ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ
ಸ್ತ್ರೀರತ್ನಗಳು”
ಭಾಗ – ೧೧
ಗಾರ್ಗಿ ವಾಚಕ್ನವಿ
ವೇದಕಾಲದ ಬ್ರಹ್ಮವಾದಿನಿಯರಲ್ಲಿ ಅಗ್ರಗಣ್ಯಳು ಗಾರ್ಗಿ ವಾಚಕ್ನವಿ.
ಗರ್ಗ ಗೋತ್ರದಲ್ಲಿ ಹುಟ್ಟಿದ್ದರಿಂದ ಗಾರ್ಗಿ ಎಂತಲೂ ವಚಕ್ನು ಮುನಿಯ ಮಗಳಾದ್ದರಿಂದ ವಾಚಕ್ನವಿ
ಎಂತಲೂ ಅಭಿಧಾನವನ್ನು ಹೊಂದಿದ್ದಳು. ಸಕಲ ಶಾಸ್ತ್ರಪಾರಂಗತೆಯಾಗಿದ್ದ ಇವಳು ಕುಂಡಲಿನೀ
ವಿದ್ಯೆಯನ್ನೂ ಕರಗತ ಮಾಡಿಕೊಂಡು ಆ ಕಾಲದ ಬ್ರಹ್ಮಜಿಜ್ಞಾಸು ಪಂಡಿತಮಂಡಳಿಯಲ್ಲಿ ಗೌರವಸ್ಥಾನವನ್ನು
ಹೊಂದಿದ್ದಳು.
ವಿದೇಹ ರಾಜ್ಯದ ರಾಜರ್ಷಿ ಜನಕನು ತಾನು ಕೈಗೊಂಡ ’ಬಹುದಕ್ಷಿಣ’ ಎಂಬ
ಯಜ್ಞದ ಅಂಗವಾಗಿ ಬ್ರಹ್ಮಸಂಸತ್ತನ್ನು ಏರ್ಪಡಿಸಿದ್ದ. ಕುರು-ಪಾಂಚಾಲದೇಶಗಳಿಂದ ವೇದಜ್ಞರಾದ
ಬ್ರಾಹ್ಮಣರು ಅಲ್ಲಿಗೆ ಆಗಮಿಸಿದ್ದರು. ಆ ಎಲ್ಲ ಬ್ರಾಹ್ಮಣರಲ್ಲಿ ಶ್ರೇಷ್ಠ ಬ್ರಹ್ಮಿಷ್ಠ ಯಾರು
ಎಂಬುದಾಗಿ ತಿಳಿದುಕೊಳ್ಳುವ ಬಯಕೆ ಜನಕನಿಗಾಯಿತು. ಅವನು ೧೦೦೦ ಗೋವುಗಳನ್ನು ಚಿನ್ನದಿಂದ ಶೃಂಗರಿಸಿ
ಶ್ರೇಷ್ಠ ಬ್ರಹ್ಮಜ್ಞಾನಿಗೆ ಅವನ್ನು ಕೊಡುವುದಾಗಿ ಸಾರಿದನು. ಸಭೆಯಲ್ಲಿ ಉಪಸ್ಥಿತನಿದ್ದ
ಯಾಜ್ಞವಲ್ಕ್ಯ ಆ ಗೋವುಗಳನ್ನು ತನ್ನ ಮನೆಗೆ ಹೊಡೆದುಕೊಂಡು ಹೋಗುವಂತೆ ಶಿಷ್ಯನಾದ ಸಾಮಶ್ರವನಿಗೆ
ಆಜ್ಞಾಪಿಸಿದ. ಸಾಮಶ್ರವ ಹಾಗೇ ಮಾಡಲಾಗಿ ಅಲ್ಲಿ ಸೇರಿದ್ದ ಪಂಡಿತರೆಲ್ಲ ಕೆರಳಿದರು. ಯಾಜ್ಞವಲ್ಕ್ಯನ
ಮೇಲೆ ತಮ್ಮ ಪ್ರಶ್ನೆಗಳ ಮೂಲಕ ಮುಗಿ ಬಿದ್ದರು. ಅಶ್ವಲ, ಕಹೋಲ, ಉದ್ದಾಲಕ ಮುಂತಾದ ಘಟಾನುಘಟಿಗಳೇ
ಕೈಸೋತಾಗ ಧೈರ್ಯದಿಂದ ಎದ್ದುನಿಂತವಳು ಗಾರ್ಗಿ ವಾಚಕ್ನವಿ. ಬೃಹದಾರಣ್ಯಕೋಪನಿಷತ್ತಿನ ಮೂರನೆಯ
ಅಧ್ಯಾಯದ ಆರನೆಯ ಬ್ರಾಹ್ಮಣದಲ್ಲಿ ಗಾರ್ಗಿಯ ಪ್ರಶ್ನೆಯ ಉಲ್ಲೇಖವಿದೆ. ’ಪೃಥ್ವಿಯು ನೀರಿನಿಂದ
ವ್ಯಾಪ್ತವಾಗಿದ್ದರೆ ನೀರು ಯಾವುದರಿಂದ ವ್ಯಾಪ್ತವಾಗಿದೆ?’ ಎನ್ನುವುದು ಅವಳ ಮೊದಲ ಪ್ರಶ್ನೆ.
’ವಾಯುವಿನಿಂದ’ ಎಂಬ ಉತ್ತರ ಯಾಜ್ಞವಲ್ಕ್ಯನಿಂದ ಬಂತು. ವಾಯು ಯಾವುದರಿಂದ ವ್ಯಾಪ್ತವಾಗಿದೆ?’
ಎಂಬುದು ಗಾರ್ಗಿಯ ಮುಂದಿನ ಪ್ರಶ್ನೆ. ಹೀಗೆ ಯಾಜ್ಞವಲ್ಕ್ಯ ಉತ್ತರಕೊಡುತ್ತ ಹೋದಂತೆ ಗಾರ್ಗಿ
ಪ್ರಶ್ನಿಸುತ್ತ ಹೋದಳು. ಕೊನೆಯಲ್ಲಿ ’ಬ್ರಹ್ಮಲೋಕ ಯಾವುದರಿಂದ ವ್ಯಾಪ್ತವಾಗಿದೆ?’ ಎಂದು
ಪ್ರಶ್ನಿಸಿದಾಗ ’ಗಾರ್ಗಿ! ಅತಿ ಪ್ರಶ್ನೆಯನ್ನು ಮಾಡಬೇಡ. ನೀನು ಕೇಳಿದ ತತ್ತ್ವ ಪ್ರಶ್ನೆಯನ್ನು
ಮೀರಿದ್ದು. ನಿನ್ನ ತಲೆ ಬಿದ್ದು ಹೋದೀತು’ ಎಂದು ಯಾಜ್ಞವಲ್ಕ್ಯ ಗುಡುಗಿದಾಗ ಗಾರ್ಗಿ
ಸುಮ್ಮನಾದಳು. ಅವಳು ಸುಮ್ಮನಾದದ್ದು ಹೆದರಿಕೆಯಿಂದ ಅಲ್ಲ. ತಾನು ಕೇಳಿದ ಪ್ರಶ್ನೆಯ ಉತ್ತರ
ಅತ್ಯಂತ ಗೂಢವಾದದ್ದು, ಸಾರ್ವಜನಿಕ ಸಭೆಯಲ್ಲಿ ಹೇಳಲಾರದ್ದು ಎಂಬುದರ ಅರಿವು ಗಾರ್ಗಿಗಿತ್ತು.
ಸಭೆಯಲ್ಲಿರುವ ಪಂಡಿತರೆಲ್ಲ ಯಾಜ್ಞವಲ್ಕ್ಯನ ಪಾಂಡಿತ್ಯಪ್ರಭೆಯಿಂದ ತತ್ತರಿಸಿದಾಗ ಗಾರ್ಗಿ ಮತ್ತೆ
ಎದ್ದು ಪ್ರಶ್ನೆಗಳ ತೀಕ್ಷ್ಣ ಬಾಣದಿಂದ ಯಾಜ್ಞವಲ್ಕ್ಯನನ್ನು ಮತ್ತೆ ತಿವಿಯುತ್ತಾಳೆ.
’ಯಾವುದು ದ್ಯುಲೋಕಕ್ಕಿಂತ ಮೇಲೆ, ಭೂಮಿಗಿಂತ ಕೆಳಗೆ, ಅವುಗಳ ಮಧ್ಯೆ
ಭೂತ, ವರ್ತಮಾನ, ಭವಿಷ್ಯತ್ತಿನಲ್ಲಿ ಶಾಶ್ವತವಾಗಿ ಇರುವುದೋ ಅಂತಹ ಯಾವ ತತ್ತ್ವವು ವ್ಯಕ್ತವಾದ
ಜಗತ್ತನ್ನು ಆವರಿಸಿದೆ?’ ಎಂಬುದು ಗಾರ್ಗಿ ಎಂತನೆಯ ಮಂಡಲದಲ್ಲಿ ಕೇಳಿದ ಒಂದು ಪ್ರಶ್ನೆ. ಅದಕ್ಕೆ
ಯಾಜ್ಞವಲ್ಕ್ಯ ’ಅವ್ಯಕ್ತವಾದ ಆಕಾಶ’ ಎಂದುತ್ತರಿಸಿದ.’ಆಕಾಶ ಯಾವುದರಿಂದ ವ್ಯಾಪ್ತವಾಗಿದೆ?’ ಅವಳ
ಮುಂದಿನ ಪ್ರಶ್ನೆ ಸಿದ್ಧವಾಗಿತ್ತು. ಅದಕ್ಕೆ ಉತ್ತರವಾಗಿ ಯಾಜ್ಞವಲ್ಕ್ಯ ಅಕ್ಷರಬ್ರಹ್ಮದ ಸವಿಸ್ತರ
ವಿವರಣೆಯನ್ನು ಮಾಡುತ್ತಾನೆ. ಅವನ ಉತ್ತರದಿಂದ ಸಂತುಷ್ಟಳಾದ ಗಾರ್ಗಿ ಯಾಜ್ಞವಲ್ಕ್ಯನನ್ನು
ಬ್ರಹ್ಮಜ್ಞಾನಿಯೆಂದು ಒಪ್ಪಿಕೊಳ್ಳುತ್ತಾಳೆ.
ಗಾರ್ಗಿ ಯಾಜ್ಞವಲ್ಕ್ಯನಿಂದ ವಾದದಲ್ಲಿ ಸೋತಿರಬಹುದು. ಆದರೆ ಅವನನ್ನು
ತುಂಬಿದ ಸಭೆಯಲ್ಲಿ ಇಂತಹ ಗಹನವಾದ ವಿಚಾರದಲ್ಲಿ ತುಡುಕುವುದು ಸಾಮಾನ್ಯವಾದ ವಿಚಾರವಲ್ಲ.
ವೇದಕಾಲದಲ್ಲಿ ಸ್ತ್ರೀಯರಿಗೆ ವಿದ್ಯಾಭ್ಯಾಸದ ಹಾಗೂ ಪ್ರಶ್ನಿಸುವ ಅಧಿಕಾರ ಇರಲಿಲ್ಲ ಎಂಬ
ವಾದವನ್ನು ಹುಸಿಮಾಡುವ ಗಟ್ಟಿ ನಿದರ್ಶನವಾದ ಗಾರ್ಗಿಯು ವಿದ್ಯಾವಂತ ಮಹಿಳೆಯರಿಗೆ ಆದರ್ಶವಾಗಿ
ನಿಲ್ಲುತ್ತಾಳೆ.
ಮಹಾಬಲ
ಭಟ್, ಗೋವಾ
No comments:
Post a Comment