Tuesday, March 21, 2017

ಶಚೀ ಪೌಲೋಮಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೯

ಶಚೀ ಪೌಲೋಮಿ

ಇವಳೊಬ್ಬಳು ಸ್ವಾಭಿಮಾನಿ ಋಷಿಕೆ. ಇವಳಿಂದ ಪ್ರಣೀತವಾದ ಶಚೀದೇವಿಯ ಕುರಿತಾದ ಋಗ್ವೇದ ಸೂಕ್ತದಲ್ಲಿ (೧೦ಮಂಡಲ,೧೫೯ಸೂಕ್ತ) ಅವಳ ಆತ್ಮಗೌರವ, ಜೀವನೋತ್ಸಾಹ, ಆತ್ಮವಿಶ್ವಾಸ, ತನ್ನ ಸಾಮರ್ಥ್ಯದ ಮೇಲೆ ಇರುವ ನಂಬಿಕೆ ಇವು ತುಂಬಿ ತುಳುಕುತ್ತಿವೆ. ’ಅಹಂ ಕೇತುರಹಂ ಮೂರ್ಧಾ ಅಹಮುಗ್ರಾ ವಿವಾಚನೀ’ – ನಾನು ಮನೆಯ ಪತಾಕೆ, ನಾನು ಮನೆಯ ತಲೆ(ಮುಖ್ಯಸ್ಥೆ-ಬುದ್ಧಿವಂತೆ) ನಾನು ಅನ್ಯಾಯದ ವಿರುದ್ಧ ಉಗ್ರಳು. ನಾನು ವಿವೇಚನ ಶಕ್ತಿಯುಳ್ಳವಳು. ನನ್ನ ನಿರ್ಧಾರವನ್ನು ನನ್ನ ಪತಿ ಬೆಂಬಲಿಸುತ್ತಾನೆ ಎಂದ ಅವಳ ಹಮ್ಮಿಗೆ ಇನ್ನೇನು ಸಾಕ್ಷಿ ಬೇಕು.

ಗಂಡು ಮಕ್ಕಳು ಒಳ್ಳೆಯವರೇ. ಅದರೆ ಹೆಣ್ಣುಮಕ್ಕಳೇನೂ ಕಡಿಮೆಯಲ್ಲ ಎಂದು ಅವಳು ಈ ಸೂಕ್ತದಲ್ಲಿ ಸ್ಪಷ್ಟವಾಗಿ ಹೇಳಿದ್ದಾಳೆ. ’ಮಮ ಪುತ್ರಾ: ಶತ್ರುಹಣೋಥೋ ಮಮ ದುಹಿತಾ ವಿರಾಟ್’ – ನನ್ನ ಗಂಡು ಮಕ್ಕಳು ಶತ್ರು ಸಂಹಾರಕರು. ನನ್ನ ಹೆಣ್ಣು ಮಕಳು ವಿರಾಟ್ ಸ್ವರೂಪದವರು. ನಾನು ಶತ್ರುವನ್ನು ಗೆದ್ದವಳು ಹಾಗಾಗಿ ನನ್ನ ಪತಿಯೂ ನನ್ನನ್ನು ಗೌರವಿಸುತ್ತಾನೆ ಎಂದು ಅವಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ತ್ಯಾಗ, ಶಾಂತಿ, ಸಹನೆಗಳು ಹೆಣ್ಣಿನ ಹುಟ್ಟುಗುಣಗಳೇ ಆಗಿದ್ದರೂ ಅವು ದುರುಪಯೋಗಕ್ಕೆ ಒಳಗಾಗಬಾರದು ಎಂಬುದು ಅವಳ ಆಶಯ. ಹೆಣ್ಣು ಯಾವಾಗಲು ತಗ್ಗಿ ಬಗ್ಗಿಯೇ ನಡೆಯಬೇಕಿಲ್ಲ. ತಲೆ ಎತ್ತಿ ನಡೆಯಬಹುದು ಎಂದು ಅವಳು ಬಲವಾಗಿ ಪ್ರತಿಪಾದಿಸಿದ್ದಾಳೆ.


ಮಹಿಳೆಯರ ಸ್ವಾಭಿಮಾನವನ್ನು ಜಾಗ್ರತಗೊಳಿಸಿದ ಮೊದಲ ನಾರಿ ಎಂಬ ಬಿರುದನ್ನು ಶಚೀ ಪೌಲೋಮಿಗೆ ಕೊಡಬಹುದು. ವಿವಾಹ ಸಮಯದಲ್ಲಿ ಈ ಸೂಕ್ತವನ್ನು ವಧುವು ಪಠಿಸುವ ಪರಿಪಾಠವಿತ್ತು. ಇಂದಿಗೂ ವೈದಿಕ ಸಂಪ್ರದಾಯದ ಮದುವೆಯಲ್ಲಿ ಮದುವೆಗಿಂತ ಮುಂಚೆ ವಧುವಿನಿಂದ ಶಚೀಪೂಜೆಯನ್ನು ಮಾಡಿಸುತ್ತಾರೆ. ಆಗ ಇದೇ ಸೂಕ್ತದ ಪಠನೆಯಾಗುತ್ತದೆ. ಆ ವಧುವು ತನ್ನ ಗಂಡನ ಮನೆಯಲ್ಲಿ ಸ್ವಾಭಿಮಾನಿಯಾಗಿ ಬಾಳಲಿ ಎಂಬ ಉದ್ದೇಶ ಈ ಪೂಜೆಯ ಹಿಂದಿದೆ. ಪೂಜೆಯ ಸಮಯದಲ್ಲಿ ಇದನ್ನು ವಧುವಿಗೆ ತಿಳಿಸಿಕೊಟ್ಟರೆ ನಿಜಕ್ಕೂ ಅವಳ ಆತ್ಮವಿಶ್ವಾಸ ವರ್ಧಿಸೀತು.

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...