Saturday, March 11, 2017

ಮೈತ್ರೇಯಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೨

ಮೈತ್ರೇಯಿ

ಯಾಜ್ಞವಲ್ಕ್ಯನನ್ನು ಕೆಣಕಿದ ಗಾರ್ಗಿಯ ಸೋದರಿಯ ಮಗಳು ಮೈತ್ರೇಯಿ. ವಿದೇಹರಾಜ ಜನಕನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಮಿತ್ರನೆಂಬವಳ ಪುತ್ರಿ ಇವಳು. ಚಿಕ್ಕ ವಯಸ್ಸಿನಲ್ಲಿಯೇ ಆಳವಾದ ಅಧ್ಯಯನ ಮಾಡಿ ಆಧ್ಯಾತ್ಮದತ್ತ ಒಲವು ಹೊಂದಿದ್ದ ಮೈತ್ರೇಯಿ ಯಾಜ್ಞವಲ್ಕ್ಯನ ಪಾಂಡಿತ್ಯವನ್ನು ನೋಡಿ ನಿಬ್ಬೆರಗಾದಳು. ತನ್ನ ಜ್ಞಾನದ ಹಸಿವನ್ನು ಇವನು ಮಾತ್ರ ಇಂಗಿಸಬಲ್ಲ ಎಂಬುದಾಗಿ ಯೋಚಿಸಿದಳು. ಅವನ ಈ ಜ್ಞಾನಸಂಪತ್ತಿನ ಉತ್ತರಾಧಿಕಾರಿ ತಾನಾಗಬೇಕೆಂಬ ಹಂಬಲದಿಂದ ತನ್ನನ್ನು ಮದುವೆಯಾಗಬೇಕೆಂದು ಯಾಜ್ಞವಲ್ಕ್ಯನನ್ನು ವಿನಂತಿಸಿಕೊಂಡಳು. ಕಾತ್ಯಾಯನಿಯ ಜೊತೆ ಸುಖಸಂಸಾರವನ್ನು ನಡೆಸಿಕೊಂಡಿದ್ದ ಯಾಜ್ಞವಲ್ಕ್ಯನಿಗೆ ಮತ್ತೊಂದು ಮದುವೆಯಾಗುವ ಮನಸ್ಸಿರಲಿಲ್ಲ. ಆದರೂ ಮೈತ್ರೇಯಿ ಇದು ಜ್ಞಾನಾರ್ಜನೆಗೆ ಮಾತ್ರ ಎಂದು ಅನುರೋಧಿಸಿದ್ದರಿಂದ ಒಪ್ಪಿಕೊಂಡ. ಬ್ರಹ್ಮಜ್ಞಾನಿಯ ಸಾಂಗತ್ಯದಲ್ಲಿ ಜೀವನದ ರಹಸ್ಯಗಳನ್ನು ಮೈತ್ರೇಯಿ ಅರಿತುಕೊಂಡಳು.

ಬ್ರಹ್ಮಚರ್ಯ, ಗೃಹಸ್ಥಾಶ್ರಮಗಳನ್ನು ಕಳೆದ ಯಾಜ್ಞವಲ್ಕ್ಯನಿಗೆ ಸಂಸಾರವನ್ನು ತ್ಯಜಿಸಿ ಸಂನ್ಯಾಸಿಯಾಗುವ ಬಯಕೆಯಾಯಿತು. ಜನಕನ ಆಸ್ಥಾನವಿದ್ವಾಂಸನಾಗಿದ್ದ ಅವನಲ್ಲಿ ಧನಕನಕಗೋಸಂಪತ್ತು ಹೇರಳವಾಗಿತ್ತು. ಆ ಲೌಕಿಕ ಸಂಪತ್ತನ್ನು ತನ್ನ ಪತ್ನಿಯರ ಜೀವನನಿರ್ವಹಣೆಗಾಗಿ ಪಾಲುಮಾಡಿಕೊಡಲು ಮುಂದಾದ. ಪತಿಯ ನಿರ್ಧಾರವನ್ನು ಸಾಧ್ವಿ ಕಾತ್ಯಾಯನಿ ಒಪ್ಪಿಕೊಂಡಳು. ಆದರೆ ಮೈತ್ರೇಯಿ ಯಾಜ್ಞವಲ್ಕ್ಯನನ್ನು ಕೇಳಿದಳು – ’ಈ ಸಂಪತ್ತಿಂದ ಆತ್ಮನನ್ನು ಅರಿತುಕೊಳ್ಳಲು ಸಾಧ್ಯವೇ? ಈ ಸಂಪತ್ತು ನಮಗೆ ಶಾಶ್ವತ ಆನಂದನನ್ನು ನೀಡುತ್ತದೆಯೇ?’ ಯಾಜ್ಞವಲ್ಕ್ಯ ’ಇಲ್ಲ’ ಎಂದುತ್ತರಿಸಿದ. ’ಹಾಗಾದರೆ ನನಗೆ ಈ ಸಂಪತ್ತಿನಲ್ಲಿ ಪಾಲು ಬೇಡ. ಎಲ್ಲವನ್ನೂ ಕಾತ್ಯಾಯನಿಯೇ ಇಟ್ಟುಕೊಳ್ಳಲಿ. ನನಗೆ ನಿಮ್ಮ ಆತ್ಮಾನುಭವದ ಜ್ಞಾನವನ್ನು ಕೊಡಿ’ ಎಂದು ಮೈತ್ರೇಯಿ ಬೇಡಿಕೊಂಡಳು. ಪ್ರಾಪಂಚಿಕ ವಸ್ತುಗಳ ಮೇಲೆ ಮೈತ್ರೇಯಿಗಿರುವ ತಿರಸ್ಕಾರವನ್ನೂ ಆಧ್ಯಾತ್ಮಜ್ಞಾನದೊಲವನ್ನೂ ಕಂಡು ಮೆಚ್ಚಿದ ಯಾಜ್ಞವಲ್ಕ್ಯ ಅವಳೊಂದಿಗೆ ವಾನಪ್ರಸ್ಥಾಶ್ರಮವನ್ನು ಕೈಗೊಂಡು ತನ್ನ ಸಕಲಜ್ಞಾನವನ್ನೂ ಅವಳಿಗೆ ನೀಡಿದ. ಬೃಹದಾರಣ್ಯಕೋಪನಿಷತ್ತಿನ ಎರಡನೆಯ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣ ಹಾಗೂ ನಾಲ್ಕನೆಯ ಅಧ್ಯಾಯದ ಐದನೆಯ ಬ್ರಾಹ್ಮಣದಲ್ಲಿ ಯಾಜ್ಞವಲ್ಕ್ಯ-ಮೈತ್ರೇಯಿ ಸಂವಾದ ಇದೆ.


ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...