Sunday, March 19, 2017

ಮಹಾರಾಣಿ ಶಶೀಯಸೀ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೮

ಮಹಾರಾಣಿ ಶಶೀಯಸೀ

ಋಗ್ವೇದದಲ್ಲಿ ವರ್ಣಿಸಿರುವ ಧೀರ ನಾರಿಯರಲ್ಲಿ ಮಹಾರಾಣಿ ಶಶೀಯಸೀ ಒಬ್ಬಳು. ಸಮಾಜಸುಧಾರಕ ಮಹಿಳೆಯರಿಗೆ ಇವಳು ಆದರ್ಶ. ಶ್ಯಾವಾಶ್ವನೆಂಬ ಋಷಿಯಿಂದ ಪ್ರಣೀತವಾದ ಐದನೆಯ ಮಂಡಲದ ೬೧ನೇ ಸೂಕ್ತದಲ್ಲಿ ಇವಳ ವರ್ಣನೆಯಿದೆ. ಇವಳ ಪತಿ ತರಂತ ಮಹಾರಾಜ ವ್ಯಸನಗಳ ದಾಸನಾಗಿ ರಾಜ್ಯಭಾರವನ್ನು ಅಲಕ್ಷಿಸಿದ್ದ. ಜನರಿಗೆ ಶಿಕ್ಷಣ ಸರಿಯಾಗಿಲ್ಲದೆ ಸಮಾಜದಲ್ಲಿ ಅಜ್ಞಾನ, ದಾರಿದ್ರ್ಯಗಳು ತಾಂಡವವಾಡುತ್ತಿದ್ದವು. ಕೊಲೆ ಸುಲಿಗೆ ಮೊದಲಾದ ಸಾಮಾಜಿಕ ಪಿಡುಗುಗಳು ಹೆಚ್ಚಾಗಿದ್ದವು. ರಾಜ್ಯದ ಆದಾಯವೆಲ್ಲ ರಾಜನ ವಿಲಾಸಕ್ಕೇ ವ್ಯಯವಾಗುತ್ತಿತ್ತು. ಉದಾರಗುಣಸಂಪನ್ನಳೂ ಮಾನವತಾವಾದಿಯೂ ಆಗಿದ್ದ ಶಶೀಯಸಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದಳು. ಮರುತ್ತುಗಳನ್ನು ಕರೆದು ಜನರಿಗೆ ವಿದ್ಯಾಭ್ಯಾಸವನ್ನು ಮಾಡಿಸುವ ಹೊಣೆಹೊರಿಸಿದಳು. ಜನರ ಸಂಘಟನೆಯನ್ನು ಮಾಡಿ ಅರಿವು ಮೂಡಿಸಲು ಪ್ರಯತ್ನಿಸಿದಳು. ಶ್ಯಾವಾಶ್ವನೆಂಬ ನಿರ್ಧನಯುವಕ ಮರುತ್ತುಗಳಿಂದ ಶಿಕ್ಷಣವನ್ನು ಪಡೆದು ರಾಜ್ಯಾದ್ಯಂತ ಮಹಾರಾಣಿ ನಡೆಸಿದ್ದ ಶಿಕ್ಷಣಕ್ರಾಂತಿಗೆ ಹೆಗಲುಕೊಟ್ಟ. ತರಂತ ಇದನ್ನೆಲ್ಲ ವಿರೋಧಿಸಿದರೂ ಜಾಗ್ರತರಾದ ಪ್ರಜೆಗಳು ದಂಗೆಯೇಳುವ ಭಯವಿದ್ದುದರಿಂದ ಸುಮ್ಮನಾದ. ಶಶೀಯಸೀ ರಾಜ್ಯಭಾರವನ್ನು ತನ್ನ ಹತೋಟಿಗೆ ತಂದುಕೊಂಡು ಪ್ರಜೆಗಳು ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸಿದಳು. ಶ್ಯಾವಾಶ್ವನಿಗೂ ಅಪಾರವಾದ ಗೋಸಂಪತ್ತನ್ನು ದಾನಮಾಡಿದಳು. ದಾರ್ಭ್ಯನೆಂಬವ ಕುಮಾರಿಯನ್ನು ಶ್ಯಾವಾಶ್ವ ಪ್ರೀತಿಸುತ್ತಿದ್ದ. ಆದರೆ ದಾರ್ಭ್ಯನಿಗೆ ಅದು ಮನಸ್ಸಿರಲಿಲ್ಲ. ಶಶೀಯಸಿಯೇ ಮುಂದೆ ನಿಂತು ದಾರ್ಭ್ಯನನ್ನು ಓಲೈಸಿ ಮದುವೆ ಮಾಡಿಸಿದಳು. ಸುಪ್ರೀತನಾದ ಶ್ಯಾವಾಶ್ವ ತನ್ನ ಸೂಕ್ತದಲ್ಲಿ ಅವಳ ದಾನಶೀಲತೆಯನ್ನೂ ರಾಜ್ಯಭಾರ ದಕ್ಷತೆಯನ್ನೂ ಪ್ರಶಂಸಿಸಿದ್ದಾನೆ.


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...