’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’
ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗಂಗೋತ್ರಿಯಲ್ಲಿ
ಇಂಗ್ಲೀಷ್ ಎಮ್.ಏ. ಅಂತಿಮವರ್ಷದ ವಿದ್ಯಾರ್ಥಿಗಳು. ಉತ್ತಮ ಸ್ನೇಹಿತರು. ಹರಟೆ, ಓದು ಎರಡನ್ನೂ
ಒಟ್ಟಾಗಿ ಮಾಡುವವರು. ಇವರ ಮಧ್ಯೆ ಅಂತಿಮ ವರ್ಷದ ಬಂಗಾರದ ಪದಕಕ್ಕೆ ಪೈಪೋಟಿ ಇದೆ. ಇಬ್ಬರೂ
ಜಿದ್ದಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಧ್ಯಯನದಲ್ಲಿ ಏನಾದರೂ ಹೊಸದು ಹೊಳೆದರೆ ತಕ್ಷಣ
ಹಂಚಿಕೊಳ್ಳುವ ತೆರೆದ ಮನಸ್ಸು ಇಬ್ಬರದೂ. ತಮಗೆ ತಿಳಿದ ವಿಷಯವನ್ನು ಗುಟ್ಟಾಗಿ ಇಟ್ಟುಕೊಂಡು ಮೊದಲ
ಸ್ಥಾನ ಪಡೆದುಕೊಳ್ಳಬೇಕೆಂಬ ಹಂಬಲ ಇಬ್ಬರಿಗೂ ಇಲ್ಲ. ಪರಸ್ಪರರ ಸಾಧನೆಯನ್ನು ತುಂಬು ಹೃದಯದಿಂದ
ಅಭಿನಂದಿಸುತ್ತಿದ್ದರು. ಸುನೀತಾಳ ಭಾಷಣ ಎಂದರೆ ಸುಜಯನಿಗೆ ತುಂಬಾ ಇಷ್ಟ. ಹಾಗೆಯೇ ಸುಜಯ ಬರೆಯುವ ಲೇಖನಗಳು
ಸುನೀತಾಳಿಗೆ ಬಹಳ ಪ್ರಿಯ.
ಇಷ್ಟಾದರೂ ಅವರು ತಮ್ಮ ತಮ್ಮ ಟಿಪ್ಪಣಿಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರೇ ಹೊರತು ಒಬ್ಬರ
ಟಿಪ್ಪಣಿಯನ್ನು ಇನ್ನೊಬ್ಬರು ಓದುತ್ತಿರಲಿಲ್ಲ. ಆದರೆ ಇಂದು ಸುನೀತಾ ಸುಜಯನ ಟಿಪ್ಪಣಿಯನ್ನು
ಕೇಳಿದ್ದು ಅದರಲ್ಲೂ ಫೋಟೋಕಾಪಿ ಮಾಡಿ ಓದುತ್ತೇನೆ ಎಂದಿದ್ದು ಸುಜಯನಿಗೆ ಕಸಿವಿಸಿಯನ್ನು
ಉಂಟುಮಾಡಿತ್ತು. ಲಿಟರರಿ ಕ್ರಿಟಿಸಿಸಮ್ ಪೇಪರಿನ ದಿನ ಪರೀಕ್ಷಾ ಕೊಠಡಿಯಿಂದ ಹೊರಬಂದ ಸುನೀತಾ
’ಸುಜಯ, ನಿನ್ನ ನೋಟ್ಸ್ ತುಂಬಾ ಚೆನ್ನಾಗಿತ್ತು ಕಣೊ, ತುಂಬಾ ಥ್ಯಾಂಕ್ಸ್. ಬಾ ಒಂದು ಕಾಫಿ
ಕುಡಿಸ್ತೇನೆ’ ಅಂತ ಹೇಳಿದಳು. ಸುಜಯ ಹೂಂ ಅಂತಷ್ಟೇ ಹೇಳಿ ಅವಳನ್ನು ಹಿಂಬಾಲಿಸಿದ. ಸುನೀತಾ
ಎಂದಿನಂತೆ ಹರಟುತ್ತಲೇ ಇದ್ದಳು. ಸುಜಯ ಯಾಕೋ ಗಂಭೀರನಾಗಿ ಏನನ್ನೋ ಯೋಚಿಸುತ್ತಿರುವಂತೆ
ಕಾಣುತ್ತಿದ್ದ. ಅದು ಅವನ ಸ್ವಭಾವವೇ ಆಗಿದ್ದರಿಂದ ಸುನೀತಾ ಹೆಚ್ಚೇನೂ ಕೆದಕಲಿಲ್ಲ.
ಫಲಿತಾಂಶ ಬಂತು. ಸುಜಯ ಕ್ಲಾಸಿಗೆ ಮೊದಲಿಗನಾಗಿ ನಾಲ್ಕು ಬಂಗಾರದ ಪದಕವನ್ನು ಪಡೆದುಕೊಂಡ.
ಅದರಲ್ಲಿ ಲಿಟರರಿ ಕ್ರಿಟಿಸಿಸಮ್ ಪೇಪರಿಗೆ ಮೀಸಲಾಗಿದ್ದ ಪದಕವೂ ಒಂದು.
ಸುನೀತಾ ಬಂದು ಸುಜಯನನ್ನು ಅಭಿನಂದಿಸಿದಾಗ ಸುಜಯನ ಕಣ್ಣಿಂದ ನೀರು ಸುರಿಯಲಾರಂಭಿಸಿತು. ಮುಖ ತಿರುಗಿಸಿಕೊಂಡ. ಸುನೀತಾ ಅವನ
ಕೈ ಹಿಡಿದುಕೊಂಡು ’ಯಾಕೋ ಏನಾಯ್ತೋ? ಇಂತಹ ಸಂತೋಷದ ಸಂದರ್ಭದಲ್ಲಿ ಅಳುವುದು ಯಾಕೋ?’ ಅಂತ
ಕೇಳಿದಳು. ಸುಜಯ ಬಿಕ್ಕುತ್ತಲೇ ’ನೀನು
ಯುದ್ಧಕ್ಕಿಂತ ಮೊದಲೇ ಯಾಕೆ ಶಸ್ತ್ರವನ್ನು ಕೆಳಗಿಟ್ಟು ಶರಣಾದೆ? ನನ್ನ ಇಂದಿನ ಯಶಸ್ಸಿಗೆ ನೀನು
ಈವರೆಗೆ ನನಗೆ ಕೊಟ್ಟ ಸ್ಪರ್ಧೆಯೇ ಕಾರಣ. ಕಳೆದ ವರ್ಷ ನೀನು ನನಗಿಂತ ಹೆಚ್ಚು ಅಂಕ ಗಳಿಸಿದಾಗಲೂ
ನನಗೆ ಬೇಜಾಗಿರಲಿಲ್ಲ. ಆದರೆ ಈ ವರ್ಷ ನೀನು ನನ್ನ ನೋಟ್ಸ್ ನ್ನು ಯಾಕೆ ಕೇಳಿದೆ? ಆಗಲೇ ನೀನು ಸೋತೆ ಅನಿಸಿತ್ತು. ಆದರೆ ನನಗೆ ಅಂತಹ ಗೆಲುವು
ಬೇಕಾಗಿರಲಿಲ್ಲ. ನನಗೆ ತುಂಬಾ ನೋವಾಯ್ತು. ಯಾಕೆ ಹಾಗೆ ಮಾಡಿದೆ?’
’ಅಯ್ಯೋ, ಇಷ್ಟೇನಾ? ಅದನ್ನೆಲ್ಲ ಆಮೇಲೆ ಹೇಳುತ್ತೇನೆ. ಬಾ ಈಗ ನೀನು ಬಂಗಾರದ ಪದಕವನ್ನು
ಪಡೆದಿದ್ದಕ್ಕೆ ಕಾಫಿಯನ್ನಾದರೂ ಕುಡಿಸು ಮಹಾರಾಯ’ ಎನ್ನುತ್ತ ಎಳೆದುಕೊಂಡು ಹೋದಳು.
No comments:
Post a Comment