Wednesday, March 8, 2017

ಲೋಪಾಮುದ್ರಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - ೬
ಲೋಪಾಮುದ್ರಾ
ವೈದಿಕ ಕಾಲದ ಗೌರಾನ್ವಿತ ವೇದದೃಷ್ಟಾರ ನಾರಿಯರಲ್ಲಿ ಅಗಸ್ತ್ಯಪತ್ನಿ ಲೋಪಾಮುದ್ರೆಗೆ ಮಹತ್ತ್ವದ ಸ್ಥಾನವಿದೆ. ಲೋಪಾಮುದ್ರೆಯನ್ನು ವಿವಿಧಪ್ರಾಣಿಗಳ ವಿಶಿಷ್ಟ ಅಂಗಗಳಿಂದ (ಜಿಂಕೆಯ ಕಣ್ಣು, ನವಿಲಿನ ಲಾಸ್ಯ, ಮಲ್ಲಿಗೆಯ ಹಾಸ, ಸಿಂಹದ ಸೊಂಟ, ಕೋಗಿಲೆಯ ಕಂಠ.....) ಅಗಸ್ತ್ಯರೇ ಸೃಷ್ಟಿಸಿದ್ದು. ಹಾಗಾಗಿ ಅವಳು ಅಪ್ರತಿಮ ಸುಂದರಿಯಾಗಿ ರೂಪುಗೊಂಡಳು. ಅವಳು ಬೆಳೆದಿದ್ದು ಮಾತ್ರ ವೈದರ್ಭರಾಜ ಹಾಗೂ ದಾಕ್ಷಾಯಣಿಯರ ಸಾಕು ಮಗಳಾಗಿ ಅರಮನೆಯಲ್ಲಿ. ಸಕಲ ವೇದ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದ ಅವಳು ಪ್ರಾಪ್ತವಯಸ್ಕಳಾದಾಗ ಅಗಸ್ತ್ಯರು ಮತ್ತೆ ರಾಜನ ಆಸ್ಥಾನಕ್ಕೆ ಬಂದು ಅವಳನ್ನು ಮದುವೆ ಮಾಡಿಕೊಡುವಂತೆ ಕೇಳುತ್ತಾರೆ. ರಾಜನು ಮನಸ್ಸಿಲ್ಲದೆ ಮೀನ ಮೇಷ ಎಣಿಸುತ್ತಿರುವಾಗ ಲೋಪಾಮುದ್ರೆ ಸ್ವತ: ಒಪ್ಪಿ ಆಭರಣಾದಿಗಳನ್ನು ಕಳಚಿ ಅಗಸ್ತ್ಯರ ಜೊತೆ ಹೊರಟಳು.

ತನ್ನ ಗೃಹಿಣೀಧರ್ಮವನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದ ಲೋಪಾಮುದ್ರೆಗೆ ಗಂಡನ ಜಡತೆ ಬೇಸರ ತಂದಿತ್ತು. ತನ್ನ ಪಿತೃಗಳನ್ನು ತಲೆಕೆಳಗಾಗಿ ನೇತಾಡುವ ಶಿಕ್ಷೆಯಿಂದ ಪಾರುಮಾಡಲು ಸಂತಾನವನ್ನು ಪಡೆಯುವ ಅನಿವಾರ್ಯತೆಯನ್ನು ಕೂಡ ಅಗಸ್ತ್ಯರು ಮರೆತಿದ್ದರು. ವೇದಾಭ್ಯಾಸಜಡನಾಗಿದ್ದ ಗಂಡನಿಗೆ ವೈದಿಕ ಮಂತ್ರದ ಮೂಲಕವೇ ಚುರುಕುಮುಟ್ಟಿಸಲು ಸೂಕ್ತವೊಂದನ್ನು ರಚಿಸಿದಳು. ರತಿದೇವಿಯ ಕುರಿತಾದ ಈ ಋಗ್ವೇದಸೂಕ್ತ(೧ ನೇ ಮಂಡಲ, ೧೭೯ನೇ ಸೂಕ್ತ)ದಲ್ಲಿ ಆರು ಮಂತ್ರಗಳಿದ್ದು ಮೊದಲ ಎರಡು ಲೋಪಾಮುದ್ರೆಯಿಂದ, ನಂತರದ ಎರಡು ಅಗಸ್ತ್ಯರಿಂದ ಹಾಗೂ ಕೊನೆಯ ಎರಡು ಪತಿಪತ್ನಿಯರ ಸಂಭಾಷಣೆಯನ್ನು ಅಕಸ್ಮಾತ್ತಾಗಿ ಕೇಳಿದ ಶಿಷ್ಯನಿಂದ ರಚಿಸಲ್ಪಟ್ಟಿವೆ.

ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ಕಥೆಯ ಪ್ರಕಾರ ಅಗಸ್ತ್ಯರು ಲೋಪಾಮುದ್ರೆಯ ಸೌಂದರ್ಯದಿಂದ ಕಾಮಾತುರರಾಗಿದ್ದ ಸಂದರ್ಭದಲ್ಲಿ ಲೋಪಾಮುದ್ರೆಯು ತಾನು ತ್ಯಾಗ ಮಾಡಿದ ಆಭರಣಗಳನ್ನು ಸಂಪಾದಿಸಿ ತಂದುಕೊಡುವವರೆಗೆ ತನ್ನನ್ನು ಒಪ್ಪಿಸಿಕೊಳ್ಳಲಾರೆ ಎನ್ನುತ್ತಾಳೆ. ಅರ್ಥಸಂಗ್ರಹವೂ ಗೃಹಸ್ಥನಾದವ ಸಾಧಿಸಬೇಕಾದ ಒಂದು ಪುರುಷಾರ್ಥ ಎಂಬುದಾಗಿ ಮನವರಿಕೆ ಮಾಡಿ ಕೊಡುತ್ತಾಳೆ. ಅಗಸ್ತ್ಯರು ಇಲ್ವಲನಲ್ಲಿಗೆ ಹೋಗಿ ಹಣವನ್ನು ತರುತ್ತಾರೆ. ಆ ನಂತರ ಅವರಿಗೆ ದೃಢಸ್ಯು ಎಂಬ ಮಗ ಜನಿಸುತ್ತಾನೆ.

ದಕ್ಷಿಣಭಾರತದಲ್ಲಿ ಲೋಪಾಮುದ್ರೆಯ ಕುರಿತು ಜಾನಪದ ಕಥೆ ಪ್ರಚಲಿತವಿದೆ. ದಕ್ಷಿಣ ಭಾರತದಲ್ಲಿ ಘೋರವಾದ ಬರಗಾಲ ಬಂದಿತ್ತು. ನೀರಿಲ್ಲದೆ ಹಾಹಾಕಾರ ಎದ್ದಿತ್ತು. ಅದನ್ನು ತಿಳಿದ ಲೋಪಾಮುದ್ರೆ ಜನರ ಕಷ್ಟವನ್ನು ನೀಗುವಂತೆ ಅಗಸ್ತ್ಯರನ್ನು ಕೇಳಿಕೊಂಡಳು. ಅಗಸ್ತ್ಯರು ಲೋಪಾಮುದ್ರೆಯನ್ನು ನೀರಿನರೂಪದಲ್ಲಿ ಕಮಂಡಲುವಿನಲ್ಲಿರಿಸಿಕೊಂಡು ತಪಸ್ಸಿಗೆ ಕುಳಿತರು. ಗಣೇಶನ ತಂತ್ರದಿಂದ ಕಮಂಡಲು ಮಗುಚಿಬಿದ್ದು ನೀರು ಹರಿಯಲು ಆರಂಭಿಸಿತು. ಅದೇ ಮುಂದೆ ಕಾವೇರಿ ನದಿಯೆಂದು ಪ್ರಸಿದ್ಧವಾಯಿತು.


ಲಲಿತಾ ಸಹಸ್ರನಾಮವನ್ನು ಜಗತ್ತಿನಲ್ಲಿ ಪ್ರಸಾರ ಮಾಡಿದ ಕೀರ್ತಿಯೂ ಲೋಪಾಮುದ್ರೆಗಿದೆ. ದೇವಗುರು ಬೃಹಸ್ಪತಿಯೇ ಮೊದಲಾದವರು ಅವಳ ಪಾದಚಿಹ್ನೆಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು. ಅಷ್ಟು ಗೌರವಸ್ಥಾನ ಲೋಪಾಮುದ್ರೆಗಿತ್ತು.

ಅನುಪಮ ಸಾಧ್ವಿ ಅರುಂಧತಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 5

ಅನುಪಮ ಸಾಧ್ವಿ ಅರುಂಧತಿ
ಕರ್ದಮ ದೇವಹೂತಿಯರ ಎಂಟನೆಯ ಕನ್ಯೆ ಅರುಂಧತಿ. ಸಪ್ತರ್ಷಿಗಳಲ್ಲಿ ಅಗ್ರಗಣ್ಯನಾದ ವಸಿಷ್ಠನ ಧರ್ಮಪತ್ನಿ. ವಿದ್ಯಾ ವಿವೇಕಗಳಿಂದ ಋಷಿ ಮಂಡಲದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಳು.
ಇನ್ನೊಂದು ಮೂಲದ ಪ್ರಕಾರ ಮೇಧಾತಿಥಿ ಮಹರ್ಷಿ ಅರುಂಧತಿಯ ಜನಕ. ವಸಿಷ್ಠನನ್ನೇ ಪತಿಯಾಗಿ ಸಂಕಲ್ಪಿಸಿ ಯಜ್ಞಕುಂಡದಲ್ಲಿ ದೇಹತ್ಯಾಗ ಮಾಡಿ ಅಲ್ಲಿಂದಲೇ ಪುನರ್ಜನ್ಮ ಪಡೆದ ಸಂಧ್ಯಾ ಕುಮಾರಿಯೇ ಅರುಂಧತಿಯೆಂದು ಈ ಕಥೆ ಹೇಳುತ್ತದೆ. ಸಾವಿತ್ರೀದೇವಿ ಹಾಗೂ ಬಹುಲಾದೇವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಂಧತಿ ಸಕಲಜ್ಞಾನ ಸಂಪನ್ನೆಯಾಗಿದ್ದಳು.
ತನ್ನ ನೂರು ಮಕ್ಕಳನ್ನು ವಿಶ್ವಾಮಿತ್ರ ಶಾಪದಿಂದ ಕೊಂದಾಗಲೂ ಸಹನೆ ಮೀರದೆ ಅವನನ್ನು ಕ್ಷಮಿಸಿದ ಸಾಧ್ವಿ. ಮುಂದೆ ಹುಟ್ಟಿದ ಶಕ್ತಿ ಎಂಬ ಮಗ ವಿಶ್ವಾಮಿತ್ರನ ಕುತಂತ್ರಕ್ಕೆ ಬಲಿಯಾದಾಗಲೂ ಸಹಿಸಿಕೊಂಡಿದ್ದಳು. ಇವಳ ಕೊನೆಯ ಮಗ ಸುಯಜ್ಞ ರಾಮನ ಸಹಪಾಠಿ.

ರಾಮಾಯಣದಲ್ಲಿ ಅರುಂಧತಿ ಸೀತೆಗೆ ದಾಂಪತ್ಯ ಜೀವನದ ಬಗ್ಗೆ ಉಪದೇಶವನ್ನು ನೀಡುತ್ತಾಳೆ. ಅಗ್ನಿ ಪತ್ನಿ ಸ್ವಾಹಾ ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಳೆಯುತ್ತಿದ್ದಳು. ಆದರೆ ಅರುಂಧತಿಯ ರೂಪವನ್ನು ಮಾತ್ರ ತಳೆಯಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅರುಂಧತಿಯ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಗಾಧ ಪಾಂಡಿತ್ಯ ಸೋತ ಸ್ವಾಹಾ ಬಹುವಿಧವಾಗಿ ಅರುಂಧತಿಯನ್ನು ಸ್ತುತಿಸುತ್ತಾಳೆ. ಇಂದ್ರಾದಿ ದೇವತೆಗಳಿಗೂ ಅರುಂಧತಿ ಗೃಹಸ್ಥಧರ್ಮದ ಬಗ್ಗೆ ಉಪದೇಶ ನೀಡಿದ್ದಳು.


ವಸಿಷ್ಠ-ಅರುಂಧತಿಯರ ದಾಂಪತ್ಯ ಸಾರ್ವಕಾಲಿಕ ಆದರ್ಶವಾಗಿ ನಿಂತಿದೆ. ವಿವಾಹದಲ್ಲಿ ಅರುಂಧತೀಪೂಜೆ ಹಾಗೂ ಅರುಂಧತೀ ನಕ್ಷತ್ರ ದರ್ಶನ ದಾಂಪತ್ಯಜೀವನದಲ್ಲಿ ಶುಭವನ್ನುಂಟುಮಾಡುತ್ತವೆ ಎಂಬ ನಂಬಿಕೆಯಿದೆ.

ಕುಮಾರಿ ಸಂಧ್ಯಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 4

ಕುಮಾರಿ ಸಂಧ್ಯಾ
ಬ್ರಹ್ಮ ಮಾನಸಪುತ್ರಿ ಸಂಧ್ಯಾ ವಿವೇಕಮತಿಯೂ ದೂರದೃಷ್ಟಿಯುಳ್ಳವಳೂ ಆಗಿದ್ದಳು. ಚಂದ್ರಭಾಗ ಪರ್ವತದ ಬೃಹಲ್ಲೋಹಿತ ಎಂಬ ಸರೋವರದ ಬಳಿ ತಪಶ್ಚರಣೆಯ ಉದ್ದೇಶದಿಂದ ಸದ್ಗುರುವೊಬ್ಬನ ನಿರೀಕ್ಷೆಯಲ್ಲಿದ್ದಳು. ಆಗ ಅಲ್ಲಿಗೆ ಬಂದ ವಸಿಷ್ಠ ಮಹರ್ಷಿಯಿಂದ ’ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ ಮಂತ್ರದ ಉಪದೇಶವನ್ನೂ, ತಪಸ್ಸನ್ನು ಮಾಡುವ ಪದ್ಧತಿಯನ್ನೂ ತಿಳಿದುಕೊಂಡು ಘೋರ ತಪಸ್ಸನ್ನಾಚರಿಸಿದಳು. ಅವಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಪರಮಾತ್ಮನಲ್ಲಿ ಅವಳು ಕೇಳಿದ್ದು ಮೂರು ವರಗಳನ್ನು. ಮೊದಲನೆಯ ವರ ಲೋಕ ಕಲ್ಯಾಣಕ್ಕಾಗಿ. ’ಈ ಭೂಮಿಯ ಮೇಲೆ ಹುಟ್ಟುವ ಯಾವುದೇ ಜೀವಿಗೆ ಹುಟ್ಟಿದಾಕ್ಷಣ ಕಾಮಭಾವನೆ ಬರದಿರಲಿ’. ಭಗವಂತ ಈ ಕೋರಿಕೆಯನ್ನು ಮನ್ನಿಸಿ ಬಾಲ್ಯ ಕೌಮಾರ್ಯ, ಯೌವನ, ವೃದ್ಧಾಪ್ಯ ಈ ನಾಲ್ಕು ಅವಸ್ಥೆಗಳನ್ನು ಹೊಂದಿದ ಜೀವಿಗಳಿಗೆ ಕಾಮಭಾವನೆ ಮೂರನೆಯ ಅವಸ್ಥೆಯಲ್ಲಿ ಮಾತ್ರ ಇರಲಿ ಎಂದು ಅನುಗ್ರಹಿಸುತ್ತಾನೆ. ಮನಸ್ಸು ಮಾಗುವ ಮೊದಲೇ ಕಾಮವಿಕಾರವುಂಟಾದರೆ ಆಗುವ ಅನಾಹುತದ ಬಗ್ಗೆ ಆಗಲೇ ದೂರದೂಷ್ಟಿಯ ಚಿಂತನೆಯನ್ನು ಮಾಡಿದವಳು ಸಂಧ್ಯಾ. ಈಗಿನ ಬಾಲಾಪರಾಧಿಗಳನ್ನು ನೋಡಿದರೆ ಅವಳು ಪಡೆದ ವರ ಪ್ರಭಾವವು ಕಡಿಮೆಯಾಗಿದೆಯೇನೋ ಅನ್ನಿಸುತ್ತದೆ.

ಎರಡನೆಯ ವರದಿಂದ ಅಖಂಡ ಮುತ್ತೈದೆತನವನ್ನೂ, ಮೂರನೆಯ ವರದಿಂದ ಪತಿಯ ಹೊರತು ಇನ್ಯಾರಾದರೂ ಅವಳನ್ನು ಕಾಮದೃಷ್ಟಿಯಿಂದ ನೋಡಿದರೆ ನಪುಂಸಕರಾಗುವಂತೆಯೂ ವರವನ್ನು ಪಡೆಯುತ್ತಾಳೆ. ತನ್ಮೂಲಕ ಪರಸ್ತ್ರೀಯನ್ನು ಕಾಮುಕ ದೃಷ್ಟಿಯಿಂದ ನೋಡುವವರ ಪುರುಷತ್ವವನ್ನೇ ನಾಶಗೊಳಿಸಿ ಶಿಕ್ಷಿಸಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದವಳು ಈ ಧೀರ ಕುಮಾರಿ. ಸ್ತ್ರೀ ಸಬಲೀಕರಣದ ಮೊತ್ತಮೊದಲ ಕ್ರಾಂತಿಕಾರಿಯಂತೆ ಗೋಚರವಾಗುತ್ತಾಳೆ ಅವಳು.

ವಿಷ್ಣುವಿನ ಸಲಹೆಯಂತೆ ತನಗೆ ಮಾರ್ಗದರ್ಶನ ಮಾಡಿದ ವಸಿಷ್ಠಮಹರ್ಷಿಯೇ ಪತಿಯಾಗಬೇಕೆಂದು ಸಂಕಲ್ಪಿಸಿ ಮೇಧಾತಿಥಿ ಮಹರ್ಷಿಯ ಯಜ್ಞವನ್ನು ದಿವ್ಯರೂಪದಲ್ಲಿ ಪ್ರವೇಶಿಸುತ್ತಾಳೆ. ಅವಳ ಭೌತಿಕದೇಹವನ್ನು ಎರಡಾಗಿ ಮಾಡಿ ತನ್ನ ರಥದ ಇಕ್ಕೆಲಗಳಲ್ಲಿ ಸ್ಥಾಪಿಸಿದ ಸೂರ್ಯ ಪ್ರಾತ:ಸಂಧ್ಯಾ ಮತ್ತು ಸಾಯಂ ಸಂಧ್ಯಾ ಎಂಬ ಎರಡು ಸಂಧ್ಯಾಕಾಲಗಳನ್ನು ನಿರ್ಮಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅದೇ ಅಗ್ನಿಯಲ್ಲಿ ಪುನರ್ಜನ್ಮ ಪಡೆದು ಅರುಂಧತಿಯೆಂದು ನಾಮಕರಣಗೊಡ ಸಂಧ್ಯಾಕುಮಾರಿ ಮುಂದೆ ವಸಿಷ್ಠನನ್ನು ವರಿಸುತ್ತಾಳೆ.

ಗೃಹಿಣಿಯರ ಅಗ್ರಣಿ ಅನಸೂಯೆ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು

ಭಾಗ - 3

ಗೃಹಿಣಿಯರ ಅಗ್ರಣಿ ಅನಸೂಯೆ
ದೇವಹೂತಿ ಹಾಗೂ ಕರ್ದಮಮುನಿಯ ಮಗಳಾದ ಅನಸೂಯಾ ಹೆಸರಿಗೆ ತಕ್ಕಂತೆ ಅಸೂಯಾದಿ ದುರ್ಗುಣರಹಿತ ಸಾಧ್ವಿ ಶಿರೋಮಣಿಯಾಗಿದ್ದಳು. ತಾಯಿಯಿಂದ ಸಕಲ ಕನ್ಯಾಸಂಸ್ಕಾರಗಳನ್ನು ಪಡೆದುಕೊಂಡು ಬ್ರಹ್ಮ ಮಾನಸಪುತ್ರನೂ ಸಪ್ತರ್ಷಿಗಳಲ್ಲಿ ಒಬ್ಬನೂ ಆದ ಅತ್ರಿ ಮಹರ್ಷಿಯನ್ನು ವರಿಸಿದಳು.

ಪತಿಯ ಸಕಲ ಧಾರ್ಮಿಕ ಕಾರ್ಯಗಳಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಸಹಚಾರಿಣಿಯಾಗಿ, ಅತಿಥಿ ಸತ್ಕಾರಾದಿ ಗೃಹಿಣೀಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಅನಸೂಯೆಯ ಬಗ್ಗೆ ಮೂರು ಲೋಕಗಳಲ್ಲೂ ಆದರಭಾವವಿತ್ತು. ನಾರದರಿಂದ ಅವಳ ಹಿರಿಮೆಯನ್ನು ಕೇಳಿ ತ್ರಿಮೂರ್ತಿಗಳ ಪತ್ನಿಯರಿಗೆ ಅಸೂಯೆಯುಂಟಾಯಿತು. ತ್ರಿಮೂರ್ತಿಗಳು ಅನಸೂಯೆಯ ಪರೀಕ್ಷೆಗಾಗಿ ಕಣಕ್ಕಿಳಿದರು. ಸಂನ್ಯಾಸಿಗಳ ವೇಷದಲ್ಲಿ ಅತ್ರಿ ಆಶ್ರಮವನ್ನು ಪ್ರವೇಶಿಸಿದರು. ಅವರನ್ನು ಸತ್ಕರಿಸಿದ ಅನಸೂಯೆ ಭೋಜನವನ್ನು ನೀಡಲು ಅಣಿಯಾದಾಗ ವಿವಸ್ತ್ರಳಾಗಿ ಬಡಿಸಿದರೆ ಮಾತ್ರ ಉಣ್ಣುವುದಾಗಿ ಪಟ್ಟು ಹಿಡಿದರು. ಅತಿಥಿಗಳ ಅಭಿಲಾಷೆಯನ್ನು ಪೂರ್ತಿಗೊಳಿಸುವುದೇ ಇಲ್ಲ ಸತೀಧರ್ಮವನ್ನು ಪಾಲಿಸುವುದೇ ಎಂಬ ಧರ್ಮಸಂಕಟದ ಆ ಪರಿಸ್ಥಿತಿಯಲ್ಲೂ ಅನಸೂಯೆಯ ಮುಖದಲ್ಲಿ ಮಂದಹಾಸ ಮೂಡಿತು. ತನ್ನ ಅದಮ್ಯ ಅಂತ:ಶಕ್ತಿಯ ಮೇಲೆ ಅವಳಿಗೆ ವಿಶ್ವಾಸವಿತ್ತು. ಪತಿಯ ಕಮಂಡಲುವಿನಿಂದ ನೀರನ್ನು ತೆಗೆದು ಮೂವರ ಮೇಲೂ ಪ್ರೋಕ್ಷಿಸಿದಳು. ತಕ್ಷಣ ತ್ರಿಮೂರ್ತಿಗಳು ಹಾಲುಗಲ್ಲದ ಮುಗ್ಧ ಹಸುಳೆಗಳಾದರು. ಅನಸೂಯೆಯಲ್ಲಿ ಮಾತೃಭಾವ ಜಾಗೃತವಾಯಿತು. ಮೂವರಿಗೂ ಸ್ತನ್ಯಪಾನ ಮಾಡಿಸಿದಳು. ಧುತ್ತೆಂದು ಎರಗಿದ್ದ ಸಂದಿಗ್ಧತೆಯನ್ನು ವಿವೇಕದಿಂದ, ಚಾಕಕ್ಯತೆಯಿಂದ ಎದುರಿಸಿದ ಅನಸೂಯೆ ತ್ರಿಮೂರ್ತಿಗಳ ತಾಯಿಯಾದಳು.

ತಮ್ಮ ಗಂಡಂದಿರನ್ನು ಹುಡುಕುತ್ತ ಬಂದ ಸರಸ್ವತಿ, ಲಕ್ಷ್ಮಿ ಪಾರ್ವತಿಯರಿಗೆ ಕಾಣಿಸಿದ್ದು ಅನಸೂಯೆಯ ಜೋಗುಳದನಿಯಿಂದ ತೊಟ್ಟಿಲಲ್ಲಿ ನಿದ್ದೆಹೋದ ಶಿಶುಗಳು. ಪರಿಸ್ಥಿಯನ್ನು ಅರಿತ ಅವರಿಗೆ ಅನಸೂಯೆಗೆ ಶರಣಾಗುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಅವರ ಅರಿಕೆಯನ್ನು ಮನ್ನಿಸಿ ಮಂತ್ರಜಲದಿಂದ ಶಿಶುಗಳನ್ನು ಮತ್ತೆ ತ್ರಿಮೂರ್ತಿಗಳನ್ನಾಗಿಸಿ ಬೀಳ್ಕೊಟ್ಟಳು. ಮುಂದೆ ಬ್ರಹ್ಮ ವಿಷ್ಣು ಮಹೇಶ್ವರರ ಅಂಶದಿಂದ ಕ್ರಮವಾಗಿ ಚಂದ್ರ, ದತ್ತ ಹಾಗೂ ದೂರ್ವಾಸ ಎಂಬ ಮೂವರು ಮಕ್ಕಳನ್ನು ಪಡೆದಳು.

ಕೌಶಿಕನೆಂಬ ಕುಷ್ಠರೋಗ ಪೀಡಿತ ಬ್ರಾಹ್ಮಣ ಮಾಂಡವ್ಯ ಮಹರ್ಷಿಯಿಂದ ’ಸೂರ್ಯೋದಯವಾಗುವುದರೊಳಗೆ ಸಾಯಿ’ ಎಂದು ಶಾಪವನ್ನು ಪಡೆದಾಗ ಅವನ ಪತ್ನಿ ಶಾಂಡಿಲಿ ತನ್ನ ಶಕ್ತಿಯಿಂದ ಸೂರ್ಯೋದಯವನ್ನೇ ತಡೆಹಿಡಿದಿದ್ದಳು. (ಶಾಂಡಿಲಿಯ ಕಥೆಯನ್ನು ವಿಸ್ತರವಾಗಿ ಮುಂದೆ ನೋಡೋಣ) ದೇವತೆಗಳಿಂದ ಪ್ರಾರ್ಥಿತಳಾದ ಅನಸೂಯೆ ಅಲ್ಲಿಗೆ ತೆರಳಿ ಕೌಶಿಕನ ಶಾಪ ವಿಮೋಚನೆಯನ್ನು ಮಾಡಿ ದಿನಕರನ ವ್ಯಾಪಾರವನ್ನು ಸುಗಮಗೊಳಿಸಿದಳು.

ಅತ್ರಿ-ಅನಸೂಯೆಯರ ಆಶ್ರಮವಿದ್ದದ್ದು ಚಿತ್ರಕೂಟದಲ್ಲಿ. ಸೀತಾ-ರಾಮ-ಲಕ್ಷ್ಮಣರು ವನವಾಸದಲ್ಲಿದಾಗ ಆಶ್ರಮಕ್ಕೆ ಭೇಟಿಯನ್ನಿತ್ತಿದ್ದರು. ಸೀತೆಗೆ ಅನಸೂಯೆ ಮಾಡಿದ ಗೃಹಿಣೀ ಧರ್ಮೋಪದೇಶವನ್ನು ರಾಮಾಯಣದಲ್ಲಿ ಕಾಣಬಹುದು. ಉತ್ತಮ ಸೌಂದರ್ಯತಜ್ಞೆಯೂ ಆಗಿದ್ದ ಅನಸೂಯೆ ಸೀತೆಗೆ ಸೌಂದರ್ಯವರ್ಧಕ ಗಿಡಮೂಲಿಕೆಗಳನ್ನೂ ನೀಡಿದಳು ಎಂಬ ಉಲ್ಲೇಖ ರಾಮಾಯಣದಲ್ಲಿದೆ.

ಚಿತ್ರಕೂಟದಲ್ಲಿ ಭೀಕರ ಕ್ಷಾಮವುಂಟಾದಾಗ ಮಂದಾಕಿನಿ ನದಿ ಅಲ್ಲಿ ಹರಿಯುವಂತೆ ಮಾಡಿದವಳು ಅನಸೂಯೆ. ಒಟ್ಟಿನಲ್ಲಿ ತನ್ನ ವಿವೇಕ, ವಾತ್ಸಲ್ಯ, ಸಹನೆ, ಆತ್ಮವಿಶ್ವಾಸ, ಪತಿನಿಷ್ಠೆಗಳಿಂದ ಗೃಹಿಣಿಯರಿಗೆ ಆದರ್ಶವಾಗಿ ನಿಲ್ಲುವವಳು ಸತಿ ಅನಸೂಯೆ. ಇಂತಹ ಮಹಿಮಾನ್ವಿತ ನಾರಿಯರನ್ನು ಕುರಿತು ಬ್ರಹ್ಮ ವೈವರ್ತಕ ಪುರಾಣದಲ್ಲಿ ಹೀಗೆ ಹೇಳಲಾಗಿದೆ:
ಪೃಥಿವ್ಯಾಂ ಯಾನಿ ತೀರ್ಥಾನಿ ಸತೀಪಾದೇಷು ತಾನ್ಯಪಿ |
ತೇಜಶ್ಚ ಸರ್ವದೇವಾನಾಂ ಮುನೀನಾಂ ಚ ಸತೀಷು ಚ ||
ಭೂಮಿಯಲ್ಲಿರುವ ಎಲ್ಲ ತೀರ್ಥಗಳು ಸತಿಯರ ಪಾದಗಳಲ್ಲಿವೆ. ಸರ್ವ ದೇವತೆಗಳ ಹಾಗೂ ಮುನಿಗಳ ತೇಜಸ್ಸು ಸಾಧ್ವಿಯರಲ್ಲಿರುತ್ತದೆ.

ದೈವೀಗುಣ ಸಂಪನ್ನೆ ದೇವಹೂತಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು

ಭಾಗ - 2

ದೈವೀಗುಣ ಸಂಪನ್ನೆ ದೇವಹೂತಿ
ಸ್ವಾಯಂಭು ಮನು ಮತ್ತು ಶತರೂಪೆಯ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು ದೇವಹೂತಿ. ನಾರದರಿಂದ ಕರ್ದಮ ಋಷಿಯ ಗುಣಸಂಪನ್ನತೆಯನ್ನು ಕೇಳಿ ಅವನನ್ನೇ ವರಿಸಿದಳು. ಪೃಥ್ವಿಯ ಮೊದಲ ರಾಜನ ಮಗಳಾಗಿದ್ದರೂ ಸಂಪತ್ತಿನ ಭೋಗಕ್ಕೆ ಮಾರು ಹೋಗದೆ ಜ್ಞಾನಧನನೂ ತಪೋಧನನೂ ಆದ ಮಹರ್ಷಿಯನ್ನು ವರಿಸಿದ್ದು ಅವಳ ಪ್ರಬುದ್ಧತೆಗೆ ಸಾಕ್ಷಿ. ಸ್ವತ: ಅವಳೇ ತಂದೆ ತಾಯಿಯರನ್ನು ಕರೆದುಕೊಂಡು ಕರ್ದಮನ ಆಶ್ರಮಕ್ಕೆ ಹೋಗುವುದು ಅಂದಿನ ಕಾಲದ ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತದೆ.

ರಾಜಕುವರಿ ದೇವಹೂತಿಯ ಸಂತೋಷಕ್ಕಾಗಿ ಕರ್ದಮ ತನ್ನ ತಪ:ಶ್ಶಕ್ತಿಯಿಂದ ದಿವ್ಯ ವಿಮಾನವೊಂದನ್ನು ನಿರ್ಮಿಸಿದ. ಅದರಲ್ಲಿ ಸ್ವಲ್ಪ ಕಾಲ ವಿಹರಿಸಿದರೂ ಅವಳಿಗೆ ಆ ಭೋಗ ಬೇಡವೆನಿಸಿತು. ದಾಂಪತ್ಯದ ಬಹುಭಾಗ ತಪಶ್ಚರ್ಯದಲ್ಲೇ ಮುಗಿದು ಹೋದರೂ ದೇವಹೂತಿಯು ಕಲಾ, ಅನಸೂಯಾ, ಅರುಂಧತಿ, ಶ್ರದ್ಧಾ, ಹವಿರ್ಭೂಗತಿ, ಕ್ರಿಯಾ, ಶಾಂತಿ, ಖ್ಯಾತಿ ಮತ್ತು ಗತಿ ಎಂಬ ಒಂಭತ್ತು ಹೆಣ್ಣುಮಕ್ಕಳಿಗೆ ಜನ್ಮವಿತ್ತಳು. ಅವರೆಲ್ಲರಿಗೂ ಉತ್ತಮ ಸಂಸ್ಕಾರವನ್ನು ನೀಡಿ ವ್ಯಕ್ತಿತ್ವವನ್ನು ರೂಪಿಸಿದಳು.
ಹೆಣ್ಣು ಮಕ್ಕಳ ಜನನದ ನಂತರ ಮತ್ತೆ ತಪಸ್ಸಿಗೆ ಹೊರಟು ನಿಂತ ಕರ್ದಮನಿಗೆ ದೇವಹೂತಿಯು ತಂದೆಯಾದವನ ಕರ್ತವ್ಯವನ್ನು ಜ್ಞಾಪಿಸುತ್ತಾಳೆ. ಅವಳ ತರ್ಕಬದ್ಧ ವಾದಕ್ಕೆ ಸೋತ ಕರ್ದಮ ಅವಳೊಟ್ಟಿಗೆ ಸಂಸಾರವನ್ನು ಮುಂದುವರಿಸುತ್ತಾನೆ. ನಂತರ ದೇವಹೂತಿಯು ’ಕಪಿಲ’ ಎಂಬ ಮಹಾಜ್ಞಾನಿ ಪುತ್ರನಿಗೆ ಜನ್ಮವೀಯುತ್ತಾಳೆ. ರಾಮಚರಿತ ಮಾನಸದಲ್ಲಿ ತುಲಸೀದಾಸರು ಶ್ರೀಹರಿಯೇ ದೇವಹೂತಿಯ ಮಗನಾಗಿ ಅವತಾರವೆತ್ತಿದ್ದಾನೆ ಎಂದು ವರ್ಣಿಸಿದ್ದಾರೆ.

ದೇವಹೂತಿಯು ಮನುವಿನ ಕನ್ನೆ
ಕರ್ದಮ ಮುನಿಯ ಪ್ರೇಮಸಂಪನ್ನೆ |
ಆದಿದೇವ ಪ್ರಭು ದೀನ ದಯಾಳು
ಉದರದಲಿ ಜನಿಸಿದನು ಕಪಿಲ ಕೃಪಾಳು ||
(ತುಲಸೀದಾಸರ ಪದ್ಯದ ಭಾವಾನುವಾದ)

ದೇವಹೂತಿಯು ಜೀವನದ ಕೊನೆಯ ಭಾಗದಲ್ಲಿ ಮಗನಿಂದಲೇ ತತ್ತ್ವಜ್ಞಾನದ ಉಪದೇಶ ಪಡೆದು ಸಾಯುಜ್ಯವನ್ನು ಪಡೆಯುತ್ತಾಳೆ.

ಮಾನವರ ಮಾತೆ ಶತರೂಪಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 1
ಮಾನವರ ಮಾತೆ ಶತರೂಪಾ
ಮಾನವರ ಮೂಲ ಪುರುಷ ’ಮನು’. ಹದಿನಾಲ್ಕು ಮನುಗಳಲ್ಲಿ ಮೊದಲ ಮನು ’ಸ್ವಾಯಂಭು ಮನು’ ಅವನ ಪತ್ನಿ ಶತರೂಪಾ. ಅಂದರೆ ಮಾನವರೆಲ್ಲರ ತಾಯಿ ಇವಳು. ಬ್ರಹ್ಮಾಂಡ ಪುರಾಣದ ಪ್ರಕಾರ ಈ ಸೃಷ್ಟಿಯ ಮೊದಲ ಸ್ತ್ರೀ ಶತರೂಪಾ. ಬ್ರಹ್ಮನ ಎಡಭಾಗದಿಂದ ಹುಟ್ಟಿದವಳೆಂದು ಉಲ್ಲೇಖವಿದೆ. ಬಲಭಾಗದಿಂದ ಹುಟ್ಟಿದ ಸ್ವಾಯಂಭುಮನುವನ್ನು ಪತಿಯಾಗಿ ಸ್ವೀಕರಿಸಿ ಬ್ರಹ್ಮನ ಸೃಷ್ಟಿಕಾರ್ಯವನ್ನು ಮುಂದುವರಿಸಿದಳು. ಪ್ರಿಯವ್ರತ, ಉತ್ತಾನಪಾದ ಮುಂತಾದ ಏಳುಜನ ಪುತ್ರರನ್ನೂ, ಆಕೂತಿ, ಪ್ರಸೂತಿ ಮತ್ತು ದೇವಹೂತಿ ಎಂಬ ಮೂವರು ಪುತ್ರಿಯರನ್ನೂ ಪಡೆದಳು.

ಇವಳು ವಿವಾಹಕ್ಕಿಂತ ಮುಂಚೆ ಕಠಿಣ ತಪಸ್ಸನ್ನು ಆಚರಿಸಿದಳು. ಆ ತಪೋಬಲದ ಕಾರಣದಿಂದಲೇ ಈ ಸೃಷ್ಟಿಯ ಪ್ರಥಮ ಪುರುಷ ಸ್ವಾಯಂಭುವ ಮನುವನ್ನು ಪತಿಯನ್ನಾಗಿ ಪಡೆದಳು. ಸ್ವಾಯಂಭುವ ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಸಿಗಬೇಕು ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.


ದೃಢತೆ ಹಾಗೂ ಭಕ್ತಿಗೆ ಹೆಸರಾದ ’ಧ್ರುವ’ ಶತರೂಪೆಯ ಮೊಮ್ಮಗ. ಧ್ರುವ ನಲ್ಲಿ ಆ ಸಂಸ್ಕಾರವನ್ನು ಬಿತ್ತಿದ್ದು ಇವಳೇ. ಪತಿಗೆ ಅನುಕೂಲೆಯಾಗಿ, ಉತ್ತಮ ಸಂತಾನದ ಜನನಿಯಾಗಿ, ಶ್ರೇಷ್ಠ ತಪಸ್ವಿನಿಯಾಗಿ ಆದ್ಯ ಸ್ತ್ರೀ ಶತರೂಪಾ ಆದರ್ಶನಾರಿಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ. 

ಸನಾತನ ಭಾರತದ ಸ್ತ್ರೀರತ್ನಗಳು


ಮಹಿಳಾ ದಿನಾಚರಣೆಯ ವಿಶೇಷ ಸರಣಿ ಬರಹ..........
ಸನಾತನ ಭಾರತದ ಸ್ತ್ರೀರತ್ನಗಳು
ಸ್ತ್ರೀಸಂವೇದನೆಯ ಹಾಗೂ ಮಹಿಳಾ ಸಬಲೀಕರಣದ ವಿಷಯ ಚರ್ಚೆಗೆ ಬಂದಾಗ ಹೆಚ್ಚಾಗಿ ಟೀಕೆಗೆ ಒಳಗಾಗುವವರು ಸಂಪ್ರದಾಯವಾದಿಗಳು ಹಾಗೂ ನಮ್ಮ ವೇದ – ಪುರಾಣ – ಸ್ಮೃತಿಗಳು. ಇವು ಸ್ತ್ರೀ ಶೋಷಣೆಗಾಗಿಯೇ ಹುಟ್ಟಿಕೊಂಡ ಕಥೆಗಳು ಹಾಗೂ ನಿಯಮಗಳು ಎಂಬುದಾಗಿ ಸ್ತ್ರೀವಾದಿಗಳು ತುಂಬಾ ರೋಷದಿಂದ ವಾದಿಸುತ್ತಾರೆ. ಅದನ್ನು ಅಲ್ಲಗಳೆಯುವವರ ಕೈಲಿ ಇರುವುದು ಮೈತ್ರೇಯಿ, ಗಾರ್ಗಿ ಮುಂತಾದ ಬೆರಳೆಣಿಕೆಯಷ್ಟು ಉದಾಹರಣೆಗಳು ಮಾತ್ರ. ಅಂತಹ ಆದರ್ಶ ನಾರಿಯರ ಬಗ್ಗೆ ಹೇಳುವಾಗ ಅವರ ’ಪಾತಿವ್ರತ್ಯ ಧರ್ಮ’ದ ಗುಣಗಾನವಾಗುತ್ತದೆಯೇ ಹೊರತು ಅವರ ವ್ಯಕ್ತಿತ್ವಕ್ಕೆ ನ್ಯಾಯ ಸಿಗುವುದಿಲ್ಲ. ಈ ಹದಿಬದೆಯ ಧರ್ಮೋಪದೇಶ ಮಹಿಳೆಯರಲ್ಲಿ ಆತ್ಮಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಲಾರದು.
ಈ ಸರಣಿಬರಹದ ಉದ್ದೇಶ ಪ್ರಾಚೀನ ಕಾಲದಲ್ಲಿ ತಮ್ಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಿಸಿದ್ದ ಕೆಲವು ಸ್ತ್ರೀರತ್ನಗಳನ್ನು ಪರಿಚಯಿಸುವುದು. ಅವರಲ್ಲಿ ಅನೇಕರು ಪತಿವ್ರತೆಯರೇ ಆಗಿದ್ದರೂ ಇಲ್ಲಿ ಅವರ ಪಾತಿವ್ರತ್ಯ ವ್ಯಕ್ತಿತ್ವದ ಒಂದು ಗುಣವಾಗಿಯಷ್ಟೇ ಉಲ್ಲೇಖವಾಗಲಿದೆ. ಈ ಎಲ್ಲ ಮಹಿಳೆಯರು ಐತಿಹಾಸಿಕ ವ್ಯಕ್ತಿಗಳೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಕಠಿಣ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲಿಖಿತವಾಗಿರುವ ಘಟನೆಗಳು ನೈಜವೇ ಕಾಲ್ಪನಿಕವೇ ಎಂಬ ವಿಚಾರ ನಮ್ಮ ನಂಬುಗೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಅನೇಕರಿಗೆ ಈ ಬರಹ ಕಥೆಯೆಂದೆನಿಸಬಹುದು. ಅಂಥವರೆಲ್ಲ ನೀತಿಕಥೆಗಳನ್ನು ಓದುವಂತೆ ಈ ಲೇಖನ ಸರಣಿಯನ್ನು ಓದಬಹುದು. ಇಲ್ಲಿ ನೀಡಲಿರುವ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಲೇಖನರೂಪಕ್ಕೆ ಇಳಿಸುವ ಚಿಕ್ಕ ಪ್ರಯತ್ನ ಮಾತ್ರ ನನ್ನದು.
ನಿಮಗೆ ಇಷ್ಟವಾದರೆ ಬೆನ್ನುತಟ್ಟಿ. ಹೆಚ್ಚು ಹೆಚ್ಚು ಬಳಗಗಳಲ್ಲಿ ಹಂಚಿಕೊಳ್ಳಿ. ನಿಮ್ಮಲ್ಲಿ ಪೂರಕ ಮಾಹಿತಿಗಳಿದ್ದರೆ ಒದಗಿಸಿ.
ಇತಿ ನಿಮ್ಮ ವಿನಮ್ರ

ಮಹಾಬಲ ಭಟ್

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...