Monday, March 20, 2017

ಮದಾಲಸಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೦

ಮದಾಲಸಾ

ವಿಶ್ವಾವಸು ಮಹಾರಾಜನ ಮಗಳು ಮದಾಲಸಾ ಸರ್ವವಿದ್ಯಾಸಂಪನ್ನೆಯಾದ ಕನ್ಯೆಯಾಗಿದ್ದಳು. ವಿವಾಹಬಂಧನಕ್ಕೆ ಒಳಗಾಗದೆ ಸ್ವತಂತ್ರವಾಗಿ ಜ್ಞಾನ ವಿಜ್ಞಾನಗಳ ಅನುಸಂಧಾನವನ್ನು ಮಾಡಬೇಕೆಂಬ ಇಂಗಿತ ಅವಳಿಗಿತ್ತು. ತಾನು ಬ್ರಹ್ಮವಾದಿನಿಯಾಗಬೇಕು ಎಂಬ ಪ್ರಬಲ ಇಚ್ಛೆ ಅವಳಿಗಿತ್ತು. ಆ ಸಾಮರ್ಥ್ಯವೂ ಕೂಡ ಅವಳಿಗಿತ್ತು. ಪುರುಷನು ತನ್ನ ಪತ್ನಿಯು ತನ್ನ ಇಚ್ಛೆಯಂತೆ ನಡೆಯಬೇಕೆಂದು ಬಯಸುವುದು ಅವಳಿಗೆ ಇಷ್ಟವಿರಲಿಲ್ಲ. ಸುದೈವ ವಶದಿಂದ ಶತ್ರುಜಿತ್ ಮಹಾರಾಜನ ಮಗ ಋತಧ್ವಜಕುಮಾರ ಗೃಹಸ್ಥಾಶ್ರಮ ಪ್ರಯೋಗಶಾಲೆಯಲ್ಲಿ ತಾನು ತನ್ನ ಮಡದಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಾಗಿ ಮುಂದೆ ಬಂದ. ಮದಾಲಸಾ ಅವನ ಪ್ರಸ್ತಾಪವನ್ನು ಸ್ವೀಕರಿಸಿದಳು. ಭಾವೀ ಸಂತತಿಯನ್ನು ತನ್ನಿಚ್ಛೆಯಂತೆ ಬೆಳೆಸುವ ಅನುಮತಿಯನ್ನು ಮೊದಲೇ ಪಡೆದುಕೊಂಡಳು.
ಕಾಲಕ್ರಮೇಣ ಮದಾಲಸಾ ವಿಕ್ರಾಂತ, ಸುಬಾಹು, ಶತ್ರುಮರ್ದನ ಎಂಬ ಮೂವರು ಗಂಡುಮಕ್ಕಳಿಗೆ ತಾಯಿಯಾದಳು. ರಾಜನು ಮಕ್ಕಳಿಗೆ ಕ್ಷತ್ರಿಯೋಚಿತ ನಾಮಕರಣವನ್ನು ಮಾಡುತ್ತಿರುವಾಗ ಅವಳು ಮುಸಿ ಮುಸಿ ನಗುತ್ತಿದ್ದಳು.ರಾಜನು ಕಾರಣವನ್ನು ಕೇಳಿದಾಗ ’ವ್ಯಕ್ತಿಗಳು ತಮ್ಮ ಹೆಸರಿನಂತೆಯೇ ಇರಬೇಕೆಂದೇನೂ ಇಲ್ಲ’ ಎಂದು ಉತ್ತರಿಸಿದಳು. ಬ್ರಹ್ಮಜ್ಞಾನಿಯಾದ ಅವಳು ಮಕ್ಕಳಿಗೆ ಜೋಗುಳ ಹಾಡುವಾಗ ಕೂಡ ಬ್ರಹ್ಮತತ್ತ್ವಯುತ ಹಾಡನ್ನೇ ಹಾಡುತ್ತಿದ್ದಳು.

ಶುದ್ಧೋಸಿ ಬುದ್ಧೋಸಿ ನಿರಂಜನೋಸಿ
ಸಂಸಾರಮಾಯಾಪರಿವರ್ಜಿತೋಸಿ |
ಸಂಸಾರಸ್ವಪ್ನಂ ತ್ಯಜ ಮೋಹನಿದ್ರಾಂ
ನ ಜನ್ಮಮೃತ್ಯೂ ತತ್ಸತ್ಸ್ವರೂಪೇ ||

ಶುದ್ಧನು ನೀನು, ಬುದ್ಧನು ನೀನು, ನಿರಂಜನರೂಪನು ನೀನು. ಸಂಸಾರಮಾಯೆಯಿಂದ ಮುಕ್ತನು ನೀನು. ಸಂಸಾರ ಸ್ವಪ್ನವನು, ಮೋಹನಿದ್ರೆಯನು ಬಿಡು. ಸತ್ ಸ್ವರೂಪಕ್ಕೆ ಜನ್ಮಮೃತ್ಯುಗಳಿಲ್ಲ.

ಇಂತಹ ತತ್ತ್ವವನ್ನೇ ಕೇಳುತ್ತ ಬೆಳೆದ ಮಕ್ಕಳು ತಾಯಿಯಂತೆ ವೈರಾಗ್ಯಶಾಲಿಗಳಾದರು. ಇದನ್ನೆಲ್ಲ ನೋಡುತ್ತಿದ್ದ ಋತಧ್ವಜನಿಗೆ ಚಿಂತೆಯಾಯಿತು. ಎಲ್ಲ ಮಕ್ಕಳೂ ಹೀಗೆ ಸಂನ್ಯಾಸಿಗಳಾದರೆ ವಂಶ ಮುಂದುವರಿಯುವುದಾದರೂ ಹೇಗೆ? ಹಾಗಾಗಿ ನಾಲ್ಕನೆಯ ಮಗನಿಗೆ ವೈರಾಗ್ಯಬೋಧನೆ ಮಾಡದಂತೆ ವಿನಂತಿಸಿಕೊಂಡ. ಒಪ್ಪಿಕೊಂಡ ಮದಾಲಸಾ ಅಲರ್ಕ ನೆಂಬ ಹೆಸರಿನ ನಾಲ್ಕನೆಯ ಮಗನಿಗೆ ವೀರಗೀತೆಗಳ ಜೋಗುಳವನ್ನು ಹಾಡಿದಳು. ರಾಜನೀತಿಯನ್ನು ಬೋಧಿಸಿದಳು. ಯುದ್ಧವಿದ್ಯೆಯನ್ನು ಕಲಿಸಿದಳು. ಸಂಸಾರವನ್ನು ನಿರ್ವಹಿಸಿ ತದನಂತರ ವೈರಾಗ್ಯ ಹೊಂದುವಂತೆ ಬೋಧಿಸಿದಳು. ಅವನು ಮುಂದೆ ಅವಳ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿದ.
ಧ್ಯೇಯನಿಷ್ಠತೆ, ಆತ್ಮವಿಶ್ವಾಸ, ಸ್ವಾಭಿಮಾನಗಳ ಮೂರ್ತರೂಪವಾದ ಮದಾಲಸಾ ಸಾಧನೆಯ ಪಥದಲ್ಲಿರುವ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾಳೆ.

ಮಹಾಬಲ ಭಟ್, ಗೋವಾ

1 comment:

Akshay said...

ಮದಾಲಸಾ ಹಾಡಿದ ಸಂಪೂರ್ಣ ಜೋಗುಳ (ಶ್ಲೋಕಗಳು) ಸಿಗಬಹುದೇ?

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...