Wednesday, March 15, 2017

ಚಿಂತನಶೀಲೆ ಜುಹೂ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೫

ಚಿಂತನಶೀಲೆ ಜುಹೂ:

ವೇದದೃಷ್ಟಾರ ಋಷಿಕೆಗಳಲ್ಲಿ ಅನ್ಯತಮಳು ಜುಹು. ಅವಳು ಬ್ರಹ್ಮನ ಪುತ್ರಿಯೆಂದೂ ದೇವಗುರು ಬೃಹಸ್ಪತಿಯ ಪತ್ನಿ ಎಂದೂ ಅನಂತರದ ಗ್ರಂಥಗಳಲ್ಲಿ ಉಲ್ಲೇಖವಿದೆ. ಋಗ್ವೇದದ ೧೦ ನೆಯ ಮಂಡಲದ ೧೦೯ ನೆಯ ಸೂಕ್ತದ ಋಷಿಕೆ ಇವಳು. ಸರ್ವಶಾಸ್ತ್ರ ಪಾರಂಗತೆಯೂ ಬ್ರಹ್ಮಜ್ಞಾನಿಯೂ ಆದ ಇವಳು ಸೋಮನಿಂದ ಅಪಹರಿಸಲ್ಪಟ್ಟು ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಇದನ್ನು ತಿಳಿದ ವರುಣಾದಿಗಳು ಅವಳನ್ನು ಮರಳಿ ತಂದು ಬೃಹಸ್ಪತಿಗೆ ಒಪ್ಪಿಸುತ್ತಾರೆ. ಪತಿತೆಯಾದ ಅವಳನ್ನು ಗಂಡ ಹಾಗೂ ಸಮಾಜ ತಿರಸ್ಕರಿಸಿರಬಹುದು ಎಂದು ಊಹಿಸಿದರೆ ಅದು ತಪ್ಪು. ಈ ಪ್ರಕರಣದಲ್ಲಿ ಅವಳ ತಪ್ಪಿಲ್ಲವೆಂದು ಅರಿತ ಸಪ್ತರ್ಷಿಗಳು ನಿರ್ದೋಷಿಯಾದ ಅವಳನ್ನು ಸ್ವೀಕರಿಸುವಂತೆ ಬೃಹಸ್ಪತಿಗೆ ಸಲಹೆ ನೀಡುತ್ತಾರೆ. ಬೃಹಸ್ಪತಿಯೂ ಅಂಗೀಕರಿಸುತ್ತಾನೆ.

ಆಧುನಿಕ ಕಾಲದ ವಿಚಾರಧಾರೆಯ ಆರಂಭ ಜುಹುವಿನಿಂದ ಆಗಿತ್ತು. ಸಮಾನ ಗುಣ, ನಡತೆ ಮತ್ತು ಅಭಿರುಚಿಯುಳ್ಳ ಹೆಣ್ಣು-ಗಂಡುಗಳ ಮಧ್ಯೆಯೇ ವಿವಾಹ ಸಂಬಂಧ ಏರ್ಪಡಬೇಕು. ಮದುವೆಗೆ ಮುನ್ನ ಗಂಡು ಹೆಣ್ಣುಗಳು ಪರಸ್ಪರ ಒಪ್ಪಿಕೊಳ್ಳಬೇಕು. ಮದುವೆಯ ನಂತರ ಗಂಡನು ಹೆಂಡತಿಯನ್ನು ಹಿಂಸಿಸುವುದು ಹಾಗೂ ತ್ಯಜಿಸುವುದು ಅನೈತಿಕ ಎಂದು ಅವಳು ಪ್ರತಿಪಾದಿಸಿದ್ದಾಳೆ.

ಯಜ್ಞವಿಜ್ಞಾನದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಇವಳು ಬೃಹಸ್ಪತಿಗೇ ಅದನ್ನು ಬೋಧಿಸಿದಳು. ಇದು ಅಂದಿನ ಕಾಲದ ಸ್ತ್ರೀಯರ ಉನ್ನತ ಸ್ಥಾನಮಾನವನ್ನೂ, ವಿದ್ಯಾಭ್ಯಾಸದ ಮಟ್ಟವನ್ನೂ ತಿಳಿಸಿಕೊಡುತ್ತದೆ.


ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...