ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೧೭
ಶಾಂಡಿಲಿ:
ಸತಿ ಶಾಂಡಿಲಿ ಅನಸೂಯೆಯ ಸಮಕಾಲೀನಳು. ಸಹನೆ, ನಿಷ್ಠೆ ಹಾಗೂ
ಪಾತಿವ್ರತ್ಯಕ್ಕೆ ಪ್ರಸಿದ್ಧಳು. ಅವಳ ಪತಿಯ ಹೆಸರು ಕೌಶಿಕನೆಂಬ ಮಹಾದುಷ್ಟ ಬ್ರಾಹ್ಮಣ. ವಿವಿಧ
ಚಟಗಳಿಗೆ ದಾಸನಾಗಿ ಕುಷ್ಠರೋಗಕ್ಕೆ ಒಳಗಾಗಿದ್ದ. ಶಾಂಡಿಲಿ ನಿಷ್ಠೆಯಿಂದ ಅವನ ಸೇವೆಯನ್ನು
ಮಾಡುತ್ತಿದ್ದಳು. ಆದರೆ ಅವನಿಗೆ ಪತ್ನಿಯ ಮೇಲೆ ಆದರವಾಗಲೀ ಪ್ರೀತಿಯಾಗಲೀ ಇರಲಿಲ್ಲ. ಸದಾ ಕಾಲ
ಅವಳಿಗೆ ಬಯ್ಯುತ್ತ, ಹಿಂಸಿಸುತ್ತಿದ್ದ. ಸಹನೆಯ ಮೂರ್ತಿಯಾಗಿದ್ದ ಶಾಂಡಿಲಿ ಅವನಿಗೆ ಎಂದೂ
ಎದುರಾಡುತ್ತಿರಲಿಲ್ಲ. ಒಮ್ಮೆ ಅವರ ಮನೆಯ ಮುಂದಿನ ದಾರಿಯಲ್ಲಿ ಹೋಗುತ್ತಿದ್ದ ವೇಶ್ಯೆಯೋರ್ವಳನ್ನು
ನೋಡಿ ಅವಳ ಮನೆಗೆ ತನ್ನನ್ನು ಕರೆದೊಯ್ಯುವಂತೆ ಪತ್ನಿಯನ್ನು ಪೀಡಿಸಿದ. ಪತಿಯ ಬಯಕೆಯನ್ನು
ಪೂರೈಸುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ ಸಾಧ್ವಿ ಶಾಂಡಿಲಿಯು ನಡೆಯಲಾರದ ಅವನನ್ನು ಹೊತ್ತು
ವೇಶ್ಯಾಗೃಹದೆಡೆಗೆ ನಡೆದಳು. ಅದೇ ದಾರಿಯಲ್ಲಿ ಮಾಂಡವ್ಯನೆಂಬ ಮುನಿಯನ್ನು ಕಳ್ಳನೆಂಬ
ಭ್ರಾಂತಿಯಿಂದ ಶೂಲಕ್ಕೇರಿಸಿದ್ದರು. ಕತ್ತಲೆಯಲ್ಲಿ ಕೌಶಿಕನ ಕಾಲು ಇನ್ನೂ ಜೀವಂತವಿದ್ದ ಅವನಿಗೆ
ತಗಲಿ ಅತೀವ ವೇದನೆಯುಂಟಾಯಿತು. ತಕ್ಷಣ ಶಾಪವಿತ್ತ – ’ನನ್ನ ವೇದನೆಗೆ ಕಾರಣನಾದವನು
ಸೂರ್ಯೋದಯದೊಳಗೆ ಸಾಯಲಿ.’ ಶಾಂಡಿಲಿ ಆಘಾತಕ್ಕೊಳಗಾದಳು. ಸಾಧ್ವಿಶಿರೋಮಣಿಯಾಗಿದ್ದ ಅವಳು
’ಸೂರ್ಯೋದಯವೇ ಆಗದಿರಲಿ’ ಎಂದು ಕಾಲಕ್ಕೇ ಸವಾಲು ಹಾಕಿದಳು. ಅನೇಕ ದಿನಗಳಾಗುವಷ್ಟು ಸಮಯ ಸರಿದರೂ
ನೇಸರು ಕಾಣಿಸಲೇ ಇಲ್ಲ. ಜಗತ್ತಿನಲ್ಲಿ ಅಲ್ಲೋಲಕಲ್ಲೋಲವುಂಟಾಯಿತು. ಸಾಧ್ವಿಯ ಸಾಂತ್ವನ ಸಾಧ್ವಿಯಿಂದಲೇ
ಸಾಧ್ಯವೆಂದರಿತ ದೇವತೆಗಳೂ, ಮಾನವಮುಖ್ಯರೂ ಅನಸೂಯಾದೇವಿಯ ಮರೆಹೊಕ್ಕರು. ಅವಳು ’ನಾನು ನಿನ್ನ
ಪತಿಯನ್ನು ಬದುಕಿಸಿಕೊಡುತ್ತೇನೆ’ ಎಂಬ ಭರವಸೆಯಿತ್ತ ಮೇಲೆ ತನ್ನ ಶಾಪವನ್ನು ಹಿಂಪಡೆದಳು. ದಿನಪನು
ಆಕಾಶದಲ್ಲಿ ಕಾಣಿಸಿದಾಕ್ಷಣ ಕೌಶಿಕ ಧರೆಗುರುಳಿದ. ಅನಸೂಯೆಯ ಶಕ್ತಿಯಿಂದ ಮತ್ತೆ ಎದ್ದು ನಿಂತ.
ಸನಾತನ ಕಾಲದಿಂದ ಸ್ತ್ರೀಯರು ಸಾಮಾನ್ಯದವರಾಗಿರಲಿಲ್ಲ. ಕಾಲಕ್ಕೂ
ಸವಾಲು ಹಾಕುವ ಶಕ್ತಿ ಅವರಿಗಿತ್ತು. ಬ್ರಹ್ಮವೈವರ್ತಕ ಪುರಾಣದಲ್ಲಿ ’ಸುರಾ: ಸರ್ವೇ ಚ ಮುನಯೋ
ಭೀತಾಸ್ತಾಭ್ಯಶ್ಚ ಸಂತತಮ್’ ಅವರನ್ನು ಎದುರು ಹಾಕಿಕೊಳ್ಳಲು ದೇವತೆಗಳೂ ಮುನಿಗಳೂ
ಹೆದರುತ್ತಿದ್ದರು ಎಂದು ಹೇಳಲಾಗಿದೆ.
ಮಹಾಬಲ
ಭಟ್, ಗೋವಾ
No comments:
Post a Comment