Tuesday, March 21, 2017

ಇತರಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೧

ಇತರಾ

ಹಾರೀತ ವಂಶದ ಮಾಂಡುಕೀ ಎಂಬ ಋಷಿಯ ಪತ್ನಿಯಾಗಿದ್ದಳು ಇತರಾ. ಅವಳು ಅಷ್ಟೇನೂ ಅಧ್ಯಯನ ಮಾಡದ ಮುಗ್ಧೆಯಾಗಿದ್ದಳು. ಆದರೂ ಗೃಹಸಂಸ್ಕಾರಾದಿ ವಿಷಯವನ್ನು ಚೆನ್ನಾಗಿಯೇ ತಿಳಿದಿದ್ದಳು. ಗೃಹಿಣಿಯಾಗಿ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು. ಗಂಡ-ಹೆಂಡತಿ ಪರಸ್ಪರ ಅರಿತುಕೊಂಡು ಸುಖಜೀವನವನ್ನು ನಡೆಸುತ್ತಿದ್ದರು. ಅವರಿಗೆ ಹುಟ್ಟಿದ ಒಬ್ಬನೇ ಮಗನಿಗೆ ಮಹೀದಾಸ ಎಂದು ಹೆಸರಿಟ್ಟಿದ್ದರು. ಮಹೀದಾಸ ಯಾವಾಗಲೂ ಮೌನವಾಗಿರುತ್ತಿದ್ದ. ಉಪನೀತನಾದರೂ ಅವನ ಬಾಯಿಂದ ’ಓಂ ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ ಮಂತ್ರವನ್ನು ಬಿಟ್ಟರೆ ಮತ್ತೇನೂ ಹೊರಬರುತ್ತಿರಲಿಲ್ಲ. ಹಾಗಾಗಿ ಯಾವುದೇ ರೀತಿಯ ಅಧ್ಯಯನ ನಡೆಯಲಿಲ್ಲ. ಮಾಂಡುಕಿ ಮುನಿಗೆ ಪುತ್ರನ ಮೇಲೆ ಜುಗುಪ್ಸೆ ಮೂಡಿತು. ಅವನನ್ನು ಹೆತ್ತ ಇತರಾಳ ವಿಷಯದಲ್ಲೂ ಅನಾದರವನ್ನು ತೋರಲಾರಂಭಿಸಿದ. ಇತರಾ ತನ್ನ ಮಗನಿಗೆ ಸಂಸ್ಕಾರ ಕೊಡುವುದನ್ನು ತಪ್ಪಿಸಲಿಲ್ಲ. ಮಾಂಡೂಕಿಯು ಕಾಲಕ್ರಮದಲ್ಲಿ ಪಿಂಗಾ ಎನ್ನುವ ಇನ್ನೊಬ್ಬ ಮಹಿಳೆಯನ್ನು ಮದುವೆಯಾದ. ಅವಳಲ್ಲಿ ಹುಟ್ಟಿದ ನಾಲ್ಕು ಮಂದಿ ಗಂಡುಮಕ್ಕಳು ವೇದವಿದ್ಯಾ ಸಂಪನ್ನರಾದರು. ಇತರಾ ಹಾಗೂ ಮಹೀದಾಸನ ವಿಷಯದಲ್ಲಿ ಅವನ ಅನಾದರ ಹೆಚ್ಚಾಯಿತು. ಅವಮಾನವನ್ನು ತಡೆಯಲಾರದೆ ಇಬ್ಬರೂ ಮನೆಯನ್ನು ಬಿಟ್ಟು ಹೊರಟರು.

ಸದಾ ಕಾಲ ದ್ವಾದಶಾಕ್ಷರಿ ಮಂತ್ರವನ್ನು ಪಠಿಸುತ್ತಿದ್ದ ಮಹೀದಾಸನಿಗೆ ವಿಷ್ಣುವಿನ ಅನುಗ್ರಹವಾಯಿತು. ಗುರುಕುಲವನ್ನು ಸೇರಿ ಅವನು ವೇದವಿದ್ಯಾ ಸಂಪನ್ನನಾದ. ಗುರುವಿನ ಮಾರ್ಗದರ್ಶನದಲ್ಲಿ ಋಗ್ವೇದ ಭಾಷ್ಯವನ್ನು ಬರೆದ. ಕರ್ಮಕಾಂಡವನ್ನು ಬೋಧಿಸುವ ’ಬ್ರಾಹ್ಮಣ’ ಗ್ರಂಥವನ್ನು ರಚಿಸಿದ. ಅದನ್ನು ಆಧಾರವಾಗಿಟ್ಟುಕೊಂಡು ಹರಿಮೇಧ್ಯ ರಾಜನಿಂದ ಯಜ್ಞವನ್ನು ಮಾಡಿಸಿದ. ಯಜ್ಞದ ಕೊನೆಯಲ್ಲಿ ರಾಜ ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ.

ಮಹೀದಾಸನ ಕೃತಿಯನ್ನು ಜನರು ’ಮಹೀದಾಸ ಬ್ರಾಹ್ಮಣ’ ಎಂದು ಕರೆಯ ತೊಡಗಿದರು. ಆಗ ಮಹೀದಾಸನೆಂದ ’ಪ್ರತಿಕೂಲ ಪರಿಸ್ಥಿತಿಯಲ್ಲೂ ನನ್ನ ಬೆಂಬಲವಾಗಿ ನಿಂತು, ಪತಿಯನ್ನು ವಿರೋಧಿಸಿಯೂ ನನ್ನನ್ನು ಸಂಸ್ಕಾರವಂತನಾಗಿ ಬೆಳೆಸಿದ ನನ್ನ ಮಾತೆಗೆ ಗೌರವ ಸಿಗಲಿ. ನಾನು ಇತರಾಳ ಮಗನಾದ್ದರಿಂದ ಈ ಕೃತಿ ’ಐತರೇಯ ಬ್ರಾಹ್ಮಣ’ ಎಂದು ಕರೆಯಲ್ಪಡಲಿ’ ಎಂದ. ಮುಂದೆ ಈ ಕೃತಿ ಐತರೇಯ ಬ್ರಾಹ್ಮಣ, ಐತರೇಯ ಆರಣ್ಯಕ ಹಾಗೂ ಐತರೇಯ ಉಪನಿಷತ್ತು ಎಂದು ಮೂರು ಭಾಗವಾಗಿ ಪ್ರಸಿದ್ಧವಾಯಿತು. ಸ್ವಾಭಿಮಾನಿ, ತ್ಯಾಗಮಯಿ ಹಾಗೂ ವಾತ್ಸಲ್ಯಮಯಿ ತಾಯಿಗೆ ತಕ್ಕ ಗೌರವ ದೊರೆಯಿತು. ಇತರಾಳ ಹೆಸರು ಅಜರಾಮರವಾಯಿತು.


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...