Friday, August 11, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೦ *ಯಾಂ ಚಿಂತಯಾಮಿ ಸತತಂ...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೦

*ಯಾಂ ಚಿಂತಯಾಮಿ ಸತತಂ...*

ಶತಕತ್ರಯಗಳಿಂದಾಗಿ ಕವಿ ಭರ್ತೃಹರಿಯ ಹೆಸರು ಸಂಸ್ಕೃತಲೋಕದಲ್ಲಿ ಅಜರಾಮರವಾಗಿದೆ. ವ್ಯಾಕರಣಶಾಸ್ತ್ರಜ್ಞನಾಗಿಯೂ ಅವನು ಪ್ರಸಿದ್ಧನಾಗಿದ್ದಾನೆ. ರಾಜನಾಗಿದ್ದ ಅವನು ಸಂನ್ಯಾಸಿಯಾದ ಕಥೆ ಬಹಳ ರೋಚಕವಾಗಿದೆ.

ಒಂದಿನ ಭರ್ತೃಹರಿಯ ಆಸ್ಥಾನಕ್ಕೆ ಬಂದ ಯೋಗಿಯೊಬ್ಬ ವಿಶೇಷ ಶಕ್ತಿಯನ್ನು ಹೊಂದಿದ್ದ ಹಣ್ಣೊಂದನ್ನು ರಾಜನಿಗೆ ನೀಡಿದ. ತನ್ನ ಮಡದಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಜ ಅದನ್ನು ಅವಳಿಗೆ ಕೊಟ್ಟ. ರಾಣಿಗೆ ಒಬ್ಬ ಪ್ರಿಯಕರನಿದ್ದ. ಅವಳು ಹಣ್ಣನ್ನು ಅವನಿಗೆ ವರ್ಗಾಯಿಸಿದಳು. ಆ ಪ್ರಿಯಕರನಿಗಾದರೋ ರಾಣಿಗಿಂತ ಹೆಚ್ಚು ಹತ್ತಿರವಾದ ಪ್ರಿಯತಮೆಯೊಬ್ಬಳಿದ್ದಳು. ಹಣ್ಣು ಅವಳ ಕೈ ಸೇರಿತು. ಆ ತರುಣಿಗೆ ರಾಜನಲ್ಲಿ ಪ್ರೇಮವಿತ್ತು. ಅವಳು ತಂದು ಹಣ್ಣನ್ನು ರಾಜನಿಗೊಪ್ಪಿಸಿದಳು. ಹೀಗೆ ಒಂದು ಸುತ್ತು ಹೊಡೆದು ಬಂದ ಹಣ್ಣನ್ನು ನೋಡಿ ರಾಜನಿಗೆ ಸಂಬಂಧಗಳ ನಶ್ವರತೆಯ ಅರಿವಾಯಿತು. ಬೇಸರಗೊಂದು ಹೀಗೆಂದು ಕವನಿಸಿದ.

ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ |
ಅಸ್ಮತ್ಕೃತೇ ಪರಿಶುಷ್ಯತಿ ಕಾಚಿದನ್ಯಾ
ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ ||

ನಾನು ಸದಾ ಯಾರನ್ನು ನೆನೆಯುತ್ತಿರುತ್ತೇನೆಯೋ ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಅವಳು ಇನ್ನೊಬ್ಬನನ್ನು ಪ್ರೀತಿಸುತ್ತಾಳೆ, ಅವನು ಮತ್ತೊಬ್ಬಳಲ್ಲಿ ಆಸಕ್ತನಾಗಿದ್ದಾನೆ. ಅವಳು ನನಗಾಗಿ ಹಂಬಲಿಸುತ್ತಾಳೆ. ಅವಳಿಗೂ, ಅವನಿಗೂ, ಮನ್ಮಥನಿಗೂ, ಇವಳಿಗೂ ನನಗೂ ಧಿಕ್ಕಾರವಿರಲಿ.

ಈ ಘಟನೆ ಅವನು ಸಂನ್ಯಾಸ ಸ್ವೀಕರಿಸುವುದಕ್ಕೂ ವೈರಾಗ್ಯ ಶತಕವೆಂಬ ಕೃತಿಯನ್ನು ರಚಿಸುವುದಕ್ಕೂ ಕಾರಣವಾಯಿತು.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಈ ಸರಣಿಯ ಎಲ್ಲ ಲೇಖನಗಳೂ www.sujnanam.blogspot.com ನಲ್ಲೂ ಲಭ್ಯ.

Wednesday, August 9, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೯ *ರಾಭಣೋ ನ ತು ರಾವಣ:*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೯

*ರಾಭಣೋ ನ ತು ರಾವಣ:*

ಬಹುಮಾನದ ಆಶೆಯಿಂದ ಭೋಜರಾಜನ ಆಸ್ಥಾನಕ್ಕೆ ಬರುವ ಅರ್ಧಪಂಡಿತರಿಗೇನೂ ಕಡಿಮೆಯಿರಲಿಲ್ಲ. ಹಾಗೇ ಒಂದಿನ ಚೂರು ಪಾರು ಓದಿಕೊಂಡ ಬ್ರಾಹ್ಮಣನೊಬ್ಬ ಸಭೆಗೆ ಬಂದ. ಬಂದವನೇ ರಾಮಾಯಣದ ಶ್ಲೋಕವೊಂದನ್ನು ಉಚ್ಚರಿಸಿದ. ಆದರೆ ರಾವಣ ಎಂಬ ಶಬ್ದವನ್ನು ’ರಾಭಣ’ ಎಂದು ಉಚ್ಚರಿಸಿದ. ಅಪಶಬ್ದವನ್ನು ಕೇಳಿ ಭೋಜರಾಜ ಅವನತ್ತ ಗಂಭೀರವದನನಾಗಿ ನೋಡುತ್ತ ’ಯಾಕೆ ಹೀಗೆ?’ ಎಂದು ಪ್ರಶ್ನಿಸಿದ. ಆ ಬ್ರಾಹ್ಮಣ ತನ್ನ ಉಚ್ಚಾರಣೆಯನ್ನು ಸಮರ್ಥಿಸಿಕೊಳ್ಳಲಾಗದೆ ತಡವರಿಸಿದ. ಅವನ ಸ್ಥಿತಿ ನೋಡಿ ಕಾಳಿದಾಸ ಕನಿಕರದಿಂದ ಅವನ ಸಹಾಯಕ್ಕೆ ಧಾವಿಸಿದ.

ಕುಂಭಕರ್ಣೇ ಭಕಾರೋಽಸ್ತಿ
ಭಕಾರೋಸ್ತಿ ವಿಭೀಷಣೇ |
ತಯೋರ್ಜ್ಯೇಷ್ಠೇ ಕುಲಶ್ರೇಷ್ಠೇ
ಭಕಾರ: ಕಿಂ ನ ವಿದ್ಯತೇ? ||

’ಕುಂಭಕರ್ಣ ಎಂಬ ಹೆಸರಿನಲ್ಲಿ ಭಕಾರವಿದೆ. ’ವಿಭೀಷಣ’ ನಲ್ಲೂ ಭಕಾರವಿದೆ. ಅವರಿಗಿಂತ ಹಿರಿಯನಾದ ಅವರ ಕುಲದಲ್ಲೇ ಶ್ರೇಷ್ಠನಾದ ರಾವಣನ ಹೆಸರಿನಲ್ಲೇಕೆ ಭಕಾರವಿಲ್ಲ? ಇದು ಸರಿಯಲ್ಲ ಹಾಗಾಗಿ ’ರಾಭಣೋ ನ ತು ರಾವಣ:’ ರಾಭಣ ಎನ್ನುವುದೇ ಸರಿ ರಾವಣ ಅಲ್ಲ.

ಕಾಳಿದಾಸನ ಸಮಯಸ್ಫೂರ್ತಿಗೆ ತಲೆದೂಗಿದ ಭೋಜರಾಜ ಆ ಬ್ರಾಹ್ಮಣನಿಗೆ ಯಥೇಷ್ಟ ಧನಕನಕಾದಿಗಳನ್ನು ಕೊಟ್ಟು ಕಳುಹಿದ.

ತಪ್ಪನ್ನು ಸಮರ್ಥಿಸಿಕೊಳ್ಳಲೂ ಪ್ರತಿಭೆ ಬೇಕು ಅಲ್ಲವೆ?

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 8, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೮ *ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೮

*ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಾಹಿತ್ಯಪ್ರಪಂಚದಲ್ಲಿ ’ಪಂಡಿತರಾಜ’ ಎಂಬ ಖ್ಯಾತಿಗೆ ಪಾತ್ರನಾದ ಘನ ವಿದ್ವಾಂಸ ಜಗನ್ನಾಥ ಪಂಡಿತ. ಮೊಘಲ್ ದೊರೆ ಷಾಹಜಾನನ ಆಸ್ಥಾನಪಂಡಿತನಾಗಿ ತನ್ನ ಹರಿತ ಪಾಂಡಿತ್ಯದಿಂದ ವಿರೋಧಿಗಳಿಗೆ ಸಿಂಹಸ್ವಪ್ನನಾಗಿದ್ದ. ಮೊಘಲರ ದರಬಾರಿನಲ್ಲೇ ಇಸ್ಲಾಂ ಮತವನ್ನು ಖಂಡಿಸಬಲ್ಲ ಜಗಜಟ್ಟಿಯಾಗಿದ್ದ. ಷಾಹಜಹಾನ್ ಹಾಗೂ ಅವನ ಪುತ್ರ ದಾರಾಷುಕೋ ಅವನನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು. ಪರಿಸರದ ಪ್ರಭಾವದಿಂದ ’ಲವಂಗಿ’ ಎಂಬ ಮುಸ್ಲಿಂ ತರುಣಿಯಲ್ಲಿ ಅನುರಕ್ತನಾಗಿ ಮದುವೆಯಾದ. ಪಂಡಿತರಾಜ ಜಗನ್ನಾಥನನ್ನು ಜನರು ಲವಂಗೀಜಗನ್ನಾಥ ಎಂದು ಕರೆಯುವಷ್ಟು ಅವಳಲ್ಲಿ ಅನುರಕ್ತನಾಗಿದ್ದ. ಅವಳೇ ಅವನ ಕಾವ್ಯಕನ್ನಿಕೆಯಾದಳು.

ಯವನೀ ನವನೀತಕೋಮಲಾಂಗೀ
ಶಯನೀಯೇ ಯದಿ ಲಭ್ಯತೇ ಕದಾಚಿತ್ |
ಅವನೀತಲಮೇವ ಸಾಧು ಮನ್ಯೇ
ನಾವನೀ ಮಾಘವನೀ ವಿನೋದಹೇತುಃ ||

ಬೆಣ್ಣೆಯಂತಹ ಕೋಮಲ ದೇಹವುಳ್ಳ ಯವನತರುಣಿ ಹಾಸಿಗೆಯಲ್ಲಿ ಸಿಗುವುದಾದರೆ ಸ್ವರ್ಗಕ್ಕಿಂತ ಭೂಮಿಯೇ ಮೇಲು ಎಂದು ಕವನಿಸಿದ ಮಹಾತ್ಮ ಅವನು!

ಷಹಜಹಾನನ ಆಶ್ರಯ ಅವನಿಗೆ ಅಪಾರ ಸಂಪತ್ತನ್ನು ಒದಗಿಸಿತ್ತು. ಜಗನ್ನಾಥ ಆಶ್ರಯಕ್ಕಾಗಿ ಅಲೆದಾಡುತ್ತಿದ್ದಾಗ ತಿರಸ್ಕರಿಸಿದ ಹಿಂದೂ ರಾಜರು ಅವನು ಕೀರ್ತಿಯನ್ನು ಗಳಿಸಿದ ಮೇಲೆ ತಮ್ಮ ಆಸ್ಥಾನಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದರು. ಅಂಥವರಲ್ಲಿ ನೇಪಾಳ ಮಹಾರಾಜ ವೀರವಿಕ್ರಮನೂ ಒಬ್ಬ. ತನ್ನ ಆಸ್ಥಾನಪಂಡಿತನನ್ನೇ ಜಗನ್ನಾಥನನ್ನು ಸೆಳೆಯಲು ಪತ್ರದೊಂದಿಗೆ ಕಳಿಸಿದ್ದ. ಯವನರ ಮುಂದೆ ಕೈಚಾಚುವುದನ್ನು ಬಿಟ್ಟು ಹಿಂದೂ ರಾಜನ ಆಸ್ಥಾನವನ್ನು ಅಲಂಕರಿಸಿ ಸ್ವಾಭಿಮಾನಿಯಾಗು ಮುಂತಾಗಿ ದೀರ್ಘವಾದ ಪತ್ರವನ್ನೇ ಬರೆದಿದ್ದ. ಅದನ್ನು ಓದಿದ ಜಗನ್ನಾಥ ಒಂದೇ ಕವನದ ಮೂಲಕ ತನ್ನ ಮನದಿಂಗಿತವನ್ನು ಅರುಹಿದ.

ದಿಲ್ಲೀಶ್ವರೋ ವಾ ಜಗದೀಶ್ವರೋ ವಾ
ಮನೋರಥಂ ಮೇ ಪೂರಯಿತುಂ ಸಮರ್ಥಃ |
ಅನ್ಯೇನ ರಾಜ್ಞಾ ಪರಿದೀಯಮಾನಂ
ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||

ನನ್ನ ಆವಶ್ಯಕತೆಯನ್ನು ಪೂರೈಸಲು ದಿಲ್ಲೀಶ್ವರ ಮತ್ತು  ಜಗದೀಶ್ವರ ಇಬ್ಬರೇ ಸಮರ್ಥರು. ಅನ್ಯ ರಾಜರಿಂದ ಕೊಡಲ್ಪಡುವ ಹಣವು ನನ್ನ ತರಕಾರಿಗೋ ಉಪ್ಪಿಗೋ ಸಾಕಾಗಬಹುದು.

ಇದು ಜಗನ್ನಾಥನ ಸ್ವಾಭಿಮಾನವೋ, ನಿಷ್ಠೆಯೋ, ಭೋಗಲಾಲಸೆಯೋ ಆ ಜಗನ್ನಾಥನೇ ಬಲ್ಲ.

(ಮಾಹಿತಿ ಕೃಪೆ: ಶ್ರೀ ಪದ್ಮನಾಭ ಸೋಮಯಾಜಿಯವರ ‘ಪಂಡಿತರಾಜ ಜಗನ್ನಾಥ’ ಕೃತಿ)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

Monday, August 7, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೭ *ಕವಯಾಮಿ ವಯಾಮಿ ಯಾಮಿ*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೭

*ಕವಯಾಮಿ ವಯಾಮಿ ಯಾಮಿ*

ಭೋಜರಾಜನ ಭವ್ಯ ಆಸ್ಥಾನ. ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ ಮಹಾರಾಜ. ನವರತ್ನಗಳೂ ಯಥೋಚಿತ ಆಸನಗಳನ್ನು ಭೂಷಿಸಿದ್ದಾರೆ. ಆಶ್ರಯವನ್ನು ಬಯಸಿ ಬಂದ ಪಂಡಿತರನ್ನು ಎಂದೂ ಹಿಂದೆ ಕಳಿಸಿದವನಲ್ಲ ಧಾರಾ ನರೇಶ. ಅಂದೂ ಒಬ್ಬ ಘನವಿದ್ವಾಂಸ ಆಸ್ಥಾನವನ್ನು ಪ್ರವೇಶಿಸಿ ತನ್ನ ವಿದ್ವತ್ತನ್ನು ಪ್ರದರ್ಶಿಸಿದ. ಸುಪ್ರೀತನಾದ ಭೋಜರಾಜ ಆ ಪಂಡಿತನಿಗೆ ವಾಸ ವ್ಯವಸ್ಥೆಯನ್ನು ಮಾಡುವಂತೆ ಮಂತ್ರಿಗಳಿಗೆ ಆಜ್ಞಾಪಿಸಿದ. ಮಂತ್ರಿಗಳು ನಗರದಲ್ಲೆಲ್ಲ ಸುತ್ತಾಡಿ ಎಲ್ಲಿಯೂ ಮನೆ ಇಲ್ಲವೆಂದು ಅರುಹಿದರು. ಅದನ್ನರಿತ ರಾಜ ನಗರದಲ್ಲಿರುವ ನಿರಕ್ಷರನನ್ನು ಅವನ ಮನೆಯಿಂದ ಹೊರ ಹಾಕಿ ಆ ಮನೆಯಲ್ಲಿ ಪಂಡಿತನ ವಾಸವ್ಯವಸ್ಥೆಯನ್ನು ಮಾಡಲು ಆದೇಶಿಸಿದ. ಮಂತ್ರಿಗಳು ಮತ್ತೆ ನಗರವನ್ನು ಸುತ್ತಿ ಬಂದರು. ಈಗಲೂ ಆಗಿದ್ದು ನಿರಾಶೆಯೇ. ಆ ಮಹಾಪಂಡಿತನನ್ನು ಹಿಂದಕ್ಕೆ ಕಳಿಸಲು ಭೋಜರಾಜನಿಗೆ ಮನಸ್ಸಿರಲಿಲ್ಲ. ಈಗ ಹೊಸ ಆದೇಶವನ್ನು ಹೊರಡಿಸಿದ. ಯಾರು ಪದ್ಯ ರಚನೆಯನ್ನು ಮಾಡಲು ಅಸಮರ್ಥರೋ ಅವನನ್ನು ಮನೆಯಿಂದ ಹೊರ ಹಾಕಿ ಅಲ್ಲಿ ಪಂಡಿತನ ವಾಸಕ್ಕೆ ಅನುವುಮಾಡಿ ಎಂದು ಮಂತ್ರಿಗಳನ್ನು ಕಳಿಸಿದ. ಮಂತ್ರಿಗಳು ಮತ್ತೆ ಹುಡುಕಿದರು. ಸುಲಭಕ್ಕೆ ಸಿಗಲಿಲ್ಲ. ಕೊನೆಯಲ್ಲಿ ನೇಕಾರನೊಬ್ಬನ ಮನೆಯನ್ನು ಹೊಕ್ಕರು. ಪದ್ಯರಚನೆ ಮಾಡಬಲ್ಲೆಯಾ? ಎಂದು ಅವನನ್ನು ಕೇಳಿದರು. ಅವನು ’ನಾನೊಬ್ಬ ನೇಕಾರ ಸ್ವಾಮಿ. ವಸ್ತ್ರವನ್ನು ನೇಯ್ದು ಮಾರಾಟಮಾಡಿ ಬದುಕು ಸಾಗಿಸುತ್ತಿದ್ದೇನೆ. ಕವನವನ್ನು ರಚಿಸುವ ಶಕ್ತಿ ನನಗೆಲ್ಲಿ ಬರಬೇಕು?’ ಎಂದ. ’ಹಾಗಾದರೆ ಹೊರಡು ಮನೆ ಬಿಟ್ಟು’ ಅಂದರು ಮಂತ್ರಿಗಳು. ನೇಕಾರ ದಿಗ್ಭ್ರಾಂತನಾದ. ’ಬೇಡ ಸ್ವಾಮಿ! ಬಡವ ನಾನು. ಹೇಗಾದರೂ ಬದುಕಿಕೊಳ್ಳುತ್ತೇನೆ. ದಯೆ ತೋರಿ’ ಎಂದು ಅಂಗಲಾಚಿದ. ಮಂತ್ರಿಗಳು ರಾಜಾಜ್ಞೆಗೆ ಕಟ್ಟು ಬಿದ್ದಿದ್ದರು. ’ಅದೇನಿದ್ದರೂ ರಾಜನಿಗೇ ಹೇಳು’ ಎಂದು ಆಸ್ಥಾನಕ್ಕೆ ಎಳೆತಂದರು. ’ಏನಪ್ಪ! ನೇಕಾರ! ಕವಿತೆಯನ್ನು ರಚಿಸುತ್ತೀಯಾ?’ ಎಂದು ಕೇಳಿದ ರಾಜ. ತನ್ನ ಮನೆಯನ್ನು ಉಳಿಸಿಕೊಳ್ಳಲು ಕವಿತೆಯನ್ನು ರಚಿಸುವುದು ಅನಿವಾರ್ಯವಾಗಿತ್ತು.

ಕಾವ್ಯಂ ಕರೋಮಿ ನ ಹಿ ಚಾರುತರಂ ಕರೋಮಿ
ಯತ್ನಾತ್ ಕರೋಮಿ ಯದಿ ಚಾರುತರಂ ಕರೋಮಿ |
ಭೂಪಾಲಮೌಲಿಮಣಿಮಂಡಿತಪಾದಪೀಠ
ಹೇ ಸಾಹಸಾಂಕ! ಕವಯಾಮಿ ವಯಾಮಿ ಯಾಮಿ ||

ಕವಿತೆಯನ್ನು ರಚಿಸಬಲ್ಲೆ, ಆದರೆ ಸುಂದರವಾಗದು. ಸ್ವಲ್ಪ ಹೆಚ್ಚು ಪ್ರಯತ್ನಿಸಿದರೆ ಸುಂದರವಾಗಬಲ್ಲದು. ಅರಸರ ತಲೆಯ ಮುಕುಟಮಣಿಗಳಿಂದ ಅಲಂಕೃತವಾದ ಪಾದಪೀಠವನ್ನು ಹೊಂದಿರುವ ಹೇ ಸಾಹಸಿಯೇ, ನಾನು ಕವನಿಸುತ್ತೇನೆ, ನೇಯುತ್ತೇನೆ, ಹೋಗುತ್ತೇನೆ.

’ಕವಯಾಮಿ ವಯಾಮಿ ಯಾಮಿ’ ಎಂಬಲ್ಲಿನ ಶಬ್ದ ಚಮತ್ಕಾರವನ್ನು ಗಮನಿಸಿ. ಅನುವಾದದಲ್ಲಿ ಆ ಚಮತ್ಕಾರ ಬರಲು ಸಾಧ್ಯವಿಲ್ಲ. ಸಾಮಾನ್ಯ ನೇಕಾರನೊಬ್ಬನ ಬಾಯಿಯಿಂದ ಇಂತಹ ಚಮತ್ಕಾರಪೂರ್ಣ ಕವಿತೆಯನ್ನು ಕೇಳಿ ಭೋಜರಾಜನಿಗೆ ಅತ್ಯಾನಂದವಾಯಿತು. ಅವನನ್ನು ಸಮ್ಮಾನಿಸಿದ. ಪಂಡಿತನಿಗೆ ಹೊಸ ಮನೆಯನ್ನು ನಿರ್ಮಿಸಿಕೊಡಲು ಆಜ್ಞಾಪಿಸಿದ.

ಹೀಗಿತ್ತು ನಮ್ಮ ಹನ್ನೊಂದನೆಯ ಶತಮಾನದ ಭಾರತ. ಸಾಮಾನ್ಯ ಪ್ರಜೆಗಳೂ ಸಂಸ್ಕೃತದಲ್ಲಿ ಮಾತನಾಡುವುದಷ್ಟೇ ಅಲ್ಲ, ಕಾವ್ಯರಚನೆಯಲ್ಲೂ ಸಮರ್ಥರಾಗಿದ್ದರು.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ
*# ಅದ್ಯ ಸಂಸ್ಕೃತದಿನಮ್*

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸಂಗ – ೬ ಶ್ವಶುರಗೃಹನಿವಾಸಃ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ
ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು
ಪ್ರಸಂಗ – ೬

ಶ್ವಶುರಗೃಹನಿವಾಸಃ......
ಭಾರವಿ ಸಂಸ್ಕೃತದ ಮಹಾಕಾವ್ಯಕರ್ತೃಗಳಲ್ಲಿ ಒಬ್ಬ. ಅವನ ಮೊದಲ ಹೆಸರು ದಾಮೋದರ ಎಂದಾಗಿತ್ತು. ಅವನು ಕಲಿಕೆಯಲ್ಲಿ ಹಿಂದುಳಿದವನಲ್ಲ. ಆದರೂ ಅವನ ತಂದೆ ಯಾವಾಗಲೂ ಅವನನ್ನು ಹೆಡ್ಡನೆಂದು ಬಯ್ಯುತ್ತಿದ್ದ. ದಿನವೂ ಮೂದಲಿಕೆಯನ್ನು ಕೇಳಿ ದಾಮೋದರ ಬೇಸತ್ತು ಹೋಗಿದ್ದ. ಒಂದಿನ ಅವನ ಸಹನೆಯ ಕಟ್ಟೆಯೊಡೆದು ತಂದೆಯನ್ನು ಕೊಲ್ಲಬೇಕೆಂದು ನಿರ್ಧರಿಸಿದ. ಒಂದು ದೊಡ್ಡದಾದ ಶಿಲೆಯನ್ನು ತೆಗೆದುಕೊಂಡು ಅಟ್ಟದ ಮೇಲೆ ಅಡಗಿ ಕುಳಿತ. ತಂದೆ ಮಲಗಿದಾಗ ಅದನ್ನು ಅವನ ತಲೆಯ ಮೇಲೆ ಎಸೆದು ಕೊಲ್ಲಬೇಕೆಂಬುದು ಅವನ ಹವಣಿಕೆಯಾಗಿತ್ತು. ಆದರೆ ಮಲಗುವಾಗ ತಂದೆ ದಾಮೋದರನ ತಾಯಿಯಲ್ಲಿ ಮಗನನ್ನು ಬಾಯ್ತುಂಬಾ ಹೊಗಳಿದ. ’ಪರೋಕ್ಷೇ ತನಯಾಃ ಸ್ತುತ್ಯಾ’ ಎಂಬ ಸೂತ್ರವನ್ನು ತಂದೆ ಅನುಸರಿಸುತ್ತಿದ್ದಾನೆ ಎಂದು ದಾಮೋದರ ಅರಿತ. ತಕ್ಷಣ ಕೆಳಗಿಳಿದು ಬಂದು ತಂದೆಯಲ್ಲಿ ಕ್ಷಮೆ ಕೇಳಿದ. ಇಂತಹ ಕ್ರೂರ ಆಲೋಚನೆಗೆ ಯಾವ ಶಿಕ್ಷೆ ಎಂದು ತಂದೆಯನ್ನೇ ಕೇಳಿದ. ಆಗ ತಂದೆಯು ’ ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸವಾಗಿರು’ ಎಂದು ಹೇಳಿದ. ದಾಮೋದರನಿಗೆ ಆಶ್ಚರ್ಯವಾಯಿತು. ಮಾವನ ಮನೆಯಲ್ಲಿ ಸಿಗುವ ರಾಜೋಪಚಾರವನ್ನು ನೆನೆದು ಇದು ಶಿಕ್ಷೆಯಲ್ಲ ವರ ಎಂದು ಸಂತಸದಿಂದ ಮಾವನ ಮನೆಗೆ ತೆರಳಿದ. ಒಂದಿನ ಕಳೆಯಿತು, ಎರಡು ದಿನ ಕಳೆಯಿತು..... ಒಂದು ವಾರ ಕಳೆಯುವಷ್ಟರಲ್ಲಿ ಶಿಕ್ಷೆಯ ಅನುಭವವಾಗುತ್ತ ಬಂತು. ಅಕ ಮಣೆ, ತಕ ಮಣೆ ತಾ ಮಣೆ (ಇದು ಗ್ರಾಮ್ಯ ಭಾಷೆ. ಶಿಷ್ಟ ಭಾಷೆಯಲ್ಲಿ ಹಾಕು ಮಣೆ-ನೂಕುಮಣೆ-ತಳ್ಳುಮಣೆ) ಪ್ರಯೋಗವಾಯಿತು. ಆಗ ಅವನ ಕವಿಹೃದಯ ಶ್ಲೋಕರೂಪದಲ್ಲಿ ಗೋಳಿಟ್ಟಿತು.

ಶ್ವಶುರಗೃಹನಿವಾಸಃ ಸ್ವರ್ಗತುಲ್ಯೋ ನರಾಣಾಂ
ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ |
ಮಧುದಧಿಘೃತಧಾರಾಕ್ಷೀರಸಾರಪ್ರವಾಹಃ
ತದುಪರಿ ದಿನಮೇಕಂ ಪಾದರಕ್ಷಾಪ್ರಹಾರಃ ||

ಮಾವನಮನೆಯ ವಾಸ ಸ್ವರ್ಗವಾಸದಂತೆ. ಮೂರೋ, ಐದೋ, ಏಳು ದಿನವೋ ಉಳಿದರೆ ಹರಿಯುವುದು ಜೇನು, ಮೊಸರು, ತುಪ್ಪ, ಹಾಲುಗಳ ಪ್ರವಾಹ. ಅದರಮೇಲೆ ಒಂದು ದಿನ ಉಳಿದರೂ ಸಿಗುವುದು ಪಾದರಕ್ಷೆಯ ಪ್ರಹಾರ!


ಗಂಡಸರು ಯೋಚಿಸಬೇಕಾದ್ದು!   

Saturday, August 5, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೫ *ಜಲಮಧ್ಯೇ ಡುಬುಕ್ ಡುಬುಕ್*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೫


*ಜಲಮಧ್ಯೇ ಡುಬುಕ್ ಡುಬುಕ್*


ಭೋಜರಾಜ ಪಂಡಿತರನ್ನು ಗೌರವಾದರಗಳಿಂದ ಕಾಣುತ್ತಾನೆ ಎಂಬುದನ್ನು ತಿಳಿದ ನಾಲ್ವರು ಪಂಡಿತಂಮನ್ಯರು (ತಮ್ಮನ್ನು ತಾವೇ ಪಂಡಿತರೆಂದು ತಿಳಿದುಕೊಂಡವರು) ಧಾರಾನಗರಿಗೆ ಹೊರಟರು. ರಾಜನನ್ನು ಸುಪ್ರೀತಗೊಳಿಸಲು ಪದ್ಯವೊಂದನ್ನು ಬರೆಯಬೇಕಾಗಿತ್ತು. ದಾರಿಯುದ್ದಕ್ಕೂ ಯೋಚಿಸಿದರೂ ಯಾವುದೇ ಕವಿತಾಕಾಮಿನಿ ಅವರಿಗೆ ಒಲಿಯಲಿಲ್ಲ. ಪ್ರಯಾಣದಿಂದ ದಣಿದ ಅವರು ವಿಶ್ರಾಂತಿಗಾಗಿ ಸರೋವರವೊಂದರ ತೀರದಲ್ಲಿ ಮರದ ನೆರಳನ್ನಾಶ್ರಯಿಸಿದರು. ಅದು ಜಂಬೂಫಲದ ಮರವಾಗಿತ್ತು. ಮರದಲ್ಲಿ ಕಳಿತ ಹಣ್ಣುಗಳನ್ನು ನೋಡಿದ ಅವರಲ್ಲೊಬ್ಬ ಶ್ಲೋಕದ ಒಂದು ಪಾದವನ್ನು ರಚಿಸಿದ –’ಜಂಬೂಫಲಾನಿ ಪಕ್ವಾನಿ’. ಅವು ಸರೋವರದ ನೀರಿನಲ್ಲಿ ಬೀಳುತ್ತಿರುವುದನ್ನು ನೋಡಿದ ಇನ್ನೊಬ್ಬ ಎಂದ ಪತಂತಿ ವಿಮಲೇ ಜಲೇ’ ಮತ್ತೊಬ್ಬ ಸರೋವರದಲ್ಲಿ ಇಣುಕಿ ಹಾಕಿದ. ಅದರಲ್ಲಿರುವ ಮೀನುಗಳು ಹಣ್ಣುಗಳನ್ನು ತಿನ್ನದೇ ದೂರ ಓಡಿ ಹೋಗುತ್ತಿದ್ದುದನ್ನು ನೋಡಿ ’ತಾನಿ ಮತ್ಸ್ಯಾ ನ ಖಾದಂತಿ’ ಎಂದ. ನಾಲ್ಕನೆಯವನು ಕೊನೆಯ ಚರಣವನ್ನು ಕಟ್ಟಲು ಕಷ್ಟಪಟ್ಟ. ಹಣ್ಣುಗಳು ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಕಂಡು ಹೇಳಿದ – ’ಜಲಮಧ್ಯೇ ಡುಬುಕ್ ಡುಬುಕ್’. ನಾಲ್ವರಿಗೂ ಸಮಾಧಾನವಾಯಿತು. ಎಲ್ಲರೂ ಸೇರಿ ರಚಿಸಿದ ನಾಲ್ಕು ಸಾಲುಗಳನ್ನು ರಾಜನ ಮುಂದೆ ವಾಚಿಸಿದರು.

ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಲಮಧ್ಯೇ ಡುಬುಕ್ ಡುಬುಕ್ ||


ಸ್ವತ: ಕವಿಯಾಗಿದ್ದ ಭೋಜರಾಜ ಪ್ರತಿಭಾಶೂನ್ಯವಾದ ಈ ಕವಿತೆಯನ್ನು ಕೇಳಿ ನಾಲ್ವರಿಗೂ ಛೀಮಾರಿ ಹಾಕಿ ಕಳಿಸಿದ. ಹಣದಾಸೆಯಿಂದ ಬಂದಿದ್ದ ಅವರು ಕಂದಿದ ಮುಖವನ್ನು ಹೊತ್ತು ಹೊರಬಿದ್ದರು. ದಾರಿಯಲ್ಲಿ ಭೇಟಿಯಾದ ಕಾಳಿದಾಸ ಏನಾಯ್ತೆಂದು ಕೇಳಿದ. ಅವರು ಕಾಳಿದಾಸನಿಗೆ ಎಲ್ಲವನ್ನೂ ಹೇಳಿದರು. ಅವನು ಅವರ ಪದ್ಯವನ್ನು ನೋಡಿ ನಸುನಕ್ಕು ಕೊನೆಯ ಚರಣವೊಂದನ್ನು ಬದಲಿಸಿದ.


ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಾಲಗೋಲಕಶಂಕಯಾ ||


ಪಕ್ವವಾದ ಜಂಬೂ ಫಲಗಳು ನೀರಿನಲ್ಲಿ ಬೀಳುತ್ತಿವೆ. ಆದರೆ ಅವು ತಮ್ಮನ್ನು ಹಿಡಿಯಲು ಹಾಕಿರುವ ಬಲೆಯ ಚೆಂಡುಗಳೋ (ಬಲೆ ಮುಳುಗದಿರಲೆಂದು ಕಟ್ಟಿರುವ) ಎಂಬ ಸಂಶಯದಿಂದ ಮೀನುಗಳು ಅವನ್ನು ತಿನ್ನುತ್ತಿಲ್ಲ.


ಆ ಕೊನೆಯ ಪಾದ ಕವಿತೆಯ ಭಾಗ್ಯವನ್ನೇ ಬದಲಿಸಿಬಿಟ್ಟಿತು. ಅಪೂರ್ವವಾದ ಸೌಂದರ್ಯ ಆ ಕವಿತೆಗೊದಗಿತು. ಪಂಡಿತರು ಮತ್ತೆ ಒಳಹೋಗಿ ರಾಜನ ಮುಂದೆ ಬದಲಾವಣೆಯೊಂದಿಗೆ ವಾಚಿಸಿದರು. ಭೋಜನಿಗೆ ಇದು ಕಾಳಿದಾಸನ ಕೈವಾಡ ಎಂದು ಅರಿವಾದರೂ ಮುಗುಳ್ನಕ್ಕು ಆ ಪಂಡಿತಪುತ್ರರನ್ನು ಸತ್ಕರಿಸಿ ಕಳಿಸಿಕೊಟ್ಟ.

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕತಿ ತಿಳಿಯಿರಿ.

Friday, August 4, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಜೀವವನ್ನುಳಿಸಿದ ಕವಿತೆ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೪


*ಜೀವವನ್ನುಳಿಸಿದ ಕವಿತೆ......*


ಭರತಭೂಮಿಯ ಶಿಖರವಾದ ಕಾಶ್ಮೀರ ಸರಸ್ವತಿಯ ತವರೂರಾಗಿತ್ತು. ಹಾಗಾಗಿಯೇ ಆಚಾರ್ಯ ಶಂಕರರು ಸರಸ್ವತಿಯನ್ನು ಕಾಶ್ಮೀರಪುರವಾಸಿನಿ ಎಂದು ಸ್ತುತಿಸಿದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದ ಬಿಲ್ಹಣನೆಂಬ ಕವಿ ಗುಜರಾತ ಪ್ರಾಂತದ ರಾಜನ ಕುವರಿಗೆ ಸಂಸ್ಕೃತ ಕಲಿಸುತ್ತಿದ್ದ. ಕ್ರಮೇಣ ಅವನು ರಾಜಕುಮಾರಿಯ ಪ್ರೇಮಪಾಶಕ್ಕೆ ಸಿಲುಕಿದ. ಇದನ್ನು ತಿಳಿದ ರಾಜ ತನ್ನ ಪ್ರತಿಷ್ಠೆಗೆ ಕುಂದೆಂದು ಭಾವಿಸಿ ಬಿಲ್ಹಣನಿಗೆ ಮರಣದಂಡನೆಯನ್ನು ವಿಧಿಸಿದ. ವಧಸ್ಥಾನಕ್ಕೆ ಒಯ್ಯುವಾಗ ಬಿಲ್ಹಣನು ಸುಂದರವಾದ ವಿರಹಪದ್ಯಗಳನ್ನು ರಚಿಸಿ ಹಾಡತೊಡಗಿದ. ಈ ಪದ್ಯಗಳ ಸಂಗ್ರಹ ಮುಂದೆ ’ಚೋರ ಪಂಚಾಶಿಕಾ’ ಎಂದು ಪ್ರಸಿದ್ಧವಾಗಿದೆ. ಆಗಲೇ ಒಂದು ಪದ್ಯದ ಮೂಲಕ ರಾಜನಿಗೊಂದು ಸಂದೇಶವನ್ನು ಕಳಿಸಿದ.


ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಽಪಿ ನಷ್ಟಃ |
ಭುಕ್ಕುಂಡೋಽಹಂ ಭೂಪತಿಸ್ತ್ವಂ ಚ ರಾಜನ್
ಭಂಭಾವಲ್ಯಾಮಂತಕಃ ಸನ್ನಿವಿಷ್ಟಃ ||


ಭಟ್ಟಿ(ಕವಿ), ಭಾರವಿ(ಕವಿ), ಭಿಕ್ಷು(ಬುದ್ಧ), ಭೀಮಸೇನ ಇವರೆಲ್ಲ ಯಮನ ವಶರಾಗಿದ್ದಾರೆ. ಈಗ ಭುಕ್ಕುಂಡ(ಬಿಲ್ಹಣನ ಇನ್ನೊಂದು ಹೆಸರು)ನಾದ ನನ್ನವರೆಗೆ ಯಮ ತಲುಪಿದ್ದಾನೆ. ಭಕಾರದ ವರ್ಣಮಾಲೆಯನ್ನು ಪ್ರವೇಶಿಸಿದ ಯಮ ಭ, ಭಾ, ಭಿ, ಭೀ ಗಳನ್ನು ಮುಗಿಸಿ ’ಭು’ವನ್ನು ತಲುಪಿದ್ದಾನೆ. ನೀನು ಭೂಪತಿ. ಮುಂದಿನ ಸರದಿ ನಿನ್ನದು. ನನ್ನ ಮರಣ ತಡವಾದಷ್ಟು ನಿನ್ನ ಮರಣ ಮುಂದೂಡಲ್ಪಡುತ್ತದೆ. ಎಂಬುದು ಈ ಪದ್ಯದ ತಾತ್ಪರ್ಯ. ಅದನ್ನು ಅರಿತ ರಾಜ ಕವಿಯ ಚಾತುರ್ಯವನ್ನು ಮೆಚ್ಚಿ ಅವನಿಗೇ ತನ್ನ ಮಗಳನ್ನು ಧಾರೆಯೆರೆದು ಕೊಟ್ಟ.


📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...