನು ತಾನು ಕೈಗೊಂಡ ’ಬಹುದಕ್ಷಿಣ’ ಎಂಬ ಯಜ್ಞದ ಅಂಗವಾಗಿ ಬ್ರಹ್ಮಸಂಸತ್ತನ್ನು ಏರ್ಪಡಿಸಿದ್ದ. ಕುರು-ಪಾಂಚಾಲದೇಶಗಳಿಂದ ವೇದಜ್ಞರಾದ ಬ್ರಾಹ್ಮಣರು ಅಲ್ಲಿಗೆ ಆಗಮಿಸಿದ್ದರು. ಆ ಎಲ್ಲ ಬ್ರಾಹ್ಮಣರಲ್ಲಿ ಶ್ರೇಷ್ಠ ಬ್ರಹ್ಮಿಷ್ಠ ಯಾರು ಎಂಬುದಾಗಿ ತಿಳಿದುಕೊಳ್ಳುವ ಬಯಕೆ ಜನಕನಿಗಾಯಿತು. ಅವನು ೧೦೦೦ ಗೋವುಗಳನ್ನು ಚಿನ್ನದಿಂದ ಶೃಂಗರಿಸಿ ಶ್ರೇಷ್ಠ ಬ್ರಹ್ಮಜ್ಞಾನಿಗೆ ಅವನ್ನು ಕೊಡುವುದಾಗಿ ಸಾರಿದನು. ಸಭೆಯಲ್ಲಿ ಉಪಸ್ಥಿತನಿದ್ದ ಯಾಜ್ಞವಲ್ಕ್ಯ ಆ ಗೋವುಗಳನ್ನು ತನ್ನ ಮನೆಗೆ ಹೊಡೆದುಕೊಂಡು ಹೋಗುವಂತೆ ಶಿಷ್ಯನಾದ ಸಾಮಶ್ರವನಿಗೆ ಆಜ್ಞಾಪಿಸಿದ. ಸಾಮಶ್ರವ ಹಾಗೇ ಮಾಡಲಾಗಿ ಅಲ್ಲಿ ಸೇರಿದ್ದ ಪಂಡಿತರೆಲ್ಲ ಕೆರಳಿದರು. ಯಾಜ್ಞವಲ್ಕ್ಯನ ಮೇಲೆ ತಮ್ಮ ಪ್ರಶ್ನೆಗಳ ಮೂಲಕ ಮುಗಿ ಬಿದ್ದರು. ಅಶ್ವಲ, ಕಹೋಲ, ಉದ್ದಾಲಕ ಮುಂತಾದ ಘಟಾನುಘಟಿಗಳೇ ಕೈಸೋತಾಗ ಧೈರ್ಯದಿಂದ ಎದ್ದುನಿಂತವಳು ಗಾರ್ಗಿ ವಾಚಕ್ನವಿ. ಬೃಹದಾರಣ್ಯಕೋಪನಿಷತ್ತಿನ ಮೂರನೆಯ ಅಧ್ಯಾಯದ ಆರನೆಯ ಬ್ರಾಹ್ಮಣದಲ್ಲಿ ಗಾರ್ಗಿಯ ಪ್ರಶ್ನೆಯ ಉಲ್ಲೇಖವಿದೆ. ’ಪೃಥ್ವಿಯು ನೀರಿನಿಂದ ವ್ಯಾಪ್ತವಾಗಿದ್ದರೆ ನೀರು ಯಾವುದರಿಂದ ವ್ಯಾಪ್ತವಾಗಿದೆ?’ ಎನ್ನುವುದು ಅವಳ ಮೊದಲ ಪ್ರಶ್ನೆ. ’ವಾಯುವಿನಿಂದ’ ಎಂಬ ಉತ್ತರ ಯಾಜ್ಞವಲ್ಕ್ಯನಿಂದ ಬಂತು. ವಾಯು ಯಾವುದರಿಂದ ವ್ಯಾಪ್ತವಾಗಿದೆ?’ ಎಂಬುದು ಗಾರ್ಗಿಯ ಮುಂದಿನ ಪ್ರಶ್ನೆ. ಹೀಗೆ ಯಾಜ್ಞವಲ್ಕ್ಯ ಉತ್ತರಕೊಡುತ್ತ ಹೋದಂತೆ ಗಾರ್ಗಿ ಪ್ರಶ್ನಿಸುತ್ತ ಹೋದಳು. ಕೊನೆಯಲ್ಲಿ ’ಬ್ರಹ್ಮಲೋಕ ಯಾವುದರಿಂದ ವ್ಯಾಪ್ತವಾಗಿದೆ?’ ಎಂದು ಪ್ರಶ್ನಿಸಿದಾಗ ’ಗಾರ್ಗಿ! ಅತಿ ಪ್ರಶ್ನೆಯನ್ನು ಮಾಡಬೇಡ. ನೀನು ಕೇಳಿದ ತತ್ತ್ವ ಪ್ರಶ್ನೆಯನ್ನು ಮೀರಿದ್ದು. ನಿನ್ನ ತಲೆ ಬಿದ್ದು ಹೋದೀತು’ ಎಂದು ಯಾಜ್ಞವಲ್ಕ್ಯ ಗುಡುಗಿದಾಗ ಗಾರ್ಗಿ ಸುಮ್ಮನಾದಳು. ಅವಳು ಸುಮ್ಮನಾದದ್ದು ಹೆದರಿಕೆಯಿಂದ ಅಲ್ಲ. ತಾನು ಕೇಳಿದ ಪ್ರಶ್ನೆಯ ಉತ್ತರ ಅತ್ಯಂತ ಗೂಢವಾದದ್ದು, ಸಾರ್ವಜನಿಕ ಸಭೆಯಲ್ಲಿ ಹೇಳಲಾರದ್ದು ಎಂಬುದರ ಅರಿವು ಗಾರ್ಗಿಗಿತ್ತು. ಸಭೆಯಲ್ಲಿರುವ ಪಂಡಿತರೆಲ್ಲ ಯಾಜ್ಞವಲ್ಕ್ಯನ ಪಾಂಡಿತ್ಯಪ್ರಭೆಯಿಂದ ತತ್ತರಿಸಿದಾಗ ಗಾರ್ಗಿ ಮತ್ತೆ ಎದ್ದು ಪ್ರಶ್ನೆಗಳ ತೀಕ್ಷ್ಣ ಬಾಣದಿಂದ ಯಾಜ್ಞವಲ್ಕ್ಯನನ್ನು ಮತ್ತೆ ತಿವಿಯುತ್ತಾಳೆ.

’ಯಾವುದು ದ್ಯುಲೋಕಕ್ಕಿಂತ ಮೇಲೆ, ಭೂಮಿಗಿಂತ ಕೆಳಗೆ, ಅವುಗಳ ಮಧ್ಯೆ ಭೂತ, ವರ್ತಮಾನ, ಭವಿಷ್ಯತ್ತಿನಲ್ಲಿ ಶಾಶ್ವತವಾಗಿ ಇರುವುದೋ ಅಂತಹ ಯಾವ ತತ್ತ್ವವು ವ್ಯಕ್ತವಾದ ಜಗತ್ತನ್ನು ಆವರಿಸಿದೆ?’ ಎಂಬುದು ಗಾರ್ಗಿ ಎಂತನೆಯ ಮಂಡಲದಲ್ಲಿ ಕೇಳಿದ ಒಂದು ಪ್ರಶ್ನೆ. ಅದಕ್ಕೆ ಯಾಜ್ಞವಲ್ಕ್ಯ ’ಅವ್ಯಕ್ತವಾದ ಆಕಾಶ’ ಎಂದುತ್ತರಿಸಿದ.’ಆಕಾಶ ಯಾವುದರಿಂದ ವ್ಯಾಪ್ತವಾಗಿದೆ?’ ಅವಳ ಮುಂದಿನ ಪ್ರಶ್ನೆ ಸಿದ್ಧವಾಗಿತ್ತು. ಅದಕ್ಕೆ ಉತ್ತರವಾಗಿ ಯಾಜ್ಞವಲ್ಕ್ಯ ಅಕ್ಷರಬ್ರಹ್ಮದ ಸವಿಸ್ತರ ವಿವರಣೆಯನ್ನು ಮಾಡುತ್ತಾನೆ. ಅವನ ಉತ್ತರದಿಂದ ಸಂತುಷ್ಟಳಾದ ಗಾರ್ಗಿ ಯಾಜ್ಞವಲ್ಕ್ಯನನ್ನು ಬ್ರಹ್ಮಜ್ಞಾನಿಯೆಂದು ಒಪ್ಪಿಕೊಳ್ಳುತ್ತಾಳೆ.

ಗಾರ್ಗಿ ಯಾಜ್ಞವಲ್ಕ್ಯನಿಂದ ವಾದದಲ್ಲಿ ಸೋತಿರಬಹುದು. ಆದರೆ ಅವನನ್ನು ತುಂಬಿದ ಸಭೆಯಲ್ಲಿ ಇಂತಹ ಗಹನವಾದ ವಿಚಾರದಲ್ಲಿ ತುಡುಕುವುದು ಸಾಮಾನ್ಯವಾದ ವಿಚಾರವಲ್ಲ. ವೇದಕಾಲದಲ್ಲಿ ಸ್ತ್ರೀಯರಿಗೆ ವಿದ್ಯಾಭ್ಯಾಸದ ಹಾಗೂ ಪ್ರಶ್ನಿಸುವ ಅಧಿಕಾರ ಇರಲಿಲ್ಲ ಎಂಬ ವಾದವನ್ನು ಹುಸಿಮಾಡುವ ಗಟ್ಟಿ ನಿದರ್ಶನವಾದ ಗಾರ್ಗಿಯು ವಿದ್ಯಾವಂತ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾಳೆ.


ಮಹಾಬಲ ಭಟ್, ಗೋವಾ

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...