Thursday, March 16, 2017

ಸತ್ಯವಾದಿನಿ ಜಾಬಾಲಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೬

ಸತ್ಯವಾದಿನಿ ಜಾಬಾಲಾ

ಜಾಬಾಲಾ ಶೂದ್ರಕುಲದಲ್ಲಿ ಹುಟ್ಟಿ ಪರಗೃಹದಲ್ಲಿ ದಾಸಿಯಾಗಿ ಜೀವನ ಸವೆಸಿದ ಮಹಿಳೆ. ಹೀಗೆ ದಾಸ್ಯಜೀವನ ನಡೆಸುವಾಗ ಅನೇಕಪುರುಷರ ಉಪಭೋಗಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಅವಳಿಗೊದಗಿತ್ತು. ಆ ಮಾರ್ಗದಲ್ಲಿಯೇ ಗರ್ಭವತಿಯಾಗಿ ಪುತ್ರನೊಬ್ಬನನ್ನು ಅವಳು ಪಡೆದಳು. ದಾಸಿಯಾಗಿದ್ದರೂ ವಿವೇಕಮತಿಯೂ, ಸಂಸ್ಕಾರದ ಮಹತ್ತ್ವವನ್ನೂ ಅರಿತವಳೂ ಆಗಿದ್ದ ಜಾಬಾಲಾ ತನ್ನ ಮಗನಿಗೆ ಉತ್ತಮ ಸಂಸ್ಕಾರ ನೀಡಿದಳು. ಅವಳ ಮಗನ ಹೆಸರು ’ಸತ್ಯಕಾಮ’. ಜೀವನದ ಸತ್ಯವನ್ನು ಹುಡುಕುವುದರಲ್ಲಿ ಆಸಕ್ತಿಯುಳ್ಳವನೂ ಸತ್ಯಸಂಧನೂ ಆಗಿರಬೇಕೆಂಬ ಬಯಕೆಯಿಂದ ಮಗನಿಗೆ ಆ ಹೆಸರನ್ನಿತ್ತಿದ್ದಳು. ಒಟ್ಟಿನಲ್ಲಿ ಒಂಟಿ ಪಾಲಕ (Single parent) ಳಾಗಿ ಮಗನನ್ನು ಬೆಳೆಸಿದಳು.

ತಂದೆ ಯಾರೆಂದು ಗೊತ್ತಿಲ್ಲದ ಮಕ್ಕಳಿಗೆ ಮೊದಲ ಸವಾಲು ಎದುರಾಗುವುದು ಗುರುಕುಲವನ್ನು ಸೇರುವಾಗ. ಗುರುಕುಲವನ್ನು ಸೇರುವಾಗ ಗೋತ್ರವನ್ನು ತಿಳಿಸುವುದು ಅನಿವಾರ್ಯವಾಗಿತ್ತು. ತನ್ನ ಮಗ ವಿದ್ಯಾಸಂಪನ್ನನಾಗಬೇಕು ಎಂಬ ಹೆಬ್ಬಯಕೆಯಿಂದ ಜಾಬಾಲಾ ಹರಿದ್ರುಮ ಮಹರ್ಷಿಯ ಮಗನಾದ ಗೌತಮನಲ್ಲಿಗೆ ಅವನನ್ನು ಕಳಿಸಿದಳು. ಅಲ್ಲಿ ಅವನಿಗೆ ಗುರುಗಳು ಕೇಳಿದ ಮೊದಲ ಪ್ರಶ್ನೆ’ನಿನ್ನ ಹೆಸರೇನು?’. ಆ ಪ್ರಶ್ನೆಯನ್ನು ಉತ್ತರಿಸಿದ ಸತ್ಯಕಾಮನಿಗೆ ಎದುರಾದದ್ದು ಜಟಿಲವಾದ ಎರಡನೆಯ ಪ್ರಶ್ನೆ –’ನಿನ್ನ ಗೋತ್ರವಾವುದು?’. ಸತ್ಯಕಾಮನಿಗೆ ತಿಳಿದಿರಲಿಲ್ಲ. ಸುಳ್ಳನ್ನು ಹೇಳುವ ಅಭ್ಯಾಸವೇ ಅವನಿಗಿಲ್ಲವಾದ್ದರಿಂದ ’ತಿಳಿದಿಲ್ಲ ಗುರುಗಳೆ. ನಾನು ನೋಡಿದ್ದು ತಾಯಿಯನ್ನು ಮಾತ್ರ.’ ಎಂದ ಗುರುಗಳು ’ಹೋಗು ನಿನ್ನ ತಾಯಿಯನ್ನು ಕೇಳಿ ಬಾ’ ಎಂದಾಗ ಧಾವಿಸಿ ಮನೆಗೆ ಬಂದು ಕೇಳಿದ ’ಅಮ್ಮಾ! ನನ್ನ ತಂದೆ ಯಾರು? ಗೋತ್ರ ಯಾವುದು?’ ತಾಯಿ ಈ ಇಕ್ಕಟ್ಟಿನ ಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ. ’ಮಗನು ಗೋತ್ರವನ್ನು ಹೇಳದಿದ್ದರೆ ಅವನಿಗೆ ಗುರುಕುಲದಲ್ಲಿ ಪ್ರವೇಶ ಸಿಗಲಿಕ್ಕಿಲ್ಲ. ಅವನ ವಿದ್ಯಾಭಾಸದ ಅಭಿಲಾಷೆ ಕಮರಿ ಹೋದೀತು. ಹಾಗಂತ ಏನಾದರೊಂದು ಸುಳ್ಳು ಹೇಳಿ ಸಾಗಹಾಕಲೆ? ಇಷ್ಟು ದಿನ ಬೋಧಿಸಿದ ಸತ್ಯದ ವ್ರತವನ್ನು ತಾನೇ ಮುರಿದು ಹಾಕಲೆ’? ಎಂದು ಚಿಂತಿಸಿದಳು. ಕೊನೆಗೂ ಗೆದ್ದದ್ದು ಅವಳ ಸತ್ಯಶೀಲತೆಯೇ. ’ಏನಾದರಾಗಲಿ ಸತ್ಯವನ್ನೇ ಹೇಳುತ್ತೇನೆ’ ಎಂದು ನಿರ್ಧರಿಸಿದಳು. ’ಮಗನೇ, ನಾನು ದಾಸಿಯಾಗಿ ಪರರ ಮನೆಯಲ್ಲಿ ಕೆಲಸ ಮಾಡುವಾಗ ಹುಟ್ಟಿದವನು ನೀನು. ಹಾಗಾಗಿ ನಿನ್ನ ತಂದೆ ಯಾರೆಂದು ನನಗೂ ಗೊತ್ತಿಲ್ಲ. ನಾನು ಜಾಬಾಲಾ. ಅದೇ ನಿನ್ನ ಗೋತ್ರವಾಗಲಿ. ನಿನ್ನ ಹೆಸರನ್ನು ಸತ್ಯಕಾಮ ಜಾಬಾಲಾ ಎಂದು ಹೇಳು’ ಎಂದಳು. ಸತ್ಯಕಾಮ ಗುರುಕುಲಕ್ಕೆ ತೆರಳಿ ಅದೇ ರೀತಿ ಹೇಳಿದಾಗ ಗೌತಮ ಋಷಿಗೆ ಅವನ ಮುಖದಲ್ಲಿ ಸತ್ಯದ ತೇಜಸ್ಸು ಗೋಚರಿಸಿತು. ’ನೀನು ದಾಸಿಯ ಪುತ್ರನೇ ಆಗಿದ್ದರೂ ಆಚರಣೆಯಲ್ಲಿ ಬ್ರಾಹ್ಮಣನೇ ಆಗಿರುವೆ’ ಎಂದು ಹೇಳಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಮುಂದೆ ಸತ್ಯಕಾಮ ಸಕಲವಿದ್ಯಾಪಾರಂಗತನಾಗಿ ತನ್ನದೇ ಗುರುಕುಲವನ್ನು ಸ್ಥಾಪಿಸಿದ.

ವಿಷಮಪರಿಸ್ಥಿತಿಯ ಮಧ್ಯೆಯೂ ಮಗನನ್ನು ಸುಶೀಲನನ್ನಾಗಿ, ಸತ್ಯವಂತನನ್ನಾಗಿ, ವಿದ್ಯಾವಂತನನ್ನಾಗಿ ಬೆಳೆಸಿದ ಜಾಬಾಲಾ ಎಲ್ಲ ತಾಯಂದಿರಿಗೆ ಮಾದರಿಯಾಗಿ ನಿಲ್ಲುತ್ತಾಳೆ. ಸತ್ಯಕಾಮ ತನ್ನ ಹೆಸರಿನೊಂದಿಗೆ ತಾಯಿಯ ಹೆಸರನ್ನು ಸೇರಿಸಿಕೊಂಡ ಮೊದಲ ಮಗ ಎನ್ನಬಹುದು.


ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...